Tag: ಕೊರೊನಾ ಲಸಿಕೆ

  • ವಿಶ್ವವಿದ್ಯಾಲಯಗಳಲ್ಲಿ ಕೋವಿಡ್ ನಿರ್ವಹಣೆ- ಕುಲಪತಿಗಳ ಸಮಾವೇಶ ನಡೆಸಿದ ರಾಜ್ಯಪಾಲರು, ಡಿಸಿಎಂ

    ವಿಶ್ವವಿದ್ಯಾಲಯಗಳಲ್ಲಿ ಕೋವಿಡ್ ನಿರ್ವಹಣೆ- ಕುಲಪತಿಗಳ ಸಮಾವೇಶ ನಡೆಸಿದ ರಾಜ್ಯಪಾಲರು, ಡಿಸಿಎಂ

    – ಮೇ 1ರಿಂದ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಸೂಚನೆ
    – ಜಾಗೃತಿ ಅಭಿಯಾನಕ್ಕೆ ನೇತೃತ್ವ ವಹಿಸಲು ವಿಸಿಗಳಿಗೆ ನಿರ್ದೇಶನ

    ಬೆಂಗಳೂರು: ಕೋವಿಡ್ ಎರಡನೇ ಅಲೆಯನ್ನು ಕಟ್ಟಿಹಾಕುವ ಉದ್ದೇಶದಿಂದ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲ 33 ವಿಶ್ವವಿದ್ಯಾಲಯಗಳಲ್ಲೂ ಕಠಿಣ ಕೋವಿಡ್ ನಿರ್ವಹಣಾ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ರಾಜ್ಯಪಾಲ ವಜೂಭಾಯ್ ವಾಲ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕುಲಪತಿಗಳ ಸಮಾವೇಶ ನಡೆಸಿದರು.

    ರಾಜಭವನದಲ್ಲಿ ಬುಧವಾರ ಸಂಜೆ ರಾಜ್ಯಪಾಲರು ಕರೆದಿದ್ದ ಸಮಾವೇಶದಲ್ಲಿ ವಿಶ್ವವಿದ್ಯಾಲಯಗಳು, ಅವುಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಲ್ಲ ಕುಲಪತಿಗಳಿಗೆ ಸೂಚಿಸಲಾಯಿತು.

    ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಆಯಾ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಲಸಿಕೆ ಪಡೆಯಬೇಕು. ವಿದ್ಯಾರ್ಥಿಗಳ ಮನವೊಲಿಕೆ ಸೇರಿ ಅದಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕುಲಪತಿಗಳು ಕೈಗೊಳ್ಳಬೇಕು ಎಂದು ರಾಜ್ಯಪಾಲರು ಮತ್ತು ಡಿಸಿಎಂ ಸೂಚಿಸಿದರು.

    ನಿರ್ವಹಣಾ ಸಮಿತಿ ರಚಿಸಿಕೊಳ್ಳಿ: ಗವರ್ನರ್
    ಪ್ರತಿಯೊಂದು ವಿವಿ ವ್ಯಾಪ್ತಿಯಲ್ಲಿ ಕುಲಪತಿ ನೇತೃತ್ವದಲ್ಲಿ ನಿರ್ವಹಣಾ ಸಮಿತಿ ರಚನೆ ಮಾಡಿಕೊಳ್ಳಿ. ಎರಡನೇ ಅಲೆ ತಡೆಯುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಅವರ ಮೂಲಕ ಪೋಷಕರಿಗೂ ತಿಳಿವಳಿಕೆ ನೀಡಿ. ಎಲ್ಲರಿಗೂ ಲಸಿಕೆ ಕೊಡಿಸಿ. ಶೈಕ್ಷಣಿಕ ಚಟುವಟಿಕೆಗಳ ಸಾಧನೆಯ ಜತೆಗೆ ಕೋವಿಡ್ ಸಾಧನೆಯೂ ಮುಖ್ಯ. ಕೋವಿಡ್ ತಡೆಗಟ್ಟುವಲ್ಲಿ ವಿವಿಗಳ ಪಾತ್ರ ಮಹತ್ವದ್ದು ಎಂದು ರಾಜ್ಯಪಾಲರು ಒತ್ತಿ ಹೇಳಿದರು.

    ಆಯಾ ವಿವಿ ಕಾರ್ಯವ್ಯಾಪ್ತಿಯ ಪ್ರದೇಶದಲ್ಲಿ ಕೋವಿಡ್ ಕುರಿತಾಗಿ ಯಾವುದೇ ಸಹಕಾರ ಬೇಕಿದ್ದರೂ ತಪ್ಪದೇ ಮಾಡಬೇಕು ಎಂದು ಕುಲಪತಿಗಳಿಗೆ ರಾಜ್ಯಪಾಲರು ನಿರ್ದೇಶನ ನೀಡಿದರು.

    ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಿಸಿ
    ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈಗ ಚಟುವಟಿಕೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ಅಥವಾ ಸಿಬ್ಬಂದಿಯಲ್ಲಿ ಕೆಮ್ಮು, ಶೀತ, ಜ್ವರ ಇತ್ಯಾದಿ ರೋಗ ಲಕ್ಷಣ ಕಂಡುಬಂದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಪೇಕ್ಷೆ ಮಾಡಬಾರದು. ಒಂದು ವೇಳೆ ಪಾಸಿಟೀವ್ ರಿಸಲ್ಟ್ ಬಂದರೆ ತಕ್ಷಣದಿಂದಲೇ ಚಿಕಿತ್ಸೆ ಪಡೆಯಬೇಕು. ಈ ನಿಟ್ಟಿನಲ್ಲಿ ಕುಲಪತಿಗಳು, ಕುಲ ಸಚಿವರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸಲಹೆ ಮಾಡಿದರು.

    ಲಸಿಕೆ ಪಡೆಯುವಂತೆ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ. ಆ ಮೂಲಕ ಅವರ ಪೋಷಕರನ್ನೂ ಮನವೊಲಿಸಿ. ಎಲ್ಲರಲ್ಲೂ ಜಾಗೃತಿ ಮೂಡಿಸಿ. ಆಯಾ ವಿವಿಗಳ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಿ. ಇಡೀ ರಾಜ್ಯದಲ್ಲಿ ಆರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರ ಜತೆಗೆ ಅವರವರ ಪೋಷಕರು ಲಸಿಕೆ ಪಡೆದರೆ ಅದೇ ಒಂದು ದೊಡ್ಡ ಮೈಲುಗಲ್ಲು ಆಗುತ್ತದೆ ಎಂದು ಡಿಸಿಎಂ ಕುಲಪತಿಗಳಿಗೆ ತಿಳಿಸಿದರು.

    ಆಯಾ ವಿವಿಗಳಲ್ಲಿ ಇರುವ ಎಲ್ಲ ಸೌಲಭ್ಯಗಳನ್ನು ಕೋವಿಡ್ ನಿರ್ವಹಣೆಗಾಗಿ ಬಳಸಿಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಸೇರಿದಂತೆ 33 ವಿವಿಗಳ ಕುಲಪತಿಗಳು ಸೇರಿದಂತೆ ಇನ್ನಿತರೆ ಉನ್ನತ ಪ್ರತಿನಿಧಿಗಳು ಇದ್ದರು.

  • ಇದುವರೆಗೂ ಕೊರೊನಾ ಲಸಿಕೆಯ 44 ಲಕ್ಷ ಡೋಸ್ ವ್ಯರ್ಥ – RTIನಲ್ಲಿ ಬಹಿರಂಗ

    ಇದುವರೆಗೂ ಕೊರೊನಾ ಲಸಿಕೆಯ 44 ಲಕ್ಷ ಡೋಸ್ ವ್ಯರ್ಥ – RTIನಲ್ಲಿ ಬಹಿರಂಗ

    – ಯಾವ ರಾಜ್ಯದಲ್ಲಿ ಎಷ್ಟು ವ್ಯರ್ಥ?

    ನವದೆಹಲಿ: ದೇಶದಲ್ಲಿ ಕೊರೊನಾ ಹರಡುವಿಕೆ ವೇಗ ಪಡೆದುಕೊಳ್ಳುತ್ತಿದ್ರೆ, ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ. ಈ ನಡುವೆ ದೇಶದಲ್ಲಿ ಇದುವರೆಗೂ ಕೊರೊನಾ ಲಸಿಕೆಯ 44 ಲಕ್ಷ ಡೋಸ್ ವ್ಯರ್ಥವಾಗಿದೆ ಎಂದು ಆರ್ ಟಿಐ ನಲ್ಲಿ ಬಹಿರಂಗಗೊಂಡಿದೆ.

    ಯಾವ ರಾಜ್ಯದಲ್ಲಿ ಎಷ್ಟು?:
    ಆರ್ ಟಿಐ ಮಾಹಿತಿ ಪ್ರಕಾರ ತಮಿಳುನಾಡಿನಲ್ಲಿ ಶೇ.12.10ರಷ್ಟು ಡೋಸ್ ಲಸಿಕೆ ವ್ಯರ್ಥವಾಗಿದೆ. ಇದರ ನಂತರ ಹರ್ಯಾಣದಲ್ಲಿ ಶೇ.9.74, ಪಂಜಾಬ್ ನಲ್ಲಿ ಶೇ.8.12, ಮಣಿಪುರದಲ್ಲಿ ಶೇ.7.8 ಮತ್ತು ತೆಲಂಗಾಣದಲ್ಲಿ ಶೇ.7.55ರಷ್ಟು ಡೋಸ್ ಲಸಿಕೆ ವ್ಯರ್ಥವಾಗಿದೆ.

    ವ್ಯರ್ಥ ಆಗ್ತಿರೋದು ಯಾಕೆ?
    ಕೊರೊನಾ ಲಸಿಕೆ ಪಡೆಯಲು ಜನ ಮುಂದೆ ಬರುತ್ತಿಲ್ಲ. ಕೆಲವರು ನೋಂದಣಿ ಮಾಡಿಸಿಕೊಂಡ್ರೂ ಸೂಚಿತ ವೇಳಗೆ ಆಸ್ಪತ್ರೆಗೆ ಬಂದಿಲ್ಲ. ಒಂದು ಲಸಿಕೆಯ ವಾಯಲ್ ನಲ್ಲಿ 10 ರಿಂದ 12 ಡೋಸ್ ಇರುತ್ತೆ. ನಿಶ್ಚಿತ ಸಮಯದಲ್ಲಿ (ಸಮಾರು 30 ನಿಮಿಷ) ಡೋಸ್ ನೀಡದಿದ್ರೆ ಅದು ವ್ಯರ್ಥವಾಗುತ್ತೆ. ಹೀಗಾಗಿ ಲಸಿಕೆ ವ್ಯರ್ಥವಾಗುತ್ತಿದೆ ಎಂದು ವರದಿಯಾಗಿದೆ.

    ಅಂಡಮಾನ್ ಮತ್ತು ನಿಕೋಬಾರ್, ದಮನ್ ದಿಯು, ಹಿಮಾಚಲ ಪ್ರದೇಶ, ಕೇರಳ, ಲಕ್ಷದ್ವೀಪ, ಮೀಜೋರಾಂ, ಪಶ್ಚಿಮ ಬಂಗಾಳದಲ್ಲಿ ಅತಿ ಕಡಿಮೆ ಲಸಿಕೆ ವ್ಯರ್ಥವಾಗಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಲಸಿಕೆ ವ್ಯರ್ಥವಾಗೋದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

    ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ಹೇಳಿದೆ. ಸದ್ಯ ಈಗ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಪಡೆದುಕೊಳ್ಳಲು ಅವಕಾಶವಿದೆ. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಯಮವನ್ನು ಸಡಿಲಿಕೆ ಮಾಡಿದೆ.

    ಜನವರಿ 16ರಿಂದ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ವಿತರಣಾ ಪ್ರಕ್ರಿಯೆ ಆರಂಭವಾಗಿದ್ದು, ಆರಂಭದಲ್ಲಿ ಆರೋಗ್ಯ ಸಿಬ್ಬಂದಿ ಬಳಿಕ ಮುಂಚೂಣಿಯಲ್ಲಿರುವ ಸರ್ಕಾರಿ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು. ಮಾರ್ಚ್ 1 ರಿಂದ ಹಿರಿಯ ನಾಗರಿಕರು ಹಾಗೂ 45 ವರ್ಷ ಮೇಲ್ಪಟ್ಟ 2ಕ್ಕೂ ಹೆಚ್ಚು ಖಾಯಿಲೆಯಿಂದ ನರಳುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ.

  • ಎಲ್ಲ ಇಲಾಖೆ ಅಧಿಕಾರಿಗಳು, ನೌಕರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ- ಚಾಮರಾಜನಗರ ಡಿಸಿ ಆದೇಶ

    ಎಲ್ಲ ಇಲಾಖೆ ಅಧಿಕಾರಿಗಳು, ನೌಕರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ- ಚಾಮರಾಜನಗರ ಡಿಸಿ ಆದೇಶ

    ಚಾಮರಾಜನಗರ: ಕೊರೊನಾ ಎರಡನೇ ಅಲೆ ದಿನೇ ದಿನೇ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ನೌಕರರು, ಹೊರಗುತ್ತಿಗೆ ನೌಕರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

    ಲಸಿಕೆ ಪಡೆಯುವಂತೆ ಜಿಲ್ಲೆಯ ಸರ್ಕಾರಿ ನೌಕರರಿಗೆ ಹಲವು ಬಾರಿ ನಿರ್ದೇಶನ ನೀಡಿದರೂ ಲಸಿಕೆ ಪಡೆದಿಲ್ಲ, ಹಿಂದೇಟು ಹಾಕುತ್ತಿದ್ದಾರೆ. ಕೊರೊನಾದಿಂದ ಪಾರಾಗಲು ಕೂಡಲೇ ಲಸಿಕೆ ಪಡೆಯುವುದು ಬಹುಮುಖ್ಯವಾಗಿದೆ ಹೀಗಾಗಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಈ ಕೂಡಲೇ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ನೌಕರರು ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರವಿ ಆದೇಶ ಹೊರಡಿಸಿದ್ದಾರೆ. ಕೊರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಇದೀಗ ಜಿಲ್ಲಾಧಿಕಾರಿಗಳು ನೌಕರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  • ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಅಭಾವ ಉಂಟಾಗದಂತೆ ಎಚ್ಚರಿಕೆ ವಹಿಸಿ : ಈಶ್ವರಪ್ಪ

    ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಅಭಾವ ಉಂಟಾಗದಂತೆ ಎಚ್ಚರಿಕೆ ವಹಿಸಿ : ಈಶ್ವರಪ್ಪ

    ಶಿವಮೊಗ್ಗ : ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇದೆ. ಜಿಲ್ಲೆಯಲ್ಲಿ ಇದೇ ರೀತಿ ಕೊರೊನಾ ನಿಯಂತ್ರಣದಲ್ಲಿ ಇಡಲು ಅಗತ್ಯ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕೊರೊನಾ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಈಶ್ವರಪ್ಪ, ಜಿಲ್ಲೆಯಲ್ಲಿ ಕೊರೊನ ನಿರೋಧಕ ಲಸಿಕೆ ಹಾಕಲು ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಲಸಿಕೆ ಖಾಲಿಯಾಗುತ್ತಿದೆ ಎನ್ನುವಾಗಲೇ ತರಿಸಿಕೊಳ್ಳಬೇಕು. ಜಿಲ್ಲೆಗೆ ಎರಡೂ ಹಂತ ಸೇರಿ 10 ಲಕ್ಷ ಡೋಸ್ ಲಸಿಕೆ ಬೇಕಾಗುತ್ತದೆ. ಅದರಲ್ಲಿ ಈವರೆಗೆ ಮೊದಲ ಹಂತದಲ್ಲಿ 1.70 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಎರಡನೇ ಹಂತದಲ್ಲಿ 18,000 ಡೋಸ್ ಲಸಿಕೆ ಹಾಕಲಾಗಿದೆ. ಇನ್ನೂ ಸುಮಾರು 8 ಲಕ್ಷ ಡೋಸ್ ಲಸಿಕೆ ಅಗತ್ಯವಿದೆ. ಅದಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

    ಯಾರೂ ಕೂಡ ಲಸಿಕೆ ಇಲ್ಲವೆಂದು ಮತ್ತೆ, ಮತ್ತೆ ಆಸ್ಪತ್ರೆಗಳಿಗೆ ತಿರುಗಾಡುವ ಸ್ಥಿತಿ ಬರಬಾರದು. ಒಂದೊಮ್ಮೆ ಲಸಿಕೆ ಪಡೆಯಲು ನಾಗರೀಕರು ಬಂದಾಗ ಖಾಲಿ ಆಗಿದ್ದರೆ ಮರುದಿನ ಮೊದಲನೇಯದಾಗಿಯೇ ಅಂತವರಿಗೆ ನೀಡಬೇಕು. ಲಸಿಕೆ ಯಾವಾಗ, ಯಾವ ಸಮಯಕ್ಕೆ ದೊರೆಯುತ್ತದೆ ಎಂಬ ಮಾಹಿತಿ ಕೂಡ ತಿಳಿಸಬೇಕು. ಲಸಿಕೆ ಕೊರತೆಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ 12 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 257 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೊರೊನಾ ತಗುಲಿದವರಿಗೂ ಉತ್ತಮ ಚಿಕಿತ್ಸೆ ನೀಡಲು ಮುಂಜಾಗ್ರತಾ ಕ್ರಮವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ.ಸಿಇಒ ಎಂ.ಎಲ್. ವೈಶಾಲಿ, ಡಿಎಚ್ ಒ ಡಾ.ರಾಜೇಶ್ ಸುರಗಿಹಳ್ಳಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

  • ಲಸಿಕೆ ಉತ್ಸವಕ್ಕೆ ಕರೆ ಕೊಟ್ಟ ವೇಳೆಯೇ ಕರ್ನಾಟಕದಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆ!

    ಲಸಿಕೆ ಉತ್ಸವಕ್ಕೆ ಕರೆ ಕೊಟ್ಟ ವೇಳೆಯೇ ಕರ್ನಾಟಕದಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆ!

    ಬೆಂಗಳೂರು: ಕೊರೊನಾ ಲಸಿಕೆ ಉತ್ಸವಕ್ಕೆ ಕರೆ ಕೊಟ್ಟ ವೇಳೆಯೇ ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಬೆಂಗಳೂರಿನನ ಹಲವು ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಕೊರತೆಯಾಗಿದ್ದು, ನಾಳೆ ಬನ್ನಿ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲ್ಪ ಪ್ರಮಾಣದ ಲಸಿಕೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ದೇಶದಲ್ಲಿ ಲಸಿಕೆಯ ಕೊರತೆ ಇಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೇಳುತ್ತಿವೆ.

    ವಿಜಯಪುರ ಜಿಲ್ಲೆ ಸದ್ಯ 980 ಡೋಸ್ ಲಸಿಕೆ ಲಭ್ಯವಿದ್ದು, ಇವತ್ತಿಗೂ ಕೂಡ ಸಾಕಾಗಲ್ಲ. ಜಿಲ್ಲೆಯ ಬಹುತೇಕ ಕಡೆ ನೋ ಸ್ಟಾಕ್ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇತ್ತ ಕಲಬುರಗಿಯಲ್ಲಿ 2,699 ಡೋಸ್ ಇದ್ದು, ಇಂದು ಖಾಲಿಯಾಗಲಿದೆ. ಕಲಬುರಗಿಯ ಕೆಲ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿಲ್ಲ. ಯಾದಗಿರಿಯಲ್ಲಿ 5 ಸಾವಿರ ಮತ್ತು ಹಾಸನದಲ್ಲಿ 8 ಸಾವಿರ ಲಸಿಕೆ ಇದೆ. ಆದ್ರೆ ಮತ್ತೆ ಲಸಿಕೆ ಯಾವಾಗ ಸಿಗುತ್ತೆ ಅನ್ನೋದರ ಬಗ್ಗೆ ಯಾರಿಗೂ ತಿಳಿದಿಲ್ಲ.

    ವ್ಯಾಕ್ಸಿನ್ ಜೊತೆಯಲ್ಲಿ ರೆಮ್‍ಡೆಸಿವರ್ ಗೂ ಕೊರತೆ ಸಹ ಉಂಟಾಗಿದೆ. 49 ಖಾಸಗಿ ಆಸ್ಪತ್ರೆಗಳಲ್ಲಿ 1,223 ಸೋಂಕಿತರಿಗೆ ರೆಮ್‍ಡೆಸಿವರ್ ಅಗತ್ಯತೆ ಇದೆ. 4,932 ರೆಮ್‍ಡೆಸಿವರ್ ಡೋಸ್ ಅಗತ್ಯವಿರುವ ಕಡೆ ಇರೋದು 535 ಡೋಸ್ ಇದೆ.

    ಕೋವಿಡ್ ಟ್ರೀಟ್ಮೆಂಟ್‍ನಲ್ಲಿ ರೆಮ್‍ಡೆಸಿವರ್ ಔಷಧ ತುಂಬಾ ಮುಖ್ಯ. ಮೊದಲ 3 ದಿನದಲ್ಲೇ ಈ ಔಷಧ ನೀಡಿದ್ರೆ ಸೋಂಕಿನಿಂದ ಬಚಾವ್ ಆಗಬಹುದು. ಶ್ವಾಸಕೋಶಕ್ಕೆ ಹಾನಿ ತಡೆಯಲು ರೆಮ್‍ಡೆಸಿವರ್ ಪ್ರಮುಖ ಔಷಧವಾಗಿದೆ. ಕೂಡಲೇ ರೆಮ್‍ಡೆಸಿವರ್ ಕೊರತೆ ನೀಗಿಸಬೇಕು. ಇಲ್ಲದಿದ್ರೆ ಭವಿಷ್ಯ ಭೀಕರ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಮೂರನೇ ಕೊರೊನಾ ಲಸಿಕೆ ಬಂತು – ರಷ್ಯಾದ ಸ್ಪುಟ್ನಿಕ್ -V ತುರ್ತು ಬಳಕೆಗೆ ಅನುಮತಿ

    ಮೂರನೇ ಕೊರೊನಾ ಲಸಿಕೆ ಬಂತು – ರಷ್ಯಾದ ಸ್ಪುಟ್ನಿಕ್ -V ತುರ್ತು ಬಳಕೆಗೆ ಅನುಮತಿ

    ನವದೆಹಲಿ: ಕೋವಿಶೀಲ್ಡ್, ಕೋವಾಕ್ಸಿನ್ ಬಳಿಕ ದೇಶದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ.

    ಇಂದು 1.60 ಲಕ್ಷ ಕೊರೊನಾ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಡಿಸಿಜಿಐ ಅನುಮತಿ ನೀಡಿದೆ. 2020ರ ಆಗಸ್ಟ್‌ನಲ್ಲಿ ರಷ್ಯಾ ಈ ಲಸಿಕೆಯನ್ನು ಬಿಡುಗಡೆ ಮಾಡಿತ್ತು. ಕೊರೊನಾ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಿಸಲು ತಜ್ಞರ ಸಮಿತಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸಿನ ಹಿನ್ನೆಲೆಯಲ್ಲಿ ಡಿಸಿಜಿಐ ಅನುಮತಿ ನೀಡಿದೆ.

    ಸ್ಪುಟ್ನಿಕ್ V ಲಸಿಕೆಯನ್ನು ಭಾರತದಲ್ಲಿ ಡಾ| ರೆಡ್ಡೀಸ್ ಕಂಪನಿ ಜನರ ಮೇಲೆ ಪ್ರಯೋಗ ನಡೆಸುತ್ತಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದ್‍ನ ಡಾ| ರೆಡ್ಡೀಸ್ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಕಂಪನಿಗಳಲ್ಲಿ ಈಗಾಗಲೇ ತಯಾರಿಸಲಾಗುತ್ತಿದೆ.

    ಭಾರತದಲ್ಲಿ ಸದ್ಯ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳಿಗಷ್ಟೇ ಅನುಮತಿಯಿದ್ದು, ಅವುಗಳನ್ನೇ ಜನರಿಗೆ ನೀಡಲಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಕೊರೋನಾ ಲಸಿಕೆಯ ಕೊರತೆ ಕಾಣಿಸಿಕೊಳ್ಳುತ್ತಿದೆ. ಈಗ ಈ ಲಸಿಕೆಗೆ ಒಪ್ಪಿಗೆ ಸಿಕ್ಕಿದರಿಂದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಕ್ಕಿದಂತಾಗಿದೆ. ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿರುವುದು ವಿಶೇಷ.

    ಮುಂದಿನ ದಿನಗಳಲ್ಲಿ ಜಾನ್ಸನ್ ಅಂಡ್ ಜಾನ್ಸನ್, ನೋವಾವಾಕ್ಸ್, ಜೈಡಸ್ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ. ಸುಮಾರು 20 ಬೇರೆ ಬೇರೆ ಕೊರೋನಾ ಲಸಿಕೆಗಳು ದೇಶದಲ್ಲಿ ಪ್ರಯೋಗದ ವಿವಿಧ ಹಂತದಲ್ಲಿವೆ.

    ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ.

    ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

  • ರಾಜ್ಯದಲ್ಲಿ ಕೋವಿಡ್ ಲಸಿಕಾ ಉತ್ಸವಕ್ಕೆ ಸಕಲ ಸಿದ್ಧತೆ: ಸುಧಾಕರ್

    ರಾಜ್ಯದಲ್ಲಿ ಕೋವಿಡ್ ಲಸಿಕಾ ಉತ್ಸವಕ್ಕೆ ಸಕಲ ಸಿದ್ಧತೆ: ಸುಧಾಕರ್

    ಚಿಕ್ಕಬಳ್ಳಾಪುರ: ಮಾನ್ಯ ಪ್ರಧಾನ ಮಂತ್ರಿಗಳ ಆಶಯದಂತೆ ಕೋವಿಡ್ 19 ಕಡಿವಾಣಕ್ಕೆ ರಾಜ್ಯದಲ್ಲಿ ನಾಳೆಯಿಂದ 4 ದಿನಗಳ ಕಾಲ ಕೋವಿಡ್ ಲಸಿಕಾ ಉತ್ಸವ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

    ನಗರ ಹೊರವಲಯದ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲಾಡಳಿತದೊಂದಿಗೆ ಕೋವಿಡ್ ಸಂಬಂಧ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಏಪ್ರಿಲ್ 11 ರಂದು ಜ್ಯೋತಿ ಬಾ ಪುಲೆ ಜನ್ಮ ದಿನ ಹಾಗೂ ಏಪ್ರಿಲ್ 14 ಬಾಬಾಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆಯವರೆಗೂ ರಾಜ್ಯದಲ್ಲಿ ಕೋವಿಡ್ ಲಸಿಕಾ ಉತ್ಸವ ಜರುಗಲಿದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲೂ ನಾಳೆ ಜ್ಯೋತಿ ಬಾ ಪುಲೆ ಜನ್ಮದಿನದ ಅಂಗವಾಗಿ ಮಹಿಳೆಯರು ಹಾಗೂ ಅಂಬೇಡ್ಕರ್ ಜಯಂತಿಯಂದು ಯುವಕರು, ವಿದ್ಯಾವಂತರು, ವಕೀಲರು ಸ್ವಯಂಪ್ರೇರಿತ ರಾಗಿ ಬಂದು ಲಸಿಕೆ ಪಡೆದುಕೊಳ್ಳಬೇಕು ಅಂತ ಮನವಿ ಮಾಡಿಕೊಂಡರು.

    ಇದೇ ವೇಳೆ ಇಂದಿನಿಂದ ರಾಜ್ಯದ 8 ನಗರಗಳಲ್ಲಿ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯಯವರೆಗೆ ಏಪ್ರಿಲ್ 20 ರವರೆಗೆ ರಾತ್ರಿ ಕೋವಿಡ್ ಕಫ್ರ್ಯೂ ಜಾರಿಯಾಗ್ತಿದೆ. ಅನಗತ್ಯವಾಗಿ ಮೋಜುಮಸ್ತಿ ಮಾಡುವವರಿಗೆ ಕಡಿವಾಣ ಹಾಕಿ ಕೊರೊನಾ ಕಂಟ್ರೋಲ್ ಮಾಡಿ ಜನ ಜಾಗೃತಿ ಮೂಡಿಸಲಿದ್ದೇವೆ. ಇನ್ನೂ ರಾಜ್ಯದಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಗೆ ಕೊರತೆ ಇಲ್ಲ. ಈಗಾಗಲೇ ರಾಜ್ಯದಲ್ಲೇ ಇರುವ ಮೈಲಾನ್, ಕ್ಯಾಡುಲಾಕ್, ಚ್ಯುಬಿಲಿಯೆಂಟ್ ಕಂಪನಿಗಳು ಆಡಳಿತ ಮಂಡಳಿ ಜೊತೆ ಸಭೆ ಮಾಡಿ ಮಾತನಾಡಿ ರಾಜ್ಯಕ್ಕೆ ಬೇಕಾಗುವಷ್ಟು ಔಷಧಿ ಸರಬರಾಜು ಮಾಡಬೇಕು ಅಂತ ಸೂಚನೆ ನೀಡಿದ್ದೇನೆ ಎಂದರು.

  • ಏಪ್ರಿಲ್ 11 ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ: ಪ್ರಧಾನಿ ಮೋದಿ ಕರೆ

    ಏಪ್ರಿಲ್ 11 ರಿಂದ 14ರವರೆಗೆ ದೇಶದಲ್ಲಿ ಲಸಿಕೆ ಉತ್ಸವ: ಪ್ರಧಾನಿ ಮೋದಿ ಕರೆ

    – ಸ್ಯಾಂಪಲ್ ಸಂಗ್ರಹ ವೇಳೆಯಲ್ಲಿನ ಎಡವಟ್ಟಿಗೆ ಬೇಸರ
    – ಲಸಿಕೆಯ ವ್ಯರ್ಥವನ್ನ ತಡೆಯೋಣ

    ನವದೆಹಲಿ: ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೆ ದೇಶದಾದ್ಯಂತ ಕೊರೊನಾ ಲಸಿಕೆ ಉತ್ಸವ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

    ರಾಜ್ಯದ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ವೇಸ್ಟೇಜ್ ಸಹ ನಿಯಂತ್ರಿಸಬೇಕಿದೆ. ಇದರ ಜೊತೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ. ಏಪ್ರಿಲ್ 11ರಂದು ಜ್ಯೋತಿಬಾಪುಲೆ ಅವರ ಜನ್ಮದಿನ. ಈ ದಿನದ ವಿಶೇಷವಾಗಿ ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ನಡೆಯಬೇಕು. ಈ ಸಮಯದಲ್ಲಿ ಅಗತ್ಯವಿರುವ ಜನರಿಗೆ ಲಸಿಕೆ ನೀಡುವ ಅಭಿಯಾನ ನಡೆಯಬೇಕಿದೆ. ಲಸಿಕೆ ನೀಡುವ ಕಾರ್ಯ ಚುರುಕುಗೊಳ್ಳಲಿದೆ. ಕಳೆದ ವರ್ಷವೂ ಒಂದು ಹಂತದವರೆಗೆ ಏರಿಕೆ ಕಂಡು ಇಳಿದಿದೆ. ಸದ್ಯ ಏರಿಕೆ ಪ್ರಮಾಣ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಟಫ್ ರೂಲ್ಸ್ ಅನಿವಾರ್ಯ: ಇನ್ಮುಂದೆ ನೈಟ್ ಕರ್ಫ್ಯೂ  ಪದದ ಬಳಕೆ ಬೇಡ. ಅದರಲ್ಲಿ ಬದಲಾಗಿ ಕೊರೊನಾ ಕರ್ಫ್ಯೂ  ಎಂದು ಹೇಳೋಣ. ಇದರಿಂದ ಕೊರೊನಾ ಜಾಗೃತಿ ಮೂಡುತ್ತದೆ. ಇಂದು ನಮ್ಮ ಬಳಿ ಕಳೆದ ವರ್ಷದ ಅನುಭವ ಇದೆ. ಹಾಗಾಗಿ ಕೊರೊನಾ ನಿಯಂತ್ರಣ ತರಲು ಸಾಧ್ಯವಿಲ್ಲ. ಮೈಕ್ರೋ ಕಂಟೈನ್‍ಮೆಂಟ್‍ಗಳಲ್ಲಿ ಟಫ್ ರೂಲ್ಸ್ ಅನಿವಾರ್ಯತೆ ಇದೆ.

    ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್: ಮೊದಲ ಅಲೆಯಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರ ಬಳಿ ಬರುತ್ತಿದ್ದರು. ಆದ್ರೆ ಈಗ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರ ಪರಿಣಾಮ ಕುಟುಂಬದ ಎಲ್ಲರಿಗೂ ಸೋಂಕು ತಗಲುಗ್ತಿದೆ. ಲಸಿಕೆ ಬಗ್ಗೆ ಮಾತನಾಡೋದಕ್ಕಿಂತ ಕೊರೊನಾ ಟೆಸ್ಟ್ ಹೆಚ್ಚಳ ಮಾಡುವ ಗುರಿ ಎಲ್ಲ ರಾಜ್ಯಗಳ ಮುಂದಿದೆ. ಕೊರೊನಾ ಪರೀಕ್ಷೆಯನ್ನ ಹಗುರುವಾಗಿ ಕಾಣಬೇಡಿ. ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್ ಕೊರೊನಾ ನಿಯಂತ್ರಣಕ್ಕೆ ನಮ್ಮ ಬಳಿಯಲ್ಲಿರುವ ಅಸ್ತ್ರ.

    ಕೊರೊನಾ ಪರೀಕ್ಷೆ ಹೆಚ್ಚಳವಾದ್ರೆ ಸಹಜವಾಗಿ ಏರಿಕೆ ಆಗುತ್ತೆ. ಸಂಖ್ಯೆ ಹೆಚ್ಚಳವಾದ್ರೆ ಮುಂದೆ ಏನು ಮಾಡಬೇಕು ಅನ್ನೋದು ನಮಗೆ ಗೊತ್ತಾಗಲಿದೆ. ಆ ರಾಜ್ಯ ಹೆಚ್ಚು, ಕಡಿಮೆ ಅನ್ನೋದರ ಬಗ್ಗೆ ಮಾತಾಡೋದು ಬೇಡ. ಮುಂದಿನ ನಾಲ್ಕು ವಾರ ದೇಶಕ್ಕೆ ಕಠಿಣವಾಗಿದೆ.

    ಕ್ರಮಬದ್ಧ ಕೊರೊನಾ ಪರೀಕ್ಷೆ: ಇನ್ನೂ ನಿಯಮಬದ್ಧವಾಗಿ ಟೆಸ್ಟಿಂಗ್ ನಡೆಯುತ್ತಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಕೊರೊನಾ ಟೆಸ್ಟ್ ಮಾಡೋವಾಗ ಸೂಜಿ ಗಂಟಲಿನ ಆಳದವರೆಗೂ ಹೋಗಬೇಕು. ಅಂದಾಗ ಮಾತ್ರ ನಿಖರ ಫಲಿತಾಂಶ ಬರಲಿದೆ. ಕಂಟೈನ್‍ಮೆಂಟ್ ಝೋನ್ ಗೆ ಒಳಪಡುವ ಎಲ್ಲರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರಲಿದೆ.

    ಪ್ರತಿ ವರದಿಯ ವಿಶ್ಲೇಷಣೆ ಅಗತ್ಯ: ಕೊರೊನಾ ಸೋಂಕಿತನಿಂದ ಸಾವನ್ನಪ್ಪಿದ ರೋಗಿಯ ಇಂಚಿಂಚೂ ಮಾಹಿತಿ ಕಲೆ ಹಾಕಬೇಕು. ಮೃತ ಸೋಂಕಿತನ ಹೆಲ್ತ್ ಹಿಸ್ಟರಿ ಪತ್ತೆ ಮಾಡಿದ್ರೆ ಮುಂದಾಗುವ ಸಾವುಗಳಿಗೆ ಬ್ರೇಕ್ ಆಗಬಹುದು. ಪ್ರತಿ ಸೋಂಕಿತನ ವರದಿಯ ವಿಶ್ಲೇಷಣೆ ಅಗತ್ಯ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.5ಕ್ಕಿಂತ ಕಡಿಮೆ ತರಬೇಕು. ಕೊರೊನಾ ಲಸಿಕೆ ವೇಗವನ್ನ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ಪಡೆದ ನಂತ್ರವೂ ಮಾಸ್ಕ್ ಕಡ್ಡಾಯ.

    ಕಳೆದ ವರ್ಷ ಲಸಿಕೆ ಇಲ್ಲದಿದ್ದರೂ ಕೊರೊನಾ ಗೆದ್ದಿದ್ದೇವೆ. ಈ ವರ್ಷ ಲಸಿಕೆಗಾಗಿ ದಾರಿ ನೋಡದೇ ಟೆಸ್ಟಿಂಗ್ ಹೆಚ್ಚಳವಾಗಬೇಕಿದೆ. ಕೊರೊನಾ ಲಸಿಕೆ ಹಂತವಾಗಿ ನಡೆಯಲಿದ್ದು, ಎಲ್ಲರಿಗೂ ಲಭ್ಯವಾಗಲಿದೆ. ಕೊರೊನಾ ವಿಷಯದಲ್ಲಿಯೂ ಕೆಲವರು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಔಷಧಿ ಪಡೆದು ಮಳೆಯಲ್ಲಿ ತಿರುಗಾಡಿದ್ರೆ ಜ್ವರ ಬಂದೇ ಬರುತ್ತೆ. ಮಳೆ ಬಂದಾಗ ಛತ್ರಿ ಇಟ್ಟುಕೊಳ್ಳಬೇಕು. ಹಾಗೆಯೇ ಲಸಿಕೆ ಪಡೆದ ನಂತ್ರವೂ ನಿಯಮಗಳ ಪಾಲಿಸೋದು ಅನಿವಾರ್ಯ ಎಂದು ಹೇಳಿದರು.

  • ನೋ ಸ್ಟಾಕ್ – 700 ಕೊರೊನಾ ಲಸಿಕಾ ಕೇಂದ್ರಗಳು ಬಂದ್!

    ನೋ ಸ್ಟಾಕ್ – 700 ಕೊರೊನಾ ಲಸಿಕಾ ಕೇಂದ್ರಗಳು ಬಂದ್!

    – ಕೊರೊನಾ ವ್ಯಾಕ್ಸಿನ್‍ಗಾಗಿ ಆಸ್ಪತ್ರೆಗೆ ಬಂದವರಿಗೆ ನಿರಾಸೆ

    ಭುವನೇಶ್ವರ: ಓಡಿಶಾದಲ್ಲಿ ಕೊರೊನಾ ಲಸಿಕೆಗೆ ಹಾಹಾಕಾರ ಉಂಟಾಗಿದ್ದು, ಶೀಘ್ರವೇ ವ್ಯಾಕ್ಸಿನ್ ಪೂರೈಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಕೊರೊನಾ ಲಸಿಕೆಯ ಕುರಿತು ವರದಿಗಳು ಪ್ರಕಟಗೊಂಡಿವೆ. ಸದ್ಯ ಓಡಿಶಾದಲ್ಲಿರುವ 1,00 ಕೇಂದ್ರಗಳ ಪೈಕಿ 700 ಲಸಿಕಾ ಸೆಂಟರ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ಓಡಿಶಾದ ಆರೋಗ್ಯ ಸಚಿವ ಕಿಶೋರ್ ದಾಸ್, ಕೊರೊನಾ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಲಸಿಕಾ ವಿತರಣೆ ಸ್ಥಗಿತಗೊಂಡಿದೆ. ಸದ್ಯ ನಮ್ಮಲ್ಲಿ ಎರಡು ದಿನಕ್ಕೆ ಆಗುವಷ್ಟು ಲಸಿಕೆ ಇದೆ. ಎರಡು ದಿನಗಳಲ್ಲಿ ಲಸಿಕೆ ಬರದಿದ್ರೆ ಇಡೀ ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್ ಅಭಿಯಾನ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸದ್ಯ ನಮ್ಮ ಬಳಿ 5.4 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಮುಂದಿನ ಎರಡು ದಿನ ನೋಂದಾಯಿತರಿಗೆ ಲಸಿಕೆ ನೀಡಲಾಗುವುದು. ಪ್ರತಿ ದಿನ ಎರಡೂವರೆ ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದು, ಸ್ಟಾಕ್ ಖಾಲಿ ಆಗುತ್ತಿದೆ. ತುರ್ತಾಗಿ 25 ಲಕ್ಷ ಡೋಸ್ ಲಸಿಕೆ ವಿತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಇದರಿಂದ ಮುಂದಿನ 10 ದಿನ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಕಿಶೋರ್ ದಾಸ್ ಮಾಹಿತಿ ನೀಡಿದ್ದಾರೆ.

    ಈ ಮೊದಲು 15 ಲಕ್ಷ ವ್ಯಾಕ್ಸಿನ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಆದ್ರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಓಡಿಶಾ ಸರ್ಕಾರ ಹೇಳಿದೆ.

    ಲಸಿಕೆ ಕೊರತೆ ಹಿನ್ನೆಲೆ ಮೊದಲಿಗೆ 400 ಕೇಂದ್ರಗಳನ್ನ ಮುಚ್ಚಲಾಗಿತ್ತು. ಇಂದು ಈ ಸಂಖ್ಯೆ 700ಕ್ಕೇರಿಕೆಯಾಗಿದೆ. ಬುಧವಾರ 2 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಲಸಿಕೆ ಲಭ್ಯವಿಲ್ಲದ ಹಿನ್ನೆಲೆ 1.10 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಿದ್ದೇವೆ ಎಂದು ಓಡಿಶಾದ ವ್ಯಾಕ್ಸಿನೇಶನ್ ಇನ್‍ಚಾರ್ಜ್ ಹೇಳಿದ್ದಾರೆ.

     

  • ಕೋವಿಡ್‍ನ 2ನೇ ಡೋಸ್ ಲಸಿಕೆ ಪಡೆದ ಪ್ರಧಾನಿ ಮೋದಿ

    ಕೋವಿಡ್‍ನ 2ನೇ ಡೋಸ್ ಲಸಿಕೆ ಪಡೆದ ಪ್ರಧಾನಿ ಮೋದಿ

    ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ತಡೆಗೆ ಲಸಿಕೆ ಹಾಕಿಸಿಕೊಳ್ಳಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

    2ನೇ ಡೋಸ್ ಲಸಿಕೆ ಹಾಕಿಸಿಕೊಂಡ ಪ್ರಧಾನಿ, ಯಾರೆಲ್ಲ ಲಸಿಕೆ ಪಡೆದುಕೊಳ್ಳಲಿ ಅವರೆಲ್ಲರೂ ಲಸಿಕೆ ಪಡೆದುಕೊಳ್ಳಿ ಎಂದು ಈ ಬಾರಿಯೂ ಕರೆ ನೀಡಿದ್ದಾರೆ.

    https://twitter.com/narendramodi/status/1379974475278557187

    ಈ ಸಂಬಂಧ ಟ್ವೀಟ್ ಮಾಡಿರುವ ಮೋದಿ, ಇಂದು ಏಮ್ಸ್ ಆಸ್ಪತ್ರೆಯಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದೇನೆ. ನಮ್ಮಲ್ಲಿರುವ ಕೆಲ ವಿಧಾನಗಳಲ್ಲಿ ಸದ್ಯ ಲಸಿಕೆ ಪಡೆದುಕೊಳ್ಳುವುದೇ ಕೊರೊನಾ ಬರದಂತೆ ತಡೆಗಟ್ಟಲು ಇರುವ ಮಾರ್ಗವಾಗಿದೆ. ಹೀಗಾಗಿ ಯಾರೆಲ್ಲ ಲಸಿಕೆ ಪಡೆದುಕೊಳ್ಳಲು ಅರ್ಹರಿದ್ದೀರೋ ಅವರೆಲ್ಲರೂ ಶೀಘ್ರವೇ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

    ಮೊದಲ ಡೋಸ್ ಅನ್ನು ಪ್ರಧಾನಿ ಮಾರ್ಚ್ 1 ರಂದು ಪಡೆದಿದ್ದರು. ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಮೋದಿ, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಲಸಿಕೆ ಪಡೆದಿದ್ದರು. ಈ ಸಂಬಂಧ ಟ್ವೀಟ್ ಮಾಡಿದ್ದ ಪ್ರಧಾನಿ, ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದರು.

    ತಾವು ಕೊರೊನಾ ವೈರಸ್ ಲಸಿಕೆ ತೆಗೆದುಕೊಂಡ ನಂತರ ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ಮೋದಿ ಮನವಿ ಮಾಡಿದ್ದರು. ಈ ಮೂಲಕ ಎಲ್ಲರೂ ಒಟ್ಟಾಗಿ ನಾವು ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸೋಣ ಎಂದು ಕರೆ ನೀಡಿದ್ದರು.