Tag: ಕೊರೊನಾ ಲಸಿಕೆ

  • ಧಾರವಾಡದ 240 ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

    ಧಾರವಾಡದ 240 ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

    ಹುಬ್ಬಳ್ಳಿ: ಜಿಲ್ಲೆಯ ಪತ್ರಕರ್ತರ ಭವನದಲ್ಲಿ ಇಂದು 249 ಮಾಧ್ಯಮ ಪ್ರತಿನಿಧಿಗಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

    ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿಸಿದೆ. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‍ರವರ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 240 ಮಾಧ್ಯಮ ಪ್ರತಿನಿಧಿಗಳು ಲಸಿಕೆಯನ್ನು ಸ್ವೀಕರಿಸಿದ್ದಾರೆ.

     

    18 ರಿಂದ 45 ವಯೋಮಾನದ ಒಳಗಿನ 196 ಹಾಗೂ 45 ವಯೋಮಾನ ಮೇಲ್ಪಟ್ಟ, 44 ಜನರಿಗೆ ಅಸ್ಟ್ರಜನಿಕಾ ಕೋವಿಶೀಲ್ಡ್ ಲಸಿಕೆ ನೀಡಲಾಯಿತು. ವಿದ್ಯುನ್ಮಾನ ಮಾಧ್ಯಮ ಕೆಲಸ ನಿರ್ವಹಿಸುವ ವರದಿಗಾರರು, ವೀಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸಂಪಾದಕರು, ಫೋಟೊ ಜರ್ನಲಿಸ್ಟ್ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಲಸಿಕೆ ಪಡೆದುಕೊಂಡರು.

    ಚಿಟಗುಪ್ಪಿ ವೈದ್ಯಾಧಿಕಾರಿಗಳಾದ ಶ್ರೀಧರ ದಂಡಪ್ಪನವರ ಹಾಗೂ ಪ್ರಕಾಶ್ ನರಗುಂದ ಲಸಿಕೆ ಅಭಿಯಾನದ ಮೇಲುಸ್ತುವಾರಿ ವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಗಳಾದ ಆಶಾ ಯಡಳ್ಳಿ, ಕಾವ್ಯ ಗೊರವನಗೋಳ್, ಪ್ರವೀಣ್ ಎಸ್.ಎಮ್, ಮಲ್ಲಿಕಾರ್ಜುನ ಎನ್.ಎಮ್, ಪವಿತ್ರ ಎಸ್, ಶ್ವೇತಾ, ಲಸಿಕೆ ಕಾರ್ಯವನ್ನು ನಿರ್ವಹಿಸಿದರು.

  • 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ- ಕೊಡಗಿನಲ್ಲಿ ಒಂದೂವರೆ ಗಂಟೆಯಲ್ಲಿ ಮೂರೂವರೆ ಸಾವಿರ ಯುವಜನರ ನೋಂದಣಿ

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ- ಕೊಡಗಿನಲ್ಲಿ ಒಂದೂವರೆ ಗಂಟೆಯಲ್ಲಿ ಮೂರೂವರೆ ಸಾವಿರ ಯುವಜನರ ನೋಂದಣಿ

    ಮಡಿಕೇರಿ: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಕೊಡುಗು ಜಿಲ್ಲೆ ಒಂದರಲ್ಲೇ ಕೇವಲ ಒಂದೂವರೆ ಗಂಟೆಯಲ್ಲಿ ಬರೋಬ್ಬರಿ ಮೂರುವರೆ ಸಾವಿರ ಯುವಜನ ನೋಂದಣಿ ಮಾಡಿಕೊಂಡಿದ್ದಾರೆ.

    ಯುವ ಜನತೆ ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದು, ರಿಜಿಸ್ಟ್ರೇಷನ್ ಪೋರ್ಟಲ್ ಓಪನ್ ಆಗುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಯುವಕರು ವ್ಯಾಕ್ಸಿನ್ ಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಕೊಡಗಿಗೆ ಮೂರುವರೆ ಸಾವಿರ ಡೋಸ್ ವ್ಯಾಕ್ಸಿನ್ ಬಂದಿದ್ದು, ಮೇ 17ರ ವರೆಗೆ ಈಗಾಗಲೇ ಅಷ್ಟು ಡೋಸ್ ವ್ಯಾಕ್ಸಿನ್ ಈಗಾಗಲೇ ಬುಕ್ ಅಗಿದೆ. ನಿನ್ನೆ ಒಂದೇ ದಿನ ಕೊಡಗಿನಲ್ಲಿ 139 ಯುವ ಜನತೆ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ವ್ಯಾಕ್ಸಿನ್ ಪಡೆದುಕೊಳ್ಳಲು ತುಂಬಾ ಉತ್ಸುಕರಾಗಿದ್ದು, ಯುವಕರು ವ್ಯಾಕ್ಸಿನ್ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿ ಗೋಪಿನಾಥ್, ಜಿಲ್ಲೆಯ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿದ್ದಾರೆ. ನಮಗೂ ವ್ಯಾಕ್ಸಿನ್ ನೀಡುತ್ತಿರುವುದು ಖುಷಿ ವಿಷಯವಾಗಿದೆ. ಈಗಾಗಲೇ ಮೂರುವರೆ ಸಾವಿರ ಡೋಸ್ ಲಸಿಕೆ ಬಂದಿದೆ. 17ರ ವರೆಗೆ ವ್ಯಾಕ್ಸಿನ್ ನೀಡಲಾಗುತ್ತದೆ.

    ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಯುವತಿ ಮಾತನಾಡಿ, ಯುವಜನರು ಕೆಲಸಗಳ ನಿಮಿತ್ತ ತುಂಬಾ ಓಡಾಡುತ್ತಾರೆ. ರಾಜ್ಯ ಸರ್ಕಾರ ನಮ್ಮನ್ನು ಪರಿಗಣಿಸಿ ವ್ಯಾಕ್ಸಿನ್ ನೀಡುತ್ತಿರುವುದ ಖುಷಿ ವಿಷಯವಾಗಿದೆ. ಈ ಹಿಂದೆ 45 ವರ್ಷದ ಮೇಲ್ಪಟ್ಟರಿಗೆ ಮಾತ್ರ ಲಸಿಕೆ ನೀಡುತ್ತಿದ್ದರು. ಇದೀಗ ಯುವ ಜನತೆಯನ್ನು ಪರಿಗಣಿಸಿ ಲಸಿಕೆ ನೀಡುತ್ತಿರುವುದು ಖುಷಿಯ ವಿಚಾರ. ಹೀಗಾಗಿ ತುಂಬಾ ಉತ್ಸಾಹದಿಂದ ಲಸಿಕೆ ಪಡೆಯುತ್ತಿದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ಲಸಿಕೆ ಹಾಕಿಸಲು ನೆಲಮಂಗಲಕ್ಕೆ ಬೆಂಗಳೂರಿಗರ ವಲಸೆ

    ಲಸಿಕೆ ಹಾಕಿಸಲು ನೆಲಮಂಗಲಕ್ಕೆ ಬೆಂಗಳೂರಿಗರ ವಲಸೆ

    ಬೆಂಗಳೂರು: ಸೋಮವಾರ ಕೆಸಿ ಜನರಲ್ ಆಸ್ಪತ್ರೆ ಮುಂದೆ 800ಕ್ಕೂ ಹೆಚ್ಚು ಜನ ಲಗ್ಗೆ ಇಟ್ಟಿದ್ದರೆ ಇಂದು ಬೆಂಗಳೂರಿನ ಜನ ನೆಲಮಂಗಲಕ್ಕೆ ಲಸಿಕೆ ಹಾಕಿಸಲು ವಲಸೆ ಬಂದಿದ್ದಾರೆ.

    ಹೌದು. ಬೆಂಗಳೂರು ನಗರದಲ್ಲಿ ಲಸಿಕೆ ಸಿಗುತ್ತಿಲ್ಲ. ಎರಡನೇ ಡೋಸ್ ನೀಡಿದವರಿಗೆ ಲಸಿಕೆ ಸಿಗದ ಕಾರಣ ಮೊದಲ ಡೋಸ್ ಪಡೆಯುವವರಿಗೆ ಲಸಿಕೆ ಸಿಗುವುದು ಅನುಮಾನವಾಗಿದೆ. ಹೀಗಾಗಿ ಬೆಂಗಳೂರಿನ ಜನ ನೆಲಮಂಗಲದತ್ತ ಮುಖ ಮಾಡಿದ್ದಾರೆ.

    ಲಾಕ್‍ಡೌನ್ ನಡುವೆಯೂ ಬೆಂಗಳೂರಿನಿಂದ ನೂರಾರು ಜನ ತಂಡ ತಂಡವಾಗಿ ಇಂದು ಬೆಳಗ್ಗೆ ಬೈಕ್, ಕಾರುಗಳಲ್ಲಿ ನೆಲಮಂಗಲ ತಾಲೂಕು ಆಸ್ಪತ್ರೆಗೆ ಆಗಮಿಸಿದ್ದಾರೆ. ಬೆಂಗಳೂರಿನಿಂದ ಜನ ಬಂದಿರುವುದನ್ನು ನೋಡಿದ ಸ್ಥಳೀಯರು ಮೊದಲು ನಮಗೆ ಲಸಿಕೆ ಕೊಡಿ ನಂತರ ಬೆಂಗಳೂರಿನ ಜನತೆಗೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.

    ಲಸಿಕೆ ಪಡೆಯಲು ಮೊದಲೇ ಸ್ಥಳೀಯರು ಸಾಲಿನಲ್ಲಿ ನಿಂತಿದ್ದರು. ಬೆಂಗಳೂರಿನ ಜನ ಭಾರೀ ಸಂಖ್ಯೆಯಲ್ಲಿ ಬರುತ್ತಿರುವುದನ್ನು ನೋಡಿ ಸಿಟ್ಟಾದ ಜನ ಗಲಾಟೆ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಈಗ ಸ್ಥಳೀಯರಿಗೆ ಮತ್ತು ಬೆಂಗಳೂರಿಗರಿಗೆ ಪ್ರತ್ಯೇಕ ಸಾಲನ್ನು ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

  • ಕೊರೊನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ

    ಕೊರೊನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಬಳಿಕ ಪ್ರತಿಯೊಬ್ಬರು ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಕೊಹ್ಲಿ ಲಸಿಕೆ ಪಡೆದುಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲರೂ ಕೂಡ ಲಸಿಕೆ ಪಡೆಯಿರಿ, ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ. ಕೆಲದಿನಗಳ ಹಿಂದೆ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಕೊರೊನಾ ನಿಧಿ ಸಂಗ್ರಹಕ್ಕೆ ಅಭಿಯಾನ ಶುರು ಮಾಡಿದ್ದರು. ಬಳಿಕ 2 ಕೋಟಿ ರೂ.ಗಳನ್ನು ಈ ಸ್ಟಾರ್ ದಂಪತಿ ದೇಣಿಗೆಯಾಗಿ ದೇಶಕ್ಕೆ ನೀಡಿದ್ದರು.

     

    View this post on Instagram

     

    A post shared by AnushkaSharma1588 (@anushkasharma)

    ಕೋವಿಡ್‍ನಿಂದಾಗಿ ಭಾರತದ ಪರಿಸ್ಥಿತಿ ಕಷ್ಟದಲ್ಲಿದೆ. ದೇಶವನ್ನು ಈ ರೀತಿ ನೋಡಲು ನೋವಾಗುತ್ತದೆ. ಈ ಸಂದರ್ಭದಲ್ಲಿ ಹಗಲು-ರಾತ್ರಿ ಹೋರಾಡುತ್ತಿರುವ ಎಲ್ಲರಿಗೂ ನಾವು ಆಭಾರಿ ಆಗಿದ್ದೇವೆ. ಅವರ ಬದ್ಧತೆಯನ್ನು ಮೆಚ್ಚಲೇಬೇಕು. ಈ ಸಂದರ್ಭದಲ್ಲಿ ಅವರಿಗೆ ನಮ್ಮ ಬೆಂಬಲ ಬೇಕು. ಈ ಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿರಬೇಕು. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ನಾವು ಕಾಪಾಡಬೇಕು ಎಂದು ಕೊರೊನಾ ವಾರಿಯರ್ಸ್‍ಗಳಿಗೆ ಬೆಂಬಲ ಸೂಚಿಸಿದ್ದರು.

  • ಲಸಿಕೆ ಹಾಕಿಸಿಕೊಳ್ಳುವಂತೆ ವೀಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ

    ಲಸಿಕೆ ಹಾಕಿಸಿಕೊಳ್ಳುವಂತೆ ವೀಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ

    ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರೂ ಹಿಂಜರಿಯಬೇಡಿ. ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು 97 ವರ್ಷದ ವೃದ್ಧೆಯೊಬ್ಬರು ವೀಡಿಯೋ ಮೂಲಕ ನೀಡಿದ ಸಂದೇಶ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

    ನನಗೆ 97 ವರ್ಷವಾಗಿದೆ. ಮಾರ್ಚ್ 9ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಎರಡನೇ ಡೋಸ್ ಮೇ 9ರಂದು ಪಡೆಯಬೇಕಿತ್ತು. ಅದಕ್ಕಾಗಿ ಕಾಯುತ್ತಿದ್ದೇನೆ. ನನಗೆ ಲಸಿಕೆ ಪಡೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮ ಆಗಿಲ್ಲ. ನೋವು, ಜ್ವರ ಏನೂ ಕಾಣಿಸಿಕೊಂಡಿಲ್ಲ. ಯಾರೂ ಲಸಿಕೆಯ ಬಗ್ಗೆ ಹೆದರಬೇಡಿ. ಕೊರೊನಾ ಲಸಿಕೆ ಪಡೆಯುವುದರಿಂದ ನಿಮಗೇ ಒಳ್ಳೆಯದು. ಅಷ್ಟೇ ಅಲ್ಲ, ನಿಮ್ಮ ಸುತ್ತಲೂ ಇರುವವರಿಗೂ ಒಳ್ಳೆಯದೇ. ಲಸಿಕೆ ಸುರಕ್ಷಿತವಾಗಿದ್ದು, ಸಹಜ ಜೀವನ ನಡೆಸಲು ಇದನ್ನು ಪಡೆಯುವುದೊಂದೇ ಮಾರ್ಗ ಎಂದು ಈ ಅಜ್ಜಿ ಹೇಳಿದ್ದನ್ನು ವಿಡಿಯೋದಲ್ಲಿ ಹೇಳುವ ಮೂಲಕವಾಗಿ ಎಲ್ಲರಲ್ಲಿಯೂ ಕೊರೊನಾ ಲಸಿಕೆ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ವೃದ್ಧೆ ಮಾಡಿದ್ದಾರೆ.

    ಭಾರತದಲ್ಲಿ ಮೇ 1ರಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ಹಂತದಲ್ಲಿ 18-44ವರ್ಷದವರೆಗಿನ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಎಲ್ಲ ರಾಜ್ಯಗಳಲ್ಲೂ ಇನ್ನೂ ಸರಿಯಾಗಿ ಪ್ರಾರಂಭವಿಲ್ಲ. ಕೆಲವು ಕಡೆಗಳಲ್ಲಿ ಪ್ರಾರಂಭವಾದರೆ ಅಡ್ಡಪರಿಣಾಮದ ಭಯದಿಂದ ಜನರೇ ಹಿಂದೇಟು ಹಾಕುತ್ತಿದ್ದಾರೆ.

    ದೇಶದಲ್ಲಿ ಜನವರಿ 16ರಿಂದ ಕೊವಿಡ್ ಲಸಿಕೆ ವಿತರಣೆ ಶುರುವಾಗಿದ್ದು, ಮೊದಲ ಹಂತದಲ್ಲಿ ಕೊವಿಡ್ ವಾರಿಯರ್ಸ್‍ಗೆ ನೀಡಲಾಗಿದೆ. ಎರಡನೇ ಹಂತದಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗಿತ್ತು. ನಂತರ ಅದನ್ನು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿತ್ತು. ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

    ಮೇ 1-ಮೇ 7ರ ನಡುವೆ ಸುಮಾರು 11.6 ಮಿಲಿಯನ್ ಡೋಸ್‍ಗಳಷ್ಟು ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸರ್ಕಾರಗಳು ಸಿದ್ಧತೆ ನಡೆಸಿವೆ.

  • 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತ – ಸಿಎಂ ಮನೆಗೆ ಸಂಸದ ಸಿದ್ದೇಶ್ವರ್ ಮುತ್ತಿಗೆ ಎಚ್ಚರಿಕೆ

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತ – ಸಿಎಂ ಮನೆಗೆ ಸಂಸದ ಸಿದ್ದೇಶ್ವರ್ ಮುತ್ತಿಗೆ ಎಚ್ಚರಿಕೆ

    ಬೆಂಗಳೂರು: ದೇಶದಲ್ಲಿ ಇಲ್ಲಿವರೆಗೆ 16 ಕೋಟಿ 49 ಲಕ್ಷದ 73 ಸಾವಿರದ 058 ಜನರಿಗೆ ವ್ಯಾಕ್ಸಿನೇಷನ್ ಆಗಿದೆ. ಆದರೆ ವ್ಯಾಕ್ಸಿನ್ ಕೊರತೆ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡದಂತೆ ಆಸ್ಪತ್ರೆಗಳಿಗೆ ಬಿಬಿಎಂಪಿ ಆದೇಶಿಸಿದೆ.

    2ನೇ ಡೋಸ್ ನೀಡೋವ್ರಿಗೆ ಅಗತ್ಯ ವ್ಯಾಕ್ಸಿನ್ ಕೊರತೆ ಆಗಬಹುದು. ಹಾಗಾಗಿ ಮುಂದಿನ ಆದೇಶದವರೆಗೂ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಬೇಡಿ ಅಂತ ಸೂಚಿಸಿದೆ. ವ್ಯಾಕ್ಸಿನ್ ಕೊರತೆ ಇದೆ ಅನ್ನೋದು ಗೊತ್ತಿದ್ದರೂ ಕೂಡ ಅದ್ಯಾರನ್ನ ಮೆಚ್ಚಿಸೋಕೋ ಏನೋ ಸಿಎಂ ಯಡಿಯೂರಪ್ಪ ಮೇ 1 ರಂದು ಚಾಲನೆ ನೀಡಿದ್ದ ವ್ಯಾಕ್ಸಿನೇಷನ್‍ಗೆ 7 ದಿನಗಳಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ರೇಕ್ ಬಿದ್ದಿದೆ.

    ಆದರೆ 70 ಲಕ್ಷ ಜನರು ಮೊದಲ ಡೋಸ್ ಪಡೆದಿದ್ದಾರೆ. 2ನೇ ಡೋಸ್ ಪಡೆಯೋರಿಗೆ ಆದ್ಯತೆ ಮೇಲೆ ಲಸಿಕೆ ಕೊಡ್ತೀವಿ ಅಂತ ಸಚಿವ ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನ ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್‍ಗಾಗಿ ಕಿತ್ತಾಡಿ, ಕೂಗಾಡಿದ ಘಟನೆಯೂ ನಡೆದಿದೆ.

    ದಾವಣಗೆರೆಗೆ ಅಗತ್ಯ ವ್ಯಾಕ್ಸಿನ್ ನೀಡದಿದ್ದರೆ ಸಿಎಂ ಮನೆ ಮುಂದೆ ಧರಣಿ ಮಾಡ್ತೇನೆ ಅಂತ ಸಂಸದ ಸಿದ್ದೇಶ್ವರ್ ಧಮ್ಕಿ ಹಾಕಿದ್ದಾರೆ. ಈ ಮಧ್ಯೆ, ಕೊರೋನಾ ಕಾಲದಲ್ಲಿ ಮತ್ತೆ ಉಸ್ತುವಾರಿ ಸಚಿವರನ್ನು ಬದಲಾಯಿಸಿ ಸಿಎಂ ಆದೇಶಿಸಿದ್ದಾರೆ. ಲಿಂಬಾವಳಿಗೆ ಕೋಲಾರ, ಶಂಕರ್‍ಗೆ ಯಾದಗಿರಿ ಮತ್ತು ಪ್ರಭು ಚೌಹಾಣ್‍ಗೆ ಬೀದರ್ ಉಸ್ತುವಾರಿ ನೀಡಿದ್ದಾರೆ.

  • ಹನಿ ಲಸಿಕೆ ವೇಸ್ಟ್ ಮಾಡದ ಕೇರಳಕ್ಕೆ ಪ್ರಧಾನಿ ಮೋದಿ ಶಹಬ್ಬಾಸ್

    ಹನಿ ಲಸಿಕೆ ವೇಸ್ಟ್ ಮಾಡದ ಕೇರಳಕ್ಕೆ ಪ್ರಧಾನಿ ಮೋದಿ ಶಹಬ್ಬಾಸ್

    ನವದೆಹಲಿ: ಕೋವಿಡ್ ಲಸಿಕೆಯನ್ನು ವೇಸ್ಟ್ ಮಾಡದೇ ಬಳಸಿದ್ದಕ್ಕೆ ಕೇಂದ್ರ ಸರ್ಕಾರ ಕೇರಳ ಸರ್ಕಾರಕ್ಕೆ ಮೆಚ್ಚುಗೆ ಸೂಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

    ವ್ಯಾಕ್ಸಿನ್ ವೇಸ್ಟೇಜ್ ಕಡಿಮೆ ಮಾಡಿ ನಮ್ಮ ಆರೋಗ್ಯ ಇಲಾಖೆ ಹಾಗೂ ನರ್ಸ್‍ಗಳು ಮಾದರಿಯಾಗಿರುವುದನ್ನು ನೋಡಿ ಖುಷಿಯಾಗುತ್ತಿದೆ. ಕೋವಿಡ್ 19 ವಿರುದ್ಧದ ಹೋರಾಟ ಬಲಪಡಿಸುವಲ್ಲಿ ವ್ಯಾಕ್ಸಿನ್ ವೇಸ್ಟೇಜ್ ಕಡಿಮೆ ಮಾಡುವುದೂ ಮುಖ್ಯ ಎಂದು ನಿನ್ನೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಡಿದ ಟ್ವೀಟ್ ಉಲ್ಲೇಖಿಸಿ ತಮ್ಮ ಟ್ವೀಟ್‍ನಲ್ಲಿ ಹೇಳಿದ್ದಾರೆ.

    ಕೇರಳದ ಸಾಧನೆ ಏನು?: ಕೇಂದ್ರ ಸರ್ಕಾರ ಕೇರಳಕ್ಕೆ 73,38,860 ಡೋಸ್ ಕೊಟ್ಟಿದ್ದರೂ, ಕೇರಳ ಇದರಿಂದ 74,26,164 ಡೋಸ್ ನೀಡುವಲ್ಲಿ ಯಶಸ್ವಿಯಾಗಿತ್ತು. ಅಂದರೆ 87,304 ಡೋಸ್‍ಗಳನ್ನು ಜನರಿಗೆ ಹೆಚ್ಚುವರಿಯಾಗಿ ನೀಡಿತ್ತು.

    ಇದು ಹೇಗೆ ಸಾಧ್ಯ?: ವ್ಯಾಕ್ಸಿನ್ ತಯಾರಿಕಾ ಕಂಪನಿಗಳು ತಯಾರಿಸುವ ಒಂದು ವ್ಯಾಕ್ಸಿನ್ ವೈಲ್‍ನಲ್ಲಿ 10 ಡೋಸ್ ಇರುತ್ತದೆ. ಆದರೆ ಕೆಲವು ಬಾರಿ ವ್ಯಾಕ್ಸಿನ್ ವೇಸ್ಟ್ ಆಗುತ್ತದೆ ಎಂದು ಹೇಳಿ ಕಂಪನಿಗಳು ಒಂದು ವೈಲ್‍ನಲ್ಲಿ ಅಗತ್ಯಕ್ಕಿಂತ ಸ್ವಲ್ಪ ಜಾಸ್ತಿ ಡೋಸನ್ನೇ ತುಂಬಿಸಿರುತ್ತದೆ.

    ಹೀಗಾಗಿ ಕೇರಳದ ಆರೋಗ್ಯ ಇಲಾಖೆ ಕಾರ್ಯಕರ್ತರು, ನರ್ಸ್‍ಗಳು ಲಸಿಕೆ ನೀಡುವಾಗ ಡೋಸ್‍ಗಳು ಉಳಿತಾಯವಾಗುತ್ತಿತ್ತು. ಇದನ್ನು ಹೆಚ್ಚುವರಿಯಾಗಿ ಜನರಿಗೆ ಲಸಿಕೆ ನೀಡಲು ಬಳಸಲಾಗುತ್ತಿತ್ತು. ಈ ಮೂಲಕ ಒಂದೇ ಒಂದು ಹನಿ ಲಸಿಕೆಯನ್ನೂ ವೇಸ್ಟ್ ಮಾಡದೇ ಪರಿಣಾಮಕಾರಿಯಾಗಿ ಬಳಸಲಾಗಿತ್ತು.

    ಕೇರಳದ ನರ್ಸ್‍ಗಳ ಈ ಸಾಧನೆ ಅಭಿನಂದನಾರ್ಹ ಎಂದು ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದರು.

  • ಉಡುಪಿಯಲ್ಲಿ ಕೊರೊನಾ ಲಸಿಕಾ ಕೇಂದ್ರ ಶಾಲೆಗೆ ಶಿಫ್ಟ್

    ಉಡುಪಿಯಲ್ಲಿ ಕೊರೊನಾ ಲಸಿಕಾ ಕೇಂದ್ರ ಶಾಲೆಗೆ ಶಿಫ್ಟ್

    ಉಡುಪಿ: ಜಿಲ್ಲೆಯಾದ್ಯಂತ ಇಂದು ಕೊರೊನಾ ವ್ಯಾಕ್ಸಿನೇಷನ್ ನಡೆಯುತ್ತಿಲ್ಲ. ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೊರೊನಾ ಲಸಿಕಾ ಕೇಂದ್ರವನ್ನು ಇಂದು ಶಿಫ್ಟ್ ಮಾಡಲಾಗುತ್ತಿದೆ. ಮೇ 5 ಬುಧವಾರದಿಂದ ಉಡುಪಿ ನಗರದ ಬ್ರಹ್ಮಗಿರಿಯ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಲಾಗುತ್ತಿದೆ.

    ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಎಮರ್ಜೆನ್ಸಿ ಏರಿಯಾದಲ್ಲಿ ಈವರೆಗೆ ವ್ಯಾಕ್ಸಿನೇಷನ್ ನಡೆಯುತ್ತಿತ್ತು, ಅಲ್ಲಿ ಜನಸಂದಣಿ ಹೆಚ್ಚಾಗುತ್ತಿರುವ ಕಾರಣ, ಸಾರ್ವಜನಿಕರ ವೇಟಿಂಗ್ ಏರಿಯಾ ಬಹಳ ಕಡಿಮೆ ಇದೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಐಸೋಲೇಷನ್ ಸೆಂಟರ್ ಇರುವ ಕಾರಣ ಸಾರ್ವಜನಿಕರು ಈ ಏರಿಯಾದಲ್ಲಿ ಓಡಾಡಬಾರದು ಎಂಬ ಉದ್ದೇಶದಿಂದ ಲಸಿಕಾ ಕೇಂದ್ರವನ್ನು ಸ್ಥಳಾಂತರ ಮಾಡಲಾಗುತ್ತಿದೆ.

    ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಕಾನ್ವೆಂಟ್ ವಟಾರದಲ್ಲಿ ಸಾರ್ವಜನಿಕರ ಮಾಹಿತಿ ಕೇಂದ್ರ ಇಂಜೆಕ್ಷನ್ ಕೌಂಟರ್ ಗಳು ವ್ಯಾಕ್ಸಿನೇಷನ್ ನಂತರ ವೈಟಿಂಗ್ ಕೊಠಡಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಶೌಚಾಲಯ ಟಾಯ್ಲೆಟ್ ಫೆಸಿಲಿಟಿ ಗಳನ್ನು ಸಿದ್ಧ ಮಾಡಲಾಗುತ್ತದೆ ಎಂದು ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಮುಂದಿನ ವಾರದಲ್ಲಿ ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ವ್ಯಾಕ್ಸಿನೇಷನ್ ಆರಂಭವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ಕಾರಣ ಸುಲಲಿತ ವ್ಯವಸ್ಥೆಗಾಗಿ ಜಿಲ್ಲಾಡಳಿತ ಈ ವ್ಯವಸ್ಥೆ ಮಾಡಲಾಗಿದೆ. ಬೆಡ್, ಕುಳಿತುಕೊಳ್ಳುವ ವ್ಯವಸ್ಥೆ, ಆಕ್ಸಿಜನ್ ಸೇರಿದಂತೆ ಐಸಿಯು ವ್ಯವಸ್ಥೆ ಮಾಡಲಾಗಿದೆ. ಅಂಬುಲೆನ್ಸ್ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಡಾ. ಮಧುಸೂಧನ್ ನಾಯಕ್ ಹೇಳಿದರು.

  • ದೇಶದಲ್ಲಿ 2 ಕೋಟಿಯ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    ದೇಶದಲ್ಲಿ 2 ಕೋಟಿಯ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    – 24 ಗಂಟೆಯಲ್ಲಿ 3,449 ಜನರ ಸಾವು
    – ದೇಶದಲ್ಲಿ 34,47,133 ಸಕ್ರಿಯ ಪ್ರಕರಣಗಳು

    ನವದೆಹಲಿ: ಮಹಾ ಪಿಡುಗು ಕೊರೊನಾದ ಕೆಟ್ಟ ದಾಖಲೆಗಳಿಗೆ ಭಾರತ ವೇದಿಕೆಯಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಕೋಟಿಯ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3,57,229 ಜನಕ್ಕೆ ಸೋಂಕು ತಗುಲಿದ್ದು, 3,449 ಸೋಂಕಿತರನ್ನ ಮಾಹಾಮಾರಿ ಬಲಿ ಪಡೆದುಕೊಂಡಿದೆ.

    ನಿನ್ನೆ ಒಟ್ಟು 3,20,289 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 34,47,133 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,02,82,833ಕ್ಕೇರಿಕೆಯಾಗಿದೆ. ಇದುವರೆಗೂ ಕೊರೊನಾಗೆ 2,22,408 ಜನರು ಪ್ರಾಣ ಕಳೆದುಕೊಂಡಿದ್ದಾರೆ.

    ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದ್ರೆ, ಮಹಾಮಾರಿಯಲ್ಲಿ ನಿಧಾನಗತಿಯಲ್ಲಿ ಸೋಂಕು ಹರಡುವಿಕೆ ಪ್ರಮಾಣ ಇಳಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಇದರ ಜೊತೆಗೆ ಸಾವಿನ ಪ್ರಮಾಣವೂ ಕೊಂಚ ತಗ್ಗುತ್ತಿದೆ.

    ಈ ನಡುವೆ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭಗೊಂಡಿದೆ. ದೆಹಲಿಯ 77 ಶಾಲೆಗಳನ್ನ ಲಸಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಮಧ್ಯಪ್ರದೇಶದಲ್ಲಿ ಮೇ 5ರಿಂದ ಮೂರನೇ ಹಂತದ ಲಸಿಕಾ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಬಹುತೇಕ ರಾಜ್ಯ ಸರ್ಕಾರಗಳು 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಉಚಿತ ಲಸಿಕೆ ನೀಡಲು ಮುಂದಾಗಿವೆ.

  • ಕೊಡಗಿನಲ್ಲಿ ಕೊರೊನಾ ಲಸಿಕೆ ಖಾಲಿ

    ಕೊಡಗಿನಲ್ಲಿ ಕೊರೊನಾ ಲಸಿಕೆ ಖಾಲಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸ್ಫೋಟಗೊಳ್ಳತ್ತಲೇ ಇದೆ. ಇದರೊಂದಿಗೆ ಇದೀಗ ಜಿಲ್ಲೆಯಲ್ಲಿ ವ್ಯಾಕ್ಸಿನ್ ಖಾಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿ ನಿತ್ಯ ಕನಿಷ್ಠ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಜನರು ವ್ಯಾಕ್ಸಿನ್ ತೆಗೆದುಕೊಳ್ಳಲು ಈಗಾಗಲೇ ಭಾರೀ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ವ್ಯಾಕ್ಸಿನ್ ಇಲ್ಲ. ಸದ್ಯ ಕೋವಿಶೀಲ್ಡ್ 900 ಡೋಸ್ ಇದ್ದರೆ, ಕೋವ್ಯಾಕ್ಸಿನ್ ಕೇವಲ 600 ಡೋಸ್ ಇತ್ತು. ಆದರೆ ಅದನ್ನು ಈಗಾಗಲೇ ಶನಿವಾರವೇ ಜಿಲ್ಲೆಯ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಡಿಎಚ್‍ಓ ಕಚೇರಿಯಲ್ಲಿ ವ್ಯಾಕ್ಸಿನ್ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಹಂಚಿಕೆ ಮಾಡಿರುವ ವ್ಯಾಕ್ಸಿನ್ ಅನ್ನು ಇಂದು ಜನರಿಗೆ ಹಾಕಲಾಗಿದ್ದು, ನಾಳೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವ್ಯಾಕ್ಸಿನ್ ಇರುವುದಿಲ್ಲ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿ ಮೋಹನ್ ಕುಮಾರ್ ಅವರು ಇಂದು ಸಂಜೆ ವ್ಯಾಕ್ಸಿನ್ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.

    ಜಿಲ್ಲೆಗೆ ಬೇಕಾಗಿರುವ ವ್ಯಾಕ್ಸಿನ್ ಇಂದು ಸಂಜೆ ಬಾರದಿದ್ದಲ್ಲಿ, ಜಿಲ್ಲೆಯಲ್ಲಿ ವ್ಯಾಕ್ಸಿನ್ ಇರದೆ ನೋಂದಣಿ ಮಾಡಿಕೊಂಡಿರುವವರು ವ್ಯಾಕ್ಸಿನ್ ಕೇಂದ್ರಗಳಿಗೆ ಬಂದು ವಾಪಸ್ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲೆಯಲ್ಲಿ ಈ ವ್ಯಾಕ್ಸಿನ್ ಕೊರತೆ ಎದುರಾಗಿರುವುದರಿಂದ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ವಿರುದ್ಧ ಸ್ಥಳೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಉಸ್ತುವಾರಿ ಸಚಿವರು ಹೇಳಿ ಹೋಗುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.