Tag: ಕೊರೊನಾ ಲಸಿಕೆ

  • ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆ

    ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆ

    – ರಷ್ಯಾ ತಯಾರಿಸಿರುವ ವಿಶ್ವದ ಮೊದಲ ಕೊರೊನಾ ಲಸಿಕೆ

    ಹೈದರಾಬಾದ್: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನವನ್ನು ವಿಸ್ತರಿಸಿದ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿತ್ತು. ಇದೆಲ್ಲದರ ಮಧ್ಯೆ ಇದೀಗ ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆಯು ರಷ್ಯಾದಿಂದ ಬಂದಿದ್ದು, ಹೈದರಾಬಾದ್‍ಗೆ ಆಗಮಿಸಿದೆ.

    ರಷ್ಯಾ ತಯಾರಿಸಿರುವ ಸ್ಪುಟ್ನಿಕ್ ವಿ ಮೊದಲ ಹಂತದ 1.50 ಲಕ್ಷ ಡೋಸ್ ಲಸಿಕೆ ಈಗ ಹೈದರಾಬಾದ್ ಗೆ ಆಗಮಿಸಿದೆ. ಇನ್ನೂ 30 ಲಕ್ಷ ಡೋಸ್ ಈ ತಿಂಗಳ ನಂತರ ಬರಲಿದೆ. ಈ ಲಸಿಕೆಯ ಡೋಸ್‍ಗಳನ್ನು ರಷ್ಯನ್ ವ್ಯಾಕ್ಸಿನ್ ಪಾರ್ಟರ್ ಆಗಿರುವ ಡಾ.ರೆಡ್ಡಿ ಲ್ಯಾಬರೋಟರಿಯಲ್ಲಿ ದಾಸ್ತಾನು ಮಾಡಲಾಗಿದೆ.

    ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬರೋಟರಿಯಿಂದ ಅನುಮತಿ ಪಡೆದ ಬಳಿಕ ಡಾ.ರೆಡ್ಡಿ ಲ್ಯಾಬರೋಟರಿ ಸ್ಪುಟ್ನಿಕ್ ವಿ ಲಸಿಕೆಯನ್ನು ವಿತರಿಸಲಿದೆ.

    ಈ ಕುರಿತು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲಾಯ್ ಕುಡಶೇವ್ ಅವರು ಟ್ವೀಟ್ ಮಾಡಿದ್ದು, ಕೋವಿಡ್ ಎದುರಿಸಲು ರಷ್ಯಾ ಮತ್ತು ಭಾರತ ಜಂಟಿ ಪ್ರಯತ್ನಗಳನ್ನು ಮುಂದುವರಿಸಿದ್ದು, ಮಾರಣಾಂತಿಕ ಎರಡನೇ ಅಲೆ ತಗ್ಗಿಸಲು ಹಾಗೂ ಜೀವ ಉಳಿಸಲು ಭಾರತ ಸರ್ಕಾರವನ್ನು ಬೆಂಬಲಿಸಲು ಈ ಕ್ರಮ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

    ಸ್ಥಳೀಯ ಉತ್ಪಾದನೆ ಸಹ ಶೀಘ್ರದಲ್ಲೇ ಆರಂಭವಾಗಲಿದೆ. ಬಳಿಕ ಪ್ರತಿ ವರ್ಷ 850 ಮಿಲಿಯನ್ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ ಎಂದು ತಿಳಿಸಿದ್ದಾರೆ. ಭಾರತ ಔಷಧ ನಿಯಂತ್ರಣ ಮಂಡಳಿಯು ಏಪ್ರಿಲ್ 12ರಂದು ಸ್ಪುಟ್ನಿಕ್ ವಿ ಗೆ ಅನುಮತಿ ನೀಡಿದೆ. ಈ ಲಸಿಕೆ ಶೇ.91.6ರಷ್ಟು ಎಫಿಕೇಸಿ ಹೊಂದಿದೆ. ಸ್ಪುಟ್ನಿಕ್ ವಿ ಕೊರೊನಾ ವಿರುದ್ಧ ಹೋರಾಟದಲ್ಲಿನ ವಿಶ್ವದ ಮೊದಲ ಲಸಿಕೆಯಾಗಿದೆ. ಇದರ ಕ್ಲಿನಿಕಲ್ ಟ್ರಯಲ್ ಡಾಟಾ ಸಹ ದಿ ಲ್ಯಾನ್ಸೆಟ್ ನಲ್ಲಿ ಪ್ರಕಟವಾಗಿದೆ. ಈ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಸ್ಪಷ್ಟಪಡಿಸಿದೆ.

  • ರಾಜ್ಯದಲ್ಲಿ ಕೊರೊನಾ ಲಸಿಕೆ ಡ್ರಾಮಾ – ಸರ್ಕಾರದಲ್ಲಿಯೇ ಗೊಂದಲ

    ರಾಜ್ಯದಲ್ಲಿ ಕೊರೊನಾ ಲಸಿಕೆ ಡ್ರಾಮಾ – ಸರ್ಕಾರದಲ್ಲಿಯೇ ಗೊಂದಲ

    – ಬಾರದ ಲಸಿಕೆಗೆ ಉದ್ಘಾಟನಾ ಕಾರ್ಯಕ್ರಮ

    ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಕರ್ನಾಟಕದ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ.. ಇದನ್ನು ಸರಿ ಮಾಡಿ ಜನರ ಪ್ರಾಣ ಉಳಿಸೋ ಬದಲು ನಮ್ಮನ್ನು ಆಳುತ್ತಿರುವ ಮಂತ್ರಿಗಳು ಪೋಸ್ ಕೊಟ್ಕೊಂಡು ಓಡಾಡ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಇವತ್ತಿನಿಂದ ವ್ಯಾಕ್ಸಿನೇಷನ್ ಆರಂಭ ಆಗಿತ್ತು. ಆದರೆ ವ್ಯಾಕ್ಸಿನ್ ಸ್ಟಾಕ್ ಬಾರದ ಕಾರಣ ಯಾರು ಆಸ್ಪತ್ರೆಗಳ ಕಡೆ ಮುಖ ಮಾಡಬೇಡಿ ಎಂದು ಎರಡದು ದಿನಗಳಿಂದ ಮುಖ್ಯಮಂತ್ರಿ ಹಿಡಿದು ಆರೋಗ್ಯ ಸಚಿವರಾದಿಯಾಗಿ ಜನರಿಗೆ ಮನವಿ ಮಾಡಿಕೊಂಡಿದ್ದರು.

    ಇವತ್ತು ಅದೇ ಮುಖ್ಯಮಂತ್ರಿಗಳು, ಮೂರನೇ ಹಂತದ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದ್ದಾರೆ. ಶಿವಾಜಿನಗರದ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ತರಾತುರಿಯಲ್ಲಿ ಲಸಿಕಾ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ 3 ಲಕ್ಷ ಲಸಿಕೆ ಕೊಟ್ಟಿದೆ. ನಮ್ಮತ್ರ 1 ಲಕ್ಷ ಲಸಿಕೆ ಇದೆ. ಇದನ್ನು ಈಗ ಕೊಡ್ತೀವಿ. ಇನ್ನೆರಡು ದಿನ ಕಾಯಿರಿ ನಿಮ್ಮ ಅನುಮಾನ ಎಲ್ಲಾ ಬಗೆಹರಿಯುತ್ತೆ. ಮೋದಿ ಸಹಕಾರ ನೀಡುತ್ತಿದ್ದಾರೆ ಅಂತಾ ಹೇಳಿದರು.

    ಸಚಿವ ಸುಧಾಕರ್ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಕೇಂದ್ರ ಕಳಿಸಿರೋ 3 ಲಕ್ಷ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ ಅದನ್ನು 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಬಳಸುತ್ತೇವೆ. ಸೀರಂ ಕಳಿಸಿಕೊಟ್ಟ ಮೇಲೆ ವ್ಯಾಕ್ಸಿನೇಷನ್ ಪ್ರಾರಂಭ ಮಾಡುತ್ತೇವೆ ಎಂದರು.

    ವ್ಯಾಕ್ಸಿನ್ ಇಲ್ಲದಿದ್ರೂ ಸುಖಾಸುಮ್ಮನೆ ಅಭಿಯಾನಕ್ಕೆ ಚಾಲನೆ ನೀಡಿದ ಸರ್ಕಾರದ ನಡೆ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಯಾರ ಹೇಳಿಕೆಯನ್ನು ನಂಬಬೇಕು? 45 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳಿಲ್ಲ. ಕೆಲವೆಡೆ ನೋ ಸ್ಟಾಕ್ ಅಂತಾ ಹಾಕಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಲಸಿಕೆ ರವಾನಿಸೋದನ್ನೇ ನಿಲ್ಲಿದೆ. ಇಂತಹ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ ಅಂತಾ ಜನ ಮಾತಾಡಿಕೊಳ್ತಿದ್ದಾರೆ. ಈ ಮಧ್ಯೆ, ಅಪೋಲೋ ಆಸ್ಪತ್ರೆಯಲ್ಲಿ ಇಂದಿನಿಂದ ವ್ಯಾಕ್ಸಿನೇಷನ್ ಆರಂಭವಾಗಿದೆ.

    ಇತ್ತ ವಿಪಕ್ಷ ನಾಯಕರು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಕೊರೊನಾ ಮಹಾಮಾರಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಯಾವುದೇ ತಯಾರಿ ಮಾಡ್ಕೊಂಡಿಲ್ಲ ಅಂತಾ ಸಿದ್ದರಾಮಯ್ಯ ಆರೋಪಿಸಿದ್ದಾರೆ. 1 ಕೊಟಿ ಲಸಿಕೆಗೆ ಆರ್ಡರ್ ಕೊಟ್ಟಿದ್ದೀವಿ ಅಂತಾರೆ. ಅದು ಈಗಲೇ ಬರೋ ತರಾ ಇಲ್ಲ. ಈ ತಿಂಗಳ ಕೊನೆಯಲ್ಲಿ ಸಿಗುತ್ತೆ ಅನ್ನೋದು ನನಗಿರುವ ಮಾಹಿತಿ ಎಂದು ತಿಳಿಸಿದ್ರು. ಮೋದಿಯವರು ಬೇರೆ ದೇಶಗಳಿಗೆ 6 ಕೋಟಿ ಲಸಿಕೆನಾ ಕಳಿಸಿಕೊಡದೇ ಇದ್ದಿದ್ರೆ ದೇಶಕ್ಕೆ ಇವತ್ತು ಇಂಥಾ ಪರಿಸ್ಥಿತಿ ಎದುರಾಗ್ತಾ ಇರಲಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಲಸಿಕೆಯನ್ನು ಮನೆ ಮನೆಗೆ ಪೋಲಿಯೋ ಮಾದರಿಯಲ್ಲಿ ಕೊಡಬೇಕು ಎಂದು ಆಗ್ರಹಿಸಿದರು.

  • 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ- ಮೇ ಮೂರನೇ ವಾರದವರಗೆ ವ್ಯಾಕ್ಸಿನ್ ಸಿಗಲ್ಲ: ಸಿಎಂ

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ- ಮೇ ಮೂರನೇ ವಾರದವರಗೆ ವ್ಯಾಕ್ಸಿನ್ ಸಿಗಲ್ಲ: ಸಿಎಂ

    ಬೆಂಗಳೂರು: ಲಸಿಕೆ ದಾಸ್ತಾನು ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಮೇ ಮೂರನೇ ವಾರದವರೆಗೆ ಲಸಿಕೆ ಸಿಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಸ್ಟಾಕ್ ಇಲ್ಲದಿದ್ದ ಮೇಲೆ ಕಾರ್ಯಕ್ರಮಕ್ಕೆ ಯಾಕೆ ಚಾಲನೆ ನೀಡಬೇಕಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ.

    ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಸಾಂಕೇತಿಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಈಗ ಚಾಲನೆ ನೀಡಲಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಮೇ ಮೂರನೇ ವಾರದ ತನಕ ಕಾಯಬೇಕು. ಈಗ ಸಾಂಕೇತಿಕ ಚಾಲನೆ ಮಾತ್ರ ಸಿಕ್ಕಿದೆ. ಕೇಂದ್ರದಿಂದ ಇಂದು ಕೇವಲ 3 ಲಕ್ಷ ಡೋಸ್ ಮಾತ್ರ ಬಂದಿದೆ ಎಂದರು.

    ಈಗಾಗಲೇ 96.36 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಲಭ್ಯತೆಯ ಆಧಾರದ ಮೇಲೆ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ. ಮೂರು ದಿನದಲ್ಲಿ ನಿಮ್ಮ ಅನುಮಾನಕ್ಕೆ ಉತ್ತರ ಸಿಗುತ್ತೆ, ಲಸಿಕೆ ಲಭ್ಯತೆ ಆಧಾರದ ಮೇಲೆ ಬರುತ್ತದೆ. ಈಗ ಇರುವ ಮೂರು ಪ್ಲಸ್ ಒಂದು ಲಕ್ಷ ಸೇರಿ ಒಟ್ಟು ನಾಲ್ಕು ಲಕ್ಷ ಡೋಸ್ ಲಸಿಕೆ ಖಾಲಿ ಆಗುವ ತನಕ 18 ವರ್ಷದ ಮೇಲ್ಪಟ್ಟವರಿಗೆ ನೀಡುತ್ತೇವೆ ಎಂದರು.

    ಹೊರ ದೇಶದಿಂದ ಲಸಿಕೆ ಬರುತ್ತಿದೆ, ಶೀಘ್ರವಾಗಿ ಎಲ್ಲವೂ ಸರಿ ಹೋಗಲಿದೆ. ಇನ್ನೆರಡು ದಿನದಲ್ಲಿ ಎಲ್ಲರ ಅನುಮಾನಕ್ಕೆ ತೆರೆ ಬೀಳಲಿದೆ. ಮೋದಿಯವರು ಸಹಕಾರ ನೀಡುತ್ತಿದ್ದಾರೆ. ಇಂದಿನಿಂದ ನಮ್ಮಲ್ಲಿ ಖಾಲಿಯಾಗೋವರೆಗೂ ಲಸಿಕೆ ನೀಡುತ್ತೇವೆ. ಕಾಳ ಸಂತಯಲ್ಲಿ ಔಷಧಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಮ್ಮ ಗಮನಕ್ಕೆ ತನ್ನಿ, ನಾವು ಕ್ರಮ ಕೈಗೊಳ್ಳುತ್ತೇವೆ. ಸಂಜೆ ಆಸ್ಪತ್ರೆ ಪ್ರಮುಖರ ಜೊತೆ ಸಹ ಸಭೆ ಇದೆ, ಚರ್ಚೆ ಮಾಡುತ್ತೇವ ಎಂದರು.

    ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ದಿನ, ಕೇಂದ್ರ ಸರ್ಕಾರದ ಸೂಚನೆಯಂತೆ ಇಂದಿನಿಂದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಕೇಂದ್ರದಿಂದ ಮೂರು ಲಕ್ಷ ಡೋಸ್ ಲಸಿಕೆ ಲಭ್ಯವಾಗಿದೆ, ನಮ್ಮ ಬಳಿ ಒಂದು ಲಕ್ಷ ಡೋಸ್ ಲಭ್ಯವಿದೆ. 4 ಲಕ್ಷ ಡೋಸ್ ಲಸಿಕೆಯನ್ನು ಸದ್ಯ ನೀಡಲಾಗುವುದು. ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಸಮಯೋಚಿತವಾಗಿದೆ. ಪ್ರಧಾನಿ ಮೋದಿಯವರಿಗೆ ಅಭಿನಂದನೆ, ಈ ತಿಂಗಳಲ್ಲಿ ಇನ್ನೊಂದು ಲಸಿಕೆ ಲಭ್ಯವಾಗಲಿದೆ ಎಂದರು.

    ಖಾಸಗಿ ಆಸ್ಪತ್ರೆಯಗಳಲ್ಲಿ ಲಸಿಕೆಗೆ ದರವನ್ನು ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ದರ ತೆಗೆದುಕೊಂಡರೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪಾಲಿಸಿ, ಜನರು ಸಹಕಾರ ನೀಡಿದರೆ ಕೋವಿಡ್ ನಿಯಂತ್ರಣ ಸಾಧ್ಯ. ಇದೇ ರೀತಿ ಸಹಕಾರ ನೀಡುವಂತೆ ಸಿಎಂ ಜನರಲ್ಲಿ ವಿನಂತಿಸಿದ್ದರೆ.

    ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು. 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಸಿಎಂ ಸಾಂಕೇತಿಕವಾಗಿ ಚಾಲನೆ ನೀಡಿದರು.

  • ಲಸಿಕೆಗೆ ಬಡವರು ಎಲ್ಲಿಂದ ಹಣ ತರಬೇಕು- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

    ಲಸಿಕೆಗೆ ಬಡವರು ಎಲ್ಲಿಂದ ಹಣ ತರಬೇಕು- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

    ನವದೆಹಲಿ: ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಕೊರೊನಾ ಲಸಿಕೆಗೆ ಹಣ ನೀಡಲು ಬಡವರಲ್ಲಿ ಶಕ್ತಿ ಇಲ್ಲ ಎಂದು ಹೇಳಿದೆ.

    ಶುಕ್ರವಾರ ದೇಶದಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೊರೊನಾ ಲಸಿಕೆಯ ದರ ಸಮಸ್ಯೆ ತುಂಬಾ ಗಂಭೀರವಾಗಿದೆ ಎಂದಿದ್ದಾರೆ. ಶೇ.50ರಷ್ಟು ವ್ಯಾಕ್ಸಿನ್‍ನನ್ನು ಕೇಂದ್ರ ಸರ್ಕಾರ ಖರೀದಿಸಿ ಫ್ರಂಟ್‍ಲೈನ್ ವರ್ಕರ್ಸ್ ಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ನೀಡಿಲಾಗುತ್ತಿದೆ. ಉಳಿದ ಶೇ.50ರಷ್ಟು ಲಸಿಕೆಯನ್ನು ರಾಜ್ಯ ಸರ್ಕಾರಗಳು ಖರೀದಿಸುತ್ತಿವೆ. ಆದರೆ ಸುಮಾರು 59.46 ಕೋಟಿ ಭಾರತೀಯರು 45 ವರ್ಷದ ಒಳಗಿನವರಿದ್ದಾರೆ, ಇದರಲ್ಲಿ ಬಹುತೇಕರು ಬಡವರಾಗಿದ್ದಾರೆ. ಲಸಿಕೆ ಖರೀದಿಸಲು ಅವರು ಎಲ್ಲಿಂದ ಹಣ ತರಬೇಕು ಎಂದು ಪ್ರಶ್ನಿಸಿದ್ದಾರೆ.

    ಖಾಸಗೀಕರಣದ ಮಾದರಿಯನ್ನು ನಾವು ಅನುಸರಿಸುವುದಿಲ್ಲ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ, ನಾವು 18-44 ವರ್ಷದವರಿಗೆ ಲಸಿಕೆಯನ್ನು ಆದಷ್ಟು ಬೇಗ ನೀಡಬೇಕಿದೆ ಎಂದು ಹೇಳಿದ್ದಾರೆ.

    ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ ಎಂಬುದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚುವರಿ ಉತ್ಪಾದನಾ ಕೇಂದ್ರಗಳಿಗೆ ಶಕ್ತಿ ತುಂಬಬೇಕಿದೆ. ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಬಗ್ಗೆ ವಿಮರ್ಶಿಸುವುದು ಇದರ ಉದ್ದೇಶವಲ್ಲ. 70-100 ವರ್ಷಗಳಿಂದ ಆರೋಗ್ಯ ಮೂಲಸೌಕರ್ಯವನ್ನು ಪಡೆದಿದ್ದೇವೆ. ನಮ್ಮ ರಾಷ್ಟ್ರದ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ನಮಗೆ ಕಾಳಜಿ ಇದೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದರು.

    ವ್ಯಾಕ್ಸಿನ್‍ನ ಖಾಸಗಿ ಉತ್ಪಾದಕರು ಸಹ ಯಾವ ರಾಜ್ಯಕ್ಕೆ ಎಷ್ಟು ನೀಡಬೇಕೆಂದು ನಿರ್ಧರಿಸುವಂತಿಲ್ಲ ಎಂದು ತಿಳಿಸಿದೆ. ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 10ಕ್ಕೆ ಮುಂದೂಡಿದೆ. ಕೊರೊನಾ ವ್ಯಾಕ್ಸಿನ್, ಆಕ್ಸಿಜನ್ ಟ್ರಾನ್ಸ್‍ಪೋರ್ಟ್, ವ್ಯಾಕ್ಸಿನ್ ದರ ಹಾಗೂ ಔಷಧಿ ಮತ್ತು ಲಸಿಕೆಗೆ ಕಡ್ಡಾಯವಾಗಿ ಲೈಸೆನ್ಸ್ ನೀಡುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಈ ಬಗ್ಗೆ ವಿವರವಾದ ಆದೇಶ ಹೊರಡಿಸುವಂತೆ ಸೂಚಿಸಿದೆ.

  • 18 ರಿಂದ 45 ವರ್ಷದೊಳಗಿನವರಿಗಾಗಿ ಹಂತ ಹಂತವಾಗಿ ಲಸಿಕೆ: ಬಿಎಸ್‍ವೈ

    18 ರಿಂದ 45 ವರ್ಷದೊಳಗಿನವರಿಗಾಗಿ ಹಂತ ಹಂತವಾಗಿ ಲಸಿಕೆ: ಬಿಎಸ್‍ವೈ

    ಬೆಂಗಳೂರು: 18 ರಿಂದ 45 ವರ್ಷದೊಳಗಿನವರಿಗಾಗಿ ಹಂತ ಹಂತವಾಗಿ ಲಸಿಕೆ ನೀಡಲಾಗುವುದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

    ಇಡೀ ದೇಶವೇ ಇಂದು ಕೋವಿಡ್ 19ರ ಸೋಂಕಿನ ಸವಾಲನ್ನು ಎದುರಿಸುತ್ತಿದೆ. ಸರ್ಕಾರ ಹಾಗೂ ಸಮಾಜ ಜೊತೆಯಾಗಿ ಈ ಸೋಂಕಿನ ವಿರುದ್ಧ ಹೋರಾಡುತ್ತಿವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಹೇಳಿಕೆಯಲ್ಲಿ ಏನಿದೆ?
    ಭಾರತದಂತಹ ಅತಿ ಜನ ಸಾಂದ್ರತೆಯ ವಿಶಾಲವಾದ ದೇಶದಲ್ಲಿ ಕೋವಿಡ್ ನಂತಹ ಸೋಂಕು ಹರಡುವುದು ಅತಿ ಸಹಜ. ಆದರೂ ನಾವು ಮೊದಲ ಅಲೆಯನ್ನು ಕನಿಷ್ಠ ನಷ್ಟದೊಂದಿಗೆ ಮೆಟ್ಟಿ ನಿಂತಿದ್ದೇವೆ. ಆದರೆ ಎರಡನೇ ಅಲೆ ನಮ್ಮ ಸಾಮರ್ಥ್ಯದ  ಎಲ್ಲೆಯನ್ನು ಪರೀಕ್ಷಿಸುತ್ತಿದೆ.

    ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ, ವೈದ್ಯಕೀಯ ಉಪಕರಣಗಳ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ನಡೆದರೂ, ಅದನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ.

    ಕೋವಿಡ್ ಸಂಕಷ್ಟದಿಂದ ಪಾರಾಗಲು ದೊರೆತಿರುವ ಪ್ರಮುಖ ಅಸ್ತ್ರ ಲಸಿಕೆ. ವಿಜ್ಞಾನಿಗಳು ಹಾಗೂ ಔಷಧ ಕಂಪೆನಿಗಳ ಪರಿಶ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಿ ನೇತೃತ್ವದ ಭಾರತ ಸರ್ಕಾರದ ಬೆಂಬಲದೊಂದಿಗೆ ಭಾರತವು ಸ್ವದೇಶೀ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿ.

    ಈ ವರೆಗೆ ಲಸಿಕೆ ಅಭಿಯಾನ ಮೂರು ಹಂತಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಎರಡನೇ ಹಂತದಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ಯೋಧರು ಹಾಗೂ ಮೂರನೇ ಹಂತದಲ್ಲಿ 45 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

    ರಾಜ್ಯದಲ್ಲಿ ಈ ಮೂರು ಹಂತಗಳಲ್ಲಿ ಈ ವರೆಗೆ ಕೇಂದ್ರದಿಂದ 99.40 ಲಕ್ಷ ಲಸಿಕೆಯ ಡೋಸ್ ಗಳು ಲಭ್ಯವಾಗಿದ್ದು, 93.5 ಲಕ್ಷ ಡೋಸ್ ಲಸಿಕೆ ಹಾಕಲಾಗಿದೆ. ಇನ್ನೂ ಅಂದಾಜು 5.9 ಲಕ್ಷ ಡೋಸ್ ಗಳು ಲಭ್ಯವಿದೆ.

    ಲಸಿಕೆ ಅಭಿಯಾನ ಯಾವುದೇ ಅಡೆತಡೆಗಳಿಲ್ಲದೆ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕಾಗಿ ಎಲ್ಲ ಆಸ್ಪತ್ರೆಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಲಸಿಕೆ ಪಡೆದುಕೊಂಡವರು ಎಲ್ಲರೂ ಅಭಿನಂದನಾರ್ಹರು.

    ನಾಲ್ಕನೇ ಹಂತದಲ್ಲಿ ಇದೀಗ ದೇಶದ ಜನಸಂಖ್ಯೆಯ ಅತಿದೊಡ್ಡ ಸಮೂಹದ ಲಸಿಕೆ ಕಾರ್ಯಕ್ರಮದ ಸಮಯ ಸನ್ನಿಹಿತವಾಗಿದೆ. ಕೇಂದ್ರ ಸರ್ಕಾರವು ಹಲವು ರಾಜ್ಯಗಳ ಮನವಿಯಂತೆ ಲಸಿಕೆ ಖರೀದಿ ಹಾಗೂ ಅನುಷ್ಠಾನವನ್ನು ರಾಜ್ಯಗಳ ವಿವೇಚನೆಗೆ ಮುಕ್ತಗೊಳಿಸಿದೆ.

    ರಾಜ್ಯ ಸರ್ಕಾರವು 1 ಕೋಟಿ ಡೋಸ್ ಗಳಷ್ಟು ಲಸಿಕೆ ಖರೀದಿಗೆ ಮುಂದಾಗಿದೆ. ಹೆಚ್ಚುವರಿಯಾಗಿ ಮತ್ತೂ ಒಂದು ಕೋಟಿ ಲಸಿಕೆ ಖರೀದಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ನಾಲ್ಕನೇ ಹಂತದ ಲಸಿಕಾ ಅಭಿಯಾನವನ್ನು ಹಂತ ಹಂತವಾಗಿ ನಡೆಸಲಾಗುವುದು. ಔಷಧ ಕಂಪೆನಿಗಳು ಹೆಚ್ಚಿರುವ ಈ ಬೇಡಿಕೆಗೆ ತಕ್ಕಂತೆ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ.

    ಮೂರನೇ ಲಸಿಕೆಯೂ ಶೀಘ್ರವೇ ಲಭ್ಯವಾಗಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲಭ್ಯತೆಯ ಆಧಾರದಲ್ಲಿ ಲಸಿಕಾ ಅಭಿಯಾನ ಮುಂದುವರೆಯಲಿದೆ. ಈ ಅಭಿಯಾನವು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಹಾಗೂ ಸುಗಮವಾಗಿ ನಡೆಯುವುದನ್ನು ಖಾತರಿ ಪಡಿಸುವ ಗುರಿಯೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಆ ಮೂಲಕ ಕೋವಿಡ್ ವಿರುದ್ಧದ ಸಮರದಲ್ಲಿ ನಾವು ಮೇಲುಗೈ ಸಾಧಿಸುವ ವಿಶ್ವಾಸ ನನಗಿದೆ.

  • ಸಾಗರದಲ್ಲಿ ವ್ಯಾಕ್ಸಿನ್ ಕೊರತೆ- ವೈದ್ಯಕೀಯ ಸಿಬ್ಬಂದಿಗೆ ಸಾರ್ವಜನಿಕರಿಂದ ತರಾಟೆ

    ಸಾಗರದಲ್ಲಿ ವ್ಯಾಕ್ಸಿನ್ ಕೊರತೆ- ವೈದ್ಯಕೀಯ ಸಿಬ್ಬಂದಿಗೆ ಸಾರ್ವಜನಿಕರಿಂದ ತರಾಟೆ

    ಶಿವಮೊಗ್ಗ: ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳುತ್ತಲೇ ಇವೆ. ಆದರೆ ಪೂರೈಕೆ ಸರಿಯಾಗಿ ಆಗದೆ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. ಹೀಗಾಗಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲೆಯ ಸಾಗರ ಪಟ್ಟಣದ ದೇವರಾಜು ಅರಸು ಭವನದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ಕೋವಿಡ್ ಲಸಿಕೆ ದಾಸ್ತಾನು ಖಾಲಿಯಾಗಿದೆ. ರಾಜ್ಯಮಟ್ಟದಿಂದ ಲಸಿಕೆ ಪೂರೈಕೆಯಾದ ನಂತರ ಲಸಿಕೆ ನೀಡಲಾಗುವುದು ಎಂದು ವ್ಯಾಕ್ಸಿನ್ ಕೇಂದ್ರದಲ್ಲಿ, ಆರೋಗ್ಯ ಸಿಬ್ಬಂದಿ ಫಲಕ ಹಾಕಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಿಗೆ ರೈತರ ಮತ ಮಾತ್ರ ಬೇಕು, ವ್ಯಾಕ್ಸಿನ್ ನೀಡಲು ಆಗುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಲಸಿಕೆ ಪಡೆಯಲು ಸಾರ್ವಜನಿಕರು ಮುಂಜಾನೆಯಿಂದ ಸಾಲಿನಲ್ಲಿ ನಿಂತಿದ್ದು, ಮಧ್ಯಾಹ್ನವಾದರೂ ಲಸಿಕೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಲಸಿಕೆ ಪಡೆಯಲು ಸಾಧ್ಯವಾಗದ್ದರಿಂದ ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ, ನೌಕರರ ಸಂಘದ ಮುಖಂಡರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಮೇಲೆ ಕೂತು ಲಸಿಕೆ ಬಗ್ಗೆ ಜಾಹಿರಾತು ನೀಡುತ್ತೀರಿ. ಆದರೆ ಸರಿಯಾದ ಪ್ರಮಾಣದಲ್ಲಿ ನಮಗೆ ಲಸಿಕೆ ಕಳುಹಿಸುವುದಿಲ್ಲ. ಅಗತ್ಯ ಪ್ರಮಾಣದಲ್ಲಿ ನಮಗೆ ಕಳುಹಿಸಿದರೆ ನಾವು ಯಾಕೆ ಕೊಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಲಸಿಕೆ ದಾಸ್ತಾನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಸಾರ್ವಜನಿಕರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯವೂ ಜಗಳವಾಡಬೇಕಾಗುತ್ತದೆ. ಕೂಡಲೇ ಲಸಿಕೆ ಪೂರೈಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

  • ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ – ಕೋವಿನ್ ಆಪ್‍ನಲ್ಲಿ ನೋಂದಣಿ ಹೇಗೆ?

    ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ – ಕೋವಿನ್ ಆಪ್‍ನಲ್ಲಿ ನೋಂದಣಿ ಹೇಗೆ?

    ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಚಿಸುವವರು ನಾಳೆ ಸಂಜೆ 4 ಗಂಟೆಯಿಂದ ಕೋವಿನ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

    ಮೊದಲಿಗೆ www.cowin.gov.in ವೆಬ್‍ಸೈಟ್ ಗೆ  ಹೋಗಿ ನಿಮ್ಮ ಮೊಬೈಲ್ ನಂಬರ್ ನಮೂದು ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್‍ಗೆ ವನ್ ಟೈಮ್ ಪಾಸ್‍ವರ್ಡ್ ಬಂದ ಕೂಡಲೇ ಅದನ್ನು ಕೋವಿನ್ ವೆಬ್‍ಸೈಟ್‍ನಲ್ಲಿ ಇರುವ ಓಟಿಪಿ ಬಾಕ್ಸ್ ಗೆ ತುಂಬಬೇಕು. ನಂತರ ನೋಂದಣಿ ಪೇಜ್ ಓಪನ್ ಆಗಲಿದೆ. ಅದರಲ್ಲಿ ನಿಮ್ಮ ಮಾಹಿತಿ ಮತ್ತು ಫೋಟೋ ಐಡಿ ನೀಡಬೇಕಾಗುತ್ತದೆ.

    ನಿಮಗೆ ಶುಗರ್, ಬಿಪಿ ಹಾಗೂ ಇನ್ನಿತರೆ ಕಾಯಿಲೆ ಇದ್ದರೆ ಅದರ ಮಾಹಿತಿಯನ್ನು ಅಲ್ಲಿ ನಮೂದಿಸಬೇಕಾಗುತ್ತದೆ. ಎಲ್ಲವನ್ನು ತುಂಬಿದ ಬಳಿಕ ರಿಜಿಸ್ಟ್ರೇಷನ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ ಅಕೌಂಟ್ ವಿವರಗಳು ಸ್ಕ್ರೀನ್ ಮೇಲೆ ಕಾಣುತ್ತದೆ. ನಿಗದಿಯಾದ ದಿನದಂದು ಲಸಿಕೆ ಪಡೆಯಬೇಕಾಗುತ್ತದೆ.

    ಕರ್ನಾಟಕ ಸೇರಿ ಹಲವು ರಾಜ್ಯಗಳು ಈಗಾಗಲೇ ವ್ಯಾಕ್ಸಿನ್ ಖರೀದಿ ಮಾಡಿವೆ. ನಾಳೆ ಅಥವಾ ನಾಡಿದ್ದರಲ್ಲಿ ರಾಜ್ಯಕ್ಕೆ ಒಂದು ಕೋಟಿ ಲಸಿಕೆ ಬರಲಿದ್ದು, ರಾಜ್ಯದಲ್ಲಿ ನಿಗದಿಯಂತೆ ಮೇ 1ರಿಂದಲೇ ವ್ಯಾಕ್ಸಿನೇಷನ್ ಶುರುವಾಗಲಿದೆ. ಆದರೆ ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ ತಿಂಗಳಲ್ಲಿ ಲಸಿಕೆ ಸಿಗುವುದು ಅನುಮಾನ. ಈ ಮಧ್ಯೆ, ಮೇ 1ಕ್ಕೆ ರಷ್ಯಾದ ಸ್ಪುಟ್ನಿಕ್ V ಲಸಿಕೆ ಭಾರತ ತಲುಪುವುದು ಬಹುತೇಕ ಪಕ್ಕಾ ಆಗಿದೆ. ಲಸಿಕೆಗಳನ್ನು ಮೊದಲ ಹಡಗು ಭಾರತ ತಲುಪಲಿದೆ. ಆದರೆ ಅವುಗಳ ಸಂಖ್ಯೆ ಎಷ್ಟು ಎನ್ನುವುದು ತಿಳಿದುಬಂದಿಲ್ಲ.

  • ಒತ್ತಡದ ಬಳಿಕ ನಿಷೇಧ ತೆರವು – ಅಮೆರಿಕದಿಂದ ಭಾರತಕ್ಕೆ ಲಸಿಕೆಗೆ ಬೇಕಾದ ಕಚ್ಚಾ ವಸ್ತು ರಫ್ತು

    ಒತ್ತಡದ ಬಳಿಕ ನಿಷೇಧ ತೆರವು – ಅಮೆರಿಕದಿಂದ ಭಾರತಕ್ಕೆ ಲಸಿಕೆಗೆ ಬೇಕಾದ ಕಚ್ಚಾ ವಸ್ತು ರಫ್ತು

    ವಾಷ್ಟಿಂಗ್ಟನ್: ಕೊರೊನಾ ಆರ್ಭಟದ ಮಧ್ಯೆ ಭಾರತಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳ ರಫ್ತಿಗೆ ಅಮೆರಿಕ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಇದರಿಂದಾಗಿ ಲಸಿಕೆ ತಯಾರಿಕೆ ಚುರುಕುಗೊಳ್ಳಲಿದ್ದು, ಹೆಚ್ಚು ಉತ್ಪಾದಿಸಲು ಸಹಾಯವಾಗಲಿದೆ.

    ಕೋವಿಶೀಲ್ಡ್ ಕೊರೊನಾ ಲಸಿಕೆ ಉತ್ಪಾದಿಸಲು ಪುಣೆ ಮೂಲದ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಗೆ ತುರ್ತಾಗಿ ನಿರ್ದಿಷ್ಟ ಕಚ್ಚಾ ವಸ್ತುಗಳ ಅಗತ್ಯವಿರುವುದನ್ನು ಭಾನುವಾರ ಅಮೆರಿಕ ಮನಗಂಡಿದೆ. ಹೀಗಾಗಿ ಈ ಕಚ್ಚಾ ವಸ್ತುಗಳು ತಕ್ಷಣವೇ ಭಾರತಕ್ಕೆ ಲಭ್ಯವಾಗಲಿದೆ ಎಂದು ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

    ಈ ನಿಟ್ಟಿನಲ್ಲಿ ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿ(ಎನ್‍ಎಸ್‍ಸಿ) ವಕ್ತಾರ ಎಮಿಲಿ ಹಾರ್ನ್ ಅವರು ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಅಮೇರಿಕನ್ ಕೌಂಟರ್ ಜೇಕ್ ಸುಲ್ಲಿವಾನ್ ನಡುವಿನ ದೂರವಾಣಿ ಕರೆಯ ಬಗ್ಗೆ ಕೇಳಿದಾಗ ಹಾರ್ನ್ ಈ ಕುರಿತು ದೃಢಪಡಿಸಿದ್ದಾರೆ.

    ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಗೂ ಭಾರತದಲ್ಲಿನ ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು ಥೀರಾಪಿಯಾಟಿಕ್ಸ್, ರ್ಯಾಪಿಡ್ ಡೈಯಾಗ್ನಸ್ಟಿಕ್ ಟೆಸ್ಟ್ ಕಿಟ್ಸ್, ವೆಂಟಿಲೇಟರ್ ಗಳು ಹಾಗೂ ಪಿಪಿಇ ಕಿಟ್‍ಗಳನ್ನು ತಕ್ಷಣವೇ ಭಾರತಕ್ಕೆ ಸಿಗುವಂತೆ ಮಾಡಲಾಗುವುದು ಎಂದು ಎಮಿಲಿ ಹಾರ್ನ್ ತಿಳಿಸಿದ್ದಾರೆ.

    ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಬೈಡೆನ್ ನಿಷೇಧ ಹೇರಿದ್ದರು. ಇದರಿಂದಾಗಿ ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆ ಮಾಡುವ ಸೀರಂ ಮತ್ತು ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಕಂಪನಿಗೆ ಸಮಸ್ಯೆಯಾಗಿತ್ತು. ಈ ಕುರಿತು ಸೀರಂ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದರು.

    ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಅಮೆರಿಕ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಟ್ರಂಪ್ ಮನವಿಯ ಸಂದರ್ಭದಲ್ಲಿ ಭಾರತ ಕೂಡಲೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಿತ್ತು. ಈ ಸಂದರ್ಭದಲ್ಲಿ ಈ ಸಹಾಯವನ್ನು ನಾವು ಸ್ಮರಿಸಕೊಳ್ಳಬೇಕು ಎಂದು ಹೇಳಿ ಅಮೆರಿಕದ ಜನತೆಯೇ ಬೈಡನ್ ಸರ್ಕಾರದ ನಡೆಯನ್ನು ಟೀಕಿಸಿದ್ದರು.

    ಇದೆಲ್ಲದರ ಮಧ್ಯೆ “ಅಮೆರಿಕನ್ನರ ಆರೋಗ್ಯ ರಕ್ಷಣೆಯೇ ಬೈಡೆನ್ ಸರ್ಕಾರದ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಕೊರೊನಾ ಲಸಿಕೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿದ್ದ ನಿಷೇಧ ಕ್ರಮವನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿತ್ತು.

    ವಿದೇಶಗಳ ಲಾಬಿ ಏನು?
    ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಭಾರತದ ಕೊರೊನಾ ಲಸಿಕೆಗೆಳು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ತಯಾರಾಗಿದ್ದ ಕಾರಣ ಬೇಡಿಕೆಯೂ ಹೆಚ್ಚಿತ್ತು. ಕೊರೊನಾ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಬೇಕು ಎಂದು ಭಾರತ ವಾದಿಸಿತ್ತು. ಆದರೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೆ ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದವು.

    ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 80ಕ್ಕೂ ಅಧಿಕ ಬಡ ರಾಷ್ಟ್ರಗಳಿಗೆ ರಫ್ತು ಆಗತೊಡಗಿದಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೈಡನ್ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೆ ನಿರ್ಬಂಧ ಹೇರಿದ್ದರು. ಈ ನಡುವೆ ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಬ್ಬರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಪರಿಣಾಮ ಭಾರತದಲ್ಲಿ ಅಮೆರಿಕ ಸೇರಿದಂತೆ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಮೇಲೆ ಒತ್ತಡ ಹಾಕಿಸಿ ಲಸಿಕೆಗೆ ಅನುಮತಿ ನೀಡುವಲ್ಲಿ ವಿದೇಶಿ ಕಂಪನಿಗಳ ಲಾಬಿ ಕೊನೆಗೂ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

  • ಭಾರತಕ್ಕೆ ಲಸಿಕೆ ಕಚ್ಚಾ ವಸ್ತುಗಳ ರಫ್ತಿಗೆ ನಿಷೇಧ – ನಮಗೆ ಅಮೆರಿಕವೇ ಫಸ್ಟ್, ಬೈಡನ್ ಸರ್ಕಾರದ ಸಮರ್ಥನೆ

    ಭಾರತಕ್ಕೆ ಲಸಿಕೆ ಕಚ್ಚಾ ವಸ್ತುಗಳ ರಫ್ತಿಗೆ ನಿಷೇಧ – ನಮಗೆ ಅಮೆರಿಕವೇ ಫಸ್ಟ್, ಬೈಡನ್ ಸರ್ಕಾರದ ಸಮರ್ಥನೆ

    ನವದೆಹಲಿ:“ಅಮೆರಿಕನ್ನರ ಆರೋಗ್ಯ ರಕ್ಷಣೆಯೇ ಬೈಡೆನ್ ಸರಕಾರದ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಕೊರೊನಾ ಲಸಿಕೆ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿರುವ ನಿಷೇಧ ಕ್ರಮವನ್ನು ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿದೆ.

    ಲಸಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿದೆ. ಇದರಿಂದಾಗಿ ಲಸಿಕೆ ಉತ್ಪಾದನೆಗೆ ಸಮಸ್ಯೆಯಾಗಿದೆ. ಈ ಕೂಡಲೇ ಭಾರತ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಸೀರಂ ಇನ್‍ಸ್ಟಿಟ್ಯೂಟ್ ಮುಖ್ಯಸ್ಥ ಆಧಾರ್ ಪೂನಾವಾಲಾ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಭಾರತ ಅಮೆರಿಕ ಸರ್ಕಾರಕ್ಕೆ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸಲು ಮನವಿ ಮಾಡಿತ್ತು.

    ಭಾರತದ ಮನವಿಗೆ ಅಮೆರಿಕದಿಂದ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ವಿದೇಶಾಂಗ ಸಚಿವ ಜೈಶಂಕರ್ ಅವರು ಮಾತುಕತೆ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ.

    ಈ ಬಗ್ಗೆ ಮಾಧ್ಯಮಗಳು ಅಮೆರಿಕ ಸರ್ಕಾರದ ವಕ್ತಾರರ ಜೊತೆ ಪ್ರಶ್ನೆ ಕೇಳಿದ್ದಕ್ಕೆ, ಜಗತ್ತಿನ ಯಾವುದೇ ದೇಶಕ್ಕಿಂತ ಅತಿ ಹೆಚ್ಚು ಕೋವಿಡ್ 19 ಸೋಂಕಿಗೆ ಅಮೆರಿಕ ಜನತೆ ತುತ್ತಾಗಿದ್ದು, ಇಲ್ಲಿಯವರೆಗೆ 5.5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಬೈಡನ್ ಸರ್ಕಾರ ಅಮೆರಿಕ ಪ್ರಜೆಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಅಮೆರಿಕದ ಕಂಪನಿಗಳು ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಬೈಡೆನ್ ನಿಷೇಧ ಹೇರಿದ್ದಾರೆ. ಇದರಿಂದಾಗಿ ಭಾರತದಲ್ಲಿ ಕೋವಿಶೀಲ್ಡ್ ಉತ್ಪಾದನೆ ಮಾಡುವ ಸೀರಂ ಮತ್ತು ಕೊವ್ಯಾಕ್ಸಿನ್ ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಕಂಪನಿಗೆ ಸಮಸ್ಯೆಯಾಗಿದೆ.

    ವಿದೇಶಗಳ ಲಾಬಿ ಏನು?
    ವಿಶ್ವದ 60 ಪ್ರತಿಶತ ಲಸಿಕೆಗಳು ಭಾರತದಲ್ಲಿ ತಯಾರಾಗಿ ರಫ್ತು ಆಗುತ್ತಿದ್ದವು. ಭಾರತದ ಕೊರೊನಾ ಲಸಿಕೆಗೆಳು ವಿಶ್ವದಲ್ಲೇ ಕಡಿಮೆ ಬೆಲೆಯಲ್ಲಿ ತಯಾರಾಗಿದ್ದ ಕಾರಣ ಬೇಡಿಕೆಯೂ ಹೆಚ್ಚಿತ್ತು. ಕೊರೊನಾ ಲಸಿಕೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಟ್ಟು ಕಡಿಮೆ ಬೆಲೆಯಲ್ಲಿ ಜನರಿಗೆ ನೀಡಬೇಕು ಎಂದು ಭಾರತ ವಾದಿಸಿತ್ತು. ಆದರೆ ಅಮೆರಿಕ ಮತ್ತು ಯುರೋಪ್ ದೇಶಗಳು ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೆ ಸಂಶೋಧನೆ, ಉತ್ಪಾದನೆಗೆ ಬಂಡವಾಳ ಹೂಡುವ ಕಂಪನಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದವು.

    ಭಾರತದಿಂದ ಸೀರಂ ಕಂಪನಿ ತಯಾರಿಸಿದ ಲಸಿಕೆಗಳು 80ಕ್ಕೂ ಅಧಿಕ ಬಡ ರಾಷ್ಟ್ರಗಳಿಗೆ ರಫ್ತು ಆಗತೊಡಗಿದಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೈಡನ್ ಲಸಿಕೆ ತಯಾರಿಸಲು ಬೇಕಾದ ಕಚ್ಚಾ ವಸ್ತುವಿನ ಅಮದಿನ ಮೇಲೆ ನಿರ್ಬಂಧ  ಹೇರಿದರು. ಈ ನಡುವೆ ಭಾರತದಲ್ಲೂ ಕೊರೊನಾ ಎರಡನೇ ಅಲೆ ಅಬ್ಬರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಪರಿಣಾಮ ಭಾರತದಲ್ಲಿ ಅಮೆರಿಕ ಸೇರಿದಂತೆ ವಿದೇಶಿ ಕಂಪನಿಗಳ ಲಸಿಕೆಗಳಿಗೆ ಅನುಮತಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದ ಮೇಲೆ ಒತ್ತಡ ಹಾಕಿಸಿ ಲಸಿಕೆಗೆ ಅನುಮತಿ ನೀಡುವಲ್ಲಿ ವಿದೇಶಿ ಕಂಪನಿಗಳ ಲಾಬಿ ಕೊನೆಗೂ ಯಶಸ್ವಿಯಾಗಿದೆ ಎಂಬ ಅಭಿಪ್ರಾಯ ಈಗ ವ್ಯಕ್ತವಾಗುತ್ತಿದೆ.

  • ಕೊರೊನಾ ಲಸಿಕೆ ಕದ್ದ ಕಳ್ಳರು,ಕ್ಷಮೆ ಕೇಳಿ ಪೊಲೀಸರಿಗೆ ಪತ್ರ

    ಕೊರೊನಾ ಲಸಿಕೆ ಕದ್ದ ಕಳ್ಳರು,ಕ್ಷಮೆ ಕೇಳಿ ಪೊಲೀಸರಿಗೆ ಪತ್ರ

     ರಾಯ್ಪುರ: ಕೊರೊನಾ ಲಸಿಕೆ ಕದಿದ್ದ ಕಳ್ಳರು ಪೊಲೀಸ್ ಠಾಣೆ ಎದುರು ಬಿಟ್ಟು ಕ್ಷಮೆ ಕೇಳಿ ಪತ್ರ ಬರೆದಿರುವ ಘಟನೆ ನಡೆದಿದೆ.

    ಹರಿಯಾಣದ ಜಿಂದ್ ಜಿಲ್ಲೆಯ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ಸುಮಾರು 1,700 ಡೋಸ್ ಕೊರೊನಾ ಲಸಿಕೆ ಪೊಲೀಸ್ ಠಾಣೆಯ ಎದುರು ಪತ್ತೆಯಾಗಿವೆ. ಇದರೊಂದಿಗೆ ತಮ್ಮನ್ನು ಕ್ಷಮಿಸುವಂತೆ ಕಳ್ಳರು ಮನವಿ ಮಾಡಿ ಪೊಲೀಸರಿಗೆ ಪತ್ರಬರೆದಿದ್ದಾರೆ.

    ಆಸ್ಪತ್ರೆಯ ಶಟರ್ ಮುರಿದು ಒಳನುಗ್ಗಿದ್ದ ಇಬ್ಬರು ಕಳ್ಳರು ಸ್ಟೋರ್ ರೂಮ್‍ನಲ್ಲಿ ಸಂಗ್ರಹಿಸಿಟ್ಟಿದ್ದ ಲಸಿಕೆಗಳಿದ್ದ ಬಾಕ್ಸ್ ಕದ್ದು ಪರಾರಿಯಾಗಿದ್ದರು.ಕಳ್ಳತನವಾಗಿದ್ದ ಸ್ಟೋರ್ ರೂಮ್‍ನಲ್ಲಿ ಲ್ಯಾಪ್ ಟಾಪ್ ಹಾಗೂ 50 ಸಾವಿರ ರೂಪಾಯಿ ಹಣ ಇದ್ದರು ಕಳ್ಳರು ಮುಟ್ಟದೆ ಕೊರೊನಾ ಲಸಿಕೆಯನ್ನು ಕದ್ದುಕೊಂಡು ಹೋಗಿರುವುದು ವಿಶೇಷವಾಗಿದೆ ಎಂದು ಎಲ್ಲಡೆ ಸುದ್ದಿಯಾಗಿತ್ತು.

    ಈ ಕಳ್ಳತನದ ಬೆನ್ನಲ್ಲೇ ಸ್ವಾರಿ ಕೊರೊನಾ ಲಸಿಕೆ ಅಂತ ಗೊತ್ತಿರಲಿಲ್ಲ ಎಂದು ಕಳ್ಳರು ಪತ್ರಬರೆದಿಟ್ಟು ಲಸಿಕೆ ಇದ್ದ ಬಾಕ್ಸ್ ಅನ್ನು ಪೊಲೀಸ್ ಠಾಣೆ ಸಮೀಪ ಬಿಟ್ಟುಹೋಗಿದ್ದಾರೆ.