Tag: ಕೊರೊನಾ ಪರೀಕ್ಷೆ

  • ವಲಸಿಗರ ಟೆಸ್ಟಿಂಗ್ ಗೆ ಬಿಗಿ ಕ್ರಮ – ಅರುಣ್ ಸಿಂಗ್ ಸಭೆಗೆ ಸಂಪೂರ್ಣ ಸಹಕಾರ – ಸಿಎಂ ಯಡಿಯೂರಪ್ಪ

    ವಲಸಿಗರ ಟೆಸ್ಟಿಂಗ್ ಗೆ ಬಿಗಿ ಕ್ರಮ – ಅರುಣ್ ಸಿಂಗ್ ಸಭೆಗೆ ಸಂಪೂರ್ಣ ಸಹಕಾರ – ಸಿಎಂ ಯಡಿಯೂರಪ್ಪ

    ಬೆಂಗಳೂರು: ಎರಡು ದಿನಗಳ ಹಾಸನ, ಶಿವಮೊಗ್ಗ ಜಿಲ್ಲೆಗಳ ಪ್ರವಾಸ ಮುಗಿಸಿ ಸಿಎಂ ಯಡಿಯೂರಪ್ಪ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸಾದರು. ಈ ಸಂದರ್ಭದಲ್ಲಿ ಕಾವೇರಿ ನಿವಾಸದೆದುರು ಮಾತಾಡಿದ ಸಿಎಂ, ಬೆಂಗಳೂರಿಗೆ ಮರಳುತ್ತಿರುವ ವಲಸಿ ಕಾರ್ಮಿಕರು, ಉದ್ಯೋಗಿಗಳಿಗೆ ಟೆಸ್ಟಿಂಗ್ ಮಾಡಲು ಬಿಗಿ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಮಾಧ್ಯಮದವರ ಸಲಹೆಯನ್ನು ಪಾಲಿಸಲಿದ್ದು, ಬಿಗಿ ಟೆಸ್ಟಿಂಗ್ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ಕೊಟ್ಟರು.

    ಇನ್ನು ಮಾತು ಮುಂದುವರೆಸಿದ ಸಿಎಂ, ಮುಂದಿನ ವಾರ ಮುಂದಿನ ವಾರ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅರುಣ್ ಸಿಂಗ್ ಎರಡು ಮೂರು ದಿನ ರಾಜ್ಯದಲ್ಲಿದ್ದು,ಶಾಸಕರು, ಸಚಿವರು, ಸಂಸದರ ಜತೆ ಚರ್ಚೆ ಮಾಡ್ತಾರೆ. ಆ ಮೂಲಕ ರಾಜ್ಯದ ಸ್ಥಿತಿಗತಿ ಬಗ್ಗೆ ಅರುಣ್ ಸಿಂಗ್ ಚರ್ಚೆ ಮಾಡ್ತಾರೆ. ಅರುಣ್ ಸಿಂಗ್ ರವರು ಬಂದಾಗ ನಾನು ಪೂರ್ಣವಾಗಿ ಸಹಕರಿಸ್ತೇನೆ ಅಂತ ಇದೇ ವೇಳೆ ತಿಳಿಸಿದರು.

    ಶಾಲಾ ಶುಲ್ಕ ಬಗ್ಗೆ ಚರ್ಚಿಸಿ ತೀರ್ಮಾನ
    ಖಾಸಗಿ ಶಾಲೆಗಳ ಶುಲ್ಕ ಗೊಂದಲದ ಬಗ್ಗೆ ಮಾತಾಡಿದ ಸಿಎಂ, ಶುಲ್ಕದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರ ಜತೆ ಚರ್ಚೆ ಮಾಡ್ತೇನೆ. ಖಾಸಗಿ ಶಾಲೆಗಳ ಕಷ್ಟ ಸುಖ ಏನಿದೆ ಅಂತ ನೋಡ್ಕೊಂಡು ಕಾನೂನು ಚೌಕಟ್ಟಿನಲ್ಲಿ ತೀರ್ಮಾನ ಮಾಡ್ತೇವೆ ಅಂತ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ದೆಹಲಿಯಲ್ಲಿ ಅನ್‍ಲಾಕ್ – ಹೋಟೆಲ್‍ಗಳಲ್ಲಿ ಶೇ.50, ಮಾಲ್ ಫುಲ್ ಓಪನ್

    ತಮ್ಮ ಹಾಸನ, ಶಿವಮೊಗ್ಗ ಜಿಲ್ಲೆಗಳ ಪ್ರವಾಸದ ಬಗ್ಗೆ ಹೇಳಿದ ಸಿಎಂ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಬರ್ತಿದ್ದೇನೆ. ಇನ್ಮುಂದೆ ವಾರಕ್ಕೊಮ್ಮೆ ಜಿಲ್ಲೆಗಳಿಗೆ ಪ್ರವಾಸ ಮಾಡ್ತೇನೆ. ಆ ಮೂಲಕ ಜಿಲ್ಲೆಗಳಲ್ಲಿ ಕೋವಿಡ್, ಅಭಿವೃದ್ಧಿ ಪರಿಶೀಲನೆ ಮಾಡ್ತೇನೆ ಅಂದ್ರು. ಹಾಸನದಲ್ಲಿ ಏರ್ ಪೋರ್ಟ್ ನಿರ್ಮಾಣ ಕೆಲಸ ನಡೀತಿದೆ. ಶಿವಮೊಗ್ಗ ಏಜೆನ್ಸಿಯವ್ರಿಗೆ ಕಾಮಗಾರಿ ಕೊಟ್ಟು ಬೇಗ ಮುಗಿಸಲು ತಿಳಿಸಿದ್ದೇವೆ. ಶೀಘ್ರದಲ್ಲೇ ನಾನು ಮತ್ತು ದೇವೇಗೌಡರು ಅಲ್ಲಿಗೆ ತೆರಳಿ ಶಂಕುಸ್ಥಾಪನೆ ಮಾಡ್ತೇವೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ತಿಳಿಸಿದರು. ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತೆ, ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ – ಸುಧಾಕರ್

    ದಿಗ್ವಿಜಯ ಸಿಂಗ್ ರ ಆರ್ಟಿಕಲ್ 370 ಮರು ಪರಿಶೀಲನೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ತಿರುಕನ ಕನಸು ಕಾಣುವವರಿಗೆ ನಾನು ಏನೂ ಹೇಳೋದಿಲ್ಲ. ಅವರ ನಾಯಕತ್ವದ ಕೊರತೆಯಿಂದ ಅವರ ಪಕ್ಷ ಎಲ್ಲಿದೆ ಅನ್ನೋದು ಗೊತ್ತಿದೆ. ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ ಅನ್ನೋದು ಎಲ್ಲರೂ ಗಮನಿಸಿದ್ದಾರೆ ಅಂತ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ರು. ಪೆಟ್ರೋಲ್, ಡೀಸೆಲ್ ತೆರಿಗೆ ಇಳಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಕೈ ಮುಗಿದು ಹೊರಟರು.

  • ನಾವು ರಾಗಿ ಮುದ್ದೆ ತಿನ್ನೋರು, ನಮಗೆ ಯಾವ ರೋಗ ಬರಲ್ಲ – ಆದಿವಾಸಿ ಮಹಿಳೆ

    ನಾವು ರಾಗಿ ಮುದ್ದೆ ತಿನ್ನೋರು, ನಮಗೆ ಯಾವ ರೋಗ ಬರಲ್ಲ – ಆದಿವಾಸಿ ಮಹಿಳೆ

    ಮೈಸೂರು: ಆರೋಗ್ಯ ತಪಾಸಣೆ ಮಾಡಲು ಬಂದ ಅಧಿಕಾರಿಗಳಿಗೆ ಮಹಿಳೆಯೊಬ್ಬಳು ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗ ಬರುವುದಿಲ್ಲ ಎಂದು ಅವಾಜ್ ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಸಮೀಪದ ಬೀರತಮ್ಮನ ಹಳ್ಳಿ ಗಿರಿಜನ ಹಾಡಿಯಲ್ಲಿ ಮಹಿಳೆಯೊಬ್ಬಳು ನೀವು ನಮ್ಮ ಹಾಡಿಗೆ ಕಾಲು ಇಡುವುದು ಬೇಡ, ನೀವು ಹಾಡಿಯಿಂದ ಹೋಗಿ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

    ನಾವು ರಾಗಿ ಮುದ್ದೆ ತಿನ್ನುವವರು, ನಮಗೆ ಯಾವ ರೋಗನೂ ಇಲ್ಲ. ನೀವೇನು ನಮಗೆ ಟೆಸ್ಟ್ ಮಾಡಿ ರೋಗ ಕಂಡು ಹಿಡಿಯುವುದು ಬೇಡ. ರೋಗ ಬಂದರೆ ನಾವೇ ವಾಸಿ ಮಾಡಿಕೊಳ್ಳುತ್ತೇವೆ ಎಂದು ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದ ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ ನಡೆಸಿದ್ದಾರೆ.  ಇದನ್ನು ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

    ಬೀರತಮ್ಮನಹಳ್ಳಿ ಆದಿವಾಸಿ ಹಾಡಿಯಲ್ಲಿ ಒಟ್ಟು 50ಕ್ಕೂ ಹೆಚ್ಚು ಕುಟುಂಬಗಳಿವೆ. 250ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಾಡಿ ಇದ್ದಾಗಿದ್ದು, ಈ ಪೈಕಿ ಕೇವಲ 7 ಮಂದಿ ಮಾತ್ರ ತಪಾಸಣೆಗೆ ಒಳಗಾಗಿದ್ದಾರೆ.

     

  • ಕೊರೊನಾ ಪರೀಕ್ಷೆಗೆ ಬಂದ ವೈದ್ಯಕೀಯ ತಂಡದ ಮೇಲೆ ಗ್ರಾಮಸ್ಥರಿಂದ ಹಲ್ಲೆಗೆ ಯತ್ನ

    ಕೊರೊನಾ ಪರೀಕ್ಷೆಗೆ ಬಂದ ವೈದ್ಯಕೀಯ ತಂಡದ ಮೇಲೆ ಗ್ರಾಮಸ್ಥರಿಂದ ಹಲ್ಲೆಗೆ ಯತ್ನ

    – ಲಾಠಿ, ಕೋಲು ಹಿಡಿದು ಬಂದ ಜನ

    ಲಕ್ನೋ: ಕೊರೊನಾ ಪರೀಕ್ಷೆಗೆ ಬಂದಿದ್ದ ವೈದ್ಯಕೀಯ ತಂಡದ ಮೇಲೆ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಗ್ರಾಮಸ್ಥರು ಲಾಠಿ ಮತ್ತು ಕೋಲುಗಳನ್ನು ಹಿಡಿದು ನಿಂತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಬಾರಾಬಂಕಿಯ ಕೋಠಿ ಠಾಣಾ ವ್ಯಾಪ್ತಿಯ ರೇವತಿಪುರ್ವಾ ಗ್ರಾಮಸ್ಥರು ಹಲ್ಲೆಗೆ ಯತ್ನಿಸಿದ್ದಾರೆ. ಗ್ರಾಮದ ಪಡಿತರ ಅಂಗಡಿ ಬಳಿ ವೈದ್ಯಕೀಯ ಸಿಬ್ಬಂದಿ ಕ್ಯಾಂಪ್ ಹಾಕಿದ್ದರು. ಪಡಿತರ ಖರೀದಿಗೆ ಬರುವ ಗ್ರಾಹಕರನ್ನ ಕೊರೊನಾ ಪರೀಕ್ಷಗೆ ಒಳಪಡಿಸಿದ್ದರು. ಕೆಲ ಗ್ರಾಮಸ್ಥರು ಪರೀಕ್ಷೆ ಸಹ ಮಾಡಿಸಿಕೊಂಡಿದ್ದರು.

    ಬಹುತೇಕರು ಪರೀಕ್ಷಗೆ ಹಿಂದೇಟು ಹಾಕುತ್ತಿದ್ದಂತೆ ಅಂಗಡಿಯವ ಕೊರೊನಾ ಪರೀಕ್ಷಗೆ ಒಳಗಾದ್ರೆ ಮಾತ್ರ ಪಡಿತರ ನೀಡುವುದಾಗಿ ಹೇಳಿದ್ದಾನೆ. ಇಷ್ಟು ಹೇಳುತ್ತಿದ್ದಂತೆ ಮಹಿಳೆಯರು ಮನೆಗಳಿಗೆ ವಿಷಯ ತಿಳಿಸಿದ್ದಾರೆ. ಪಡಿತರ ನೀಡದ್ದಕ್ಕೆ ಕೋಪಗೊಂಡ ಗ್ರಾಮಸ್ಥರು ಕೋಲು, ಲಾಠಿ ಹಿಡಿದು ವೈದ್ಯಕೀಯ ತಂಡದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಸಿಗುತ್ತಿದ್ದಂತೆ ಸಿಬ್ಬಂದಿ ಪರೀಕ್ಷೆ ಅರ್ಧಕ್ಕೆ ನಿಲ್ಲಿಸಿ ಹಿಂದಿರುಗಿದ್ದಾರೆ.

    ಗ್ರಾಮಸ್ಥರು ಕೋಲು ಹಿಡಿದು ನಿಂತು ವೈದ್ಯಕೀಯ ಸಿಬ್ಬಂದಿಯನ್ನ ಬಲವಂತವಾಗಿ ಹತ್ತಿಸುತ್ತಿರೋದನ್ನ ವೀಡಿಯೋದಲ್ಲಿ ನೋಡಬಹುದಾಗಿದೆ. ಗ್ರಾಮದಿಂದ ಹಿಂದಿರುಗಿದ ವೈದ್ಯಕೀಯ ತಂಡದ ಅಧಿಕಾರಿಗಳು ಸ್ಥಳೀಯ ಕೋಠಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಧಿಕಾರಿಗಳ ದೂರಿನನ್ವಯ ಪ್ರಕರಣ ದಾಖಲಿ ಸಿಕೊಳ್ಳಲಾಗಿದೆ. ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  • ಬೆಂಗಳೂರಿಗೆ ಬರೋ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ?

    ಬೆಂಗಳೂರಿಗೆ ಬರೋ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ?

    ಬೆಂಗಳೂರು: ಲಾಕ್‍ಡೌನ್ ಮುಗಿದ ಬಳಿಕ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಸರ್ಕಾರ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡುತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.

    ಹೌದು. ಸದ್ಯ ಈಗ ಜೂನ್ 7ರವರೆಗೆ ಲಾಕ್‍ಡೌನ್ ಮುಂದುವರಿಯಲಿದ್ದು, ನಂತರ ಏನು ಎನ್ನುವುದು ತಿಳಿದು ಬಂದಿಲ್ಲ. ಲಾಕ್‍ಡೌನ್ ತೆರವಾದ ಕೂಡಲೇ ಮತ್ತೆ ಊರಿನಿಂದ ಬೆಂಗಳೂರಿಗೆ ವಲಸೆ ಆರಂಭವಾಗಲಿದೆ. ಲಾಕ್‍ಡೌನ್ ಹೇರಿದ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಜೂನ್ 7ರ ಬಳಿಕ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಿ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

     

    ತಜ್ಞರು ಈ ಸಲಹೆ ನೀಡಲು ಕಾರಣವಿದೆ. ಆರಂಭದಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಲಾಕ್‍ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿನ ಜನ ಜಿಲ್ಲೆಗಳಿಗೆ ವಲಸೆ ಹೋಗಿದ್ದಾರೆ. ಕಠಿಣ ಲಾಕ್‍ಡೌನ್ ನಿಯಮ ಜಾರಿಯಾಗಿದ್ದರಿಂದ ಬೆಂಗಳೂರಿನಲ್ಲಿ ಸೋಂಕು ಕಡಿಮೆಯಾಗುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಸೋಂಕು ಏರುತ್ತಿದೆ.

    ಒಂದು ವೇಳೆ ಲಾಕ್‍ಡೌನ್ ತೆರವಾದ ಕೂಡಲೇ ಊರಿನಿಂದ ಬೆಂಗಳೂರಿಗೆ ವಲಸೆ ಆರಂಭಗೊಳ್ಳುತ್ತದೆ. ಜನರ ಓಡಾಟದಿಂದ ಮತ್ತೆ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಜಾಸ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಈ ರೀತಿ ಆಗದಂತೆ ತಡೆಯಲು ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಆರಂಭದಲ್ಲೇ ಕೊರೊನಾ ಪರೀಕ್ಷೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಒಂದು ವೇಳೆ ಜೂನ್ 7ವರೆಗೆ ಲಾಕ್‍ಡೌನ್ ಹೇರಿಯೂ ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸುವ ಸಾಧ್ಯತೆಯಿದೆ. ಈಗಾಗಲೇ ಕೆಲ ರಾಜ್ಯಗಳು ಬೇರೆ ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಹೀಗಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬೆಂಗಳೂರಿಗೆ ಬರುವಂತಿಲ್ಲ ಎಂದು ನಿಯಮ ಮಾಡಿದರೆ ತಪ್ಪೇನಿಲ್ಲ. ಇದರಿಂದಾಗಿ ಏಕಾಏಕಿ ಬೆಂಗಳೂರಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಬಹುದು. ಕೊರೊನಾ ನಿಯಂತ್ರಣಕ್ಕೆ ಬರಬಹುದು ಎನ್ನುವುದು ತಜ್ಞರ ಅಭಿಪ್ರಾಯ.

    ಭಾರತದಲ್ಲಿ ಕೊರೊನಾ ಎರಡನೇ ಅಲೆ ಜಾಸ್ತಿಯಾಗಲು ವಲಸೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕಾರಣ ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ. ಹೀಗಾಗಿ ಬೆಂಗಳೂರಿಗೆ ಬರುವವರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಆಗುತ್ತಾ? ಜೂನ್ 7ಕ್ಕೆ ಲಾಕ್‍ಡೌನ್ ಮುಗಿದ ಬಳಿಕ ಸರ್ಕಾರ ಹೊಸ ನಿಯಮ ಜಾರಿ ಮಾಡುತ್ತಾ ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

  • ನಗರದ ವಿವಿಧ ಆಸ್ಪತ್ರೆಗಳಿಗೆ ಡಿಸಿಎಂ ಭೇಟಿ- ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ

    ನಗರದ ವಿವಿಧ ಆಸ್ಪತ್ರೆಗಳಿಗೆ ಡಿಸಿಎಂ ಭೇಟಿ- ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ

    – 24 ಗಂಟೆಯೊಳಗೇ ರಿಸಲ್ಟ್ ಕೊಡಲು ತಾಕೀತು
    – ಬೆಂಗಳೂರಿನ ಎಲ್ಲ ಚಿತಾಗಾರಗಳಲ್ಲೂ ಕೋವಿಡ್ ಮೃತರ ಅಂತ್ಯಕ್ರಿಯೆ

    ಬೆಂಗಳೂರು: ಕೋವಿಡ್ ಎರಡನೇ ಅಲೆಯಿಂದ ನಗರದ ಜನರು ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಬುಧವಾರ ವಿವಿಧ ಆಸ್ಪತ್ರೆ-ಲ್ಯಾಬ್‍ಗಳಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಜನರ ಸ್ಯಾಂಪಲ್‍ಗಳನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಿಸಲ್ಟ್ ಕೊಡಬೇಕು. ಕೋವಿಡ್ ಪರೀಕ್ಷೆ ಹೆಚ್ಚಿಸಬೇಕೆಂದು ಲ್ಯಾಬ್‍ಗಳಿಗೆ ತಾಕೀತು ಮಾಡಿದರು.

    ಬೆಳಗ್ಗೆಯಿಂದಲೇ ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್‍ಐ, ಲೈಫ್‍ಸೆಲ್ ಲ್ಯಾಬ್, ವಿಕ್ಟೋರಿಯಾ ಹಾಗೂ ಕಿದ್ವಾಯಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಡಿಸಿಎಂ, ಅಲ್ಲಿನ ಕೋವಿಡ್ ವ್ಯವಸ್ಥೆ, ಚಿಕಿತ್ಸೆ, ಲ್ಯಾಬ್, ಲಸಿಕೆ ನೀಡಿಕೆ ಇತ್ಯಾದಿ ಅಂಶಗಳನ್ನು ಪರಿಶೀಲನೆ ನಡೆಸಿದರು.

    ಪ್ರತಿ ದಿನವೂ ಲ್ಯಾಬ್‍ಗಳಿಗೆ ಕನಿಷ್ಠ 3 ಬ್ಯಾಚ್‍ಗಳಲ್ಲಿ ಸ್ಯಾಂಪಲ್ ಕಳಿಸಬೇಕು ಹಾಗೂ ಆ ಸ್ಯಾಂಪಲ್ ಸ್ವೀಕರಿಸಿದ 24 ಗಂಟೆಯೊಳಗೆ ಲ್ಯಾಬ್‍ಗಳು ರಿಸಲ್ಟ್ ಕೊಡಬೇಕು ಎಂದು ಡಿಸಿಎಂ ಅವರು, ಆಸ್ಪತ್ರೆಗಳ ಹಿರಿಯ ವೈದ್ಯಾಧಿಕಾರಿಗಳು, ಆಡಳಿತ ವರ್ಗದವರಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಒಂದು ಕಡೆ ನಿರಂತರವಾಗಿ ಗಂಟಲು ದ್ರವ ಇತ್ಯಾದಿ ಕಲೆಕ್ಟ್ ಮಾಡುತ್ತಿದ್ದರೆ, ಮತ್ತೊಂದೆಡೆ ಪ್ರತಿ 3 ಗಂಟೆಗೊಮ್ಮೆ ಲ್ಯಾಬ್‍ಗಳು ರಿಸಲ್ಟ್ ಕೊಡುತ್ತಿರಲೇಬೇಕು. ಸ್ಯಾಂಪಲ್ ಕೊಟ್ಟ 24 ಗಂಟೆಯೊಳಗೆ ಫಲಿತಾಂಶ ಸಿಕ್ಕರೆ ಸೋಂಕಿಗೆ ಒಳಗಾದವರು ತಕ್ಷಣವೇ ಚಿಕಿತ್ಸೆ ಪಡೆಯಬಹುದು. ಆಗ ಜೀವಕ್ಕೆ ಹಾನಿಯಾಗುವವುದಿಲ್ಲ ಎಂದು ಡಿಸಿಎಂ ಅವರೆಲ್ಲರಿಗೂ ಮನವರಿಕೆ ಮಾಡಿಕೊಟ್ಟರು.

    ಕೆ.ಸಿ.ಜನರಲ್‍ನಲ್ಲಿ ಆಕ್ಸಿಜನ್ ಕೊರತೆ ಇಲ್ಲ:
    ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಮೆಡಿಕಲ್ ಕಿಟ್ ಪೂರೈಕೆಯಲ್ಲಿ ಕೊರತೆ ಇದೆ. ಖರೀದಿಯಲ್ಲಿ ಕೊಂಚ ಏರುಪೇರಾಗಿದೆ. ಅದೆಲ್ಲವನ್ನೂ ಸರಿಪಡಿಸಲಾಗುತ್ತದೆ. ಇಲ್ಲಿ ಆಮ್ಲಜನಕ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಈ ಆಸ್ಪತ್ರೆಯಲ್ಲಿ ದಿನಕ್ಕೆ ಐದಾರು ಬ್ಯಾಚ್‍ನಲ್ಲಿ ಸ್ಯಾಂಪಲ್‍ಗಳನ್ನು ಲ್ಯಾಬ್‍ಗೆ ಕಳಿಸಲಾಗುತ್ತದೆ. ಇನ್ನೂ ಹೆಚ್ಚು ಬ್ಯಾಚ್‍ಗಳಲ್ಲಿ ಸ್ಯಾಂಪಲ್ ಅನ್ನು ಲ್ಯಾಬ್‍ಗೆ ಕಳಿಸಿ ಎಂದು ಡಿಸಿಎಂ ಸೂಚಿಸಿದರು. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 8 ಸಾವಿರ ಲೀಟರ್ ಸಾಮಥ್ರ್ಯದ ಆಕ್ಸಿಜನ್ ಪ್ಲಾಂಟ್ ಇದೆ. ನಿತ್ಯವೂ 4 ಸಾವಿರ ಲೀಟರ್ ಬಳಕೆ ಆಗುತ್ತಿದೆ ಎಂದು ಡಿಸಿಎಂಗೆ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ.ವೆಂಕಟೇಶಯ್ಯ ಮಾಹಿತಿ ನೀಡಿದರು. ಸೋಂಕು ಬಂದಾಗ ಜನರು ನಿರ್ದಿಷ್ಟ ಆಸ್ಪತ್ರೆಯೇ ಬೇಕು ಅಂತ ಹುಡುಕಬಾರದು. ಕೆ.ಸಿ ಜನರಲ್‍ನಲ್ಲಿ 120 ವೆಂಟಿಲೇಟರ್ ಇದೆ. 450 ಬೆಡ್‍ಗಳಿವೆ, ಅದರಲ್ಲಿ 180ಕ್ಕೂ ಹೆಚ್ಚು ಹಾಸಿಗೆಗಳನ್ನು ಕೋವಿಡ್‍ಗೆ ಮೀಸಲಿಡಲಾಗಿದೆ. ಇನ್ನೂ 100 ಬೆಡ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

    ಲೈಫ್‍ಸೆಲ್‍ಗೆ 3 ಬ್ಯಾಚ್ ಸ್ಯಾಂಪಲ್:
    ಈವರೆಗೆ ದಿನಕ್ಕೆ ಒಮ್ಮೆ ಮಾತ್ರ ಕೋವಿಡ್ ಸ್ಯಾಂಪಲ್ ಸ್ವೀಕರಿಸುತ್ತಿದ್ದ ರಾಜಾಜಿನಗರದ ಲೈಫ್ ಸೆಲ್ ಲ್ಯಾಬ್, ಈಗ 3 ಬ್ಯಾಚ್‍ಗಳಲ್ಲಿ ಸ್ಯಾಂಪಲ್ ಕಳಿಸಿದರೂ ಪರೀಕ್ಷೆ ಮಾಡಿ ರಿಸಲ್ಟ್ ಕೊಡಲು ಮುಂದೆ ಬಂದಿದೆ. ಡಿಸಿಎಂ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಯೋಗಾಲಯದ ತಜ್ಞರು ಈ ಭರವಸೆ ನೀಡಿದ್ದು, ಇಂದಿನಿಂದಲೇ 3 ಬ್ಯಾಚ್ ಸ್ಯಾಂಪಲ್ ಸ್ವೀಕರಿಸಲು ಆಸ್ಪತ್ರೆ ಸಿದ್ಧವಾಗಿದ್ದು, ಈವರೆಗೆ ಲ್ಯಾಬಿಗೆ ಸ್ಯಾಂಪಲ್ ಹೋದ ಮೇಲೆ ರಿಸಲ್ಟ್ ಬರುವುದು 48ರಿಂದ 70 ಗಂಟೆ ಆಗುತ್ತಿತ್ತು. ಈ ವಿಳಂಬದಿಂದ ರೋಗವೂ ಉಲ್ಬಣವಾಗುತ್ತಿತ್ತಲ್ಲದೆ ಪ್ರಾಣಕ್ಕೆ ಹಾನಿ ಉಂಟು ಮಾಡುತ್ತಿತ್ತು. ಬೇಗ ರಿಸಲ್ಟ್, ಬೇಗ ಚಿಕಿತ್ಸೆ ಪಡದರೆ ಜೀವಕ್ಕೆ ಹಾನಿಯಾಗದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಇಎಸ್‍ಐನಲ್ಲಿ ಹಾಸಿಗೆ ಕೊರತೆ ಇಲ್ಲ:
    ರಾಜಾಜಿನಗರದ ಎಎಸ್‍ಐ ಆಸ್ಪತ್ರೆಯಲ್ಲಿ 420 ಹಾಸಿಗೆಗಳಿದ್ದು, ಅವುಗಳಲ್ಲಿ ಕೋವಿಡ್ ಸೋಂಕಿತರಿಗೆ 120 ಬೆಡ್ ಮೀಸಲಿಡಲಾಗಿದೆ. ಇನ್ನೂ 60 ಬೆಡ್ ಮೀಸಲು ಇಡಲು ಸೂಚಿಸಲಾಗಿದ್ದು, ಅಲ್ಲಿಗೆ ಆರ್‍ಎನ್‍ಎ ಎಕ್ಸ್ಟ್ರ್ಯಾಕ್ ಮಿಷನ್ ಹಾಗೂ ವೆಂಟಿಲೇಟರ್‍ಗೆ ಅಳವಡಿಸಲಾಗುವ ಯೂಮಿಡಿಫಯರ್ ಯಂತ್ರದ ಅಗತ್ಯ ಇದ್ದು, ಅವುಗಳನ್ನು ಶೀಘ್ರವೇ ಒದಗಿಸಲಾಗುವುದು. ಜೊತೆಗೆ ಡಾಟಾ ಎಂಟ್ರಿ ಮಾಡುವ ಸಿಬ್ಬಂದಿ ಹಾಗೂ ಲ್ಯಾಬ್ ಟೆಕ್ನಿಷಿಯನ್‍ಗಳ ಕೊರತೆ ಇದ್ದು ಕೂಡಲೇ ಪಾಲಿಕೆ ವತಿಯಿಂದ ಒದಗಿಸಲು ಡಿಸಿಎಂ ಸೂಚಿಸಿದರು. ನಂತರ ಯಾವುದೇ ತುರ್ತು ಸಂದರ್ಭದಲ್ಲಿ ಕೋವಿಡ್ ಸಹಾಯವಾಣಿ 1912 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದ ಅವರು, ಎಲ್ಲ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್, ವ್ಯಾಕ್ಸಿನೇಷನ್, ಹಾಸಿಗೆಗಳ ಪ್ರಮಾಣ, ಆಕ್ಸಿಜನ್ ಮುಂತಾದ ಸಿದ್ಧತೆಗಳನ್ನು ಪರಿಶೀಲಿಸಿದರು.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750 ಹಾಸಿಗೆ
    ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750 ಹಾಸಿಗೆಗಳುಳ್ಳ ಕೋವಿಡ್ ಆಸ್ಪತ್ರೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 350 ಬೆಡ್‍ಗಳ ಆಸ್ಪತ್ರೆ ಇದ್ದು, ಉಳಿದ 400 ಹಾಸಿಗೆಗಳನ್ನು ದಿನಕ್ಕೆ 50 ಬೆಡ್‍ನಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತಿದೆ. ಈಗಾಗಲೇ ಇಲ್ಲಿ 50 ವೆಂಟಿಲೇಟರ್‍ ಗಳಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಪರೀಕ್ಷೆ ಮಾಡಿಸಿಕೊಳ್ಳಲು ಮನವಿ:
    ಬಹಳ ಜನರಿಗೆ ಕೋವಿಡ್ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಕೆಮ್ಮು ಶೀತ, ನೆಗಡಿಯಂಥ ರೋಗ ಲಕ್ಷಣಗಳಿದ್ದವರು ತಪ್ಪದೇ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಳಂಬ ಮಾಡಬಾರದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

    ಎಲ್ಲ ಚಿತಾಗಾರಗಳಲ್ಲಿ ಕೋವಿಡ್ ಮೃತರ ಅಂತ್ಯಕ್ರಿಯೆ:
    ಆಸ್ಪತ್ರೆಗಳಿಗೆ ಭೇಟಿ ಆರಂಭಿಸಿದ ವೇಳೆ ಕೆ.ಸಿ.ಜನರಲ್ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು, “ಬೆಳಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಜತೆ ಮಾತುಕತೆ ನಡೆಸಿದೆ. ಕೆಲ ಆಯ್ದ ಚಿತಾಗಾರಗಳಲ್ಲಿ ಮಾತ್ರ ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸುತ್ತಿದ್ದ ಕಾರಣಕ್ಕೆ ನಗರದಲ್ಲಿ ಅಂತ್ಯ ಸಂಸ್ಕಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ” ಎಂದರು.

    ಇಂದಿನಿಂದ ನಗರದ ಎಲ್ಲ 13 ಚಿತಾಗಾರಗಳಲ್ಲೂ ಕೋವಿಡ್ ಮೃತರ ಅಂತ್ಯಕ್ರಿಯೆ ನಡೆಸಲು ಗುಪ್ತ ಅವರ ಜತೆ ನಡೆಸಿದ ಮಾತುಕತೆ ವೇಳೆ ನಿರ್ಧರಿಸಲಾಯಿತು. ಇನ್ನು ಈ ಸಮಸ್ಯೆ ಉಂಟಾಗುವುದಿಲ್ಲ. ಮೃತರ ಗೌರವಯುತ ಅಂತ್ಯಕ್ರಿಯೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

  • ಕೊರೊನಾ ಟೆಸ್ಟ್ ವೇಳೆ ಎದ್ನೋ ಬಿದ್ನೋ ಎಂದು ಓಡಿದ ಪ್ರಯಾಣಿಕರು

    ಕೊರೊನಾ ಟೆಸ್ಟ್ ವೇಳೆ ಎದ್ನೋ ಬಿದ್ನೋ ಎಂದು ಓಡಿದ ಪ್ರಯಾಣಿಕರು

    ಪಾಟ್ನಾ: ಕೊರೊನಾ ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಹೊರಗೆ ಓಡಿಹೋದ ಘಟನೆ ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣದಲ್ಲಿನಡೆದಿದೆ.

    ರೈಲಿನಿಂದ ಇಳಿದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡುತ್ತಾರೆ ಅಂತಾ ಗೊತ್ತಾಗಿದ್ದೇ ತಡ ನಿಲ್ದಾಣದಿಂದ ಹೊರಗೆ ಹೋಗಲು ಮುಗಿಬಿದ್ದಿದ್ದಾರೆ. ಈ ಮಧ್ಯೆ ಆರೋಗ್ಯ ಸಿಬ್ಬಂದಿ ಕೆಲ ಪ್ರಯಾಣಿಕರನ್ನು ತಡೆದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದಾಗ ಹಿಂದೇಟು ಹಾಕಿದ್ದಾರೆ. ರೈಲ್ವೆ ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದಾರೆ.

    ಪ್ರಯಾಣಿಕರನ್ನು ನಾವು ತಡೆದಾಗ ಅವರು ವಾದ ಮಾಡಲು ಶುರು ಮಾಡಿದ್ರು. ಈ ಘಟನೆ ನಡೆದಾಗ ನಿಲ್ದಾಣದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಬಳಿಕ ಒಬ್ಬರು ಮಹಿಳಾ ಪೊಲೀಸ್ ಬಂದರು ಆದರೆ ಅವರೊಬ್ಬರೇ ಇದ್ದದ್ದರಿಂದ ಅಸಾಹಯಕರಾಗಿದ್ರು ಎಂದು ಸ್ಥಳೀಯ ಕೌನ್ಸಿಲರ್ ಜೈ ತಿವಾರಿ ಹೇಳಿದ್ದಾರೆ.

    ದೇಶದ ವಿವಿಧ ಭಾಗಗಳಿಂದ ಜನರು ಬಿಹಾರಕ್ಕೆ ವಾಪಸ್ಸಾಗುತ್ತಿದ್ದು, ಅವರನ್ನು ಸ್ಕ್ರೀನಿಂಗ್ ಮಾಡಲು ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ಟೆಸ್ಟ್ ಮಾಡುವ ವ್ಯವೆಸ್ಥೆ ಮಾಡಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:ಮಹಾ ವಲಸೆ – ಮುಂಬೈ, ದೆಹಲಿ ನಗರಗಳನ್ನ ತೊರೆಯುತ್ತಿರೋ ಪ್ರವಾಸಿ ಕಾರ್ಮಿಕರು

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಮುಂಬೈ, ಪುಣೆ, ದೆಹಲಿಯಿಂದ ಬರುವ ರೈಲುಗಳು ಪ್ರತಿದಿನ ಬಿಹಾರಕ್ಕೆ ಬರುತ್ತಿದೆ. ಈ ನಗರಗಳಲ್ಲಿ ಲಾಕ್‍ಡೌನ್‍ನಿಂದ ಹಾಗೂ ಉದ್ಯೋಗವಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

  • ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯವಾಣಿ ತೆರೆದ ಸರ್ಕಾರ

    ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯವಾಣಿ ತೆರೆದ ಸರ್ಕಾರ

    – ಕೊರೊನಾ ಪರೀಕ್ಷೆಯ ಅವ್ಯವಸ್ಥೆ ಹಿನ್ನೆಲೆ ಕ್ರಮ

    ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದರೂ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕುರಿತು ಸುದ್ದಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಯಾತ್ರಾರ್ಥಿಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ.

    ಕೇರಳದ ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಹೆಲ್ಪ್ ಲೈನ್ ಆರಂಭಿಸಿ ಸರ್ಕಾರ ಆದೇಶ ಹೊರಡಿಸಿದೆ. 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ಕಾರ್ಯಕ್ರಮಕ್ಕೆ ತೆರಳುವ ಭಕ್ತರ ಸಮಸ್ಯೆ ಆಲಿಸಲು ಹಾಗೂ ಆರೋಗ್ಯ ಸಲಹೆಗಳಿಗಾಗಿ ಈ ಸಹಾಯವಾಣಿಯನ್ನು ಆರಂಭಿಸಿದೆ. ಕೊರೊನಾ ಹಿನ್ನಲೆ ಶಬರಿಮಲೆ ಮಾರ್ಗಸೂಚಿ ವಿವರಿಗಳಿಗಾಗಿ ಕರೆ ಮಾಡಬಹುದು.

    ಕೇರಳ ಗಡಿಯಲ್ಲಿ ಅಥವಾ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೆ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದಾಗಿದೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಲಿದೆ. ಯಾವುದೇ ಮಾಹಿತಿ, ತುರ್ತು ಸಂದರ್ಭದಲ್ಲಿ 080-26709689 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

    ಇತ್ತೀಚೆಗೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರು. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

    ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದರು. ಅಲ್ಲಿನ ವೈದ್ಯರು ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

  • ಫಸ್ಟ್ ಟೈಂ 1 ಲಕ್ಷ ಟೆಸ್ಟ್ – 10,947 ಪಾಸಿಟಿವ್, ಆಸ್ಪತ್ರೆಯಿಂದ 9,832 ಡಿಸ್ಚಾರ್ಜ್

    ಫಸ್ಟ್ ಟೈಂ 1 ಲಕ್ಷ ಟೆಸ್ಟ್ – 10,947 ಪಾಸಿಟಿವ್, ಆಸ್ಪತ್ರೆಯಿಂದ 9,832 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ 1 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.

    ಒಟ್ಟು 48,658 ಮಂದಿಗೆ ಆಂಟಿಜನ್ ಟೆಸ್ಟ್ 55,690 ಮಂದಿಗೆ ಆರ್‌ಟಿಪಿಸಿಆರ್‌ ಮತ್ತು ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,04,348 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 55,24,302 ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಇಂದು ರಾಜ್ಯದಲ್ಲಿ 10,947 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,832 ಮಂದಿ ಬಿಡುಗಡೆಯಾಗಿದ್ದಾರೆ. 113 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 6,68,652ಕ್ಕೆ ಏರಿಕೆಯಾಗಿದೆ. ಈ ಪೈಕಿ 5,42,906 ಮಂದಿ ಬಿಡುಗಡೆಯಾಗಿದ್ದರೆ 1,16,153 ಸಕ್ರೀಯ ಪ್ರಕರಣಗಳಿವೆ. ಒಟ್ಟು 9,574 ಮಂದಿ ಕೊರೊನಾಗೆ ಬಲಿಯಾಗಿದ್ದು, 841 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

    ಎಂದಿನಂತೆ ಬಂಗಳೂರು ನಗರದಲ್ಲಿ 5 ಸಾವಿರ ಮಂದಿಗೆ ಸೋಂಕು ಬಂದಿದೆ. ಉಳಿದಂತೆ ಮೈಸೂರು 979, ಉತ್ತರ ಕನ್ನಡ 462, ಹಾಸನ 471, ದಕ್ಷಿಣ ಕನ್ನಡದಲ್ಲಿ 447 ಮಂದಿಗೆ ಸೋಂಕು ಬಂದಿದೆ. ಬೆಂಗಳೂರು ನಗರದಲ್ಲಿ 303, ಧಾರವಾಡ 93, ಬಳ್ಳಾರಿ 80, ಹಾಸನದಲ್ಲಿ 54 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಮಾಣಿ ವಲಯ ಸ್ಕೌಟ್, ಗೈಡ್ಸ್‌ನಿಂದ ಗಂಟಲು ದ್ರವ ಪರೀಕ್ಷಾ ಉಪಕರಣ ಕೊಡುಗೆ

    ಮಾಣಿ ವಲಯ ಸ್ಕೌಟ್, ಗೈಡ್ಸ್‌ನಿಂದ ಗಂಟಲು ದ್ರವ ಪರೀಕ್ಷಾ ಉಪಕರಣ ಕೊಡುಗೆ

    – ಸರ್ಕಾರಿ ಆಸ್ಪತ್ರೆಗೆ ಉಪಕರಣ ಹಸ್ತಾಂತರ

    ಮಂಗಳೂರು: ಬಂಟ್ವಾಳದ ಮಾಣಿ ವಲಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಗು, ಗಂಟಲ ದ್ರವ ಸಂಗ್ರಹಿಸುವ ಉಪಕರಣವನ್ನು ದಾನವಾಗಿ ನೀಡಲಾಯಿತು.

    ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆಯವರು ಉಪಕರಣವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್-19 ಜಗತ್ತನ್ನೇ ಬಾಧಿಸಿದ್ದು, ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವ ಉದ್ದೇಶದಿಂದ ಮಾಣಿ ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆಯ ಸಾಧನವನ್ನು ಕೊಡುಗೆಯಾಗಿ ನೀಡಿರುವುದು ಅಭಿನಂದನೀಯ ಎಂದರು.

    ಮಾಣಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ದಾನಿಗಳು ಹಾಗೂ ಸಮಾನ ಮನಸ್ಕರ ಸಹಕಾರದೊಂದಿಗೆ ಮಾಣಿ ಸ್ಥಳೀಯ ಸಂಸ್ಥೆಯ ವತಿಯಿಂದ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿ ಎಂಬಂತೆ ನಮ್ಮ ಸ್ಕೌಟ್ಸ್ ಸಂಸ್ಥೆ ವತಿಯಿಂದ ಮೂಗು, ಗಂಟಲು ದ್ರವ ಪರೀಕ್ಷಾ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದೇವೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಒದಗಿಸಿದ್ದೇವೆ ಎಂದರು.

    ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಕೊರೊನಾ ನಿಗ್ರಹಕ್ಕೆ ಆಸ್ಪತ್ರೆ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಸ್ಕೌಟ್ಸ್ ಸಂಸ್ಥೆ ವತಿಯಿಂದ ನಮ್ಮ ಆಸ್ಪತ್ರೆಗೆ ಕೊರೊನಾ ಟೆಸ್ಟ್ ಗೆ ಬಳಸುವ ಸಾಧನ ನೀಡಿರುವುದು ಹೆಚ್ಚು ಉಪಕಾರಿಯಾಗಿದೆ. ಇದಕ್ಕಾಗಿ ಹೆಚ್ಚು ಮುತುವರ್ಜಿ ವಹಿಸಿದ ಇಬ್ರಾಹಿಂ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಾಣಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಇಬ್ರಾಹಿಂ ಕೆ. ಮಾಣಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ಟೆಸ್ಟ್ ನಡೆಸದೇ ಕೊರೊನಾ ಸೋಂಕು ತಗುಲಿದೆ ಎಂದ ವೈದ್ಯರು- ವ್ಯಕ್ತಿ ಕಂಗಾಲು

    ಟೆಸ್ಟ್ ನಡೆಸದೇ ಕೊರೊನಾ ಸೋಂಕು ತಗುಲಿದೆ ಎಂದ ವೈದ್ಯರು- ವ್ಯಕ್ತಿ ಕಂಗಾಲು

    ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರ ಯಡವಟ್ಟು ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಪರೀಕ್ಷೆ ಮಾಡಿಸದೇ ನಿಮಗೆ ಕೊರೊನಾ ಪಾಸಿಟಿವ್ ಇದೆ ಎಂದು ಹೇಳಿ ಜನರನ್ನು ಆತಂಕಕ್ಕೆ ದೂಡಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೇವಲ ಎರಡು ತಿಂಗಳಲ್ಲಿ ಸಾವಿರ ಗಡಿ ದಾಟಿದೆ. ಈ ಮಧ್ಯೆ ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರು ಮಾಡಿರುವ ಯಡವಟ್ಟು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಚನ್ನಪಟ್ಟಣ ತಾಲೂಕಿನ ಮಂಡಿಪೇಟೆ ನಿವಾಸಿ ವೃದ್ಧ ಅಮೀರ್ ಜಾನ್ ಜುಲೈ 29ರಂದು ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿದ್ದಾರೆ. ಮೊದಲಿಗೆ ಮನೆ ವಿಳಾಸ, ಫೋನ್ ನಂಬರ್ ಕೊಟ್ಟು ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಟೆಸ್ಟಿಂಗ್ ಕಿಟ್ ನೀಡಿದ್ದಾರೆ.

    ಈ ವೇಳೆ ಮನೆಯಿಂದ ಫೋನ್ ಕರೆ ಬಂದ ಕಾರಣ ಪರೀಕ್ಷೆ ಮಾಡಿಸಿಕೊಳ್ಳದೆ ಮನೆಗೆ ವಾಪಾಸ್ ಹೋಗಿದ್ದಾರೆ. ಆದರೆ ಆಗಸ್ಟ್ 3ರಂದು ಅವರ ಮೊಬೈಲ್ ನಂಬರ್‍ಗೆ ಕೊರೊನಾ ಪಾಸಿಟಿವ್ ಎಂದು ಸಂದೇಶ ಬಂದಿದೆ. ಅಲ್ಲದೆ ತಾಲೂಕು ಆಸ್ಪತ್ರೆಯಿಂದ ಸಹ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಕುಟುಂಬ, ನಾವು ಪರೀಕ್ಷೆ ಮಾಡಿಸಿಕೊಳ್ಳದೇ ಹೇಗೆ ಪಾಸಿಟಿವ್ ವರದಿ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

    ಜುಲೈ 29ರಂದು 33 ಜನರ ಸ್ಯಾಂಪಲ್ ಪಡೆದಿರುವುದಾಗಿ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಯವರು ನೀಡಿದ್ದ ಟೆಸ್ಟ್ ಕಿಟ್‍ನ್ನು ಲ್ಯಾಬ್‍ಗೆ ಕಳುಹಿಸದೇ ವರದಿ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತಿದೆ. ಆ ಟೆಸ್ಟ್ ಕಿಟ್ ಬೇರೆ ಎಲ್ಲೂ ಸಿಗುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತದೆ. ಅಲ್ಲದೆ ಅದರ ಮೇಲೆ ವ್ಯಕ್ತಿಯ ಹೆಸರು ನಮೂದಿಸಲಾಗಿದೆ. ಹೀಗಿದ್ದಾಗ ಟೆಸ್ಟ್‍ಗೆ ಕಳುಹಿಸದೇ ಪಾಸಿಟಿವ್ ವರದಿ ಬರಲು ಹೇಗೆ ಸಾಧ್ಯ ಎಂಬ ಅನುಮಾನ ಮೂಡಿದೆ.

    ಇಷ್ಟೆಲ್ಲ ಗೊಂದಲಗಳು ಮೂಡಿದ ಮೇಲೆ ಅಮೀರ್ ಜಾನ್‍ಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದೆ. ಈ ವರದಿಯಲ್ಲೂ ನೆಗೆಟಿವ್ ಎಂದು ಬಂದಿದೆ. ಈ ಬಗ್ಗೆ ತಾಲೂಕು ಆಸ್ಪತ್ರೆ ಸರ್ಜನ್ ಅವರನ್ನ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ತಾಲೂಕು ಆಸ್ಪತ್ರೆ ವೈದ್ಯರು ಮಾಡುತ್ತಿರುವ ಯಡವಟ್ಟಿನಿಂದ ಜನ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ.