Tag: ಕೊರೊನಾ ಭೀತಿ

  • ಕೊರೊನಾ ಭೀತಿ ನಡುವೆ ರಕ್ತದಾನ- ದಾನಿಗಳಿಗೆ ಆರೋಗ್ಯ ಸಚಿವರಿಂದ ಮೆಚ್ಚುಗೆ

    ಕೊರೊನಾ ಭೀತಿ ನಡುವೆ ರಕ್ತದಾನ- ದಾನಿಗಳಿಗೆ ಆರೋಗ್ಯ ಸಚಿವರಿಂದ ಮೆಚ್ಚುಗೆ

    – ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ಸರ್ಕಾರಿ ನೌಕರರು

    ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಕೊರತೆ ಎದುರಾಗಿದೆ. ಲಾಕ್‍ಡೌನ್ ಹಾಗೂ ಕೊರೊನಾ ಬರುತ್ತೆ ಎಂಬ ತಪ್ಪು ಕಲ್ಪನೆಯಿಂದ ರಕ್ತದಾನಿಗಳು ರಕ್ತದಾನಕ್ಕೆ ಮುಂದೆ ಬಾರದೆ ರಕ್ತನಿಧಿ ಕೇಂದ್ರದಲ್ಲಿ ರಕ್ತ ಸಂಗ್ರಹ ಕಡಿಮೆಯಾಗಿದೆ.

    ಇದರಿಂದ ಸಿಜೇರಿಯನ್ ನಂತಹ ಪ್ರಕರಣಗಳಲ್ಲಿ ರಕ್ತ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನ ಮಾಡುವ ಮೂಲಕ ಜಿಲ್ಲಾ ಸರ್ಕಾರಿ ನೌಕರರು ಮಾನವೀಯತೆ ಮೆರೆದಿದ್ದಾರೆ. ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇರುವುದನ್ನು ಅರಿತ ಜಿಲ್ಲಾ ಸರ್ಕಾರಿ ನೌಕರರ ಸಂಘ ಇಂದು ಸ್ವಯಂಪ್ರೇರಿತ ರಕ್ತದಾನ ಆಯೋಜಿಸುವ ಮೂಲಕ ರೋಗಿಗಳ ಸಮಸ್ಯೆಗೆ ಮಿಡಿದಿದೆ.

    30ಕ್ಕೂ ಹೆಚ್ಚು ಸರ್ಕಾರಿ ನೌಕರರು ಸಂಕಷ್ಟದ ಸಮಯದಲ್ಲಿ ರಕ್ತದಾನ ಮಾಡಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಇದೆ ವೇಳೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲು ರಕ್ತದಾನ ಮಾಡಿದ ನೌಕರರಿಗೆ ಪ್ರಮಾಣ ಪತ್ರ ವಿತರಿಸಿದರಲ್ಲದೆ ನೌಕರರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ಕೊರೊನಾ ಭಯ – ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆ

    ಕೊರೊನಾ ಭಯ – ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆ

    – ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ

    ಹೈದರಾಬಾದ್: ಕೊರೊನಾ ವೈರಸ್ ಬಂದಿರಬಹುದು ಎಂಬ ಭಯದಿಂದ ಗಂಡ ಹೆಂಡತಿ ಇಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಸತೀಶ್ ಮತ್ತು ಆತನ ಪತ್ನಿ ವೀರಾ ವೆಂಕಟಾ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಸತೀಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಒಂದು ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರಿಗೂ ಆರೋಗ್ಯದ ತೊಂದರೆ ಕಾಣಿಸಿಕೊಂಡಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಗಂಡ ಹೆಂಡತಿ ಇಬ್ಬರು ತಮ್ಮ ಮನೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಅವರಿಗೆ ಡೆತ್‍ನೋಟ್ ಸಿಕ್ಕಿದೆ. ಈ ಡೆತ್‍ನೋಟ್‍ನಲ್ಲಿ ನಮಗೆ ಆರೋಗ್ಯದ ಸಮಸ್ಯೆ ಎದುರಾಗಿದೆ. ಇದರಿಂದ ಹೊರಬರಲು ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಆರೋಗ್ಯದ ಸಮಸ್ಯೆ ಮತ್ತು ಆರ್ಥಿಕ ಸ್ಥಿತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಎಂದು ಬರೆಯಲಾಗುದೆ.

    ಈ ಬಗ್ಗೆ ಮಾಹಿತಿ ನೀಡಿರುವ ಸತೀಶ್ ಮತ್ತು ವೀರಾ ವೆಂಕಟಾ ಲಕ್ಷ್ಮಿ ಸಂಬಂಧಿಕರು, ಆರೋಗ್ಯದ ಸ್ಥಿತಿ ಹದಗೆಟ್ಟ ಕಾರಣ ಇಬ್ಬರು ಆತಂಕಕ್ಕೆ ಒಳಗಾಗಿದ್ದರು. ಜೊತೆಗೆ ನಮಗೆ ಕೊರೊನಾ ಬಂದಿದೆ ಎಂಬ ಭಯವನ್ನು ಹೊಂದಿದ್ದರು. ಈ ಭಯದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮಾಡುತ್ತಿದ್ದಾರೆ.