Tag: ಕೊಯ್ನಾ

  • ಕೃಷ್ಣ ನದಿ ನೀರಿನಲ್ಲಿ ಏರಿಕೆ- ಕೊಯ್ನಾದಿಂದ 55 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಕೃಷ್ಣ ನದಿ ನೀರಿನಲ್ಲಿ ಏರಿಕೆ- ಕೊಯ್ನಾದಿಂದ 55 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಬೆಳಗಾವಿ: ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗಿದೆ. ಕೊಯ್ನಾ ಜಲಾಶಯದಿಂದ 55,486 ಕ್ಯೂಸೆಕ್ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಕೃಷ್ಣಾ, ದುದಗಂಗಾ ಹಾಗೂ ಹಿರಣ್ಯಕೇಶಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

    1.95ಲಕ್ಷ ಕ್ಯೂಸೆಕ್ ಗಿಂತ ಹೆಚ್ಚು ನೀರು ಕೃಷಾ ನದಿಗೆ ಹರಿದು ಬರುತ್ತಿದೆ. ಕೃಷ್ಣಾ ನದಿ ತೀರದ ಬಹುತೇಕ ಜನರು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಆಗಿದ್ದಾರೆ. ಇತ್ತ ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಮಳೆ ತಗ್ಗಿದ್ದು, ಜನ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ. ಕೊಯ್ನಾದಿಂದ ಬರುತ್ತಿರುವ ನೀರಿನಿಂದ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

    ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ. ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗೋಡಗೇರಿ- ನೊಗಿನಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲಿಂದ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.

  • ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ

    ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ

    -ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ

    ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ಬಿಡುಗಡೆ ಮಾಡಲಾಗುತ್ತಿದೆ. ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಕೃಷ್ಣಾ ನದಿ ಅಚ್ವುಕಟ್ಟು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದೆ. ಮೂರು ದಿನಗಳಲ್ಲಿ 180 ಮಿಲಿ ಮೀಟರ್ ಗಿಂತಲೂ ಅಧಿಕ ಮಳೆಯಾಗಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಶನಿವಾರ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಕೃಷ್ಣಾ ನದಿ ತೀರದ ಜನರಲ್ಲಿ ಪ್ರವಾಹ ಆತಂಕ ಮನೆ ಮಾಡಿದೆ.

    ಅಧಿಕ ಮಳೆ ಹಿನ್ನೆಲೆಯಲ್ಲಿ ನೀರು ಪ್ರಮಾಣ ಬಿಡುಗಡೆಯನ್ನ ಕೊಯ್ನಾ ಜಲಾಶಯ ಹೆಚ್ಚಿಸಿದೆ. 8:30 ಕ್ಕೆ 25,604, 11 ಗಂಟೆಗೆ 35,000 ಮತ್ತು ಮಧ್ಯಾಹ್ನ 2 ಗಂಟೆಗೆ 40,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 24 ಗಂಟೆಗಳಲ್ಲಿ ಜಲಾಶಯದಲ್ಲಿ 5 ಟಿಎಂಸಿ ನೀರು ಸಂಗ್ರಹವಾಗಿದೆ. ರಾಧಾ ನಗರಿ ಜಲಾಶಯದಿಂದಲೂ ಸಹ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

    ಇತ್ತ ಪಶ್ಚಿಮಘಟ್ಟದಲ್ಲಿ ಹೆಚ್ಚು ಮಳೆಯಾಗ್ತಿರೋ ಹಿನ್ನೆಲೆ ಮಲಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯಲ್ಲಿರುವ ನವಿಲು ತೀರ್ಥ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಅತಂಕ ಎದುರಾಗಿದೆ. ನದಿ ತೀರಕ್ಕೆ ಯಾರೂ ತೆರಳದಂತೆ ಡಂಗೂರ ಸಾರಿ ನದಿ ತೀರದ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ. ಕಸ ಸಾಗಿಸುವ ವಾಹನಗಳಲ್ಲಿಯೂ ಸ್ಪೀಕರ್ ಮೂಲಕ ಪುರಸಭೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

  • ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ-ಕೊಯ್ನಾದಿಂದ ನೀರು ಬಿಡುಗಡೆ

    ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ-ಕೊಯ್ನಾದಿಂದ ನೀರು ಬಿಡುಗಡೆ

    -ಯಡೂರು-ಕಲ್ಲೋಳ ಸೇತುವೆ ಜಲಾವೃತ
    – ಮತ್ತೆ ಪ್ರವಾಹ ಭೀತಿ

    ಬೆಳಗಾವಿ/ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೊಯ್ನಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ.

    ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಹಾಗಾಗಿ ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ನದಿ ದಡದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಚಿಕ್ಕೋಡಿ ತಾಲೂಕಿನ ಕೆಳಹಂತದ ಯಡೂರು-ಕಲ್ಲೋಳ ಸೇತುವೆ ಜಲಾವೃತಗೊಂಡಿದೆ. ಸೇತುವೆ ಜಲಾವೃತಗೊಂಡಿದ್ದರಿಂದ ಪ್ರಯಾಣಿಕರು ಸುತ್ತುವರೆದು ಪ್ರಯಾಣಿಸುವಂತಾಗಿದೆ.

    ಕೃಷ್ಣಾ ನದಿಗೆ ಸದ್ಯ 40 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬರುತ್ತಿದೆ. ಇತ್ತ ಕೊಯ್ನಾ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್ ಅಧಿಕ ನೀರು ಹರಿದು ಬರುತ್ತಿದೆ. ಹೀಗೆ ಮಳೆ ಮುಂದುವರಿದ್ರೆ ಮಂಗಳವಾರ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲು ಕೊಯ್ನಾ ಜಲಾಶಯದ ಆಡಳಿತ ಮಂಡಳಿ ಪ್ಲಾನ್ ಮಾಡಿಕೊಂಡಿದೆ.

    ಕಳೆದ ತಿಂಗಳು ಸುರಿದ ಮಳೆಗೆ ಬೆಳಗಾವಿ ಜಿಲ್ಲೆ ಭಾಗಶಃ ಪ್ರವಾಹಕ್ಕೆ ತುತ್ತಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ನಿರಾಶ್ರಿತ ಶಿಬಿರಗಳಿಂದ ಗ್ರಾಮಗಳಿಗೆ ಹಿಂದಿರುಗುತ್ತಿರುವ ಗ್ರಾಮಸ್ಥರು ಬದುಕು ಕಟ್ಟಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ನಡುವೆ ಮತ್ತೆ ಕೊಯ್ನಾ ಜಲಾಶಯದಿಂದ ನೀರು ಬಿಡುತ್ತಿರುವ ಸುದ್ದಿ ಕೇಳಿ ಜನರು ಆತಂಕಕ್ಕೀಡಾಗಿದ್ದಾರೆ.

  • ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

    ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

    ಬೆಳಗಾವಿ: ವರುಣನ ಅಬ್ಬರ ಹಾಗೂ ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ನದಿಗೆ ಸಿಕ್ಕಿರುವ ಜನರ ಕನಸುಗಳು ಕೊಚ್ಚಿಕೊಂಡು ಹೋಗುತ್ತಿವೆ. ಅಂತೆಯೇ ಬೆಳಗಾವಿ ಜಿಲ್ಲೆಯ 7 ತಿಂಗಳ ಗರ್ಭಿಣಿಯೊಬ್ಬರ ಮಗುವಿನ ಕನಸು ಕೋಯ್ನಾ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

    ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ರೇಣುಕಾ ಅವರು ಇನ್ನೇನು ಎರಡು ತಿಂಗಳಿಗೆ ಮಗುವಿಗೆ ಜನ್ಮ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆರಂಭವಾದ ಹೊಟ್ಟೆನೋವಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಗರ್ಭದಲ್ಲಿಯೇ ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ತಾಯಿ ರೇಣುಕಾ ಅವರ ಆಕ್ರಂದನ ಮುಗಿಲುಮುಟ್ಟಿದೆ.

    ಮಳೆ ಹಾಗೂ ಪ್ರವಾಹದಿಂದ ಉಗದಟ್ಟಿ ಗ್ರಾಮವು ನಡುಗಡ್ಡೆಯಂತೆ ಆಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಜೀವನ, ಸಂಚಾರ ಅಸ್ತವ್ಯಸ್ತವಾಗಿದೆ. ರೇಣುಕಾ ಅವರಿಗೆ ಗುರುವಾರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮುಳುಗಡೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸೇನಾ ತುಕಡಿಯ ಮೂಲಕ ವೈದ್ಯರನ್ನು ಕರೆತರಲಾಗಿತ್ತು. ಆದರೆ ಅವಧಿಪೂರ್ವ ಹೆರಿಗೆಯಾಗಿದ್ದರಿಂದ ತೂಕವಿಲ್ಲದ ಕಂದಮ್ಮ ತಾಯಿಯ ಮಡಿಲಲ್ಲೇ ಅಸುನೀಗಿತ್ತು.

    ಮಗುವನ್ನು ಕಳಕೊಂಡ ತಾಯಿಯನ್ನು ಗುರುವಾರ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಾಗಿತ್ತು. ಆದರೆ ನವಮಾಸ ಹೊತ್ತ ಕಂದಮ್ಮ ಇನ್ನಿಲ್ಲ, ನಾನು ಎಲ್ಲಿಗೂ ಬರುವುದಿಲ್ಲ ಅಂತ ರೇಣುಕಾ ಹಠ ಹಿಡಿದಿದ್ದರು. ಕೊನೆಗೂ ಸೇನೆಯ ಸಿಬ್ಬಂದಿ ಹಾಗೂ ವೈದ್ಯರು ರೇಣುಕಾ ಅವರನ್ನು ಒತ್ತಾಯದಿಂದ ಇಂದು ರಕ್ಷಣೆ ಮಾಡಿ, ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.