Tag: ಕೊಡಗು

  • ಬತ್ತಿದ ಲಕ್ಷ್ಮಣ ತೀರ್ಥ: ಕಾಫಿ ಬೆಳೆ ಬಿಟ್ಟು ಹೋಂ ಸ್ಟೇ ಆರಂಭಿಸಲು ಮುಂದಾದ ಜನ!

    ಬತ್ತಿದ ಲಕ್ಷ್ಮಣ ತೀರ್ಥ: ಕಾಫಿ ಬೆಳೆ ಬಿಟ್ಟು ಹೋಂ ಸ್ಟೇ ಆರಂಭಿಸಲು ಮುಂದಾದ ಜನ!

    ಮಡಿಕೇರಿ: ಕಾವೇರಿ ತವರಲ್ಲೂ ಬರದ ಛಾಯೆ ಎದ್ದಿದೆ. ಕಾವೇರಿಯ ಒಡಲು ಬತ್ತುತ್ತಿದೆ. ಪ್ರಕೃತಿಯ ಮಡಿಲಲ್ಲಿ ನೀರಿಗೆ ಹಾಹಾಕಾರ. ಬೇಸಿಗೆಗೂ ಮುನ್ನ ತತ್ತರಿಸಿದ ಕಾವೇರಿ ತವರಿನ ಜನರು. ದಕ್ಷಿಣ ಕೊಡಗಿನ ಜೀವ ನದಿಯಾದ ಲಕ್ಷಣ ತೀರ್ಥ ನದಿಯು ಬತ್ತಿಹೋಗಿದ್ದು ನೇರೆ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

    ಕಾವೇರಿ ತವರು ಪ್ರಾಕೃತಿಕ ಸೌಂದರ್ಯದ ನೆಲೆವೀಡು ಕೊಡಗು ಜಿಲ್ಲೆಯಲ್ಲಿ ಈಗ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನಾಡಿ ಕಾವೇರಿ ಹಾಗು ಲಕ್ಷ್ಮಣ ತೀರ್ಥ ನದಿ ಬತ್ತಿದ್ದು, ಜಿಲ್ಲೆಯ ಪ್ರಮುಖ ಉದ್ಯಮವಾಗಿರುವ ಕಾಫಿ ಶೇ.30 ಭತ್ತ ಶೇ.50 ರಷ್ಟು ಕುಸಿತ ಕಂಡಿದ್ದು ಬೆಳೆಗಾರನ ಬದುಕು ದುಸ್ತರವಾಗಿದೆ.

    ಈ ಬಾರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಉದ್ಭವಿಸಿದ್ದು ಬೇಸಿಗೆಯಲ್ಲಿ ಮತ್ತಷ್ಟು ಭೀಕರವಾಗುವ ಸಾಧ್ಯತೆಗಳಿದೆ. ಕೊಡಗು ಜಿಲ್ಲೆ ಸತತವಾಗಿ ಎರಡು ವರ್ಷ ಬರಗಾಲವನ್ನು ಎದುರಿಸುತ್ತಿದೆ. ಜೀವನದಿ ಕಾವೇರಿ ಹರಿದು ಹೋಗುವ ವ್ಯಾಪ್ತಿಯಲ್ಲೂ ಬರದ ಛಾಯೆ ಉದ್ಭವಿಸಿದೆ. ಈಗ ಲಕ್ಷ್ಮಣ ತೀರ್ಥ ನದಿಯು ಇದೀಗ ಸಂಪೂರ್ಣವಾಗಿ ಬತ್ತಿಹೋಗಿದೆ.

    ಕೊಡಗಿನ ಬಾಳೆಲೆ ಕುಟ್ಟ ಮಾಯಮುಡಿ ಹಾಗೂ ಪಕ್ಕದ ಜಿಲ್ಲೆಯದ ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಗಳ ರೈತರು ಈ ಲಕ್ಷ್ಮಣ ತೀರ್ಥ ನದಿಯ ನೀರನ್ನೆ ಅವಲಂಬಿಸಿದ್ದು ಈಗ ಭಾರೀ ಕಷ್ಟವಾಗಿದೆ ಎಂದು ರೈತ ಬೋಪಯ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಭಾಗದ ಜನ-ಜಾನುವಾರುಗಳು ಸಮಸ್ಯೆಯಿಂದ ನರಳುವುದು ಮಾತ್ರ ತಪ್ಪುವುದಿಲ್ಲ. ಹವಾಮಾನದ ವೈಪರೀತ್ಯದಿಂದಾಗಿ ಮಳೆಯೂ ಈ ವರ್ಷ ಕೈಕೊಟ್ಟಿದೆ. ಪರಿಣಾಮ ಲಕ್ಷ್ಮಣ ತೀರ್ಥ ನದಿ ಸೇರಿದಂತೆ, ಸಣ್ಣಪುಟ್ಟ ಹೊಳೆಗಳು, ಕೆರೆಗಳು ಈಗಾಗಲೇ ಬತ್ತಿ ಹೋಗಿದೆ.

    ಗ್ರಾಮೀಣ ಭಾಗದಲ್ಲೂ ಸೇರಿದಂತೆ ನಗರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ದುರಾದೃಷ್ಟಕರ ಸಂಗತಿ ಎಂದರೆ ಕಾಫಿ ಬೆಳೆ ಕೈಕೊಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಕಾಫಿ ಬೆಳೆಗಾರರು ಈಗ ಹೋಂಸ್ಟೇ ಆರಂಭಿಸಿದ್ದು, ಕೃಷಿಯನ್ನು ಮರೆತಿದ್ದಾರೆ. ಈ ಹಿನ್ನೆಲೆ ಹೋಂಸ್ಟೇ ಸಂಸ್ಕøತಿಗೆ ಕೊಡಗಿನ ಬಹುತೇಕ ಬೆಳೆಗಾರರು ಮಾರು ಹೋಗಿದ್ದಾರೆ. ಇದರಿಂದ ಪರಿಸರ ನಾಶ, ಅನಗತ್ಯ ಯೋಜನೆಗಳು ಜಿಲ್ಲೆಯ ಪರಿಸರವನ್ನು ಹಾಳು ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

    ಹೈಟೆನ್ಷನ್ ಮಾರ್ಗ, ಅಕ್ರಮ ರೆಸಾರ್ಟ್ ತಲೆ ಎತ್ತಿರುವುದು, ಮರಳು ದಂಧೆ, ಮರ ಮಾಫಿಯಾ, ಅರಣ್ಯ ನಾಶದಿಂದ ಕೊಡಗಿನ ಪ್ರಾಕೃತಿಕ ಪರಿಸರವೇ ಬದಲಾಗಿದೆ. ಈ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಬರದ ತಾಂಡವ ಹೆಚ್ಚಾಗಿದೆ. ಇವುಗಳಿಗೆ ತುರ್ತಾಗಿ ಕಡಿವಾಣ ಹಾಕಬೇಕಿದೆ ಎಂದು ಕೊಡಗು ಜಿಲ್ಲೆಯ ರೈತಸಂಘದ ಅಧ್ಯಕ್ಷ ಮನು ಸೋಮಯ್ಯ ಹೇಳಿದ್ದಾರೆ.

  • ಗೌಡ ಸಮುದಾಯದ ಭಾಷೆ ಉಳಿಸಲು ಪಣ- ಸಂಸ್ಕೃತಿಗಾಗಿ ಜಾಗೃತಿ ಮೂಡಿಸ್ತಿರೋ ಕೊಡಗಿನ ಮಿಲನ ಭರತ್

    ಗೌಡ ಸಮುದಾಯದ ಭಾಷೆ ಉಳಿಸಲು ಪಣ- ಸಂಸ್ಕೃತಿಗಾಗಿ ಜಾಗೃತಿ ಮೂಡಿಸ್ತಿರೋ ಕೊಡಗಿನ ಮಿಲನ ಭರತ್

    ಮಡಿಕೇರಿ: ರಾಜ್ಯದ ಎಷ್ಟೋ ಸಮುದಾಯಗಳಿಗೆ ಈಗಲೂ ಮಾತನಾಡಲು ಸರಿಯಾದ ಭಾಷೆ ಇಲ್ಲ. ಹೀಗಾಗಿ, ಸಂಸ್ಕøತಿ-ಭಾಷೆಗಳು ಅವಸಾನ ಕಂಡಿವೆ. ಆದ್ರೆ, ಇಂಥ ಶ್ರೀಮಂತ ಸಂಸ್ಕೃತಿ ಮರೆಯಾಗಬಾರದು ಅಂತ ಕೊಡಗಿನ ಮಹಿಳೆಯೊಬ್ಬರು ಪಣತೊಟ್ಟಿದ್ದಾರೆ.

    ಕೊಡಗು ಜಿಲ್ಲೆಯ ಭಾಗಮಂಡಲದ ಮಿಲನ ಭರತ್, ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆ ನಿರ್ವಹಣೆ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಯಾಂಕ ಗಳಿಸಿದ್ದಾರೆ. ಪ್ರಸ್ತುತ ಸೋಮವಾರಪೇಟೆ ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ರೂ ರಜೆ ದಿನಗಳಲ್ಲಿ ತಮ್ಮ ಗೌಡ ಸಮುದಾಯದ ಅರೆ ಭಾಷೆ ಸಂಸ್ಕೃತಿ ಉಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಂಡಲ ಗ್ರಾಮದಲ್ಲಿ ಕಳೆದ 14 ವರ್ಷಗಳಿಂದ `ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್’ ಅಡಿ `ನಾಟ್ಯ ಮಿಲನ ನೃತ್ಯ ಶಾಲೆ’ ಮೂಲಕ ಉಚಿತ ನೃತ್ಯ ತರಬೇತಿ ನೀಡ್ತಿದ್ದಾರೆ.

    ಗೌಡರ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ಹುತ್ತರಿ ಕೋಲು, ಸುಗ್ಗಿ ಕುಣಿತ, ಭೂತಕೋಲ, ಆಟಿ ಕಳಂಜ, ಜೋಗಿ ಕುಣಿತ, ಸೋಬಾನೆ ಪದ ಇವುಗಳನ್ನು ಪ್ರದರ್ಶನ ಕಲೆಯಾಗಿ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. “ಅರೆ ಭಾಷೆ ಗೌಡರ ಸಿರಿ ಸಂಸ್ಕøತಿ” ಎಂಬ ಹೆಸರಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇವರ ತಂಡ ಪ್ರದರ್ಶನ ನೀಡಿದೆ.

    ನೃತ್ಯ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ವೇಷ ಭೂಷಣ, ಕಾರ್ಯಕ್ರಮ ನೀಡುವ ಪ್ರಯಾಣದ ವೆಚ್ಚ ಎಲ್ಲವನ್ನೂ ಟ್ರಸ್ಟ್ ಮೂಲಕ ಭರಿಸಲಾಗ್ತಿದೆ. ಇನ್ನು ಸಾಹಿತ್ಯದತ್ತ ಒಲವು ಹೊಂದಿರೋ ಮಿಲನ ಅವರು ಭಾವಲಹರಿ ಮತ್ತು ಮೌನ ಮುರಿಯೋ ಸಮಯ ಅನ್ನೋ ಕವನ ಸಂಕಲನ ಹಾಗೂ “ಕೊಡಗಿನಲ್ಲಿ ಐನ್ ಮನೆಗಳು” ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದಾರೆ.

    https://www.youtube.com/watch?v=XWC2r6Es5Wc

  • ಕೊಡಗು: ವಿದ್ಯಾರ್ಥಿನಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿ ಬಲಿ ತೆಗೆದುಕೊಂಡ ಕಾಡಾನೆ!

    ಕೊಡಗು: ವಿದ್ಯಾರ್ಥಿನಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿ ಬಲಿ ತೆಗೆದುಕೊಂಡ ಕಾಡಾನೆ!

    – ಘಟನೆಯಿಂದ ಸಹೋದರ ಪಾರು
    – ದಾಳಿಯ ರಭಸಕ್ಕೆ ಆನೆ ದಂತವೇ ಕಟ್

    ಮಡಿಕೇರಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮತ್ತು ಅಕೆಯ ಸಹೋದರನ ಮೇಲೆ ಕಾಡಾನೆ ದಾಳಿಮಾಡಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನೆಲ್ಲಿಕಾಡು ಬಳಿ ನಡೆದಿದೆ.

    ಮೃತ ದುರ್ಧೈವಿ ವಿದ್ಯಾರ್ಥಿನಿಯನ್ನು 20 ವರ್ಷದ ಸಫಾನಾ ಎಂದು ಗುರುತಿಸಲಾಗಿದೆ.

    ಘಟನೆ ವಿವರ: ಇಂದು ಬೆಳಗ್ಗೆ ಸಫಾನಾ ತನ್ನ ಸಹೋದರನ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಅಡ್ಡಗಟ್ಟಿ ದಾಳಿ ಮಾಡಿದೆ. ಸ್ಕೂಟಿಗೆ ಗುದ್ದಿದ ರಭಸಕ್ಕೆ ಆನೆಯ ದಂತವೇ ಮುರಿದು ಬಿದ್ದಿದೆ. ಈ ವೇಳೆ ಬೈಕ್ ಸವಾರ ಸಫಾನಾ ಸಹೋದರ ಓಡಿ ಹೋಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಆದ್ರೆ ಹಿಂಬದಿಯಲ್ಲಿ ಕುಳಿತಿದ್ದ ಸಫಾನಾಳನ್ನು ಮಾತ್ರ ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದ್ದು ಸಫನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಮಿತಿಮೀರಿದ್ದು ಅರಣ್ಯ ಇಲಾಖೆ ಮಾತ್ರ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದೆ. ಇದರಿಂದ ಇಲ್ಲಿನ ಜನ ಭಯದಿಂದಲೇ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಇಲ್ಲಿನ ವಿದ್ಯಾರ್ಥಿಗಳು ಗೋಣಿಕೊಪ್ಪ ಕಾಲೇಜಿಗೆ ಈ ಮಾರ್ಗವಾಗಿಯೇ ತೆರಳಬೇಕಾಗುತ್ತದೆ. ಹೀಗಾಗಿ ದಿನನಿತ್ಯ ಆತಂಕದಲ್ಲಿ ಹೋಗಿಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ತಿತಿಮತಿ ಮತ್ತು ಪಾಲಿಬೆಟ್ಟ ರಸ್ತೆಯನ್ನು ಕೆಲ ಕಾಲ ಬಂದ್ ಮಾಡುವಂತೆ ಅಕ್ರೋಶ ವ್ಯಕ್ತಪಡಿಸಿದರು.

    ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ಸ್ಥಳದಲ್ಲೇ ಪರಿಹಾರ ನೀಡುವವರೆಗೂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವುದಿಲ್ಲ ಅಂತಾ ಗ್ರಾಮಸ್ಥರು ಪಟ್ಟುಹಿಡಿದಿದ್ದರು.

  • ಕಾಸರಗೋಡಿನಲ್ಲಿ ಕೊಡಗು ಮೂಲದ ಮದರಸಾ ಶಿಕ್ಷಕ ಕೊಲೆ

    ಕಾಸರಗೋಡಿನಲ್ಲಿ ಕೊಡಗು ಮೂಲದ ಮದರಸಾ ಶಿಕ್ಷಕ ಕೊಲೆ

    ಕಣ್ಣೂರು: ಕಾಸರಗೋಡಿನ ಸ್ಥಳೀಯ ಮಸೀದಿಗೆ ಹೊಂದಿಕೊಂಡಿರುವ ರೂಮಿನಲ್ಲಿ ಮಡಿಕೇರಿಯ ಕೊಡಗು ಮೂಲದ ಶಿಕ್ಷಕರೊಬ್ಬರು ಬರ್ಬರ ಕೊಲೆಯಾದ್ದಾರೆ. ಸೋಮವಾರ ರಾತ್ರಿ ಕೊಲೆ ನಡೆದಿದ್ದು, ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.

    ಕೊಡಗು ಮೂಲದ ರಿಯಾಜ್(34) ಕೊಲೆಯಾದ ಶಿಕ್ಷಕ. ಕಳೆದ 9 ವರ್ಷಗಳಿಂದ ಇಲ್ಲಿನ ಮದರಸಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಇವರು, ಇಲ್ಲಿನ ಮುಹಾಯುದ್ದೀನ್ ಜುಮಾ ಮಸೀದಿಗೆ ಹೊಂದಿಕೊಂಡಿರುವ ಕೊಠಡಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

    ನಡೆದಿದ್ದೇನು?: ಮಧ್ಯರಾತ್ರಿ ಕೊಠಡಿಯೊಳಗಿಂದ ಜೋರಾಗಿ ಕಿರುಚಾಡೋ ಶಬ್ದ ಕೇಳಿಸಿತ್ತು. ಅಂತೆಯೇ ಏನಾಯ್ತು ಎಂದು ಬಾಗಿಲು ತೆರೆದು ನೋಡುವಷ್ಟರಲ್ಲಿ ಕೊಠಡಿಯ ಮೇಲೆ ಯದ್ವಾತದ್ವವಾಗಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಿದ್ದರು. ಕೂಡಲೇ ಬಾಗಿಲು ಹಾಕಿಕೊಂಡು ಇನ್ನೊಂದು ಬಾಗಿಲಿನ ಮೂಲಕ ಮಸೀದಿಯೊಳಗಡೆ ಹೋಗಿ ಅಲ್ಲಿರುವ ಮಂದಿಯ ಜೊತೆ ಹೇಳಿದೆ. ತಕ್ಷಣವೇ ಎಲ್ಲರೂ ಶಬ್ದ ಕೇಳಿದ ಕೊಠಡಿಯೊಳಗೆ ಹೋಗಿ ನೋಡಿದಾಗ ರಿಯಾಜ್ ಕುತ್ತಿಗೆಗೆ ಕಡಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದ್ರೆ ದಾರಿ ಮಧ್ಯೆದಲ್ಲಿ ಸಾವನಪ್ಪಿದ್ದಾರೆ ಅಂತಾ ರಿಯಾಜ್ ಪಕ್ಕದ ಕೊಠಡಿಯ ವ್ಯಕ್ತಿ ಮಾಹಿತಿ ನೀಡಿದ್ದಾರೆ.

    ಹರತಾಳ ಜಾರಿಗೆ: ಸದ್ಯ ರಿಯಾಜ್ ಹತ್ಯೆ ಖಂಡಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹರತಾಳಕ್ಕೆ ಕರೆ ನೀಡಲಾಗಿದೆ. ಇನ್ನು ಪೊಲೀಸರ ಸಹಾಯದಿಂದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಅಂತಾ ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

     

  • ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಅರುಣ್ ಸಿ  ಬಡಿಗೇರ್
    ಬೆಂಗಳೂರು: ಸಾಯುವ ಸ್ಥಿತಿಯಲ್ಲಿ ಬಾಯ್ತೆರೆದು ನಿಂತಿದ್ದಾಳೆ ಧರಿತ್ರಿ. ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಭೂ ತಾಯಿ ಮಕ್ಕಳು. ಇನ್ನೊಂದು ತಿಂಗಳು ಕಳೆದರೆ ಬಿಸಿಲಿನ ಬೇಗುದಿಗೆ ಸುಟ್ಟು ಕರಕಲಾಗಲಿವೆ ದೇಹಗಳು. ಒಣಗಿ ಹೋಗಲಿವೆ ಮರಗಿಡಗಳು. ಅನಾಥ ಶವವಾಗಿ ಬೀಳಲಿವೆ ಪ್ರಾಣಿ ಪಕ್ಷಿಗಳು. ಬತ್ತಿ ಹೋಗಿವೆ ಕೆರೆ ಕಟ್ಟೆಗಳು. ಬರಿದಾಗಿದೆ ನದಿಗಳ ಒಡಲು. ಇಂಗಿ ಹೋಗಿದೆ ಭೂ ಜಲದಗಣ್ಣು. ಕಣ್ಣೀರಿಡಲು ಬತ್ತಿ ಹೋಗಿದೆ ದೇಹದ ನೀರು. ಇದೆಲ್ಲವು ರಾಜ್ಯದ ಭೀಕರ ಬರಗಾಲದ ರೌದ್ರ ಚಿತ್ರಣ. ಬರ ಹೇಗಿದೆ ಎನ್ನುವುದನ್ನು ತಿಳಿಯಲು ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿದೆ. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.

    ನೀರಿನ ವಿಷ್ಯದಲ್ಲಿ ಬೆಂಗಳೂರಿಗರು ಪುಣ್ಯವಂತರು. 4-5 ಕಿಮೀ ಬಿಂದಿಗೆ ಹಿಡಿದುಕೊಂಡು ನೀರು ಹೊತ್ತು ತರೋ ಪರಿಸ್ಥಿತಿ ಇಲ್ಲಿಲ್ಲ. ಶಾಲೆಬಿಟ್ಟು ನೀರು ತರಬೇಕಾದ ಅನಿವಾರ್ಯತೆ ಇಲ್ಲಿಲ್ಲ. ನೀರು ತರದೆ ಇದ್ದರೆ ಅಪ್ಪ ಅಮ್ಮನ ಕಡೆ ಹೊಡಿಸಿಕೊಳ್ಳುವಷ್ಟು ಹೀನಾಯ ಸ್ಥಿತಿ ಇಲ್ಲಿನ ಮಕ್ಕಳಿಗೆ ಬಂದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಬೋರ್‍ವೆಲ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲೋ ಸ್ಥಿತಿ ಇಲ್ಲಿಲ್ಲ. ನಿದ್ದೆಗೆಟ್ಟು ಕರೆಂಟ್‍ಗಾಗಿ ಕಾದು ರಾತ್ರಿಯೆಲ್ಲ ನೀರಿಗಾಗಿ ಅಲೆದಾಡೋ ಪ್ರಸಂಗ ಬಂದಿಲ್ಲ. ಕುಡಿಯೋ ನೀರಿಗಾಗಿ ಒಂದು ಕಡೆ, ಬಳಸೋ ನೀರಿಗಾಗಿ ಇನ್ನೊಂದು ಕಡೆ ಹೋಗಿ ಬಿಂದಿಗೆ ತುಂಬಿಕೊಂಡು ಬರೋ ದುರ್ದೈವ ಇಲ್ಲಿಲ್ಲ. ನೀರಿಲ್ಲದ ಊರು ಅಂತ ಹೆಣ್ಣು ಕೊಡದೇ ಇರುವಷ್ಟು ಬರಗೆಟ್ಟು ಹೋಗಿಲ್ಲ ಈ ಬೆಂಗಳೂರು. ಬತ್ತಿಹೋದ ನದಿಯಲ್ಲಿ 5 ಅಡಿ ಗುಂಡಿ ತೋಡಿ ಬಂದ ನೀರನ್ನ ಗಂಟೆ ಗಟ್ಟಲೆ ಕುಳಿತು ಒಂದು ಬಿಂದಿಗೆ ತುಂಬಿಸಿಕೊಂಡು 4 ಕಿಮೀ ನಡೆದುಕೊಂಡು ಹೋಗುವ ಹೀನಾಯ ಸ್ಥಿತಿ ಬೆಂಗಳೂರಿನಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಹರಿಯೋ ನದಿಯಿಂದ ನೀರನ್ನ ಪಡೆದು ದಾಹ ತೀರಿಸಿಕೊಳ್ಳೋ ಬೆಂಗಳೂರಿನವರಷ್ಟು ಪುಣ್ಯವಂತರು ಹಳ್ಳಿಯ ಜನರಲ್ಲ.

    ಜಲಾಶಯಗಳಲ್ಲಿ ವಾಸನೆ ಬರುತ್ತಿದೆ ನೀರು
    ಕೆಆರ್‍ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರು ಕಪ್ಪಾಗುತ್ತಿದೆ. ಜಲಾಶಯಗಳು ಬರಿದಾಗುವ ಸ್ಥಿತಿ ಬಂದೊದಗಿದೆ. ಜಲಾಶಯದ ಹಿನ್ನಿರಿನ ಹತ್ತಿರ ಹೋಗ್ತಿದ್ದಂತೆ ಮೀನು ಸತ್ತಾಗ ಬರೋ ವಾಸಯಂತೆ ನೀರು ವಾಸನೆ ಬರುತ್ತಿದೆ. ಈ ನೀರನ್ನ ಶುದ್ಧಿಕರಿಸಿ ಬೇಸಿಗೆಯಲ್ಲಿ ಕುಡಿಯೋಕೆ ನೀರು ಸರಬರಾಜು ಮಾಡಲಾಗುತ್ತೆ. ಇನ್ನು ಈ ಜಲಾಶಯದ ನೀರು ನಾಲೆಗಳ ಮೂಲಕ ಮಂಡ್ಯ ಜಿಲ್ಲೆಗೆ ತಲುಪಬೇಕು. ಆದ್ರೆ ನಾಲೆಯಲ್ಲಿ ನೀರನ್ನ ಬಿಡಲಾಗುತ್ತಿಲ್ಲ. ಹಾಗಾಗಿ ನಾಲೆಯನ್ನ ನಂಬಿರೋ ಮಂಡ್ಯ ಜನಕ್ಕೆ ಎಪ್ರಿಲ್ ನಂತರ ಹಾಹಾಕಾರ ಉಂಟಾಗೋದ್ರಲ್ಲಿ ಯಾವುದೇ ಡೌಟೇ ಇಲ್ಲ.

    ನಾಗರಹೊಳೆ ಹಾಗೂ ಬಂಡಿಪುರ ಕಾಡು ಪ್ರಾಣಿಗಳು ನಂಬಿರೋ ಕಬಿನಿ ಜಲಾಶಯದ ನೀರು ಬರಿದಾಗುತ್ತಾ ಸಾಗಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಕಾಡು ಪ್ರಾಣಿಗಳ ಸ್ಥಿತಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ದುರ್ದೈವ ಅಂದ್ರೆ ಜಲಾಶಯದ ಪಕ್ಕದಲ್ಲೆ ಇರೋ ಹತ್ತಾರು ಹಳ್ಳಿಗಳಿಗೆ ಕುಡಿಯೋಕೆ ನೀರು ಸಿಗೋದೆ ಇಲ್ಲ. ಜಲಾಶಯದಿಂದ ಸುತ್ತಲಿರೋ ಹಳ್ಳಿಗಳ ಕೆರೆಗಳಿಗೆ ನೀರನ್ನ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ನಮ್ಮ ಜನಪ್ರತಿನಿಧಿಗಳಿಗಿಲ್ಲ.

    ಜಲಾಶಯವೇ ಬತ್ತಿ ಹೋದಾಗ
    50 ವರ್ಷದ ಇತಿಹಾಸ ಹೊಂದಿರೋ ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಜಲಾಶಯ ಸಂಪೂರ್ಣ ಬರಿದಾಗಿದೆ. ಧರಿತ್ರಿ ಹನಿ ನೀರಿಗೆ ಬಾಯ್ತೆರೆದು ಬಿಸಿಲಿನ ದವಡೆಯಲ್ಲಿ ಒದ್ದಾಡುತ್ತಿದ್ದಾಳೆ. ಸುತ್ತಮುತ್ತಲಿನ 21 ಹಳ್ಳಿಗಳ ಜನರ ದಾಹ ನೀಗಿಸುತ್ತಿದ್ದ ಈ ಜಲಾಶಯದ ದಾಹ ತೀರಿಸುವವರು ಯಾರು. ಈ ಜಲಾಶಯದ ಸುತ್ತಲಿರೋ ಕಾಡು ಪ್ರಾಣಿಗಳಂತೂ ನೀರಿಲ್ಲದೆ ಸಾವಿನ ದವಡೆಯಲ್ಲಿವೆ. ಒಂದು ಕಡೆ ಕಾಡ್ಗಿಚ್ಚು ಇನ್ನೊಂದು ಕಡೆ ನೀರಿನ ಬವಣೆ. ಇದರ ಮಧ್ಯೆ ಕಾಡು ಪ್ರಾಣಿಗಳು ದಿಕ್ಕು ಕಾಣದೆ ಸಾಯೋ ಸ್ಥಿತಿಗೆ ಬಂದು ತಲುಪಿವೆ. ಮನುಷ್ಯರೇನೋ ಟ್ಯಾಂಕರ್ ತರಿಸಿ ನೀರು ಕುಡಿತಾರೆ, ಆದ್ರೆ ಪ್ರಾಣಿಗಳ ಸ್ಥಿತಿ ಏನು..?

    ಮರಳು ದಂಧೆಗೆ ಬೀಳುತ್ತಾ ಕಡಿವಾಣ?
    ಕಾವೇರಿ ಉಗಮ ಸ್ಥಾನದಲ್ಲಿ ಹೆಚ್ಚು ಮಳೆ ಸುರಿದಾಗ ನಮ್ಮ ಆಸ್ತಿ ಪಾಸ್ತಿ ಹಾನಿಯಾಗುತ್ತೆ, ಬೆಳೆದ ಬೆಳೆ ನಾಶವಾಗುತ್ತೆ. ಆಗ ನಮ್ಮನ್ನ ನೋಡೋರೆ ದಿಕ್ಕಿರಲ್ಲ. ಆಗ ಮಂಡ್ಯದ ಜನ ಖುಷಿ ಪಡುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದ್ದಾಳೆಂದು ಸಂಭ್ರಮಿಸ್ತಾರೆ. ಆದ್ರೆ ನಾವಿಲ್ಲ ಕಣ್ಣೀರು ಹಾಕ್ತೀವಿ ಅಂತಾ ಕೊಡಗಿನ ಭಾಗಮಂಡಲದ ಜನ ನೋವಿನಿಂದ ಹೇಳಿಕೊಳ್ತಾರೆ. ಇದಲ್ಲದೆ ಕಾವೇರಿ ಒಡಲಲ್ಲಿ ಮರಳುದಂಧೆ ಕೂಡ ಎಗ್ಗಿಲ್ಲದೆ ಸಾಗಿದೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಕಾವೇರಿ ನದಿಯ ಒತ್ತುವರಿ ಮಾಡಿ ಕಟ್ಟಡಗಳನ್ನ ಕಟ್ಟಿಕೊಳ್ಳೋಕೆ ಜನ ಶುರು ಮಾಡಿದ್ದಾರೆ. ಚರಂಡಿ ನೀರನ್ನೆಲ್ಲ ಕಾವೇರಿ ನದಿಗೆ ಹರಿಯಬಿಡ್ತಿದ್ದಾರೆ. ಇದರ ಮಧ್ಯೆ ಕಾವೇರಿ ಕಲುಷಿತಗೊಂಡು ಬತ್ತಿ ಹೋಗುತ್ತಿದ್ದಾಳೆ. ಈಗಲೇ ಇದರ ಸಂರಕ್ಷಣೆ ಮಾಡದೇ ಇದ್ದರೆ ಗಂಗಾ ನದಿಯಂತೆ ಸಂಪೂರ್ಣ ಮಲೀನವಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

    ಎಲ್ಲೆಲ್ಲೂ ಜಾನುವಾರುಗಳ ಮೂಳೆಗಳೆ ಪತ್ತೆ
    ಇನ್ನು ನಮ್ಮ ತಂಡ ತೆರಳಿದ ಹಲವು ಜಲಾಶಯಗಳು, ಬತ್ತಿಹೋದ ನದಿ, ಹೊಳೆ, ಕಾಲುವೆ, ಕೆರೆ ಪಕ್ಕದಲ್ಲಿ ಪ್ರಾಣಿಗಳ ಮೂಳೆಗಳು ಕಂಡುಬಂದ್ವು. ಒಂದು ಕಡೆ ಮಳೆ ಇಲ್ಲದೆ ಹಸಿರೆಲ್ಲ ಮರೆಯಾಗಿದೆ. ಇನ್ನೊಂದು ಕಡೆ ಬಿಸಿಲಿನ ಝಳ. ಇದರ ಮಧ್ಯೆ ಕುಡಿಯೋಕೆ ನೀರಿಲ್ಲದೆ ಅನೇಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಪ್ರಾಣಿಗಳ ಅವಶೇಷ ನೋಡ್ತಾ ಇದ್ರೆ ಕಣ್ಣಂಚಲ್ಲಿ ನೀರು ಬರದೆ ಇರದು. ಇನ್ನೂ ಕೆಲವು ಕಡೆಯಲ್ಲಂತೂ ನೀರಿಲ್ಲದೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಜಲಚರಗಳು ಜೀವನ್ಮರಣದ ಮಧ್ಯೆ ಹೋರಾಡುತ್ತಿವೆ. ಬುದ್ಧಿ ಜೀವಿ ಮನುಷ್ಯ ಮಾತ್ರ ದುಡ್ಡುಕೊಟ್ಟು ನೀರು ಖರೀದಿಸ್ತಾನೆ. ಆದ್ರೆ, ಮೂಖ ಪ್ರಾಣಿಗಳ ವೇದನೆಯನ್ನ ಕೇಳೋರಾದ್ರು ಯಾರು..?

    ಪ್ರಾಣಿಗಳಿಗಾಗಿ ಟ್ಯಾಂಕರ್ ನೀರು.
    ಕುಡಿಯೋಕೆ ನೀರು ಸಿಕ್ರೆ ಸಾಕು ಅನ್ನೋ ಈ ಕಾಲದಲ್ಲಿ ಒಂದು ವಿಶೇಷ ಗ್ರಾಮವೊಂದಿದೆ. ಈ ರಂಗಪುರ ಗ್ರಾಮ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ. ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿನ ಸಮಸ್ಯೆ. ಆದ್ರೆ, ಈ ಗ್ರಾಮದ ಜನ ಮಾತ್ರ ತಮಗೆ ಎಷ್ಟೆ ಕಷ್ಟವಾದ್ರು ಚಿಂತೆಯಿಲ್ಲ ಪ್ರಾಣಿಗಳು ನೀರಿಲ್ಲದೆ ಸಾವನ್ನಪ್ಪಬಾರದು ಅಂತಾ ಒಣಗಿ ಹೋಗಿರೋ ಕೆರೆಗೆ ವಾರಕ್ಕೊಮ್ಮೆ ಟ್ಯಾಂಕರ್‍ನಿಂದ ನೀರು ಸುರಿಯುತ್ತಿದ್ದಾರೆ. ಕೆರೆ ತುಂಬಿಸೋಕೆ ಸಾಧ್ಯವಾಗದೆ ಇದ್ದರು ಕುರಿ, ದನಕರುಗಳು, ಮಂಗಗಳು, ನಾಯಿಗಳು, ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ.

    ಗೋ ಶಾಲೆಗಳು
    ನಮ್ಮ ತಂಡ ಹೋದ ಕೆಲವು ಕಡೆ ಗೋ ಶಾಲೆಗಳು ಸಿಕ್ವು. ಸರ್ಕಾರವೇನೋ ಗೋ ಶಾಲೆಗಳ ವ್ಯವಸ್ಥೆ ಮಾಡ್ತಿದೆ. ಆದ್ರೆ, ಕೆಲ ಗೋ ಶಾಲೆಗಳಲ್ಲಿ ಚಿರತೆ ಕಾಟವಿದೆ. ಇನ್ನೂ ಕೆಲವು ಕಡೆ ರಾತ್ರಿ ವಿದ್ಯುತ್ ಸಂಪರ್ಕವೇ ಇಲ್ಲ. ಗೋವುಗಳ ಜೊತೆ ಬಂದ ಮಾಲೀಕರು ಕತ್ತಲಲ್ಲೆ ರಾತ್ರಿ ಕಳೆಯೋ ಹಾಗಾಗಿದೆ. ಹಾವುಗಳ ಕಾಟ ಬೇರೆ ಇದೆ. ಗೋವುಗಳಿಗೆ ನೀರಿನ ವ್ಯವಸ್ಥೆ ಏನೋ ಮಾಡಿದ್ದಾರೆ. ಆದ್ರೆ ಗೋವುಗಳ ಜೊತೆ ಬಂದವರು ಉಪವಾಸ ಕೂರುವಂತಾಗಿದೆ. ಮನೆಗೆ ಹೋಗಿ ಬರಬೇಕಂದ್ರೆ ಹಳ್ಳಿಯಿಂದ 30-40 ಕಿಮೀ ದೂರದಲ್ಲಿದ್ದಾರೆ. ಹೋಗಿ ಬರೋದಕ್ಕೂ ವ್ಯವಸ್ಥೆ ಇಲ್ಲ. ಯಾಕಂದ್ರೆ ಬಹಳಷ್ಟು ಗೋ ಶಾಲೆಗಳಿರೋದು ಮುಖ್ಯ ರಸ್ತೆಯಿಂದ ಬಹುದೂರ ಒಳಗಡೆ. ಅಲ್ಲಿ ಬಸ್ ಸೌಲಭ್ಯವಂತೂ ಇಲ್ಲವೆ ಇಲ್ಲ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆದ್ರೂ ಸಂಬಂಧ ಪಟ್ಟವರು ಸ್ವಲ್ಪ ವ್ಯವಸ್ಥೆ ಮಾಡಿದ್ರೆ ಒಳ್ಳೆಯದಾಗುತ್ತೆ.

  • ಕೊಡಗಿನ ಆನೆಕಾಡು ಅರಣ್ಯಕ್ಕೆ ಕಾಡ್ಗಿಚ್ಚು, 70 ಎಕರೆಗೂ ಹೆಚ್ಚು ಅರಣ್ಯ ನಾಶ

    ಕೊಡಗಿನ ಆನೆಕಾಡು ಅರಣ್ಯಕ್ಕೆ ಕಾಡ್ಗಿಚ್ಚು, 70 ಎಕರೆಗೂ ಹೆಚ್ಚು ಅರಣ್ಯ ನಾಶ

    ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆನೆಕಾಡು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಸುಮಾರು 70 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

    ಕುಶಾಲನಗರ ಬಳಿಯ 7ನೇ ಹೊಸಕೋಟೆ ಕಲ್ಲೂರು ಗ್ರಾಮದ ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಾಡಿನ ಸುತ್ತಮುತ್ತಲಿನ ರೈತರು ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದು, ಕಾಡಿನ ಸುತ್ತಮುತ್ತ ಒಣಗಿದ ಕುರುಚಲು ಗಿಡಗಳು, ಮರಗಳು ಒಣಗಿ ನಿಂತಿದ್ದರಿಂದ ಬೆಂಕಿ ರಭಸದಿಂದ ಹೊತ್ತಿ ಉರಿಯ ತೊಡಗಿದೆ.

    ಸ್ಥಳಕ್ಕೆ 60ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಈ ಬಾರಿ ಮಳೆಯಾಗದ ಕಾರಣ ಸಾಕಷ್ಟು ಮರಗಳು ಒಣಗಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿದೆ.