Tag: ಕೊರೊನಾ ಲಸಿಕೆ

  • ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮಮತಾ ಬ್ಯಾನರ್ಜಿ ಫೋಟೋ – ಕೆಂಡಾಮಂಡಲವಾದ ಬಿಜೆಪಿ

    ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮಮತಾ ಬ್ಯಾನರ್ಜಿ ಫೋಟೋ – ಕೆಂಡಾಮಂಡಲವಾದ ಬಿಜೆಪಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದಿಂದ ನೀಡುವ ಉಚಿತ ಕೊರೊನಾ ಲಸಿಕೆಯ ಸರ್ಟಿಫಿಕೇಟ್ ಮೇಲೆ ಸಿಎಂ ಮಮತಾ ಬ್ಯಾನರ್ಜಿ ಫೋಟೋ ಮುದ್ರಣಗೊಳ್ಳಲಿದೆ. ಟಿಎಂಸಿ ಸರ್ಕಾರದ ನಿರ್ಧಾರವನ್ನ ಬಿಜೆಪಿ ಕಟುವಾಗಿ ಟೀಕಿಸಿದೆ.

    ಕೊರೊನಾ ಲಸಿಕೆಯ ಮೂರನೇ ಹಂತದಲ್ಲಿ 18-44 ವರ್ಷದೊಳಗಿನ ಜನತೆ ಬಂಗಾಳ ಸರ್ಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. ಈ ಲಸಿಕಾರಣದ ಪ್ರಮಾಣಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರ ಫೋಟೋ ಹಾಕಲು ಸರ್ಕಾರ ತೀರ್ಮಾನಿಸಿದೆ. ಈ ಮೊದಲು ಮೊದಲ ಮತ್ತು ಎರಡನೇ ಹಂತದಲ್ಲಿ ಲಸಿಕೆ ನೀಡಿದಾಗ ಜನರಿಗೆ ನೀಡಿದ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಮುದ್ರಿಸಲಾಗಿದೆ.

    ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿಗಳ ಫೋಟೋ ಇರೋದನ್ನ ಟಿಎಂಸಿ ಖಂಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿತ್ತು. ಸರ್ಟಿಫಿಕೇಟ್ ನಲ್ಲಿ ಮೋದಿ ಅವರ ಫೋಟೋ ಹಾಕಿದ್ದು, ಚುನಾವಣೆ ನೀತಿ ಸಂಹಿತಿಯ ಉಲ್ಲಂಘನೆ ಎಂದು ಟಿಎಂಸಿ ಆರೋಪಿಸಿತ್ತು. ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗಾಗಿ ದೀದಿ V/s ಮೋದಿ – ಮತ್ತೆ ಕೇಂದ್ರದ ವಿರುದ್ಧ ಸಿಡಿದ ಮಮತಾ ಬ್ಯಾನರ್ಜಿ

    ಕೊರೊನಾ ವ್ಯಾಕ್ಸಿನ್ ಎಲ್ಲರಿಗೂ ಉಚಿತವಾಗಿ ಸಿಗುವಂತಾಗಬೇಕು. ಕೊರೊನಾ ಲಸಿಕೆಯ ಪ್ರಮಾಣಪತ್ರದಲ್ಲಿ ಪಿಎಂ ಮೋದಿ ಫೋಟೋ ಹಾಕಿದ್ದನ್ನು ಟೀಕಿಸಿದ್ದರು. ಆದ್ರೆ ಇದೀಗ ಮಮತಾ ಬ್ಯಾನರ್ಜಿ ಅವರ ಈ ನಡೆಯನ್ನು ಟಿಎಂಸಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯವರೇ ಇದನ್ನ ಮೊದಲು ಆರಂಭಿಸಿದ್ದು, ಅವರನ್ನ ನಾವು ಫಾಲೋ ಮಾಡಿದ್ದೇವೆ. ಬಿಜೆಪಿ ಫೋಟೋ ಹಾಕದಿದ್ರೆ ನಾವು ಹಾಕಲ್ಲ ಎಂದು ಟಿಎಂಸಿಯ ಸೌಗತ್ ರಾಯ್ ಹೇಳುತ್ತಾರೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ – ಸಿಎಂ ಮಮತಾ ಬ್ಯಾನರ್ಜಿ 9 ಪ್ರಶ್ನೆಗಳಿಗೆ ಕೇಂದ್ರದ ಉತ್ತರ

    ಕೆಂಡಾಮಂಡಲವಾದ ಬಿಜೆಪಿ: ಟಿಎಂಸಿ ಪ್ರಧಾನಿಗಳನ್ನ ಗೌರವಿಸುತ್ತಿಲ್ಲ. ಬದಲಾಗಿ ತನ್ನದೇ ಒಂದು ಪ್ರತ್ಯೇಕ ದೇಶ ಎಂಬಂತೆ ವರ್ತಿಸುತ್ತಿದೆ. ಪಶ್ಚಿಮ ಬಂಗಾಳ ಭಾರತದಲ್ಲಿ ಒಂದು ರಾಜ್ಯ ಅನ್ನೋದನ್ನ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸಮಿಕ್ ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಂದೊಂದಿನ ಭಾರತಕ್ಕೂ ಮೋದಿ ಹೆಸರಿಡಬಹುದು: ಮಮತಾ ಬ್ಯಾನರ್ಜಿ

  • ಮಂಗಳೂರಿನಲ್ಲಿ ಸುರಿವ ಮಳೆಯನ್ನು ಲೆಕ್ಕಿಸದೇ ಲಸಿಕೆಗಾಗಿ ಮುಗಿಬಿದ್ದ ಜನ

    ಮಂಗಳೂರಿನಲ್ಲಿ ಸುರಿವ ಮಳೆಯನ್ನು ಲೆಕ್ಕಿಸದೇ ಲಸಿಕೆಗಾಗಿ ಮುಗಿಬಿದ್ದ ಜನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ನಡುವೆಯೂ ಜನ ಕೊರೋನಾ ಲಸಿಕೆ ಹಾಕಲು ಮನೆಯಿಂದ ಹೊರ ಬಂದಿದ್ದಾರೆ. ಇಂದು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಆರೋಗ್ಯ ಕೇಂದ್ರ ಸೇರಿದಂತೆ ಹಲವೆಡೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರದ ಉಚಿತ ಲಸಿಕೆ ನೀಡಲಾಗುತ್ತಿದೆ.

    ನಗರ ಪ್ರದೇಶದಲ್ಲಿರುವ ಕೇಂದ್ರಗಳಲ್ಲಿ ಕೇವಲ ಆನ್ ಲೈನ್ ಮುಂಗಡ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದ್ದು, ನಗರದಿಂದ ಹೊರಗಿನೆಲ್ಲೆಡೆ ಆನ್ ಲೈನ್ ಬುಕ್ಕಿಂಗ್ ಮಾಡದವರಿಗೂ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಎಲ್ಲೆಡೆ ಮಳೆಯನ್ನು ಲೆಕ್ಕಿಸದೆ ಜನ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶ – ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

    ಜಿಲ್ಲೆಯಲ್ಲೂ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು ಸರ್ಕಾರದ ಉಚಿತ ಲಸಿಕೆ ಸಿಗದೇ ಇರುವವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

    ನಾಳೆ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದ್ದು, ಅದರ ಮೊದಲ ದಿನ ಕರಾವಳಿಯ ಹಲವೆಡೆ ಮಳೆಯಾಗಿದೆ. ಇಂದು ಕರಾವಳಿಯಲ್ಲಿ ಭಾರೀ ಮಳೆಯಾಗಲಿದ್ದು, 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಅರಬ್ಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ನಾಳೆಯವರೆಗೂ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

  • ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

    ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

    ಹಾಸನ: ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ವ್ಯಂಗ್ಯ ಮಾಡಿ ಕಿಡಿಕಾರಿದ್ದಾರೆ.

    ಹಾಸನದ ಶ್ರೀನಗರ ಬಡಾವಣೆಯಲ್ಲಿ ಪುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಅದು ಗೊತ್ತಾಗುವುದಿಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೆ. ಅದರಂತೆ ಗೊತ್ತಿಲ್ಲದವರು ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಆನ್ ಲೈನ್ ರಿಜಿಸ್ಟ್ರೇಷನ್ ನಿಲ್ಲಿಸಿದೆ ಎಂದು ದೂರಿದರು.

    ಸರ್ಕಾರದ ಬಳಿ 18 ರಿಂದ 44 ವರ್ಷದವರೆಗೆ ಯುವಕರಿಗೆ ನೀಡಲು ಯಾವ ಲಸಿಕೆಯೂ ಇಲ್ಲ. ನಮ್ಮ ಉದ್ದೇಶ ವ್ಯಾಕ್ಸಿನೇಷನ್ ನೀಡಬೇಕು. ಜನರ ಜೀವ ಉಳಿಯಬೇಕು. ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ. ಲಸಿಕೆ ಕೊಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರಿಗೂ ವ್ಯಾಕ್ಸಿನೇಷನ್ ನೀಡಿ ಎಲ್ಲರ ಜೀವ ಉಳಿಸಿ ಎಂದಿದ್ದಾರೆ. ಇದನ್ನು ಓದಿ: ಮುಳಬಾಗಿಲು ಪಟ್ಟಣದಲ್ಲಿ ಸುಸಜ್ಜಿತ ಕೋವಿಡ್ ಕೇರ್ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ

    ಕೆಲವು ಜನರಿಗೆ ಖರೀದಿ ಮಾಡಲು ಲಸಿಕೆ ಸಿಗುತ್ತದೆ. ಆದರೆ ಸರ್ಕಾರಕ್ಕೆ ಏಕೆ ಸಿಗುತ್ತಿಲ್ಲ. ಅದ್ಯಾರೋ ಸಂಸದರು 900 ರೂ. ಗೆ ಲಸಿಕೆ ಸಿಗುತ್ತೆ ಅಂತಾರೆ ಅದು ಹೇಗೆ ಎಂದು ಪರೋಕ್ಷವಾಗಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಶ್ನಿಸುತ್ತಾ, ಜನರಿಗೆ ಲಸಿಕೆ ಕೊಟ್ಟು ಒಳ್ಳೆಯ ಹೆಸರು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ತಿಳಿ ಹೇಳಿದರು.

    ರಮೇಶ್ ಜಾರಕಿಹೋಳಿ ಎಸ್‍ಐಟಿ ತನಿಖೆಗೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಿಎಂ, ಗೃಹ ಸಚಿವರು ಎರಡು ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆ ಎರಡು ಹೇಳಿಕೆಯಲ್ಲಿ ಗೊತ್ತಾಗುತ್ತಿದೆ. ಯಾವ ರೀತಿ ರಕ್ಷಣೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ನಾವು ರಾಜ್ಯಾದ್ಯಂತ ನಮ್ಮದೇ ಆದ ಹೋರಾಟ ಮಾಡುತ್ತೇವೆ. ಇದನ್ನು ಬಿಡುವುದಿಲ್ಲ. ಅಧಿಕಾರಿಗಳು ಸರ್ಕಾರದ ಮಾತು ಕೇಳಿ ಏನು ಮಾಡುತ್ತಿದ್ದಾರೆ. ನಮಗೆ ಗೊತ್ತಿದೆ ಇದರ ವಿರುದ್ದ ಹೋರಾಟದ ರೂಪುರೇಷೆ ಮಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ: ಲಾಕ್‍ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ

    ನಾನು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ರೈತರ ಕಷ್ಟ ಆಲಿಸುತ್ತಿದ್ದೇನೆ. ಇಂದು ಮಾರುಕಟ್ಟೆಗಳಲ್ಲಿ ಹೂವು ಹಣ್ಣು, ತರಕಾರಿ ಮಾರಾಟ ಮಾಡುವ ರೈತರ ಜೊತೆ ಮಾತನಾಡಲು ಬಂದಿದ್ದೆ. ಆದರೆ ಲಾಕ್ ಡೌನ್ ಇರುವುದರಿಂದ ಸಾಧ್ಯವಾಗಲಿಲ್ಲ ಮತ್ತೊಮ್ಮೆ ಬರುತ್ತೇನೆ ಎಂದರು.

  • ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾದ ಏಮ್ಸ್‌ನಲ್ಲಿ ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ಆರಂಭ

    ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ಮಕ್ಕಳ ಮೇಲೆ ಭಾರತ್ ಬಯೋಟೆಕ್ ಕಂಪನಿಯ ಕೊವಾಕ್ಸಿನ್ ಲಸಿಕೆಯ ಪ್ರಯೋಗ ಆರಂಭವಾಗಿದೆ.

    ಮೇ 18 ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ.ವಿ.ಕೆ.ಪೌಲ್, ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ 10-12 ದಿನಗಳಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದರು.

    ಕೊವಾಕ್ಸಿನ್ ಲಸಿಕೆಯನ್ನು 2ರಿಂದ 18 ವರ್ಷದವರ ಮೇಲೆ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ ಎಂದು ವಿವರಿಸಿದ್ದರು. ಭಾರತದ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ 525 ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ ನಡೆಸಲು ಸಿದ್ಧತೆ ನಡೆದಿದೆ.

    ಕೆಲವು ಷರತ್ತುಗಳನ್ನು ವಿಧಿಸಿ ಲಸಿಕೆಯ ಪ್ರಯೋಗಕ್ಕೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಶಿಫಾರಸಿನ ಹಿನ್ನೆಲೆಯಲ್ಲಿ ಮೇ 11 ರಂದು ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಡಿಸಿಜಿಐ ಕೊವಾಕ್ಸಿನ್ ಲಸಿಕೆಗೆ ಅನುಮತಿ ನೀಡಿತ್ತು. ಇದನ್ನು ಓದಿ:ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

    5 ರಿಂದ 18 ವರ್ಷದ ಒಳಗಿನವರಲ್ಲಿ ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡುವಂತೆ ಫೆಬ್ರುವರಿಯಲ್ಲಿ ಭಾರತ್ ಬಯೋಟೆಕ್ ಮನವಿ ಮಾಡಿತ್ತು. ಈ ಸಮಯದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‍ಸಿಒ) ವಯಸ್ಕರ ಮೇಲೆ ಈ ಲಸಿಕೆಯ ಪರಿಣಾಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

    ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಬೀಳಲಿದೆ. ಹೀಗಾಗಿ ಕೂಡಲೇ ಮಕ್ಕಳಿಗೆ ಲಸಿಕೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಆಗ್ರಹಕ್ಕೆ ಕೇಂದ್ರ ಸರ್ಕಾರ ಕಳೆದ ವಾರ ಸ್ಪಷ್ಟನೆ ನೀಡಿತ್ತು.

    ವಿಶ್ವದ ಯಾವುದೇ ದೇಶವು ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ. ಅಲ್ಲದೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಶಿಫಾರಸು ಮಾಡಿಲ್ಲ. ಮಕ್ಕಳಲ್ಲಿ ಲಸಿಕೆಗಳ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿದೆ ಎಂದು ತಿಳಿಸಿತ್ತು. ಇದನ್ನು ಓದಿ:ರಾಜ್ಯದಲ್ಲಿ 1 ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ: ಶಾಸಕ ಡಾ.ಅಜಯ್ ಸಿಂಗ್

    ಭಾರತದಲ್ಲಿ ಮಕ್ಕಳ ಮೇಲೆ ಶೀಘ್ರವೇ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಪ್ರಯೋಗಗಳ ಆಧಾರದ ಮೇಲೆ ಸಾಕಷ್ಟು ದತ್ತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ನಮ್ಮ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು, ವಾಟ್ಸಪ್ ಗ್ರೂಪ್‍ಗಳಲ್ಲಿ ಸೃಷ್ಟಿಸಲಾಗುವ ಭೀತಿ ಮತ್ತು ಕೆಲವು ರಾಜಕಾರಣಿಗಳ ರಾಜಕೀಯ ಆಧರಿಸಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು ಎಂದಿತ್ತು.

  • ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ನವದೆಹಲಿ: ಜುಲೈ ಮಧ್ಯ ಭಾಗ, ಆಗಸ್ಟ್ ವೇಳೆ ದಿನಕ್ಕೆ 1 ಕೋಟಿ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಜುಲೈ ಕೊನೆ ಅಥವಾ ಆಗಸ್ಟ್ ಆರಂಭದ ಹೊತ್ತಿಗೆ ಲಸಿಕೆಯ ಸಮಸ್ಯೆ ಬಗೆಹರಿಯಬಹುದು ಎಂದು ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ ತಿಳಿಸಿದ್ದಾರೆ.

    ದೇಶದಲ್ಲಿರುವ ಉತ್ಪಾದಕರು ಲಸಿಕೆ ಉತ್ಪಾದನೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಒಂದು ತಿಂಗಳ ಒಳಗಡೆ ಲಸಿಕೆ ಹಾಕಿಸಬೇಕೆಂದು ಬಯಸಿದ್ದಲ್ಲಿ ಇದು ಕೊರತೆಯಾಗಿ ಕಾಣುತ್ತದೆ. ನಮ್ಮ ಜನಸಂಖ್ಯೆ ಅಮೆರಿಕದ ಜನಸಂಖ್ಯೆಗಿಂತ 4 ಪಟ್ಟು ಜಾಸ್ತಿ ಇದೆ. ಹೀಗಾಗಿ ತಾಳ್ಮೆ ಮುಖ್ಯ ಎಂದು ಅಭಿಪ್ರಾಯಪಟ್ಟರು.

    ಇಬ್ಬರು ಕೇಂದ್ರ ಸಚಿವರು ಮತ್ತು ಕೇಂದ್ರ ಸುಪ್ರೀಂ ಕೋರ್ಟ್‍ಗೆ ನೀಡಿದ ಭರವಸೆಯನ್ನು ಉಲ್ಲೇಖಿಸಿ, ಡಿಸೆಂಬರ್ ವೇಳೆಗೆ ಇಡೀ ದೇಶಕ್ಕೆ ಲಸಿಕೆ ಹಾಕಿಸಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ : ರಾಜ್ಯದಲ್ಲಿ ಕಾಸು ಇದ್ದವರಿಗಷ್ಟೇನಾ ವ್ಯಾಕ್ಸಿನ್? – ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 2,000ವರೆಗೆ ಲಸಿಕೆ ಹಂಚಿಕೆ

    ಕಳೆದ ತಿಂಗಳು ಕೇರಳ ಹೈಕೋರ್ಟ್‍ಗೆ ಕೇಂದ್ರ ಸರ್ಕಾರ ಡಿಸೆಂಬರ್ ವೇಳೆಗೆ 200 ಕೋಟಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿತ್ತು. ದೇಶದಲ್ಲಿ ಪ್ರಸ್ತುತ ತಿಂಗಳಿಗೆ ಸುಮಾರು 8.5 ಕೋಟಿ ಡೋಸ್ ಅಥವಾ ದಿನಕ್ಕೆ ಸುಮಾರು 28.33 ಲಕ್ಷ ಲಸಿಕೆ ಉತ್ಪಾದನೆಯಾಗುತ್ತದೆ. ಜುಲೈ ವೇಳೆಗೆ ಉತ್ಪಾದನೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು, ಸ್ಪುಟ್ನಿಕ್ ವಿ ಉತ್ಪಾದನೆಯೂ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. ಇದನ್ನೂ ಓದಿ : ಹಳ್ಳಿ ಜನರಿಗೆ ಫ್ರೀ ಲಸಿಕೆ – ಮಹೇಶ್ ಬಾಬುವಿಗೆ ಅಭಿಮಾನಿಗಳಿಂದ ಮೆಚ್ಚುಗೆ

    ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ 30 ಲಕ್ಷ ಡೋಸ್‍ಗಳು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿದೆ. ಭಾರತಕ್ಕೆ ವಿದೇಶದಿಂದ ಬಂದ ಅತ್ಯಂತ ದೊಡ್ಡ ಪ್ರಮಾಣದ ಲಸಿಕೆ ಇದಾಗಿದೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ರಷ್ಯಾದ ಈ ಲಸಿಕೆಯ ವಿತರಣೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ಸಂಸ್ಥೆ ಲಸಿಕೆಯ 1.5 ಲಕ್ಷ ಡೋಸ್ ಅನ್ನು ಮೇ 1ರಂದು ಪಡೆದುಕೊಂಡಿತ್ತು.

    ದೇಶೀಯವಾಗಿಯೇ ಸ್ಪುಟ್ನಿಕ್ ಲಸಿಕೆಯ ತಯಾರಿಕೆಯು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು ಒಟ್ಟು 6 ಕಡೆಗಳಲ್ಲಿ ಲಸಿಕೆ ತಯಾರಾಗಲಿದೆ. ಧಾರವಾಡದ ಶಿಲ್ಪಾ ಬಯೊಲಜಿಕಲ್ಸ್ ನಲ್ಲಿ ಮೊದಲ 12 ತಿಂಗಳಲ್ಲಿ 5 ಕೋಟಿ ಲಸಿಕೆ ತಯಾರಿಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಡಾ. ರೆಡ್ಡೀಸ್ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ : ರಾಯಚೂರು ಮೂಲದ ಕಂಪನಿಯಿಂದ ಕೋವಿಡ್ ಲಸಿಕೆ ಉತ್ಪಾದನೆ

  • ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್ ನೀಡಲು ಚಾಲನೆ ಕೊಟ್ಟ ಡಾ.ಸಿ.ಎನ್.ಅಶ್ವತ್ಥನಾರಾಯಣ

    ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್ ನೀಡಲು ಚಾಲನೆ ಕೊಟ್ಟ ಡಾ.ಸಿ.ಎನ್.ಅಶ್ವತ್ಥನಾರಾಯಣ

    ಬೆಂಗಳೂರು: ವಿದೇಶದಲ್ಲಿ ಉದ್ಯೋಗ & ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಂಗಳವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.

    ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ಹಾಕಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು 6 ವಾರಗಳ ಅಂತರದಲ್ಲಿ ಇವರಿಗೆ ಎರಡನೇ ಡೋಸ್ ನೀಡಿ, ವ್ಯಾಕ್ಸಿನ್ ಪಡೆದಿರುವ ಬಗ್ಗೆ ಪಾಸ್ ಪೋರ್ಟ್ ನಂಬರ್ ಸಹಿತ ಸರ್ಟಿಫಿಕೇಟ್ ನೀಡಲಾಗುವುದು. ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿರುವ ಕೋವಿಶೀಲ್ಡ್ ಲಸಿಕೆಯನ್ನೇ ನೀಡಲಾಗುತ್ತಿದೆ ಎಂದು ಡಿಸಿಎಂ ಸ್ಪಷ್ಟವಾಗಿ ತಿಳಿಸಿದರು.

    ಲಸಿಕೆ ಪಡೆಯುವವರು ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಜತೆಗೆ, ವಿದೇಶದಲ್ಲಿನ ತಮ್ಮ ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆ ಹಾಜರುಪಡಿಸುವುದು ಕಡ್ಡಾಯ. ಅದೇ ಮಾರ್ಗಸೂಚಿಯಂತೆ ಇವರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಬ್ಲ್ಯಾಕ್ ಫಂಗಸ್ ಔಷಧಿ ಖರೀದಿ:
    ಬ್ಲ್ಯಾಕ್ ಫಂಗಸ್‍ಗೆ ಲೈಸೋಜೋಮಲ್ ಆಂಫೋಟೆರಿಸಿನ್- ಬಿ ಔಷಧಿಯ ಕೊರತೆ ಮಾತ್ರ ಇದೆ. ಅದಕ್ಕೆ ಪರ್ಯಾಯವಾಗಿ ಇನ್ನೂ ಪರಿಣಾಮಕಾರಿಯಾದ ಸಾಕಷ್ಟು ಔಷಧಿಗಳಿವೆ. ಆದರೆ, ಸೈಡ್ ಏಫೆಕ್ಟ್‍ಗಳಾಗುತ್ತಿವೆ ಎನ್ನುವ ಕಾರಣವೊಡ್ಡಿ ಜನರು ಇವುಗಳನ್ನು ಬಳಕೆ ಮಾಡುತ್ತಿಲ್ಲ. ಆದರೂ ಸರಕಾರಿ-ಖಾಸಗಿ ಆಸ್ಪತ್ರೆಗಳಿಗೆ ಈ ಪರ್ಯಾಯ ಔಷಧಿಗಳನ್ನೇ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಲೈಸೋಜೋಮಲ್ ಆಂಫೋಟೆರಿಸಿನ್- ಬಿ ಖರೀದಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈಗ ಒಂದು ಲಕ್ಷ ವಯಲ್ಸ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಇನ್ನೂ ಮೂರು ಲಕ್ಷ ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ. ಕಾಸೋಕೊನೋಜಲ್ ಔಷಧಿಯ 15,000 ವಯಲ್ಸ್ ಖರೀದಿಗೆ ಆದೇಶ ಕೊಡಲಾಗಿದೆ. ಇಸ್ವಕೋನೋಜಲ್ ಎಂಬ ಔಷಧಿಯ 7,000 ವಯಲ್ಸ್, ಪೊಸಕೊನೊಜಲ್ ಟ್ಯಾಬ್ಲೆಟ್ ಖರೀದಿಗೂ ಆದೇಶ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

    ಇನ್ನು ಲಾಕ್‍ಡೌನ್ ಮುಂದುವರಿಸುವ ಅಥವಾ ಸೆಮಿಲಾಕ್ ಮಾಡುವ ಬಗ್ಗೆ ತಜ್ಞರ ವರದಿ ಬಂದ ಮೇಲೆ ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಸೆಂಟ್ರಲ್ ಕಾಲೇಜು ಆವರಣದಲ್ಲಿ ಲಸಿಕೆ ನೀಡುವ ಕೆಲಸ ಮುಂದುವರಿಯಲಿದೆ. ಶಾಸಕ ಪುಟ್ಟಣ್ಣ, ಸಿಟಿ ವಿವಿ ಕುಲಪತಿ ಡಾ.ಲಿಂಗರಾಜ ಗಾಂಧಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ವಿವಿ ಕುಲಸಚಿವ ರಮೇಶ ಮತ್ತಿತರರು ಹಾಜರಿದ್ದರು.

  • ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

    ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಮಾಡುವವರಿಗೆ ವ್ಯಾಕ್ಸಿನ್: ಅಶ್ವತ್ಥನಾರಾಯಣ್

    ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡುವ ಮತ್ತು ವ್ಯಾಸಂಗ ಮಾಡುತ್ತಿರುವವರಿಗೆ ಸಿಹಿ ಸುದ್ದಿ. ಆದ್ಯತಾ ಗುಂಪಿನ ಕೋಟಾದಲ್ಲಿ ಅವರಿಗೆ ಮಂಗಳವಾರದಿಂಲೇ ಲಸಿಕೆ ನೀಡಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

    ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ ಮಂಗಳವಾರ 3 ಗಂಟೆಗೆ ಈ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುವುದು. ಅವಶ್ಯಕತೆ ಇದ್ದವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.

    ಸದ್ಯದ ಸಂದರ್ಭದಲ್ಲಿ ವಿದೇಶಕ್ಕೆ ಹೋಗಬೇಕಾದರೆ ಲಸಿಕೆ ಪಡೆಯಲೇಬೇಕು ಹಾಗೂ ಆ ಕುರಿತ ‘ಪ್ರಮಾಣ ಪತ್ರ’ವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಹೀಗಾಗಿ ವಿದೇಶದಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದಲ್ಲಿ ನಿರತರಾಗಿರುವವರಿಂದ ಲಸಿಕೆ ಬೇಡಿಕೆ ಇತ್ತು. ಈಗ ಸರ್ಕಾರ ಅವರ ಬೇಡಿಕೆಯನ್ನು ಪರಿಗಣಿಸಿದ್ದು, ಎಲ್ಲರಿಗೂ ಕೋವಿಶೀಲ್ಡ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.

    ಲಸಿಕೆ ಪಡೆಯಲು ಇಚ್ಛಿಸುವವರು ತಮ್ಮ ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಹಾಗೂ ವಿದೇಶದಲ್ಲಿನ ತಮ್ಮ ಕೆಲಸ ಅಥವಾ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೂರಕ ದಾಖಲೆಯನ್ನು ಹಾಜರುಪಡಿಸುವುದು ಕಡ್ಡಾಯ. ಅಲ್ಲದೆ, ಸದ್ಯಕ್ಕೆ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರ ಎರಡನೇ ಡೋಸ್ ಅಂತರವನ್ನು ಇವರ ಅನುಕೂಲಕ್ಕಾಗಿ 12 ವಾರಗಳಿಂದ ಒಂದು ತಿಂಗಳಕ್ಕೆ ಕುಗ್ಗಿಸಲಾಗಿದೆ. ಇದು ಇವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಮುಖ್ಯವಾಗಿ ವ್ಯಾಕ್ಸಿನ್ ನೀಡಿದ ಬಗ್ಗೆ ಇವರಿಗೆ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು. ಅದು ಎರಡನೇ ಡೋಸ್ ಪಡೆದಾಕ್ಷಣ ನೀಡಲಾಗುತ್ತದೆ ಎಂದು ಡಿಸಿಎಂ ಹೇಳಿದರು.ಇದೇ ರೀತಿ ಆಯಾ ಜಿಲ್ಲೆಗಳಲ್ಲಿ ಕೂಡ ಈ ರೀತಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

  • ಲಸಿಕೆ ವಿತರಣೆ – ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ, ಟಾಪ್ 10 ರಾಜ್ಯಗಳು ಯಾವುದು?

    ಲಸಿಕೆ ವಿತರಣೆ – ದಕ್ಷಿಣ ಭಾರತದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ, ಟಾಪ್ 10 ರಾಜ್ಯಗಳು ಯಾವುದು?

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

    ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕೇರಳ, ಆಂಧ್ರ, ತಮಿಳುನಾಡಿಗಿಂತ ಕರ್ನಾಟಕ ಮುಂದಿದೆ. ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.

    ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿ, ಲಸಿಕಾ ಅಭಿಯಾನದಲ್ಲಿ ಕರ್ನಾಟಕ ದಕ್ಷಿಣ ಭಾರತದ ನಂ .1 ರಾಜ್ಯವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆ ಚುರುಕುಗೊಳ್ಳುತ್ತಿರುವುದರಿಂದ, ಲಸಿಕಾ ಅಭಿಯಾನ ಇನ್ನಷ್ಟು ಬೇಗ ಮುನ್ನಡೆಯಲಿದೆ. ರಾಜ್ಯಕ್ಕೆ ಶನಿವಾರ 80,000 ಡೋಸ್ ಕೋವಾಕ್ಸಿನ್ ಹಾಗೂ 2,17,310 ಡೋಸ್ ಕೊವಿಶೀಲ್ಡ್ ಪೂರೈಸಿದ ಕೇಂದ್ರಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಜೂನ್‍ನಲ್ಲಿ 12 ಕೋಟಿ ಡೋಸ್ ಕೊರೊನಾ ಲಸಿಕೆ ಲಭ್ಯ- ಕೇಂದ್ರ ಆರೋಗ್ಯ ಸಚಿವಾಲಯ

    ಟಾಪ್ 10 ರಾಜ್ಯಗಳು:
    ಮಹಾರಾಷ್ಟ್ರ 2.9 ಕೋಟಿ, ಉತ್ತರ ಪ್ರದೇಶ 1.77 ಕೋಟಿ, ರಾಜಸ್ಥಾನ 1.66 ಕೋಟಿ, ಗುಜರಾತ್ 1.65 ಕೋಟಿ, ಪಶ್ಚಿಮ ಬಂಗಾಳ 1.40 ಕೋಟಿ, ಕರ್ನಾಟಕ 1.32 ಕೋಟಿ, ಮಧ್ಯಪ್ರದೇಶ 1.06 ಕೋಟಿ, ಆಂಧ್ರಪ್ರದೇಶ 94.86 ಲಕ್ಷ, ಕೇರಳ 90.56 ಲಕ್ಷ, ತಮಿಳುನಾಡು 88 ಲಕ್ಷ ಲಸಿಕೆಯನ್ನು ವಿತರಿಸಿದೆ.

    ಮೇ 30 ರಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಗಳ ಪ್ರಕಾರ ಕರ್ನಾಟಕದಲ್ಲಿ ಇಲ್ಲಿಯವರೆಗೆ 1,33,96,169 ಲಸಿಕೆಗಳನ್ನು ವಿತರಣೆ ಮಾಡಿದೆ. ಈ ಪೈಕಿ 1,06,69,784 ಮೊದಲ ಡೋಸ್ ಆಗಿದ್ದರೆ 27,26,385 ಎರಡನೇ ಡೋಸ್ ವಿತರಿಸಲಾಗಿದೆ.

    18 ರಿಂದ 44 ವರ್ಷ ಒಳಗೆ ಒಟ್ಟು 9,30,855 ಲಸಿಕೆ ನೀಡಲಾಗಿದೆ. 45 ವರ್ಷ ಮೇಲಟ್ಟವರಿಗೆ 84,14,335 ಮೊದಲ ಡೋಸ್, 20,45,079 ಎರಡನೇ ಡೋಸ್ ನೀಡಲಾಗಿದೆ.

  • ತೇಜಸ್ವಿ ಸೂರ್ಯರಿಂದ ಉಚಿತ ಕೋವಿಡ್ ಲಸಿಕಾ ಅಭಿಯಾನ – ಸಾವಿರಕ್ಕೂ ಅಧಿಕ ಆಟೋ ಚಾಲಕರಿಗೆ ಲಸಿಕೆ ಆಯೋಜನೆ

    ತೇಜಸ್ವಿ ಸೂರ್ಯರಿಂದ ಉಚಿತ ಕೋವಿಡ್ ಲಸಿಕಾ ಅಭಿಯಾನ – ಸಾವಿರಕ್ಕೂ ಅಧಿಕ ಆಟೋ ಚಾಲಕರಿಗೆ ಲಸಿಕೆ ಆಯೋಜನೆ

    ಬೆಂಗಳೂರು: 1 ಸಾವಿರಕ್ಕೂ ಅಧಿಕ ಆಟೋ ಚಾಲಕರು ಇಂದು ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯರವರು ಜಯನಗರ & ಬೊಮ್ಮನಹಳ್ಳಿಯಲ್ಲಿ ಆಯೋಜನೆಗೊಳಿಸಿದ್ದ ಒಂದು ದಿನದ ಉಚಿತ ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ಉಚಿತ ಕೋವಿಡ್ ಲಸಿಕೆ ಪಡೆದುಕೊಂಡಿರುತ್ತಾರೆ.

    ಏಕಕಾಲಕ್ಕೆ ಎರಡೂ ಸ್ಥಳಗಳಲ್ಲಿ (ಜಯನಗರದ ಶಾಲಿನಿ ಗ್ರೌಂಡ್ಸ್ & ಬೊಮ್ಮನಹಳ್ಳಿಯ ಆರ್.ಎಂ.ಆರ್ ಪಾಕ್ರ್ನಲ್ಲಿ) ಆಯೋಜಿಸಲಾಗಿದ್ದ ಲಸಿಕಾ ಅಭಿಯಾನದಲ್ಲಿ, 100ಕ್ಕೂ ಅಧಿಕ ಡಂಜೋ, ಜೊಮ್ಯಾಟೋ, ಸ್ವಿಗ್ಗಿ ಕಾರ್ಯಕರ್ತರು, ಓಲಾ & ಉಬರ್ ನ ಟ್ಯಾಕ್ಸಿ ಡ್ರೈವರ್ ಗಳು ಕೋವಿಡ್ ಲಸಿಕೆ ಪಡೆದಿದ್ದು, ಈ ಕಾರ್ಯಕ್ಕೆ ಆಕ್ಷನ್ ಕೋವಿಡ್-19 ಟೀಮ್(ಆಕ್ಟ್), Clinikk, ಯುನೈಟೆಡ್ ವೇ ಮತ್ತು ವರ್ಷನ್ 1 ಸಹಕಾರ ನೀಡಿದ್ದು ಶ್ಲಾಘನೀಯ.

    ಅಭಿಯಾನದ ಕುರಿತು ಮಾತನಾಡಿದ ಸಂಸದ ತೇಜಸ್ವೀ ಸೂರ್ಯ, “ಆಟೋ ಚಾಲಕರು ನಮ್ಮ ಸಮಾಜದ ಅತ್ಯಂತ ಆದ್ಯತಾ ವರ್ಗವಾಗಿದ್ದು, ಗರ್ಭಿಣಿಯೊಬ್ಬರ ಆಸ್ಪತ್ರೆಯ ತುರ್ತು ಭೇಟಿ ಇರಬಹುದು, ಕುಟುಂಬ ವರ್ಗದವರೊಂದಿಗೆ ಎಂ.ಜಿ ರೋಡ್ ಗೆ ವಾರಾಂತ್ಯ ಕಳೆಯಲು ತೆರಳುವುದಿರಬಹುದು, ಶಾಲೆಯಿಂದ ಮನೆಗೆ ಬರುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವುದಿರಲಿ ಆಟೋ ಡ್ರೈವರ್ ಗಳು ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯನಿರ್ವಹಿಸುತ್ತಾರೆ. ಎಂತಹ ಸನ್ನಿವೇಶದಲ್ಲೂ ಮುಂಚೂಣಿ ಕಾರ್ಯನಿರ್ವಹಿಸುವ ಆಟೋ ಚಾಲಕರನ್ನು ಆದಷ್ಟು ಶೀಘ್ರ ಲಸಿಕೆಗೆ ಒಳಪಡಿಸುವುದು ನಮ್ಮ ಕರ್ತವ್ಯವಾದ್ದರಿಂದ ಈ ಉಚಿತ ಲಸಿಕಾ ಅಭಿಯಾನವನ್ನು ಆಯೋಜನೆಗೊಳಿಸಲಾಗಿದೆ” ಎಂದು ತಿಳಿಸಿದರು.

    ಲಸಿಕಾ ಅಭಿಯಾನಕ್ಕೆ ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ತೇಜಸ್ವೀ ಸೂರ್ಯ ಜಯನಗರದ ಶಾಲಿನಿ ಗ್ರೌಂಡ್ ನಲ್ಲಿ ಚಾಲನೆ ನೀಡಿದ್ದು, ಕೇವಲ 4-5 ಗಂಟೆಗಳಲ್ಲಿಯೇ 1ಸಾವಿರಕ್ಕೂ ಅಧಿಕ ಚಾಲಕರು ಕೋವಿಡ್ ಲಸಿಕೆ ಪಡೆದಿದ್ದು ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಡೆದ ದೇಶದ ಲಸಿಕಾ ಅಭಿಯಾನಗಳಲ್ಲೊಂದಾಗಿದೆ. 80ಕ್ಕೂ ಅಧಿಕ ಸ್ವಯಂಸೇವಕರು, ನರ್ಸ್ ಗಳು, ಡಾಕ್ಟರ್ ಗಳು, ಮೇಲ್ವಿಚಾರಕರ ಉಸ್ತುವಾರಿಯಲ್ಲಿ ಅತ್ಯಂತ ಯಶಸ್ವಿಯಾಗಿ ಈ ಅಭಿಯಾನ ನಡೆದಿದ್ದು ವಿಶೇಷ. ಕೋವಿಡ್ ಲಸಿಕೆ ಪಡೆದುಕೊಂಡ ಎಲ್ಲ ಚಾಲಕರಿಗೂ ರೇಷನ್ ಕಿಟ್ ಹಾಗೂ Clinikk ವತಿಯಿಂದ 6 ತಿಂಗಳವರೆಗಿನ ಉಚಿತ ಹೆಲ್ತ್ ಕೇರ್ ಚಂದಾದರಿಕೆ ಕೂಡ ಇದೇ ಸಂದರ್ಭದಲ್ಲಿ ಒದಗಿಸಲಾಗಿದೆ.

    ಇದರೊಂದಿಗೆ ತೇಜಸ್ವೀ ಸೂರ್ಯ ರವರು, ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ನೇರವಾಗಿ ಕೋವಿಡ್ ಸೋಂಕಿತರ/ಕೋವಿಡ್ ಚಿಕಿತ್ಸೆ ಪಡೆದು ಮನೆಯಲ್ಲಿರುವ ರೋಗಿಗಳ ಮನೆಬಾಗಿಲಿಗೆ ತಲುಪಿಸುವ ‘ಎಂಪಿ ಆಕ್ಸಿಬ್ಯಾಂಕ್’ ಅನ್ನು ಸ್ಥಾಪಿಸಿದ್ದು, ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನ ನಡೆಸಿದ ಏಕೈಕ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ‘ಎಂಪಿ ಆಕ್ಸಿಬ್ಯಾಂಕ್’ ನಲ್ಲಿ 512 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳಿದ್ದು, 85 ರಿಂದ 92 ವರೆಗಿನ ಆಮ್ಲಜನಕ ಪ್ರಮಾಣ ಹೊಂದಿರುವ ಕೋವಿಡ್ ಸೋಂಕಿತರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದ್ದು, ಸಹಾಯವಾಣಿ ಸಂಖ್ಯೆ 080 6191 4960 ಗೆ ಕರೆ ಮಾಡುವ ಮೂಲಕ ಈ ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಕಳೆದ 10 ದಿನಗಳಲ್ಲಿ 500ಕ್ಕೂ ಅಧಿಕ ನಾಗರಿಕರು ಈ ಸೇವೆಯನ್ನು ಪಡೆದಿರುತ್ತಾರೆ.ಇದರೊಂದಿಗೆ ಕಂದಾಯ ಸಚಿವ ಆರ್ ಅಶೋಕ್ ರೊಂದಿಗೆ ಸಂಸದರು, ಕುಮಾರಸ್ವಾಮಿ ಲೇಔಟ್ ನಲ್ಲಿ ಟ್ರಯಾಜಿಂಗ್ ಸೆಂಟರ್ ಗೆ ಚಾಲನೆ ನೀಡಿದ್ದು, ಕೋವಿಡ್ ಗುಣಲಕ್ಷಣಗಳನ್ನು ಹೊಂದಿರುವವರು ಆಸ್ಪತ್ರೆ ಬೆಡ್ ಸಿಗುವ ತನಕವೂ ತುರ್ತು ಚಿಕಿತ್ಸೆಗೆ ಇಂತಹ ಟ್ರಯಾಜಿಂಗ್ ಸೆಂಟರ್ ಗಳಲ್ಲ, ಚಿಕಿತ್ಸೆ ಪಡೆಯಬಹುದು ಎಂದು ತೇಜಸ್ವೀ ಸೂರ್ಯ ತಿಳಿಸಿದರು.

  • ಕೋವ್ಯಾಕ್ಸಿನ್ ಸೆಕೆಂಡ್ ಡೋಸ್ ಲಸಿಕೆ ಪಡೆಯುವವರಿಗೆ ಬಿಬಿಎಂಪಿಯಿಂದ ಸಿಹಿ ಸುದ್ದಿ

    ಕೋವ್ಯಾಕ್ಸಿನ್ ಸೆಕೆಂಡ್ ಡೋಸ್ ಲಸಿಕೆ ಪಡೆಯುವವರಿಗೆ ಬಿಬಿಎಂಪಿಯಿಂದ ಸಿಹಿ ಸುದ್ದಿ

    – ಕೋವ್ಯಾಕ್ಸಿನ್ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ ಬಿಡುಗಡೆ

    ಬೆಂಗಳೂರು: ಕೋವ್ಯಾಕ್ಸಿನ್ ಲಸಿಕೆ ಬೆಂಗಳೂರಿನಲ್ಲಿ ಹಾಹಾಕಾರ ಶುರುವಾಗಿದೆ. ಅದರಲ್ಲೂ ಸೆಕೆಂಡ್ ಡೋಸ್ ಪಡೆಯುವವರಿಗೆ ಲಸಿಕೆ ಸಿಗ್ತಿಲ್ಲ. ಆದರೆ ಲಸಿಕೆ ಪಡೆಯದೇ ಇದ್ದವರಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಿಹಿ ಸುದ್ದಿ ನೀಡಿದ್ದಾರೆ. ಕೋವ್ಯಾಕ್ಸಿನ್ ಲಸಿಕೆ ಎಲ್ಲಿ ಸಿಗುತ್ತೆ ಅಂತಾ ಟ್ವಿಟ್ಟ್ ಮಾಡಿ ತಿಳಿಸಿದ್ದಾರೆ. ಬೆಂಗಳೂರಿನ 27 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತೆ ಅಂತಾ ಮಾಹಿತಿ ನೀಡಿದ್ದಾರೆ. ಕೋವ್ಯಾಕ್ಸಿನ್ ಸೆಕೆಂಡ್ ಡೋಸ್ ಪಡೆಯುವವರು ಈ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ನೇರವಾಗಿ ಲಸಿಕೆ ಪಡೆಯಬಹುದು.

    ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 27 ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಿಗಲಿದೆ. ಎಂಟು ವಲಯಗಳಲ್ಲಿ ಲಸಿಕೆ ಸಿಗುವ ಆಸ್ಪತ್ರೆಗಳ ವಿವರ ಇಲ್ಲಿದೆ.

    1. ಬೊಮ್ಮನಹಳ್ಳಿ ವ್ಯಾಪ್ತಿ
    * ಕೋಣನುಕುಂಟೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ
    * ಅರಕೆರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ

    2. ದಾಸರಹಳ್ಳಿ ವಲಯ ವ್ಯಾಪ್ತಿ
    * ನೆಲಮಹೇಶ್ವರಿ ಪಿಹೆಚ್‍ಸಿ ಸೆಂಟರ್

    3. ಬೆಂಗಳೂರು ಪೂರ್ವ ವಲಯ
    * ಸಿವಿ ರಾಮನ್ ನಗರ ಜನರಲ್ ಆಸ್ಪತ್ರೆ
    * ಗಂಗಾನಗರ ಪಿಹೆಚ್‍ಸಿ ಸೆಂಟರ್
    * ರಾಬರ್ಟ್ ಸ್ಟ್ರೀಟ್ ಪಿಹೆಚ್‍ಸಿ ಸೆಂಟರ್
    * ಕಾಚರಾಕನಹಳ್ಳಿ ಪಿಹೆಚ್‍ಸಿ ಸೆಂಟರ್
    * ಶಾಂತಲನಗರ ಯುಪಿಹೆಚ್‍ಸಿ
    * ಬೌರಿಂಗ್ ಆಸ್ಫತ್ರೆ

    4. ಮಹಾದೇವಪುರ ವಲಯ
    * ಕೆ.ನಾರಾಯಣಪುರ ಪ್ರಾಥಮಿಕ ಚಿಕಿತ್ಸಾ ಕೇಂದ್ರ
    * ದೊಡ್ಡನಕ್ಕುಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ

    5. ಆರ್.ಆರ್ ನಗರ ವಲಯ
    * ಮತ್ತಿಕೆರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರ
    * ಕೆಂಗೇರಿ ಸಿಪಿಹೆಚ್‍ಸಿ ಕೇಂದ್ರ

    6. ಬೆಂಗಳೂರು ದಕ್ಷಿಣ ವಲಯ
    * ವಿದ್ಯಾಪೀಠ ಪ್ರಾಥಮಿಕ ಚಿಕಿತ್ಸಾ ಕೇಂದ್ರ
    * ಆಡುಗೋಡಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ
    * ದಾಸಪ್ಪ ಆಸ್ಪತ್ರೆ
    * ಜಯನಗರ ಜನರಲ್ ಆಸ್ಪತ್ರೆ
    * ಬಾಪೂಜಿ ನಗರ ಪಿಹೆಚ್‍ಸಿ
    * ಕೆ.ಎಸ್ ಲೇಔಟ್ ಪಿಹೆಚ್‍ಸಿ

    7. ಬೆಂಗಳೂರು ಪಶ್ಚಿಮ ವಲಯ
    * ವಿಕ್ಟೋರಿಯಾ ಜನರಲ್ ಆಸ್ಪತ್ರೆ
    * ಕೆಸಿ ಜನರಲ್ ಆಸ್ಪತ್ರೆ
    * ಹೊಸಹಳ್ಳಿ ಯುಪಿಹೆಚ್‍ಸಿ
    * ಶಂಕರ್ ನಗರ ಯುಪಿಹೆಚ್‍ಸಿ
    * ರಾಜಾಜಿನಗರ ಯುಪಿಹೆಚ್‍ಸಿ
    * ಪಿಜಿ ಹಳ್ಳಿ ಪಿಹೆಚ್‍ಸಿ

    8. ಯಲಹಂಕ ವಲಯ
    * ತಿಂಡ್ಲು ಯುಪಿಹೆಚ್‍ಸಿ
    * ಎಂಎಸ್ ಪಾಳ್ಯ ಪಿಹೆಚ್‍ಸಿ