Tag: ಕೊಡಗು ಪ್ರವಾಹ

  • ಕೊಡಗಿನಲ್ಲಿ ಮಳೆಗೆ 14 ಮಂದಿ ಬಲಿ- ಒಂದೇ ದಿನ ನಾಲ್ವರ ಮೃತದೇಹ ಪತ್ತೆ, 5 ಮಂದಿಗೆ ಶೋಧ

    ಕೊಡಗಿನಲ್ಲಿ ಮಳೆಗೆ 14 ಮಂದಿ ಬಲಿ- ಒಂದೇ ದಿನ ನಾಲ್ವರ ಮೃತದೇಹ ಪತ್ತೆ, 5 ಮಂದಿಗೆ ಶೋಧ

    – ಇಂದು ನಿರಾಶ್ರಿತ ಯುವತಿಯ ವಿವಾಹ

    ಕೊಡಗು: ಮಹಾಮಳೆ ಈವರೆಗೆ ಒಟ್ಟು 14 ಮಂದಿಯನ್ನು ಬಲಿ ಪಡೆದಿದೆ. ಶನಿವಾರ ಒಂದೇ ದಿನ 4 ಮೃತದೇಹಗಳು ಪತ್ತೆಯಾಗಿದೆ. ರಣಮಳೆಯ ಪ್ರವಾಹಕ್ಕೆ ನಲುಗಿಹೋಗಿದ್ದ ಕೊಡಗು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಮಡಿಕೇರಿಗೆ ಮತ್ತೆ ಮಳೆಯಯಾಗುವ ಎಚ್ಚರಿಕೆ ರವಾನೆಯಾಗಿದೆ.

    ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದ್ದು, ಮಡಿಕೇರಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಆ ರಣಭೀಕರ ಮಳೆ ಸೃಷ್ಠಿಸಿದ ಅವಾಂತರ ಅಷ್ಟಿಷ್ಟಲ್ಲ. ಯಾಕೆಂದರೆ ಜಲಪ್ರಳಯದಿಂದ ಸತ್ತವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಪ್ರಕೃತಿ ವಿಕೋಪದಲ್ಲಿ ಸಿಲುಕಿ ಸಾವನ್ನಪ್ಪಿದ್ದ ನಾಲ್ಕು ಮಂದಿಯ ಮೃತದೇಹ ಶನಿವಾರ ಪತ್ತೆಯಾಗಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು ಸಮೀಪ ಉದಯಗಿರಿಯಲ್ಲಿ ಬಾಬು ಎಂಬವರ ಮೃತದೇಹವನ್ನು ಗರುಡ ತಂಡದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಹೆಬ್ಬೆಟ್ಟಗೇರಿಯ ನಿವಾಸಿ ಚಂದ್ರಪ್ಪರ ಮೃತದೇಹವನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಪತ್ತೆ ಹಚ್ಚಿದರು. ಹಟ್ಟಿಹೊಳೆಯ ಫ್ರಾನ್ಸಿಸ್, ಕಾಟಕೇರಿಯಲ್ಲಿ ಗಿಲ್ಬರ್ಟ್ ಎಂಬವವರ ಮೃತದೇಹ ಸಹ ಪತ್ತೆಯಾಗಿದೆ.

    ಮಹಾಮಳೆಯಿಂದ ಅದೆಷ್ಟು ಮಂದಿ ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿ ಯಾರಿಗೂ ನಿಖರವಾಗಿ ಸಿಕ್ಕಿಲ್ಲ. ಕುಟುಂಬಸ್ಥರು, ಸಂಬಂಧಿಕರು ಕೊಟ್ಟ ಮಾಹಿತಿಯನ್ವಯ 5 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಡಿಕೇರಿ ತಾಲೂಕಿನ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ. ನಿರಾಶ್ರಿತರ ಶಿಬಿರದಲ್ಲಿರುವ ನಾಲ್ಕು ಸಾವಿರ ಜನರಿಗೆ ಶೀಘ್ರವೇ ತಾತ್ಕಾಲಿಕ ಶೆಡ್ ಮತ್ತು ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಆಶ್ರಯ ನಿರ್ಮಾಣ ಮಾಡಿಕೊಡಲಾಗುವುದು ಎಂದು ಕೊಡಗು ಡಿಸಿ ಶ್ರೀ ವಿದ್ಯಾ ಹೇಳಿದ್ದಾರೆ.

    ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರ ಸೇರಿ ಮದುವೆಯ ಕನಸು ಕಮರಿ ಹೋಗಿದ್ದ ಇಬ್ಬರೂ ಯುವತಿಯರ ಮೊಗದಲ್ಲಿ ಮಂದಹಾಸ ಮೂಡಿದೆ. ಇಂದು ಮಂಜುಳ ಎಂಬ ಯುವತಿಯ ಮದುವೆ ನಡೆಯಲಿದೆ. ನಗರದ ಓಂಕಾರ ಸದನದಲ್ಲಿರೋ ಕಾಳಜಿ ಕೇಂದ್ರದಲ್ಲಿ ಮದುವೆ ತಯಾರಿ ನಡೆದಿದೆ. ಮೆಹೆಂದಿ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಇತ್ತ ಮಡಿಕೇರಿಯಿಂದ ಮೈಸೂರು ತೆರಳುವ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆರವು ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಮಡಿಕೇರಿಯಿಂದ ಮಂಗಳೂರು ರಸ್ತೆ ಬದಿಯಲ್ಲಿ ಹಲವೆಡೆ ಗುಡ್ಡಗಳು ಕುಸಿದಿರುವ ಹಿನ್ನೆಲೆ ಸದ್ಯ ಲಘು ವಾಹನ ಸಂಚರಿಸಲು ಅನುಮತಿ ನೀಡಲಾಗಿದೆ. ಆದ್ರೆ ಪ್ರವಾಹ ಪೀಡಿತ ಕೊಡಗು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿರೋ ಹೊತ್ತಲ್ಲಿ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ರವಾನಿಸಿದೆ. ಇನ್ನು ಮೂರು ದಿನ ಕರಾವಳಿ, ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ನೀರು ಬರುತ್ತಿದ್ದಂತೆ ಅಪ್ಪ, ಅಮ್ಮ ರೋಡಿಗೆ ಓಡಿದ್ರು- ಚಿತ್ರ ಬಿಡಿಸಿ ಸಚಿವೆಗೆ ವಿವರಿಸಿದ ಬಾಲಕ

    ಮಡಿಕೇರಿ: ಇಲ್ಲಿನ ಮೈತ್ರಿ ಕೇಂದ್ರದಲ್ಲಿ ಗುಡ್ಡ ಕುಸಿತ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಶಾಲಾ ಬಾಲಕನೋರ್ವ ಚಿತ್ರ ಬಿಡಿಸಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿವರಿಸಿದ ರೀತಿ ಮನಕಲಕುವಂತಿತ್ತು.

    ಬಾಲಕ ನವನೀಶ್ ತಾನು ಬಿಡಿಸಿದ ಪ್ರವಾಹ ಚಿತ್ರವನ್ನು ಸಚಿವೆ ಹಾಗೂ ಪಬ್ಲಿಕ್ ಟಿವಿಗೂ ವಿವರಿಸಿದ್ದಾನೆ. ಸದ್ಯ ಬಾಲಕ ವಿವರಣೆ ಅಲ್ಲಿದ್ದವರನ್ನು ಕಣ್ಣೀರು ತರುಸುವಂತಿದ್ದು, ಮನಕಲಕುವಂತಿದೆ.

    ಬಾಲಕ ಹೇಳಿದ್ದು ಹೀಗೆ:
    ಬೆಟ್ಟದಿಂದ ನೀರು ಕೆಳಗೆ ಬರುತ್ತಿದೆ. ಇದು ನಮ್ಮ ಮನೆ. ನೀರು ರಭಸವಾಗಿ ಬಂದು ನಮ್ಮ ಮನೆಯನ್ನು ಕೊಚ್ಚಿಕೊಂಡು ಹೋಗಿದೆ. ಈಗ ಅಲ್ಲಿ ಯಾರೂ ಕೂಡ ಇಲ್ಲ. ನಮ್ಮ ಮನೆ ಮತ್ತು ಬೇರೆ ಮನೆ ಮಾತ್ರ ಅಲ್ಲಿ ಇರೋದು. ಅಂದು ನಮ್ಮ ಅಜ್ಜಿಯನ್ನು ನೀರು ಕೊಚ್ಚಿಕೊಂಡು ಹೋಯಿತು. ಅದನ್ನು ಪೇಪರಿಗೆ ಹಾಕಿಬಿಟ್ಟಿದ್ದಾರೆ. ಘಟನೆಯ ಬಳಿಕ ನಾವು ಅಲ್ಲಿಂದ ಪರಿಹಾರ ಕೇಂದ್ರಕ್ಕೆ ಓಡಿಕೊಂಡು ಬಂದ್ವಿ. ಅಪ್ಪ-ಅಮ್ಮ ರೋಡಿಗೆ ಹೋಗಿದ್ರು. ನೀರು ಮೇಲೆ ಹೋಗ್ಬಿಟ್ಟು ಕೆಳಗಡೆ ಬಂತು. ನೀರು ಬಂದಾಗ ಅಪ್ಪ- ಅಮ್ಮ ಓಡಿ ಬಂದ್ರು. ಆಗ ಅಮ್ಮ ಎಲ್ಲಾ ಪ್ಯಾಕ್ ಮಾಡು, ಬಿಟ್ಟು ಓಡಿ ಹೋಗುವ ಅಂತ ಹೇಳಿದ್ರು. ಆಗ ನಾವು ಕುಶಾಲನಗರದಲ್ಲಿರುವ ನೆಂಟರ ಮನೆಗೆ ಹೋಗ್ಬಿಟ್ವಿ. ಅಲ್ಲಿ ಟಿವಿಯಲ್ಲಿ ನೋಡಿ ಭಯ ಆಯ್ತು. ನಂತರ ನಾವು ಪರಿಹಾರ ಕೇಂದ್ರಕ್ಕೆ ಬಂದೆವು ಅಂತ ಬಾಲಕ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಣ್ಣಾರೆ ಕಂಡ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ.

    ನಮ್ಮ ಮನೆಯ ಮೇಲೆ ಒಂದು ಮನೆ ಇತ್ತು. ಆ ಮನೆ ಒಡೆದು ಹೋಗಿದೆ. ಅದನ್ನು ನಾನು ನನ್ನ ಅಪ್ಪನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೇನೆ. ಆವಾಗ ಅಲ್ಲೇ ಇದ್ದ ಅಜ್ಜಿ ನನ್ನನ್ನು ಬಾ ಬಾ ಅಂತ ಕರೆದ್ರು. ನಾನು ಬರುವಷ್ಟರಲ್ಲಿ ನೀರು ಅಲ್ಲಿದ್ದ ಅಜ್ಜಿಯನ್ನು ಕೊಚ್ಚಿಕೊಂಡು ಹೋಯಿತು. ಮೊನ್ನೆ ಅವರು ಮನೆಯವರಿಗೆ ಸಿಕ್ಕಿದ್ರು ಅಂತ ಬಾಲಕ ನೈಜತೆಯನ್ನು ತಿಳಿಸಿದ್ದು, ಬಾಲಕನ ವಿವರಣೆ ಕರುಳುಕಿತ್ತು ಬರುವಂತಿತ್ತು.

    ಹೆಬ್ಬಟ್ಟಗೇರಿ ಗ್ರಾಮದ ಜನಾರ್ದನ ಹಾಗೂ ಶಾರದಾ ದಂಪತಿ ಪುತ್ರ 7 ವರ್ಷದ ನವಿನಾಶ್ ಸ್ಥಳೀಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದು, ಮುಂದೆ ಎಂಜಿನಿಯರ್ ಆಗೋ ಕನಸು ಹೊಂದಿದ್ದಾನೆ. ಕೊಡಗಿನ ಪ್ರವಾಹ ಪೀಡಿ ಪ್ರದೇಶಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನಿಡಿದ್ದರು. ಈ ವೇಳೆ ಮೈತ್ರಿಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಬಾಲಕ ಪ್ರವಾಹ ಬಂದ ದಿನದಂದು ಕಣ್ಣಾರೆ ಕಂಡ ಘಟನೆಯನ್ನು ಚಿತ್ರೀಕರಿಸಿದ್ದಾನೆ. ಅಲ್ಲದೇ ಸಚಿವೆಗೆ ವಿವರಿಸಿದ್ದು, ಅಲ್ಲಿದ್ದವರಲ್ಲಿ ಕಣ್ಣೀರು ತರಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೌನ್ಸಿಲಿಂಗ್‍ಗೆ ಅವಕಾಶ ಸಾಧ್ಯವಿಲ್ಲ- ಡಿಕೆಶಿ

    ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಕೌನ್ಸಿಲಿಂಗ್‍ಗೆ ಅವಕಾಶ ಸಾಧ್ಯವಿಲ್ಲ- ಡಿಕೆಶಿ

    ಬೆಂಗಳೂರು: ಮಡಿಕೇರಿಯ ಪ್ರವಾಹ ಸಂತ್ರಸ್ತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವೈದ್ಯಕೀಯ ಸೀಟ್ ಕೌನ್ಸಿಲಿಂಗ್‍ಗೆ ಅವಕಾಶ ಸಾಧ್ಯವಿಲ್ಲ. ಈ ಕುರಿತು ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸಮಸ್ಯೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕೌನ್ಸಿಲಿಂಗ್ ಭಾಗಿಯಾಗಲು ಅವಕಾಶ ಕೋರಿ ಯಾವುದೇ ದೂರು ಕೂಡ ಬಂದಿಲ್ಲ. ಆ ರೀತಿ ದೂರು ಬಂದ್ರು ಸರ್ಕಾರ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಇಂದು ಕೊನೆ ದಿನದ ಮೆಡಿಕಲ್ ಕೌನ್ಸಿಲಿಂಗ್ ನಡೆಯುತ್ತಿದೆ. ನಾನು ಇಂಟರ್ ಫಿಯರ್ ಆಗಬಾರದು ಅಂತಾ ಕೊನೆ ದಿನ ಬಂದಿದ್ದೇನೆ. ಕೆಇಎ ಸರಿಯಾಗಿ ಪಾರದರ್ಶಕವಾಗಿ ಒಟ್ಟು 49 ಕಾಲೇಜುಗಳ 6,260 ಸೀಟ್ ಗೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆದಿದೆ. ಬಾಕಿ ಉಳಿದ 750 ಸೀಟ್ ಗೆ ಇಂದು ಕೊನೆ ಹಂತದ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಮಹಾರಾಷ್ಟ್ರ ತಮಿಳುನಾಡು ಕೇರಳ ರಾಜ್ಯಗಳು ನಮ್ಮನ್ನ ನೋಡಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುತ್ತಿದೆ. ಕಾನೂನಿನ ಅಡಿಯಲ್ಲಿ ಒಂದು ಸೀಟ್ ಸಹ ದೋಖಾ ಆಗಿಲ್ಲ. ಇನ್ನು 15 ಸೆಪ್ಟೆಂಬರ್ ಒಳಗೆ ರಿಂದ ಉಳಿದ ಡೆಂಟಲ್ ಸೀಟ್ ಕೌನ್ಸಿಲಿಂಗ್ ಮುಗಿಸಲಾಗುತ್ತೆ ಅಂತ ಅವರು ಹೇಳಿದ್ರು.

    ಇದಕ್ಕೂ ಮೊದಲು ಕೌನ್ಸಿಲಿಂಗ್ ನಲ್ಲಿ ಗೋಲ್ ಮಾಲ್ ನಡೆಯುತ್ತಿರುವ ಅರೋಪ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಕೌನ್ಸಿಲಿಂಗ್ ಬಂದ ವಿದ್ಯಾರ್ಥಿಗಳ, ಪೋಷಕರ ಜತೆ ಸಚಿವರ ಚರ್ಚೆ ನಡೆಸಿದ್ದು, ಕೌನ್ಸಿಲಿಂಗ್ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ

    16 ಸಾವಿರ ಶುಲ್ಕವನ್ನ ಏಕಾಏಕಿ 50 ಸಾವಿರಕ್ಕೆ ಏರಿಕೆ ಮಾಡಿದ ಕುರಿತ ಮಾಧ್ಯಮಗಳ ಪ್ರಶ್ನೆಗೆ, ಒಂದು ಮೆಡಿಕಲ್ ವಿದ್ಯಾರ್ಥಿಯನ್ನ ಓದಿಸಲು 10 ಲಕ್ಷ ರೂ. ಖರ್ಚಾಗುತ್ತೆ. ಯುಕೆಜಿ ಎಲ್ ಕೆಜಿ ಮಕ್ಕಳನ್ನ 50 ಸಾವಿರ ಕೊಟ್ಟು ಶಾಲೆಗೆ ಕಳುಹಿಸುತ್ತಾರೆ. ಮೆಡಿಕಲ್ ಗೆ ಸೇರುವವರಿಗೆ ಏನು ಕಷ್ಟನಾ ಅಂತ ಮರು ಪ್ರಶ್ನೆ ಹಾಕಿದ್ದಾರೆ. ಸಚಿವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮಂಜುಳಾ ಸಾಥ್ ನೀಡಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಮಡಿಕೇರಿ: ಪ್ರಕೃತಿಯ ಮುನಿಸಿಗೆ ನಲುಗಿಹೋಗಿರುವ ಕೊಡಗಿನಲ್ಲಿ ಇಂದು ಶಾಲೆಗಳು ಪುನಾರಂಭವಗೊಂಡಿವೆ. ಪ್ರವಾಹ ಪೀಡಿತ ಪ್ರದೇಶ ಬಿಟ್ಟು ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ.

    12 ದಿನಗಳಿಂದ ಪಾಠವಿಲ್ಲದೇ ಮಕ್ಕಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ. ಆದ್ರೆ ಇಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಂಡು ಕಣ್ಣೀರು ಹಾಕಿದ್ದಾರೆ.

    ಮಳೆ ಬಂದ ಕಾರಣ 12 ದಿನ ರಜೆ ಇತ್ತು. ಗೆಳೆಯರಿಲ್ಲದೇ ಬೇಜಾರಾಗುತ್ತಿತ್ತು. ಶಾಲೆಗ ಹೋಗಬೇಕನ್ನಿಸುತ್ತಿತ್ತು. ಆದ್ರೆ ಇಂದು ಶಾಲೆಗೆ ಬಂದು ತುಂಬಾ ಖುಷಿಯಾಗುತ್ತಿದೆ ಅಂತ ಬೋಯಕೇರಿ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.

    ಮಕ್ಕಳು ಕರೆ ಮಾಡಿ ಯಾವ ಶಾಲೆ ಆರಂಭವಾಗುತ್ತದೆ ಅಂತ ಕೇಳುತ್ತಾನೇ ಇದ್ರು. ಯಾಕಂದ್ರೆ ಅವರ ಮನಸ್ಥಿತಿ ಕೂಡ ಹಾಗೆಯೇ ಇತ್ತು. ಮಕ್ಕಳಿಗೂ ಕೂಡ ಹೆತ್ತವರನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿತ್ತು. ಆದ್ರೆ ಇಂದು ಶಾಲೆ ಆರಂಭವಾಗಿದೆ. ಇದೀಗ ಮಕ್ಕಳಿಗಿಂತ ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮ ಶಾಲೆಯ ಮಕ್ಕಳು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೆವು ಅಂತ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

    ಭಾರೀ ಮಳೆಯಿಂದಾಗಿ ಶಾಲೆಯೂ ಕೂಡ ಮುಚ್ಚಿತ್ತು. ತುಂಬಾ ಬೇಜಾರಾಗುತ್ತಿತ್ತು. ಎಲ್ಲಿ ಏನಾಗಿದೆ ಅಂತ ನಾವು ಕರೆ ಮಾಡಿ ತಿಳಿದುಕೊಂಡಿದ್ವಿ. ಯಾವತ್ತೂ ಶಾಲಾ ಆವರಣಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಮಕ್ಕಳು ಓಡಿಕೊಂಡು ಬರುತ್ತಿದ್ದರು. ಆದ್ರೆ ಇಂದು ಮಕ್ಕಳ ಸಂಖ್ಯೆ ಕಡಿಮೆ ಇದ್ದುದನ್ನು ಕಂಡು ಕಣ್ಣಲ್ಲಿ ನೀರು ಬಂತು. ನಾವು ಬರುತ್ತಿರುವುದನ್ನು ಕಂಡು ಕೆಲ ಮಕ್ಕಳು ಅರ್ಧ ದಾರಿಗೆ ಓಡಿ ಬರುತ್ತಿದ್ದರು. ಇಂದು ಆ ಮಕ್ಕಳನ್ನು ನೆನೆದು ನಿಜವಾಗಲೂ ದುಃಖವಾಯ್ತು ಅಂತ ಮತ್ತೊಬ್ಬ ಶಿಕ್ಷಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಭಾವುಕರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನಸಿನ ಮನೆಗಳನ್ನು ಬಿಟ್ಟು ಗ್ರಾಮಗಳನ್ನೇ ತೊರೆದ ಗ್ರಾಮಸ್ಥರು

    ಕನಸಿನ ಮನೆಗಳನ್ನು ಬಿಟ್ಟು ಗ್ರಾಮಗಳನ್ನೇ ತೊರೆದ ಗ್ರಾಮಸ್ಥರು

    ಮಡಿಕೇರಿ: ಜೀವ ಉಳಿಸಿಕೊಳ್ಳಲು ಕನಸಿನ ಮನೆಗಳನ್ನು ತೊರೆದು ಜನರು ಗ್ರಾಮಗಳನ್ನು ಖಾಲಿ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದ ಪರಿಣಾಮ ಮಾದಪುರ ಸಮೀಪದ ಗ್ರಾಮಗಳಲ್ಲಿ ಜನರೇ ಇಲ್ಲದೇ ಖಾಲಿಯಾಗುತ್ತಿವೆ.

    ಮಾದಪುರ ಸಮೀಪದ ಹೆಮ್ಮಿಯಾಲ, ಹಟ್ಟಿಹೊಳೆ, ಮುಕ್ಕೋಡ್ಲು ಗ್ರಾಮಗಳಲ್ಲಿ ಜನರೇ ಇಲ್ಲ. ಗ್ರಾಮದ ಎಲ್ಲ ಮನೆಗಳಿಗೆ ಬೀಗ ಹಾಕಲಾಗಿದೆ. ಮೂರು ಗ್ರಾಮಗಳಲ್ಲಿ ಮನೆಗಳು ಬಹುತೇಕ ಕುಸಿತವಾಗಿದ್ದು, ಕೆಲಕಡೆ ನೀರು ಸಹ ನುಗ್ಗಿದೆ. ಅಬ್ಬರಿಸಿ ಬೊಬ್ಬಿರಿದು ರೌದ್ರ ನರ್ತನ ತೋರಿದ್ದ ಹಟ್ಟಿಹೊಳೆ ಈಗ ಸ್ವಲ್ಪ ಶಾಂತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಹಟ್ಟಿಹೊಳೆಯಬ ರೌದ್ರ ನರ್ತನದಿಂದಾಗಿ ಮುಕ್ಕೋಡ್ಲು ಗ್ರಾಮದ ಜನರು ಅಪಾಯಕ್ಕೆ ಸಿಲುಕಿದ್ದರು. ಸದ್ಯ ಹಟ್ಟಿಹೊಳೆ ಆರ್ಭಟ ತಗ್ಗಿದ್ದು, ಮುಕ್ಕೋಡ್ಲು ರಸ್ತೆಯಿಂದ ನೀರು ಬಿಟ್ಟಿದೆ. ರಸ್ತೆಯನ್ನ ತಕ್ಕಮಟ್ಟಿಗೆ ದುರಸ್ತಿ ಮಾಡುವ ಕಾರ್ಯಕೂಡ ನಡೆಯುತ್ತಿದೆ. ಮಳೆಯ ಅವಾಂತರಕ್ಕೆ ಮಡಿಕೇರಿಯ ಮಕಂದೂರಿನಲ್ಲಿ ಇಡೀ ಗುಡ್ಡವೇ ಕುಸಿದುಬಿದ್ದಿದ್ದು ಸುಮಾರು 40ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಸರ್ಕಾರ ನಮ್ಮೆಲ್ಲಾ ಮನೆಗಳನ್ನು ನಿರ್ಮಾಣ ಮಾಡಿಕೊಡಲಿ ಅಂತ ಅಲ್ಲಿಯ ಸ್ಥಳಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    https://youtu.be/cOn-LBN3Qr4

     

  • ಪಶ್ಚಿಮ ಘಟ್ಟಗಳ ಮಧ್ಯೆ ಬಿರುಕು, ಬೃಹತ್ ಬೆಟ್ಟಗಳಲ್ಲಿ ಜಲಸ್ಫೋಟ..!

    ಪಶ್ಚಿಮ ಘಟ್ಟಗಳ ಮಧ್ಯೆ ಬಿರುಕು, ಬೃಹತ್ ಬೆಟ್ಟಗಳಲ್ಲಿ ಜಲಸ್ಫೋಟ..!

    -ಬಾಳುಗೋಡು ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

    ಮಂಗಳೂರು: ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ದುರಂತದ ಲಕ್ಷಣಗಳು ಕಂಡುಬಂದಿವೆ. ಶಿರಾಡಿ, ಸಂಪಾಜೆ ಘಾಟ್ ಹೆದ್ದಾರಿಯ ಕುಸಿತದ ಬಳಿಕ ಈಗ ಬಿಸ್ಲೆ ಮತ್ತು ಕುದುರೆಮುಖ ಹೆದ್ದಾರಿಯ ಉದ್ದಕ್ಕೂ ಭಾರೀ ಭೂಕುಸಿತ ಸಂಭವಿಸಿದೆ. ಇತ್ತೀಚೆಗಷ್ಟೆ ಕಾಂಕ್ರೀಟ್ ಆಗಿದ್ದ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿ ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಸಂಪರ್ಕಿಸುವ ರಸ್ತೆ. ಬಿಸ್ಲೆ ಘಾಟ್ ಉದ್ದಕ್ಕೂ ಜಲ ಸ್ಫೋಟಗೊಂಡು ಬೃಹತ್ ಮರಗಳು ತರಗೆಲೆಗಳಂತೆ ನೀರಿನ ರಭಸಕ್ಕೆ ತೇಲಿ ಬರುತ್ತಿವೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೂಜುಮಲೆ ಎಂಬಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ. ಮುಂಜಾಗ್ರತಾವಾಗಿ ಬಾಳುಗೋಡು, ಕಲ್ಮಕಾರು, ಮರ್ಕಂಜ ಗ್ರಾಮಗಳ 30ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರೀ ದುರಂತ ಸಂಭವಿಸಿದ್ದ ಜೋಡುಪಾಲದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜೋಡುಪಾಲ ಆಸುಪಾಸಿನ ಗ್ರಾಮಗಳ 700ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

    ಕುದುರೆಮುಖ- ಎಸ್ ಕೆ ಬಾರ್ಡರ್ ಹೆದ್ದಾರಿಯೂ ಕುಸಿದಿದ್ದು, ಮಂಗಳೂರು- ಬೆಂಗಳೂರು ರಸ್ತೆ ಸಂಚಾರವೇ ಕಷ್ಟವಾಗಿದೆ. ಏಕೈಕ ಹೆದ್ದಾರಿ ಆಗಿರುವ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸಂಪರ್ಕ ಕಷ್ಟವಾಗಿದೆ. ಇತ್ತ ಭಾರಿ ಮಳೆ ಪರಿಣಾಮ ಸಕಲೇಶಪುರ ಬಳಿಯ ವನಗೂರು, ಸೋಮವಾರಪೇಟೆ, ಹೆಗ್ಗದ್ದೆ ಕಡಗರವಳ್ಳಿ ರಸ್ತೆಗಳು ಭೂಕುಸಿತದಿಂದಾಗಿ ಕಡಿತಗೊಂಡಿವೆ. ಝರಿ ಜಲಪಾತಗಳು ತುಂಬಿ ಹರಿಯುತ್ತಿದ್ದು ಮಣ್ಣು ಸಡಿಲವಿರುವ ಸ್ಥಳಗಳಲ್ಲಿ ಭೂಕುಸಿತವಾಗುತ್ತಿದೆ. ಹಾಸನದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಾರಂಗಿಯಿಂದ ನೀರು ಕಡಿಮೆ ಬಿಡುಗಡೆ ಮಾಡಿದ ಪರಿಣಾಮ ಜಲಪ್ರವಾಹ ತಗ್ಗಿದೆ. ರಸ್ತೆ ಸಂಚಾರ ಕೂಡ ಸಹಜ ಸ್ಥಿತಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಜಲಪ್ರಳಯಕ್ಕೆ 9 ಮಂದಿ ಸಾವು – 845ಕ್ಕೂ ಹೆಚ್ಚು ಮನೆಗಳು ನೀರುಪಾಲು

    ಕೊಡಗಿನ ಜಲಪ್ರಳಯಕ್ಕೆ 9 ಮಂದಿ ಸಾವು – 845ಕ್ಕೂ ಹೆಚ್ಚು ಮನೆಗಳು ನೀರುಪಾಲು

    ಕೊಡಗು: ಮಹಾಮಳೆಗೆ ಮಂಜಿನ ನಗರಿ ಜನ ಅಕ್ಷರಶಃ ತತ್ತರಿಸಿದ್ದಾರೆ. ಮರಣ ಮಳೆಗೆ ಈವರೆಗೆ 9 ಮಂದಿ ಸಾವನ್ನಪ್ಪಿದ್ದು, ಹಲವರು ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹಲವೆಡೆ ಗ್ರಾಮಕ್ಕೆ ಗ್ರಾಮವೇ ಕಣ್ಮರೆಯಾಗಿದೆ. ಮುಕ್ಕೊಡ್ಲುವಿನ 70ಕ್ಕೂ ಜನರು ತಮ್ಮ ಜೀವ ರಕ್ಷಣೆಗಾಗಿ ಬೆಟ್ಟ ಹತ್ತಿ ಕೂತಿದ್ದಾರೆ. ಹಲವೆಡೆ ಜನ ಬೆಟ್ಟ ಹತ್ತುತ್ತಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಮುಕ್ಕೋಡ್ಲುವಿನಲ್ಲಿ 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಒಂದು ಕಡೆ ಮತ್ತೆ ಮಳೆ ಆರ್ಭಟ, ಇನ್ನೊಂದು ಕಡೆ ಗುಡ್ಡ ಕುಸಿತ ಭೀತಿಯಿಂದ ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದಾರೆ.

    ರಕ್ಕಸ ಮಳೆ ಕೊಡವರ ನಾಡನ್ನು ಇಂಚಿಂಚಾಗಿ ನುಂಗುತ್ತಿದೆ. ನೋಡನೋಡುತ್ತಿದ್ದಂತೆ ಗುಡ್ಡಗಳು ಕುಸಿಯುತ್ತಿದೆ. ಬೆಟ್ಟದಿಂದ ಕುಸಿದ ಮಣ್ಣು ನದಿಯಂತೆ ಹರಿಯುತ್ತಿದೆ. ಗುಡ್ಡದೊಂದಿಗೆ ರಸ್ತೆಗಳು ಸಹ ಧರಾಶಾಹಿಯಾಗಿದೆ. ಮಹಾಮಳೆಗೆ ಹಟ್ಟಿಹೊಳೆ ಎಂಬ ಊರು ರಾತ್ರೋರಾತ್ರಿ ನಾಪತ್ತೆಯಾಗಿದೆ. ಹಕ್ಕಿ ಹೊಳೆ ಗ್ರಾಮ ಜಲಾವೃತಗೊಂಡಿದ್ದು, ಜನರೆಲ್ಲಾ ಊರು ಬಿಟ್ಟಿದ್ದಾರೆ. ಇತ್ತ 900ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಬರೋಬ್ಬರಿ 123 ಕಿಲೋಮೀಟರ್ ರಸ್ತೆಗಳೇ ನಾಪತ್ತೆಯಾಗಿದೆ. ಇತ್ತ ಬರೋಬ್ಬರಿ 58 ಸೇತುವೆಗಳು ನಾಶಗೊಂಡಿವೆ ಎಂಬ ಅಂಕಿ ಅಂಶಗಳು ಲಭ್ಯವಾಗಿದೆ.

    3,800 ಲೈಟ್ ಕಂಬಗಳು ಹಾಳಾಗಿದ್ದು, 278 ಸರ್ಕಾರಿ ಕಟ್ಟಡಗಳು ಕುಸಿದುಬಿದ್ದಿವೆ. 3601 ಜನರ ರಕ್ಷಣೆ ಮಾಡಲಾಗಿದ್ದು, ಕೊಡಗಿನ 36 ಕ್ಯಾಂಪ್‍ಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ 9 ರಕ್ಷಣಾ ಕೇಂದ್ರದಲ್ಲಿ ಒಟ್ಟು 802 ಮಂದಿ ಆಶ್ರಯ ಪಡೆದಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

    ಮಡಿಕೇರಿ ಸೇರಿ 10ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಲ್ಲಿ ಜನ ಆಶ್ರಯ ಪಡೆದಿದ್ದಾರೆ. ಮನೆಯನ್ನು ಕಳೆದುಕೊಂಡವರು ಕಣ್ಣೀರಿಡುತ್ತಾ ಕಾಲಕಳೆಯುತ್ತಿದ್ದಾರೆ. ಒಂದು ಮನೆ ಕೊಡಿ ಎಂದು ನಿರಾಶ್ರಿತರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಕೊಡಗಿನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಬಿರುಕು ಬಿಟ್ಟು ಕಂದಕ ಸೃಷ್ಟಿಯಾಗಿದೆ. ಪರಿಣಾಮ ಈ ಮಾರ್ಗದ ಸಂಚಾರ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ನೆರೆ – ಖಾಲಿ ಹಂಡೆ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ

    ಕೊಡಗು ನೆರೆ – ಖಾಲಿ ಹಂಡೆ ಪ್ರದರ್ಶಿಸಿ ವಾಟಾಳ್ ಪ್ರತಿಭಟನೆ

    ಬೆಂಗಳೂರು: ಮಂಜಿನ ನಗರಿ ಕೊಡಗು ಪ್ರವಾಹಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

    ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಲಿ ಹಂಡೆಗಳೊಂದಿಗೆ ಆಗಮಿಸಿದ ವಾಟಾಳ್ ನಾಗರಾಜ್ ಮತ್ತು ಬೆಂಬಲಿಗರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೊಡಗಿನ ವಿಚಾರದಲ್ಲಿ ರಾಜ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಜನರ ಸಂಕಷ್ಟಕ್ಕೆ ಕೂಡಲೇ ನೆರವು ನೀಡಬೇಕು. ಜನರ ಪರಿಸ್ಥಿತಿ ನರಕ ದೃಶ್ಯವಾಗಿದ್ದು, ಸರ್ಕಾರದ ನೆರವು ನಿಧಾನವಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

    ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ
    ಕೊಡಗಿನಲ್ಲಿ ಮರಣ ಮಳೆಯ ಅಬ್ಬರ ಕಡಿಮೆ ಆಗುತ್ತಿಲ್ಲ. ಇತ್ತ ವರುಣನ ಅಬ್ಬರದಿಂದ ಗುಡ್ಡ ಕುಸಿಯೋದು ನಿಂತಿಲ್ಲ. ತಿನ್ನಲು ಆಹಾರವಿಲ್ಲ. ಕಾಲಿನ ಅಡಿಯಲ್ಲಿ ನೀರಿದ್ರೂ ಕುಡಿಯೋ ನೀರಿಗಾಗಿ ಪರದಾಟ. ಕರೆಂಟೂ ಇಲ್ಲ. ಕೊಡವರ ಬದುಕಲ್ಲಿ ಕತ್ತಲು ಆವರಿಸಿದೆ. ಹೌದು ಮಹಾ ರಣಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ತತ್ತರಿಸಿಹೋಗಿದೆ.

    ಮರಣ ಮಳೆಗೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿದೆ. ನೂರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಭೋರ್ಗರೆಯುತ್ತಿರೋ ನದಿಗಳು, ಮನೆ, ಶಾಲೆ ತೋಟ, ರಸ್ತೆ ಹೀಗೆ ಎಲ್ಲವನ್ನ ಆಪೋಷನ ತೆಗೆದುಕೊಳ್ತಿವೆ. ಮಳೆಯಿಂದ ಸಂಪರ್ಕ ಕಳೆದುಕೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 31 ಕಡೆ ಗಂಜಿಕೇಂದ್ರ ತೆರೆಯಲಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳು ಖಾಲಿಯಾಗಿದೆ. 845 ಮನೆಗಳಿಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.

    ಸೋಮವಾರಪೇಟೆಯ ಮುಕ್ಕೋಡ್ಲು ಗ್ರಾಮವಂತೂ ವರುಣನ ಅಬ್ಬರಕ್ಕೆ ಹೈರಾಣಾಗಿದೆ. ಗಂಟೆಗಂಟೆಗೂ ಗುಡ್ಡ ಕುಸಿಯುತ್ತಿದೆ. ಗುಡ್ಡದ ಜೊತೆ ಮನೆಗಳು ಧರಾಶಾಹಿಯಾಗ್ತಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ನದಿಯಂತೆ ಭಾಸವಾಗ್ತಿದೆ. ಮಕ್ಕಂದೂರು, ಕಾಡನಕೊಲ್ಲಿ, ಮಂದಲಪಟ್ಟಿ, ಕಾಟಿಕೇರಿ, ಮಕ್ಕಳಗುಡಿಯಲ್ಲಿ ಗುಡ್ಡಗಳ ಕುಸಿತ ಮುಂದುವರೆದಿದೆ. ಗುಡ್ಡದ ಕೆಳಗಿನ ಕಟ್ಟಡಗಳು ಭೂಸಮಾಧಿಯಾಗ್ತಿವೆ. ಕಾಡುಗಳು ನೆಲಸಮವಾಗ್ತಿವೆ.

    ಮುಕ್ಕೋಡ್ಲು, ಇಗೋಡ್ಲು ಹಾಗೂ ಹಟ್ಟಿ ಹೊಳೆಯಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಸೇನೆ ಹಾಗೂ ಎನ್.ಡಿ.ಆರ್.ಎಫ್ ತಂಡಗಳು ಹರಸಾಹಸ ಪಡುತ್ತಿವೆ. ಈ ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಡ್ಡಿಯುಂಟಾಗಿದೆ. ಅಲ್ಲದೇ ಮುಕ್ಕೋಡ್ಲು ಗ್ರಾಮವೊಂದರಲ್ಲೇ ಸುಮಾರು 60ಕ್ಕೂ ಹೆಚ್ಚು ಮಂದಿ ಅಪಾಯಕ್ಕೆ ಸಿಲುಕಿದ್ದು, ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.

    ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಕೇವಲ ಹೆಲಿಕಾಪ್ಟರ್ ಮೂಲಕವೇ ಸಂತ್ರಸ್ಥರನ್ನು ರಕ್ಷಣೆಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಸುರಿಯುತ್ತಿರುವ ಭಾರೀ ಮಳೆಯಿಂದ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಮಿಲಿಟರಿ ಅಧಿಕಾರಿಗಳು ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಲಿಕಾಪ್ಟರ್‍ಗಳನ್ನು ಇಳಿಸಲು ಸಹ ಕಷ್ಟವಾಗುತ್ತಿದೆ ಎಂದು ವಾಯುಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ, ಕೊಡಗು ಜಲಪ್ರಳಯ: ಕೊಲ್ಲೂರು ದೇವಸ್ಥಾನದಿಂದ 1.25 ಕೋಟಿ ರೂ. ಪರಿಹಾರ ಘೋಷಣೆ

    ಕೇರಳ, ಕೊಡಗು ಜಲಪ್ರಳಯ: ಕೊಲ್ಲೂರು ದೇವಸ್ಥಾನದಿಂದ 1.25 ಕೋಟಿ ರೂ. ಪರಿಹಾರ ಘೋಷಣೆ

    ಉಡುಪಿ: ಕೇರಳ ರಾಜ್ಯದ ಮತ್ತು ಕೊಡಗು ಜಿಲ್ಲೆಯ ಜಲಪ್ರಳಯಕ್ಕೆ ಉಡುಪಿಯ ಕೊಲ್ಲೂರು ದೇವಸ್ಥಾನ ಪರಿಹಾರ ದೇಣಿಗೆ ನೀಡಿದೆ. ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಮಂಡಳಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.

    ಕೇರಳ ರಾಜ್ಯಕ್ಕೆ 1 ಕೋಟಿ ರೂಪಾಯಿ ಮತ್ತು ಕೊಡಗು ಜಿಲ್ಲೆಗೆ 25 ಲಕ್ಷ ರೂಪಾಯಿ ನೀಡಲು ನಿರ್ಧರಿಸಿದೆ. ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಕ್ಕೆ 25 ಲಕ್ಷ ರೂಪಾಯಿಯನ್ನು ಅಲ್ಲಿನ ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ದೇವಸ್ಥಾನದ ಆಡಳಿತ ಮಂಡಳಿ ನೀಡಲಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಿಎಂ ಪರಿಹಾರ ನಿಧಿಗೆ ನೇರವಾಗಿ 1 ಕೋಟಿ ರೂಪಾಯಿಯನ್ನು ದೇವಸ್ಥಾನ ಜಮಾ ಮಾಡುತ್ತದೆ.

    ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳದಿಂದ ಅತೀ ಹೆಚ್ಚು ಭಕ್ತರು ಆಗಮಿಸುತ್ತಾರೆ. ವರ್ಷವಿಡೀ ಕೊಲ್ಲೂರು ಕ್ಷೇತ್ರದಲ್ಲಿ ಶೇಕಡಾ 85 ರಷ್ಟು ಕೇರಳಿಗರೇ ಇರುತ್ತಾರೆ. ಅಲ್ಲಿನ ಜನರ ಮತ್ತು ಕರ್ನಾಟಕದ ಕೊಡವರ ಕಷ್ಟದಲ್ಲಿ ಭಾಗಿಯಾಗುವ ಉದ್ದೇಶದಿಂದ ಕೊಲ್ಲೂರು ವ್ಯವಸ್ಥಾಪನಾ ಮಂಡಳಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಶೆಟ್ಟಿ, ಕೇರಳ, ಕೊಡಗಿನ ಜನ ಕಷ್ಟದಲ್ಲಿದ್ದಾರೆ. ಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಲ್ಲುವುದು ನಮ್ಮ ಜವಾಬ್ದಾರಿ. ತಾಯಿ ಮೂಕಾಂಬಿಕೆಯ ಪ್ರೇರಣೆಯಂತೆ ಈ ಪರಿಹಾರ ಮೊತ್ತವನ್ನು ಘೋಷಣೆ ಮಾಡಲಾಗಿದೆ. ಮೊತ್ತವನ್ನು ಶೀಘ್ರ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಪ್ರವಾಹದಲ್ಲಿ ಸಿಲುಕಿದ ನಟಿ ದಿಶಾ ಪೂವಯ್ಯ ಕುಟುಂಬಸ್ಥರು

    ಕೊಡಗಿನ ಪ್ರವಾಹದಲ್ಲಿ ಸಿಲುಕಿದ ನಟಿ ದಿಶಾ ಪೂವಯ್ಯ ಕುಟುಂಬಸ್ಥರು

    ಬೆಂಗಳೂರು: ನಟಿ ದಿಶಾ ಪೂವಯ್ಯ ಕುಟುಂಬಸ್ಥರು ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ. ಸಹಾಯಕ್ಕಾಗಿ ಅಧಿಕಾರಿಗಳು, ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾರು ಸಿಗುತ್ತಿಲ್ಲ ಎಂದು ದಿಶಾ ಅಸಮಾಧಾನ ಹೊರಹಾಕಿದ್ದಾರೆ.

    ಮಡಿಕೇರಿ ನಗರದಿಂದ 15 ಕಿ.ಮೀ.ದೂರದ ಮಂದಲಪಟ್ಟಿಯಲ್ಲಿ ತನ್ನ ತಾಯಿ ಹಾಗು ತಂದೆಯ ಕುಟುಂಬಸ್ಥರು ವಾಸವಾಗಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿಯುವ ಭಯದಲ್ಲಿ ಎಲ್ಲರೂ ಮನೆಯಿಂದ ಹೊರ ಬಂದು ಬೆಟ್ಟದ ಮೇಲೆ ನಿಂತಿದ್ದಾರೆ. ಒಂದು ಕಡೆ ನಮ್ಮ ತಾಯಿ ಕುಟುಂಸ್ಥರು ನದಿ ದಂಡೆ ಹತ್ತಿರ ನಿಂತಿದ್ದಾರೆ ಎಂಬ ವಿಷಯಗಳು ನನಗೆ ಗೊತ್ತಾಗಿದೆ. ಆದ್ರೆ ಯಾರೊಂದಿಗೂ ನಿರಂತರವಾಗಿ ಸಂಪರ್ಕ ಸಾಧಿಸಲು ಸಾಗುತ್ತಿಲ್ಲ ಎಂದು ದಿಶಾ ಭಾವುಕರಾದರು.

    ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳು, ಸಚಿವ ಸಾ.ರಾ.ಮಹೇಶ್ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಫೋನ್ ರಿಸೀವ್ ಮಾಡುತ್ತಿಲ್ಲ. ಮತ್ತೆ ಕೆಲವರ ಫೋನ್ ಸ್ವಿಚ್ ಆಫ್ ಅಂತಾ ಬರುತ್ತಿದೆ. ಬೆಟ್ಟದ ಮೇಲೆ ಸುಮಾರು 25 ಕುಟುಂಬಗಳಿದ್ದು, ಮೂರು ದಿನಗಳಿಂದ ಅನ್ನ, ಬಟ್ಟೆ, ಸೂರು ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಅರಣ್ಯ ಪ್ರದೇಶದಲ್ಲಿ ಆನೆಗಳ ಕಾಟ ಇರೋದ್ರಿಂದ ಅಲ್ಲಿಯವರು ಮತ್ತಷ್ಟು ಭಯಭೀತರಾಗಿದ್ದಾರೆ. ಸಂತ್ರಸ್ತರಲ್ಲಿ ಒಂಬತ್ತು ತಿಂಗಳ ಮಗು ಸೇರಿದಂತೆ ಗರ್ಭಿಣಿಯೂ ಇದ್ದಾರೆ ಎಂದು ನನಗೆ ಹೇಳಿದ್ದಾರೆ. ಬೆಟ್ಟದ ಮೇಲಿರುವರನ್ನು ರಕ್ಷಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದಿಶಾ ಹೇಳಿದರು.

    ನೆರೆಯ ಕೇರಳ ರಾಜ್ಯದಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳು ತುಂಬಾ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದಾರೆ. ತೀವ್ರಗತಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ. ಕೇರಳಕ್ಕೆ ಹೋಲಿಸಿದ್ರೆ ನಮ್ಮ ರಕ್ಷಣಾ ಕಾರ್ಯಚರಣೆ ತುಂಬಾ ನಿಧಾನವಾಗಿದೆ ಎಂದು ಬೇಸರಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv