Tag: ಕೊರೊನಾ ನಿಯಮ

  • ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಯಾದಗಿರಿ: ಜನಾರ್ಶೀವಾದ ಕಾರ್ಯಕ್ರಮಕ್ಕೆ ಯಾದಗಿರಿಗೆ ಆಗಮಿಸಿದ ಕೇಂದ್ರ ಸಚಿವ ಖೂಬಾ ಅವರ ಸ್ವಾಗತಕ್ಕೆ ಜನ ನಾಡಬಂದೂಕು ಸಿಡಿಸಿ ಭರ್ಜರಿಯಾಗಿ ಸ್ವಾಗತ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಯರಗೋಳ ಗ್ರಾಮದಲ್ಲಿ ಜನ ಕೇಂದ್ರ ಸಚಿವ ಭಗವಂತ ಖೂಬಾ ಆಗಮನ ಮಾಡುತ್ತಿದ್ದಂತೆ ನಾಡಬಂದೂಕು ಕೈಯಲ್ಲಿ ಹಿಡಿದುಕೊಂಡು ಪುಷ್ಪವನ್ನು ಅರ್ಪಿಸಿ ಭರ್ಜರಿ ಸ್ವಾಗತ ಮಾಡಿದ್ದಾರೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮಕ್ಕೆ ಖೂಬಾ ಆಗಮಿಸಿದ್ದರು. ಇದನ್ನೂ ಓದಿ:  ಡಾ.ಜಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಬೇಕು: ಜೆಡಿಎಸ್ ಶಾಸಕ

    ಜನಾರ್ಶೀವಾದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಜನ ಜಾತ್ರೆ ಸೇರಿತ್ತು. ಜನಾರ್ಶೀವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಭಗವಂತ ಖೂಬಾ ಅವರನ್ನು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಸ್ವಾಗತಮಾಡಿಕೊಂಡಿದ್ದಾರೆ.

  • ನೂರಾರು ಜನ ಸೇರಿಸಿ ಅದ್ಧೂರಿ ಕಾರ್ಯಕ್ರಮ- ನಿರ್ಗಮಿತ ತಹಶಿಲ್ದಾರ್ ಕೊರೊನಾ ರೂಲ್ಸ್ ಬ್ರೇಕ್

    ನೂರಾರು ಜನ ಸೇರಿಸಿ ಅದ್ಧೂರಿ ಕಾರ್ಯಕ್ರಮ- ನಿರ್ಗಮಿತ ತಹಶಿಲ್ದಾರ್ ಕೊರೊನಾ ರೂಲ್ಸ್ ಬ್ರೇಕ್

    – ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಕಾರ್ಯಕ್ರಮ

    ಕೋಲಾರ: ಕೊರೊನಾ ನಿಯಮ ಗಾಳಿಗೆ ತೂರಿ ಕೋಲಾರ ತಾಲೂಕಿನ ನಿರ್ಗಮಿತ ತಹಶೀಲ್ದಾರ್ ಶೋಭಿತಾ ಅದ್ಧೂರಿ ಕಾರ್ಯಕ್ರಮ ಮಾಡಿದ್ದು, ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ತಮ್ಮ ಪೋಷಕರಿಗೆ 60 ವರ್ಷ ತುಂಬಿದಕ್ಕೆ ಕೋಲಾರ ಹೊರಹೊಲಯದ ನಂದಿನಿ ಪ್ಯಾಲೇಸ್ ನಲ್ಲಿ ವಿಶೇಷ ಪೂಜೆ ಹಾಗೂ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ನೂರಾರು ಜನ ಭಾಗವಹಿಸಿದ್ದಾರೆ. ಈ ಮೂಲಕ ಕೊರೊನಾ ನಿಯಮ ಗಾಳಿಗೆ ತೂರಿದ್ದಾರೆ. ಕಾರ್ಯಕ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.

    ಪೋಷಕರಿಗೆ 60 ವರ್ಷ ತುಂಬಿದ ಹಿನ್ನೆಲೆ ವಿಶೇಷ ಪೂಜೆ ಹಾಗೂ ಕಾರ್ಯಕ್ರಮ ಮಾಡಿದ್ದು, ಅದ್ಧೂರಿಯಾಗಿ ಹೂವಿನ ಅಲಂಕಾರದೊಂದಿದೆ ದೇವರಿಗೆ ಪೂಜೆ, ಭರ್ಜರಿ ಭೋಜನ ಕೂಟ ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸಹ ಭಾಗಿಯಾಗಿದ್ದು, ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

  • ಕೊರೊನಾ ಭೀತಿ-ಮಂಡ್ಯದಲ್ಲಿ 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧ

    ಕೊರೊನಾ ಭೀತಿ-ಮಂಡ್ಯದಲ್ಲಿ 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧ

    ಮಂಡ್ಯ: 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಮಂಡ್ಯಾದಲ್ಲಿ ಜಿಲ್ಲಾಡಳಿತ ನಿಷೇಧ ಹೇರುವ ಮೂಲಕವಾಗಿ ಕೊರೊನಾ ಕುರಿತಾಗಿ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ.

    ಕೊರೊನಾ 3ನೇ ಅಲೆ ತಡೆಗೆ ಮಂಡ್ಯ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 30ಕ್ಕೂ ಹೆಚ್ಚು ಜನ ಸೇರುವ ಎಲ್ಲಾ ಚಟುವಟಿಕೆಗಳಿಗೆ ನಿಬರ್ಂಧಿ ವಿಧಿಸಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ, ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳು ಕ್ಲೋಸ್

    ಜಿಲ್ಲೆಯಲ್ಲಿ 30ಕ್ಕಿಂತ ಹೆಚ್ಚು ಜನ ಸೇರುವ ಮದುವೆ, ನಿಶ್ಚಿತಾರ್ಥ, ಬೀಗರ ಔತಣಕೂಟ, ಅಂತ್ಯಸಂಸ್ಕಾರ, ತಿಥಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ.

     

    ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿಶೇಷ ಆಚರಣೆ, ಧಾರ್ಮಿಕ ಸೇವೆ, ಉತ್ಸವಗಳನ್ನು ನಿಷೇಧ ಮಾಡಲಾಗಿದೆ. ಅಲ್ಲದೇ ದೇವಸ್ಥಾನಗಳಿಗೆ ವಾರಾಂತ್ಯದಲ್ಲಿ ಹಾಗೂ ಸಾರ್ವತ್ರಿಕ ರಜೆಯ ದಿನಗಳಲ್ಲಿ ಭಕ್ತರಿಗೆ ದೇವಸ್ಥಾನಗಳಿಗೆ ನಿಷೇಧ ಹೇರಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜರುಗುವ ಗ್ರಾಮ ದೇವತೆಗಳ ಹಬ್ಬ, ಸಾಮೂಹಿಕ ಭೋಜನಕ್ಕೂ ಬ್ರೇಕ್ ಹಾಕಲಾಗಿದೆ.

  • ನಾಳೆ ಅನ್‍ಲಾಕ್-ಹೋಟೆಲ್, ರೆಸ್ಟೋರೆಂಟ್, ಜಿಮ್ ಓಪನ್

    ನಾಳೆ ಅನ್‍ಲಾಕ್-ಹೋಟೆಲ್, ರೆಸ್ಟೋರೆಂಟ್, ಜಿಮ್ ಓಪನ್

    ಯಾದಗಿರಿ: ನಾಳೆಯಿಂದ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಶೇ50 ರಷ್ಟು ಅವಕಾಶ ನೀಡಿರುವ ಹಿನ್ನೆಲೆ ಯಾದಗಿರಿ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ನಾಳೆ ತೆರೆಯಲು ಭರ್ಜರಿ ತಯಾರಿ ನಡೆದಿದೆ.

    ನಗರದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಸ್ವಚ್ಚತೆ ಕಾರ್ಯ ಆರಂಭವಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಪ್ರಕಾರ, ಸ್ಯಾನಿಟೈಸಿಂಗ್, ಜಾಗೃತಿ ಮೂಡಿಸುವ ಬೋರ್ಡ್‍ಗಳನ್ನು ಅಳವಡಿಸಲಾಗುತ್ತಿದೆ. ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಒಂದು ಟೇಬಲ್‍ಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

    ಜಿಮ್  ಓಪನ್‍ಗೆ ಅವಕಾಶ ನೀಡಿರುವ ಹಿನ್ನೆಲೆ ಜಿಮ್ ಕೇಂದ್ರಗಳಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯಿಂದ ಜಿಮ್ ಓಪನ್ ಹಿನ್ನೆಲೆ, ಯಾದಗಿರಿ ಜಿಮ್ಗಳಲ್ಲಿ ತಯಾರಿ ನಡೆಯುತ್ತಿದೆ. ವ್ಯಾಯಾಮ ಶಾಲೆಗಳಲ್ಲಿ ಶೇ50 ರಷ್ಟು ಅವಕಾಶ ನೀಡಿದ ಹಿನ್ನೆಲೆ, ಸಿಫ್ಟ್ ಮಾದರಿಯಲ್ಲಿ ಜಿಮ್ ನಡೆಸಲು ಮಾಲೀಕರು ತಯಾರಿ ನಡೆಸಿದ್ದಾರೆ. ಸದ್ಯ ಜಿಮ್ ಗಳಲ್ಲಿ ಕ್ಲಿನಿಂಗ್, ಸ್ಯಾನಿಟೈಸಿಂಗ್ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಅನುಗುಣವಾಗಿ ಸಿದ್ಧತೆ ನಡೆದಿದೆ .

    ಆದರೆ ಸಂಜೆ 5 ಗಂಟೆಯ ನಂತರ ನೈಟ್ ಕಫ್ರ್ಯೂ ಜಾರಿ ಹಿನ್ನಲೆ, ಸಂಜೆ ಟೈಮ್‍ನಲ್ಲಿ ಜಿಮ್ ಬರುವವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಜಿಮ್‍ಗಳಿಗೆ ಈ ನಿಯಮ ಸಡಲಿಕೆ ಮಾಡಬೇಕು ಅಂತ ಜೀಮ್ ಮಾಲೀಕರು ಒತ್ತಾಯ ಮಾಡಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘಿಸಿದ 51 ಮಂದಿ ವಿರುದ್ಧ ಎಫ್‍ಐಆರ್: ಚಾಮರಾಜನಗರ ಎಸ್‍ಪಿ

    ಕೋವಿಡ್ ನಿಯಮ ಉಲ್ಲಂಘಿಸಿದ 51 ಮಂದಿ ವಿರುದ್ಧ ಎಫ್‍ಐಆರ್: ಚಾಮರಾಜನಗರ ಎಸ್‍ಪಿ

    ಚಾಮರಾಜನಗರ: ದೇಶಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ಬೆಡ್, ವೆಂಟಿಲೇಟರ್ ಸಿಗದೆ ಸೋಂಕಿತರು ಪರದಾಡುತ್ತಿದ್ದಾರೆ. ಇಷ್ಟಾದರೂ ಜನ ಮಾತ್ರ ಜಾಗೃತರಾಗುತ್ತಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ದಂಡ ವಿಧಿಸುವುದರ ಜೊತೆಗೆ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತಿದೆ. ಹೀಗೆ ಕೊರೊನಾ ನಿಯಮ ಉಲ್ಲಂಘಿಸಿದಕ್ಕೆ ಜಿಲ್ಲೆಯಲ್ಲಿ 51 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಈ ಕುರಿತು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 4 ತಿಂಗಳಿನಲ್ಲಿ ಮಾಸ್ಕ್ ಹಾಕದವರಿಂದ 14 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಮೂರು ದಿನಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಛತ್ರ, ಮದ್ಯದಂಗಡಿ ಮಾಲೀಕರು ಸೇರಿದಂತೆ 51 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.

    ಒಟ್ಟು 51 ಎಫ್‍ಐಆರ್ ಗಳಲ್ಲಿ 47 ವಿಪತ್ತು ನಿರ್ವಹಣೆ ಕಾಯ್ದೆಯಡಿ ದಾಖಲಿಸಲಾಗಿದೆ. ಉಳಿದ 4 ಎಪಿಡಮಿಕ್ ಆ್ಯಕ್ಟ್ ಅಡಿ ಕೇಸ್ ರಿಜಿಸ್ಟರ್ ಮಾಡಲಾಗಿದೆ. ಲಾಕ್‍ಡೌನ್ ಗೆ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿಯಮ ಮೀರಿ ವರ್ತನೆ ಕಂಡರೆ ವಾಹನಗಳನ್ನು ಜಪ್ತಿ ಮಾಡಿ ಎಫ್‍ಐಆರ್ ದಾಖಲಿಸಲು ಸೂಚಿಸಲಾಗಿದೆ ಎಂದರು.

    ನಗರದ ಷರೀಫ್ ವೃತ್ತದಲ್ಲಿ ಅಸಡ್ಡೆಯಿಂದ ಮಾಸ್ಕ್ ಧರಿಸದೆ ತಿರುಗಾಡುವವರಿಗೆ, ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಹಿಡಿದು 100 ರೂ. ದಂಡ ವಿಧಿಸಲಾಗಿದೆ. ಇದೇ ತಪ್ಪನ್ನು ಪುನರಾವರ್ತಿಸಿದರೆ ವಾಹನ ಜಪ್ತಿ ಮಾಡುವ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

  • ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ

    ಮದುವೆ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ

    ಚಿಕ್ಕೋಡಿ: ಕೊರೊನಾ ರಣಕೇಕೆ ಹಿನ್ನೆಲೆ ರಾಜ್ಯಾದ್ಯಂತ ಸಭೆ, ಮದುವೆ ಸಮಾರಂಭಗಳಿಗೆ ಸರ್ಕಾರ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕೋವಿಡ್ ನಿಯಮದ ನಡುವೆಯೂ ಅದ್ಧೂರಿ ಮದುವೆ ಆಯೋಜಿಸಿದ್ದ ವಧ ವರನ ಮೇಲೆ ಪ್ರಕರಣ ದಾಖಲಾಗಿದೆ.

    ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸುರುವ ಕೊರೊನಾ ಟಫ್ ರೂಲ್ಸ್ ಬ್ರೇಕ್ ಮಾಡಿ ಸಂಕೇಶ್ವರ ಪಟ್ಟಣದ ನೀಡಸೊಸಿ ರಸ್ತೆಯಲ್ಲಿರುವ ಮಿಲನ್ ಹಾಲ್ ದಲ್ಲಿ ಅದ್ಧೂರಿ ಮದುವೆ ಆಯೋಜನೆ ಮಾಡಿಕೊಂಡಿದ್ದರು. ಮದುವೆಗೆ ಐವತ್ತು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದು ಕೂಡ ತಹಶೀಲ್ದಾರ್ ಕಚೇರಿಯಿಂದ ಪಾಸ್ ಪಡೆಯಬೇಕು. ಆದ್ರೆ ಮದುವೆಯಲ್ಲಿ ಎಲ್ಲ ನಿಯಮಗಳನ್ನ ಬ್ರೇಕ್ ಮಾಡಲಾಗಿತ್ತು.

    ಹುಬ್ಬಳ್ಳಿ ಮೂಲದ ವರ ಕಾರ್ತಿಕ್ ಗಾಯಕ್ವಾಡ, ವಧು ಮೇಘ ಹಾಗೂ ಕಲ್ಯಾಣ ಮಂಟಪದ ಮಾಲೀಕ ಝಾಕರೀಯಾ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮದುವೆ ನಡೆದಿದೆ.

  • ಅಧಿಕ ಜನ ಸೇರಿಸಿ ವಿವಾಹ- ಕೋವಿಡ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

    ಅಧಿಕ ಜನ ಸೇರಿಸಿ ವಿವಾಹ- ಕೋವಿಡ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

    ಧಾರವಾಡ: ಮಹಾನಗರ ಪಾಲಿಕೆ ವಲಯ 2ರ ವ್ಯಾಪ್ತಿಯಲ್ಲಿಯ ರಾಯಲ್ ಕಮ್ಯುನಿಟಿ ಹಾಲ್‍ನಲ್ಲಿ ಇಂದು ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕ ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಪೊಲೀಸ್, ಕಂದಾಯ ಇಲಾಖೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮದುವೆ ಮನೆಯವರ ಹಾಗೂ ಸಭಾಂಗಣದ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

    ಭೀಮಪ್ಪ ಜಿ.ಬಾಂಬೆ ಅವರು ಏಪ್ರಿಲ್ 20 ರಂದು ಅರ್ಜಿ ಸಲ್ಲಿಸಿ, ನಿಯಮಗಳ ಪ್ರಕಾರ 100 ಜನರನ್ನು ಆಹ್ವಾನಿಸಲು ಅನುಮತಿ ಪಡೆದಿದ್ದರು. ಏಪ್ರಿಲ್ 21 ರಿಂದ ಜಾರಿಗೊಂಡ ಹೊಸ ಮಾರ್ಗಸೂಚಿಗಳ ಪ್ರಕಾರ ಈ ಮಿತಿಯು 50ಕ್ಕೆ ಸೀಮಿತವಾಗಿತ್ತು.

    ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ 200ಕ್ಕೂ ಅಧಿಕ ಜನರು ಸೇರಿದ್ದರು. ಹೀಗಾಗಿ ಪಾಲಿಕೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಶಹರ ಪೊಲೀಸ್ ಠಾಣೆ ಅಧಿಕಾರಿಗಳು ಮದುವೆ ಮನೆಯವರು ಹಾಗೂ ಕಲ್ಯಾಣಮಂಟಪದ ಸಂಘಟಕರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಾಸ್ಕ್, ಸಾಮಾಜಿಕ ಅಂತರ ಕಾಪಾಡದಿದ್ದರೆ ಜೈಲೇ ಗತಿ- ಕೊಡಗು ಎಸ್‍ಪಿ ಎಚ್ಚರಿಕೆ

    ಮಾಸ್ಕ್, ಸಾಮಾಜಿಕ ಅಂತರ ಕಾಪಾಡದಿದ್ದರೆ ಜೈಲೇ ಗತಿ- ಕೊಡಗು ಎಸ್‍ಪಿ ಎಚ್ಚರಿಕೆ

    ಮಡಿಕೇರಿ: ರಾಜ್ಯಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಸಹ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇಷ್ಟಾದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಕೊರೊನಾ ನಿಯಮ ಪಾಲಿಸದಿದ್ದರೆ ಜೈಲೇ ಗತಿ ಎಂದು ಎಸ್‍ಪಿ ಕ್ಷಮಾ ಮಿಶ್ರಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರೆ ಇನ್ನು ಮುಂದೆ ಜೈಲೇ ಗತಿ. ಮಾಸ್ಕ್ ಹಾಕದಿದ್ದರೆ ಸಾಮಾಜಿಕ ಅಂತರ ಕಾಪಾಡದಿದ್ದರೆ ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈಗಾಗಲೇ ಕೋವಿಡ್ ನಿಯಮ ಉಲ್ಲಂಘಿಸಿದ 11 ಜನರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಅಷ್ಟೇ ಅಲ್ಲದೆ ಈ 11 ಜನರ ಮೇಲೆ ಜಾಮೀನು ರಹಿತ ಕೇಸ್ ದಾಖಲು ಮಾಡಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ಮೇಲೆ ಎಫ್‍ಐಆರ್ ದಾಖಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿಸಲಾಗಿದ್ದು, ಕೊಡಗಿನ ಕುಶಾಲನಗರದಲ್ಲಿ 9 ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ತಲಾ ಒಂದು ಕೇಸ್ ದಾಖಲು ಮಾಡಲಾಗಿದೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚು ಕೇಸ್ ದಾಖಲಿಸಲಾಗುವುದು ಎಂದು ಖಡಕ್ ವಾರ್ನ್ ಮಾಡಿದ್ದಾರೆ.

    ಮಾಸ್ಕ್, ಸಾಮಾಜಿಕ ಅಂತರ ಪಾಲಿಸದೆ ಎಲ್ಲೆಂದರಲ್ಲಿ ಜನ ಸೇರುವುದು, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇನ್ನೊಂದೆಡೆ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿತ್ಯ ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೆ ಇಂದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 183 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಷ್ಟಾದರೂ ಜನ ಎಚ್ಚೆತ್ತುಕೊಂಡಿಲ್ಲ, ಹೀಗಾಗಿ ಕಠಿಣ ಕ್ರಮ ಅಗತ್ಯವಾಗಿದೆ ಎಂದರು.

  • ವೇಲ್ ತೋರಿಸಿ ಮಾಸ್ಕ್ ಅಂತಾರೆ- ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಬೇಜವಾಬ್ದಾರಿ

    ವೇಲ್ ತೋರಿಸಿ ಮಾಸ್ಕ್ ಅಂತಾರೆ- ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಬೇಜವಾಬ್ದಾರಿ

    – ಮಾಸ್ಕ್, ಸಾಮಾಜಿಕ ಅಂತರ ಯಾವುದೂ ಇಲ್ಲ

    ಚಿಕ್ಕಮಗಳೂರು: ತಾಲೂಕಿನ ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಪ್ರವಾಸಿಗರ ಜಾತ್ರೆಯಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಯಾವುದೂ ಇಲ್ಲದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಈ ಮೂಲಕ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ. ಯಾಕೆ ಮಾಸ್ಕ್ ಹಾಕಿಲ್ಲ ಎಂದು ಪ್ರಶ್ನಿಸಿದರೆ, ಬೆಟ್ಟ ಹತ್ತೋದಕ್ಕೆ ಸುಸ್ತಾಗುತ್ತೆ, ಕಾಫಿನಾಡ ಗಾಳಿಯನ್ನು ಸವಿಯಬೇಕು, ಕಾರಲ್ಲಿತ್ತು ಮರೆತು ಬಂದೆ, ಜೇಬಲ್ಲಿ ಇದೆ ಹಾಕುತ್ತೇನೆ ಎಂದು ನೆಪ ಹೇಳುತ್ತಾರೆ. ಕೆಲ ಯುವತಿಯರು ವೇಲ್ ತೋರಿಸಿ ಮಾಸ್ಕ್ ಇದೆಯಲ್ಲಾ ಸರ್, ಇದೇ ಮಾಸ್ಕ್ ಎನ್ನುತ್ತಾರೆ. ಆದರೆ ಮುಖಕ್ಕೆ ಮಾತ್ರ ಕಟ್ಟಿಕೊಳ್ಳಲ್ಲ.

    ಶುಕ್ರವಾರ ಗುಡ್‍ಫ್ರೈಡೆ ಶನಿವಾರ-ಭಾನುವಾರ ವೀಕ್ ಎಂಡ್ ಎಂದು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ. ಕೊರೊನಾ ನಿಯಮಗಳನ್ನು ಮಾತ್ರ ಪಾಲಿಸುತ್ತಿಲ್ಲ.

    ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸಿಂಗಲ್ ಡಿಜಿಟ್ ಇದ್ದ ದಿನದ ಸೋಂಕಿತರ ಸಂಖ್ಯೆ ಕಳೆದೊಂದು ವಾರದಲ್ಲಿ 50-60ರ ಗಡಿ ಮುಟ್ಟಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

    ಮುಳ್ಳಯ್ಯನಗಿರಿಯಲ್ಲಿ ಪೊಲೀಸರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಅಥವಾ ಜಿಲ್ಲಾಡಳಿತ ನೇಮಕ ಮಾಡಿರುವ ಯಾರೂ ಇಲ್ಲ. ಇದು ಪ್ರವಾಸಿಗರ ಬೇಜವಾಬ್ದಾರಿಗೆ ಕಾರಣವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಮುಳ್ಳಯ್ಯನಗಿರಿ ಭಾಗಕ್ಕೆ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

  • ಮಸ್ಕಿ ಉಪಚುನಾವಣೆ ಬಿಜೆಪಿ ಸಭೆ- ಕೊರೊನಾ ನಿಯಮ ಗಾಳಿಗೆ

    ಮಸ್ಕಿ ಉಪಚುನಾವಣೆ ಬಿಜೆಪಿ ಸಭೆ- ಕೊರೊನಾ ನಿಯಮ ಗಾಳಿಗೆ

    ರಾಯಚೂರು: ಮಸ್ಕಿ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಪಾಟೀಲ್ ಗೆಲುವಿಗಾಗಿ ಮಸ್ಕಿಯಲ್ಲಿ ಬೂತ್ ಸಮಿತಿ ಕಾರ್ಯಕರ್ತರ ಸಭೆ ಆಯೋಜಿಸಿತ್ತು. ಸಭೆಯಲ್ಲಿ ಬಿಜೆಪಿ ನಾಯಕರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

    ಮಸ್ಕಿ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ನಡೆದ ಸುಮಾರು 231 ಬೂತ್ ಸಮಿತಿಗಳ ಸಭೆಯಲ್ಲಿ ಒಂದು ಬೂತ್ ಸಮಿತಿಯಿಂದ 12 ಜನ ಕಾರ್ಯಕರ್ತರು ಆಗಮಿಸಿದ್ದು, ಒಟ್ಟು 2,500ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

    ಸಭೆಯಲ್ಲಿ ಸಚಿವ ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ, ಸಂಸದ ರಾಜಾ ಅಮರೇಶ್ವರ ನಾಯಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಭಾಗಿಯಾಗಿದ್ದರು. ಆದರೆ ಕೋವಿಡ್ ನಿಯಮಗಳು ಮಾತ್ರ ಪಾಲನೆಯಾಗಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಾವು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ, ಆದರೆ ಜನ ಕೇಳುವುದಿಲ್ಲ ಎಂದರು. ಈ ಬಗ್ಗೆ ವಿಜಯೇಂದ್ರರನ್ನು ಪ್ರಶ್ನಿಸಿದರೆ, ಉತ್ತರಿಸದೆ ಕಾರ್ಯಕರ್ತರಿಗೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿ ಹೊರಟರು.

    ಸಾರ್ವಜನಿಕ ಸಭೆ, ಸಮಾರಂಭ, ವಿವಾಹ ಸೇರಿದಂತೆ ಎಲ್ಲೆಡೆ ಅನ್ವಯವಾಗುವ ಕಠಿಣ ಕೋವಿಡ್ ನಿಯಮಗಳು ಚುನಾವಣಾ ಪ್ರಚಾರಕ್ಕೆ ಮಾತ್ರ ಅನ್ವಯವಾಗುತ್ತಿಲ್ಲ. ಪ್ರಚಾರ ಸಭೆ, ಸಮಾವೇಶಗಳಲ್ಲಿ ಭಾಗವಹಿಸುವ ಜನ ಕನಿಷ್ಠ ಮಾಸ್ಕ್ ಸಹ ಧರಿಸುವುದಿಲ್ಲ. ಸ್ವತಃ ರಾಜಕೀಯ ನಾಯಕರೇ ಮಾಸ್ಕ್ ಧರಿಸದೇ ಪ್ರಚಾರ ಕಾರ್ಯ ನಡೆಸಿದ್ದಾರೆ. ಕೋವಿಡ್ ನಿಯಮಗಳು ಚುನಾವಣಾ ಪ್ರಚಾರಕ್ಕೆ ಯಾಕೆ ಅನ್ವಯವಾಗುತ್ತಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.