Tag: ಕೊಡಗು ಪ್ರವಾಹ

  • ಮಡಿಕೇರಿಯಲ್ಲಿ 5 ವರ್ಷ ಕಳೆದರೂ ನೆರೆಸಂತ್ರಸ್ತರಿಗೆ ಸಿಗದ ಶಾಶ್ವತ ಸೂರು – ಸರ್ಕಾರದ ವಿರುದ್ಧ ಆಕ್ರೋಶ

    ಮಡಿಕೇರಿಯಲ್ಲಿ 5 ವರ್ಷ ಕಳೆದರೂ ನೆರೆಸಂತ್ರಸ್ತರಿಗೆ ಸಿಗದ ಶಾಶ್ವತ ಸೂರು – ಸರ್ಕಾರದ ವಿರುದ್ಧ ಆಕ್ರೋಶ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ 2018-19 ಸಾಲಿನಲ್ಲಿ ನಡೆದ ಪ್ರಕೃತಿ ವಿಕೋಪ ಜಲಪ್ರಳಯ ಇಡೀ ಕೊಡಗು ಜಿಲ್ಲೆಯನ್ನೇ ತತ್ತರಿಸುವಂತೆ ಮಾಡಿತ್ತು. ಈ ವೇಳೆ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಇದುವರೆಗೂ ಶಾಶ್ವತ ಸೂರು ಪರಿಹಾರ ಸಿಕ್ಕಿಲ್ಲ.

    ಆ ಸಂದರ್ಭದಲ್ಲಿ ಜಲಪ್ರಳಯದಿಂದ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಬೆಟ್ಟದ ಕಾಡು, ಬರಡಿ, ಕುಂಬಾರ ಗುಂಡಿ, ನದಿ ದಡದ ಪ್ರದೇಶಗಳಲ್ಲಿನ ಊರುಗಳಲ್ಲಿ ಮನೆಗಳು ನೆಲಸಮವಾಗಿದ್ದವು. ಇದರಿಂದಾಗಿ ನೂರಾರು ಕುಟುಂಬಗಳು ಬೀದಿಗೆ ಬಂದಿದ್ದವು. ಬಳಿಕ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಮಾಡಿ ಸರ್ಕಾರದ ವತಿಯಿಂದ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿತ್ತು. ಆದರೆ, 5 ವರ್ಷ ಕಳೆದರೂ ಸಂತ್ರಸ್ತರಿಗೆ ಶಾಶ್ವತ ಸೂರು ಎನ್ನುವುದು ಸಿಕ್ಕಿಲ್ಲ. ಅನಿಶ್ಚಿತತೆಯಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ಸಂತ್ರಸ್ತರದ್ದಾಗಿದೆ. ಇದನ್ನೂ ಓದಿ: ಬೆಳ್ಳೂರಿನಲ್ಲಿ ಹಿಂದೂಗಳ ಮನೆಗೆ ನುಗ್ಗಿ ಅನ್ಯಕೋಮಿನ ಯುವಕರ ದಾಂಧಲೆ

    2019 ರಲ್ಲಿ ಮನೆಗಳನ್ನು ಕಳೆದುಕೊಂಡ ನೂರಾರು ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲೇ ಹಲವಾರು ತಿಂಗಳುಗಳ ಕಾಲ ಶಾಶ್ವತವಾದ ಸೂರು ಕಲ್ಪಿಸದೇ ಇದ್ದರೆ ಹೀಗೆ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಜಿಲ್ಲಾಡಳಿತ ಇವರ ಮನವಿಗೆ ಸ್ಪಂದಿಸಿ ಜಾಗವನ್ನು ಗುರುತಿಸಿ ತಮ್ಮಗೆ ಶಾಶ್ವತ ಸೂರು ಕಲ್ಪಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂದು ತಮ್ಮ ಮನೆಗಳಿದ್ದ ಜಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ಸಂತ್ರಸ್ತರ ಬದುಕು ಇಂದಿಗೂ ಸಂಕಷ್ಟದಲ್ಲಿ ಇದೆ. ಗ್ರಾಮದ ನೂರಾರು ಮನೆಗಳಲ್ಲಿ ಗೋಡೆ ಬಿರುಕು ಬಿದ್ದು ವಾಸಕ್ಕೆ ಯೋಗ್ಯವಲ್ಲದ ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲವು ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇದುವರೆಗೂ ಬಾಡಿಗೆ ಹಣ ಕೂಡ ಸಿಕ್ಕಿಲ್ಲ. ಈ ಭಾಗದಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಸ್ವಂತ ಸೂರು ಎಂಬುದು ದೂರದ ಮಾತಾಗಿಯೇ ಉಳಿದಿದೆ. ಈ ಹಿಂದೆ ವಿರೋಧ ಕಾಮಗಾರಿ ಪಕ್ಷದ ನಾಯಕರಾಗಿದ ಸಿದ್ದರಾಮಯ್ಯ ಅವರು ಈ ಗ್ರಾಮಕ್ಕೆ ಭೇಟಿ ನೀಡಿ ಅಂದಿನ ಸರ್ಕಾರದ ವಿರುದ್ಧ ಹರಿಹಾಯ್ದು ನದಿಪಾತ್ರದ ಜನರಿಗೆ ಶಾಶ್ವತ ಸೂರು ನೀಡುವಂತೆ ಆಗ್ರಹಿಸಿದ್ದರು. ಈಗ ಅವರದೇ ಸರ್ಕಾರವಿದೆ. ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎಂಬುದು ನದಿತಟದ ನಿವಾಸಿಗಳ ಅಳಲು.

    ನೆಲ್ಲಿಹುದಿಕೇರಿ ವ್ಯಾಪ್ತಿಯ ಸಂತ್ರಸ್ತರಿಗೆ ಅಬ್ಯತ್‌ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ 8 ಎಕರೆ ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ಮೀಸಲಿಟ್ಟಿತ್ತು. ಆದರೆ, ವರ್ಷಗಳು ಉರುಳಿದರೂ ನಿವೇಶನ ಹಂಚಿಕೆ ಆಗಿಲ. ಅಲ್ಲದೇ ನಿವೇಶನ ಹಂಚಿಕೆ ಮಾಡಲು ಯಾವುದೇ ಮೂಲಭೂತ ಸೌಕರ್ಯಗಳು ಮಾಡದೇ ಇರುವ ಕಾರಣ ಜಿಲ್ಲಾಡಳಿತ ವಿರುದ್ಧ ಸಂತ್ರಸ್ತರು ಅಕ್ರೋಶ ಹೋರ ಹಾಕುತ್ತಿದ್ದಾರೆ. ಜಾಗ ಗುರುತಿಸಿ ಐದು ವರ್ಷಗಳು ಕಳೆದರೂ ಸೇತುವೆ ನಿರ್ಮಾಣ ಕಾರ್ಯ, ಮರಗಳ ತೆರವು ಸೇರಿದಂತೆ ಹಂತ ಹಂತವಾಗಿ ಹೋರಾಟ ಮಾಡುವ ಪರಿಸ್ಥಿತಿ ತಮಗೆ ಬಂದೊದಗಿದೆ. ಪ್ರತಿ ಮಳೆಗಾಲದ ಸಂದರ್ಭ ಸುರಕ್ಷಿತ ಸ್ಥಳಕ್ಕೆ ತೆರಳಿ ಅಂತ ನೋಟಿಸ್ ನೀಡುತ್ತಾರೆ ಎಂದು ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಾಂತವಾಗುತ್ತಿದೆ ರೆಮಾಲ್ ಚಂಡಮಾರುತ – ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ

    ಪ್ರತಿ ಮಳೆಗಾಲದ ಸಂದರ್ಭದಲ್ಲಿ ನದಿಪಾತ್ರದ ಜನರು ಒಂದಲ್ಲ ಒಂದು ರೀತಿಯ ಸಂಕಷ್ಟದ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಇದೀಗ ಮತ್ತೊಂದು ಮಳೆಗಾಲ ಆರಂಭ ಅಗುತ್ತಿರುವುದರಿಂದ ಮುಂದಿನ ಬದುಕು ಹೇಗೆ ಎಂದು ಸಂತ್ರಸ್ತರು ಚಿಂತೆಗೀಡಾಗಿದ್ದಾರೆ.

  • ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

    ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

    ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಎರಡು ವರ್ಷಗಳಿಂದಲೂ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ತತ್ತರಿಸಿ ಹೋಗಿದೆ. ಒಂದು ವರ್ಷ ಭೀಕರ ಭೂಕುಸಿತವಾಗಿದ್ದರೆ, 2019ರಲ್ಲಿ ದೊಡ್ಡ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ದುರಂತ ಈ ಬಾರಿಯೂ ಕೊಡಗಿಗೆ ಎದುರಾಗುತ್ತಾ ಅನ್ನೋ ಅನುಮಾನ ದಟ್ಟವಾಗಿದೆ.

    ಈಗಾಗಲೇ ಮುಂಗಾರು ಮಾರುತಗಳು ಕೇರಳಕ್ಕೆ ಎಂಟ್ರಿಯಾಗಿದ್ದು, ಇನ್ನೆರಡು ದಿನಗಳಲ್ಲೇ ರಾಜ್ಯಕ್ಕೂ ಮಳೆ ಕಾಲಿಡಲಿದೆ. 2018ರಲ್ಲಿ ಮಡಿಕೇರಿ ತಾಲೂಕಿನಲ್ಲಿ ಭೀಕರ ಭೂಕುಸಿತಗಳು ಸಂಭವಿಸಿದ್ದರೆ, 2019ರಲ್ಲಿ ಮೂರು ತಾಲೂಕುಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲದೆ ವಿರಾಜಪೇಟೆ ತಾಲೂಕಿನಲ್ಲಿ ಭೂಕುಸಿತವೂ ಸಂಭವಿಸಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ರು. ಹೀಗಾಗಿಯೇ ಈ ಬಾರಿ ಜಿಲ್ಲಾಡಳಿತ ಮೂರು ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿದೆ.

    ಮತ್ತೊಂದೆಡೆ ಹವಾಮಾನ ಇಲಾಖೆ ಈ ಬಾರಿಯೂ ಪ್ರವಾಹ ಸೃಷ್ಟಿಯಾಗುತ್ತೇ ಅನ್ನೋ ಮುನ್ಸೂಚನೆ ನೀಡಿದೆ. ಇಷ್ಟೇ ಅಲ್ಲ ರಾಜ್ಯದ ಪ್ರಸಿದ್ದ ಸ್ವಾಮೀಜಿಯೊಬ್ಬರು ಕೊಡಗಿನಲ್ಲಿ ಭೂಕಂಪ ಆಗಿ ಇಡೀ ಜಿಲ್ಲೆಯೇ ನೆಲಸಮವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗೆ ಹೇಳುತ್ತಲೇ ಕೊಡಗಿನ ಬೆಳೆಗಾರರ ಸಂಘವು ಆ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮತ್ತೊಂದೆಡೆ ಮಡಿಕೇರಿ ವಿಜಯ ವಿನಾಯಕ ದೇವಾಲಯದ ಅರ್ಚಕರು ಜೋತಿಷ್ಯಿಯೂ ಆಗಿರುವ ಕೃಷ್ಣ ಭಟ್ ಅವರು ಕೊಡಗಿನಲ್ಲಿ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಮಳೆಯಿಂದ ಅವಾಂತರ, ಅವಘಡಗಳು ಸಂಭವಿಸುತ್ತವೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ ಎಂದು ಭವಿಷ್ಯ ಹೇಳಿದ್ದಾರೆ.

    ಕಳೆದ ಎರಡು ವರ್ಷಗಳು ಜಿಲ್ಲೆಯಲ್ಲಿ ಮಳೆಯಿಂದ ಆದ ದುರಂತಗಳ ಅನುಭವ ಜಿಲ್ಲಾಡಳಿತಕ್ಕೆ ಇರುವುದರಿಂದ ಈಗಾಗಲೇ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಸದ್ಯದಲ್ಲೇ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದೆ. ಮತ್ತೊಂದೆಡೆ ಜಿಲ್ಲಾಡಳಿತ ಕೂಡ ಅಗ್ನಿ ಶಾಮಕ ತಂಡ, ಡಿಆರ್ ಪೊಲೀಸ್, ಹೋಂ ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತರಬೇತಿ ನೀಡಿದೆ.

    ಕೊಡಗಿನ ಹಾರಂಗಿ ಜಲಾಶಯ, ಕೂಟ್ಟು ಹೊಳೆಗಳಲ್ಲಿ ಬೋಟ್‍ಗಳ ಮೂಲಕ ತಾಲೀಮು ನಡೆಸಿದೆ. ಅಷ್ಟೇ ಅಲ್ಲದೆ ಪ್ರಾಕೃತಿಕ ವಿಕೋಪ ಎದುಸಿರುವುದಕ್ಕಾಗಿ ಮೂರು ತಾಲೂಕುಗಳ ತಹಶೀಲ್ದಾರ್ ಗಳ ಖಾತೆಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಹಾಕಲಾಗಿದೆ. ಅಲ್ಲದೆ ಪ್ರತೀ ಗ್ರಾಮ ಪಂಚಾಯಿತಿಗೆ 50 ಸಾವಿರ ರೂಪಾಯಿ, ಪ್ರತಿ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂಪಾಯಿ ಮತ್ತು ನಗರ ಸಭೆಗೆ 2 ಲಕ್ಷ ರೂಪಾಯಿ ಹಣವನ್ನು ಹಾಕಲಾಗಿದೆ.

    ಈ ಎಲ್ಲಾ ಸಿದ್ಧತೆಗಳನ್ನು ನೋಡಿದ್ರೆ ಕೊಡಗಿಗೆ ನಿಜವಾಗಿಯೂ ಮತ್ತೆ ಪ್ರವಾಹ ಎದುರಾಗುತ್ತಾ, ಪ್ರಾಕೃತಿಕ ವಿಕೋಪ ಉಂಟಾಗುತ್ತಾ. ಅದಕ್ಕಾಗಿಯೇ ಜಿಲ್ಲಾಡಳಿತ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಅನ್ನೋ ಅನುಮಾನ ಮೂಡಿದೆ.

  • ಪ್ರವಾಹಕ್ಕೆ ಕೊಚ್ಚಿ ಹೋದ ಬದುಕನ್ನ ಕಟ್ಟಿಕೊಳ್ತಿರುವ ಕೊಡಗು ಜನರು

    ಪ್ರವಾಹಕ್ಕೆ ಕೊಚ್ಚಿ ಹೋದ ಬದುಕನ್ನ ಕಟ್ಟಿಕೊಳ್ತಿರುವ ಕೊಡಗು ಜನರು

    -ವಾಟ್ಸಪ್ ಗ್ರೂಪ್ ಮೂಲಕ ಸಂಘಟಿತ ಅಭಿವೃದ್ಧಿ ಮಂತ್ರ
    -ಭಾವನಾತ್ಮಕ ಕರೆಗೆ ಗ್ರಾಮಸ್ಥರ ಶ್ರಮದಾನ

    ಕೊಡಗು: ಕಳೆದ ಎರಡು ವರ್ಷಗಳಿಂದ ಪ್ರವಾಹ ಕೊಡಗು ಜಿಲ್ಲೆಯ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಇದೀಗ ಮತ್ತೆ ಮಳೆಗಾಲ ಆರಂಭಗೊಂಡಿದ್ದು, ಜಿಲ್ಲೆಯ ಜನರು ತಾವೇ ತಮ್ಮ ಗ್ರಾಮದ ರಸ್ತೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ವಾಟ್ಸಪ್ ಗ್ರೂಪ್ ನೀಡಿದ ಭಾವನಾತ್ಮಕ ಕರೆಗೆ ಮಡಿಕೇರಿ ತಾಲೂಕಿನ 2 ನೇ ಮೊಣ್ಣಂಗೇರಿ ಗ್ರಾಮಸ್ಥರು ಸಾಥ್ ನೀಡುವ ಮೂಲಕ ಕೊಚ್ಚಿ ಹೋಗಿರೋ ಸೇತುವೆಗಳನ್ನು ನಿರ್ಮಿಸುತ್ತಿದ್ದಾರೆ.

    ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಪುಟ್ಟ ಜಿಲ್ಲೆ ಕೊಡಗು. ಆದರೆ ಕಳೆದ ಎರಡು ವರ್ಷಗಳಿಂದ ಮಳೆ ಇನ್ನಿಲ್ಲದ ಅವಾಂತರವನ್ನೇ ಸೃಷ್ಟಿಸಿದೆ. ಸಾಕಷ್ಟು ಆಸ್ತಿ ಹಾಗೂ ಪ್ರಾಣ ಹಾನಿಯನ್ನು ಉಂಟು ಮಾಡಿದೆ. ಹೀಗೆ 2018-19 ರವರೆಗೆ ಜಿಲ್ಲೆಯನ್ನು ಪ್ರವಾಹದ ಭೀತಿಯಲ್ಲೇ ಮುಳುಗಿಸಿರುವ ಕೊಡಗು ಚೇತರಿಸಿಕೊಂಡಂತೆ ಮಳೆಗಾಲದಲ್ಲಿ ಅತಿವೃಷ್ಟಿ ಸೃಷ್ಟಿಸುತ್ತಿದೆ.

    ಮಹಾ ಮಳೆಗೆ ಮನೆ, ಸಂಪರ್ಕ ರಸ್ತೆಗಳು ಹಾಗೆಯೇ ಗ್ರಾಮದ ಎಲ್ಲೆಯನ್ನೇ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರವೂ ಸಾಕಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಸಂತ್ರಸ್ತರಿಗೆ ಸುರಕ್ಷಿತವಾದ ಸರ್ಕಾರಿ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುತ್ತಿದೆ. ಇನ್ಫೋಸಿಸ್, ರೋಟರಿ ಮತ್ತು ರಿ ಬಿಲ್ಡ್ ಕೊಡಗು ಹೀಗೆ ಹಲವು ಖಾಸಗಿ ಸಂಸ್ಥೆಗಳು ಮಾನವೀಯ ನೆಲೆಗಟ್ಟಿನ ಮೇಲೆ ನೆರವು ನೀಡುತ್ತಿವೆ. ಆದರೆ ಇವೆಲ್ಲವುದಕ್ಕೂ ಮೀರಿ ಹುಟ್ಟೂರು ಎನ್ನುವ ಅಭಿಮಾನದಿಂದ ಗ್ರಾಮಸ್ಥರೇ ವಾಟ್ಸಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಅಸ್ತವ್ಯಸ್ತವಾಗಿರುವ ಗ್ರಾಮದ ರಸ್ತೆಗಳು, ಹಳೆ ಕಾಲದ ಸೇತುವೆಗಳನ್ನು ಪುನರ್ ನವೀಕರಣಕ್ಕೆ ಕೈ ಜೋಡಿಸಿದ್ದಾರೆ.

    ನಮ್ಮ ಗ್ರಾಮ 2022: 2018 ಹಾಗೂ 19ರಲ್ಲಿ ಸುರಿದ ಧಾರಾಕಾರ ಮಳೆಗೆ 2 ನೇ ಮೊಣ್ಣಂಗೇರಿಯೂ ನಲುಗಿತ್ತು. ಈ ಹಿನ್ನೆಲೆಯಲ್ಲಿ ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮಾನ ಮನಸ್ಕರು ಸೇರಿ ‘ನಮ್ಮ ಗ್ರಾಮ 2022’ ಎಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಹಾನಿಗೆ ಒಳಗಾಗಿರುವ ಸ್ಥಳಗಳನ್ನು ಪುನರ್ ನಿರ್ಮಿಸುತ್ತಿದ್ದಾರೆ. ಗ್ರಾಮದ ವಿವೇಕ ಗಿರಿ ಬಸ್ ನಿಲ್ದಾಣದ ಬಳಿಯ ಸೇತುವೆ 2018ರಲ್ಲಿ ಸುರಿದ ಮಳೆಯ ರಭಸಕ್ಕೆ ಕೊಚ್ಚಿ ಹೋಗಿತ್ತು. ಹಿರಿಯರು ಕಟ್ಟಿದ ಸೇತುವೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಅನಿವಾರ್ಯ ಇರುವುದರಿಂದ ಸೇತುವೆ ಸುಭದ್ರತೆ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ತಾವೆಲ್ಲರೂ ಸರಿಯಾದ ಸಮಯಕ್ಕೆ ಶ್ರಮದಾನಕ್ಕೆ ಹಾಜರಾಗಬೇಕು ಅನ್ನುವ ಭಾವನಾತ್ಮಕ ಅಲೆಗೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಅಲ್ಲದೆ ವಾಟ್ಸಪ್ ಅಡ್ಮಿನ್ ನೀಡುವ ಸೂಚನೆಗಳನ್ನು ತಪ್ಪದೆ ಸದಸ್ಯರು ಪಾಲಿಸುತ್ತಿದ್ದಾರೆ.

    ಸೇತುವೆಗಳ ದುರಸ್ಥಿ: ಕೆಲಸಕ್ಕೆ ಹಾಜರಾಗುವ ಮೊದಲು ಹೆಸರನ್ನು ನೋಂದಾಯಿಸಿಕೊಂಡು ಕೆಲಸಕ್ಕೆ ಅಗತ್ಯವಿರುವ ಗುದ್ದಲಿ, ಪಿಕಾಸು, ಹಾರೆ, ಮುಟ್ಟ ತೆಗೆದುಕೊಂಡು ಹೋಗುತ್ತಾರೆ. ಗ್ರಾಮದ ಸೇತುವೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ ಲಾಕ್‍ಡೌನ್‍ನಿಂದ ಕೆಲಸ ಸ್ಥಗಿತವಾಗಿದೆ. ಮಳೆಗಾಲ ಸಮೀಪ ಇರುವುದರಿಂದ ಸ್ಥಳೀಯರ ಅನುಕೂಲಕ್ಕೆ ತಾತ್ಕಾಲಿಕವಾಗಿ ಸೇತುವೆ ಪೂರ್ಣಗೊಳಿಸಬೇಕು ಅಂದುಕೊಂಡು ಸಮಾನ ಮನಸ್ಕರೇ ಕೈ ಜೋಡಿಸಿದ್ದಾರೆ.

    ಕೋವಿಡ್-19 ಮಧ್ಯೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಜವಾವ್ದಾರಿ ವಹಿಸಿಕೊಂಡು ಪರಿಪೂರ್ಣ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗ್ರಾಮದ ಚಂದ್ರಗಿರಿಯ ಕೃಷ್ಣರಾವ್‍ರ ಜಾಗದಲ್ಲಿ ಹಾದು ಹೋಗುವ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ, ವಿವೇಕಗಿರಿ ಬಳಿಯ ಸೇತುವೆ, ತಡೆಗೋಡೆ ಸೇರಿದಂತೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ಥಿ ಮಾಡಲಾಗಿದೆ. ಗ್ರಾಮಸ್ಥರು ಕೆಲಸ ಮಾಡಿ ಜಿಲ್ಲೆಗೆ ಮಾದರಿ ಅಗಿದ್ದಾರೆ.

  • ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದ ಕಾವೇರಿ ನದಿ ತಟ್ಟದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ

    ಮಡಿಕೇರಿ: ಕಳೆದ ಎರಡು ವರ್ಷಗಳಿಂದ ಮಹಾಮಳೆಗೆ ಕೊಡಗಿನ ಕಾವೇರಿ ನದಿ ತೀರದ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ನದಿ ತಟದ ಬಡಾವಣೆಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕಾವೇರಿ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

    ಕೊಪ್ಪದ ಕಾವೇರಿ ಸೇತುವೆ ಕೆಳ ಭಾಗದಲ್ಲಿ ಗಣಪತಿ ಪೂಜೆ ಸಲ್ಲಿಸಿದ ಬಳಿಕ ಜೆಸಿಬಿಯಲ್ಲಿ ಕುಳಿತ ಶಾಸಕ ರಂಜನ್ ಹೂಳೆತ್ತುವ ಕೆಲಸಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಮಾತಾನಾಡಿದ ಅವರು, 85 ಲಕ್ಷ ರೂ. ವೆಚ್ಚದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ದಂಡೆಯ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸಣ್ಣ ಮಟ್ಟದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ನದಿ ಹೂಳೆತ್ತಲು ಅವಕಾಶ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದಲೂ ಸಂಬಂಧಿಸಿದಂತೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಕೆಲಸಕ್ಕೆ ಕಳೆದ ಸಿಎಂ ಕುಮಾರಸ್ವಾಮಿ ಅವಧಿಯಲ್ಲೇ 75 ಕೋಟಿ ಮೀಸಲಿಡಲಾಗಿತ್ತು. ಅಂದಾಜು ಪಟ್ಟಿ ತಯಾರಿಸಿದಾಗ 130 ಕೋಟಿಯಷ್ಟು ಅಗತ್ಯವಿತ್ತು ಎಂದರು.

    ಕೇವಲ ಕುಶಾಲನಗರ ಮಾತ್ರವಷ್ಟೇ ಅಲ್ಲ, ಹಟ್ಟಿ ಹೊಳೆ, ಮುಕ್ಕೋಡ್ಲು, ಮಾದಾಪುರ, ಹಮ್ಮಿಯಾಲ ಭಾಗದಲ್ಲಿ ಹೊಳೆಯಲ್ಲಿ ಹೂಳು ತುಂಬಿದೆ. ಪರಿಣಾಮ ಹೊಳೆ ನೀರು ದಿಕ್ಕು ಬದಲಿಸಿ ಹರಿಯುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಪ್ರವಾಹದಲ್ಲಿ ಜಿಲ್ಲೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯಿತು. ಪ್ರವಾಹದಿಂದ ಕುಶಾಲನಗರ ಮುಳುಗಬೇಕಾದ ಪರಿಸ್ಥಿತಿಯನ್ನು ನೋಡಬೇಕಾಯಿತು. ಪ್ರವಾಹ ತಡೆಗಟ್ಟುವ ಉದ್ದೇಶದ ಸೇವಾ ಭಾವನೆಯಿಂದ ಹೂಳು ತೆಗೆಯುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಅದರಲ್ಲಿ ಯಾವುದೇ ಲೋಪಗಳು ಆಗದಂತೆ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

  • ಸೂರಿಗಾಗಿ ಸಂತ್ರಸ್ತರಿಂದ ಪ್ರತಿಭಟನೆ

    ಸೂರಿಗಾಗಿ ಸಂತ್ರಸ್ತರಿಂದ ಪ್ರತಿಭಟನೆ

    ಮಡಿಕೇರಿ: ಪ್ರವಾಹದಲ್ಲಿ ಮನೆ ಕಳೆದುಕೊಂಡು ಆರು ತಿಂಗಳು ಕಳೆದರೂ ಸರ್ಕಾರ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೊಡಗಿನ ಸಂತ್ರಸ್ತರು ಅವಿರತ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಎದುರು ನೂರಕ್ಕೂ ಹೆಚ್ಚು ಕುಟುಂಬಗಳು ಧರಣಿ ಆರಂಭಿಸಿವೆ. ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಕೊಡಗು ಉಪವಿಭಾಗಾಧಿಕಾರಿ ಜವರೇಗೌಡ, ವಿರಾಜಪೇಟೆ ತಹಶೀಲ್ದಾರ್ ಮಹೇಶ್ ದೌಡಾಯಿಸಿದರು. ಹದಿನೈದು ದಿನಗಳ ಒಳಗೆ ಜಾಗ ಗುರುತಿಸಿ ಸೈಟು ಹಂಚಿಕೆ ಮಾಡಲಾಗುವುದು, ಅಲ್ಲಿಯವರೆಗೆ ಪ್ರತಿಭಟನೆಯನ್ನು ಕೈಬಿಡುವಂತೆ ಎಸಿ ಜವರೇಗೌಡ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರತಿಭಟನೆಯನ್ನು ನಾವು ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

    ಇದುವರೆಗೆ ಯಾವುದೇ ಪರಿಹಾರ ನೀಡದಿರುವ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

  • ವೇದಿಕೆಯಲ್ಲೇ ಸಿಎಂ ಎಚ್‍ಡಿಕೆ, ಸಂಸದ ಸಿಂಹ ನಡುವೆ ‘ಅಪ್ಪ, ಅಮ್ಮ’ ವಾರ್!

    ವೇದಿಕೆಯಲ್ಲೇ ಸಿಎಂ ಎಚ್‍ಡಿಕೆ, ಸಂಸದ ಸಿಂಹ ನಡುವೆ ‘ಅಪ್ಪ, ಅಮ್ಮ’ ವಾರ್!

    ಮಡಿಕೇರಿ: ಕೊಡಗಿನ ಪ್ರವಾಹದಲ್ಲಿ  ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮನೆನಿರ್ಮಾಣಕ್ಕೆ ಗುದ್ದಲಿಪೂಜೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ‘ಅಪ್ಪ, ಅಮ್ಮ’ ವಿಚಾರಕ್ಕೆ ಸಂಬಂಧಿಸಿದಂತೆ ವಾರ್ ನಡೆದಿದೆ.

     ಜಂಬೂರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮಾತನಾಡುವುದಕ್ಕೆ ಮೊದಲು ಸಚಿವ ಸಾರಾ ಮಹೇಶ್ ಹಾಗೂ ಡಿಸಿಎಂ ಪರಮೇಶ್ವರ್ ಅವರು ಕೊಡಗು ಪರಿಹಾರಕ್ಕೆ ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆ ಎಂಬುವುದನ್ನು ಪ್ರಸ್ತಾಪ ಮಾಡಿದ್ದರು. ಅಲ್ಲದೇ ಕೇರಳ ಮಾದರಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ್ಕೆ ನೆರವು ನೀಡಬೇಕೆಂದು ಹೇಳಿದ್ದರು.

    ನಂತರ ಮಾತನಾಡಿದ ಪ್ರತಾಪ್ ಸಿಂಹ್, ಕೇಂದ್ರ ಸರ್ಕಾರ ಕೂಡ ಜಿಲ್ಲೆಯ ಜನರಿಗೆ ಸ್ಪಂದಿಸಿದೆ. ಎನ್‍ಡಿಆರ್ ಎಫ್ ಪಡೆ ಬೇಕೆಂದು ನಾನು ನಿರ್ಮಲಾ ಸೀತಾರಾಮನ್ ಅವರನ್ನು ಕೇಳಿದಾಗ ನಮಗೆ ಯಾವುದೇ ಪ್ರಕ್ರಿಯೆ ಬಂದಿಲ್ಲ ಎಂದು ಹೇಳಿದರು. ಇದಕ್ಕೆ ನಾನು ಕೂಡಲೇ ನನ್ನದೇ ಲೇಟರ್ ಹೆಡ್ ಬಳಸಿ ಮನವಿ ಮಾಡಿದ್ದಕ್ಕೆ ಕೂಡಲೇ ಎನ್‍ಡಿಆರ್ ಎಫ್ ತುಕಡಿ ಕೊಡಗಿಗೆ ಬಂದಿದೆ. ಕುಶಾಲನಗರದಿಂದ ಜೋಡುಪಾಲದವರೆಗೆ ರಸ್ತೆ ಹಾಳಾಗಿದ್ದು ಆ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ರಿಪೇರಿ ಮಾಡಿದೆ ಎಂದು ತಿಳಿಸಿದರು.

    ಇದರ ಜೊತೆಯಲ್ಲಿ ಸಚಿವರಿಗೆ ಟಾಂಗ್ ಎನ್ನುವಂತೆ, ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರು ಅಂತ ಕೇಳುತ್ತಾರೆ. ಅದಕ್ಕೆ ಕೇಂದ್ರ ಎಷ್ಟು ಕೊಟ್ಟಿದೆ ಎಂದು ಹೇಳಿದ್ದೇನೆ. ಕೇರಳಕ್ಕೆ ನೀಡಿದಂತೆ ಕರ್ನಾಟಕದ ಕೊಡಗು ಪ್ರವಾಹಕ್ಕೂ ಕೇಂದ್ರ 546 ಕೋಟಿ ರೂ. ಗಳನ್ನು ನೀಡಿದೆ. ಈ ಕುರಿತು ಡಿಸಿಎಂ ಪ್ರಸ್ತಾಪ ಮಾಡಿದ್ದಾರೆ. ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಪ್ಪ, ಅಮ್ಮ ಯಾರು ಅಂತ ಕೇಳುತ್ತಾರೆ ಅದ್ದರಿಂದಲೇ ನಾನು ಈ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ ಎಂದರು.

    ಪ್ರತಾಪ್ ಸಿಂಹ ಅವರು ಈ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡುತ್ತಿದಂತೆ ಕೆಂಡಾಮಂಡಲರಾದ ಸಿಎಂ ನೇರ ಸಂಸದರತ್ತ ಕೈ ಸನ್ನೆ ಮಾಡಿ ನಿಲ್ಲಿಸಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಆಯ್ತು ಆಯ್ತು ಎಂದರು. ಈ ವೇಳೆ ಸಿಎಂ ಪಕ್ಕದಲ್ಲೇ ಕುಳಿತಿದ್ದ ಸಚಿವ ಸಾ ರಾ ಮಹೇಶ್ ವಿರುದ್ಧ ರೇಗಿದ ಸಿಎಂ ಎಚ್‍ಡಿಕೆ, ಸಂಸದರಿಗೆ ಭಾಷಣ ನಿಲ್ಲಿಸುವಂತೆ ಹೋಗಿ ಹೇಳಿ ಎಂದು ಸೂಚನೆ ನೀಡಿದರು.

    ಭಾಷಣ ಮುಗಿಸಿ ತಮ್ಮ ಕುರ್ಚಿಯ ಬಳಿ ಪ್ರತಾಪ್ ಸಿಂಹ ಬಂದ ಬಳಿಕವೂ ಸಿಎಂ ಎಚ್‍ಡಿಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಸೈಲೆಂಟ್ ಆಗಿ ಕುಳಿತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಡಗಿನ ಜೋಡುಪಾಲದ ಸ್ಥಿತಿ ದೇವರಿಗೆ ಪ್ರೀತಿ

    ಕೊಡಗಿನ ಜೋಡುಪಾಲದ ಸ್ಥಿತಿ ದೇವರಿಗೆ ಪ್ರೀತಿ

    -ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶದಂತೆ ಕಾಣ್ತಿದೆ ಜೋಡುಪಾಲ

    ಮಂಗಳೂರು: ಆಗಸ್ಟ್ 17, 18ರಂದು ಮಡಿಕೇರಿಯ ಜೋಡುಪಾಲ, ಮೊಣ್ಣಂಗೇರಿ ಬಳಿ ಸಂಭವಿಸಿದ ಜಲಸ್ಫೋಟ ಕೊಡಗು ಜಿಲ್ಲೆ ಕಂಡು ಕೇಳರಿಯದ ದುರಂತಕ್ಕೆ ಕಾರಣವಾಗಿತ್ತು. ಹಸಿರ ಸಿರಿಯಾಗಿ ಗಗನ ಚುಂಬಿಸುತ್ತಿದ್ದ ಬೆಟ್ಟಗಳು ಛಿದ್ರಗೊಂಡು ತಪ್ಪಲು ಭಾಗದಲ್ಲಿ ಕಟ್ಟಿಕೊಂಡಿದ್ದ ಮನೆ, ರೆಸಾರ್ಟ್ ಕಟ್ಟಡಗಳು ಹೇಳ ಹೆಸರಿಲ್ಲದಂತೆ ಭೂಸಮಾಧಿಯಾಗಿದ್ದವು.

    10-15 ಮೀಟರ್ ಎತ್ತರಕ್ಕೆ ಹರಿದ ನೀರಿನ ರಭಸಕ್ಕೆ ದೊಡ್ಡ ದೊಡ್ಡ ಮರಗಳು ತರಗೆಲೆಗಳಂತೆ ಕೊಚ್ಚಿ ಹೋಗಿದ್ದವು. ಹೆದ್ದಾರಿಗಳು, ಸ್ಥಳೀಯರು ಮಾಡಿಕೊಂಡಿದ್ದ ಕೃಷಿ ಬೆಳೆಗಳು ನಿರ್ನಾಮವಾಗಿದ್ದವು. ಅಂದು ದುರಂತ ಎದುರಾಗುವ ಮೊದಲೇ ಅಲ್ಲಿನ ಜನ ಸ್ಥಳ ಬಿಟ್ಟು ತೆರಳಿದ್ದರಿಂದ ಜೀವ ಉಳಿಸಿಕೊಂಡಿದ್ದರು. ಮಡಿಕೇರಿಯಿಂದ ಆರು ಕಿಮೀ ದೂರದ 2ನೇ ಮೊಣ್ಣಂಗೇರಿಯ ಹೆದ್ದಾರಿ ಬದಿಯಲ್ಲಿ ದೊಡ್ಡ ರೆಸಾರ್ಟ್ ಇತ್ತು. ಆದ್ರೆ ಆವತ್ತಿನ ಪ್ರವಾಹಕ್ಕೆ ತುತ್ತಾದ ರೆಸಾರ್ಟ್ ಕಟ್ಟಡ ಕುರುಹೇ ಇಲ್ಲದಂತೆ ನಾಶವಾಗಿ ಹೋಗಿದೆ.

    ಭೀಕರ ಭೂಕಂಪಕ್ಕೆ ತುತ್ತಾದ ಪ್ರದೇಶ ಹೇಗಿರುತ್ತೋ ಹಾಗಿದೆ ಅಲ್ಲಿನ ಸದ್ಯದ ಸ್ಥಿತಿ. ಒಂದು ಭಾಗದಿಂದ ಬೆಟ್ಟ ಗುಡ್ಡ ಕುಸಿದು ಹೋಗಿದ್ದರೆ, ಅಲ್ಲಿಯೇ ಕೆಳಭಾಗದಲ್ಲಿದ್ದ ರೆಸಾರ್ಟ್ ಕಟ್ಟಡದ ತಳಪಾಯವೇ ಇಲ್ಲದಂತೆ ನಾಪತ್ತೆಯಾಗಿದೆ. ಒಂದುಕಡೆ ಬಿದ್ದುಕೊಂಡಿರುವ ಟಾಯ್ಲೆಟ್, ಕೊಠಡಿಗಳ ಗೋಡೆಗಳು, ಅಲಂಕಾರಿಕ ಕಟ್ಟಡದ ಕಂಬಗಳು ಹಂಪಿಯ ಸ್ಥಿತಿಯನ್ನು ನೆನಪಿಸುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

    ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

    ಮಡಿಕೇರಿ: ಕೊಡಗಿನ ಮಹಾಮಳೆಗೆ ಸಂತ್ರಸ್ತರಾಗಿ ಸೂರು ಕಳೆದುಕೊಂಡ ಇಬ್ಬರು ಸಹೋದರಿಯರು ಸಹಾಯಕ್ಕಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಕೊಡಗು ಸಂಪಾಜೆ ಸಮೀಪದ ಕೊಯನಾಡಿನ ನಿವಾಸಿಗಳಾದ 80 ವರ್ಷದ ಸಾಯಿಬಾ ಮತ್ತು ಅಂಗವಿಕಲ ತಂಗಿ ಸೈನಬಾ ಇಬ್ಬರು ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಭೀಕರ ಮಳೆ ಭೂ ಕೂಸಿತಕ್ಕೆ ಪ್ರಾಣ ಹೋಗುವ ಸಂದರ್ಭ ಬಂದಿದ್ರೂ ತಾವು ಸಾಕುತ್ತಿರುವ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಬರುವುದಿಲ್ಲ ಎಂದು ಹಠ ಹಿಡಿದು ನಾಡಿನ ಗಮನ ಸೆಳೆದವರು ಈ ಸಹೋದರಿಯರು. ಮುದ್ದಿನಿಂದ ಸಾಕಿದ ಮೂಕ ಪ್ರಾಣಿಗಳ ರಕ್ಷಣೆ ಬಿಟ್ಟು ಬರುವುದಿಲ್ಲ ಸತ್ತರೆ ಇಲ್ಲೇ ಸಾಯುತ್ತೇವೆ ಎಂದು ಮಾದರಿಯಾದವರು. ಭೀಕರ ಮಳೆಯಿಂದಾಗಿ ಮನೆಯ ಸುತ್ತಲೂ ನೀರು ಆವರಿಸಿದ್ದರೂ, ಪಯಸ್ವಿನಿ ನದಿ ಭೋರ್ಗರೆಯುತ್ತಿದ್ದರೂ ಧೃತಿಗೆಡದೇ ನದಿಯ ತಟದಲ್ಲೇ ಇದ್ದು ಜಾನುವಾರಗಳ ರಕ್ಷಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

    ದಿನ ಕಳೆದಂತೆ ಪಯಸ್ವಿನಿ ಶಾಂತವಾಗಿ ನೀರಿನ ಮಟ್ಟ ಇಳಿದು ಸಹಜ ಸ್ಥಿತಿಗೆ ಬಂದಿದ್ದು, ಸಾವನ್ನು ಗೆದ್ದು ಬಂದು ಜಾನುವಾರುಗಳೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಹಿರಿ ಜೀವಗಳ ಛಲ ನಿಜಕ್ಕೂ ಅಚ್ಚರಿ.

    ಗಂಡು ದಿಕ್ಕು ಇಲ್ಲದ ಈ ಮನೆಯ ವೃದ್ಧ ಜೀವಗಳಿಗೆ 80 ಅಡಿಕೆ ಮರಗಳು ಹಾಗು ಜಾನುವಾರುಗಳೇ ಆಧಾರ. ಪಯಸ್ವಿನಿ ನದಿ ಉಕ್ಕಿ ಹರಿದಿದ್ದರಿಂದ ಭಾರೀ ಸಂಕಷ್ಟ ಅನುಭವಿಸಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಈ ಜೀವಗಳಿಗೆ ನೆಮ್ಮದಿಯ ಜೀವನ ಮಾಡಲು ಸರಿಯಾದ ಮನೆ ಇಲ್ಲದೇ ಪರಿಪಾಟಲು ಪಡುತ್ತಿದ್ದಾರೆ.

    ವಯಸ್ಸಾದ ಈ ದಿಟ್ಟ ಮಹಿಳೆಯರು ಕೊನೆಗಾಲದಲ್ಲಿ ನೆಮ್ಮದಿಯ ಜೀವನ ಮಾಡಲು ಬಯಸುತ್ತಿದ್ದು, ಒಂದು ಮನೆ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಸಹಾಯ ಬಯಸುತ್ತಿದ್ದಾರೆ. ಕರುನಾಡಿನ ಸಹೃದಯಿಗಳ ಸಹಕಾರದಿಂದ ಈ ಹಿರಿ ಜೀವಗಳಿಗೆ ಸೂರು ನಿರ್ಮಿಸುವ ಪ್ರಯತ್ನದ ಭಾಗವಾಗಿ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XG6KkYHmHbc

  • ಕುಶಾಲನಗರದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರ ಪರದಾಟ

    ಕುಶಾಲನಗರದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರ ಪರದಾಟ

    ಮಡಿಕೇರಿ: ಮಹಾಮಳೆಗೆ ತತ್ತರಿಸಿ ಹೋಗಿದ್ದ ಜನಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ಅರೋಪಿಸಿ ದಿಢೀರ್ ಅಗಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದಿದೆ.

    ಬುಧವಾರ ಮಧ್ಯಾಹ್ನದ ಊಟವನ್ನು ಸಂಜೆ 4 ಗಂಟೆಗೆ ನೀಡಿದ್ದಾರೆ. ಅದರೆ ಊಟ ಅರ್ಧ ಬೆಂದಿರುವ ಅನ್ನ ನೀಡಿದ್ದಾರೆ. ಅಲ್ಲದೇ ಮುನ್ನೂರು ಜನಕ್ಕೆ ಕೇವಲ ಮೂರು ಶೌಚಾಲಯಗಳು ಇದೆ. ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲೆ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿರಾಶ್ರಿತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಷ್ಟು ದಿನ ಮಡಿಕೇರಿ ಸೇವಾ ಭಾರತೀಯವರು ತಮ್ಮನ್ನು ಮಕ್ಕಳಂತೆ ನೋಡಿಕೋಳುತ್ತಿದ್ದರು. ಅದರೆ ಇಲ್ಲಿ ಅಧಿಕಾರಿಗಳು ತಮ್ಮನೆ ಭಿಕ್ಷುಕರಂತೆ ನೋಡುತ್ತಿದ್ದಾರೆ. ಅವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದಾರೆ ಪೊಲೀಸರನ್ನು ಕರೆಸಿ ಧಮ್ಕಿ ಹಾಕುತ್ತಾರೆ ಎಂದು ಆರೋಪಿಸುತ್ತಿದ್ದಾರೆ. ಸದ್ಯಕ್ಕೆ ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆಯ ಆರ್ಭಟದ ನಂತ್ರ ಗ್ರಾಮಗಳತ್ತ ಕಾಡುಪ್ರಾಣಿಗಳು-ಒಡೆಯನಿಗಾಗಿ ಕಾಯ್ತೀರೋ ನಾಯಿ

    ಮಳೆಯ ಆರ್ಭಟದ ನಂತ್ರ ಗ್ರಾಮಗಳತ್ತ ಕಾಡುಪ್ರಾಣಿಗಳು-ಒಡೆಯನಿಗಾಗಿ ಕಾಯ್ತೀರೋ ನಾಯಿ

    -ಭೂಮಿಯಲ್ಲಿ ನೀರಿನ ಶಬ್ಧ

    ಕೊಡಗು: ಮಹಾಮಳೆ ಮತ್ತು ಪ್ರವಾಹಕ್ಕೆ ಸಿಲುಕು ನಲುಗಿರುವ ಕೊಡಗು ಹಾಗೂ ಮಂಗಳೂರಿನ ಕೆಲವು ಕಡೆ ಇಂದು ಮತ್ತು ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಂದು ಕಡೆ ಮಳೆ ಬಿಡುವ ನೀಡಿದ ಹಿನ್ನೆಲೆಯಲ್ಲಿ ಹಲವು ನಿರಾಶ್ರಿತರು ತಮ್ಮ ಮನೆಗಳತ್ತ ಆಗಮಿಸುತ್ತಿದ್ದಾರೆ. ಒಂದು ಕಡೆ ಕಾಡು ಪ್ರಾಣಿಗಳು ಗ್ರಾಮಗಳ ಮುಖ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಭಾಗಮಂಡಲ ಸಮೀಪದ ತಾವೂರು ಗ್ರಾಮದ ಪುರುಷೋತ್ತಮ್ ಮನೆಯಲ್ಲಿ ಸೋಮವಾರ ರಾತ್ರಿ ಹುಲಿಯೊಂದು ಸಾಕಿದ ನಾಯಿ ಮೇಲೆ ದಾಳಿ ನಡೆಸಿದೆ. ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿದ್ದ ನಾಯಿ ಮೃತ ಪಟ್ಟಿದೆ. ಇದರಿಂದಾಗಿ ಗ್ರಾಮದಲ್ಲಿ ಅತಂಕ ಹೆಚ್ಚಾಗಿದೆ. ಹತ್ತು ದಿನಗಳಿಂದ ಮೂವತ್ತೊಕ್ಲು ಗ್ರಾಮದ ನಿವಾಸಿ ಮುಕ್ಕಾಟಿರ ಉತ್ತಪ್ಪ ಸುಳಿವಿಲ್ಲ. ಮನೆ ಮಣ್ಣಿನೊಂದಿಗೆ ಸುಮಾರು 500 ಮೀಟರ್ ಜರಿದು ಬಂದು ನಿಂತಿದೆ.

    ಒಡೆಯನಿಗಾಗಿ ಮನೆ ಮುಂದೆ ನಾಯಿಯೊಂದು ಸುಳಿದಾಡ್ತಿದೆ. ಈ ಮಧ್ಯೆ ಕೊಡಗು ಮತ್ತು ಕೇರಳ ಗಡಿಬಾಗವಾದ ಕರಿಕೆ ಸಮೀಪದ ಚೇತುಕಾಯ ಗ್ರಾಮದ ಕೇಶವ ನಾಯ್ಕರ ಮನೆ ಹಿಂಬದಿಯಲ್ಲಿ ಭೂಮಿಯೊಳಗೆಯಿಂದ ನೀರಿನ ಶಬ್ಧ ಕೇಳಿ ಬರುತ್ತಿದೆ. ಇದರಿಂದ ಗ್ರಾಮಸ್ಥರು ಅಂಕತಕ್ಕೆ ಒಳಗಾಗಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮತ್ತೊಮ್ಮೆ ಮಳೆಯಾಗಲಿದೆ. ಈ ಸಂಬಂಧ ಹವಾಮಾನ ಇಲಾಖೆ ಮಂಗಳೂರು ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.

    ಕೊಡಗು, ಕರಾವಳಿಯಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತ ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಕೊಡಗಿಗೆ ಆಗಸ್ಟ್ 31ರವರೆಗೆ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.

    ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇರುವುದರಿಂದ ಆಗಸ್ಟ್ 31ರವರೆಗೆ ಕೊಡಗು ಪ್ರವಾಸಕ್ಕೆ ಬರಬೇಡಿ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಅಧಿಕಾರಗಳ ಆದೇಶವನ್ನು ನಿರಾಕರಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವ ಹೋಟೆಲ್ ರೆಸಾರ್ಟ್ ಮತ್ತು ಹೋಂಸ್ಟೇಗಳ ಮೇಲು ಕೇಸ್ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv