Tag: ಕೊರೊನಾ ಪರೀಕ್ಷೆ

  • ಕೊರೊನಾ ಪರೀಕ್ಷೆಗೆ ಸ್ವಾಬ್ ನೀಡದಿರಲು ಕಳಸ ಜನರ ತೀರ್ಮಾನ

    ಕೊರೊನಾ ಪರೀಕ್ಷೆಗೆ ಸ್ವಾಬ್ ನೀಡದಿರಲು ಕಳಸ ಜನರ ತೀರ್ಮಾನ

    ಚಿಕ್ಕಮಗಳೂರು: ಕೊರೊನಾ ಪರೀಕ್ಷೆಗೆ ಗಂಟಲ ದ್ರವ ನೀಡಿ ಹದಿನೈದರಿಂದ ಇಪ್ಪತ್ತು ದಿನವಾದರೂ ವರದಿ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಜನ ಗಂಟಲ ದ್ರವ ನೀಡದೇ ಇರಲು ತೀರ್ಮಾನಿಸಿದ್ದಾರೆ.

    ಸ್ವಾಬ್ ನೀಡಿದ ಎರಡರಿಂದ ಮೂರು ದಿನಗಳಲ್ಲಿ ವರದಿ ನೀಡುವ ಭರವಸೆ ನೀಡಿದರೆ ಮಾತ್ರ ಪರೀಕ್ಷೆಗೆ ಮುಂದಾಗಲು ನಿರ್ಧರಿಸಿದ್ದಾರೆ. ಏಕೆಂದರೆ ಕಳಸದಲ್ಲಿ 20 ದಿನಗಳ ಹಿಂದೆ ಒಂದೇ ಕುಟುಂಬದ 14 ಜನ ಗಂಟಲ ದ್ರವ ನೀಡಿ ಕೊರೊನಾ ಪರೀಕ್ಷೆಗೆ ಮುಂದಾಗಿದ್ದರು. ಆದರೆ ಈ ಜನರಲ್ಲಿ ನಾಲ್ವರ ವರದಿ 3-4 ದಿನದಲ್ಲಿ ಬಂದಿತ್ತು. ಅವರಲ್ಲಿ ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟು ನಾಲ್ವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

    ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ದೃಢಪಟ್ಟ ಮೇಲೆ ಉಳಿದ ಹತ್ತು ಜನ ನಮಗೆ ನಮಗೆ ಸೋಂಕು ಇಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಉಳಿದ ಹತ್ತು ಜನರ ವರದಿ ನಿನ್ನೆ ಬಂದಿದ್ದು ಉಳಿದ ಹತ್ತು ಜನರಿಗೂ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದು ಕಳಸ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಕೋವಿಡ್ ವರದಿ ಇಲ್ಲದೆ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಕಾರ- ಸರ್ಕಾರಿ ವೈದ್ಯ ಸಾವು

    ಹತ್ತು ಜನ ಕಳೆದ ಹದಿನೈದು ದಿನಗಳಲ್ಲಿ ಎಲ್ಲಾ ಕಡೆ ಓಡಾಡಿರುತ್ತಾರೆ. ಅವರಿಂದ ಮತ್ತಷ್ಟು ಜನಕ್ಕೆ ಸೋಂಕು ತಗಲಬಹುದು ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಇನ್ನು ಮುಂದೆ ಗಂಟಲ ದ್ರವವನ್ನು ಪರೀಕ್ಷೆಗೆ ನೀಡದಿರಲು ಮುಂದಾಗಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿರುವ ಜನ ಸರ್ಕಾರ ಎರಡು-ಮೂರು ದಿನಗಳಲ್ಲಿ ವರದಿ ನೀಡುತ್ತೇವೆ ಎಂದರೆ ಮಾತ್ರ ಪರೀಕ್ಷೆಗೆ ಮುಂದಾಗಿ ಇಲ್ಲವಾದಲ್ಲಿ ಪರೀಕ್ಷೆಗೆ ಮುಂದಾಗಬೇಡಿ ಎಂದು ಅಭಿಯಾನ ಆರಂಭಿಸಿದ್ದಾರೆ.

    ಸ್ಥಳೀಯರಿಗೆ ವರದಿ ಬರುವುದು ತಡವಾದರೆ ಪಾಸಿಟಿವ್ ಗ್ಯಾರಂಟಿ ಎಂಬಂತಾಗಿದೆ. ಕಳಸದಲ್ಲಿ ಹತ್ತುದಿನಗಳ ಹಿಂದೆ ಸ್ವಾಬ್ ನೀಡಿದ್ದ ಪೊಲೀಸರ ವರದಿ ಕೂಡ ನಿನ್ನೆ ಬಂದಿದ್ದು ಅವರಿಗೂ ಸೋಂಕು ದೃಢಪಟ್ಟಿದೆ. ಹೀಗೆ ಹತ್ತು-ಹನ್ನೆರಡು ದಿನಗಳ ಬಳಿಕ ಪರೀಕ್ಷೆ ವರದಿ ಬರುತ್ತಿರುವುದರಿಂದ ಆತಂಕಕ್ಕೀಡಾಗಿರುವುದು ಕಳಸ ಜನ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪರೀಕ್ಷೆಗೆ ಗಂಟಲ ದ್ರವ ನೀಡದಿರಲು ಮುಂದಾಗಿದ್ದಾರೆ. ಗಂಟಲ ದ್ರವದ ವರದಿಯನ್ನು ಎರಡು ಮೂರು ದಿನಗಳ ಒಳಗಡೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

  • ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ

    ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ

    ಮಡಿಕೇರಿ: ಡೆಡ್ಲಿ ಕೊರೊನಾ ವೈರಸ್ ಬರದಂತೆ ಎಚ್ಚರಿಕೆ ವಹಿಸುವುದು ಹರಸಾಹಸ ಎನ್ನುವಂತಾಗಿದ್ದು, ಎಲ್ಲೂ ಹೋಗದೆ ಮನೆಯಲ್ಲೇ ಇದ್ದ ಎಷ್ಟೋ ಜನರಿಗೆ ಗೊತ್ತಾಗದಂತೆ ವೈರಸ್ ತಗುರಲಿದ ಉದಾಹರಣೆಗಳುನ ಸಹ ಇವೆ. ಹೀಗಾಗಿ ಮಡಿಕೇರಿಯಲ್ಲಿ ಕೆಎಸ್‍ಆರ್‍ಟಿಸಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ.

    ಪ್ರತಿ ನಿತ್ಯ ಕೊರೊನಾ ಹಾಟ್‍ಸ್ಪಾಟ್ ಬೆಂಗಳೂರಿಗೆ ಹೋಗಿ ಬರುತ್ತಿರುವವರಿಗೆ ಕೊರೊನಾ ಇದೆಯೋ ಇಲ್ಲವೋ ಎಂಬುದು ತಿಳಿಯುವುದಿಲ್ಲ. ಲಾಕ್‍ಡೌನ್ ಸಡಿಲಗೊಂಡ ಬಳಿಕ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಮಡಿಕೇರಿ ಘಟಕದಿಂದಲೂ ಹತ್ತಾರು ಬಸ್ ಗಳು ಬೆಂಗಳೂರಿಗೆ ಹೋಗಿ ಬರುತ್ತಿವೆ. ಹೀಗಾಗಿ ಕೊಡಗು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇಂದಿನಿಂದ ಕೊರೊನಾ ಚೆಕ್‍ಅಪ್ ಮಾಡಲಾಗುತ್ತಿದೆ.

    ಮಡಿಕೇರಿ ಡಿಪೋದಲ್ಲಿ 486 ಸಿಬ್ಬಂದಿ ಇದ್ದು, ಅವರೆಲ್ಲರಿಗೂ ಕೊರೊನಾ ಚೆಕ್ ಮಾಡಲಾಗುತ್ತಿದೆ. ಎಲ್ಲರ ಗಂಟಲು ದ್ರವ ಸಂಗ್ರಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಅಷ್ಟೂ ಜನರಿಗೆ ಕೊರೊನಾ ಇದೆಯೋ, ಇಲ್ಲವೋ ಎಂದು ಪರೀಕ್ಷಿಸಲಿದೆ. ಅದರಲ್ಲೂ ಡಿಪೋದ ಒಬ್ಬ ಸಿಬ್ಬಂದಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ.

    ಇವರ ವರದಿ ಇನ್ನೂ ಬರಬೇಕಿದ್ದು, ವರದಿಗಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಆತಂಕದಿಂದಲೇ ಕಾಯುತ್ತಿದ್ದಾರೆ. ಬುಧವಾರದಿಂದ ಬೆಂಗಳೂರಿಗೆ ಹೋಗಿ ಬರುತ್ತಿರುವ ಸಿಬ್ಬಂದಿ ಜೊತೆ ಸ್ಥಳೀಯ ಸಿಬ್ಬಂದಿ ಸಹ ಕೊರೊನಾ ಪರೀಕ್ಷೆಗೆ ಒಳಪಡುತ್ತಿದ್ದಾರೆ.

  • ಎಡಿಜಿಪಿ ಅಲೋಕ್ ಕುಮಾರ್‌ ಪರೀಕ್ಷಾ ವರದಿ ನೆಗೆಟಿವ್‌

    ಎಡಿಜಿಪಿ ಅಲೋಕ್ ಕುಮಾರ್‌ ಪರೀಕ್ಷಾ ವರದಿ ನೆಗೆಟಿವ್‌

    ಬೆಂಗಳೂರು: ಕೆಎಸ್ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್‌ ಅವರ ಕೋವಿಡ್‌ 19 ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

    ಕೆಎಸ್ಆರ್ ಪಿ ಪಡೆಯಲ್ಲಿ ಹಲವು ಸಿಬ್ಬಂದಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಅಲೋಕ್ ಕುಮಾರ್ ಹಲವು ಜಿಲ್ಲೆಗಳಿಗೆ ಭೇಟಿದ್ದರು.

    ಕೆಎಸ್ಆರ್‌ಪಿ ಸಿಬ್ಬಂದಿ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಇದೇ 25 ರಂದು ಮಧ್ಯಾಹ್ನ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಇಂದು ಬೆಳಗ್ಗೆ ಫಲಿತಾಂಶ ನೆಗೆಟಿವ್‌ ಬಂದಿದೆ.

    ಕಳೆದ ವಾರ ಬೆಂಗಳೂರಿನಲ್ಲಿ ಪೊಲೀಸರು ಮಹಾಮಾರಿ ವಿರುದ್ಧ ಹೋರಾಡಲು ಸಹಾಯವಾಗುವಂತೆ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಸಿಬ್ಬಂದಿಗೆ ಯೋಗ, ಪ್ರಾಣಯಾಮದ ಬಗ್ಗೆ ಪಾಠ ಮಾಡಿದ್ದರು.

    ನಾಲ್ಕು ಬೆಟಾಲಿಯನ್ ಕ್ವಾರಂಟೈನ್ ಸೆಂಟರ್ ನಲ್ಲಿ ಅಲೋಕ್ ಕುಮಾರ್ ಯೋಗ ಹೇಳಿಕೊಟ್ಟಿದ್ದು, ಕಪಾಲಬಾತಿ, ಭಸ್ತ್ರಿಕ ಪ್ರಾಣಾಯಾಮ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ಸ್ವತಃ ತಾವೇ ಯೋಗ, ಪ್ರಾಣಾಯಾಮ ಮಾಡಿ ತೋರಿಸುವ ಮೂಲಕ ಸಿಬ್ಬಂದಿ ಕುರಿತು ಕಾಳಜಿ ತೋರಿದ್ದಾರೆ.

    ಕ್ವಾರಂಟೈನ್ ಸೆಂಟರ್ ನಲ್ಲಿ ಇರುವವರು ಯಾರೂ ಭಯಪಡಬಾರದು, ಧೈರ್ಯವಾಗಿ ಕೊರಿನಾ ಎದುರಿಸಬೇಕು. ಯಾರೂ ಹೆದರುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಸಾಕು ಎಂದು ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದೇ ರೀತಿ ಕ್ವಾರಂಟೈನ್ ಕೇಂದ್ರದಲ್ಲಿರುವ ಎಲ್ಲ ಬೆಟಾಲಿಯನ್ ಸಿಬ್ಬಂದಿ ಯೋಗ ಹಾಗೂ ಪ್ರಾಣಾಯಾಮ ಮಾಡುವಂತೆ ಸಲಹೆ ನೀಡಿದರು.

  • ಆನೆಗಳಿಗೂ ಕೊರೊನಾ ಟೆಸ್ಟ್- ಕಣ್ಣು, ಗಂಟಲು ದ್ರವ ಸಂಗ್ರಹ

    ಆನೆಗಳಿಗೂ ಕೊರೊನಾ ಟೆಸ್ಟ್- ಕಣ್ಣು, ಗಂಟಲು ದ್ರವ ಸಂಗ್ರಹ

    – 7ರಿಂದ 10 ದಿನಗಳಲ್ಲಿ ಬರಲಿದೆ ವರದಿ
    – ಮಾವುತರೊಂದಿಗೆ ಸಂಪರ್ಕದ ಹಿನ್ನೆಲೆ ಪರೀಕ್ಷೆ

    ಜೈಪುರ: ರಾಜಸ್ಥಾನ ಒಂದೇ ದಿನದಲ್ಲಿ 25 ಸಾವಿರ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವ ಮೂಲಕ ದೆಹಲಿ ಹಾಗೂ ತಮಿಳುನಾಡು ನಂತರ ಒಂದೇ ದಿನ ಹೆಚ್ಚು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ದೇಶದಲ್ಲೇ ಮೊದಲು ಎಂಬಂತೆ ಆನೆಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ಆನೆಗಳ ತಾಣವಾಗಿರುವ ಜೈಪುರದಲ್ಲಿ ಗುರುವಾರದಿಂದ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, 110ಕ್ಕೂ ಹೆಚ್ಚು ಆನೆಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ 63 ಆನೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲದೆ ಅಂಬರ್ ಕೋಟೆ ಬಳಿ ತಮ್ಮ ಮಾಲೀಕರ ಬಳಿ ಇರುವ ಆನೆಗಳಿಗೂ ಟೆಸ್ಟ್ ಮಾಡಿಸಲಾಗುತ್ತಿದೆ.

    ರಾಜಸ್ಥಾನದಲ್ಲಿ ಮೊದಲ ಬಾರಿಗೆ ಆನೆಗಳ ಕಣ್ಣು ಹಾಗೂ ಗಂಟಲು ದ್ರವ ಸಂಗ್ರಹಿಸಲಾಗಿದೆ. ಮಾದರಿಗಳನ್ನು ಬರೇಲಿಯ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗುತ್ತಿದೆ ಎಂದು ಮೂರು ದಿನಗಳ ಕ್ಯಾಂಪ್‍ನ ಮೊದಲ ದಿನದಲ್ಲಿ ಮೂವರು ಪಶು ವೈದ್ಯರೊಂದಿಗೆ 50 ಆನೆಗಳ ಪರೀಕ್ಷೆ ನಡೆಸಿದ ವೈದ್ಯ ಅರವಿಂದ್ ಮಾಥುರ್ ಅವರು ಮಾಹಿತಿ ನೀಡಿದ್ದಾರೆ.

    ಈ ಮೂರು ದಿನಗಳ ಕ್ಯಾಂಪ್‍ನ್ನು ಹಾಥಿಗಾಂವ್ ವಿಕಾಸ್ ಸಮಿತಿಯ ಸಹಯೋಗದಲ್ಲಿ ರಾಜಸ್ಥಾನ ಅರಣ್ಯ ಇಲಾಖೆ ಆಯೋಜಿಸಿದೆ. ವಿವಿಧ ಕಾಯಿಲೆಗಳ ಕುರಿತು ಪರೀಕ್ಷಿಸಲು ಪ್ರತಿ 6 ತಿಂಗಳಿಗೊಮ್ಮೆ ಇಂತಹದ್ದೇ ಕ್ಯಾಂಪ್‍ಗಳನ್ನು ಹಾಕಿಕೊಳ್ಳಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

    ಪ್ರವಾಸಿಗರು ಕೋಟೆಯ ಕಡಿದಾದ ಕಲ್ಲಿನ ಮಾರ್ಗಗಳಲ್ಲಿ ಸವಾರಿ ಮಾಡಲು ಜೈಪುರದ ಆನೆಗಳನ್ನು ಬಳಸುತ್ತಾರೆ. ಹೀಗಾಗಿ ಇವು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಆನೆಗಳು ಮಾವುತನೊಂದಿಗೆ ಹತ್ತಿರದ ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ.

    ಹಾಥಿಗಾಂವ್ ವಿಕಾಸ್ ಸಮಿತಿ ಅಧ್ಯಕ್ಷ ಬಲ್ಲು ಖಾನ್ ಈ ಕುರಿತು ಮಾಹಿತಿ ನೀಡಿ, ಆನೆಗಳನ್ನು ಆರೋಗ್ಯಕರವಾಗಿಡಲು ಹಾಗೂ ಪ್ರವಾಸಿಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಸುಮಾರು 8 ಸಾವಿರಕ್ಕೂ ಅಧಿಕ ಕುಟುಂಬಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆನೆಗಳನ್ನೇ ಅವಲಂಬಿಸಿವೆ ಎಂದು ತಿಳಿಸಿದ್ದಾರೆ.

    ಆನೆಗಳಿಗೆ ಕೊರೊನಾ ಪರೀಕ್ಷೆ ನಡೆಸುವುದು ಶಿಷ್ಟಾಚಾರದ ಭಾಗವಾಗಿದ್ದು, ಕಣ್ಣು ಹಾಗೂ ಗಂಟಲು ದ್ರವವನ್ನು ಸಂಗ್ರಹಿಸಲಾಗಿದೆ. ಕಣ್ಣಿನ ದ್ರವ ಸಂಗ್ರಹಿಸಿ ಪರಿಚಯವಿಲ್ಲದ ಕಾರಣ 26 ವರ್ಷದ ಹೆಣ್ಣಾನೆಯೊಂದು ಈ ಸಂದರ್ಭದಲ್ಲಿ ಸ್ವಲ್ಪ ಭಯ ಪಟ್ಟಿತು. ಈಗಾಗಲೇ ಮಾದರಿ ಸಂಗ್ರಹಿಸಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. 7ರಿಂದ 10 ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

  • “ಸೋಂಕಿತರ ಸಂಪರ್ಕದಲ್ಲಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕಿಲ್ಲ”

    “ಸೋಂಕಿತರ ಸಂಪರ್ಕದಲ್ಲಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕಿಲ್ಲ”

    – ಹೊಸ ಅಧ್ಯಯನ ವರದಿಯಲ್ಲಿ ಬಹಿರಂಗ

    ನವದೆಹಲಿ: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳ ಪರೀಕ್ಷೆ ನಡೆಸುವ ಅಗತ್ಯವಿಲ್ಲ, ಸಂಪರ್ಕಿತ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದ್ದಲ್ಲಿ ಮಾತ್ರ ಮೂರು ದಿನಗಳ ಬಳಿಕ ಕೊರೊನಾ ಟೆಸ್ಟ್ ನಡೆಸಬೇಕು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

    ವಿಶ್ವಾದ್ಯಂತ ಮಹಾಮಾರಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಲೇ ಇವೆ. ಈ ಪೈಕಿ ಕೊರೊನಾ ಸೋಂಕು ಪರೀಕ್ಷೆ ಸಂಬಂಧ ಹೊಸ ಅಧ್ಯಯನ ವರದಿವೊಂದು ಪ್ರಕಟವಾಗಿದೆ. ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ಜನರಲ್ ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, RT – PCR ದತ್ತಾಂಶ ಆಧರಿಸಿ ಸಂಶೋಧನಾ ವರದಿ ಪ್ರಕಟಿಸಲಾಗಿದೆ.

    ಈ ವರದಿ ಪ್ರಕಾರ, ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕೂಡಲೇ ಕೊರೊನಾ ಪರೀಕ್ಷೆ ನಡೆಸಬಾರದು, ಒಂದು ವೇಳೆ ಎಲ್ಲರಿಗೂ ಪರೀಕ್ಷೆ ನಡೆಸಿದರೆ ಬಹುತೇಕ ವರದಿಗಳು ನೆಗೆಟಿವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸೋಂಕಿತ ಸಂಪರ್ಕದಲ್ಲಿದ್ದ ವ್ಯಕ್ತಿಗೆ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ಪರೀಕ್ಷೆ ನಡೆಸಬೇಕು ರೋಗದ ಲಕ್ಷಣಗಳು ಕಾಣಿಸಿಕೊಂಡ ಮೂರು ದಿನಗಳ ಬಳಿಕ ಕೊರೊನಾ ಟೆಸ್ಟ್ ಮಾಡುವುದು ಉತ್ತಮ ಇದರಿಂದ ನಿಖರವಾದ ರಿಸಲ್ಟ್ ಪಡೆಯಬಹುದು ಎಂದು ವರದಿಯಲ್ಲಿ ಹೇಳಿದೆ.

    ಸೋಂಕು ಹರಡುವುದನ್ನು ತಡೆಯಲು ಕೊರೊನಾ ಪೀಡಿತ ವ್ಯಕ್ತಿಯ ಸಂಪರ್ಕದಲ್ಲಿರಯವ ಎಲ್ಲರನ್ನೂ ಕೂಡಲೇ ಪರೀಕ್ಷೆಗೆ ಒಳಪಡಿಸುವುದು ಸರಿಯಾದ ಕ್ರಮ ಅಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

  • ತೀವ್ರ ಜ್ವರ, ಗಂಟಲು ನೋವು – ಸಿಎಂ ಕೇಜ್ರಿವಾಲ್‍ಗೆ ಕೊರೊನಾ ಟೆಸ್ಟ್

    ತೀವ್ರ ಜ್ವರ, ಗಂಟಲು ನೋವು – ಸಿಎಂ ಕೇಜ್ರಿವಾಲ್‍ಗೆ ಕೊರೊನಾ ಟೆಸ್ಟ್

    ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಾಳೆ ಬೆಳಗ್ಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ. ಭಾನುವಾರದಿಂದ ಕೇಜ್ರಿವಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ಸಲಹೆ ಹಿನ್ನೆಲೆ ನಾಳೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.

    ಕೇಜ್ರಿವಾಲ್ ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಬಳಿಕವೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಲು ತಿರ್ಮಾನಿಸಲಾಗಿದೆ.

    ಕೊರೊನಾ ಹೋರಾಟದ ಮುನ್ನಲೆಯಲ್ಲಿರುವ ಅರವಿಂದ ಕೇಜ್ರಿವಾಲ್, ಪ್ರತಿ ನಿತ್ಯ ಅಧಿಕಾರಗಳ ಸಭೆ ನಡೆಸುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಭಾನುವಾರ ಮಧ್ಯಾಹ್ನ ಬಳಿಕ ಇದ್ದ ಎಲ್ಲ ಸಭೆಗಳನ್ನು ರದ್ದು ಮಾಡಿ ಕ್ವಾರಂಟೈನ್ ನಲ್ಲಿದ್ದಾರೆ. ದೆಹಲಿಯಲ್ಲಿ ಈವರೆಗೂ 28,936 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 812 ಮಂದಿ ಸಾವನ್ನಪ್ಪಿದ್ದಾರೆ. 11,000 ಮಂದಿ ಗುಣ ಮುಖ ಹೊಂದಿದ್ದಾರೆ.

  • ಮೊದಲ ವರದಿಯಲ್ಲಿ ನೆಗೆಟಿವ್ ಬಂದಿದ್ದವರಿಗೆ ಎರಡನೇ ಪರೀಕ್ಷೆ ವೇಳೆ ಪಾಸಿಟಿವ್

    ಮೊದಲ ವರದಿಯಲ್ಲಿ ನೆಗೆಟಿವ್ ಬಂದಿದ್ದವರಿಗೆ ಎರಡನೇ ಪರೀಕ್ಷೆ ವೇಳೆ ಪಾಸಿಟಿವ್

    ಹಾಸನ: ಕೊರೊನಾ ವಿಚಾರದಲ್ಲಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮೊದಲ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಎರಡನೇ ಬಾರಿ ಪರೀಕ್ಷೆ ನಡೆಸಿದಾಗ 10 ಜನರಿಗೆ ಪಾಸಿಟಿವ್ ಬಂದಿದೆ.

    ಶುಕ್ರವಾರ ಸಂಜೆಯಿಂದ ಇಂದು ಬೆಳಗ್ಗೆವರೆಗೆ ಒಟ್ಟು 17 ಜನರಿಗೆ ಪಾಸಿಟಿವ್ ಕಂಡು ಬಂದಿದ್ದು, ಇದರಲ್ಲಿ 10 ಜನರಿಗೆ ಎರಡನೇ ಬಾರಿಗೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿ ಇಂದು ಒಟ್ಟು 13 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದುವರೆಗೂ ಕಂಡು ಬಂದ ಒಟ್ಟು ಸೋಂಕಿತರ ಸಂಖ್ಯೆ 157ಕ್ಕೆ ಏರಿಕೆಯಾಗಿದೆ. 157 ಜನರಲ್ಲಿ ಈಗಾಗಲೇ 30 ಜನ ಕೊರೊನಾದಿಂದ ಗುಣಮುಖವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 127ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಒಟ್ಟು 9 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

  • ಕೊರೊನಾ ಪತ್ತೆಗೆ ಹುಚ್ಚ ವೆಂಕಟ್ ಐಡಿಯಾ

    ಕೊರೊನಾ ಪತ್ತೆಗೆ ಹುಚ್ಚ ವೆಂಕಟ್ ಐಡಿಯಾ

    ಬೆಂಗಳೂರು: ನಟ ಹುಚ್ಚಾ ವೆಂಕಟ್ ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಾರೆ. ಈ ಹಿಂದೆ ಗಲಾಟೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಆಗಾಗ ಸಮಾಜದ ಆಗುಹೋಗುಗಳ ಕುರಿತು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಇದೀಗ ಕೊರೊನಾ ನಿಯಂತ್ರಣದ ಬಗ್ಗೆ ತಮ್ಮ ಅನಿಸಿಕೆ ಹೇಳಿಕೊಂಡಿದ್ದು, ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಜಗತ್ತಿನಾದ್ಯಂತ 40 ಲಕ್ಷಕ್ಕೂ ಅಧಿಕ ಜನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕು ತಗುಲಿರುವುದನ್ನು ಪತ್ತೆ ಹಚ್ಚಿ, ಅವರನ್ನು ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿದೆ. ಇದನ್ನು ನಿಯಂತ್ರಿಸಲು ಹಾಗೂ ಔಷಧಿ ಕಂಡುಹಿಡಿಯಲು ತಜ್ಞರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದರ ಮಧ್ಯೆಯೇ ಇದೀಗ ಹುಚ್ಚ ವೆಂಕಟ್ ಕೊರೊನಾ ಸೋಂಕು ಪತ್ತೆಗೆ ಐಡಿಯಾ ನೀಡಿದ್ದಾರೆ.

    ಈ ವಿಡಿಯೋವನ್ನು ತಮ್ಮದೇ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಂಡಿದ್ದು, ಟಿಕ್‍ಟಾಕ್‍ನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ವೆಂಕಟ್, ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೇಳುತ್ತಿರುವುದು. ಇಸ್ರೋ ವಿಜ್ಞಾನಿಗಳು ಈವರೆಗೂ ಏನೇನೋ ಕಂಡು ಹಿಡಿದಿದ್ದಾರೆ. ಹಲವು ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ. ಅದೇ ರೀತಿ ಕೊರೊನಾ ವೈರಸ್ ಪತ್ತೆ ಹಚ್ಚಲು ಸಣ್ಣ ಯಂತ್ರವನ್ನು ಕಂಡುಹಿಡಿಯಬೇಕಿದೆ. ಈಗ ಬಿಪಿ ಚೆಕ್ ಮಾಡಲು ಸಣ್ಣ ಯಂತ್ರ ಇದೆ. ಅದೇ ರೀತಿ ಕೊರೊನಾ ಕಂಡು ಹಿಡಿಯಲು ಯಂತ್ರ ಕಂಡುಹಿಡಿಯಬೇಕು ಎಂದು ಹೇಳಿದ್ದಾರೆ.

    ಇದರಿಂದ ನಾವು ನಮ್ಮ ಮನೆಗಳಲ್ಲೇ ಕುಳಿತು ಕೊರೊನಾ ಇದೆಯೋ, ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಈ ಕುರಿತು ಇಸ್ರೋ ವಿಜ್ಞಾನಿಗಳು ಹಾಗೂ ವೈದ್ಯರು ಜೊತೆಗೂಡಿ ಇಂತಹದ್ದೊಂದು ಯಂತ್ರವನ್ನು ಕಂಡುಹಿಡಿಯಬೇಕು. ಇದರಿಂದಾಗಿ ಬೇಗ ಸೋಂಕು ಪತ್ತೆಯಾಗುತ್ತದೆ, ತಕ್ಷಣವೇ ಆಸ್ಪತ್ರೆಗೆ ಹೋಗಬಹುದು. ಆಗ ಕೊರೊನಾ ಹರಡುವಿಕೆ ಕಡಿಮೆಯಾಗುತ್ತದೆ. ಅಲ್ಲದೆ ವೈದ್ಯರು ಇತರರ ಆರೋಗ್ಯ ಕಾಪಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

  • ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್, ಸಹಾಯ ಮಾಡಲು ಬಲ ಬಂದಿದೆ – ಜಮೀರ್

    ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್, ಸಹಾಯ ಮಾಡಲು ಬಲ ಬಂದಿದೆ – ಜಮೀರ್

    ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅವರು ಕೊರೊನಾ ಪರೀಕ್ಷೆ ಮಾಡಿದ್ದು ಫಲಿತಾಂಶ ನೆಗೆಟಿವ್ ಬಂದಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಸಂಚಾರ ಮಾಡಿದ್ದೇನೆ, ಜನರ ಒಡನಾಟದಲ್ಲಿದ್ದೇನೆ, ಮೊನ್ನೆ ಅಗತ್ಯ ಮುಂಜಾಗ್ರತೆಯೊಂದಿಗೆ ಕೊರೊನಾ ಇಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಿದ್ದೆ. ಕೊರೊನಾವೆಂಬ ಮಾರಕ ಕಾಯಿಲೆ ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.

    ಜನರ ಕಷ್ಟಕ್ಕೆ ಸ್ಪಂದಿಸುವುದಷ್ಟೇ ಅಲ್ಲ ನನ್ನಿಂದ ಇತರರಿಗೆ ಬೇರೆ ಯಾವ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸ್ವತಃ ನಾನೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಇದರಿಂದ ಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಸಹಾಯ ಮಾಡಲು ನನಗೆ ಬಲ ಬಂದಿದೆ ಎಂದು ಹೇಳಿದ್ದಾರೆ.

    ಜಮೀರ್ ಅಹಮದ್ ಅವರ ವಿಧಾನಸಭಾ ವ್ಯಾಪ್ತಿಯ ಪಾದರಾಯನಪುರದಲ್ಲಿ ಹೆಚ್ಚಿನ ಪ್ರಮಾಣ ಸೋಂಕಿತರ ಪತ್ತೆಯಾದ ಹಿನ್ನೆಲೆಯಲ್ಲಿ ಜಮೀರ್ ಅಹಮದ್ ಅವರನ್ನು ಪರೀಕ್ಷೆ ನಡೆಸಬೇಕೆಂಬ ಮಾತು ಕೇಳಿ ಬಂದಿತ್ತು.

    ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಪರೀಕ್ಷೆಗೆ ಒಳಪಟ್ಟಿದ್ದರು. ಇವರ ಫಲಿತಾಂಶವೂ ನೆಗೆಟಿವ್ ಬಂದಿತ್ತು.

  • ಕೆ.ಟಿ ಶ್ರೀಕಂಠೇಗೌಡ್ರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು: ಶ್ರೀರಾಮುಲು

    ಕೆ.ಟಿ ಶ್ರೀಕಂಠೇಗೌಡ್ರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು: ಶ್ರೀರಾಮುಲು

    ಬಳ್ಳಾರಿ: ಮಂಡ್ಯ ಜಿಲ್ಲೆಯ ಜೆಡಿಎಸ್ ವಿಧಾನ ಪರಿಷತ್‍ನ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಮತ್ತೊಬ್ಬರಿಗೆ ರೋಲ್ ಮಾಡೆಲ್ ಆಗಬೇಕಿತ್ತು. ಅದು ಬಿಟ್ಟು ತಮ್ಮ ದುಂಡಾವರ್ತನೆಯನ್ನು ತೋರಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

    ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪತ್ರಕರ್ತರಿಗೆ ಈ ಕೊರೊನಾ ತಪಾಸಣೆಯನ್ನು ಆಯೋಜಿಸಲಾಗಿತ್ತು. ಆದರೆ ಎಂಎಲ್‍ಸಿ ಶ್ರೀಕಂಠೇಗೌಡರು ತಮ್ಮ ಪುತ್ರ ಕೃಷಿಕ್ ಗೌಡನನ್ನು ಎತ್ತಿಕಟ್ಟಿ ತಮ್ಮ ದುಂಡಾವರ್ತನೆಯನ್ನು ಪ್ರದರ್ಶಿಸಿದ್ದಾರೆ. ಶ್ರೀಕಂಠೇಗೌಡರು ಹಿರಿಯರು ಜೊತೆಗೆ ಅನುಭವಿ ರಾಜಕಾರಣಿ. ಈ ರೀತಿ ಬೀದಿಗಿಳಿದು ಜಗಳ ಮಾಡ ಬಾರದಿತ್ತು. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದರು.

    ಇನ್ಮುಂದೆ ಯಾವುದೇ ರೀತಿಯ ದುರ್ಘಟನೆ ಆಗಬಾರದೆಂದು ಮನವಿ ಮಾಡುತ್ತೇನೆ. ಅವರ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಪಾದರಾಯನಪುರ ಸೇರಿದಂತೆ ನಾನಾ ಕಡೆ ಈ ರೀತಿಯ ಘಟನೆ ನಡೆದಿದೆ. ಇದು ರಿಪೀಟ್ ಆಗಬಾರದು. ಪತ್ರಕರ್ತರ ಮೇಲೆ ನಾನಾ ಕಡೆ ಹಲ್ಲೆಯಾಗುತ್ತಿವೆ. ಪತ್ರಕರ್ತರು ಈ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರ ಮತ್ತು ಅವರ ಕುಟುಂಬದ ರಕ್ಷಣೆ ನಮ್ಮ ಸರ್ಕಾರದ ಹೊಣೆ. ಹಾಗಾಗಿ ಪತ್ರಕರ್ತರಿಗೆ ಕೋವಿಡ್-19 ಚೆಕಪ್ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.

    ಕೊರೊನಾ ವೈರಸ್‍ನ ಶಂಕಿತರು ಬಳ್ಳಾರಿ ಸೇರಿದಂತೆ ನಾನಾ ಕಡೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ಲಾಸ್ಮಾ ಥೆರಪಿ ನಾಳೆಯಿಂದ ಅಧಿಕೃತವಾಗಿ ಆರಂಭವಾಗಲಿದೆ. ಪ್ಲಾಸ್ಮಾ ಥೆರಪಿಗೆ ರಕ್ತದಾನ ಮಾಡಲು ಗುಣಮುಖರಾದವರು ಮುಂದೆ ಬರಬೇಕು. ರಾಜ್ಯದ ನಂಜನಗೂಡು, ಮೈಸೂರಿನಲ್ಲಿ ಹೆಚ್ಚು ಪ್ರಕರಣ ಬಂದಿವೆ. ಜ್ಯೂಬಿಲಿಯೆಂಟ್ ಕಾರ್ಖಾನೆ ಪಾಸಿಟಿವ್ ಮೂಲ ಯಾವುದೆಂದು ಇದುವರೆಗೆ ಗೊತ್ತಾಗಿಲ್ಲ. ಹೀಗಾಗಿ ಈ ಬಗ್ಗೆ ನಾಳೆ ನಡೆಯಲಿರುವ ಪ್ರಧಾನಿ ಮೋದಿಯವರ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಗಮನಕ್ಕೆ ತರುವುದಾಗಿ ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುವವರಿಗೆ ಸಮಸ್ಯೆಯಾಗಿದೆ ಎಂದಿದ್ದರು. ನನ್ನ ಗಮನಕ್ಕೆ ಬಂದ ನಂತರ ನಾನು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದೇನೆ. ಡೆಂಗ್ಯೂ ಜ್ವರ, ಹೃದಯ ಸಂಬಂಧಿ ಕಾಯಿಲೆಯ ಸಮಸ್ಯೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.