Tag: ಕೊರತೆ

  • ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

    ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

    – ಶೀಘ್ರ 5,000 ಶಿಕ್ಷಕರ ನೇಮಕಕ್ಕೆ ಕ್ರಮ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 12 ರಿಂದ 13 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ನಗರದ ಅಗಲಗುರ್ಕಿ ಬಳಿಯ ಬಿಜಿಎಸ್ ಶಾಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 12-13 ಸಾವಿರ ಮಂದಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಕೊರತೆಗೆ ಎರಡು ಪ್ರಮುಖ ಕಾರಣಗಳಿವೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ವರ್ಗಾವಣೆಗಳು ಆಗಲಿಲ್ಲ. ಕಳೆದ ವರ್ಷ ಪರೀಕ್ಷೆ ಮಾಡಿ 10,000 ಮಂದಿ ಶಿಕ್ಷಕರ ನೇಮಕಕ್ಕೆ ತಯಾರಿ ಮಾಡಲಾಗಿತ್ತು. ಪರೀಕ್ಷೆಯಲ್ಲಿ 3,000 ಮಂದಿ ಮಾತ್ರ ಅರ್ಹರಾದರು. ಮತ್ತೊಂದೆಡೆ ಕೋವಿಡ್ ಬಂದ ನಂತರ ಅರ್ಥಿಕ ವ್ಯವಸ್ಥೆ ನಿಧಾನ ಆಯಿತು. ಈಗ 5000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದರು. ಇದನ್ನೂ ಓದಿ: ಸೆ.17 ರಿಂದ ಕೊಡಗಿನಲ್ಲಿ ಶಾಲಾ-ಕಾಲೇಜು ಆರಂಭ

    ಕೊರೊನಾ ಮೂರನೇ ಅಲೆ ಎಚ್ಚರಿಕೆ ಇರುವುದರಿಂದ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಆಗಿಲ್ಲ. ತಜ್ಞರ ಸಲಹಾ ಸಮಿತಿ ಜೊತೆ ಚರ್ಚಿಸಿ ಪೂರ್ಣ ಪ್ರಮಾಣದ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿ ಓದಿರುವವರು ಯಾರೂ ಹಿಂದಿ ದಿವಸ್ ಅಂತ ವಿರೋಧ ಮಾಡಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂದು ಯೋಚನೆ ಮಾಡಿರುವ ಸರ್ಕಾರ ನಮ್ಮದು. ದೇಶದಲ್ಲಿ ಸ್ವದೇಶಿ ಸ್ವಾವಲಂಬಿ ಶಿಕ್ಷಣ ಕೊಡಬೇಕೆಂದು ಮಹಾತ್ಮ ಗಾಂಧೀಜಿ ಸೇರಿ ಆನೇಕ ತಜ್ಞರು ಹೇಳಿದ್ದರು. ಆ ನಿಟ್ಟಿನಲ್ಲಿ ಮಕ್ಕಳ ಕೈಗೆ, ಬುದ್ಧಿಗೆ, ಹೃದಯಕ್ಕೆ ಶಿಕ್ಷಣ ಕೊಡಬೇಕು. ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಯತ್ನ ಮಾಡಿದೆ. ಕಾಂಗ್ರೆಸ್‍ನವರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊಂದಲಗಳಿರಬಹದು. ಅದು ಪಾರ್ಲಿಮೆಂಟ್ ನಲ್ಲಿ ಹಾಗೂ ದೇಶದ ಅನೇಕ ಕಡೆ ಸಭೆ, ಸೆಮಿನಾರ್ ಗಳಲ್ಲಿ ಚರ್ಚೆಯಾದ ನಂತರವೇ ಜಾರಿಯಾದ ನಿರ್ಣಯ. ಈ ಬಗ್ಗೆ ಅವರು ತಿಳಿದರೆ ಸರಿಹೋಗಬಹುದು. ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.

  • ಧಾರವಾಡದಲ್ಲಿ ರಕ್ತದ ಕೊರತೆ- ಗರ್ಭಿಣಿಯರಿಗೂ ಸಿಗುತ್ತಿಲ್ಲ ಬ್ಲಡ್

    ಧಾರವಾಡದಲ್ಲಿ ರಕ್ತದ ಕೊರತೆ- ಗರ್ಭಿಣಿಯರಿಗೂ ಸಿಗುತ್ತಿಲ್ಲ ಬ್ಲಡ್

    ಧಾರವಾಡ: ಜಿಲ್ಲೆಯಲ್ಲಿ ಯಾವುದೇ ಬ್ಲಡ್ ಬ್ಯಾಂಕ್ ಗೆ ಹೋಗಿ ಕೇಳಿದರೂ ‘ನೋ ಸ್ಟಾಕ್’ ಉತ್ತರ ಸಿಗುತ್ತಿದ್ದು, ಬಹುತೇಕ ಬ್ಲಡ್ ಬ್ಯಾಂಕ್ ಗಳು ದಾನಿಗಳಿಲ್ಲದೆ ಬಿಕೋ ಎನ್ನುತ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಯುವ ಜನತೆ ರಕ್ತ ದಾನ ಮಾಡುತ್ತಿಲ್ಲ.

    18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಿದ ಬಳಿಕ ಜಿಲ್ಲೆಯಲ್ಲಿ ತೀರಾ ರಕ್ತದ ಕೊರತೆ ಉದ್ಭವಿಸಿದೆಯಂತೆ. ಮುಖ್ಯವಾಗಿ ರಕ್ತದಾನ ಮಾಡುವವರು ಇದೇ ವಯೋಮಾನದವರಾಗಿರುವ ಕಾರಣ ಈಗ ಲಸಿಕೆಯೇ ಮುಖ್ಯವಾಗಿದ್ದು, ರಕ್ತದಾನವನ್ನು ಎಲ್ಲರೂ ಮರೆಯುತ್ತಿದ್ದಾರೆ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯ ದೊಡ್ಡ ರಕ್ತ ಭಂಡಾರದಲ್ಲೇ ನಿತ್ಯ 2 ರಿಂದ 3 ಯುನಿಟ್ ಮಾತ್ರ ರಕ್ತ ಸಂಗ್ರಹ ಆಗುತ್ತಿದೆ.

    ರಕ್ತದ ಕೊರತೆಯ ಪರಿಣಾಮ ಗರ್ಭೀಣಿಯರು ಹಾಗೂ ಥಲೆಸ್ಮಿಯಾ ರೋಗಿಗಳ ಮೇಲೆ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ. ಬೇರೆಲ್ಲ ಶಸ್ತ್ರಚಿಕಿತ್ಸೆಗಳ ಬೇಡಿಕೆ ಇಲ್ಲದಿದ್ದರೂ ಥಲೆಸ್ಮಿಯಾ ರೋಗಿಗಳಿಗೆ ನಿರಂತರವಾಗಿ ರಕ್ತ ಬೇಕಾಗಿರುವ ಕಾರಣಕ್ಕೆ ಅದು ನಿಶ್ಚಿತ ಬೇಡಿಕೆ. ಇದನ್ನೂ ಸರಿದೂಗಿಸಲು ಆಗುತ್ತಿಲ್ಲ. ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಸೇರಿ ಒಟ್ಟು 12ಕ್ಕೂ ಹೆಚ್ಚು ರಕ್ತ ಭಂಡಾರಗಳು ಧಾರವಾಡ ಜಿಲ್ಲೆಯಲ್ಲಿವೆ. ಆದರೆ ಎಲ್ಲಿಯೂ ರಕ್ತವೇ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ಮೊದಲು ಒಂದು ಮಸೇಜ್ ಮಾಡಿದರೆ ಜನ ತಾವಾಗಿಯೇ ಮುಂದೆ ಬಂದು ರಕ್ತದಾನ ಮಾಡುತ್ತಿದ್ದರು. ಆದರೆ ಈಗ ಹುಡುಕಾಡುವಂತಹ ಸ್ಥಿತಿ ಬಂದಿದ್ದು, ರಿಪ್ಲೇಸ್‍ಮೆಂಟಗೂ ಯಾರೂ ಸಿಗುತ್ತಿಲ್ಲ. ಕೊರೊನಾ ಲಸಿಕೆಗೂ ಮುಂಚೆಯೇ ರಕ್ತದಾನ ಮಾಡುವುದು ನಮ್ಮ ಕರ್ತವ್ಯ ಎಂದು ಜನ ಭಾವಿಸಬೇಕಿದೆ. ಅಂದಾಗಲೇ ರಕ್ತದ ಕೊರತೆ ನೀಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ವ್ಯಾಕ್ಸಿನ್ ಪೂರೈಕೆಯಲ್ಲಿ ಎರಡ್ಮೂರು ದಿನ ವ್ಯತ್ಯಯ: ಕೊಡಗು ಡಿಸಿ

    ವ್ಯಾಕ್ಸಿನ್ ಪೂರೈಕೆಯಲ್ಲಿ ಎರಡ್ಮೂರು ದಿನ ವ್ಯತ್ಯಯ: ಕೊಡಗು ಡಿಸಿ

    – ಕೊರೊನಾ ಅಬ್ಬರದ ನಡುವೆ ಖಾಲಿಯಾಗುತ್ತಿದೆ ಲಸಿಕೆ

    ಮಡಿಕೇರಿ: ಒಂದೆಡೆ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ರಾಜ್ಯದ ವಿವಿಧೆಡೆ ಲಸಿಕಾ ಕೇಂದ್ರದ ಬಳಿ ನೋ ಸ್ಟಾಕ್(ಲಸಿಕೆ ಖಾಲಿಯಾಗಿದೆ) ನಾಳೆ ಬನ್ನಿ ಎಂಬ ಸಿದ್ಧ ಉತ್ತರ ಎದುರಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ಮೊದಲು ಹಿಂಜರಿದ ಜನ, ಈಗ ಕೊರೊನಾ ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಆದರೆ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗುತ್ತಿದ್ದು, ಸ್ಟಾಕ್ ಇಲ್ಲ ಎಂಬ ಉತ್ತರ ಸಿಗುತ್ತಿದೆ.

    ಕೊಡಗಿನಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಆದರೆ ಇಂದು ಹೇಗೋ ಎಲ್ಲ ಸೆಂಟರ್ ನಲ್ಲೂ ವ್ಯಾಕ್ಸಿನ್ ನೀಡಲಾಗಿದೆ. ಆದರೆ ನಾಳೆಯಿಂದ ಕೊಡಗಿನಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಕ್ಸಿನ್ ಗಾಗಿ ಸಾರ್ವಜನಿಕರು ಎರಡ್ಮೂರು ದಿನ ಕಾಯಲೇ ಬೇಕು, ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಯ ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಸುಧಾಕರ್

     

    ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಬೇಕೆಂದು ಸರ್ಕಾರ ಸೂಚಿಸಿರುವುದರಿಂದ 800 ಡೋಸ್ ಮಾತ್ರ ಕೊಡಗು ಜಿಲ್ಲೆಗೆ ಸಿಕ್ಕಿದೆ. ಹೀಗಾಗಿ ಸಾರ್ವಜನಿಕರಿಗೆ ವ್ಯಾಕ್ಸಿನ್ ನಲ್ಲಿ ವ್ಯತ್ಯಯ ಅಗುತ್ತದೆ. ಸಾರ್ವಜನಿಕರು ವ್ಯಾಕ್ಸಿನ್ ಬರುವವರೆಗೂ ಎರಡ್ಮೂರು ದಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಅರೋಗ್ಯ ಅಧಿಕಾರಿ ಮೋಹನ್, ಜಿಲ್ಲೆಗೆ 2,900 ಡೋಸ್ ಲಸಿಕೆ ಬಂದಿತ್ತು. ಕೊಡಗಿನಲ್ಲಿರುವ ಎಲ್ಲ ಲಸಿಕೆ ಕೇಂದ್ರಗಳಿಗೆ ಕಳುಹಿಸಲಾಗಿದೆ. ಎಲ್ಲ ಕಡೆಗಳಲ್ಲಿ ಜನರು ಬೆಳಿಗ್ಗೆಯೇ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ. ಕೆಲವು ಕಡೆ ಮಧ್ಯಾಹ್ನದ ವೇಳೆಗೆ ವ್ಯಾಕ್ಸಿನ್ ಖಾಲಿಯಾಗಿದೆ. 2 ದಿನಗಳ ಕಾಲ ಲಸಿಕೆ ಇರುವುದಿಲ್ಲ. ಸರ್ಕಾರ ಎರಡು ದಿನಗಳಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದೆ. ಆದರೆ ಬಂದ ಬಳಿಕವಷ್ಟೇ ಖಚಿತವಾಗಲಿದೆ ಎಂದು ತಿಳಿಸಿದ್ದಾರೆ.

    ಲಸಿಕೆ ಕೊರತೆ ಒಪ್ಪಿಕೊಂಡ ಸುಧಾಕರ್
    ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ನೀಗಿಸಲು ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಮಾಡುತ್ತೇನೆ. ಲಸಿಕೆ ಹೆಚ್ಚಾಗಿ ನೀಡಲು ಮನವಿ ಮಾಡುತ್ತೇನೆ ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲಸಿಕೆ ಕೊರತೆಯನ್ನು ಒಪ್ಪಿಕೊಂಡಿದ್ದಾರೆ.

    ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲಸಿಕೆ ಬರುತ್ತಿದೆ, ಈ ತಿಂಗಳು ಹೆಚ್ಚಾಗಿ ಲಸಿಕೆ ಬರಬೇಕಿತ್ತು ಆದರೆ ತಡವಾಗಿದೆ. ಲಸಿಕೆ ಪೂರೈಕೆ ಹೆಚ್ಚಿಸುವಂತೆ ಮನವಿ ಮಾಡಲು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

  • 30ವರ್ಷ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ:  ಅಪ್ಪಚ್ಚು ರಂಜನ್

    30ವರ್ಷ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ: ಅಪ್ಪಚ್ಚು ರಂಜನ್

    ಮಡಿಕೇರಿ: ದೇಶದಲ್ಲಿ ವ್ಯಾಕ್ಸಿನ್ ಕೊರತೆ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ 30 ವರ್ಷದ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ ಎಂದು ಅರೋಗ್ಯ ಸಚಿವರಿಗೆ ಮನವಿ ಮಾಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ದೇಶದಲ್ಲಿ ವ್ಯಾಕ್ಸಿನೇಷನ್ ಕೊರತೆ ಇದೆ. ನಮ್ಮ ರಾಜ್ಯದ 3 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರಿದ್ದಾರೆ. ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದೀಗಾ 18 ರಿಂದ 45 ವರ್ಷದ ಅವರಿಗೆ ಕೋಡಬೇಕು ಎಂದು ಇದೆ.ಅದರೆ ಸದ್ಯಕ್ಕೆ ವ್ಯಾಕ್ಸಿನೇಷನ್ ಕೊರತೆ ಇರುವುದರಿಂದ 30 ವರ್ಷ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನ್ ವಿತರಣೆ ಮಾಡಲಿ ಎಂದು ಹೇಳಿದ್ದಾರೆ.

    ಸಾಕಷ್ಟು ವ್ಯಾಕ್ಸಿನ್ ಬಂದ ಬಳಿಕ 18 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ವಿತರಿಸಲಿ ಈಗಾಗಲೇ ನೊಂದಣಿ ಮಾಡಿಕೊಂಡಿದ್ದರೆ ಅದನ್ನು ಸದ್ಯಕ್ಕೆ ತಡೆಹಿಡಿಯೋದು ಒಳ್ಳೆಯದು. ಈಗಾಗಲೇ ನೊಂದಣಿ ಮಾಡಿದವರಿಗೆ ವ್ಯಾಕ್ಸಿನೇಷನ್ ತಡೆಯಿಡಿಯಲಾಗಿದೆ. ಬಳಿಕ ವ್ಯಾಕ್ಸಿನೇಷನ್ ಹೆಚ್ಚಾಗಿ ಬಂದ ಬಳಿಕ ಮೊದಲ ಆದ್ಯತೆಯಾಗಿ ನೊಂದಣಿ ಮಾಡಿಕೊಂಡ ಯುವ ಸಮೂಹಕ್ಕೆ ನೀಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಆ್ಯಂಟಿ ವೈರಲ್ ಡ್ರಗ್

    ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿಲ್ಲ ಆ್ಯಂಟಿ ವೈರಲ್ ಡ್ರಗ್

    – ಅಂಬುಲೆನ್ಸ್, ಆಕ್ಸಿಜನ್ ಬಳಿಕ ಇದೀಗ ಸೋಂಕಿತರಿಗೆ ಔಷಧಿ ಕೊರತೆ

    ಬೆಂಗಳೂರು: ಕೊರೊನಾ ನಿರ್ವಹಣೆಯಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸರ್ಕಾರ ಎಡವುತ್ತಿದ್ದು, ಈ ಹಿಂದೆ ಬೆಡ್, ಅಂಬುಲೆನ್ಸ್, ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಆದರೆ ಇದೀಗ ಇನ್ನೂ ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ಸೋಂಕಿತರಿಗೆ ಅವಶ್ಯವಾಗಿರುವ ಆ್ಯಂಟಿ ವೈರಲ್ ಡ್ರಗ್ ಕೊರತೆ ಕಾಡುತ್ತಿದೆ.

    ಸಿಲಿಕಾನ್ ಸಿಟಿಯಲ್ಲಿ ಈ ಔಚಧಿ ಕೊರತೆ ಕಾಡುತ್ತಿದ್ದು, ಹೀಗಾಗಿ ಕೊರೊನಾ ವಿಚಾರದಲ್ಲಿ ಬೆಂಗಳೂರು ಡೇಂಜರ್ ಝೋನ್‍ನಲ್ಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಆಕ್ಸಿಜನ್ ಕೊರತೆ ಬಳಿಕ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಡ್ರಗ್ ಪ್ರಾಬ್ಲಂ ಶುರುವಾಗಿದೆ. ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿ ವೈರಲ್ ಡ್ರಗ್ `ರೆಮ್ದೆಸಿವಿರ್’ ಔಷಧಿ ಕೊರತೆ ಎದುರಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬ ವಿಚಾರ ತಿಳಿದು ಬಂದಿದೆ

    ಆಕ್ಸಿಜನ್ ಜೊತೆ `ರೆಮ್ದೆಸಿವಿರ್’ ಕಡಿಮೆಯಾದರೆ ಏನು ಗತಿ ಎಂಬುದು ರೋಗಿಗಳ ಸಂಬಂಧಿಕರ ಅಳಲು. ರೆಮ್ದಿಸಿವಿರ್ ಡ್ರಗ್ ಕೊರತೆಯಾದರೆ ಸಾವು ನೋವುಗಳು ಸಂಭವಿಸುವುದು ಹೆಚ್ಚಿರುತ್ತದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಇದು ಅವಶ್ಯಕವಾಗಿದೆ. ಕೋವಿಡ್-19 ಪ್ರಕರಣಗಳು ಹೆಚ್ಚಾದ ಮೇಲೆ ಆ್ಯಂಟಿ ವೈರಲ್ ಡ್ರಗ್ ಕೊರತೆ ಹೆಚ್ಚಾಗುತ್ತಿದೆ.

    ರೆಮ್ದೆಸಿವಿರ್ ಅಂದರೆ ಏನು ?
    ರೆಮ್ದಿಸಿವಿರ್ ಆಂಟಿ ವೈರಲ್ ಡ್ರಗ್ ಆಗಿದ್ದು, ಆಕ್ಸಿಜನ್ ಲೆವೆಲ್ ಕಡಿಮೆ ಇರುವವರಿಗೆ ಇದನ್ನು ನೀಡಲಾಗುತ್ತದೆ. ಈ ಔಷಧಿಯನ್ನು ಆಕ್ಸಿಜನ್ ಲೆವೆಲ್ ಕಡಿಮೆ ಇರುವ ರೋಗಿಗಳಿಗೆ, ಉಸಿರಾಟದ ಸಮಸ್ಯೆ ಇರುವವರಿಗೆ ನೀಡುತ್ತಾರೆ. ಐಸಿಯುನಲ್ಲಿರುವ ರೋಗಿಗಳಿಗೆ ಇದು ಅವಶ್ಯಕವಾಗಿದೆ. ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇದು ಅತಿ ಮುಖ್ಯ.

    ಎಷ್ಟು ಅವಶ್ಯಕ?
    ಆ್ಯಂಟಿ ವೈರಲ್ ಡ್ರಗ್ ಒಬ್ಬ ರೋಗಿಗೆ 6 ವಯಲ್ ಬೇಕು (100 ಎಂಜಿ ಗೆ ಒಂದು ವಯಲ್), ಒಬ್ಬ ರೋಗಿಗೆ ಆರು ದಿನಗಳ ಕಾಲ ಆರು ವಯಲ್ ನೀಡಬೇಕು. ವಯಲ್ ನೀಡದಿದ್ದರೆ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಆಕ್ಸಿಜನ್ ಲೆವೆಲ್ ಕಡಿಮೆ ಇರುವ ಈ ಔಷಧಿಯನ್ನು ಕೊಡಲೇ ಬೇಕು.

    1 ತಿಂಗಳಿನಿಂದ ಕೊರತೆ:
    ಒಂದು ತಿಂಗಳಿನಿಂದಲೂ ಈ ಡ್ರಗ್ ಕೊರತೆ ಎದುರಾಗಿದೆ, ಕೋವಿಡ್ ಕೇಸ್ ಹೆಚ್ಚಾದ ಹಿನ್ನಲೆ ಕೊರತೆ ಹೆಚ್ಚಾಗಿದೆ. ಅಲ್ಲದೆ ಈ ಡ್ರಗ್ ಸರಿಯಾಗಿ ಉತ್ಪಾದನೆ ಆಗುತ್ತಿಲ್ಲ ಎನ್ನಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸರಿಯಾಗಿ ಸಿಗುತ್ತಿಲ್ಲ. ಅಲ್ಲದೆ ಮಾರ್ಕೆಟ್ ನಲ್ಲಿ ಇದು ಲಭ್ಯವಿಲ್ಲ. ಬೌರಿಂಗ್, ಇಎಸ್‍ಐ, ಕೆ.ಸಿ.ಜನರಲ್ ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧಿ ಲಭ್ಯವಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ 160 ಕೋವಿಡ್-19 ಬೆಡ್ ಇವೆ. ಆದರೆ 10 ದಿನದಿಂದ ಈ ಔಷಧಿ ಕೊರತೆ ಕಾಡುತ್ತಿದೆ. ಇಎಸ್‍ಐ ನಲ್ಲಿ ಸಹ ಇದರ ಕೊರತೆ ಕಾಣುತ್ತಿದೆ. ಹೀಗಾಗಿ ಆತಂಕ ಎದುರಾಗಿದೆ.

    ಕೊರತೆಗೆ ಕಾರಣಗಳೇನು?
    ಈ ಔಷಧಿ ಹೆಚ್ಚು ಉತ್ಪಾದನೆ ಆಗುತ್ತಿಲ್ಲ, ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಅಲ್ಲದೆ ಕೆಲವರು ಇದನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಅರೋಪ ಸಹ ಕೇಳಿ ಬಂದಿದೆ. ಬೇಡಿಕೆ ಅನುಗುಣವಾಗಿ `ರೆಮ್ದೆಸಿವಿರ್’ ಔಷಧಿ ಉತ್ಪಾದನೆ ಆಗದಿರುವುದರಿಂದ ಸಮಸ್ಯೆ ಎದುರಾಗಿದೆ.

    ಕೊರೋನಾ ಡೇಂಜರ್ ಝೋನ್‍ನಲ್ಲಿ ಬೆಂಗಳೂರು ಇದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದಿಗೆ 1 ಲಕ್ಷ ದಾಟುವ ಸಾಧ್ಯತೆಯಿದೆ. ಇಂದು ಸಹ 2,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಇನ್ನು 10 ದಿನಗಳಲ್ಲಿ 30,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ ಹೊತ್ತಿಗೆ ಬೆಂಗಳೂರಲ್ಲೇ 2 ಲಕ್ಷ ದಾಟಿದರೂ ಅಚ್ಚರಿ ಪಡಬೇಕಿಲ್ಲ ಎನ್ನಲಾಗುತ್ತಿದೆ.