Tag: ಕೊರೊನಾ ಪ್ರಕರಣಗಳು

  • ಪಾಸಿಟಿವಿಟಿ ರೇಟ್ ನೋಡಿಕೊಂಡು ಶಾಲೆ ನಡೆಸುವ ಬಗ್ಗೆ ತೀರ್ಮಾನ: ಬಿ ಸಿ ನಾಗೇಶ್

    ಪಾಸಿಟಿವಿಟಿ ರೇಟ್ ನೋಡಿಕೊಂಡು ಶಾಲೆ ನಡೆಸುವ ಬಗ್ಗೆ ತೀರ್ಮಾನ: ಬಿ ಸಿ ನಾಗೇಶ್

    ಬೆಂಗಳೂರು: ಕೊರೊನಾ ಪ್ರಕರಣಗಳ ವಾಸ್ತವವನ್ನು ನೋಡಿಕೊಂಡು ರಾಜ್ಯದಲ್ಲಿ ಶಾಲೆಗಳನ್ನು ನಡೆಸಲು ತೀರ್ಮಾನ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಪ್ರತಿ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಜತೆ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಕೋವಿಡ್ ಪಾಸಿಟಿವಿಟಿ ರೇಟ್‍ನಲ್ಲಿ ಮಕ್ಕಳ ಆರೋಗ್ಯ ನೋಡಿಕೊಂಡು ತೀರ್ಮಾನ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

    ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಿದ ಕಾರಣ ಸಾಕಷ್ಟು ಸಮಸ್ಯೆ ಉಂಟಾಗಿದೆ. ಆದರೂ ಕಳೆದ 4 ತಿಂಗಳಿನಿಂದ ಸತತ ಪ್ರಯತ್ನ ನಡೆಸಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶಾಲೆಗಳನ್ನು ನಡೆಸುವ ತೀರ್ಮಾನ ಇದೆ. ಆದರೆ ಕೊರೊನಾ 3ನೇ ಅಲೆಯಿಂದ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಬಾರದು. ಶಿಕ್ಷಣ ಇಲಾಖೆ 1, 2ನೇ ಅಲೆಯ ಪಾಸಿಟಿವಿಟಿ ರೇಟ್ ರಿವ್ಯೂ ಮಾಡಿದಾಗ ಸಾಕಷ್ಟು ತಾಲೂಕಿನಲ್ಲಿ ಪಾಸಿಟಿವಿಟಿ ರೇಟ್ ಕಮ್ಮಿ ಇದೆ ಎಂದು ಹೇಳಿದರು.

    117 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ಶೇ. 1ಕ್ಕಿಂತ ಕಮ್ಮಿ ಇದೆ. ಜಿಲ್ಲಾಧಿಕಾರಿಗೆ ಪಾಸಿಟಿವಿಟಿ ರೇಟ್ ನೋಡಿಕೊಂಡು, ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳನ್ನು ಬಂದ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರಿನಲ್ಲಿ 10 ಸಾವಿರ ಕೇಸ್ ಗಳಿವೆ. 10, 11, 12 ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಮಾಡಬೇಕು. ಹೀಗಾಗಿ ಎಚ್ಚರಿಕೆ ವಹಿಸಿ ಶಾಲೆ ನಡೆಸಲಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

    ಈ ತನಕ ಮಕ್ಕಳಿಗೆ ಪಾಸಿಟಿವ್ ತಗುಲಿಲ್ಲ. ಬೆಂಗಳೂರಿನಲ್ಲಿ ಜನವರಿ 19 ರ ನಂತರ 1 ರಿಂದ 9 ನೇ ತರಗತಿ ಮಕ್ಕಳಿಗೆ ರಜೆ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗುತ್ತದೆ. ನಿನ್ನೆ ತನಕ 1 ಸಾವಿರ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಈಗಾಗಲೇ ರಾಜಧಾನಿಯಲ್ಲಿ ಅತಿ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದೆ. ಬೆಳಗಾವಿ, ಮಂಗಳೂರಿನಲ್ಲೂ ಮಕ್ಕಳಿಗೆ ಕೋವಿಡ್ ತಗಲಿರುವುದು ತಿಳಿದು ಬಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ರಜೆ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇದನ್ನು ತಾಂತ್ರಿಕ ಸಲಹಾ ಸಮಿತಿ ನಿರ್ಧಾರವನ್ನು ಸರ್ಕಾರಕ್ಕೆ ತಿಳಿಸಲಿದೆ ಎಂದರು.

  • ಅತೀ ಕಡಿಮೆ ಕೊರೊನಾ ಪ್ರಕರಣ ದಾಖಲಾಗಿರುವ ರಾಜ್ಯಗಳು

    ಅತೀ ಕಡಿಮೆ ಕೊರೊನಾ ಪ್ರಕರಣ ದಾಖಲಾಗಿರುವ ರಾಜ್ಯಗಳು

    ನವದೆಹಲಿ: ಕೊರೊನಾ ಮಹಾಮಾರಿ ವಿಶ್ವಾದ್ಯಂತ ತನ್ನ ರೌದ್ರ ನರ್ತನವನ್ನು ಮುಂದುವರಿಸಿದೆ. ಅಂತೆಯೇ ದೇಶದಲ್ಲಿ ಸಹ ಹಲವು ರಾಜ್ಯಗಳಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಇದರ ನಡುವೆ ದೇಶದ ಯಾವ ರಾಜ್ಯಗಳಲ್ಲಿ ಅತೀ ಕಡಿಮೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿ ಇಲ್ಲಿದೆ.

    ದೇಶದಲ್ಲಿ ಒಂದೇ ದಿನ 92,605 ಹೊಸ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 92,605 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 54,00,620ಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ ಕೊರೊನಾಗೆ 1,133 ಮಂದಿಗೆ ಬಲಿಯಾಗಿದ್ದಾರೆ. ಒಟ್ಟು 86,752 ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಇಂತಹ ಪರಿಸ್ಥಿತಿಯಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಇನ್ನೂ ಅಷ್ಟೇನು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಪೈಕಿ ಮೀಜೋರಾಂನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಕೇವಲ 1,587 ಇದ್ದು, ಕೊರೊನಾದಿಂದ ಒಬ್ಬರೂ ಸಾವನ್ನಪ್ಪಿದ ಏಕೈಕ ರಾಜ್ಯ ಇದಾಗಿದೆ. ಭಾನುವಾರ 14 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಿಜೋರಾಂನಲ್ಲಿ ಕೇವಲ 588 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 973 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ನಗರ ಹವೇಲಿ ಹಾಗೂ ದಿಯು ದಮನ್‍ನಲ್ಲಿ ಕೇವಲ 208 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅತೀ ಕಡಿಮೆ ಕೊರೊನಾ ಸಾವು ಸಂಭವಿಸಿದ ಪೈಕಿ ಇದು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ದಾದ್ರಾ ನಗರ ಹವೇಲಿ ಹಾಗೂ ದಿಯು ದಮನ್‍ನಲ್ಲಿ ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ.

    ಕೊರೊನಾ ಸೋಂಕು ಹಾಗೂ ಅತೀ ಕಡಿಮೆ ಕೊರೊನಾ ಸಾವು ಸಂಭವಿಸಿದ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಇಲ್ಲಿ 13 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆ ಹೋಲಿಸಿದರೆ ತುಂಬಾ ವ್ಯತ್ಯಾಸವಿದ್ದು, ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. 7 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಅರುಣಾಚಲ ಪ್ರದೇಶದಲ್ಲಿ ದಾಖಲಾಗಿವೆ. ನಾಗಾಲ್ಯಾಂಡ್, ಲಡಾಖ್, ಮೀಜೋರಾಂ, ಸಿಕ್ಕಿಂ, ದಾದ್ರಾ ನಗರ ಹವೇಲಿ ಹಾಗೂ ದಿಯು ದಮನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಸಾವಿನ ಸಂಖ್ಯೆ ಕಡಿಮೆ ಇದೆ.

    ಕೊರೊನಾದಿಂದ ಅತೀ ಕಡಿಮೆ ಸಾವನ್ನಪ್ಪಿದ ರಾಜ್ಯಗಳ ಪೈಕಿ ನಾಗಾಲ್ಯಾಂಡ್ ನಾಲ್ಕನೇ ಸ್ಥಾನದಲ್ಲಿದೆ. ಈ ವರಗೆ 15 ಜನ ಮಾತ್ರ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 1,206 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಸಹ ಶೇ.76.96ರಷ್ಟಿದೆ.

    ಐದನೇ ಸ್ಥಾನವನ್ನು ಸಿಕ್ಕಿಂ ಪಡೆದಿದ್ದು, 2,342 ಕೊರೊನಾ ಪ್ರಕಣಗಳು ಪತ್ತೆಯಾಗಿವೆ. 28 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಕೇವಲ 426 ಸಕ್ರಿಯ ಪ್ರಕರಣಗಳಿವೆ. 1,891 ಜನ ಗುಣಮುಖರಾಗಿದದ್ದಾರೆ.

  • ಅಕ್ಕಿ, ಗೋಧಿ ನೀಡಿದರೆ ಸಾಕಾಗಲ್ಲ, ಅನೇಕ ಸಾಮಗ್ರಿಗಳು ಬೇಕು- ಲಕ್ಷ್ಮಿ ಹೆಬ್ಬಾಳ್ಕರ್

    ಅಕ್ಕಿ, ಗೋಧಿ ನೀಡಿದರೆ ಸಾಕಾಗಲ್ಲ, ಅನೇಕ ಸಾಮಗ್ರಿಗಳು ಬೇಕು- ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 36ಕ್ಕೆ ಏರಿಕೆಯಾಗಿದೆ. ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಳಲು ತೋಡಿಕೊಂಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಗ್ರಾಮದಲ್ಲಿ ಮೂಲಭೂತ ಸೌಕರ್ಯದ ಕೊರತೆ ಉಂಟಾಗಿದೆ. ಹಿರೇಬಾಗೇವಾಡಿ ಗ್ರಾಮ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ್ದು, ಜನರಿಗೆ ಸಮಸ್ಯೆ ಎದುರಾಗಿದೆ. ಕೇವಲ ಅಕ್ಕಿ, ಗೋಧಿಯಿಂದ ಜೀವನ ಆಗಲ್ಲ. ಅನೇಕ ಸಾಮಗ್ರಿಗಳನ್ನು ನೀಡಬೇಕು. ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕಿನ ಲಕ್ಷಣ ಇಲ್ಲ. ಆದರೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ರಾಮದಲ್ಲಿ ದೈನಂದಿನ ಜೀವನ ನಡೆಸುವುದು ಕಷ್ಟ ಆಗಿದೆ. ಜನರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿರುವುರಿಂದ ಜನರಲ್ಲಿ ಆತಂಕ ಮನೆಮಾಡಿದೆ. ನಾನೂ ನಾಲ್ಕು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದೇನೆ. ಅನೇಕ ಸಲ ಭೇಟಿ ನೀಡಿ ಸಭೆ ಮಾಡಿದ್ದೇನೆ. ಗ್ರಾಮದ ಅನಾರೋಗ್ಯ ಪೀಡಿತರು ನಿತ್ಯ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ಸಹ ಇಲ್ಲ. ಗ್ರಾಮದ ಸಮಸ್ಯೆ ಬಗೆಹರಿಸಬೇಕು ಎಂದು ಡಿಸಿ, ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ. ತಕ್ಷಣಕ್ಕೆ ಗ್ರಾಮದಲ್ಲಿ ಹಾಲು ಪೂರೈಕೆಯಾಗಬೇಕು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ ಎಂದು ಮಾಹಿತಿ ನೀಡಿದರು.

    ಕೇವಲ ಅಕ್ಕಿ, ಗೋಧಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. 600 ಜನ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವವರಿದ್ದಾರೆ. ಜಿಲ್ಲಾಧಿಕಾರಿಗಳು ಈವರೆಗೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಗ್ರಾಮದ ಮುಖಂಡರು ನಮ್ಮ ಗಮನಕ್ಕೆ ತಂದಿದ್ದಾರೆ. ಅನಾಥ ಪ್ರಜ್ಞೆ ತೊಲಗಿಸಿ, ಜನರಲ್ಲಿ ಧೈರ್ಯ ತುಂಬಬೇಕು. ತಬ್ಲಿಘಿಗಳು ಮೊದಲು ಹೊರ ಬರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಿಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ನನಗೆ ಬಂದಿರೋ ಮಾಹಿತಿ ಪ್ರಕಾರ 35 ಜನರನ್ನು ಸಾಮೂಹಿಕ ಕ್ವಾರಂಟೈನ್ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಸೋಂಕು ತೀವ್ರವಾಗಿ ಹರಿಡಿದೆ. ಆದರೆ ಈ ಆರೋಪವನ್ನು ಜಿಲ್ಲಾಧಿಕಾರಿ ತಳ್ಳಿ ಹಾಕಿದ್ದಾರೆ. ಗ್ರಾಮದಲ್ಲಿ ಶೀಘ್ರದಲ್ಲೇ ರ‍್ಯಾಪಿಡ್ ಟೆಸ್ಟ್ ನಡೆಸಬೇಕು. ಸರ್ಕಾರವೇ ಗ್ರಾಮದಲ್ಲಿ ತರಕಾರಿ, ದಿನಸಿ ಸರಬರಾಜು ಮಾಡಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.

  • ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಕೊರೊನಾ ಪ್ರಕರಣಗಳು ಪತ್ತೆ

    ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಕೊರೊನಾ ಪ್ರಕರಣಗಳು ಪತ್ತೆ

    – ದೆಹಲಿಗೆ ಹೋಗಿದ್ದ 364 ಜನರಿಗೆ ಕೊರೊನಾ ಸೋಂಕು

    ಚೆನ್ನೈ: ತಮಿಳುನಾಡಿನಲ್ಲಿ ಇಂದು ಒಂದೇ ದಿನ 102 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ತಮಿಳುನಾಡಿನ ಹೆಲ್ತ್ ಸೆಕ್ರಟರಿ ಬೀಲಾ ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.

    ಇಂದು ಕೊರೊನಾ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬೀಲಾ ರಾಜೇಶ್, ಇಂದು ಒಂದೇ ದಿನ ತಮಿಳುನಾಡಿನಲ್ಲಿ ಹೊಸ 102 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 411 ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

    ಇಂದು ತಮಿಳುನಾಡಿನಲ್ಲಿ 102 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 100 ಜನರು ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ಆಗಿದ್ದು, ಅವುಗಳಲ್ಲಿ 364 ಸೋಂಕಿತರು ದೆಹಲಿಯ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ಒಟ್ಟು 1,200 ಜನರನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರನ್ನೂ ಕ್ಯಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಬೀಲಾ ರಾಜೇಶ್ ಹೇಳಿದ್ದಾರೆ.

    ಇದಕ್ಕೂ ಮುನ್ನ ಮಾತನಾಡಿದ್ದ ತಮಿಳುನಾಡಿನ ಆರೋಗ್ಯ ಸಚಿವ ಸಿ ವಿಜಯಬಾಸ್ಕರ್, ನಮ್ಮ ರಾಜ್ಯದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಏಳು ಜನರು ಸೇರಿದಂತೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 411 ತಲುಪಿದೆ. 1,580 ಕೊರೊನಾ ವೈರಸ್ ಸೋಂಕಿತ ಮತ್ತು ಶಂಕಿತ ಜನರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದರು.

    ಇನ್ನೂ ಕೇರಳದಲ್ಲಿ ಇಂದು 9 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕಾಸರಗೋಡಿನಿಂದ 7 ಮತ್ತು ಕಣ್ಣೂರು ಮತ್ತು ತ್ರಿಶೂರ್ನಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಜಮಾತ್ ಕಾರ್ಯಕ್ರಮದಲ್ಲಿ 3 ಜನರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 295ಕ್ಕೇರಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.