Tag: ಕೊರೊನಾ ಲಸಿಕೆ

  • ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಸುಧಾಕರ್

    ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಆರೈಕೆ: ಸುಧಾಕರ್

    ಬೆಂಗಳೂರು: ಎಷ್ಟೇ ಜನರಿಗೆ ಸೋಂಕು ತಗುಲಿದರೂ ಮನೆಯಲ್ಲಿ ಆರೈಕೆ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಮೂಲಕ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಣ ಮಾಡಲು ವಿಶೇಷ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.

    ಬಸವನಗುಡಿಯ ಅಬಲಾಶ್ರಮದಲ್ಲಿ ಸ್ವಾಸ್ಥ್ಯ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಕೊರೊನಾ ಮೂರನೇ ಅಲೆಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಕುರಿತಾಗಿ ನಿನ್ನೆ 10 ಸಾವಿರ ವೈದ್ಯರ ಜೊತೆ ಸಂವಾದ ಮಾಡಿದ್ದೇನೆ. ಇವರು ಹೋಂ ಐಸೋಲೇಷನ್ ಇದ್ದಾಗ ಹೇಗೆ ಟೆಲಿ ಟ್ರೈನಿಂಗ್ ಮಾಡಬೇಕು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

    ವಿಶ್ವದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಜಾಸ್ತಿಯಾಗಿದೆ. ಸಮಾಧಾನದ ವಿಚಾರ ಎಂದರೆ ರೋಗದ ಲಕ್ಷಣ ಕಡಿಮೆ ಇದೆ. ಜೊತೆಗೆ ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಣ ಮಾಡಬಹುದು. ಫೆಬ್ರವರಿಯಲ್ಲಿ ಇದರ ತೀವ್ರತೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ ಎಂದರು.

    ಬಳ್ಳಾರಿಯಲ್ಲಿ ಹಾಸ್ಟೆಲ್‍ಗಳನ್ನು ಮುಚ್ಚುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲೆಗಳ ಪರಿಸ್ಥಿತಿಗೆ ಅನುಸಾರವಾಗಿ ಕ್ರಮಕೈಗೊಳ್ಳುವ ಅಧಿಕಾರವನ್ನು ಅಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಬಳ್ಳಾರಿಯಲ್ಲಿ ಹಾಸ್ಟೆಲ್‍ಗಳಲ್ಲಿ ಕೇಸ್‍ಗಳ ಸಂಖ್ಯೆ ಜಾಸ್ತಿ ಆಗಿರಬಹುದು. ಹಾಗಾಗಿ ಡಿಸಿ ಈ ಕ್ರಮ ಕೈಗೊಂಡಿರಬಹುದು. ಬಳ್ಳಾರಿಯ ಪರಿಸ್ಥಿತಿ ಬಗ್ಗೆ ಅಲ್ಲಿನ ಡಿಸಿ ಜೊತೆ ಚರ್ಚಿಸುತ್ತೇನೆ. ಡಿಸಿಯವರಿಂದ ಜಿಲ್ಲೆಯ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

    CORONA-VIRUS.

    ಬೆಳಗಾವಿಯ ರಾಮದುರ್ಗ ತಾಲೂಕಿನಲ್ಲಿ ರೂಬೆಲ್ಲ ಲಸಿಕೆ ಪಡೆದ ಬಳಿಕ ಮೂವರು ಮಕ್ಕಳು ಸಾವನ್ನಪ್ಪಿದ್ದರು. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಎಂದು ನೋಡಿಕೊಂಡು ಮಾತಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್

    ಇಂದಿಗೆ ಲಸಿಕಾಕರಣವು 1 ವರ್ಷ ಪೂರೈಸಿದೆ. ಇಡೀ ವಿಶ್ವದಲ್ಲಿ ಇಷ್ಟು ದೊಡ್ಡ ಪ್ರಮಾಣದ ಸಾಧನೆ ಭಾರತ ಮಾಡಿದೆ. ಪ್ರಧಾನ ಮಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಭಿಯಾನ ಸಾಕಾರಗೊಳ್ಳಲು ಲಸಿಕೆ ಸಂಶೋಧನೆ ಮಾಡಿದ ವಿಜ್ಞಾನಿಗಳು ಸಂಸ್ಥೆಗೆ ಕೃತಜ್ಞತೆ ಹೇಳುತ್ತೇನೆ. 36 ದೇಶಗಳಲ್ಲಿ ಕೇವಲ 10% ರಷ್ಟು ಲಸಿಕೆ ಪಡೆಯಲು ಆಗಿಲ್ಲ. ಕರ್ನಾಟಕ 99% ಮೊದಲ ಡೋಸ್ ಆಗಿದೆ. 80% ಎರಡನೇ ಡೋಸ್ ಆಗಿರುವವರು ಇದ್ದಾರೆ. ವಿಶ್ವದ ಬಡ ರಾಷ್ಟ್ರಗಳಿಗೆ ಕೂಡಾ ಭಾರತ ಲಸಿಕೆ ಸರಬರಾಜು ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ

    ಈ ಸಂದರ್ಭದಲ್ಲಿ ಆರ್ ಎಸ್‍ಎಸ್ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಅಬಲಾಶ್ರಮದ ಗೌರವಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ದೇಶಪಾಂಡೆ, ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ ಉಪಸ್ಥಿತರಿದ್ದರು.

  • ಒಂದು ವರ್ಷ ಪೂರೈಸಿದ ಲಸಿಕಾ ಅಭಿಯಾನ – ಟ್ವೀಟ್ ಮಾಡಿ ಮೋದಿ ಪ್ರಶಂಸೆ

    ಒಂದು ವರ್ಷ ಪೂರೈಸಿದ ಲಸಿಕಾ ಅಭಿಯಾನ – ಟ್ವೀಟ್ ಮಾಡಿ ಮೋದಿ ಪ್ರಶಂಸೆ

    ನವದೆಹಲಿ: ಭಾರತದಲ್ಲಿ ಲಸಿಕೆ ಅಭಿಯಾನ ಪ್ರಾರಂಭವಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ  ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಲಸಿಕಾ ಅಭಿಯಾನ ಒಂದು ವರ್ಷ ಪೂರೈಸಿರುವ ಕುರಿತು ಟ್ವೀಟ್ ಮಾಡಿರುವ ಅವರು, ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕಾ ಅಭಿಯಾನವು ಕೊರೊನಾ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿಯನ್ನು ನೀಡಿದೆ. ಕೊರೊನಾ ಸಾಂಕ್ರಾಮಿಕ ಮೊದಲ ಬಾರಿಗೆ ಅಪ್ಪಳಿಸಿದಾಗ ಈ ಬಗ್ಗೆ ನಮಗೂ ಹೆಚ್ಚೆನೂ ಮಾಹಿತಿ ಇರಲಿಲ್ಲ. ಆದರೂ ವಿಜ್ಞಾನಿಗಳು ಲಸಿಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಲಸಿಕೆ ಮೂಲಕ ಕೊರೊನಾ ವಿರುದ್ಧ ಹೋರಾಡಲು ನಮಗೆ ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

    ಈ ಸಮಯದಲ್ಲಿ ಸಹಾಯ ಮಾಡಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದವನ್ನು ತಿಳಿಸುತ್ತೇನೆ. ಇವರ ಸೇವಾ ಕಾರ್ಯಕ್ಕೆ ಹೆಮ್ಮೆಯೆನಿಸುತ್ತದೆ. ನಾವು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡೋಣ ಎಂದು ಟ್ವಿಟ್ಟರ್ ನಲ್ಲಿ ಕರೆ ನೀಡಿದ್ದಾರೆ.

    ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ ವಿಶ್ವದಲ್ಲೇ ಇದು ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಂಡವಿಯಾ ಪ್ರಶಂಸಿಸಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಶ್ವದ ಅತಿದೊಡ್ಡ ಅಭಿಯಾನ ಇಂದು ಒಂದು ವರ್ಷವನ್ನು ಪೂರೈಸಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾರಂಭವಾದ ಈ ಅಭಿಯಾನವು ಇಂದು ವಿಶ್ವದಲ್ಲೇ ಅತ್ಯಂತ ಯಶಸ್ವಿ ಅಭಿಯಾನವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೂ, ವಿಜ್ಞಾನಿಗಳಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಭಾರತದಲ್ಲಿ ಈವರೆಗೆ ಕೋವಿಡ್ ಲಸಿಕೆ, 156.76 ಡೋಸ್ ವಿತರಣೆಯಾಗಿದೆ. ಕಳೆದ 24 ಗಂಟೆಗಳಲ್ಲಿ 66 ಲಕ್ಷಕ್ಕೂ ಹೆಚ್ಚು ಡೋಸ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮತ್ತು ಸ್ಫೂರ್ತಿದಾಯಕ ನಾಯಕತ್ವದಿಂದಾಗಿ ಕೊರೊನಾ ವಿರುದ್ಧ ಸಾಮೂಹಿಕವಾಗಿ ಹೋರಾಡಲು ಸಹಾಯಕವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಲಸಿಕಾ ಅಭಿಯಾನ ಹೇಗೆ ಪ್ರಾರಂಭವಾಯಿತು ಮತ್ತು ಒಂದು ವರ್ಷದ ಅವಧಿಯಲ್ಲಿ 150 ಕೋಟಿಗೂ ಹೆಚ್ಚು ಡೋಸ್‍ಗಳನ್ನು ನೀಡುವಲ್ಲಿ ಹೇಗೆ ಯಶಸ್ವಿಯಾದೆವು ಎನ್ನುವುದರ ಬಗ್ಗೆ ಚಾರ್ಟ್‍ನ್ನು ಅವರು ಹಂಚಿಕೊಂಡಿದ್ದಾರೆ.

    ಕೊರೊನಾ ಲಸಿಕೆ ಅಭಿಯಾನವನ್ನು 2021ರ ಜನವರಿ 16ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,71,202 ಹೊಸ ಕೋವಿಡ್ ಪ್ರಕರಣಗಳು, 314 ಸೋಂಕಿತರು ಸಾವನ್ನಪ್ಪಿದ್ದು, 1,38,331 ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

     

  • 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು

    700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು

    ಬರ್ಲಿನ್: 700 ಕುರಿಗಳನ್ನು ಸಿರಿಂಜ್ ಆಕೃತಿಯಲ್ಲಿ ನಿಲ್ಲಿಸಿ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸುವ ಸಂದೇಶ ಸಾರಿದ್ದಾರೆ. ಈ ಫೋಟೋಗಳು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜರ್ಮನಿಯಲ್ಲಿ ಕೊರೊನಾ ಹೆಚ್ಚಾಗಿದೆ. ಜನ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜರ್ಮನಿಯಲ್ಲಿ ಜನರು ಧನಾತ್ಮಕ ದೃಷ್ಟಿಕೋನದಲ್ಲಿ ಕುರಿಗಳನ್ನು ನೋಡುತ್ತಾರೆ ಈ ಹಿನ್ನಲೆಯಲ್ಲಿ ಜರ್ಮನ್ ಪಟ್ಟಣವಾದ ಷ್ನೆವರ್ಡಿಂಗನ್‌ನಲ್ಲಿ ತನ್ನದೇ ತಂಡವನ್ನು ಕಟ್ಟಿಕೊಂಡು ಕುರಿಗಳ ಮೂಲಕ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 100 ಮೀ ಉದ್ದದ ಸಿರಿಂಜ್ ಆಕೃತಿಯನ್ನು 700 ಕುರಿಗಳ ಮೂಲಕ ನಿರ್ಮಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:  ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ

    ಜರ್ಮನಿಯಲ್ಲಿ ಶೇ.71.3 ರಷ್ಟು ಜನ ಮಾತ್ರ ಕೊರೊನಾ ಲಸಿಕೆಯ ಎರಡೂ ಡೋಸ್‍ನ್ನು ಪಡೆದಿದ್ದಾರೆ. 39.3 ಪ್ರತಿಶತದಷ್ಟು ಜನರು ಕಳೆದ ಎರಡು ದಿನಗಳ ಹಿಂದೆ ವ್ಯಾಕ್ಸಿನ್‌ ಪಡೆದಿದ್ದಾರೆ ಎಂದು ಜರ್ಮನ್ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್ ಫಾರ್ ಇನ್ಫೆಕ್ಷನ್ ಡಿಸೀಸ್ ಸಂಸ್ಥೆ ವರದಿ ತಿಳಿಸಿದೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

  • ಹೈಡ್ರಾಮಾ ಮಾಡುತ್ತಿದ್ದ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿದ ಆಶಾ ಕಾರ್ಯಕರ್ತೆಯರು

    ಹೈಡ್ರಾಮಾ ಮಾಡುತ್ತಿದ್ದ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿದ ಆಶಾ ಕಾರ್ಯಕರ್ತೆಯರು

    ಬೀದರ್: ಅಜ್ಜಿ ಲಸಿಕೆ ಪಡೆಯದೆ ಹೈಡ್ರಾಮಾ ಮಾಡುತ್ತಿದ್ದಾಗ ಅವರ ಕೈಗಳನ್ನು ಹಿಡಿದು ಆರೋಗ್ಯ ಸಿಬ್ಬಂದಿ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಪರ್ತಾಪೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಸಿಕೆ ಪಡೆಯಲು ಅಜ್ಜಿ ಒಲ್ಲೆ ಎಂದರೂ ಬಿಡದ ಆರೋಗ್ಯ ಸಿಬ್ಬಂದಿ ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

    ಅಜ್ಜಿ ಲಸಿಕೆ ಪಡೆಯುತ್ತಿಲ್ಲಾ ಎಂಬ ಮಾಹಿತಿ ಪಡೆದ ಆಶಾ ಕಾರ್ಯಕರ್ತೆರು ಹಾಗೂ ಆರೋಗ್ಯ ಸಿಬ್ಬಂದಿ ಲಸಿಕೆ ನೀಡಲು ಅಜ್ಜಿ ಮನೆಗೆ ಭೇಟಿ ನೀಡಿದರು. ಈ ವೇಳೆ ಎಷ್ಟೇ ಮನವೊಲಿಸಿದರೂ, ಅಜ್ಜಿ ಲಸಿಕೆ ಪಡೆಯಲು ಹಿಂದೇಟು ಹಾಕಿದಾಗ ಒತ್ತಾಯವಾಗಿ ಲಸಿಕೆ ನೀಡಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

     

    ಅಜ್ಜಿಗೆ ಒತ್ತಾಯ ಪೂರ್ವಕವಾಗಿ ಲಸಿಕೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೊನಾಗೆ ಸಂಜೀವಿನಿಯಾದ ಲಸಿಕೆ ಪಡೆಯಲು ಬೀದರ್ ಜಿಲ್ಲೆಯ ಗ್ರಾಮೀಣ ಭಾಗದ ಜನರು ಇನ್ನೂ ಹಿಂದೇಟು ಹಾಕುತ್ತಿರುವುದು ಆರೋಗ್ಯ ಸಿಬ್ಬಂದಿಯನ್ನು ಹೈರಾಣಾಗುವಂತೆ ಮಾಡಿದೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

  • ಜ.15ರ ಒಳಗಡೆ ಕೋವಿಡ್‌ಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ: ಗೋಪಾಲಯ್ಯ

    ಜ.15ರ ಒಳಗಡೆ ಕೋವಿಡ್‌ಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ: ಗೋಪಾಲಯ್ಯ

    ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಗಳಿಗೆ ಜನವರಿ 15ರೊಳಗೆ ಸರ್ಕಾರದ ಪರಿಹಾರ ಧನ ಸಂದಾಯವಾಗುವಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸೂಚಿಸಿದರು.

    ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರ ವಾರ್ಡ್ ನಲ್ಲಿರುವ ಶಾಸಕರ ಭವನದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ – 19ನಿಂದ ಮೃತಪಟ್ಟ 105 ವ್ಯಕ್ತಿಗಳ ಕುಟುಂಬದವರಿಗೆ ಪರಿಹಾರ ವಿತರಿಸಿದ ಅವರು, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರು ಸಾಕಷ್ಟು ನೋವಿನಲ್ಲಿ ಇದ್ದಾರೆ. ಇಂತಹ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವುದು ಮತ್ತು ಪರಿಹಾರ ನೀಡುವುದು ನಮ್ಮ ಕರ್ತವ್ಯವಾಗಿದ್ದು, ಇದನ್ನು ಅಧಿಕಾರಿ ವರ್ಗ ತ್ವರಿತವಾಗಿ ಮಾಡಬೇಕು ಎಂದು ತಿಳಿಸಿದರು.

    ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌ನಿಂದ ಮೃತರಾದ ವ್ಯಕ್ತಿಯ ಕುಟುಂಬಗಳ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಪತ್ತೆ ಹಚ್ಚಿ ಜನವರಿ 15 ರೊಳಗೆ ಎಲ್ಲಾ ಕುಟುಂಬಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

    ಕೊರೊನಾ ಸಂದರ್ಭದಲ್ಲಿ ಅನೇಕರು ನೋವಿನಿಂದ ಕರೆ ಮಾಡಿ ಬೆಡ್ ಕೇಳುತ್ತಿದ್ದರು. ಈ ಸಮಯದಲ್ಲಿ ಕ್ಷೇತ್ರದ ಎಲ್ಲರಿಗೂ ಸ್ಪಂದಿಸಲಾಗಿದೆ. ಹೋಂ ಕ್ವಾರಂಟೈನ್‌ನಲ್ಲಿದ್ದ 7 ಸಾವಿರ ಜನರಿಗೆ ಮೆಡಿಕಲ್ ಕಿಟ್ ವಿತರಿಸಲಾಗಿದೆ. ಉಸ್ತುವಾರಿ ಜಿಲ್ಲೆಯಾದ ಹಾಸನಕ್ಕೆ 4 ಸಾವಿರ ಜನರಿಗೆ ಮೆಡಿಕಲ್ ಕಿಟ್ ಉಚಿತವಾಗಿ ಕಳುಹಿಸಿಕೊಡಲಾಗಿದೆ. ವೈದ್ಯರ ಸಲಹೆ ಮೇರೆಗೆ 350 ಆಕ್ಸಿಜನ್ ಸಿಲಿಂಡರ್ ಗಳನ್ನು ಮತ್ತು 100 ಕಾನ್ಸಟ್ರೇಟರ್‌ಗಳನ್ನು ಖರೀದಿಸಿ ಅಗತ್ಯ ಇರುವವರಿಗೆ ನೀಡಲಾಗಿದೆ ಎಂದರು. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

    ಜನವರಿ 1ರ ನಂತರ ವಾರ್ಡ್ ನಲ್ಲಿ 60ಕ್ಕೂ ಹೆಚ್ಚು ಕಡೆಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಲಸಿಕೆ ಪಡೆಯದೆ ಇದ್ದವರು ಕಡ್ಡಾಯವಾಗಿ ಪಡೆಯಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ಪೆಷಲ್ ಕಮಿಷನರ್ ದೀಪಕ್, ಜಾಯಿಂಟ್ ಕಮಿಷನರ್ ಶಿವಮಣಿ, ಆರೋಗ್ಯಾಧಿಕಾರಿ ಡಾ. ಮಂಜುಳಾ ಇಂಜಿನಿಯರ್ ತಿಮ್ಮರುಸು ಇತರರಿದ್ದರು. ಇದನ್ನೂ ಓದಿ: ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

  • ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್

    ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್

    ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆಯನ್ನು ದೂರದ ಹಳ್ಳಿಗಳಿಗೆ ಡ್ರೋನ್ ಮುಖಾಂತರ ತಲುಪಿಸುವ ವ್ಯವಸ್ಥೆ ನಡೆದಿದೆ.

    ಮಹಾರಾಷ್ಟ್ರದ ಪಾಲ್ಘರ್‌ನ ಜಿಲ್ಲಾಡಳಿತವು ಈ ಪ್ರಯೋಗವನ್ನು ನಡೆಸಿದೆ. ಈ ಪ್ರಯೋಗದ ಭಾಗವಾಗಿ 300 ಲಸಿಕೆಗಳನ್ನು ಜವಾಹರ್‌ನಿಂದ ಝಾಫ್ ಗ್ರಾಮಕ್ಕೆ ಸಾಗಿಸಲಾಗಿದೆ. ವಾಹನದ ಮೂಲಕ 40 ನಿಮಿಷಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳಬೇಕಾದ ಕಾರ್ಯವು ಕೇವಲ ಒಂಭತ್ತು ನಿಮಿಷಗಳಲ್ಲಿ ಪೂರ್ಣಗೊಂಡಿದೆ ಎಂದು ಜಿಲ್ಲಾಡಳಿತ ಹೇಳಿದೆ. ಇದನ್ನೂ ಓದಿ: ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಡೋಸ್ ವ್ಯರ್ಥ

    ಗುರುವಾರ ಯಶಸ್ವಿಯಾಗಿ ನಡೆಸಿದ ಪ್ರಯೋಗ ಬಹುಶಃ ರಾಜ್ಯದಲ್ಲಿಯೇ ಮೊದಲನೆಯದು ಎಂದು ಜಿಲ್ಲಾಧಿಕಾರಿ ಡಾ. ಮಾಣಿಕ್ ಗುರ್ಸಾಲ್ ಹೇಳಿದರು.

    ಲಸಿಕೆಗಳನ್ನು ವೇಗವಾಗಿ ಗ್ರಾಮಸ್ಥರ ಮನೆ ಬಾಗಿಲಿಗೆ ಡ್ರೋನ್ ಮೂಲಕ ತಲುಪಿಸಬಹುದು. ಲಸಿಕೆಗಳು ಸರಿಯಾದ ಸಂದರ್ಭಕ್ಕೆ ಸಿಗುವುದಿಲ್ಲ ಎಂಬ ಜನರ ತಪ್ಪು ಕಲ್ಪನೆಗಳನ್ನು ತೆಗದು ಹಾಕಲು ಈ ಪ್ರಯೋಗ ಸಹಾಯಕಾರಿಯಾಗುತ್ತದೆ ಎಂದು ಪಾಲ್ಘರ್‌ನ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ದಯಾನಂದ ಸೂರ್ಯವಂಶಿ ಹೇಳಿದ್ದಾರೆ. ಇದನ್ನೂ ಓದಿ: ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

  • ಕೋವಿಡ್ ಸರ್ಟಿಫಿಕೇಟ್ ಇಲ್ಲದವರಿಗೆ ಮಾಲ್‌ಗೆ ನೋ ಎಂಟ್ರಿ

    ಕೋವಿಡ್ ಸರ್ಟಿಫಿಕೇಟ್ ಇಲ್ಲದವರಿಗೆ ಮಾಲ್‌ಗೆ ನೋ ಎಂಟ್ರಿ

    ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಮಾಡುವ ಸಲುವಾಗಿ ಮಾಲ್‌ಗೆ ಎಂಟ್ರಿ ಕೊಡುವವರಿಗೆ ಎರಡು ಡೋಸ್ ಸರ್ಟಿಫಿಕೇಟ್ ಕಡ್ಡಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ಈಗಾಗಲೇ ಪರಿಶೀಲನೆ ಪ್ರಾರಂಭವಾಗಿದೆ.

    ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎರಡು ಡೋಸ್ ಲಸಿಕೆ ಪಡೆದವರಿಗಷ್ಟೇ ಮಾಲ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ವೀಕೆಂಡ್‌ನಲ್ಲಿ ಮಾಲ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಮಾಲ್‌ಗಳ ಮುಂಭಾಗ ಸಿಬ್ಬಂದಿ ಅಲರ್ಟ್ ಆಗಿದ್ದಾರೆ.

    2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್‌ಗೆ ಪ್ರವೇಶ ಎಂದು ಮಾಲ್ ಮುಂದೆ ಸಿಬ್ಬಂದಿ ನೋಟಿಸ್ ಬೋರ್ಡ್ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಟಿಫಿಕೇಟ್ ಇಲ್ಲದವರನ್ನು ಸಿಬ್ಬಂದಿ ವಾಪಾಸ್ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ಬೇರೆ ಯಾರದ್ದೋ ಲಸಿಕೆಯ ರಿಪೋರ್ಟ್ ತೋರಿಸಿ ಬರುವುದರಿಂದ ಸರ್ಕಾರ ನೀಡಿದ ಯಾವುದಾದರೊಂದು ಗುರುತಿನ ಚೀಟಿಯೂ ಕಡ್ಡಾಯಗೊಳಿಸಿದೆ. ಇದರಿಂದಾಗಿ ಐಡಿ ಕಾರ್ಡ್ ನಲ್ಲಿರುವ ಹೆಸರಿನ ಜೊತೆಗೆ ವ್ಯಾಕ್ಸಿನೇಷನ್ ರಿಪೋರ್ಟ್ ನಲ್ಲಿರುವ ಹೆಸರು ಎರಡನ್ನು ಪರಿಶೀಲಿಸುತ್ತಿದ್ದಾರೆ. ಸರ್ಟಿಫಿಕೇಟ್ ಇಲ್ಲದೇ ಇರುವವರು ಹೊರಗಡೆ ನಿಂತಿದ್ದಾರೆ.

  • ರಾಜ್ಯದಲ್ಲಿ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ: ಸುಧಾಕರ್

    ರಾಜ್ಯದಲ್ಲಿ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ: ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಒಟ್ಟಾರೆ 7 ಕೋಟಿ 50 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದು, ಬುಧವಾರ ಒಂದೇ ದಿನ 9 ಲಕ್ಷ ಡೋಸ್ ಲಸಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 92 ಜನರು ಮೊದಲ ಡೋಸ್ ಪಡೆದಿದ್ದರೇ, ಶೇ.62 ರಷ್ಟು ಜನರಿಗೆ ಸೆಕೆಂಡ್ ಡೋಸ್ ನೀಡಲಾಗಿದೆ. ಇಡೀ ದೇಶದಲ್ಲೇ ನಮ್ಮ ರಾಜ್ಯ ಲಸಿಕೆ ನೀಡುವುದರಲ್ಲಿ 2-3ನೇ ಸ್ಥಾನದಲ್ಲಿ ಇದ್ದೇವೆ. ಇದಕ್ಕೆ ಸಿಎಂ ಕೂಡಾ ಹೆಚ್ಚು ಸಹಕಾರ ನೀಡಿದ್ದಾರೆ. ಹಾಗೆಯೇ ಆರೋಗ್ಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕೆ ಪಡೆದ ಜನರಿಗೂ ಅಭಿನಂದನೆ ಸಲ್ಲಿಸಿದ ಅವರು, ಜನರು ಆದಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.

    ಒಂದು ಡೋಸ್ ಲಸಿಕೆ ಪಡೆದರೆ, ಸ್ಪಲ್ಪ ರೋಗನಿರೋಧಕ ಶಕ್ತಿ ಬರುತ್ತದೆ. ಸಂಪೂರ್ಣ ರೋಗ ನಿರೋಧಕ ಶಕ್ತಿ ಬರಬೇಕಾದರೆ, 2 ಡೋಸ್ ಪಡೆಯಲೇಬೇಕು. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು.

    ಓಮಿಕ್ರಾನ್ ಆತಂಕ: ಕೊರೊನಾ ರೂಪಾಂತರಿ ಓಮಿಕ್ರಾನ್ ಆತಂಕದಿಂದಾಗಿ ಏರ್‍ಪೋರ್ಟ್‍ನಲ್ಲಿ ವಿದೇಶಿ ಪ್ರಯಾಣಿಕರ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಈ ಬಗ್ಗೆ ಖುದ್ದಾಗಿ ಹೋಗಿ ಪರಿಶೀಲನೆ ಮಾಡಿದ್ದೇನೆ. ಎಲ್ಲರಿಗೂ ಕಡ್ಡಾಯ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಟೆಸ್ಟ್ ವರದಿ 3-4 ಗಂಟೆ ಒಳಗೆ ಬರೋ ಹಾಗೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್

    ಅಬೋರ್ಡ್ ಟೆಸ್ಟ್: ತಕ್ಷಣವೇ ರಿಪೋರ್ಟ್ ಬರಲು ಅಬೋಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಅಬೋರ್ಡ್ ಟೆಸ್ಟ್‍ಗೆ ಕೇಂದ್ರವೇ ದರ ನಿಗದಿಗೊಳಿಸಿದೆ. ಈ ಟೆಸ್ಟ್‍ಗೆ 3 ಸಾವಿರ ರೂ. ನೀಡಬೇಕು. ಅಬೋರ್ಡ್ ಟೆಸ್ಟ್ 1-2 ಗಂಟೆಯಲ್ಲಿ ಬರುತ್ತದೆ. ಈ ಟೆಸ್ಟ್ ಕೂಡಾ ನಿಖರವಾದ ವರದಿ ನೀಡುತ್ತದೆ. ಜೊತೆಗೆ ಆರ್‍ಟಿಪಿಸಿಆರ್ ಟೆಸ್ಟ್ ಕೂಡಾ 3-4 ಗಂಟೆ ಒಳಗೆ ರಿಪೋರ್ಟ್ ನೀಡಲು ಕ್ರಮವಹಿಸಲಾಗಿದೆ ಎಂದರು.

    ಕೆಲ ಎಂಎನ್‍ಸಿ ಕಂಪನಿ ಅವರು ನಮ್ಮ ಬಿಡಿ ಅಮೇಲೆ ಟ್ರ್ಯಾಕ್ ಮಾಡಿ ಅಂತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಈ ಬಗ್ಗೆ ನಮಗೆ ಎರಡು ವರ್ಷಗಳ ಅನುಭವ ಆಗಿದೆ. ಹೀಗಾಗಿ ಎಲ್ಲರಿಗೂ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಪ್ರಯಾಣಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

    ಮಾಲ್ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಬಿಬಿಎಂಪಿಯಿಂದ ಈಗಾಗಲೇ ನಮಗೆ ಮನವಿ ಬಂದಿದೆ. ಆದರೆ ಇಂದು ಮುಖ್ಯಮಂತ್ರಿ ಅವರು ದೆಹಲಿಗೆ ತೆರಳುತ್ತಾರೆ. ದೆಹಲಿಯಿಂದ ಅವರು ಬಂದ ಕೂಡಲೇ ಚರ್ಚೆ ಮಾಡಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅಗತ್ಯ ಇರುವ ಕಡೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಒಬ್ಬ ಜನಪ್ರತಿನಿಧಿ ಮೇಲೆ ಈ ರೀತಿ ಕೊಲೆ ಹಂತಕ್ಕೆ ಇಳಿದಿದ್ದು ಭಯ ತರಿಸಿದೆ: ಬಿ.ವೈ ವಿಜಯೇಂದ್ರ

    ಸಾರ್ವಜನಿಕ ಪ್ರದೇಶದಲ್ಲಿ ನಿರ್ಬಂಧದ ಕುರಿತು ಮಾತನಾಡಿದ ಅವರು, ಇನ್ನೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಎರಡು ಡೋಸ್ ಆಗದವರಿಗೆ ನಿರ್ಬಂಧ ವಿಧಿಸುವ ಬಗ್ಗೆ ನಿರ್ಧಾರ ಆಗಿಲ್ಲ. ಆ ಬಗ್ಗೆ ಸಲಹೆಗಳು ಬಂದಿವೆ. ಇವೆಲ್ಲವನ್ನು ಸಿಎಂ ದೆಹಲಿಯಿಂದ ವಾಪಸಾದ ಬಳಿಕ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದರು.

  • ಕೊರೊನಾ ನಿಯಂತ್ರಿಸಲು ಸರ್ಕಾರವೊಂದಕ್ಕೇ ಸಾಧ್ಯವಿಲ್ಲ, ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು: ಡಾ.ಕೆ. ಸುಧಾಕರ್

    ಕೊರೊನಾ ನಿಯಂತ್ರಿಸಲು ಸರ್ಕಾರವೊಂದಕ್ಕೇ ಸಾಧ್ಯವಿಲ್ಲ, ಜನರು ಸಹ ಮುನ್ನೆಚ್ಚರಿಕೆ ವಹಿಸಬೇಕು: ಡಾ.ಕೆ. ಸುಧಾಕರ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರವೊಂದಕ್ಕೇ ಸಾಧ್ಯವಾಗುವುದಿಲ್ಲ. ಜನರು ಜಹ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

    ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿರ್ದೇಶನದಂತೆ ಇಂದಿನಿಂದ ಏರ್‌ಪೋರ್ಟ್‍ನಲ್ಲಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಟೆಸ್ಟ್ ಮಾಡಲು ಪ್ರಾರಂಭ ಮಾಡಿದ್ದೇವೆ. ಈ ಕುರಿತ ಸಿದ್ಧತೆಗಳನ್ನು ನಾನೇ ಖುದ್ದಾಗಿ ಏರ್‌ಪೋರ್ಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಂದಿದ್ದೇನೆ. ಏರ್‌ಪೋರ್ಟ್‍ನಲ್ಲಿ ಕೊರೊನಾ ಟೆಸ್ಟ್ ಆದ ಬಳಿಕ ವರದಿ ಬರುವವರೆಗೂ ಪ್ರಯಾಣಿಕರು ಅಲ್ಲಿಯೇ ಇರಬೇಕಾಗುತ್ತದೆ. ಡಿಸೆಂಬರ್ 2 ರಂದು ಬಸವರಾಜ್ ಬೊಮ್ಮಾಯಿ ಅವರು ದೆಹಲಿಯಲ್ಲಿ ಆರೋಗ್ಯ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಕೊರೊನಾ ವಾರಿಯರ್ಸ್‍ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಕೊರೊನಾ ನಿಯಂತ್ರಣಕ್ಕೆ ಕಠಿಣ ಮಾರ್ಗಸೂಚಿಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಜನರು ಸಹ ಮುನ್ನೆಚ್ಚರಿಕೆಯಿಂದ ಇರಬೇಕು. ಸರ್ಕಾರ ಒಂದೇ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಜನರು ನಮ್ಮ ಜೊತೆ ಕೈ ಜೋಡಿಸಬೇಕು. ಜನರೇ ಸ್ವಯಂ ಆಗಿ ಬಂದು ಲಸಿಕೆ ಪಡೆಯಬೇಕು. ರಾಜ್ಯದಲ್ಲಿ ಎಲ್ಲೂ ಲಸಿಕೆ ಕೊರತೆ ಇಲ್ಲ. ಲಕ್ಷಾಂತರ ಲಸಿಕೆ ದಾಸ್ತಾನು ಇದೆ ಎಂದಿದ್ದಾರೆ.

    ಇದೇ ವೇಳೆ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ನೀಡದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇಂತಹ ಶಿಫಾರಸ್ಸು ಒಪ್ಪುವುದಿಲ್ಲ. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಆಂದೋಲನ ಮಾಡಿ ಜಾಗೃತಿ ಮೂಡಿಸಿ ಲಸಿಕೆ ಕೊಡುತ್ತೇವೆ. ಈಗ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಅಗತ್ಯ ಬಿದ್ದರೆ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಹೀಗಾಗಿ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾಲ ಕಾಲಕ್ಕೆ ಮಾರ್ಗಸೂಚಿ ಬದಲಾವಣೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೇವೆ. ಮನೆ ಮನೆಗೆ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ನೀಡಲಾಗುತ್ತಿದೆ. ʼಲಸಿಕಾ ಮಿತ್ರʼ ಹೆಸರಿನಲ್ಲಿ ಲಸಿಕೆ ನೀಡಲಾಗುತ್ತಿದೆ. ಅತ್ಯಂತ ಯಶಸ್ವಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದ್ದಾರೆ.

  • ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು: ಬಿ.ಸಿ ನಾಗೇಶ್

    ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು: ಬಿ.ಸಿ ನಾಗೇಶ್

    – 75 ವರ್ಷಗಳ ಶಿಕ್ಷಣ ಸ್ವಾರ್ಥದ ಬದುಕು ಕಲಿಸಿಕೊಟ್ಟಿದೆ

    ಬೆಂಗಳೂರು: ಭಾರತದಲ್ಲಿ ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.

    ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ) ಕುರಿತು ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನಕ್ಕೆ ಬಿ.ಸಿ ನಾಗೇಶ್ ಚಾಲನೆ ನೀಡಿ, ನಂತರ ಈ ಕುರಿತು ಮಾತನಾಡಿದ್ದು, ಅನೇಕ ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಬದಲಾವಣೆ ಆಗಬೇಕು ಎಂಬ ಚರ್ಚೆ ಆಗಿತ್ತು. 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಸತ್ ಅಂಗೀಕಾರ ಮಾಡಿತು. ಈ ಹಿಂದೆ ಬ್ರಿಟಿಷರು ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟ ಆಯ್ತು. ಬ್ರಿಟಿಷರು ಯಾವಾಗ ನಮ್ಮ ವ್ಯವಸ್ಥೆಗೆ ಕೈ ಹಾಕಿಲು ಮುಂದಾದ್ರೋ ಆಗ ಸ್ವಾತಂತ್ರ್ಯ ಹೋರಾಟ ಕಾವು ಹೆಚ್ಚಾಯ್ತು ಎಂದು ತಿಳಿಸಿದರು.

    ಶ್ಯಾಂ ಪ್ರಸಾದ್ ಮುಖರ್ಜಿ ಅವರು ಶಿಕ್ಷಣ ವ್ಯವಸ್ಥೆ ಬಗ್ಗೆ ಅಂದೇ ಧ್ವನಿ ಎತ್ತಿದ್ದರು. ಪಂಚಶೀಲ ಶಿಕ್ಷಣ ನೀತಿ ಬರಬೇಕು ಎಂದು ಮುಖರ್ಜಿ ಅವರು ಪ್ರತಿಪಾದನೆ ಮಾಡ್ತಾರೆ. ಅವರು ಅಂದೇ ಮೆಕ್ಯಾಲೆ ಶಿಕ್ಷಣ ವ್ಯವಸ್ಥೆಯನ್ನ ವಿರೋಧ ಮಾಡಿದ್ರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಟೇಕ್ ಆಫ್ ಆಗ್ತಿದ್ದಂತೇ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

    ಈಗ ಇರುವ ಶಿಕ್ಷಣ ಪದ್ದತಿ ಕುಟುಂಬಗಳನ್ನು ವಿಭಾಗ ಮಾಡುವ ವ್ಯವಸ್ಥೆಯನ್ನ ಹುಟ್ಟು ಹಾಕುತ್ತಿದೆ. ಇಂತಹ ವ್ಯವಸ್ಥೆಯ ಶಿಕ್ಷಣ ಬದಲಾವಣೆ ಆಗಬೇಕು. 75 ವರ್ಷಗಳ ಶಿಕ್ಷಣ ಸ್ವಾರ್ಥದ ಬದುಕು ಕಲಿಸಿಕೊಟ್ಟಿದೆ. ಶಿಕ್ಷಣ ವ್ಯವಸ್ಥೆ ಮೂಲಕ ದೇಶ ಬದಲಾವಣೆ ಮಾಡಬೇಕು. ಹೊಸ ಶಿಕ್ಷಣ ನೀತಿ 2014 ರಿಂದ ಚರ್ಚೆ ಆಗಿತ್ತು. 2020ರಲ್ಲಿ ಅನುಷ್ಠಾನ ಮಾಡಲಾಗಿದೆ. ಕರ್ನಾಟಕ ಮೊದಲ ರಾಜ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡಿದ್ದೇವೆ ಎಂದು ತಿಳಿಸಿದರು.

    ಮುಂದಿನ ವರ್ಷದಿಂದ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡ್ತೀವಿ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಯಾವ ತರಗತಿಯಿಂದ ಹೇಗೆ ಅನುಷ್ಠಾನ ಮಾಡಬೇಕು ಎಂದು ಟಾಸ್ಕ್ ಫೋರ್ಸ್ ವರದಿ ಕೊಡುತ್ತೆ. ವರದಿ ಬಂದ ಬಳಿಕ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡುತ್ತೇವೆ. ಅದು ಬಿಟ್ಟು ವಿರೋಧಗಳಿಗೆ ನಾವು ತಲೆ ಕೆಡಿಸಿಕೊಳ್ಳೊಲ್ಲ ಎಂದು ಸ್ಪಷ್ಟನೆ ನೀಡಿದರು.

    ಕೊರೊನಾ ಲಸಿಕೆಯನ್ನು ವಿರೋಧಿ ಮಾಡಿರೋ ಜನರು ನಮ್ಮ ಮಧ್ಯೆ ಇದ್ದಾರೆ. ಹೀಗಾಗಿ ಯಾವುದೇ ವಿರೋಧಕ್ಕೆ ನಾವು ತಲೆ ಕೆಡಿಸಿಕೊಳ್ಳೊಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಓದಿದವರು ಯಾರು ವಿರೋಧ ಮಾಡ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಓದದೇ ಅನೇಕ ಜನರು ವಿರೋಧ ಮಾಡ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ವಿರೋಧಗಳಿಗೆ ತಲೆ ಕೆಡಿಸಿಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡ್ತೀವಿ ಎಂದು ನಿಖರವಾಗಿ ತಿಳಿಸಿದರು. ಇದನ್ನೂ ಓದಿ: ಮೃಗಾಲಯದ 4 ಸಿಂಹಗಳಿಗೆ ಕೊರೊನಾ ಪಾಸಿಟಿವ್

    ಈ ಸಮ್ಮೇಳನವನ್ನು ಆರ್.ವಿ. ಶಿಕ್ಷಕರ ಮಹಾ ವಿದ್ಯಾಲಯದ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಎಂ.ಕೆ.ಶ್ರೀಧರ್, ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಪಿಯುಸಿ ಬೋರ್ಡ್ ನಿರ್ದೇಶಕಿ ಸ್ನೇಹಲ್ ಸೇರಿ ಇಲಾಖೆ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದರು.