Tag: ಕೊರೊನಾ ಎರಡನೇ ಅಲೆ

  • ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ: ಸಿದ್ದರಾಮಯ್ಯ

    ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ: ಸಿದ್ದರಾಮಯ್ಯ

    ಕೊಪ್ಪಳ: ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಯಡಿಯೂರಪ್ಪ ಸರ್ಕಾರ ಕಾರಣ, ಎರಡನೇ ಅಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ಹೇಳಿದ್ದಾರೆ.

    ಕರ್ನಾಟಕದಲ್ಲಿ ಕೊರೊನಾ ಬಂದು ಒಂದು ವರ್ಷ ಮೂರು ತಿಂಗಳು ಆಗಿದೆ. ಈಗ ನಾವು ಎರಡನೇ ಅಲೆಯಲ್ಲಿದ್ದೇವೆ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಮೊದಲನೇ ಅಲೆಯಲ್ಲಿ ಬಹಳ ಜನ ಸಾಯಲಿಲ್ಲ, ಎರಡನೇ ಅಲೆಯಲ್ಲಿ ಹೆಚ್ಚು ಜನ ಸತ್ತರು, ಇದಕ್ಕೆ ಕಾರಣ ಯಡಿಯೂರಪ್ಪ ಸರ್ಕಾರ. ಎರಡನೇ ಅಲೆಯನ್ನು ತಡೆಯಲು ಮುನ್ನಚ್ಚೆರಿಕೆ ಕ್ರಮಗಳನ್ನು ಮಾಡಿಕೊಂಡಿದ್ದರೆ, ಇಷ್ಟೊಂದು ಜನ ಸಾಯುತ್ತಿರಲಿಲ್ಲ. ರೋಗ ಬಂದವರಿಗೆ ಬೆಡ್ ಸಿಗಲಿಲ್ಲ, ಆಕ್ಸಿಜನ್ ಬೆಡ್ ಸಿಗಲಿಲ್ಲ, ರೆಮಡಿಸಿವರ್, ಐಸಿಯು, ಅಂಬ್ಯುಲೆನ್ಸ್, ವೆಂಟಿಲೇಟರ್ ಸಿಗಲಿಲ್ಲ. ಇದರಿಂದಾಗಿ ಬಹಳ ಜನ ಸತ್ತರು ಎಂದರು.

    ಚಾಮರಾಜನಗರದಲ್ಲಿ ಆಕ್ಸಿಜನ್ ಆಗದೇ 36 ಜನ ಸಾವನ್ನಪ್ಪಿದರು, ಆಕ್ಸಿಜನ್ ನೀಡಿದರೆ 36 ಜನ ಸಾಯುತ್ತಿರಲಿಲ್ಲ, ಮಿಸ್ಟರ್ ಯಡಿಯೂರಪ್ಪ, 36 ಜನ ಸತ್ತರೆ ಆರೋಗ್ಯ ಸಚಿವ ಸುಧಾಕರ 3 ಜನ ಸತ್ತರು ಎಂದು ಹೇಳುತ್ತಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಾರೆ. ಸುರೇಶ್ ಕುಮಾರ್, ಸುಧಾಕರ್ ರಾಜೀನಾಮೆಗೆ ನಾನು ಒತ್ತಾಯ ಮಾಡಿದೆ. ನ್ಯಾಯಾಂಗ ತನಿಖೆ ಮಾಡಲು ಒತ್ತಾಯ ಮಾಡಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದೆ ಎಂದರು.

    ಲಾಕ್‍ಡೌನ್ ಮಾಡಿದರೆ ಉದ್ಯೋಗ ಸಿಗುವುದಿಲ್ಲ, ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ, 10 ಕೆಜಿ ಅಕ್ಕಿ ಕೊಡಲು ಹೇಳಿದೆ ಜಪ್ಪಯ್ಯ ಎನ್ನಲಿಲ್ಲ, ಎರಡು, ಮೂರು ಸಾವಿರ ಕೊಡುತ್ತೀನಿ ಅಂದರು, ಅದನ್ನು ಸರಿಯಾಗಿ ಕೊಟ್ಟಿಲ್ಲ, 7 ಕೆಜಿ ಅಕ್ಕಿ ಕೊಟ್ಟಿದ್ದರೆ, ಇವರ ಅಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಪ್ರಶ್ನಿಸಿದರು.

    ನಾನು ಸಿಎಂ ಆಗಿದ್ದರೆ 10 ಕೆಜಿ ಅಕ್ಕಿ ಕೊಡುತ್ತಿದ್ದೆ, ನಾನು ನಮ್ಮ ಅಪ್ಪನ ಮನೆಯಿಂದ ತಂದು ಕೊಡುತ್ತಿರಲಿಲ್ಲ. ನಿಮ್ಮ ದುಡ್ಡಿನಿಂದ ನಿಮಗೆ ಕೊಡುತ್ತಿದೆ. ಅಲ್ಲದೇ ಎರಡನೇ ಅಲೆ ಮುನ್ನೆಚ್ಚರಿಕೆ ಕೈಗೊಂಡಿದ್ದರೆ, ಸಾವಿರಾರು ಜನರ ಪ್ರಾಣ ಉಳಿಸಬಹುದಿತ್ತು, ಕರ್ನಾಟಕದಲ್ಲಿ ಸ್ವರ್ಗನಾ, ನರಕನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆಯುವ ಸರ್ಕಾರ, ಇದು ನಾನು ಹೇಳಿದ್ದಲ್ಲ, ಇದನ್ನು ಯತ್ನಾಳ್, ಬೆಲ್ಲದ್, ಯೋಗಿಶ್ವರ್ ಹೇಳಿದ್ದು, ಇವರು ಯಾರು ಬಿಜೆಪಿಯವರು ಅಲ್ವಾ? ಪೆಟ್ರೋಲ್,ಡಿಸೇಲ್, ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ, ನಮ್ಮ ಸರ್ಕಾರದ ಯೋಜನೆಗಳನ್ನು ಇವರು ಮಾಡುತ್ತಿದ್ದಾರೆ. ಹೊಸದಾಗಿ ಯಡಿಯೂರಪ್ಪ ಸರ್ಕಾರ ಒಂದು ರೂಪಾಯಿ ಕೊಟ್ಟಿಲ್ಲ. ಯಡಿಯೂರಪ್ಪನವರನ್ನು ಕೇಳಿದರೆ ಕೊರೊನಾ ಎಂದು ಹೇಳುತ್ತಾರೆ.

    ಕೊರೊನಾಗೆ 4,000 ಕೋಟಿ ಖರ್ಚು ಮಾಡಿರಬಹುದು. ಇದೊಂದು ಕೆಟ್ಟ ಸರ್ಕಾರ, ಪಕ್ಷದ ಶಾಸಕರು, ಮಾಜಿ ಶಾಸಕರು, ಮುಖಂಡರು ಜನರ ಸಂಕಷ್ಟದಲ್ಲಿ ಸ್ಪಂದಿಸಬೇಕು. ನಾನು ಸಿಎಂ ಆಗಿದ್ದರೆ, ಇವತ್ತು ಈ ರೋಗ ವೇಗವಾಗಿ ಹರಡಲು, ಸಾಯಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಕಾಂಗ್ರೆಸ್ ಬಡವರ ಪರವಾಗಿ ಇರುವ ಪಕ್ಷ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ ಎಂದರು. ಇದನ್ನೂ ಓದಿ:ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಗೆ ಸಂಕಷ್ಟ

  • ಗಡಿಯೂ ಓಪನ್, ನೆಗೆಟಿವ್ ರಿಪೋರ್ಟ್ ಬೇಕಿಲ್ಲ – ಕೇರಳ, ಕರ್ನಾಟಕ ಗಡಿಯಲ್ಲಿ ಮುಕ್ತ ಸಂಚಾರ

    ಗಡಿಯೂ ಓಪನ್, ನೆಗೆಟಿವ್ ರಿಪೋರ್ಟ್ ಬೇಕಿಲ್ಲ – ಕೇರಳ, ಕರ್ನಾಟಕ ಗಡಿಯಲ್ಲಿ ಮುಕ್ತ ಸಂಚಾರ

    – ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಚಾಮರಾಜನಗರ ಆರೋಗ್ಯ ಇಲಾಖೆ

    ಚಾಮರಾಜನಗರ/ಮಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ನೆರೆಯ ಕೇರಳದಿಂದ ಹೆಚ್ಚು ಆತಂಕ ಎದುರಾಗಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾತ್ರ ಕೇರಳ ಗಡಿ ಬಂದ್ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಇತ್ತ ನಿದ್ದೆಗೆ ಜಾರಿದ್ದ ಚಾಮರಾಜನಗರ ಆರೋಗ್ಯ ಇಲಾಖೆ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತು ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಯನ್ನ ನೇಮಿಸಿದೆ.

    ದಕ್ಷಿಣ ಕನ್ನಡ : ಕೇರಳದ ಪ್ರಮುಖ ಗಡಿಗಳಲ್ಲಿ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಮಂಗಳೂರು ಪ್ರವೇಶ ಎಂದು ಆದೇಶಿತ್ತು. ಆದರೆ ಇಂದು ತಲಪಾಡಿ ಗಡಿಯಲ್ಲಿ ಗಡಿನಾಡ ಕನ್ನಡಿಗರು ನೂರಾರು ಸಂಖ್ಯೆಯಲ್ಲಿ ಸೇರಿ ದ.ಕ.ಜಿಲ್ಲಾಡಳಿತದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಗಡಿ ಬಂದ್ ಮಾಡಲು ಬಿಡೋದಿಲ್ಲ, ನೆಗೆಟಿವ್ ರಿಪೋರ್ಟ್ ತರೋದಿಲ್ಲ ಎಂದು ತಾಕೀತು ಮಾಡಿದ್ದರು. ಬಳಿಕ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ್ದು, ಗಡಿಯಲ್ಲಿರುವ ಟೆಸ್ಟಿಂಗ್ ಸೆಂಟರಲ್ಲಿ ಉಚಿತ ಟೆಸ್ಟಿಂಗ್ ಮಾಡುವಂತೆ ವಿನಂತಿಸಿಕೊಂಡಿದೆ. ಹೀಗಾಗಿ ಮಂಗಳೂರಿಗೆ ಬರೋ ಕೇರಳಿಗರು ಯಾವುದೇ ಟೆಸ್ಟ್ ಇಲ್ಲದೆ ಮುಕ್ತವಾಗಿ ಬರುವಂತಾಗಿದೆ.

    ನಡೆಯದ ತಪಾಸಣೆ: ಕರ್ನಾಟಕ ಗಡಿ ಭಾಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಸಂರಕ್ಷಿತಾರಣ್ಯದ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಕಳೆದ 15 ದಿನದ ಹಿಂದೆಯೇ ಪ್ರಯಾಣಿಕರ ಮೇಲೆ ನಿಗಾ ವಹಿಸಿತ್ತು.

    ಆದರೆ ಇಂದು ಪಬ್ಲಿಕ್ ಟಿವಿಯಿಂದ ಗಡಿಯಲ್ಲಿ ಹೇಗೆ ತಪಾಸಣೆ ನಡೆಸಲಾಗ್ತಿದೆ ಅನ್ನೋ ಕುರಿತು ರಿಯಾಲಿಟಿ ಚೆಕ್ ನಡೆಸಲಾಯಿತು. ರಿಯಾಲಿಟಿ ಚೆಕ್ ವೇಳೆ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೇ ಇರಲಿಲ್ಲ. ಗಡಿಯಲ್ಲಿ ಯಾವುದೇ ತಪಾಸಣೆ ಕೂಡ ನಡೆಯುತ್ತಿರಲಿಲ್ಲ. ಕೇರಳದಿಂದ ವಾಹನಗಳಲ್ಲಿ ಜಿಲ್ಲೆಗೆ ಎಂಟ್ರಿ ಕೊಡ್ತಿದ್ದ ಪ್ರಯಾಣಿಕರ ಮೇಲೆ ನಿಗಾ ವಹಿಸುವ ಕೆಲಸ ಆಗಿರಲಿಲ್ಲ. ಆರೋಗ್ಯ ಇಲಾಖೆ ವೈಫಲ್ಯ ಹಾಗೂ ಕೇರಳ ಕಂಟಕ ಚಾಮರಾಜನಗರಕ್ಕೆ ಎದುರಾಗುವ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.

    ಪಬ್ಲಿಕ್ ಟಿವಿ ವರದಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಆರೋಗ್ಯ ಸಿಬ್ಬಂದಿ ದಿಢೀರ್ ಅಂತಾ ಮೂಲೆ ಹೊಳೆ ಚೆಕ್ ಪೋಸ್ಟ್ ಗೆ ಆಗಮಿಸಿದರು. ಕೇರಳದಿಂದ ರಾಜ್ಯಕ್ಕೆ ಬರುತ್ತಿದ್ದ ಪ್ರವಾಸಿಗರನ್ನು ತಪಾಸಣೆ ನಡೆಸಲಾಯಿತು. ಅಲ್ಲದೇ ಕೋವಿಡ್ ರಿಪೋರ್ಟ್ ತರದ ಪ್ರಯಾಣಿಕರನ್ನು ವಾಪಾಸ್ ಕಳುಹಿಸಿದರು. ಜಿಲ್ಲೆಗೆ ಆಗಮಿಸಬೇಕಾದರೆ ಕಡ್ಡಾಯವಾಗಿ ಕೋವಿಡ್ ರಿಪೋರ್ಟ್ ತರಬೇಕು ಅಂತಾ ಸೂಚನೆ ನೀಡಿದ್ದು, ಬಂದಂತಹ ಪ್ರಯಾಣಿಕರನ್ನು ಮತ್ತೆ ವಾಪಸ್ ಕಳುಹಿಸಲಾಗಿತ್ತು.