Tag: ಕೊರೊನಾ ಲಸಿಕೆ

  • ಉತ್ತರ ಕನ್ನಡ ಜಿಲ್ಲೆಯಲ್ಲಿ 6,241 ವಿಕಲಚೇತನರಿಗೆ ಲಸಿಕೆ

    ಉತ್ತರ ಕನ್ನಡ ಜಿಲ್ಲೆಯಲ್ಲಿ 6,241 ವಿಕಲಚೇತನರಿಗೆ ಲಸಿಕೆ

    ಕಾರವಾರ: ಇಂದು ನಡೆದ ವಿಕಲಚೇತನರಿಗೆ ಕೋವಿಡ್ ಲಸಿಕಾ ಅಭಿಯಾನದಲ್ಲಿ ಇಂದು 18 ರಿಂದ 44 ವರ್ಷದವರೆಗಿನ ಹಾಗೂ 45 ವರ್ಷ ಮೇಲ್ಪಟ್ಟ ವಿಕಲಚೇತನರಲ್ಲಿ 4871 ವಿಕಲಚೇತನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.

    ವಿಕಲಚೇತನರಿಗೆ ಲಸಿಕೆ ಹಾಕಿಕೊಳ್ಳಲು ತೊಂದರೆ ಉಂಟಾಗದಂತೆ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಕಲಚೇತನರಿಗೆ ಎರಡು ವಾಹನದ ವ್ಯವಸ್ಥೆಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಡಿತ್ತು. ಅಂಗವಿಕಲರು ಲಸಿಕೆ ಪಡೆಯಲು ಸಹಾಯ ಬಯಸಿದ್ದಲ್ಲಿ ಮನೆಯಿಂದ ವಾಹನದ ಮೇಲೆ ತಂದು ಲಸಿಕೆ ನೀಡಲಾಯಿತು. ಇನ್ನು ಹಲವರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಂಡರು.

    ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 18 ರಿಂದ 44 ವರ್ಷ ಒಳಗಿನ 3,452 ವಿಕಲಚೇತನರು ಲಸಿಕೆ ಪಡೆದರು. ಇನ್ನು 44 ವರ್ಷ ಮೇಲ್ಪಟ್ಟ 2,789 ವಿಕಲಚೇತನರರು ಕೋವಿಡ್ ಲಸಿಕೆ ಪಡೆದುಕೊಂಡರು. ಕುಮಟಾ ತಾಲೂಕಿನ ತೊರ್ಕೆ ಗ್ರಾಮದಲ್ಲಿ ಶೇಕಡಾ 95 ಅಂಗವಿಕಲರು ಲಸಿಕೆ ಪಡೆದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13,354 ವಿಕಲಚೇತನರಲ್ಲಿ 6,241 ವಿಕಲಚೇತನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

    ಇಂದು ಜಿಲ್ಲೆಯಲ್ಲಿ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಮಹಾ ಅಭಿಯಾನ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಮಹಾ ಅಭಿಯಾನದಲ್ಲಿ ಲಸಿಕೆ ಪಡೆಯದೇ ಇರುವ ವಿಕಲಚೇತನರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ ಹೇಳಿದ್ದಾರೆ.

  • ಬೆಂಗಳೂರಲ್ಲಿ ಲಸಿಕೆ ವಿತರಣೆಯಲ್ಲೂ ಗೋಲ್ಮಾಲ್..!

    ಬೆಂಗಳೂರಲ್ಲಿ ಲಸಿಕೆ ವಿತರಣೆಯಲ್ಲೂ ಗೋಲ್ಮಾಲ್..!

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಒಂದೆಡೆ ತನ್ನ ರೌದ್ರನರ್ತನ ತೋರುತ್ತಿದ್ದರೆ, ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಲಸಿಕೆ ವಿತರಣೆಯಲ್ಲಿಯೂ ಗೋಲ್ ಮಾಲ್ ನಡೆಯುತ್ತಿದೆ.

    ಬೆಂಗಳೂರಲ್ಲಿ ಬಿಜೆಪಿ ನಾಯಕರ ಆಪ್ತರಿಗೆ ಸುಲಭದಲ್ಲಿ ಲಸಿಕೆ ಸಿಗುತ್ತಿದೆ. ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರ ಉಚಿತ ಲಸಿಕೆ ಘೋಷಿಸಿದೆ. ಈ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲೂ ರಾಜಕಾರಣ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಲಸಿಕೆ ರಾಜಕಾರಣ ಬಯಲಾಗಿದೆ. ಕೊರೊನಾ ಲಸಿಕೆಯನ್ನು ಮೊದಲು ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ವಿತರಿಸಬೇಕಿತ್ತು. ಆದರೆ ಬಿಜೆಪಿ ಕಾರ್ಯಕರ್ತರು ಮಾತ್ರ ಮೊದಲೇ ಟೋಕನ್ ಪಡೆದು ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆಗಾಗಿ ಕಾದಿದ್ದ ಬೀದಿಬದಿ ವ್ಯಾಪಾರಿಗಳು ಶಾಕ್ ಆಗಿದ್ದಾರೆ.

    ಖಾಸಗಿ ಆಸ್ಪತ್ರೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಬಿಜೆಪಿ ಕಾರ್ಯಕರ್ತರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಲಸಿಕೆ ವಿತರಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಪೂರೈಕೆದಾರರಿಗೆ ಮೀಸಲಾಗಿದ್ದ ಲಸಿಕೆಯನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗಿದೆ ಎಂದು ಬೀದಿಬದಿ ವ್ಯಾಪಾರಿಗಳು ಆರೋಪ ಮಾಡುತ್ತಿದ್ದಾರೆ.

  • ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ? – ಕೇಂದ್ರದಿಂದ ಸಿಕ್ತು ಸ್ಪಷ್ಟನೆ

    ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ? – ಕೇಂದ್ರದಿಂದ ಸಿಕ್ತು ಸ್ಪಷ್ಟನೆ

    ಬೆಂಗಳೂರು: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಬೀಳಲಿದೆ. ಹೀಗಾಗಿ ಕೂಡಲೇ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಆಗ್ರಹಕ್ಕೆ ಕೇಂದ್ರ ಸರ್ಕಾರ ಇಂದು ಸ್ಪಷ್ಟನೆ ನೀಡಿದೆ.

    ವಿಶ್ವದ ಯಾವುದೇ ದೇಶವು ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿದೆ ಎಂದು ತಿಳಿಸಿದೆ.

    ಭಾರತದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಪ್ರಯೋಗಗಳ ಆಧಾರದ ಮೇಲೆ ಸಾಕಷ್ಟು ದತ್ತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ನಮ್ಮ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು, ವಾಟ್ಸಪ್ ಗ್ರೂಪ್‍ಗಳಲ್ಲಿ ಸೃಷ್ಟಿಸಲಾಗುವ ಭೀತಿ ಮತ್ತು ಕೆಲವು ರಾಜಕಾರಣಿಗಳ ರಾಜಕೀಯ ಆಧರಿಸಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು ಎಂದಿದೆ.

    ಮೇ 18 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದರು.

    ಕೊವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ವಿವರಿಸಿದರು. ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ.  ಇದನ್ನೂ ಓದಿ : ಗರ್ಭಿಣಿಯಾದ್ರೂ ಸೋಂಕಿತರಿಗೆ ಚಿಕಿತ್ಸೆ – ಮಗುವಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ನರ್ಸ್

    5 ರಿಂದ 18 ವರ್ಷದ ಒಳಗಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಸಮಯದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಯಸ್ಕರ ಮೇಲೆ ಈ ಲಸಿಕೆಯ ಪರಿಣಾಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

    ಕೆಲವು ಷರತ್ತುಗಳನ್ನು ವಿಧಿಸಿ ಲಸಿಕೆಯ ಪ್ರಯೋಗಕ್ಕೆ ಸಿಡಿಎಸ್‍ಸಿಒಒ ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸಿನ ಹಿನ್ನೆಲೆಯಲ್ಲಿ ಮೇ 11 ರಂದು ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಕೊವಾಕ್ಸಿನ್ ಲಸಿಕೆಗೆ ಅನುಮತಿ ನೀಡಿತ್ತು.

  • ಪೆಂಟಕೋಸ್ತ್, ಸೆವೆನ್ತ್ ಡೇ ಎಡ್ವೆಂಟಿಸ್ಟ್ ಕ್ರೈಸ್ತರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

    ಪೆಂಟಕೋಸ್ತ್, ಸೆವೆನ್ತ್ ಡೇ ಎಡ್ವೆಂಟಿಸ್ಟ್ ಕ್ರೈಸ್ತರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಶೋಭಾ ಕರಂದ್ಲಾಜೆ

    ಉಡುಪಿ: ನನ್ನ ಹೇಳಿಕೆಯನ್ನು ಯಾರು ತಪ್ಪು ಗ್ರಹಿಕೆ ಮಾಡಬೇಡಿ. ಕೊರೊನಾ ವಿಚಾರದಲ್ಲಿ ಮುಖ್ಯವಾಹಿನಿಯಲ್ಲಿರುವ ಚರ್ಚ್ ಗಳು ದಾರಿ ತಪ್ಪಿಸುತ್ತಿಲ್ಲ. ಪೆಂಟಕೋಸ್ತ್ ಮತ್ತು ಸೆವೆನ್ತ್ ಡೇ ಎಡ್ವೆಂಟಿಸ್ಟ್ ಗಳು ದಾರಿ ತಪ್ಪಿಸುತ್ತಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರದಲ್ಲಿ ಮಾತನಾಡಿದ ಅವರು, ಲಸಿಕೆ ಬೇಡ, ಏಸು ಕಾಪಾಡುತ್ತಾನೆ ಎಂದು ಹೇಳಿ ಕೆಲ ಗುಂಪಿನ ಕ್ರೈಸ್ತ ಧರ್ಮಗುರುಗಳು ಜನಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ನಾನು ನನ್ನ ನಿಲುವಿನಲ್ಲಿ ಸ್ಪಷ್ಟ ಇದ್ದೇನೆ ಎಂದು ಹೇಳಿದರು.

    ಕ್ರಿಶ್ಚಿಯನ್ ಮತದ ಒಂದು ಗುಂಪು ಕೊರೊನಾ ಲಸಿಕೆಯನ್ನು ವಿರೋಧಿಸುತ್ತಿದೆ. ಆಲ್ದೂರು, ಮೂಡಿಗೆರೆಯ ಕೆಲಭಾಗದಲ್ಲಿ ವಿರೋಧಿಸಲಾಗುತ್ತಿದೆ. ಈ ಗುಂಪು ಸೌತ್ ಇಂಡಿಯನ್ ಚರ್ಚಿಗೆ ಸೇರಿದವರು ಅಲ್ಲ. ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟಂಟ್ ಬಗ್ಗೆ ನಾನು ಹೇಳುತ್ತಿಲ್ಲ. ಹೊಸದಾಗಿ ಮತಾಂತರ ಆರಂಭಿಸಿರುವ ಗುಂಪಿನಿಂದ ಅಪಪ್ರಚಾರ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    ಪರಿಶಿಷ್ಟ ಜಾತಿ ಪಂಗಡವನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಹೊಸ ಈ ಗುಂಪಿನ ಧರ್ಮಗುರುಗಳು ಲಸಿಕೆ ಪಡೆಯದಂತೆ ಸಲಹೆ ಕೊಡುತ್ತಿದ್ದಾರೆ. ಏಸು ನಿಮ್ಮನ್ನು ಗುಣಪಡಿಸುತ್ತಾನೆ ಎನ್ನುತ್ತಾರೆ. ಲಸಿಕೆ ತೆಗೆದುಕೊಳ್ಳಬೇಡಿ ಎಂದು ದಾರಿತಪ್ಪಿಸುತ್ತಿದ್ದಾರೆ ಇದು ಸರಿಯಲ್ಲ ಎಂದರು.

    ನಾನು ವಿವಾದಕ್ಕಾಗಿ ಮಾತನಾಡುತ್ತಿಲ್ಲ. ಜನರು ಜಾಗೃತಿಯಾಗಬೇಕು ಎಂದು ಮಾತನಾಡುತ್ತಿದ್ದೇನೆ. ಅನುಮಾನ ಇದ್ದರೆ ಹೋಗಿ ಅಲ್ಲಿ ಪರಿಶೀಲಿಸಿ ಎಂದು ವಿಪಕ್ಷಗಳಿಗೆ ವಿರೋಧಿಸುವವರಿಗೆ ಸವಾಲು ಎಸೆದಿದ್ದಾರೆ.

  • ಆಸ್ಪತ್ರೆ ಮುಂದೆ ‘ಲಸಿಕೆ ಇಲ್ಲ’ ನಾಮಫಲಕ- ಕಾದು ಸುಸ್ತಾಗಿ ಮನೆಗೆ ತೆರಳಿದ ಜನ

    ಆಸ್ಪತ್ರೆ ಮುಂದೆ ‘ಲಸಿಕೆ ಇಲ್ಲ’ ನಾಮಫಲಕ- ಕಾದು ಸುಸ್ತಾಗಿ ಮನೆಗೆ ತೆರಳಿದ ಜನ

    ಶಿವಮೊಗ್ಗ: ಲಸಿಕೆ ಹಾಕಿಸಿಕೊಳ್ಳಲು ಹತ್ತಾರು ಜನ ಸರತಿಯಲ್ಲಿ ನಿಂತು ಕಾಯುತ್ತಿದ್ದು, ಇನ್ನೊಂದೆಡೆ ಲಸಿಕೆ ಲಭ್ಯವಿಲ್ಲ ಎಂಬ ಬೀರ್ಡ್ ಹಾಕಲಾಗಿದೆ. ಹೀಗಾಗಿ ಜನ ಕಾದು ಸುಸ್ತಾಗಿ ಮನೆಗೆ ಮರಳುತ್ತಿದ್ದಾರೆ.

    ನಗರದ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ತರಬೇತಿ ಕಚೇರಿಯ ಲಸಿಕಾ ಕೇಂದ್ರದಲ್ಲಿ ಬೋರ್ಡ್ ಹಾಕಲಾಗಿದೆ. ಇಂದು ಲಸಿಕೆ ಲಭ್ಯವಿರುವುದಿಲ್ಲ, ಸಾರ್ವಜನಿಕರು ಸಹಕರಿಸುವಂತೆ ನಾಮಫಲಕ ಹಾಕಿದ್ದಾರೆ. ಹೀಗಾಗಿ ವ್ಯಾಕ್ಸಿನ್ ಪಡೆಯಲು ಮುಂಜಾನೆಯಿಂದ ಲಸಿಕಾ ಕೇಂದ್ರಕ್ಕೆ ಆಗಮಿಸುತ್ತಿರುವ ನಾಗರೀಕರು ಲಸಿಕೆ ಇಲ್ಲ ಎಂಬ ನಾಮಫಲಕ ನೋಡಿ ಮನೆಗೆ ವಾಪಸ್ ಹೋಗುತ್ತಿದ್ದಾರೆ.

    ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ಸಹ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಕೊರೊನಾ ವಾರಿಯರ್ಸ್ ಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಅದರಂತೆ ಲಸಿಕೆ ಪಡೆಯಲು ಸಾರ್ವಜನಿಕರು ಹಾಗೂ ವಾರಿಯರ್ಸ್ ಗಳು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಸುಸ್ತಾಗಿದ್ದರು.

  • ಬೆಂಗ್ಳೂರಲ್ಲಿ ಕೋವಿಡ್ ಲಸಿಕೆ ಕಳ್ಳಾಟ – ಲಸಿಕೆ ಪಡೆಯದೇ ಇದ್ದರೂ ಸಿಗುತ್ತೆ ಸರ್ಟಿಫಿಕೇಟ್..!

    ಬೆಂಗ್ಳೂರಲ್ಲಿ ಕೋವಿಡ್ ಲಸಿಕೆ ಕಳ್ಳಾಟ – ಲಸಿಕೆ ಪಡೆಯದೇ ಇದ್ದರೂ ಸಿಗುತ್ತೆ ಸರ್ಟಿಫಿಕೇಟ್..!

    ಬೆಂಗಳೂರು: ಮಹಾಮಾರಿ ಕೊರೊನಾ ಅಬ್ಬರದ ನಡುವೆಯೇ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಲಸಿಕೆ ಕಳ್ಳಾಟ ನಡೆಯುತ್ತಿದೆ. ಲಸಿಕೆ ಪಡೆಯದೇ ಇದ್ದರೂ ನಿಮ್ಮ ಹೆಸರಿನಲ್ಲಿ ಲಸಿಕೆ ಸರ್ಟಿಫಿಕೇಟ್ ಸಿಗುತ್ತದೆ. ಸರ್ಕಾರದ ವ್ಯಾಕ್ಸಿನ್ ಕಳ್ಳಾಟ ಪಬ್ಲಿಕ್ ಟಿವಿಯಲ್ಲಿ ಅನಾವರಣವಾಗಿದೆ.

    ಹೌದು. ಬೆಂಗಳೂರಲ್ಲಿ ಲಸಿಕೆ ಕಳ್ಳಾಟದ ಮೂರು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬಿದರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಕಳ್ಳಾಟ ನಡೆಯುತ್ತಿರುವುದು ಬಯಲಾಗಿದೆ. ಕೋವಿಡ್ ಲಸಿಕೆ ಪಡೆಯದ ರಾಮಮೂರ್ತಿ ನಗರದ ವೃದ್ಧೆಯೊಬ್ಬರಿಗೆ ಲಸಿಕೆ ಪ್ರಮಾಣ ಪತ್ರ ನೀಡಲಾಗಿದೆ.

    ಮೇ5 ಕ್ಕೆ ಮಧ್ಯಾಹ್ನ 1 ರಿಂದ 5 ಗಂಟೆವರೆಗೆ ಡೋಸ್ ಪಡೆಯಲು ಅವಧಿ ನಿಗದಿಯಾಗಿತ್ತು. ಆದರೆ ವ್ಯಾಕ್ಸಿನ್ ಶಾರ್ಟೇಜ್ ಕಾರಣ ನೀಡಿ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್ ನೀಡಿರಲಿಲ್ಲ. ಮೇ 7ಕ್ಕೆ ವ್ಯಾಕ್ಸಿನ್ ನೀಡಿರೋದಾಗಿ ಕೊವೀನ್ ಪೋರ್ಟಲ್ ನಲಲಿ ಆಪ್ ಧೃಡಕರಿಸಿದ ಆರೋಗ್ಯ ಸಿಬ್ಬಂದಿ, ಲಸಿಕೆ ನೀಡಿರೋ ವೈದ್ಯೆ ಶಿಲ್ಪಾಶ್ರೀ ಎಂದು ಸರ್ಟಿಫಿಕೇಟ್ ನಲ್ಲಿ ನಮೂದಿಸಲಾಗಿದೆ. ಈ ಮೂಲಕ ಎರಡನೇ ಡೋಸ್ ಗೆ ಹೋದ ವೃದ್ಧೆಗೆ ಮೊದಲ ಡೋಸ್ ಯಶಸ್ವಿ ಎಂದು ಎಡವಟ್ಟು ಮಾಡಲಾಗಿದೆ. ಬಳಿಕ ನ್ಯೂ ಬಾಗಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ 8 ರಂದು ಲಸಿಕೆ ಪಡೆದು ವೃದ್ಧೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಇದೇ ರೀತಿ ಬಿದರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಗದೀಶ್ ಎಂಬ ವ್ಯಕ್ತಿಗೂ ಇದೇ ಅನುಭವವಾಗಿದೆ. ಸಮಸ್ಯೆ ಬಗ್ಗೆ ಕೇಳಲು ಹೋದ್ರೆ ಆಸ್ಪತ್ರೆ ಬಳಿ ಸಿಬ್ಬಂದಿಯೇ ನಾಪತ್ತೆಯಾಗಿದ್ದಾರೆ. ಇದು ತಾಂತ್ರಿಕ ಸಮಸ್ಯೆಯೋ ಅಥವಾ ಸರ್ಕಾರದ ಕಳ್ಳಾಟವೊ ಎಂಬ ಪ್ರಶ್ನೆ ಎದ್ದಿದೆ.

    ಬೆಂಗಳೂರು ನಿವಾಸಿ ನಿವಾಸಿಯಾಗಿದ್ದ ಮಂಜುಳಾ ಎಂಬ ಮಹಿಳೆಗೂ ವ್ಯಾಕ್ಸಿನ್ ಪಡೆದಿದ್ದೀರಿ ಎಂದು ಮೆಸೇಜ್ ಬಂದಿದೆ. ಮೆಸೇಜ್ ಮಾಡಿದ ಹೆಸರುಗಳು ನಮ್ಮ ಮನೆಯಲ್ಲಿ ಯಾರಿಲ್ಲ ಎಂದು ಅವರು ತಬ್ಬಿಬ್ಬಾಗಿದ್ದಾರೆ. ಒಂದೇ ಮನೆಯಲ್ಲಿ ನಾಲ್ವರಿಗೆ ವ್ಯಾಕ್ಸಿನೇಷನ್ ಆಗಿದೆ ಅಂತ ಮೆಸೇಜ್ ನಲ್ಲಿ ತಿಳಿಸಲಾಗಿತ್ತು.

  • ಬೆಂಗಳೂರಿನ ವೈದ್ಯೆಯಿಂದ ವ್ಯಾಕ್ಸಿನ್ ಕಳ್ಳ ದಂಧೆ – ಪೊಲೀಸರ ಬಲೆಗೆ ಗ್ಯಾಂಗ್

    ಬೆಂಗಳೂರಿನ ವೈದ್ಯೆಯಿಂದ ವ್ಯಾಕ್ಸಿನ್ ಕಳ್ಳ ದಂಧೆ – ಪೊಲೀಸರ ಬಲೆಗೆ ಗ್ಯಾಂಗ್

    ಬೆಂಗಳೂರು: ಒಂದು ಕಡೆ ಲಸಿಕೆಗಾಗಿ ಜನ ಬೆಳಗ್ಗೆಯಿಂದಲೇ ಆಸ್ಪತ್ರೆ ಮುಂದೆ ಸಾಲು ನಿಂತಿದ್ದರೆ ಇನ್ನೊಂದು ಕಡೆ ಲಸಿಕೆಯನ್ನೇ ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿ ಸುಲಿಗೆಗೆ ಇಳಿದಿದ್ದಾರೆ.

    ಅನ್ನಪೂರ್ಣೇಶ್ವರಿ ನಗರ ಪೊಲೀಸರು ವೈದ್ಯೆ ಸೇರಿದಂತೆ  ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಡಾ. ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಬಂಧಿತ ಆರೋಪಿಗಳು. ಡಾ. ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು.

    ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಜನರಿಂದ ಹಣ ಪಡೆಯುವ ಮೂಲಕ ಅಕ್ರಮವಾಗಿ ಇವರು ಲಸಿಕೆಯನ್ನು ವಿತರಿಸುತ್ತಿದ್ದರು.

    ಏ.23 ರಿಂದಲೂ ತಲಾ 500 ರೂ. ಪಡೆದು ಇವರು ಲಸಿಕೆಯನ್ನು ವಿತರಿಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಆಧಾರಿಸಿ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದ ಪೊಲೀಸರು ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಮುಖ್ಯ ಕೇಂದ್ರದಿಂದ ಕಳುಹಿಸಿದ ಲಸಿಕೆಗಳು ಆಸ್ಪತ್ರೆಗಳಿಗೆ ತಲುಪುತ್ತಿಲ್ಲ. ಕಳ್ಳ ದಂಧೆಯಲ್ಲಿ ಲಸಿಕೆ ಮಾರಾಟವಾಗುತ್ತಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಈ ಆರೋಪಕ್ಕೆ ಪುಷ್ಠಿ ಎಂಬಂತೆ ಇಬ್ಬರು ಅರೆಸ್ಟ್ ಆಗಿದ್ದಾರೆ. ಈ ದಂಧೆಯಲ್ಲಿ ಮತ್ತಷ್ಟು ವೈದ್ಯರು ತೊಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

  • ಯಾವುದೇ ಪುರಾವೆಗಳಿಲ್ಲ – ರೆಮಿಡಿಸಿವಿರ್ ಔಷಧಿಯನ್ನು ಕೈಬಿಟ್ಟ ಡಬ್ಲ್ಯೂಎಚ್‍ಒ

    ಯಾವುದೇ ಪುರಾವೆಗಳಿಲ್ಲ – ರೆಮಿಡಿಸಿವಿರ್ ಔಷಧಿಯನ್ನು ಕೈಬಿಟ್ಟ ಡಬ್ಲ್ಯೂಎಚ್‍ಒ

    ಜಿನೀವಾ: ಕೋವಿಡ್ 19 ಸೋಂಕಿತರಿಗೆ ರೆಮೆಡಿಸಿವಿರ್ ಔಷಧಿ ನೀಡುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಕೈಬಿಟ್ಟಿದೆ.

    ಈ ಸಂಬಂಧ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಡಬ್ಯೂಎಚ್‍ಒ ವಕ್ತಾರ ತಾರಿಕ್ ಜಸರೆವಿಕ್, ರೆಮಿಡಿಸಿವಿರ್ ಔಷಧಿಯನ್ನು ಕೊರೊನಾಗೆ ನೀಡುವ ಔಷಧಿಗಳ ಪಟ್ಟಿಯಿಂದ ಅಮಾನತಿನಲ್ಲಿಟ್ಟಿದ್ದೇವೆ. ಅನಾರೋಗ್ಯದಲ್ಲಿರುವ ರೋಗಿಗಳ ಮೇಲೆ ಈ ಔಷಧ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.

    ಪ್ರಪಂಚಾದ್ಯಂತ ಕೊರೋನಾ 2, 3ನೇ ಅಲೆ ತಾಂಡವ ಆಡ್ತಿದೆ. ಅದರಲ್ಲೂ ಭಾರತದಲ್ಲಿ 2ನೇ ಅಲೆಯಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವಾಗ್ತಿರೋದಕ್ಕೆ ವಿಶ್ವದ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಈ ಹೊತ್ತಲ್ಲೇ, ಡೆಡ್ಲಿ ವೈರಸ್‍ನಿಂದ ಐಸಿಯು ಸೇರಿ ಜೀವನ್ಮರಣದ ಹೋರಾಟ ನಡೆಸೋ ಸೋಂಕಿತರಿಗೆ ಸಂಜೀವಿನಿ, ಲೈಫ್‍ಲೈನ್ ಅಂತಲೇ ಬಿಂಬಿತವಾಗಿದ್ದ ರೆಮ್‍ಡಿಸಿವಿರ್ ಇಂಜೆಕ್ಷನ್‍ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ) ಬ್ರೇಕ್ ಹಾಕಿದೆ. ಕರ್ನಾಟಕದಲ್ಲಿ ಕಳೆದ ತಿಂಗಳಿಂದ ರೆಮ್‍ಡಿಸಿವಿರ್ ದಂಧೆಯೇ ನಡೆದಿತ್ತು. ಆಸ್ಪತ್ರೆಗೆ ದಾಖಲಾದ ಎಲ್ಲಾ ಸೋಂಕಿತರಿಗೂ ರೆಮ್‍ಡಿಸಿವಿರ್ ಕೊಡಬೇಕು ಅನ್ನೋ ಮಟ್ಟಿಗೆ ಚರ್ಚೆ ಆಗಿತ್ತು. ಆದರೀಗ, ಡಬ್ಲ್ಯೂಎಚ್‍ಒ ಆದೇಶ ಆತಂಕ ಹೆಚ್ಚಿಸಿದೆ.

    ಸೋಂಕಿತರಿಗೆ ರೆಮ್‍ಡಿಸಿವಿರ್ ಪರಿಣಾಮಕಾರಿ ಎಂಬ ಬಗ್ಗೆ ದಾಖಲೆ ಇಲ್ಲ ಎಂದು ಡಬ್ಲ್ಯೂಎಚ್‍ಒ ತಿಳಿಸಿದೆ. ಮೊದಲಿಗೆ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲಾಗಿತ್ತು. ಬಳಿಕ ಬ್ಲಾಕ್ ಫಂಗಸ್‍ನಿಂದಾಗಿ ಸ್ಟಿರಾಯ್ಡ್ ಕಡಿಮೆ ಬಳಕೆಗೆ ಸೂಚಿಸಿದೆ. ಆದರೆ ಕೊರೊನಾಗೆ ಪರ್ಯಾಯ ಚಿಕಿತ್ಸಾ ವಿಧಾನವನ್ನು ಡಬ್ಲ್ಯೂಎಚ್‍ಓ ಸೂಚಿಸಿಲ್ಲ. ಹೀಗಾಗಿ ಕೊರೊನಾ ಸೋಂಕಿತರಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಆತಂಕ ಕಾಡುತ್ತಿದೆ. ಡಬ್ಲ್ಯೂಎಚ್‍ಓ ಸೂಚನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    ಕೊರೊನಾ ವೈರಸ್ ವಿರುದ್ಧದ ಪ್ರಗತಿ ‘ದುರ್ಬಲ’ವಾಗಿದೆ. ಹೀಗಾಗಿ ಅಂತರಾಷ್ಟ್ರೀಯ ಪ್ರಯಾಣವನ್ನು ತಪ್ಪಿಸಬೇಕು. ಆದರೆ ಕೊರೊನಾ ವಿರುದ್ಧದ ಅಧಿಕೃತ ಲಸಿಕೆಗಳು ರೂಪಾಂತರಿ ವೈರಸ್ ವಿರುದ್ಧ ಸಹ ಪರಿಣಾಮಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲುಗೆ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವ ಅವರು, ನಿರಂತರ ಹೆದರಿಕೆ ಹಾಗೂ ಹೊಸ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆಯಿಂದ ಮುಂದುವರಿಯಬೇಕು. ಅಂತರಾಷ್ಟ್ರೀಯ ಪ್ರಯಾಣ ಮಾಡುವಾಗ ಆಲೋಚಿಸಬೇಕು, ಇಲ್ಲವೇ ಸ್ಥಗಿತಗೊಳಿಸಬೇಕು. ಕೊರೊನಾ ಪ್ರಕರಣಗಳು ಹೆಚ್ಚಿರುವುದರಿಂದ ಬೇಗ ಹರಡುತ್ತದೆ ಎಂದು ಅವರು ತಿಳಿಸಿದ್ದಾರೆ.

    ಭಾರತದಲ್ಲಿರುವ ವೈರಸ್ ಬಹುಬೇಗ ಹರಡುತ್ತಿದೆ. ಡಬ್ಲ್ಯೂಎಚ್‍ಒ ಯುರೋಪ್ ಪ್ರದೇಶದ 53 ದೇಶಗಳ ಪೈಕಿ ಕನಿಷ್ಠ 26 ದೇಶಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಆದರೆ ಅಧಿಕೃತ ಲಸಿಕೆಗಳು ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಿವೆ. ಎಲ್ಲ ರೂಪಾಂತರಿ ವೈರಸ್ ವಿರುದ್ಧ ಸಹ ವ್ಯಾಕ್ಸಿನ್ ಗಳು ಪ್ರಬಲ ಪರಿಣಾಮ ಬೀರುತ್ತವೆ. ಅಲ್ಲದೆ ಸಾರ್ವಜನಿಕ ಆರೋಗ್ಯ ಹಾಗೂ ಸಾಮಾಜಿಕ ಕ್ರಮಗಳಿಂದ ಎಲ್ಲ ರೂಪಾಂತರಿ ವೈರಸ್‍ನ್ನು ನಿಯಂತ್ರಿಸಬಹುದು ಎಂದು ಕ್ಲುಗೆ ಹೇಳಿದ್ದಾರೆ.

    ಲಸಿಕೆಗಳು ಸುರಂಗದ ಕೊನೆಯಲ್ಲಿನ ಬೆಳಕಾಗಿರಬಹುದು, ಆ ಬೆಳಕಿನಿಂದ ನಾವು ಕುರುಡಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಲಸಿಕೆ ಮಹತ್ವವನ್ನು ವಿವರಿಸಿದ್ದು, ಎಲ್ಲ ರೂಪಾಂತರಿ ವೈರಸ್‍ಗಳಿಗೆ ಲಸಿಕೆಗಳು ಪರಿಣಾಮಕಾರಿ ಎಂದು ಒತ್ತಿ ಹೇಳಿದ್ದಾರೆ.

  • ಕೊರೊನಾ ಲಸಿಕೆ ಪಡೆದಂತೆ ನಟಿಸಿದ್ರಾ ನಟಿ ನಯನತಾರಾ..?

    ಕೊರೊನಾ ಲಸಿಕೆ ಪಡೆದಂತೆ ನಟಿಸಿದ್ರಾ ನಟಿ ನಯನತಾರಾ..?

    – ಅಭಿಮಾನಿಗಳು ಹೇಳೋದೇನು..?

    ಚೆನ್ನೈ: ಕಾಲಿವುಡ್ ನಟಿ ನಯನತಾರಾ ಇತ್ತೀಚೆಗಷ್ಟೇ ಕೊರೊನಾ ಲಸಿಕೆ ಪಡೆದಕೊಂಡಿದ್ದರು. ಆದರೆ ಈ ವಿಚಾರ ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನಟಿ ನಯನತಾರಾ ಲಸಿಕೆ ನೀಡುತ್ತಿದ್ದ ನರ್ಸ್ ಕೈಯಲ್ಲಿ ಸಿರಿಂಜ್ ಇಲ್ಲ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾರ್ವಜನಿಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಸೆಲೆಬ್ರಿಟಿಗಳು ಕೂಡ ಲಸಿಕೆ ಪಡೆಯುವ ಮೂಲಕ ಇನ್ನೂ ಲಸಿಕೆ ಸ್ವೀಕರಿಸದವರಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಪಡೆಯುವಂತೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.

    ಸದ್ಯ ಇತ್ತೀಚೆಗಷ್ಟೇ ಕಾಲಿವುಡ್ ನಟಿ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಹಾಗೂ ಅವರ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಕೂಡ ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಈ ಕುರಿತ ಕೆಲವು ಫೋಟೋವನ್ನು ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆಯೇ ವಿಘ್ನೇಶ್ ಶಿವನ್ ಫೋಟೋದಲ್ಲಿ ಕಾಣಿಸುತ್ತಿರುವ ಸಿರಿಂಜ್, ನಯನತಾರಾ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಅನೇಕ ಮಂದಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಈ ವಿಚಾರ ಇದೀಗ ಎಲ್ಲರಿಗೂ ಅನುಮಾನ ಮೂಡಿಸಿದೆ.

    ಆದರೆ ಈ ಎಲ್ಲದರ ಮಧ್ಯೆ ನಯನತಾರಾ ಅಭಿಮಾನಿಗಳು ಮಾತ್ರ, ಆ ಫೋಟೋವನ್ನು ಝೂಮ್ ಮಾಡಿ ನೋಡಿದಾಗ ಅದರಲ್ಲಿ ಚಿಕ್ಕ ಸೂಜಿ ಕಾಣಿಸುತ್ತಿದ್ದು, ಅದು ನರ್ಸ್ ಕೈಯಲ್ಲಿ ಅವಿತುಕೊಂಡಿದೆ. ಅಲ್ಲದೆ ವಿಘ್ನೇಶ್ ಶಿವನ್ ಫೋಟೋವನ್ನು ಮತ್ತೊಂದು ಬದಿಯಿಂದ ಕ್ಲಿಕ್ಕಿಸಿರುವ ಕಾರಣ ಸಿರಿಂಜ್ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ನಟಿ ಪರವಾಗಿ ವಾದ ಮಂಡಸಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

  • ಪಾಸಿಟಿವ್ ಬಂದ ವ್ಯಕ್ತಿ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬೇಕು

    ಪಾಸಿಟಿವ್ ಬಂದ ವ್ಯಕ್ತಿ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬೇಕು

    ನವದೆಹಲಿ: ಕೊರೊನಾ ಪಾಸಿಟಿವ್ ಬಂದ ವ್ಯಕ್ತಿ  ಮೂರು ತಿಂಗಳ ಬಳಿಕ ಲಸಿಕೆ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

    ಪಾಸಿಟಿವ್ ಬಂದ ವ್ಯಕ್ತಿಗೆ ಎಷ್ಟು ದಿನದ ಬಳಿಕ ಲಸಿಕೆ ನೀಡಬೇಕು ಎಂಬುದರ ಬಗ್ಗೆ ಹಲವು ಗೊಂದಲಗಳಿದ್ದವು. ಕೋವಿಡ್ ಲಸಿಕೆ ಹಂಚಿಕೆ ಸಂಬಂಧ ನೇಮಕವಾದ ತಜ್ಞರ ಶಿಫಾರಸಿನ ಮೇಲೆ ಸರ್ಕಾರ ಈಗ ಪಾಸಿಟಿವ್ ಬಂದ ವ್ಯಕ್ತಿ ಸೋಂಕು ಗುಣಮುಖವಾದ ಮೂರು ತಿಂಗಳ ಬಳಿಕ ಲಸಿಕೆ ಪಡೆಯಬಹುದು ಎಂದು ಹೇಳಿದೆ.

    ಯಾವುದೇ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ಕೊರೊನಾ ಪಾಸಿಟಿವ್ ಬಂದರೂ ಮೂರು ತಿಂಗಳ ಬಳಿಕ ಲಸಿಕೆ ತೆಗೆದುಕೊಳ್ಳಬೇಕು. ಇದರ ಜೊತೆಯಲ್ಲೇ ಬಾಣಂತಿಯರು ಸಹ ಕೊರೊನಾ ಲಸಿಕೆಯನ್ನು ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.

    ಕಳೆದ ವಾರ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯುವ ಅವಧಿಯನ್ನು ಸರ್ಕಾರ 12-16 ವಾರಕ್ಕೆ ವಿಸ್ತರಿಸಿತ್ತು. ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಒಂದು ಡೋಸ್ ಪಡೆದ ಬಳಿಕ 3-4 ತಿಂಗಳ ಅವಧಿಯ ಒಳಗಡೆ ಲಸಿಕೆಯನ್ನು ಪಡೆಯಬಹುದಾಗಿದೆ.

    ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ನೇಮಕಗೊಂಡ ತಜ್ಞರು ನೀಡಿದ ಶಿಫಾರಸಿನ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್ ಲಸಿಕೆಯ ಎರಡನೇ ಡೋಸ್ ಅವಧಿ ವಿಸ್ತರಣೆಯಾಗಿಲ್ಲ. ಈಗ ಇರುವಂತೆ 4-6 ವಾರಗಳ ಒಳಗೆ 2ನೇ ಡೋಸ್ ಪಡೆಯಬಹುದಾಗಿದೆ.

    ಈಗಾಗಲೇ ಕೆನಡಾ ಸೇರಿದಂತೆ ಯುರೋಪ್ ಹಲವು ರಾಷ್ಟ್ರಗಳು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅವಧಿಯನ್ನು 12-16 ವಾರಗಳಿಗೆ ವಿಸ್ತರಿಸಿದೆ. ಈ ಹಿಂದೆ 6-8 ವಾರಗಳ ಒಳಗಡೆ ಎರಡನೇ ಡೋಸ್ ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿತ್ತು. ಎರಡನೇ ಡೋಸ್ ಲಸಿಕೆ ದಿನಾಂಕ ವಿಸ್ತರಣೆಯಾದ ಬಳಿಕ ದೇಹದ ಒಳಗಡೆ ಪ್ರತಿಕಾಯ(ಆಂಟಿಬಾಡಿ) ಜಾಸ್ತಿ ವೃದ್ಧಿಯಾಗುತ್ತಿರುವುದು ಅಧ್ಯಯನದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರಗಳು ಎರಡನೇ ಡೋಸ್ ದಿನಾಂಕವನ್ನು ವಿಸ್ತರಣೆ ಮಾಡಿವೆ.