Tag: ಕೊರೊನಾ ಲಸಿಕೆ

  • ಕೊರೊನಾ ಲಸಿಕೆ ಪಡೆದು ಎಡವಟ್ಟು ಮಾಡಿಕೊಂಡ ಕುಲ್‍ದೀಪ್ ಯಾದವ್

    ಕೊರೊನಾ ಲಸಿಕೆ ಪಡೆದು ಎಡವಟ್ಟು ಮಾಡಿಕೊಂಡ ಕುಲ್‍ದೀಪ್ ಯಾದವ್

    ಲಕ್ನೋ: ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲ್‍ದೀಪ್ ಯಾದವ್ ತಮ್ಮ ಗೆಸ್ಟ್ ಹೌಸ್ ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.

    ಕೊರೊನಾ ಲಸಿಕೆಯನ್ನು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತೆಗೆದುಕೊಳ್ಳಬೇಕಿತ್ತು. ಆದರೆ ಕುಲ್‍ದೀಪ್ ಯಾದವ್ ಉತ್ತರ ಪ್ರದೇಶದ ಕಾನ್ಪುರದ ತನ್ನ ಗೆಸ್ಟ್ ಹೌಸ್‍ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

    ಕುಲ್‍ದೀಪ್ ಯಾದವ್ ಮೇ 15ರಂದು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡು, ನಾನು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೇನೆ. ನೀವು ಹಾಕಿಸಿಕೊಳ್ಳಿ ಈ ಮೂಲಕ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡು ಬರೆದುಕೊಂಡಿದ್ದರು.

    ಕುಲ್‍ದೀಪ್ ಯಾದವ್ ಅವರಿಗೆ ಕಾಯ್ದಿರಿಸಿದ ಆಸ್ಪತ್ರೆಯಲ್ಲಿ ಲಿಸಿಕೆ ಪಡೆಯದೆ ತಮ್ಮ ಅತಿಥಿ ಗೃಹದಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾನ್ಪುರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಕಳೆದ ಶನಿವಾರ ಕುಲ್‍ದೀಪ್ ಯಾದವ್ ಅವರು, ಕೋವಿಡ್ ಲಸಿಕೆ ಪಡೆದಿದ್ದರು. ಈ ಬಗ್ಗೆ ಸ್ವತಃ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಹಾಕಿಕೊಂಡು ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ.

  • ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರ ಗುದ್ದು – ಭಾರತದಿಂದಲೂ ವಿರೋಧ

    ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರ ಗುದ್ದು – ಭಾರತದಿಂದಲೂ ವಿರೋಧ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ‘ಸಿಂಗಾಪುರ ರೂಪಾಂತರಿ’ ವೈರಸ್ ಟ್ವೀಟ್‍ಗೆ ಸಿಂಗಾಪುರ ಸರ್ಕಾರ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೇಳಿಕೆಗೆ ಭಾರತ ಸರ್ಕಾರವು ವಿರೋಧ ವ್ಯಕ್ತಪಡಿಸಿದೆ.

    ಬುಧವಾರ ಕೇಜ್ರಿವಾಲ್ ಸಿಂಗಾಪುರ ರೂಪಾಂತರಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಮತ್ತು ಅಪಾಯಕಾರಿ. ಹೀಗಾಗಿ ಸಿಂಗಾಪುರದೊಂದಿಗೆ ವಾಯು ಸೇವೆಯನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

    ಈ ಟ್ವೀಟ್‍ಗೆ ಸಿಂಗಾಪುರ ಸರ್ಕಾರ ಭಾರತದ ರಾಯಭಾರಿಯನ್ನು ಕರೆಸಿ ಬಲವಾದ ಆಕ್ಷೇಪವನ್ನ ವ್ಯಕ್ತಪಡಿಸಿದೆ. ಈ ಸಂಬಂಧ ವಿದೇಶಾಂಗ ಮಂತ್ರಿ ಜೈ ಶಂಕರ್ ಟ್ವೀಟ್ ಮಾಡಿ, ಭಾರತ ಮತ್ತು ಸಿಂಗಾಪುರ ಕೋವಿಡ್ ವಿರುದ್ಧ ಜೊತೆಯಾಗಿ ಹೋರಾಟ ಮಾಡುತ್ತಿದೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಮ್ಲಜನಕ ಸರಬರಾಜು ವಿಚಾರದಲ್ಲಿ ಸಿಂಗಾಪುರದ ಪಾತ್ರದ ಬಗ್ಗೆ ನಮಗೆ ಮೆಚ್ಚುಗೆ ಇದೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳಿಂದ ದೀರ್ಘಕಾಲದ ಸಂಬಂಧಕ್ಕೆ ಹಾನಿಯಾಗುತ್ತದೆ. ಆದ್ದರಿಂದ ದೆಹಲಿ ಸಿಎಂ ಭಾರತದ ಪರವಾಗಿ ಮಾತನಾಡಿಲ್ಲ ಎಂಬುದನ್ನು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

    ಸಿಂಗಾಪುರ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಪ್ರತಿಕ್ರಿಯಿಸಿ, ರಾಜಕಾರಣಿಗಳು ಸತ್ಯವನ್ನು ಒಪ್ಪಿಕೊಳ್ಳಬೇಕು. ಸಿಂಗಾಪುರ ರೂಪಾಂತರ ಇಲ್ಲ ಎಂದು ಕೇಜ್ರಿವಾಲ್ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ.

    ಈ ವೇಳೆ ಜೈಶಂಕರ್ ಟ್ವೀಟ್‍ಗೆ ಧನ್ಯವಾದ ಹೇಳಿದ ಅವರು, ನಾವು ಪರಸ್ಪರ ಸಹಾಯ ಮಡುವ ಮೂಲಕ ಆಯಾ ದೇಶಗಳಲ್ಲಿನ ಪರಿಹರಿಸಲು ಪ್ರಯತ್ನಿಸೋಣ. ಎಲ್ಲರೂ ಸುರಕ್ಷಿತವಾಗಿರುವವರೆಗೂ ಯಾರೂ ಸುರಕ್ಷಿತರಲ್ಲ ಎಂದು ಹೇಳಿದ್ದಾರೆ.

    ಕೇಜ್ರಿವಾಲ್ ಹೇಳಿದ್ದು ಏನು?
    ಸಿಂಗಾಪುರಕ್ಕೆ ಬಂದ ಹೊಸ ರೂಪದ ಕೊರೊನಾ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇದು ಮೂರನೇ ಅಲೆಯಾಗಿ ಬರಬಹುದು. ಹೀಗಾಗಿ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸಿಂಗಾಪುರದೊಂದಿಗಿನ ವಾಯು ಸೇವೆಗಳನ್ನು ತಕ್ಷಣದಿಂದ ರದ್ದುಗೊಳಿಸಬೇಕು. ಮಕ್ಕಳಿಗೂ ಲಸಿಕೆ ನೀಡಬೇಕು ಎಂದು ಹೇಳಿದ್ದರು.

  • ಬಾಯ್ ಫ್ರೆಂಡ್ ಜೊತೆ ತೆರಳಿ ಕೊರೊನಾ ಲಸಿಕೆ ಪಡೆದ ನಟಿ ನಯನತಾರಾ

    ಬಾಯ್ ಫ್ರೆಂಡ್ ಜೊತೆ ತೆರಳಿ ಕೊರೊನಾ ಲಸಿಕೆ ಪಡೆದ ನಟಿ ನಯನತಾರಾ

    ಚೆನ್ನೈ: ಕಾಲಿವುಡ್ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ದಕ್ಷಿಣ ಭಾರತದ ಫೇಮಸ್ ತಾರೆಯರಾದ ಸೂಪರ್ ಸ್ಟಾರ್ ಮಹೇಶ್ ಬಾಬು, ಮೋಹನ್ ಲಾಲ್, ಕಮಲ್ ಹಾಸನ್ ಸೇರಿದಂತೆ ಹಲವಾರು ಕಲಾವಿದರು ಕೊರೊನಾ ವೈರಸ್ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ತಮ್ಮ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಇಬ್ಬರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

    ಲಸಿಕೆ ಪಡೆದ ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ದಯವಿಟ್ಟು ಲಸಿಕೆ ಪಡೆಯಿರಿ. ಸುರಕ್ಷಿತವಾಗಿರಿ, ಮನೆಯೊಳಗೆ ಇರಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಾಸ್ಕ್ ಧರಿಸಿಕೊಂಡು ಲಸಿಕೆ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by Vignesh Shivan (@wikkiofficial)

    ಸದ್ಯ ನಯನತಾರಾ ಸೂಪರ್ ಸ್ಟಾರ್ ರಜನಿಕಾಂತ್‍ರವರ ಅಣ್ಣಾತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಹೈದರಾಬಾದ್‍ನಲ್ಲಿ ನಡೆದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಹೈದರಾಬಾದ್‍ನಿಂದ ಚೆನ್ನೈಗೆ ಹಿಂದಿರುಗಿದ ನಂತರ ತಲೈವಾ ರಜನಿಕಾಂತ್ ಕೂಡ ತಮ್ಮ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರು.

  • ರಷ್ಯಾದ ಸ್ಪುಟ್ನಿಕ್ V ಲಸಿಕೆಗೆ 995 ರೂ. ದರ ನಿಗದಿ – ಮೊದಲ ಡೋಸ್ ವಿತರಣೆ

    ರಷ್ಯಾದ ಸ್ಪುಟ್ನಿಕ್ V ಲಸಿಕೆಗೆ 995 ರೂ. ದರ ನಿಗದಿ – ಮೊದಲ ಡೋಸ್ ವಿತರಣೆ

    ಹೈದರಾಬಾದ್: ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ V ಲಸಿಕೆಯ ಒಂದು ಡೋಸ್‍ಗೆ ಭಾರತದಲ್ಲಿ 995.40 ರೂ. ದರವನ್ನು ನಿಗದಿ ಮಾಡಲಾಗಿದೆ.

    ಹೈದರಾಬಾದಿನ ರೆಡ್ಡೀಸ್ ಕಂಪನಿ ಈ ದರವನ್ನು ನಿಗದಿ ಮಾಡಿದ್ದು, ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಡೋಸ್ ನೀಡಲಾಗಿದೆ.  ರಷ್ಯಾದಿಂದ ಆಮದಾಗಿರುವ ಈ ಲಸಿಕೆಗೆ 948 ರೂ. ದರ ಇದ್ದು  ಶೇ.5 ಜಿಎಸ್‍ಟಿ ಸೇರಿಸಿದಾಗ ದರ 995 ರೂ. ಆಗುತ್ತದೆ. ಭಾರತದಲ್ಲಿ ಈ ಲಸಿಕೆ ತಯಾರಾದರೆ ದರ ಮತ್ತಷ್ಟು ಇಳಿಕೆಯಾಗಲಿದೆ.

    ದೇಶದಲ್ಲಿ ಲಸಿಕೆಗೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಯನ್ನು ಮುಂದಿನ ವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು  ಕೇಂದ್ರ ಸರ್ಕಾರ ಗುರುವಾರ ತಿಳಿಸಿತ್ತು.

    ಸ್ಪುಟ್ನಿಕ್ ಲಸಿಕೆ ದ್ರವ ಮತ್ತು ಪೌಡರ್ ಎರಡೂ ರೂಪದಲ್ಲಿ ಲಭ್ಯವಿದೆ. ದ್ರವ ರೂಪದ ಲಸಿಕೆಯನ್ನು ಮೈನಸ್ 18 ಡಿಗ್ರಿ, ಪೌಡರ್ ರೂಪದ ಲಸಿಕೆಯನ್ನು 2 ಮತ್ತು 8 ಡಿಗ್ರಿಯಲ್ಲಿ ಸಂಗ್ರಹ ಮಾಡಬೇಕಾಗುತ್ತದೆ.  ಲಸಿಕೆ ತಗೆದುಕೊಂಡ 3 ವಾರದ ಒಳಗಡೆ ಮತ್ತೊಮ್ಮೆ ಈ ಲಸಿಕೆಯನ್ನು ತೆಗದುಕೊಳ್ಳಬೇಕಾಗುತ್ತದೆ.

    ಪ್ರಸ್ತುತ ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಈ ಎರಡು ಲಸಿಕೆ ಹೋಲಿಸಿದರೆ ಸ್ಪುಟ್ನಿಕ್ ಲಸಿಕೆ ಶೇ.91 ರಷ್ಟು ಪರಿಣಾಮಕಾರಿ ಎಂಬ ವರದಿ ಪ್ರಕಟವಾಗಿದೆ. ಆಕ್ಸ್ ಫರ್ಡ್ ಅಸ್ಟ್ರಾಜೆನಿಕಾ ಲಸಿಕೆಯನ್ನು ಪುಣೆಯ ಸೆರಂ ಇನ್‍ಸ್ಟಿಟ್ಯೂಟ್ ತಯಾರಿಸುತ್ತಿದ್ದರೆ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

    ಕೊರೊನಾ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು.

    2020ರ ಆಗಸ್ಟ್ ನಲ್ಲಿ ರಷ್ಯಾ ಈ ಲಸಿಕೆಯನ್ನು ಬಿಡುಗಡೆ ಮಾಡಿತ್ತು. ಕೊರೊನಾ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಿಸಲು ತಜ್ಞರ ಸಮಿತಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ  ಶಿಫಾರಸು ಮಾಡಿತ್ತು. ಇದನ್ನೂ ಓದಿ: ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್ V ಲಸಿಕೆ

    ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ  ರೆಡ್ಡೀಸ್ ಕಂಪನಿ ಜನರ ಮೇಲೆ ಪ್ರಯೋಗ ನಡೆಸಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದಿನ ರೆಡ್ಡೀಸ್ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಕಂಪನಿಗಳಲ್ಲಿ ಈಗಾಗಲೇ ತಯಾರಿಸಲಾಗುತ್ತಿದೆ. ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿರುವುದು ವಿಶೇಷ.

    ಮುಂದಿನ ದಿನಗಳಲ್ಲಿ ಜಾನ್ಸನ್ ಅಂಡ್ ಜಾನ್ಸನ್, ನೋವಾವಾಕ್ಸ್, ಜೈಡಸ್ ಕ್ಯಾಡಿಲಾ ಹಾಗೂ ಇಂಟ್ರಾನೇಸಲ್ (ಮೂಗಿನ ಮೂಲಕ ತೆಗೆದುಕೊಳ್ಳುವ) ಲಸಿಕೆಗೂ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ. ಸುಮಾರು 20 ಬೇರೆ ಬೇರೆ ಕೊರೋನಾ ಲಸಿಕೆಗಳು ದೇಶದಲ್ಲಿ ಪ್ರಯೋಗದ ವಿವಿಧ ಹಂತದಲ್ಲಿವೆ.

    ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2020ರ ಆಗಸ್ಟ್ 11 ರಂದು ಘೋಷಿಸಿದ್ದರು. ಪುಟಿನ್ ಪುತ್ರಿ ಮರಿಯಾ ಪುಟಿನ್‍ಗೆ ಮೊದಲ ಸ್ಪುಟ್ನಿಕ್ ಲಸಿಕೆ ನೀಡಲಾಗಿತ್ತು. ಉತ್ತಮ ಪರಿಣಾಮ ಬೀರಿದ್ದು, ಸಮೃದ್ಧವಾಗಿ ಆಂಟಿಬಾಡಿಗಳು(ಪ್ರತಿಕಾಯಗಳು) ಉತ್ಪತ್ತಿಯಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕನ್ನು ನಿಯಂತ್ರಣಕ್ಕೆ ಈ ಲಸಿಕೆ ತರುತ್ತದೆ ಎಂದು ವರದಿಯಾಗಿದೆ.

    ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

  • ಲಸಿಕೆ ಕೇಳಿದ್ರೆ ನೇಣು ಹಾಕಿಕೊಳ್ಬೇಕಾ ಅಂತಾರೆ, ಹಾಗಾದ್ರೆ ಜನ ನೇಣು ಹಾಕಿಕೊಳ್ಬೇಕಾ- ಡಿವಿಎಸ್‍ಗೆ ಡಿಕೆಶಿ ತಿರುಗೇಟು

    ಲಸಿಕೆ ಕೇಳಿದ್ರೆ ನೇಣು ಹಾಕಿಕೊಳ್ಬೇಕಾ ಅಂತಾರೆ, ಹಾಗಾದ್ರೆ ಜನ ನೇಣು ಹಾಕಿಕೊಳ್ಬೇಕಾ- ಡಿವಿಎಸ್‍ಗೆ ಡಿಕೆಶಿ ತಿರುಗೇಟು

    ಬೆಂಗಳೂರು: ಲಸಿಕೆ ಕೇಳಿದರೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ನೇಣುಹಾಕಿಕೊಳ್ಳಬೇಕಾ ಎಂದು ಕೇಳುತ್ತಾರೆ. ಹಾಗಾದ್ರೆ ಜನ ನೇಣು ಹಾಕಿಕೊಳ್ಳಬೇಕಾ ಹೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಸದಾನಂದಗೌಡರು ನೇಣುಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ. ಲಸಿಕೆ ಕೇಳಿದರೆ ನೇಣುಹಾಕಿಕೊಳ್ಳಬೇಕಾ ಎನ್ನುತ್ತೀರಿ. ಹಾಗಾದರೆ ಲಸಿಕೆ ಸಿಗುತ್ತಿಲ್ಲ, ಜನ ನೇಣು ಹಾಕಿಕೊಳ್ಳಬೇಕಾ. ನೀವು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾಗಿದ್ದೀರಿ. ನಿಮ್ಮನ್ನಲ್ಲದೆ ಯಾರನ್ನು ಕೇಳಬೇಕು? ಸಾವಿನ ಮೆರವಣಿಗೆ ನಡೆಯುತ್ತಿದೆ ಎಂದು ಕಿಡಿಕಾರಿದರು.

    ರೆಮ್‍ಡಿಸಿವಿರ್ ಸೇರಿದಂತೆ ವಿವಿಧ ಪರಿಕರಗಳ ಖರೀದಿಗೆ ಗ್ಲೋಬಲ್ ಟೆಂಡರ್ ಕರೆಯಲು ಮುಂದಾಗಿದ್ದೀರಿ. ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಕಮಿಷನ್ ನಡೆಯುತ್ತಿದೆ ಎಂದು ಗೊತ್ತಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ವ್ಯಾಕ್ಸಿನ್ ಬೆಲೆಗೂ, ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಬೆಲೆಗೂ ತುಂಬಾ ವ್ಯತ್ಯಾಸ ಇದೆ. ನಾವು ಸುಮ್ಮನೆ ಬಿಡುವುದಿಲ್ಲ, ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

    ನಮ್ಮ ಕ್ಷೇತ್ರಗಳ ಬೇರೆ ಕೆಲಸಗಳನ್ನು ನಿಲ್ಲಿಸಲು ಸಿದ್ಧರಿದ್ದೇವೆ. ಎಲ್ಲ ಶಾಸಕರು, ಸಂಸದರು ಸೇರಿ 100 ಕೋಟಿ ಪ್ರದೇಶಾಭಿವೃದ್ಧಿ ನಿಧಿಯನ್ನು ಕೊರೊನಾ ಲಸಿಕೆ ಕೊಳ್ಳಲು ನೀಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

    ನ್ಯಾಯಾಧೀಶರೇನು ಸರ್ವಜ್ಞರಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಮಾತನಾಡುವುದು ಸರಿಯೇ? ನಮ್ಮಲ್ಲೂ ಅನೇಕರು ಕಾನೂನು ಓದಿದವರೇ ಸಿಎಂ ಆಗಿದ್ದಾರೆ. ಕನಿಷ್ಠ ಪಕ್ಷ ಅವರ ಪಕ್ಷದವರು ಖಂಡಿಸಲಿಲ್ಲ. ಕೋರ್ಟ್ ಇರೋದು ಯಾಕೆ? ಶಾಸಕಾಂಗ, ಕಾರ್ಯಾಂಗ ತಪ್ಪು ಮಾಡಿದರೆ ನ್ಯಾಯಾಂಗವೇ ತಿದ್ದಬೇಕು ಅಲ್ಲವೇ? ಒಬ್ಬ ಬಿಜೆಪಿ ಜನರಲ್ ಸೆಕ್ರಟರಿ ನ್ಯಾಯಾಧೀಶರನ್ನೇ ಅವಹೇಳನ ಮಾಡುತ್ತಾರೆ. ಇದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಕಿಡಿಕಾರಿದರು.

    ನ್ಯಾಯಾಂಗ ವ್ಯವಸ್ಥೆಗೆ ರಾಜ್ಯ ಮಾದರಿಯಾಗಿದೆ. ಅಂತಹ ರಾಜ್ಯದವರಾದ ನೀವು, ಹೀಗೆ ಹೇಳುವ ಮೂಲಕ ನ್ಯಾಯಾಂಗದ ತೀರ್ಪನ್ನೇ ಉಲ್ಲಂಘಿಸಿದ್ದೀರಿ. ನ್ಯಾಯಾಧೀಶರನ್ನೇ ಸರ್ವಜ್ಞರಲ್ಲ ಎಂದು ಅವಹೇಳನ ಮಾಡಿದ್ದೀರಿ. ನೀವು, ನಿಮ್ಮ ಕೇಂದ್ರ ನಾಯಕರು ಇದಕ್ಕೆ ಉತ್ತರ ಕೊಡಬೇಕು. ಮಾತಿನ ಮೇಲೆ ಸೌಜನ್ಯ ಬೇಡವೇ, ನೀವು ಕಾನೂನು ಇಲಾಖೆ ಇಟ್ಟುಕೊಂಡಿರುವುದು ಯಾಕೆ? ಕ್ಯಾನ್ಸಲ್ ಮಾಡಿಬಿಡಿ. ನಾಗರಿಕ ಹಕ್ಕುಗಳಿಗೆ ಕಡಿವಾಣ ಹಾಕಿದ್ದೀರಿ. ಸಂವಿಧಾನವನ್ನು ಕಾಪಾಡಲು ವಿಫಲರಾಗಿದ್ದೇವೆ, ಸಿಎಂ ಇದರ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

  • ಮೊದಲ ಡೋಸ್ ಕೋವ್ಯಾಕ್ಸಿನ್, ಎರಡನೇ ಬಾರಿ ಕೋವಿಶೀಲ್ಡ್ ತೆಗೆದುಕೊಂಡು ವೃದ್ಧ ಅಸ್ವಸ್ಥ

    ಮೊದಲ ಡೋಸ್ ಕೋವ್ಯಾಕ್ಸಿನ್, ಎರಡನೇ ಬಾರಿ ಕೋವಿಶೀಲ್ಡ್ ತೆಗೆದುಕೊಂಡು ವೃದ್ಧ ಅಸ್ವಸ್ಥ

    – ಶೀತ, ಚರ್ಮ ರೋಗದಿಂದ ಬಳಲುತ್ತಿರುವ ವೃದ್ಧ

    ಮುಂಬೈ: ಎರಡು ವ್ಯಾಕ್ಸಿನ್‍ಗಳನ್ನು ಮಿಕ್ಸ್ ಮಾಡಬಾರದು ಎಂದು ಹಲವು ಬಾರಿ ವೈದ್ಯರು ಹೇಳಿದ್ದಾರೆ. ಆದರೂ ವೃದ್ಧ ತಮಗೆ ತಿಳಿಯದೆ ಮೊದಲ ಡೋಸ್ ಕೋವ್ಯಾಕ್ಸಿನ್ ಹಾಗೂ ಎರಡನೇ ಡೋಸ್ ಕೋವಿಶಿಲ್ಡ್ ಲಸಿಕೆ ಪಡೆದಿದ್ದು, ಇದರಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

    ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ 72 ವರ್ಷದ ದತ್ತಾತ್ರೇಯ ವಾಘಮಾರೆ ಎರಡು ಬೇರೆ ಬೇರೆ ಲಸಿಕೆಗಳನ್ನು ಪಡೆದಿದ್ದಾರೆ. ಇದರಿಂದಾಗಿ ಅನಾರೋಗ್ಯಕ್ಕೆ ಈಡಾಗಿದ್ದು, ಈ ಕುರಿತು ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಅನಿರೀಕ್ಷಿತವಾಗಿದೆ ಎಂದು ಆತಂಕಗೊಂಡಿದ್ದಾರೆ.

    ದತ್ತಾತ್ರೇಯ ಅವರು ಹತ್ತಿರದ ಗ್ರಾಮೀಣ ಆಸ್ಪತ್ರೆಯಲ್ಲಿ ಮಾರ್ಚ್ 22ರಂದು ಭಾರತ್ ಬಯೋಟೆಕ್‍ನ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಬಳಿಕ ಏಪ್ರಿಲ್ 30ರಂದು ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡಿದ್ದು, ಈ ವೇಳೆ ಕೋವ್ಯಾಕ್ಸಿನ್ ಬದಲಿಗೆ ಸೇರಂ ಇನ್‍ಸ್ಟಿಟಿಟ್ಯೂಟ್‍ನ ಕೋವಿಶೀಲ್ಡ್ ಹಾಕಿಸಿಕೊಂಡಿದ್ದಾರೆ. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

    ಈ ಕುರಿತು ದತ್ತಾತ್ರೇಯ ಅವರ ಪುತ್ರ ದಿಗಂಬರ್ ಮಾತನಾಡಿ, ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ನಮ್ಮ ತಂದೆಗೆ ಸಣ್ಣ ಪ್ರಮಾಣದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಜ್ವರ, ಚರ್ಮ ರೋಗ ಸೇರಿದಂತೆ ವಿವಿಧ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

    ಪಾರ್ಟೂರಿನ ಸ್ಟೇಟ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿಯಾಗಿದೆ. ಕೆಲವು ದಿನಗಳ ಹಿಂದೆ ಎರಡು ವ್ಯಾಕ್ಸಿನ್ ಸರ್ಟಿಫಿಕೇಟ್ ಗಮನಿಸಿದಾಗ ಬೇರೆ ಬೇರೆ ಲಸಿಕೆ ಪಡೆದಿರುವುದು ಗಮನಕ್ಕೆ ಬಂದಿದೆ. ಮೊದಲ ಡೋಸ್ ಸರ್ಟಿಫಿಕೇಟ್‍ನಲ್ಲಿ ಕೋವ್ಯಾಕ್ಸಿನ್, ಎರಡನೇ ಡೋಸ್ ವ್ಯಾಕ್ಸಿನ್ ಸರ್ಟಿಫಿಕೇಟ್‍ನಲ್ಲಿ ಕೋವಿಶೀಲ್ಡ್ ಎಂದು ನಮೂದಿಸಲಾಗಿದೆ.

    ನಮ್ಮ ತಂದೆ ಅನಕ್ಷರಸ್ಥ, ನನಗೂ ಅಷ್ಟೇನೂ ಓದು ತಿಳಿದಿಲ್ಲ. ಈ ಹಿಂದೆ ಯಾವ ಲಸಿಕೆ ಪಡೆದಿದ್ದರು, ಅದರ ಸರ್ಟಿಫಿಕೇಟ್ ಕೇಳುವುದು, ಮೊದಲ ಡೋಸ್ ಯಾವ ಲಸಿಕೆ ಪಡೆದಿದ್ದಾರೆ ಎಂಬುದನ್ನು ಪರಿಶೀಲಿಸುವುದು ಆರೋಗ್ಯ ಸಿಬ್ಬಂದಿಯ ಕೆಲಸವಾಗಿದೆ. ತಮ್ಮ ಊರಿನಲ್ಲಿರುವ ಆರೋಗ್ಯ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ದೂರಿದ್ದಾರೆ. ಈ ಅಚಾತುರ್ಯ ಹೇಗೆ ಸಂಭವಿಸಿತು ಎಂಬುದನ್ನು ತಿಳಿಯುವ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎರಡು ಕೊರೊನಾ ವ್ಯಾಕ್ಸಿನ್ ಮಿಕ್ಸ್ ಮಾಡುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಸುಸ್ತು, ತಲೆ ನೋವು ಕಂಡುಬಂದಿರುವುದನ್ನು ಅಧ್ಯಯನದಲ್ಲಿ ಗಮನಿಸಲಾಗಿದೆ ಎಂದು ಈ ಹಿಂದೆ ದಿ ಲ್ಯಾನ್ಸೆಟ್ ವರದಿ ಮಾಡಿತ್ತು.

  • ಅಮೆರಿಕದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ: ಬೈಡೆನ್

    ಅಮೆರಿಕದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ: ಬೈಡೆನ್

    ವಾಷಿಂಗ್ಟನ್: ಅಮೆರಿಕ ಅತೀ ಬೇಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಎರಡೂ ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅಲ್ಲಿನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್(ಸಿಡಿಸಿ) ಸ್ಪಷ್ಟಪಡಿಸಿದೆ.

    ಗುರುವಾರ ಈ ಕುರಿತು ಘೋಷಣೆ ಮಾಡುತ್ತಿದ್ದಂತೆ ವೈಟ್ ಹೌಸ್‍ನ ರೋಸ್ ಗಾರ್ಡನ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾಸ್ಕ್ ಧರಿಸದೇ ಭಾಗವಹಿಸಿದ್ದಾರೆ. ಇದೊಂದು ಅದ್ಭುತ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ಅಸಮಾನ್ಯ ಸಾಧನೆಯಿಂದ ಇದು ಸಾಧ್ಯವಾಗಿದೆ, ಅತೀ ವೇಗವಾಗಿ ಅಮೆರಿಕನ್ನರಿಗೆ ನಾವು ಲಸಿಕೆ ನೀಡುತ್ತಿದ್ದೇವೆ ಎಂದು ಬೈಡೆನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಸಿಡಿಸಿಯ ಇತ್ತೀಚಿನ ಮಾರ್ಗಸೂಚಿಗಳನ್ನು ತಿಳಿಸಿರುವ ಬೈಡೆನ್, ಎರಡೂ ಡೋಸ್ ಲಸಿಕೆ ಪಡೆದವರಿಗೆ ಸೋಂಕು ತಗುಲುವುದು ವಿರಳಾತಿವಿರಳ. ಹೀಗಾಗಿ ನೀವು ಎರಡೂ ಡೋಸ್ ಲಸಿಕೆ ಪಡೆದಿದ್ದರೆ ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ ಒಂದು ಡೋಸ್ ಪಡೆದು, ಮತ್ತೊಂದು ಡೋಸ್ ಪಡೆಯಲು ಕಾಯುತ್ತಿದ್ದರೆ ಎರಡನೇ ಡೋಸ್ ಲಸಿಕೆ ಪಡೆಯುವ ವರೆಗೆ ಕಾಯಬೇಕು, ಅಲ್ಲಿಯವರೆಗೆ ಮಾಸ್ಕ್ ಧರಿಸಬೇಕು ಎಂದು ಅವರು ವಿವರಿಸಿದ್ದಾರೆ.

    ಕೇವಲ 114 ದಿನಗಳಲ್ಲಿ 250 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ. ಇದರ ಪ್ರತಿಫಲವಾಗಿ 50 ರಾಜ್ಯಗಳ ಪೈಕಿ 49 ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಏಪ್ರಿಲ್ 2020ರಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಸಾವಿನ ಪ್ರಮಾಣ ಸಹ ಶೇ.80ರಷ್ಟು ತಗ್ಗಿದೆ. ಇತರೆ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

    ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರು ಫೆಡರಲ್, ಸ್ಟೇಟ್, ಸ್ಥಳೀಯ ಅಥವಾ ಪ್ರಾದೇಶಿಕ ಕಾನೂನು, ನಿಯಮಗಳು, ಸ್ಥಳೀಯ ವ್ಯವಹಾರ ಹಾಗೂ ಕೆಲಸದ ಮಾರ್ಗಸೂಚಿಗಳು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಹೊರತುಪಡಿಸಿ ಉಳಿದೆಡೆ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ತಮ್ಮ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು ಎಂದು ಸಿಡಿಸಿ ಮಾರ್ಗಸೂಚಿಯಲ್ಲಿ ತಿಳಿಸಿದೆ.

  • ಪಾಸಿಟೀವ್ ಬಂದ 1 ಗಂಟೆಯೊಳಗೆ ಹೋಂ ಐಸೋಲೇಷನ್ ಆದವರಿಗೆ ಮೆಡಿಕಲ್ ಕಿಟ್: ಡಿಸಿಎಂ

    ಪಾಸಿಟೀವ್ ಬಂದ 1 ಗಂಟೆಯೊಳಗೆ ಹೋಂ ಐಸೋಲೇಷನ್ ಆದವರಿಗೆ ಮೆಡಿಕಲ್ ಕಿಟ್: ಡಿಸಿಎಂ

    – ಐದು ಲಕ್ಷ ಕಿಟ್ ಖರೀದಿಗೆ ಸರಕಾರ ನಿರ್ಧಾರ

    ಬೆಂಗಳೂರು: ಕೋವಿಡ್ ಸೋಂಕಿಗೆ ತುತ್ತಾದವರು ಹೋಮ್ ಐಸೋಲೇಷನ್ ಆದ ಒಂದು ಗಂಟೆಯೊಳಗೇ ಅವರ ಮನೆಗೇ ಮೆಡಿಕಲ್ ಕಿಟ್ ತಲುಪಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಿಟ್‍ಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ತಕ್ಷಣವೇ 5 ಲಕ್ಷ ಮೆಡಿಕಲ್ ಕಿಟ್‍ಗಳನ್ನು ಖರೀದಿ ಮಾಡಲು ಸರಕಾರ ನಿರ್ಧರಿಸಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಕಿಟ್ ಖರೀದಿ ಮಾಡಲಾಗುವುದು” ಎಂದರು.

    ಮನೆಗಳಲ್ಲಿಯೇ ಕ್ವಾರಂಟೈನ್ ಅಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಈ ಮೆಡಿಕಲ್ ಕಿಟ್‍ನಲ್ಲಿ ರೋಗ & ಸೋಂಕು ನಿರೋಧಕ ಔಷಧಗಳು, ವೈರಸ್ ನಿರೋಧಕ, ವಿಟಮಿನ್ ಟ್ಯಾಬ್ಲೆಟ್ ಸೇರಿದಂತೆ ರೋಗ ಉಲ್ಬಣವಾಗುವುದನ್ನು ತಡೆಯುವ ಎಲ್ಲ ಔಷಧಗಳೂ ಇರುತ್ತವೆ. ಜತೆಗೆ, ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾಗಿರುವ ‘ಕಾಲ್ಟಿಸಿನ್’ ಮಾತ್ರೆಯೂ ಇರುತ್ತದೆ. 10 ದಿನಕ್ಕೆ ಆಗುವಷ್ಟು ಔಷಧಿ ಕಿಟ್‍ನಲ್ಲಿ ಇರುತ್ತದೆ. ಜತೆಗೆ ಟೆಲಿ ಕನ್ಸಲ್‍ಟೆನ್ಸಿ ಸೌಲಭ್ಯವೂ ಇರುತ್ತದೆ ಎಂದರು ಡಿಸಿಎಂ.

    ಮೇ 15ರಿಂದ ಕ್ಷಿಪ್ರಗತಿಯಲ್ಲಿ ಹಂಚಿಕೆ
    ಈಗಾಗಲೇ ರಾಜ್ಯದೆಲ್ಲಡೆ ಈ ಕಿಟ್ ಕೊಡಲಾಗುತ್ತಿದೆ. ಆದರೆ, ತಲುಪಿಸುವುದು ಕೊಂಚ ವಿಳಂಬವಾಗುತ್ತಿತ್ತು. ಅದನ್ನು ಸರಿಪಡಿಸಲಾಗಿದೆ. ಮೇ 15ರಿಂದ ಪಾಸಿಟೀವ್ ಬಂದು ಹೋಮ್ ಐಸೋಲೇಷನ್ ಆದವರಿಗೆ ಒಂದು ಗಂಟೆಯಲ್ಲೇ ಕಿಟ್ ತಲುಪಿಸಲಾಗುವುದು. ಪ್ರತಿ ತಾಲೂಕಿನ ಆಸ್ಪತ್ರೆ, ಪ್ರಾಥಮಿಕ & ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇವು 24/7 ಲಭ್ಯ ಇರುತ್ತವೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

    ಸೋಂಕಿನ ಬಗ್ಗೆ ಜನರು ಅಸಡ್ಡೆ ಮಾಡಬಾರದು. ರೋಗ ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಪಾಸಿಟೀವ್ ಬಂದರೆ ಕ್ಷಣ ಮಾತ್ರವೂ ತಡ ಮಾಡದೇ ಚಿಕಿತ್ಸೆಯನ್ನು ಆರಂಭಿಸಬೇಕು. ಒಂದು ವೇಳೆ ತಡವಾಗಿ, ಸೋಂಕು ಎರಡನೇ ಹಂತಕ್ಕೆ ಬಂದರೆ ಆಕ್ಸಿಜನ್ ಸ್ಯಾಚುರೇಷನ್ ಕಮ್ಮಿಯಾಗುವುದು, ಉಸಿರಾಟದ ತೊಂದರೆ ಆಗುವುದು ಇತ್ಯಾದಿ ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

    ಪ್ರತಿಪಕ್ಷಗಳ ನಡೆ ಸರಿಯಲ್ಲ
    ಸೋಂಕಿನ ವಿರುದ್ಧ ಸರಕಾರ ಯುದ್ಧೋಪಾದಿಯಲ್ಲಿ ಹೋರಾಟ ನಡೆಸುತ್ತಿದೆ. ಆದರೆ, ಕಷ್ಟಕಾಲದಲ್ಲಿ ಸರಕಾರಕ್ಕೆ ಹೆಗಲು ಕೊಟ್ಟು ಕೆಲಸ ಮಾಡಬೇಕಾದ ಪ್ರತಿಪಕ್ಷಗಳು ವೃಥಾ ಆರೋಪ ಮಾಡುತ್ತಿವೆ ಎಂದು ಡಾ.ಅಶ್ವತ್ಥನಾರಾಯಣ ದೂರಿದರು.

    ಲಸಿಕೆ ಬಂದ ಹೊಸದರಲ್ಲಿ ನಮ್ಮ ಸಂಶೋಧಕರು ಅವಿಶ್ರಾಂತವಾಗಿ ಶ್ರಮಿಸಿ ಕಂಡು ಹಿಡಿದ ಲಸಿಕೆಯ ವಿರುದ್ಧವೇ ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸಿದರು. ಈಗ ನೋಡಿದರೆ, ಲಸಿಕೆ ಜಪ ಮಾಡುತ್ತಿದ್ದಾರೆ. ಕೇವಲ ರಾಜಕೀಯ ಕಾರಣಗಳಿಗಾಗಿ ಕೋವಿಡ್ ಸಂಕಷ್ಟವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಡಿಸಿಎಂ ಕಿಡಿಕಾರಿದರು.

  • ಕೊರೊನಾ ಲಸಿಕೆ ಪಡೆದ ತಲೈವಾ

    ಕೊರೊನಾ ಲಸಿಕೆ ಪಡೆದ ತಲೈವಾ

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಗುರುವಾರ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‍ನನ್ನು ಪಡೆದುಕೊಂಡಿದ್ದಾರೆ.

    ಈ ಕುರಿತಂತೆ ರಜನಿಕಾಂತ್ ಪುತ್ರಿ, ಸೌಂದರ್ಯ ರಜನಿಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ತಲೈವರ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಬನ್ನಿ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡಿ ಗೆಲವು ಸಾಧಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರಜನಿಕಾಂತ್ ಗ್ರೇ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಧರಿಸಿರುವುದನ್ನು ಕಾಣಬಹುದಾಗಿದೆ.

    ನಿರ್ದೇಶಕ ಸಿರುತೈ ಶಿವ ಆ್ಯಕ್ಷನ್ ಕಟ್ ಹೇಳುತ್ತಿರುವ ಅಣ್ಣಾತ್ತೆ ಚಿತ್ರೀಕರಣಕ್ಕಾಗಿ ಹೈದರಾಬಾದ್‍ಗೆ ತೆರಳಿದ್ದರು. ಆದರೆ ನಿನ್ನೆ ರಜನಿಕಾಂತ್ ಚೆನ್ನೈಗೆ ಹಿಂದಿರುಗಿ ಲಸಿಕೆ ಪಡೆದುಕೊಂಡಿದ್ದಾರೆ.

    ಅಣ್ಣಾತ್ತೆ ಸಿನಿಮಾದಲ್ಲಿ ರಜನಿಕಾಂತ್‍ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮೀನಾ, ಖುಷ್ಬು, ಪ್ರಕಾಶ್ ರಾಜ್ ಮತ್ತು ಕಾಣಿಸಿಕೊಂಡಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

  • ವ್ಯಾಕ್ಸಿನ್ ಲಭ್ಯತೆ ಇಲ್ಲ, ದಾಸ್ತಾನು ಇಂದಿಗೆ ಮುಗಿಯಲಿದೆ: ಗೌರವ್ ಗುಪ್ತ

    ವ್ಯಾಕ್ಸಿನ್ ಲಭ್ಯತೆ ಇಲ್ಲ, ದಾಸ್ತಾನು ಇಂದಿಗೆ ಮುಗಿಯಲಿದೆ: ಗೌರವ್ ಗುಪ್ತ

    ಬೆಂಗಳೂರು: ನಗರದಲ್ಲಿ ಕೇವಲ 40 ಸಾವಿರ ವ್ಯಾಕ್ಸಿನ್ ಡೋಸೇಜ್ ಮಾತ್ರ ಲಭ್ಯವಿದ್ದು, ಇಂದು ಮುಗಿಯಲಿದೆ. ನಾಳೆಗೆ ರಾಜ್ಯ ಸರ್ಕಾರದಿಂದ ಪೂರೈಕೆಯಾದರೆ ವ್ಯಾಕ್ಸಿನೇಷನ್ ಮುಂದುವರಿಸಲಾಗುವುದು. ಅಪಾರ್ಟ್ ಮೆಂಟ್ ಸಂಘ ಸಂಸ್ಥೆಗಳು, ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು, ಕೆಲಸದ ಜಾಗಗಳಲ್ಲಿ ನಡೆಸುತ್ತಿದ್ದ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮಗಳು ಲಸಿಕೆ ಪೂರೈಕೆಯಿಲ್ಲದೆ ಈಗಾಗಲೇ ಸ್ಥಗಿತಗೊಂಡಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

    ನಗರದ ವ್ಯಾಕ್ಸಿನ್ ದಾಸ್ತಾನು ಕೇಂದ್ರವಾದ ದಾಸಪ್ಪ ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್ ನ ಉಚಿತ ಊಟ ವಿತರಣೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಎರಡನೇ ಡೋಸ್ ಪಡೆಯುವ, 45 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಆದ್ಯತೆ ಕೊಟ್ಟು ವ್ಯಾಕ್ಸಿನ್ ನೀಡಲಾಗುತ್ತದೆ. ಎರಡನೇ ಡೋಸ್ ಸರಿಯಾದ ಸಮಯಕ್ಕೆ ಸಿಗದಿದ್ದರೆ ಮೊದಲ ಡೋಸ್ ಪಡೆದ ಪ್ರಯೋಜನವೂ ಸಿಗುವುದಿಲ್ಲ. ಹೀಗಾಗಿ 2ನೇ ಡೋಸ್‍ಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

    ನಂತರ 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಕೊಡಲಾಗುವುದು. ಕೊನೇಯದಾಗಿ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಆದರೆ 18 ವರ್ಷ ಮೇಲ್ಪಟ್ಟವರಿಗೆ ಇನ್ನು ಲಸಿಕೆ ಪೂರೈಕೆಯಾಗಿಲ್ಲ. ಆದ ನಂತರ ಕೊಡಲಾಗುವುದು ಎಂದು ಆಯುಕ್ತರು ತಿಳಿಸಿದರು.

    ನಗರದಲ್ಲಿ ಲಸಿಕೆ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಆದರೆ ಪೂರೈಕೆ ಕಡಿಮೆ ಆಗಿರುವುದರಿಂದ, ಅದಕ್ಕೆ ತಕ್ಕಂತೆ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಎಲ್ಲರೂ ಮೊದಲೇ ನೋಂದಣಿ ಮಾಡಿಕೊಂಡು, ಸಮಯ ನಿಗದಿಯಾದ ನಂತರವೇ ಲಸಿಕೆ ಕೇಂದ್ರಗಳಿಗೆ ಬರಬೇಕು. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಗುಂಪಾಗುವುದು ತಡೆಯಬಹುದು ಎಂದರು.

    ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಸಹ ಲಸಿಕೆ ಅಭಾವ ಇದೆ. ಅಲ್ಲಿಯೂ ಅಭಾವ ತಡೆಯಬೇಕಿದೆ. ಇದೀಗ ರಾಜ್ಯಕ್ಕೆ 3 ಕೋಟಿ ಲಸಿಕೆ ಅಗತ್ಯವಿದ್ದು, ಬೆಂಗಳೂರಿನ ಜನಸಂಖ್ಯೆಗೆ ಬೇಕಾದಷ್ಟು ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ನಗರದಲ್ಲಿ ಟೆಸ್ಟಿಂಗ್ ಕಿಟ್ ಹಾಗೂ ಪ್ರಾಯೋಗಾಲಯಗಳ ಯಾವುದೇ ಕೊರತೆ ಇದೆ. ಕೋವಿಡ್ ಲಕ್ಷಣ ಇರುವವರಿಗೆ, ಪ್ರಾಥಮಿಕ ಸಂಪರ್ಕಿತರನ್ನು ತಕ್ಷಣ ಟೆಸ್ಟಿಂಗ್ ಮಾಡುವಂತೆ ಸೂಚಿಸಲಾಗಿದೆ. ಟೆಸ್ಟಿಂಗ್ ಮುಂದುವರಿಸಲಾಗುತ್ತದೆ. ನಗರದಲ್ಲಿ 600 ಅಂಬುಲೆನ್ಸ್ ಗಳಿವೆ. ಇದರಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ ನ 441 ಅಂಬುಲೆನ್ಸ್ ಗಳಿವೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ದಿನಕ್ಕೆ 3 ಲಕ್ಷ ಊಟ ವಿತರಣೆ ಗುರಿ
    ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನ ಇಂದಿರಾ ಕಿಚನ್ ಗೆ ಭೇಟಿ ನೀಡಿ, ಆಹಾರ ತಯಾರಿಕೆಯನ್ನು ಮುಖ್ಯ ಆಯುಕ್ತರು ಗಮನಿಸಿದರು. ಅಡುಗೆ ಮನೆಯಲ್ಲಿ ಆಹಾರದ ರುಚಿ ನೋಡಿ, ಇದೇ ರೀತಿ ರುಚಿಯನ್ನು ನೀಡಬೇಕು. ನಗರದಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಬಡವರು, ವಲಸಿಗಲು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಒಟ್ಟು 3 ಆಹಾರ ಪೊಟ್ಟಣ ಕೊಡಲಾಗುತ್ತದೆ, ಪಡಿತರ ಚೀಟಿ ಇದ್ದರೆ ಹೆಚ್ಚೂ ಕೊಡಲಾಗುವುದು. 15 ಅಡುಗೆ ಮನೆಯಿಂದ ಆಹಾರ ಸಪ್ಲೈ ಆಗುತ್ತಿದ್ದು, ಮೂರು ಹೊತ್ತು ಊಟ, ತಿಂಡಿ ಸೇರಿ ದಿನಕ್ಕೆ 3 ಲಕ್ಷ ಕೊಡುವ ಗುರಿ ಇದೆ ಎಂದರು.

    ಚಿಕ್ಕಪೇಟೆ ವಾರ್ಡ್- 109 ಇಂದಿರಾ ಕ್ಯಾಂಟೀನ್ ಭೇಟಿ ನೀಡಿ, ಆಹಾರ ಪೊಟ್ಟಣಗಳನ್ನು ವಿತರಿಸುವುದನ್ನು ಪರಿಶೀಲಿಸಿದರು. ಗುರುತಿನ ಚೀಟಿ ತರದಿದ್ದರು ಮುಂದಿನ ಬಾರಿ ತರಲು ತಿಳಿಸಿ ಆಹಾರ ಪೊಟ್ಟಣಗಳನ್ನು ಕೊಡಲು ಸೂಚಿಸಿದರು.