Tag: ಕೊರೊನಾ ಜಾಗೃತಿ

  • ರಾಯಚೂರು ಪೊಲೀಸರಿಂದ ಬೀದಿನಾಟಕ-ಯಮನ ವೇಷ ಧರಿಸಿ ಜನ ಜಾಗೃತಿ

    ರಾಯಚೂರು ಪೊಲೀಸರಿಂದ ಬೀದಿನಾಟಕ-ಯಮನ ವೇಷ ಧರಿಸಿ ಜನ ಜಾಗೃತಿ

    ರಾಯಚೂರು: ಯಮನ ವೇಷ ಧರಿಸಿ ಪೊಲೀಸ್ ಸಿಬ್ಬಂದಿ ಜನರನ್ನ ಚದುರಿಸುವ ಮೂಲಕ ರಾಯಚೂರಿನಲ್ಲಿ ಕೊರೊನಾ ಜಾಗೃತಿ ಮೂಡಿಸಿದರು. ಲಾಕ್‍ಡೌನ್ ಸಡಿಲಿಕೆ ಹಾಗೂ ಮದ್ಯದಂಗಡಿ ಆರಂಭ ಹಿನ್ನೆಲೆ ಜನರ ಓಡಾಟ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಜನ ಜಾಗೃತಿಗೆ ಮುಂದಾಗಿದೆ.

    ಪೊಲೀಸ್ ಸಿಬ್ಬಂದಿಗಳೇ ವೇಷ ಹಾಕಿಕೊಂಡು ಬೀದಿನಾಟಕ ಮಾಡಿದರು. ನೂರಾರು ಜನ ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಪರೇಡ್ ಮಾಡುವ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ತಿಳುವಳಿಕೆ ಮೂಡಿಸಿದರು. ಪೊಲೀಸರಿಗೆ ಚಪ್ಪಾಳೆ ಮೂಲಕ ರಸ್ತೆಗಳಲ್ಲಿ ಸ್ವಾಗತಿಸಿದ ಸಾರ್ವಜನಿಕರು ವ್ಯಾಪಾರಿಗಳು ಹೂವಿನ ಹಾರ ಹಾಕಿ ಸನ್ಮಾನಿಸಿದರು.

    ಲಾಕ್‍ಡೌನ್ ನಲ್ಲಿ ಬಹುತೇಕ ವಿನಾಯಿತಿ ಸಿಕ್ಕಿರುವುದರಿಂದ ಜನ ಎಗ್ಗಿಲ್ಲದೆ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ಈಗಲೇ ಲಾಕ್‍ಡೌನ್ ಮುಗಿದಿಲ್ಲ. ಮೇ 17 ರ ವರೆಗೆ ಲಾಕ್‍ಡೌನ್ ಮುಂದುವರಿಯುತ್ತೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರೇಡ್ ವೇಳೆ ಹೇಳಿದ್ದಾರೆ.

  • ಪದೇ ಪದೇ ನಮ್ಮ ಮನೆಗೆ ಯಾಕೆ ಬರ್ತಿರಿ: ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನ

    ಪದೇ ಪದೇ ನಮ್ಮ ಮನೆಗೆ ಯಾಕೆ ಬರ್ತಿರಿ: ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನ

    ವಿಜಯಪುರ: ಕೊರೊನಾ ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆ ಮೇಲೆ ಮಹಿಳೆಯರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ನಡೆದಿದೆ.

    ಸಾವಿತ್ರಿ ಬಡಿಗೇರ್ ಆಶಾ ಕಾರ್ಯಕರ್ತೆ ಕೊರೊನಾ ಜಾಗೃತಿ ಮತ್ತು ಸಮೀಕ್ಷೆಗಾಗಿ ಹಚ್ಯಾಳ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಕೆಲ ಮಹಿಳೆಯರು ಪದೇ ಪದೇ ನಮ್ಮ ಮನೆಗೆ ಹಾಗೂ ನಮ್ಮ ಕಾಲೋನಿಗೆ ಯಾಕೆ ಬರ್ತೀಯಾ ಎಂದು ಆಶಾ ಕಾರ್ಯಕರ್ತೆಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.

    ಮಹಿಳೆಯರು ಹಲ್ಲೆಗೆ ಯತ್ನಿಸುತ್ತಿದ್ದಂತೆ ಆತಂಕಗೊಂಡ ಆಶಾ ಕಾರ್ಯಕರ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

  • ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    ‘ಲಾಕ್‍ಡೌನ್ ಪಾಲಿಸಿ ಗೋಲ್ಡ್, ಫ್ರಿಡ್ಜ್, ವಾಷಿಂಗ್‍ ಮಿಷನ್ ಬಹುಮಾನವಾಗಿ ಪಡೆಯಿರಿ’

    – ಗ್ರಾಮ ಪಂಚಾಯಿತಿಯಿಂದ ವಿನೂತನ ಕ್ರಮ

    ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಲಾಕ್‍ಡಾನ್ ಜಾರಿ ಮಾಡಿದೆ. ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಮನೆಯಲ್ಲೇ ಉಳಿಯುವಂತೆ ಮಾಡಲು ಪೊಲೀಸರು, ಅಧಿಕಾರಿಗಳು ಹರ ಸಾಹಸ ಮಾಡುತ್ತಿದ್ದಾರೆ. ಆದರೆ ಕೇರಳದ ಗ್ರಾಮ ಪಂಚಾಯತಿಯೊಂದು ವಿಶೇಷ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದೆ.

    ಕೇರಳದ ಮಲಪ್ಪುರಂ ಜಿಲ್ಲೆಯ ತಜ್ಹೆಕ್ಕೊಡ್ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ನಿವಾಸಿಗಳಿಗೆ ಲಾಕ್‍ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಮನವಿ ಮಾಡಿದೆ. ಅಲ್ಲದೇ ಯಾರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಾರೋ ಅಂತಹವರಿಗೆ ಮೊದಲ ಮೂರು ಬಹುಮಾನಗಳಾಗಿ ಗೋಲ್ಡ್, ಫ್ರೀಡ್ಜ್ ಹಾಗೂ ವಾರ್ಷಿಂಗ್ ಮಿಷನ್ ನೀಡುವುದಾಗಿ ಹೇಳಿದೆ. ಅಲ್ಲದೇ ಇತರೇ 50 ಬಹುಮಾನಗಳನ್ನು ಕೂಡ ನೀಡುವುದಾಗಿ ತಿಳಿಸಿದೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಂಚಾಯತ್ ಅಧ್ಯಕ್ಷ ಎಕೆ ನಸಾರ್, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಕುಟುಂಗಳಿವೆ. ಕೆಲ ಮಂದಿಯನ್ನು ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸ್ವಯಂ ಸೇವಕರನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.

    ಮೇ 3ರ ಬಳಿಕ ಲಾಕ್‍ಡೌನ್ ಅಂತ್ಯವಾಗುವ ಸೂಚನೆ ಇದೆ. ಆ ವೇಳೆಗೆ ಸ್ವಯಂ ಸೇವಕರಿಂದ ಮಾಹಿತಿ ಸಂಗ್ರಹಿಸಿ ಮನೆಯಿಂದ ಯಾರು ಹೊರಹೋಗಿಲ್ಲ ಎಂದು ಹೇಳುವ ಎಲ್ಲರಿಗೂ ಅಫಿಡವಿಡ್ ಕೇಳುತ್ತೇವೆ. ಅಂತಹ ಎಲ್ಲಾ ಕುಟುಂಗಳಿಗೂ ಕೂಪನ್ ನೀಡಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.

    ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ರಸ್ತೆ ಮೇಲೆ ಕೊರೊನಾ ಜಾಗೃತಿ ಚಿತ್ರ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೊರೊನಾದಂತೆ ವೇಷ ಧರಿಸಿ ಜಾಗೃತಿ ಮೂಡಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೂ ಸಾಕಷ್ಟು ಮಂದಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಕೇರಳದ ಗ್ರಾಮಪಂಚಾಯಿತಿ ಹೊಸ ಕಾರ್ಯಕ್ರಮಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

  • ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಹಾವೇರಿ: ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹಾವೇರಿ ನಗರಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯದ ದೃಷ್ಟಿಯಿಂದ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಆರೋಗ್ಯ, ವೈದ್ಯಕೀಯ, ಗೃಹ ಈ ಇಲಾಖೆಗಳದ್ದಷ್ಟೇ ಕೆಲಸ ಎಂದು ಭಾವಿಸದೆ ಜನರು ಈ ಬಗ್ಗೆ ಸ್ವಯಂಪ್ರೇರಿತರಾಗಿ ಜಾಗೃತರಾಗುವುದು ಮುಖ್ಯ ಎಂದು ಕರೆ ನೀಡಿದರು.

    ಖಾಸಗಿ ವೈದ್ಯರು ಮೆಡಿಕಲ್ ಶಾಪ್, ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಸರ್ಕಾರದ ನೊಟೀಸ್‍ಗೂ ಬೆಲೆಕೊಡದೆ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಡಿ. ನಮ್ಮ ನಮ್ಮ ಮನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವ-ದಿಗ್ಬಂಧನ ಹಾಕಿಕೊಳ್ಳುವ ಮೂಲಕ ನಮ್ಮ ಹಾಗೂ ನಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಬದ್ಧರಾಗಿದ್ದು, ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು. ಅನಾವಶ್ಯಕ ಮನೆಯಿಂದ ಹೊರಬರಬೇಡಿ, ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ಅತಿ ಅವಶ್ಯಕ ವಸ್ತುಗಳಾದ ದಿನಸಿ, ತರಕಾರಿ, ಹಣ್ಣು-ಹಂಪಲುಗಳನ್ನು ವಾರ್ಡ್ ವಾರು ತಳ್ಳುವಗಾಡಿಯ ಮೂಲಕ ಮಾರಲು ಅನುಕೂಲ ಮಾಡಿಕೊಡಲಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.

    ಬಿ.ಸಿ.ಪಾಟೀಲ್ ಇಂದು ಜಿಲ್ಲೆಯ ಹಿರೇಕೆರೂರು ನಗರ, ರಾಣೆಬೆನ್ನೂರು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ, ಹಾವೇರಿ ಎಪಿಎಂಸಿ ಸೇರಿದಂತೆ ಹಲವೆಡೆ ಭೇಟಿ ನೀಡಿದ್ದರು. ಅಲ್ಲದೇ ಕೊರೊನಾ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಉಪಸ್ಥಿತರಿದ್ದರು.