Tag: ಕೊಪ್ಪಳ

  • ಮರೆಯಾಯ್ತು ಮಾನವೀಯತೆ- 12ರ ಬಾಲಕ ಜೀವನ್ಮರಣ ಹೋರಾಡ್ತಿದ್ರೂ ಸಹಾಯಕ್ಕೆ ಬರ್ಲಿಲ್ಲ ಜನ

    ಹಾವೇರಿ: ಕೊಪ್ಪಳದ ಅಪಘಾತ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

    ಬೈಕ್‍ನಲ್ಲಿ ಬಸ್ ಓವರ್ ಟೇಕ್ ಮಾಡುತ್ತಿದ್ದ ವೇಳೆ ತಂದೆಯ ಹಿಂದೆ ಕುಳಿತ್ತಿದ್ದ ಮಗ ಭಯಗೊಂಡು ಜಿಗಿದು ಬಸ್‍ನ ಚಕ್ರಕ್ಕೆ ಸಿಲುಕಿಕೊಂಡಿದ್ದಾನೆ. 12 ವರ್ಷದ ಬಾಲಕ ಆನಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ರೂ ಜನ ಸಹಾಯಕ್ಕೆ ಹೋಗದೆ ಪೊಲೀಸ್ ಸಿಬ್ಬಂದಿ ಬರಲಿ ಅಂತಾ ನೋಡ್ತಿದ್ರು. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಬಾಲಕ ಆನಂದ ಮೃತಪಟ್ಟಿದ್ದಾನೆ.

    ತಂದೆ ಮಂಜುನಾಥರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ಸವಣೂರು ಪಟ್ಟಣದಿಂದ ತಮ್ಮ ಗ್ರಾಮ ಮೆಳಾಗಟ್ಟಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    https://www.youtube.com/watch?v=lhPk2Y_EslM&feature=youtu.be

  • ರಾತ್ರೋ ರಾತ್ರಿ ಕಮಾನು ಕೆಡವಿ ಜನರಿಗೆ ಹೆದರಿ ನಮಗೇನೂ ಗೊತ್ತಿಲ್ಲ ಅಂತಿದ್ದಾರೆ ಅಧಿಕಾರಿಗಳು!

    ಕೊಪ್ಪಳ: ನಗರದ ಮಧ್ಯಭಾಗದಲ್ಲಿದ್ದ ಐತಿಹಾಸಿಕ ಕಮಾನುಗಳನ್ನು ಕದ್ದುಮುಚ್ಚಿ ಸಾರ್ವಜನಿಕರ ವಿರೋಧದ ನಡುವೆಯೂ ತೆರವು ಮಾಡಲಾಗಿದೆ.

    ನಗರ ಸಭೆಯ ಅಧಿಕಾರಿಗಳು ಸಾರ್ವಜನಿಕರ ವಿರೋಧಕ್ಕೆ ಹೆದರಿ ಮಧ್ಯರಾತ್ರಿ 2 ಗಂಟೆಗೆ ಕಮಾನುಗಳನ್ನು ಕೆಡವಿದ್ದಾರೆ. ಹಿಂದೆಯೂ ಈ ಕಮಾನುಗಳನ್ನು ಕೆಡವಲು ಮುಂದಾಗಿದ್ದ ಅಧಿಕಾರಿಗಳು ಜನರ ವಿರೋಧಕ್ಕೆ ಹೆದರಿ ಕೈ ಬಿಟ್ಟಿದ್ದರು.

    ಆದರೆ ಕಳೆದ ರಾತ್ರಿ ಯಾರಿಗೂ ತಿಳಿಯದಂತೆ ಕಮಾನು ಕೆಡವಿ ಹಾಕಿದ ಅಧಿಕಾರಿಗಳು ಈಗ ನಮಗೇನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೊಪ್ಪಳದ ಕಮಾನು ಉಳಿಸಿ ಹೋರಾಟ ಸಮಿತಿಯವರು ಪ್ರಾಚ್ಯವಸ್ತು ಇಲಾಖೆಗೆ ಕಮಾನು ಕೆಡವದಂತೆ ಮನವಿ ಮಾಡಿದ್ದರು.

    ಕೊಪ್ಪಳ ನಗರದ ಜವಹಾರ ರಸ್ತೆ ಮತ್ತು ಕೋಟೆ ರಸ್ತೆಯಲ್ಲಿರುವ ಎರಡು ಕಮಾನುಗಳನ್ನು ರಾತ್ರೋರಾತ್ರಿ ತೆರವು ಗೊಳಿಸಿರುವುದು ಸಾರ್ವಜನಿಕರನ್ನು ಕೆರಳಿಸಿದೆ. ಅಧಿಕಾರಿಗಳ ಬೇಜವಾಬ್ದಾರಿಯುತ ನಡೆಯೂ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

  • ಶಾಲಾ ವಾರ್ಷಿಕೋತ್ಸವದಂದು ತಾಯಿಯ ಪಾದ ತೊಳೆದು ಪೂಜೆ ಸಲ್ಲಿಸಿದ ಕೊಪ್ಪಳದ ಮಕ್ಕಳು

    ಕೊಪ್ಪಳ: ಜಿಲ್ಲೆಯ ಹನುಮಸಾಗರ ಪಟ್ಟಣದ ಸರ್ವೋದಯ ಖಾಸಗಿ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಜನ್ಮದಾತೆಯರಿಗೆ ನಮನ ಸಲ್ಲಿಸಿದರು.

    ಫೆಬ್ರವರಿ ಮತ್ತು ಮಾರ್ಚ ತಿಂಗಳು ಬಂದರೆ ಎಲ್ಲ ಶಾಲೆಗಳಲ್ಲಿ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಸರ್ವೋದಯ ಶಾಲೆಯಲ್ಲಿ `ಜನ್ಮದಾತರಿಗೊಂದು ನಮನ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮಕ್ಕಳಿಂದ ಹೆತ್ತವರ ಪಾದ ಪೂಜೆ ಮಾಡಿಸಲಾಯಿತು. ಸುಮಾರು 150 ಕ್ಕೂ ಹೆಚ್ಚು ಪಾಲಕರು ಆಗಮಿಸಿದ್ದರು. ಅವರವರ ಮಕ್ಕಳು ತಮ್ಮ ತಂದೆ-ತಾಯಂದಿರಿಗೆ ಸಾಮೂಹಿಕವಾಗಿ ಪಾದ ಪೂಜೆ ನೆರವೇರಿಸಿದರು. ಜಾತಿ-ಬೇಧ ಎನ್ನದೆ ಎಲ್ಲ ಧರ್ಮದ ತಾಯಂದಿರು ಪಾದ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು

    ಯಾಕೆ ಕಾರ್ಯಕ್ರಮ ಆಯೋಜಿಸಿದ್ದು ಎಂದು ಕೇಳಿದ್ದಕ್ಕೆ, ಯುವ ಪೀಳಿಗೆ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಿದೆ. ಇದರಿಂದ ಇಂತಹ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.

  • ಅಧಿಕಾರ ಇಲ್ಲ, ಜನ ಬರ್ತಿಲ್ಲ ಅಂತ ಹತಾಶರಾಗಿ ಎಸ್‍ಎಂಕೆ ಪಕ್ಷ ತೊರೆದಿದ್ದಾರೆ: ರಾಯರೆಡ್ಡಿ

    ಕೊಪ್ಪಳ: ಅಧಿಕಾರ ಇಲ್ಲ, ಜನ ಬರುತ್ತಿಲ್ಲ ಎಂದು ಹತಾಶರಾಗಿ ಎಸ್‍ಎಂ ಕೃಷ್ಣ ಪಕ್ಷ ತೊರೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ ನೀಡಿದ್ದಾರೆ.

    ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯರಡ್ಡಿ, ಎಸ್‍ಎಂ ಕೃಷ್ಣ ಹಿಂದೆ ಎಲ್ಲಾ ರೀತಿಯ ಅಧಿಕಾರ ಅನುಭವಿಸಿದಂತವರು. ಈಗ ವಯಸ್ಸಾಗಿದೆ, ಅಧಿಕಾರ ಇಲ್ಲ, ಜನರು ತಮ್ಮತ್ತ ಸುಳಿಯುತ್ತಿಲ್ಲ ಎಂದು ಹತಾಶರಾಗಿದ್ದಾರೆ. ವಯಸ್ಸಾದ ಮೇಲೆ ಹತಾಶರಾಗುವುದು ಸಹಜ. ಎಸ್‍ಎಂ ಕೃಷ್ಣ ಗೌರವಯುತ ರಾಜಕಾರಣಿಗಳಾಗಿದ್ದಾರೆ. ಮತ್ತೆ ನಮ್ಮ ಪಕ್ಷಕ್ಕೆ ಮರಳಿ ಬರುತ್ತಾರೆ ಎಂಬ ವಿಶ್ವಾಸವಿದೆ ಅಂತ ಹೇಳಿದ್ರು.

    ಜಾಫರ್ ಷರೀಫ್ ಮತ್ತು ಜನಾರ್ದನ ಪೂಜಾರಿ ಪಕ್ಷದ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ. ಜಾಫರ್ ಶರೀಫ್ ಮೊಮ್ಮಗನಿಗೆ ಟಿಕೆಟ್ ನೀಡಿ ಮುಖ್ಯ ಮಂತ್ರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಆದ್ರೂ ಮುಖ್ಯ ಮಂತ್ರಿಗಳು ಕಡೆಗಣಿಸಿದ್ದಾರೆ ಎಂದು ಹೇಳುವುದು ಸರಿಯಲ್ಲ. ಅದರಂತೆ ಜನಾರ್ದನ ಪೂಜಾರಿ ಕೂಡ ಅನಾಗರಿಕ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ರು.

    ಬಸವರಾಜ ರಾಯರಡ್ಡಿ ಗೆ ಹಾಫ್ ನಾಲೇಡ್ಜ್ ಇದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ಅವರಿಗೇನು ಫುಲ್ ನಾಲೇಡ್ಜ್ ಇದೆಯಾ? ನನ್ನ ಇಲಾಖೆಯ ಬಗ್ಗೆ ಅವರಿಗೇನು ಗೊತ್ತು? ಎಂದು ಪ್ರಶ್ನಿಸಿ ಹೆಚ್‍ಡಿಕೆ ವಿರುದ್ಧ ಕಿಡಿ ಕಾರಿದ್ರು.

  • ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರೂ ಯುವಕನಿಗೆ ಯಾರೂ ಸಹಾಯ ಮಾಡಲಿಲ್ಲ!

    ಕೊಪ್ಪಳ: ಯುವಕನ ಮೇಲೆ ಬಸ್ ಹರಿದ ನಂತ್ರ ಗಾಯಗೊಂಡ ಯುವಕ ಸಹಾಯಕ್ಕೆ ಅಂಗಲಾಚಿದ್ರೂ ಯಾವ ಸ್ಥಳೀಯರು ಸಹಾಯ ಮಾಡದ ಅಮಾನವೀಯ ಘಟನೆ ಕೊಪ್ಪಳ ನಗರದ ಪಬ್ಲಿಕ್ ಗ್ರೌಂಡ್ ಬಳಿ ಇಂದು ಬೆಳಗ್ಗೆ 09:30ರ ವೇಳೆಯಲ್ಲಿ ನಡೆದಿದೆ.

    ಅನ್ವರ್ ಶಾಬುದ್ದೀನ್ (17) ಅಪಘಾತಕ್ಕೊಳಗಾದ ಯುವಕ. ಅನ್ವರ್ ಮೇಲೆ ಹೊಸಪೇಟೆದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ಹಾಯ್ದು ಹೋಗಿತ್ತು. ಅನ್ವರ್ ರಕ್ತದ ಮಡುವಿನಲ್ಲಿ ಒದ್ದಾಡಿದರೂ ಯಾರೊಬ್ಬರೂ ಅವನ ಸಹಾಯಕ್ಕೆ ಮುಂದಾಗದೇ ಜನರು ಫೋಟೋ ತೆಗೆಯುತ್ತಾ ನಿಂತಿದ್ದರು.

    ಕೊನೆಗೆ ಅನ್ವರ್‍ನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    https://youtu.be/6l37Sc58xw0