Tag: ಕೊರೊನಾ ಲಸಿಕೆ

  • ಕೊರೊನಾ ವ್ಯಾಕ್ಸಿನ್ ಪಡೆಯೋಕೆ ವಾರಿಯರ್ಸ್ ಹಿಂದೇಟು

    ಕೊರೊನಾ ವ್ಯಾಕ್ಸಿನ್ ಪಡೆಯೋಕೆ ವಾರಿಯರ್ಸ್ ಹಿಂದೇಟು

    ಬೆಂಗಳೂರು: ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿರೋ ‘ಚೀನಿ ವೈರಸ್’ ಕೊರೊನಾಗೆ ಇಷ್ಟು ದಿನ ವ್ಯಾಕ್ಸಿನ್ ಬಂದ್ರೆ ಸಾಕಪ್ಪಾ ಅಂತ ಜನ ಕಾಯುತ್ತಿದ್ದರು. ಆದ್ರೆ ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆಯ ಮಹಾಯಜ್ಞಕ್ಕೆ ಚಾಲನೆ ಸಿಕ್ಕು ನಾಲ್ಕನೇ ದಿನ ಆದರೂ ಟಾರ್ಗೆಟ್ ರೀಚ್ ಆಗೋಕೆ ಒದ್ದಾಡುವಂತಾಗಿದೆ. ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

    ರಾಜ್ಯವೂ ಸೇರಿದಂತೆ ದೇಶಾದ್ಯಂತ ಮೊದಲ ಹಂತದ ಕೊರೋನಾ ವಾರಿಯರ್ಸ್ ವ್ಯಾಕ್ಸಿನೇಷನ್‍ಗೆ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗ್ತಿಲ್ಲ. ದೇಶಾದ್ಯಂತ 3 ದಿನದಲ್ಲಿ 4,54,049 ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗಿದೆ. 580 ಜನರಲ್ಲಿ ಅಡ್ಡಪರಿಣಾಮವಾಗಿದ್ದು, 7 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

    ರಾಜ್ಯದಲ್ಲಿ ಇವತ್ತು 32,205 ಗುರಿ ಪೈಕಿ 15,223 ಹೆಲ್ತ್ ವರ್ಕರ್ಸ್ ಗೆ ಲಸಿಕೆ ನೀಡಲಾಗಿದೆ. ಹೀಗಾಗಿ 4 ದಿನದಲ್ಲಿ ಒಟ್ಟು 70,723 ಮಂದಿಗೆ ಲಸಿಕೆ ಚುಚ್ಚುಮದ್ದು ನೀಡಲಾಗಿದೆ. ಆದರೆ 1,08,922 ಲಕ್ಷ ಗುರಿ ರೀಚ್ ಕಷ್ಟವಾಗ್ತಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರೋ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಸಹಜ. ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆ ವಿತರಣೆ ಆಗಿದೆ ಆಗಿದೆ ಅಂತ ಹೇಳಿದ್ದಾರೆ.

    3 ದಿನಗಳಿಂದ ಟಾರ್ಗೆಟ್ ರೀಚ್ ಆಗದ ಕಾರಣ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಟಾರ್ಗೆಟ್ ತಲುಪಲು, ತಜ್ಞರು 2 ತಿಂಗಳ ಡೆಡ್‍ಲೈನ್ ಸಲಹೆ ನೀಡಿದ್ದಾರೆ. 2ನೇ ಅಲೆಯ ಹೆಚ್ಚಾಗೋಕೆ ಮುನ್ನ ದೇಶದ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ಕೊಡೋದು ಕ್ಷೇಮ ಅಂದಿದ್ದಾರೆ.

    ಲಸಿಕೆ ಟಾರ್ಗೆಟ್ ರೀಚ್ ಆಗ್ತಿಲ್ಲ ಯಾಕೆ?: ವ್ಯಾಕ್ಸಿನ್ ಬಗ್ಗೆ ಸರಿಯಾದ ಜಾಗೃತಿ ಮೂಡಿಸಿಲ್ಲ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಕ್ಸಿನ್ ಬಗ್ಗೆ ಭಯ ಹುಟ್ಟಿಸೋ ವಿಡಿಯೋ, ಮೆಸೇಜ್‍ಗಳ ಹರಿದಾಡುತ್ತಿವೆ ಎನ್ನಲಾಗಿದೆ. ಲಸಿಕೆಯಿಂದ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಸಹಜ ಭಯ ಜನರಲ್ಲಿ ಕಾಡುತ್ತಿದೆ. ವ್ಯಾಕ್ಸಿನ್‍ನಿಂದ ಎಡವಟ್ಟಾದ್ರೆ ಲಸಿಕೆ ಕಂಪನಿಗಳೇ ಹೊಣೆ ಅಂತ ಕೇಂದ್ರ ಹೇಳಿರೋದು ಮತ್ತಷ್ಟು ಭಯ ಹುಟ್ಟಿಸಿದೆ. ಕೋವ್ಯಾಕ್ಸಿನ್ 3ನೇ ಕ್ಲಿನಿಕಲ್ ಟ್ರಯಲ್ ಮುಗಿಸದಿದ್ದರೂ ಪ್ರಯೋಗಕ್ಕೆ ಅವಕಾಶ ನೀಡಿರೋದು ಸಹ ಒಂದು ಕಾರಣ.

    ವ್ಯಾಕ್ಸಿನ್ ಇಂಜೆಕ್ಷನ್ ನಂತರ ಧೂಮಪಾನ, ಮದ್ಯಪಾನ ಮಾಡಬಾರದು ಎಂಬ ತಜ್ಞರ ಹೇಳಿಕೆಗಳಿಂದ ಇವರೆಡರ ಚಟಕ್ಕೆ ದಾಸರಾಗಿರುವ ಜನರು ಲಸಿಕೆಗೆ ಮುಂದೆ ಬರುತ್ತಿಲ್ಲ. ನೋಂದಣಿ ಮಾಡಿಸಿಕೊಂಡವರಿಗೆ ವ್ಯಾಕ್ಸಿನೇಷನ್ ಕಡ್ಡಾಯ ಮಾಡದಿರೋದು.

    ಸರ್ಕಾರದ ಮುಂದಿನ ಆಯ್ಕೆ ಏನು?: ಲಸಿಕಾ ಅಭಿಯಾನದ ಬಗ್ಗೆ ವ್ಯಾಪಕವಾಗಿ ಪ್ರಚಾರದ ಅಗತ್ಯವಿದೆ. ವ್ಯಾಕ್ಸಿನ್ ತೆಗೆದುಕೊಂಡು ಖ್ಯಾತ ವೈದ್ಯರನ್ನ ಮುಂದಿಟ್ಟು, ಆರೋಗ್ಯ ಕಾರ್ಯಕರ್ತರಿಗೆ ಹುರಿದುಂಬಿಸಬೇಕು. ಕೆಲ ಸಿಬ್ಬಂದಿ ತಪ್ಪಾಗಿ ಮೊಬೈಲ್ ನಂಬರ್ ನಮೂದಿಸಿದ್ದು, ತುರ್ತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ವ್ಯಾಕ್ಸಿನ್ ಪಡೆಯಲು ಸಿಬ್ಬಂದಿ ಹಿಂದೇಟೇಕೆ ಅಂತ ಪತ್ತೆ ಹಚ್ಚಿ, ಮನವೊಲಿಸಬೇಕು.

  • ನಮ್ಮ ದೇಶದ ವಿಜ್ಞಾನಿಗಳಿಗೆ ಗೌರವ ಕೊಡಿ – ಲಸಿಕೆ ಪಡೆದವರ ಕಿವಿಮಾತು

    ನಮ್ಮ ದೇಶದ ವಿಜ್ಞಾನಿಗಳಿಗೆ ಗೌರವ ಕೊಡಿ – ಲಸಿಕೆ ಪಡೆದವರ ಕಿವಿಮಾತು

    ಬೆಂಗಳೂರು: ನಮಗೆ ಗೌರವ ಪಡೆಯೋಕೂ ಗೊತ್ತು, ಗೌರವ ಕೊಡುವುದಕ್ಕೂ ಗೊತ್ತು. ಇದು ಕೊರೊನಾ ವಾರಿಯರ್ಸ್ ಮನದಾಳದ ಮಾತು. ಹೌದು, ಕೊರೊನಾ ಲಸಿಕೆ ಪಡೆಯುತ್ತಿರುವವರ ಪ್ರಮಾಣ ಕಡಿಮೆಯಾಗುತ್ತಿರುವ ವಿಚಾರವಾಗಿ ಫಲಾನುಭವಿಗಳು ಎಲ್ಲರಿಗೂ ಕಿವಿ ಮಾತು ಹೇಳಿದ್ದಾರೆ.

    ನಗರದ ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನ ನ್ಯೂರೋ ಸರ್ಜರಿ ವಿಭಾಗ ಹಾಗೂ ನರ್ಸಿಂಗ್ ಅಧಿಕಾರಿ ಮಹೇಶ್ ಲಸಿಕೆ ಪಡೆದ ಅನುಭವ ಹಾಗೂ ತಾವು ಕೊರೊನಾ ವಾರಿಯರ್ಸ್ ಆಗಿ ಗೌರವ ಪಡೆದಿದ್ದೀವಿ. ಈಗ ಕೊರೊನಾ ಲಸಿಕೆ ಕಂಡು ಹಿಡಿದ ದೇಶದ ವಿಜ್ಞಾನಿಗಳಿಗೆ ಗೌರವ ಸೂಚಿಸುವ ಸಮಯ ತಪ್ಪದೇ ಲಸಿಕೆ ಪಡೆಯಿರಿ ಎಂದಿದ್ದಾರೆ.

    ಕೊರೊನಾ ಕರಾಳ ದಿನಗಳಲ್ಲಿ ಜೀವ ಬಿಗಿ ಹಿಡಿದು ಬದುಕಿದ್ದಿವಿ. ಕೊರೊನಾ ಲಸಿಕೆ ಬಂತು ಎಂದಾಕ್ಷಣ ಸಂಜೀವಿನಿ ಸಿಕ್ಕಂತೆ ಆಯಿತು. ಫಲಾನುಭವಿಗಳು ಬಹುತೇಕ ಹೆಲ್ತ್ ವರ್ಕರ್ಸ್ ನೀವೆಲ್ಲ ಲಸಿಕೆ ವಿಚಾರವಾಗಿ ಹಿಂದೇಟು ಬೇಡ. ಕಾಯುವುದಂತೂ ಬೇಡವೇ ಬೇಡ. ನಾವು ಮೊದಲು ಅನ್ನೊದನ್ನ ಮರೆಯಬೇಡ, ಅಪಾಯವಾದರು ಸರಿ, ಪ್ರಯೋಗವಾದರೂ ಸರಿ ಎಂಬ ಅಭಿಪ್ರಾಯ ತಿಳಿಸಿದರು.

  • ಟಾರ್ಗೆಟ್‌ 81,219 – ಲಸಿಕೆ ಪಡೆದವರು 38,342 : ಜಿಲ್ಲಾವಾರು ವಿವರ ಓದಿ

    ಟಾರ್ಗೆಟ್‌ 81,219 – ಲಸಿಕೆ ಪಡೆದವರು 38,342 : ಜಿಲ್ಲಾವಾರು ವಿವರ ಓದಿ

    – ಇಂದು 435 ಪಾಸಿಟಿವ್‌, 973 ಜನ ಡಿಸ್ಚಾರ್ಜ್‌

    ಬೆಂಗಳೂರು ‌: ದೇಶಾದ್ಯಂತ ವ್ಯಾಕ್ಸಿನೇಷನ್‌ ಆರಂಭವಾಗಿ ಇವತ್ತಿಗೆ ಮೂರನೇ ದಿನ. ಮೂರನೇ ದಿನವಾದ ಇಂದು ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಫತ್ರೆಯ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ನಡೆದಿದೆ.‌ ಇವತ್ತು ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆದವರ ಸಂಖ್ಯೆ ಶೇ.50 ಸಹ ದಾಟಲಿಲ್ಲ. ಸಂಜೆ‌ 5.30ರ ಹೊತ್ತಿಗೆ ಶೇ.47 ರಷ್ಟು ಮಂದಿ ‌ಲಸಿಕೆ ಹಾಕಿಸಿದ್ದಾರೆ.

    ಇಂದು‌ ಒಂದು ಸಾವಿರ ಲಸಿಕಾ ಕೇಂದ್ರದಲ್ಲಿ ವ್ಯಾಕ್ಸಿನೇಷನ್‌ ಕ್ಯಾಂಪೇನ್ ನಡೆಯಿತು. ಇವತ್ತು ಒಂದೇ ಸಾವಿರ ಕೇಂದ್ರಗಳಲ್ಲಿ 81,219 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬೇಕೆಂದು ಟಾರ್ಗೆಟ್ ನಿಗದಿ ಮಾಡಲಾಗಿತ್ತು. ಆದರೆ ಸಂಜೆ ವೇಳೆಗೆ ಟಾರ್ಗೆಟ್ ನೀಡಿದ್ದ ಸಂಖ್ಯೆಯಲ್ಲಿ ಅರ್ಧದಷ್ಟು ಜನ ಲಸಿಕೆಯನ್ನ ಪಡೆದಿದ್ದಾರೆ. 81,169 ರಲ್ಲಿ 38,242 ಆರೋಗ್ಯ ಕಾರ್ಯಕರ್ತರು ಮಾತ್ರ ‌ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

    ಲಸಿಕೆ ಪಡೆಯುವವರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಶನಿವಾರ ಶೇ.63, ಭಾನುವಾರ ಶೇ.58 ಮಂದಿ ಲಸಿಕೆ ಪಡೆದಿದ್ದರು. ಜಿಲ್ಲೆಗಳ ಪೈಕಿ ಅತಿ ಹೆಚ್ಚು ಬೆಳಗಾವಿ 30(ಶೇ.73), ಚಿಕ್ಕಬಳ್ಳಾಪುರ 2,167(ಶೇ.73), ತುಮಕೂರು 3,185(ಶೇ.71) ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 5,296(ಶೇ.28) ಮಂದಿ ಲಸಿಕೆ ಪಡೆದಿದ್ದಾರೆ.

    ಇಂದು ಕರ್ನಾಟಕದಲ್ಲಿ 435 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 973 ಜನ ಡಿಸ್ಚಾರ್ಜ್‌ ಆಗಿದ್ದಾರೆ. 9 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,32,432ಕ್ಕೆ ಏರಿಕೆ ಆಗಿದೆ. ಈ ಪೈಕಿ 9,12,205 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,033 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,175 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 177 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 2,823 ಆಂಟಿಜನ್‌ ಟೆಸ್ಟ್‌, 66,442 ಆರ್‌ಟಿ ಪಿಸಿಆರ್‌ ಸೇರಿದಂತೆ ಒಟ್ಟು 69,265 ಪರೀಕ್ಷೆ ಮಾಡಲಾಗಿದೆ.

    ಎಂದಿನಂತೆ ಬೆಂಗಳೂರು ನಗರದಲ್ಲಿ 193 ಮಂದಿಗೆ ಸೋಂಕು ಬಂದಿದೆ. ಮೈಸೂರು 35, ತುಮಕೂರು 26, ಶಿವಮೊಗ್ಗ 16, ಚಿಕ್ಕಬಳ್ಳಾಪುರದಲ್ಲಿ 14 ಮಂದಿಗೆ ಸೋಂಕು ಬಂದಿದೆ. ಒಟ್ಟು 177 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 74, ಕಲಬುರಗಿ 11, ಮಂಡ್ಯದಲ್ಲಿ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

     

  • ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಆನೇಕಲ್: ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಇದೇ ತಿಂಗಳು 16ರಿಂದ ಲಸಿಕೆ ಹಾಕುವ ಕೆಲಸದಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಿರತರಾಗಿ ಇದುವರೆಗೆ ಲಕ್ಷಾಂತರ ಜನರಿಗೆ ಲಸಿಕೆ ಹಾಕಿದ್ದಾರೆ.

    ಅದೇ ರೀತಿ ಮೂರನೆ ದಿನವಾದ ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾರಾಯಣ ಹೃದಯಾಲಯದಲ್ಲಿ ಮೊದಲ ಲಸಿಕೆಯನ್ನು ಹಾಕಲಾಯಿತು. ನಾರಾಯಣ ಹೃದಯಾಲಯದ ಮುಖ್ಯಸ್ಥ ದೇವಿಶೆಟ್ಟಿ ತಾವೇ ಸ್ವತಃ ಹಾಕಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಲಸಿಕೆಯ ಮೇಲೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಮುಂದಾಗಿದ್ದಾರೆ. ಇಂದು ಮುಂಜಾನೆ ಸುಮಾರು 9:00 ಸರಿಯಾಗಿ ನೋಡಲ್ ಆಫೀಸರ್ ಹಾಗೂ ತಾಲೂಕು ವೈದ್ಯಾಧಿಕಾರಿ ಅವರ ಸಮಕ್ಷದಲ್ಲಿ ಕೋವಿಡ್ ಲಸಿಕೆಯನ್ನು ಮೊದಲನೆಯದಾಗಿ ದೇವಿ ಶೆಟ್ಟಿಯವರು ತೆಗೆದುಕೊಂಡಿದ್ದಾರೆ.

    ಈ ಮೂಲಕ ಜನಸಾಮಾನ್ಯರಿಗೆ ಕೊವಿಡ್ ಲಸಿಕೆಯ ಮೇಲೆ ಭರವಸೆ ಮೂಡುವಂತೆ ಮಾಡಿದ್ದಾರೆ. ಜೊತೆಗೆ ಇಂದಿನಿಂದ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಲಸಿಕೆ ಹಾಕುತ್ತಿದ್ದು ದೇವಿ ಶೆಟ್ಟಿಯವರಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು. ಜೊತೆಗೆ ಇಂದು ಒಟ್ಟು ಮುನ್ನೂರು ಮಂದಿಗೆ ಲಸಿಕೆ ಹಾಕಲಿದ್ದು ಇಂದಿನಿಂದ ಪ್ರತಿದಿನ ಕೊವಿಡ್ ಲಸಿಕೆ ಲಭ್ಯವಿರುತ್ತದೆ. ಹಾಗಾಗಿ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

    ಇದೇ ಸಮಯದಲ್ಲಿ ಮಾತನಾಡಿದ ದೇವಿಶೆಟ್ಟಿ, ಪ್ರತಿಯೊಬ್ಬ ಭಾರತೀಯ ಲಸಿಕೆ ನಂತರ ವಿಕ್ಟರಿ ಸೈನ್ ತೋರಿಸಬೇಕು. ಭಾರತಕ್ಕೆ ಇದೊಂದು ಸುವರ್ಣಾವಕಾಶ. ಬೇರೆ ದೇಶದಲ್ಲಿ ಕೋವಿಡ್ ಇನ್ನೂ ಅಂತ್ಯ ಕಂಡಿಲ್ಲ ಆದರೆ ನಮ್ಮ ದೇಶದಲ್ಲಿ ಈಗಾಗಲೇ ಲಸಿಕೆಯ ಲಭ್ಯವಿದೆ. ಅತಿ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇರುವ ದೇಶ ನಮ್ಮದು ಹಾಗಾಗಿ ಈ ಒಂದು ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬಹುದು. ಅತೀ ಬೇಗ ಕೊರೊನಾದಿಂದ ಮುಕ್ತಿ ಹೊಂದಬಹುದು ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ. ವೈದ್ಯಾಧಿಕಾರಿ ಮಾತನಾಡಿ ಜೊತೆಗೆ ಸ್ಥಳೀಯ ವೈದ್ಯಾಧಿಕಾರಿ ಮಾತನಾಡಿ ಇಂದು ಮೂರನೆ ದಿನ 16ನೇ ತಾರೀಕು ಒಟ್ಟು 238 ಮಂದಿ ಲಸಿಕೆ ಪಡೆದಿದ್ದಾರೆ.

    ಅದೇ ರೀತಿ ಇಂದು 28 ಸೆಶನ್ಸ್ ಗಳಲ್ಲಿ 2,456 ಮಂದಿ ಇಂದು ಲಸಿಕೆ ಪಡೆಯುತ್ತಾರೆ. ಇಂದು ದೇವಿಶೆಟ್ಟಿ ಸಹ ಪಡೆದಿದ್ದು ಇದರಿಂದ ಜನರಲ್ಲಿ ಇನ್ನಷ್ಟು ನಂಬಿಕೆ ಬರುತ್ತದೆ. ಹಾಗೂ ಈ ಕೆಲಸ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.

  • ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಭಾಗ್ಯ – ನರ್ಸಿಂಗ್ ವಿದ್ಯಾರ್ಥಿಗಳು ಫುಲ್ ಖುಷ್

    ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಭಾಗ್ಯ – ನರ್ಸಿಂಗ್ ವಿದ್ಯಾರ್ಥಿಗಳು ಫುಲ್ ಖುಷ್

    – ನಾಳೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ
    – 8 ವಲಯಗಳಿಗೆ 90 ಸಾವಿರ ಲಸಿಕೆ ಹಂಚಿಕೆ

    ಬೆಂಗಳೂರು : ನಗರದ ಸೆಂಟ್ ಫಿಲೋಮೀನಾ ನರ್ಸಿಂಗ್ ಕಾಲೇಜಿನಲ್ಲಿಂದು ಲಸಿಕೆ ಅಭಿಯಾನ ನಡೆಯಿತು. ಕೊರೋನಾ ಸಂಜೀವಿನಿ ನೀಡಲು ಎರಡನೆ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಇಂದು ವಿದ್ಯಾರ್ಥಿಗಳ ಪಟ್ಟಿ ಮಾಡಿರುವುದು ಹೆಚ್ಚು ಗಮನಾರ್ಹವಾಗಿತು.

    ನಿನ್ನೆ ಇಡೀ ದಿನ ಆಸ್ಪತ್ರೆ ಸಿಬ್ಬಂದಿಗೆ ಲಸಿಕೆ ಕೊಡಲಾಯಿತು. ಆದರೆ ಇವತ್ತು ಇಂದೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಲಸಿಕೆ ಕೇಂದ್ರದಲ್ಲಿ ನೀಡಲು ವ್ಯವಸ್ಥೆ ಆಗಿತ್ತು.

     

    ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯನ್ನು ಚಾಚು ತಪ್ಪದೇ ಪಾಲನೆ ಮಾಡಲಾಗಿತ್ತು. ಒನ್ ಎಂಟ್ರಿ ,ಒನ್ ಎಕ್ಸಿಟ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಬ್ಯಾನರ್ಸ್ , ಪೋಸ್ಟರ್, ಐಇಸಿ(ಇನ್ಪಾರ್ಮೆಷನ್‌ ಎಜುಕೇಶನ್‌ ಆಂಡ್‌ ಕಮ್ಯೂನಿಕೇಷನ್‌) ಎಲ್ಲವೂ ಪಕ್ಕಾ ಸಿದ್ಧಪಡಿಸಲಾಗಿತ್ತು.

    ಮೊದಲು ಲಸಿಕೆ ಪಡೆದ ನರ್ಸಿಂಗ್ ವಿದ್ಯಾರ್ಥಿ ಆನ್ಸಿ ಅಂಟೋನಿಗೆ ಲಸಿಕೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ವ್ಯಾಕ್ಸಿನ್ ಸಿಕ್ಕಿದ್ದರಿಂದ ಸೇವೆ ಮಾಡಲು ಧೈರ್ಯ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ: ಸೋಮವಾರ ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಲಭ್ಯವಿರಲಿದೆ. ಸರಿಸುಮಾರು 14,100 ಬಿಬಿಎಂಪಿ ಆಸ್ಪತ್ರೆಗಳಲ್ಲೇ ಕೊರೋನಾ ಲಸಿಕೆ ಕೊಡಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಪ್ರಕಾರ ಪ್ರತಿ ಕೇಂದ್ರಕ್ಕೂ 90 ರಿಂದ 100 ಮಂದಿಗೆ ಲಸಿಕೆ ಹಂಚಿಕೆ ಮಾಡಲಾಗಿದೆ.

    ಎಲ್ಲ ಪಿ ಎಚ್ ಸೆಂಟರ್ ಗಳಿಗೂ ಲಸಿಕೆ ಹಂಚಿಕೆ ಪೂರ್ಣವಾಗಿದ್ದು, ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ಹಂಚಿಕೆ ಪ್ರಕಿಯೆ ಪೂರ್ಣವಾಗಿದೆ. ಈ ಪ್ರಕಾರ ಬರೊಬ್ಬರಿ 90 ಸಾವಿರ ಲಸಿಕೆ 8 ವಲಯಗಳಿಗೂ ಹಂಚಿಕೆ ಆಗಿದೆ.

    ನಾಳೆ ನಗರದಲ್ಲಿ ಲಸಿಕೆ ನೀಡುವ ಕೇಂದ್ರಗಳಿಗೆ ಸವಲತ್ತು ಪೂರೈಕೆ ಆಗಿದೆ. ಸದ್ಯ ದಾಸಪ್ಪ ಆಸ್ಪತ್ರೆಯಲ್ಲಿ ಸುಮಾರು 7 ಸಾವಿರ ಲಸಿಕೆ ಮಾತ್ರ ಉಳಿದಿದೆ. ಫಲಾನುಭವಿಗಳ ಪಟ್ಟಿಯಾದ ಕೂಡಲೇ ಸೆಂಟರ್ ಗಳಿಗೆ ಕಳಿಸುವ ಲೆಕ್ಕಚಾರ ಆಗಿದೆ ಎಂದು ದಾಸಪ್ಪ ಆಸ್ಪತ್ರೆ ಸ್ಟೋರೇಜ್ ಮೇಲ್ವಿಚಾರಕಿ ಮಂಜುಳ ತಿಳಿಸಿದ್ದಾರೆ.

  • ಉಲ್ಟಾ ಹೊಡೆದ ಅಖಿಲೇಶ್ ಯಾದವ್- ಕೊರೊನಾ ಲಸಿಕೆಗೆ ಸ್ವಾಗತ

    ಉಲ್ಟಾ ಹೊಡೆದ ಅಖಿಲೇಶ್ ಯಾದವ್- ಕೊರೊನಾ ಲಸಿಕೆಗೆ ಸ್ವಾಗತ

    – ಬಿಜೆಪಿ ಕಾರ್ಯಕರ್ತರು, ನಾಯಕರು ಮೊದಲು ಲಸಿಕೆ ಪಡೆಯಲಿ

    ಲಕ್ನೋ: ಕೊರೊನಾ ಲಸಿಕೆ ಮೇಲೆ ನಂಬಿಕೆ ಇಲ್ಲ, ನಾನು ಹಾಕಿಸಿಕೊಳ್ಳಲ್ಲ ಎಂದಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇದೀಗ ಉಲ್ಟಾ ಹೊಡೆದಿದ್ದಾರೆ. ಕೊರೊನಾ ಲಸಿಕೆ ಹಂಚಿಕೆಯನ್ನು ಸ್ವಾಗತಿಸಿದ್ದಾರೆ.

    ಈ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾತನಾಡಿರುವ ಅವರು, ಕೊರೊನಾ ಲಸಿಕೆ ವಿತರಣೆಯನ್ನು ಸ್ವಾಗತಿಸುತ್ತೇನೆ. ಆದರೆ ನಮಗೆ ಚಿಂತೆ ಇರುವುದು ಕೊರೊನಾ ಲಸಿಕೆಯಲ್ಲೇ ಹೊರತು ವೈದ್ಯರು ಹಾಗೂ ವಿಜ್ಞಾನಿಗಳ ಮೇಲಲ್ಲ. ಯಾವುದೇ ಘಟನೆಯನ್ನು ದೊಡ್ಡದಾಗಿಸುವುದರಲ್ಲಿ ಬಿಜೆಪಿಯವರು ಪರಿಣಿತಿ ಹೊಂದಿದ್ದಾರೆ. ಹೀಗಾಗಿ ಬಿಜೆಪಿಯ ಕಾರ್ಯಕರ್ತರು ಹಾಗೂ ನಾಯಕರು ಮೊದಲು ಲಸಿಕೆ ಪಡೆಯಲಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಒಂದು ವರ್ಷದ ಬಳಿಕ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗ ನಾವು ರಾಜ್ಯದ ಎಲ್ಲ ಜನತೆಗೆ ಉಚಿತ ಲಸಿಕೆ ನೀಡುತ್ತೇವೆ. ಆದರೆ ಎಲ್ಲರಿಗೂ ಕೊರೊನಾ ಲಸಿಕೆ ಸಿಗುವಂತಾಗಲು ಇನ್ನೂ ಎಷ್ಟು ಸಮಯ ಬೇಕು. ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

    ವ್ಯಾಕ್ಸಿನೇಶನ್ ಸೆಂಟರ್‍ಗಳಿಗೆ ಸರಿಯಾಗಿ ಹಣ ನೀಡಲಾಗಿದೆಯೇ ಎಂದು ನಾನು ಕೇಳಲು ಬಯಸುತ್ತೇನೆ. ಹಣವಿಲ್ಲದಿದ್ದರೆ ಕೆಲಸ ಮಾಡಲು ಹೇಗೆ ಸಾಧ್ಯ? ಲಸಿಕೆ ಸಂಗ್ರಹಣೆ ಹಾಗೂ ಸಾಗಣೆಗೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ನಮ್ಮ ವೈದ್ಯರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆದರೆ ಸರ್ಕಾರದ ಮೇಲಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ.

    ಈ ಹಿಂದೆ ಮಾತನಾಡಿದ್ದ ಅಖಿಲೇಶ್ ಯಾದವ್, ನಾನು ಸದ್ಯಕ್ಕೆ ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

  • ಮೊದಲ ಹಂತದಲ್ಲಿ ಡಿ ಗ್ರೂಪ್ ನೌಕರರಿಗೆ ಲಸಿಕೆ – ಖಾದರ್ ಅಸಮಾಧಾನ

    ಮೊದಲ ಹಂತದಲ್ಲಿ ಡಿ ಗ್ರೂಪ್ ನೌಕರರಿಗೆ ಲಸಿಕೆ – ಖಾದರ್ ಅಸಮಾಧಾನ

    ಬೆಂಗಳೂರು: ಮೊದಲು ಡಿ ಗ್ರೂಪ್ ನೌಕರರಿಗೆ ಕೊರೊನಾ ಲಸಿಕೆ ನೀಡುತ್ತಿರುವ ಬಗ್ಗೆ ಮಾಜಿ ಸಚಿವ ಯು.ಟಿ.ಖಾದರ್ ಅಸಮಾಧಾನ ಹೊರ ಹಾಕಿದ್ದಾರೆ.

    ಲಸಿಕೆ ಬಂದಿರುವುದು ಸಂತೋಷ. ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಮಾಡುವ ಮೊದಲು ಆಡಂಬರದಿಂದ ಉದ್ಘಾಟನೆ ಮಾಡುವ ಮಂತ್ರಿಗಳು ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಮೊದಲ ಲಸಿಕೆ ಪಡೆದು ಮಾದರಿ ಆಗಲಿ ಎಂಬುದು ಜನರ ಪರವಾಗಿ ನನ್ನ ವಿನಂತಿ ಎಂದು ಟ್ವೀಟ್ ಮಾಡಿದ್ದಾರೆ.

    ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಮೊದಲ ಹಂತದಲ್ಲಿಯೇ ಲಸಿಕೆ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಮೊದಲ ಹಂತದಲ್ಲಿ ಆಸ್ಪತ್ರೆ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಸೇರಿದಂತೆ ಸುಮಾರು ಮೂರು ಕೋಟಿ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

  • ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    ಲಸಿಕೆ ಪಡೆದ ನಂತರ ಕೊರೊನಾ ನಿಯಮಗಳನ್ನ ಮರೀಯಬೇಡಿ: ಪ್ರಧಾನಿ ಮೋದಿ

    – ಕೊರೊನಾ ವಾರಿಯರ್ಸ್ ನೆನೆದು ಮೋದಿ ಭಾವುಕ
    – ನಮ್ಮ ಲಸಿಕೆ ಸುರಕ್ಷಿತ, ಕಡಿಮೆ ಬೆಲೆ

    ನವದೆಹಲಿ: ಕೊರೊನಾ ಲಸಿಕೆ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳು ಸತತ ಪರಿಶ್ರಮ ಪಟ್ಟಿದ್ದಾರೆ. ವಿಜ್ಞಾನಿಗಳು ಹಬ್ಬ, ಸಂತೋಷಕೂಟದಲ್ಲಿ ಭಾಗಿಯಾಗದೇ ಲಸಿಕೆಗಾಗಿ ಶ್ರಮ ವಹಿಸಿದ್ದರು ಎಂದು ಲಸಿಕೆ ಸಂಶೋಧಕರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದರು.

    ಮೊದಲ ಡೋಸ್ ತೆಗೆದುಕೊಂಡವರು ಎರಡನೇ ಡೋಸ್ ಪಡೆದುಕೊಳ್ಳುವದನ್ನ ಮರೀಯಬೇಡಿ. ಎರಡನೇ ಡೋಸ್ ಪಡೆದ ನಂತರವೇ ನಿಮ್ಮ ದೇಹದಲ್ಲಿ ಕೊರೊನಾ ವಿರುದ್ಧದ ಶಕ್ತಿ ಹೆಚ್ಚಾಗಲಿದೆ. ಕೊರೊನಾ ಪಡೆದು ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೊರೊನಾ ನಿಯಮಗಳನ್ನ ಮರೆಯಬೇಡಿ. ಭಾರತ ಸರ್ಕಾರ ಮೊದಲ ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಸಂಖ್ಯೆ 30ಕೋಟಿ ತಲುಪುವ ಗುರಿಯನ್ನ ಭಾರತ ಹೊಂದಿದೆ. ಎರಡನೇ ಹಂತದಲ್ಲಿ ವೃದ್ಧರು, ರೋಗಿಗಳಿಗೆ ಆದ್ಯತೆ ನೀಡಲಾಗುವುದು.

    ಆತ್ಮನಿರ್ಭರ ಭಾರತದಡಿಯಲ್ಲಿ ಲಸಿಕೆ: ಈ ದೊಡ್ಡ ಅಭಿಯಾನ ಇಡೀ ವಿಶ್ವದ ಗಮನ ಸೆಳೆಯುವ ಮೂಲಕ ನಮ್ಮ ಶಕ್ತಿ ಪ್ರದರ್ಶನವಾಗುತ್ತಿದೆ. ಲಸಿಕೆಗೆ ಸಂಬಂಧಿಸಿದ ಸುಳ್ಳು ಸುದ್ದಿಗಳಿಂದ ದೂರ ಉಳಿದುಕೊಳ್ಳಿ. ನಮ್ಮ ಲಸಿಕೆಯ ವಿಶ್ವಾಸದಿಂದಲೇ ಇತರೆ ದೇಶಗಳು ನಮಗೆ ಬೇಡಿಕೆ ಇಡುತ್ತಿವೆ. ಎರಡು ಲಸಿಕೆಗಳು ಸದ್ಯಕ್ಕೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಲಸಿಕೆಗಳನ್ನ ನಮ್ಮ ವಿಕ್ಞಾನಿಗಳು ಕಂಡು ಹಿಡಿಯಲಿದ್ದಾರೆ. ಆತ್ಮನಿರ್ಭರ ಭಾರತದಡಿಯಲ್ಲಿ ಸಂಶೋಧನೆ ಆಗುತ್ತಿರುವ ಲಸಿಕೆಗಳ ಕ್ಷಮತೆ ಗುಣಮಟ್ಟವಾದಗಿದ್ದು, ಕಡಿಮೆ ಬೆಲೆಯನ್ನ ಹೊಂದಿವೆ ಎಂದರು.

    ಕೊರೊನಾ ವಿರುದ್ಧ ಹೋರಾಟದಲ್ಲಿ ಆತ್ಮವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕೊರೊನಾ ಬಂದಾಗ ದೇಶದಲ್ಲಿ ಒಂದೇ ಟೆಸ್ಟಿಂಗ್ ಲ್ಯಾಬ್ ಇತ್ತು. ಇಂದು 23 ಸಾವಿರಕ್ಕೂ ಅಧಿಕ ಲ್ಯಾಬ್ ಗಳಿವೆ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇನ್ನಿತರ ವೈದ್ಯಕೀಯ ವಸ್ತುಗಳಿಗಾಗಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಇಂದು ಆತ್ಮನಿರ್ಭರ ಭಾರತದಡಿಯಲ್ಲಿ ಸ್ವಾವಲಂಬನೆ ಹೊಂದಿದ್ದು, ನಿರ್ಯಾತ ಸಹ ಮಾಡಲಾಗುತ್ತಿದೆ. ಇದಕ್ಕೆಲ್ಲ ಭಾರತೀಯರ ಆತ್ಮನಿರ್ಭರದ ಆತ್ಮವಿಶ್ವಾಸ ಕಾರಣ.

    ಭಾವುಕರಾದ ಪ್ರಧಾನಿ ಮೋದಿ: ಕೊರೊನಾ ಲಸಿಕೆ ಕಾರ್ಯಕ್ರಮ ಮಾನವೀಯ ಮತ್ತು ಮಹತ್ವದ ಸಿದ್ಧಾಂತಗಳಡಿಯಲ್ಲಿದೆ. ಈ ಕೊರೊನಾ ಎಷ್ಟೋ ಜನರನ್ನ ಏಕಾಂಗಿಯನ್ನಾಗಿ ಮಾಡಿತು. ಮಗುವನ್ನ ತಾಯಿಯಿಂದ ದೂರು ಮಾಡಿತು. ವೃದ್ಧರು ಒಂಟಿಯಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದರು. ಈ ವೈರಸ್ ನಿಂದ ಅಗಲಿದೆ ಜನರಿಗೆ ಸಂಪ್ರದಾಯಬದ್ಧವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ. ಇದನ್ನೆಲ್ಲ ನೋಡಿದ ಮನಸ್ಸು ಭಾರವಾಗುತ್ತೆ ಎಂದು ಭಾವುಕರಾದರು.

    ಸರಿಯಾದ ಸಮಯಲ್ಲಿ ತೆಗೆದುಕೊಂಡ ಸೂಕ್ತ ನಿರ್ಧಾರಗಳನ್ನ ತೆಗೆದುಕೊಂಡಿತು. ಜನತಾ ಕಫ್ರ್ಯೂ ಜನರನ್ನ ಲಾಕ್‍ಡೌನ್ ಗೆ ಸಿದ್ಧಗೊಳಿಸಿತು. ಕೊರೊನಾ ಆಕ್ರಮಣ ತಡೆಯಲು ದೊಡ್ಡ ಅಸ್ತ್ರವೇ ಲಾಕ್‍ಡೌನ್ ಆಗಿತ್ತು. ಈ ನಿರ್ಧಾರ ಅಷ್ಟು ಸರಳವಾಗಿರಲಿಲ್ಲ. ಆದರೂ ಭಾರತ ಸರ್ಕಾರ ಕೊರೊನಾ ತಡೆಗಾಗಿ ಲಾಕ್‍ಡೌನ್ ಸೇರಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿತು. ಮೂಲಭೂತ ಸೇವೆಗಳು, ರೇಷನ್, ಔಷಧಿ, ಗ್ಯಾಸ್ ನೀಡುವ ಕೆಲಸ ಮಾಡಲಾಯ್ತು. ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ನಾವು ಕರೆ ತಂದಿದ್ದೇವೆ. ವಂದೇ ಭಾರತ್ ಮಿಷನ್ ಅಡಿ ಸುಮಾರು 35 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದರು. ಭಾರತ ತೆಗೆದುಕೊಂಡ ನಿರ್ಧಾರಗಳನ್ನ ಇಂದು ಇಡೀ ವಿಶ್ವ ಪಾಲನೆ ಮಾಡುತ್ತಿದೆ.

    ಮಾನವ ಸಂಕುಲಕ್ಕೆ ಒಳ್ಳೆಯದಾಗಲಿದೆ: ಕೊರೊನಾ ತಡೆಗಾಗಿ ದೇಶ ಹೇಗೆ ಒಗ್ಗಟ್ಟಾಗಿ ನಿಂತಿತು ಅನ್ನೋದನ್ನ ಇಡೀ ವಿಶ್ವ ಆಶ್ಚರ್ಯಚಕಿತದಿಂದ ನೋಡುತ್ತಿದ್ದೇವೆ. ಕೊರೊನಾ ಮರಣ ಪ್ರಮಾಣ ದರ ಸಹ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಭಾರತ 150ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ನೆರೆವು ನೀಡಿದೆ. ಇಂದು ನಾವು ನನ್ನ ಲಸಿಕೆಯನ್ನ ಕಂಡು ಹಿಡಿದಿದ್ದೇವೆ. ನಮ್ಮ ಲಸಿಕೆ ಇಡೀ ಮಾನವ ಕುಲಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.

  • ಕೊರೊನಾ ಮಹಾಮಾರಿ ವಿರುದ್ಧ ಸಂಜೀವಿನಿ – ಬೆಳಗ್ಗೆ 10.30ಕ್ಕೆ ಪ್ರಧಾನಿಗಳಿಂದ ಚಾಲನೆ

    ಕೊರೊನಾ ಮಹಾಮಾರಿ ವಿರುದ್ಧ ಸಂಜೀವಿನಿ – ಬೆಳಗ್ಗೆ 10.30ಕ್ಕೆ ಪ್ರಧಾನಿಗಳಿಂದ ಚಾಲನೆ

    ಬೆಂಗಳೂರು: ಇಂದಿನಿಂದ ದೇಶಾದ್ಯಂತ ಕೊರೊನಾ ಲಸಿಕೆಯ ಮಹಾಯಜ್ಞ ಶುರುವಾಗಲಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆಗೆ ನೀಡಲಿದ್ದಾರೆ. ಅಲ್ಲದೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಮೊದಲ ದಿನವಾದ ಇಂದು ದೇಶಾದ್ಯಂತ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಪುಣೆಯ ಸೆರಮ್ ಇನ್ಸಿಟಿಟ್ಯೂಟ್ ತಯಾರಿಸಿರೋ ‘ಕೊವಿಶೀಲ್ಡ್’ ಲಸಿಕೆಯ ಮೊದಲ ಡೋಸ್ ಪಡೆಯಲಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ವ್ಯಾಕ್ಸಿನ್ ಹಂಚಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ ಮಾಡಲಿದ್ದಾರೆ.

    ಕೊರೊನಾ ವ್ಯಾಕ್ಸಿನೇಷನ್‍ಗೆ ರಾಜ್ಯ ಸಜ್ಜಾಗಿದೆ. ರಾಜ್ಯದಲ್ಲಿ 243 ಹಾಗೂ ಬೆಂಗಳೂರಿನ 10 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಅಲ್ಲದೆ ಲಸಿಕೆ ತೆಗೆದುಕೊಂಡ ನಂತರ ಕೆಲವರಿಗೆ ಸೈಡ್ ಎಫೆಕ್ಟ್ ಆಗಬಹುದು. ಸ್ಪಲ್ಪ ಜ್ವರ ಬರಬಹುದು. ಆಮೇಲೆ ಅದೇ ಸರಿ ಹೋಗುತ್ತೆ. ಆತಂಕಕ್ಕೆ ಒಳಗಾಗಬಾರದು ಅಂತ ಹೇಳಿದ್ದಾರೆ.

    ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಸಾಂಕೇತಿಕವಾಗಿ ಮೊದಲು ಲಸಿಕೆ ನೀಡಲಾಗುತ್ತದೆ ಅಂತ ಸುಧಾಕರ್ ವಿವರಿಸಿದ್ದಾರೆ. ಬೆಂಗಳೂರಿನ 8 ಲಸಿಕಾ ಕೇಂದ್ರದಲ್ಲಿ ಒಟ್ಟು 800 ಜನ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಾವೇ ಮೊದಲ ವ್ಯಾಕ್ಸಿನ್ ತೆಗೆದುಕೊಳ್ಳೋದಾಗಿ ಖ್ಯಾತ ವೈದ್ಯ, ಟಾಸ್ಕ್ ಫೋರ್ಸ್ ಸಮಿತಿ ಮುಖ್ಯಸ್ಥರಾಗಿರೋ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.

  • ಯಾರು ಲಸಿಕೆ ಪಡೆಯಬಹುದು? ಯಾರು ಪಡೆಯಬಾರದು? ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

    ಯಾರು ಲಸಿಕೆ ಪಡೆಯಬಹುದು? ಯಾರು ಪಡೆಯಬಾರದು? ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ದೇಶವನ್ನು ವರ್ಷಗಳ ಕಾಲ ಕಾಡಿರುವ ಮತ್ತು ಈಗಲೂ ಸಮಸ್ಯೆ ತಂದಿಟ್ಟಿರುವ ಹೆಮ್ಮಾರಿ ಕೊರೊನಾಗೆ ಲಸಿಕೆ ಬಂದಾಗಿದೆ. ದೇಶಾದ್ಯಂತ ಶನಿವಾರದಿಂದ ಕೊರೋನಾ ಲಸಿಕೆಯ ಮಹಾಯಜ್ಞ ಶುರುವಾಗಲಿದೆ.

    ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆಗೆ ನೀಡಲಿದ್ದಾರೆ. ಅಲ್ಲದೆ, ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೊದಲ ದಿನವಾದ ನಾಳೆ ದೇಶಾದ್ಯಂತ 3 ಲಕ್ಷ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆಯಲಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವ್ಯಾಕ್ಸಿನ್ ಹಂಚಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ ಮಾಡಲಿದ್ದಾರೆ. ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್‌ ತಯಾರಿಸಿರುವ ʼಕೊವಿಶೀಲ್ಡ್’ ಲಸಿಕೆಗಳು ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ರವಾನೆಯಾಗಿದೆ.

    ಈ ಮಧ್ಯೆ, ನಾಳೆ ಹೈದ್ರಾಬಾದ್‍ನಿಂದಲೂ ಭಾರತ್ ಬಯೋಟೆಕ್‍ನ ಕೊವಾಕ್ಸಿನ್ ಲಸಿಕೆ ಪೊರೈಕೆ ಶುರುವಾಗಲಿದೆ. ದೇಶದ 12 ಕಡೆ 56 ಲಕ್ಷ ಕೊವಾಕ್ಸಿನ್ ಲಸಿಕೆ ಸಪ್ಲೈ ಆಗಲಿದೆ. 1 ಕೊವಾಕ್ಸಿನ್ ಲಸಿಕೆಗೆ 295 ರೂ.ನಂತೆ ವ್ಯಾಕ್ಸಿನ್ ಖರೀದಿ ಆಗಲಿದೆ. ಒಟ್ಟು 55 ಲಕ್ಷ ಲಸಿಕೆಯನ್ನು ಭಾರತ್ ಬಯೋಟೆಕ್ ಪೂರೈಸಲಿದ್ದು, ಮೊದಲ ಕಂತು – 38.5 ಲಕ್ಷ, ಎರಡನೇ ಕಂತು – 16.5 ಲಕ್ಷ ಲಸಿಕೆ ಇರಲಿದೆ.

    ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಆಗುತ್ತಿರುವ ಹಿನ್ನೆಲೆಯಲ್ಲಿ . ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಯಾರು ಲಸಿಕೆ ತೆಗೆದುಕೊಳ್ಳಬಹುದು..? ಯಾರಿಗೆ ಲಸಿಕೆ ಕೊಡಬಹುದು..? ಯಾರಿಗೆ ಕೋವಿಡ್ ಲಸಿಕೆ ಕೊಡಬಾರದು ಎಂಬ ಬಗ್ಗೆ ಮಾರ್ಗಸೂಚಿ ನೀಡಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – 18 ಮತ್ತು 18 ವರ್ಷ ಮೇಲ್ಪಟ್ಟವರಿಗಷ್ಟೇ ಲಸಿಕೆ
    – ಬಾಣಂತಿಯರು, ಸ್ತನ್ಯಪಾನ ನೀಡುತ್ತಿರುವ ತಾಯಂದಿರಿಗೆ ವ್ಯಾಕ್ಸಿನ್ ಬೇಡ
    – ಗರ್ಭಿಣಿಯರು, ಗರ್ಭಧಾರಣೆ ಬಗ್ಗೆ ಇನ್ನೂ ಸ್ಪಷ್ಟ ಆಗದೇ ಇದ್ದಲ್ಲಿ ವ್ಯಾಕ್ಸಿನ್ ಬೇಡ
    – ಅಲರ್ಜಿ ಸಮಸ್ಯೆ ಇರುವವರು ವ್ಯಾಕ್ಸಿನ್ ಪಡೆಯಬಾರದು
    – ಕೊವಿಡ್ ಸೋಂಕಿಗೆ ಒಳಗಾದವರು, ಬಹು ಕಾಯಿಲೆ ಬಾಧಿತರು, ರೋಗ ನಿರೋಧಕ ಶಕ್ತಿ ಕಡಿಮೆ ಇರೋವವರು ಲಸಿಕೆ ಹಾಕಿಸಿಕೊಳ್ಳಬೇಕು

    – ಮೊದಲಿಗೆ ಯಾವ ವ್ಯಾಕ್ಸಿನ್ ತೆಗೆದುಕೊಳ್ತಿರೋ 2ನೇ ಡೋಸ್ ಅದೇ ಇರಬೇಕು (ಉದಾ: ಕೊವಿಶೀಲ್ಡ್ ಲಸಿಕೆ ಪಡೆದಿದ್ದರೆ, 2ನೇ ಡೋಸ್ ಕೋವಿಶೀಲ್ಡ್‌ ಆಗಿರಬೇಕು)
    – ಸದ್ಯಕ್ಕೆ ಕೊವಿಡ್ ಚಿಕಿತ್ಸೆ, ರೋಗ ನಿರೋಧಕ ಔಷಧಿ, ಪ್ಲಾಸ್ಮಾ ಚಿಕಿತ್ಸೆ ಪಡೆಯುತ್ತಿದ್ದರೆ ವ್ಯಾಕ್ಸಿನ್ ಬೇಡ
    – ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೂ ಲಸಿಕೆ ಬೇಡ

    – ಗುಣಮುಖರಾದ 4 ರಿಂದ 8 ವಾರಗಳ ಬಳಿಕ ಲಸಿಕೆ ಪಡೆಯಬಹುದು
    – ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಕಾಣಿಸಬಹುದು
    – ಸ್ವಲ್ಪ ಜ್ವರ, ಇಂಜೆಕ್ಷನ್ ಪಡೆದ ಕಡೆ ನೋವು, ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು
    – ಅಡ್ಡ ಪರಿಣಾಮಗಳ ಬಗ್ಗೆ ಚಿಂತೆ ಬೇಡ, ತಾನಾಗೇ ಗುಣಮುಖ ಆಗುತ್ತೆ
    – ಸಂತಾನೋತ್ಪತ್ತಿ ಮೇಲೆ ಕೊವಿಡ್ ಲಸಿಕೆ ಪರಿಣಾಮ ಬೀರಲ್ಲ
    – ಬೇರೆ ಲಸಿಕೆ ಪಡೆಯುತ್ತಿದ್ದರೆ 14 ದಿನಗಳ ಅಂತರದಲ್ಲಿ ಕೋವಿಡ್ ಲಸಿಕೆ ಪಡೆಯಬಹುದು
    – ಕೊ-ವಿನ್ ಆ್ಯಪ್‍ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ
    – ಸಾರ್ವಜನಿಕರಿಗೆ ನೋಂದಣಿಗಾಗಿ ಇನ್ನೂ ಕೊ-ವಿನ್ ಆ್ಯಪ್ ಬಿಡುಗಡೆ ಆಗಿಲ್ಲ