Tag: ಕೊಡಗು

  • ಕೊಡಗು | ಅಕಾಲಿಕ ಮಳೆಗೆ ಬೆಳೆ ಹಾನಿ – ಮುಸುಕಿನ ಜೋಳ ಬೆಳೆದ ರೈತರಿಗೆ ಸಂಕಷ್ಟ

    ಕೊಡಗು | ಅಕಾಲಿಕ ಮಳೆಗೆ ಬೆಳೆ ಹಾನಿ – ಮುಸುಕಿನ ಜೋಳ ಬೆಳೆದ ರೈತರಿಗೆ ಸಂಕಷ್ಟ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ರಾತ್ರಿ ಸಮಯ ಸುರಿಯುತ್ತಿರುವ ಮಳೆಯಿಂದ (Rain) ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ.

    ಅದರಲ್ಲೂ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಅಳುವಾರ, ಸಿದ್ಧಲಿಂಗಪುರ, 6ನೇ ಹೊಸಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಜೋಳ ಬೆಳೆದ ರೈತರಿಗೆ ಸಂಕಷ್ಟ ಬಂದಿದೆ.

    ಹೌದು. ಈ ಭಾಗದ ರೈತರು ಸಾವಿರಾರು ಎಕ್ರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವದು ರೂಢಿ. ಇನ್ನೇನು ಬೆಳೆ ಕಟಾವಿಗೆ ಬಂದಿರುವ ಹೊತ್ತಿನಲ್ಲಿ ಅಕಾಲಿಕ ಮಳೆಗೆ ಹಾನಿಯಾಗಿದೆ. ರಾತ್ರಿ ಮಳೆಗೆ ಅಪಾರ ಪ್ರಮಾಣದ ಜೋಳದ ಬೆಳೆ ನೆಲ ಕಚ್ಚಿವೆ.

    ನೆಲಕ್ಕುರುಳಿರುವ ಜೋಳದ ಕಾಳುಗಳು ಮಳೆಯಿಂದ ಮೊಳಕೆಯೊಡೆಯುತ್ತಿವೆ. ಇದರಿಂದಾಗಿ ಜೋಳದ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಮೊಳಕೆ ಬಂದ ಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ಕ್ವಿಂಟಲ್ ಜೋಳ 1,200 ರಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ಇದರಿಂದ ಸಾಲ ಮಾಡಿ ಬೆಳೆ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

    ಜೋಳ ಸೇರಿದಂತೆ ಶುಂಠಿ, ಅಡಿಕೆ, ಮೆಣಸು ಬೆಳೆಗಳೂ ಸಹ ಕೊಳೆಯುವ ಹಂತಕ್ಕೆ ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ನೂರಾರು ರೈತರು ಆಗ್ರಹಿಸಿದ್ದಾರೆ.

  • ಹಾರಂಗಿ ಸೇತುವೆ ನಿರ್ಮಾಣದಿಂದ ದಶಕಗಳ ಸಮಸ್ಯೆಗೆ ಪರಿಹಾರ; 36.50 ಕೋಟಿ ವೆಚ್ಚದಲ್ಲಿ ಕಮಾನು ಬ್ರಿಡ್ಜ್ ನಿರ್ಮಾಣ

    ಹಾರಂಗಿ ಸೇತುವೆ ನಿರ್ಮಾಣದಿಂದ ದಶಕಗಳ ಸಮಸ್ಯೆಗೆ ಪರಿಹಾರ; 36.50 ಕೋಟಿ ವೆಚ್ಚದಲ್ಲಿ ಕಮಾನು ಬ್ರಿಡ್ಜ್ ನಿರ್ಮಾಣ

    – 110 ಮೀ. ಉದ್ದದ ಕಮಾನು ಸೇತುವೆಗೆ ನೀಲನಕ್ಷೆ ಸಿದ್ಧ

    ಮಡಿಕೇರಿ: ಪ್ರತಿ ಮಳೆಗಾಲ ಬಂದ್ರೆ ಸಾಕು ಕೊಡಗಿನ ಹಾರಂಗಿ ಜಲಾಶಯದಿಂದ (Harangi Dam) ನೀರು ಬಿಡುಗಡೆ ಮಾಡಿದ್ರೆ ಸಾಕು ಹತ್ತಾರು ಹಳ್ಳಿಗಳಿಗರ ಸಂಪರ್ಕ ಕಲ್ಪಿಸುವ ಕೇಳ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಹತ್ತಾರು ಕಿಲೋ ಮೀಟರ್ ಸುತ್ತಿ ಬಳಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಹಲವಾರು ವರ್ಷಗಳಿಂದ ಈ ಗ್ರಾಮದ ನೂರಾರು ಕುಟುಂಬಗಳು ಕೇಳ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರತಿ ಸರ್ಕಾರ ಬಂದಾಗಲೂ ಮನವಿ ಮಾಡುತ್ತಿದ್ರು. ಇದೀಗಾ ಗ್ರಾಮಸ್ಥರ ಮನವಿಯನ್ನ ಆಲಿಸಿರುವ ಸರ್ಕಾರ ದಶಕಗಳ ಸಮಸ್ಯೆಗೆ ಪರಿಹಾರ ನೀಡಿದೆ.

    ಹೌದು. ಕೊಡಗಿನಲ್ಲಿ ಮಳೆಗಾಲ ಬಂದ್ರೆ ಸಾಕು ನಾನಾ ಅವಾಂತರಗಳು ಕೊಡಗು ಜಿಲ್ಲೆ ಸಾಕ್ಷಿಯಾಗುತ್ತದೆ. ಅದರಲ್ಲೂ ಕೊಡಗಿನ ಏಕೈಕ ಹಾರಂಗಿ ಜಲಾಶಯದಿಂದ ಹೆಚ್ಚುವರಿಯಾಗಿ ನೀರನ್ನು ಕಾವೇರಿ ನದಿಗೆ ಹರಿಸಿದ್ರೆ ಸಾಕು ಹಾರಂಗಿ ಹಾಗೂ ಸೋಮವಾರಪೇಟೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಗ್ರಾಮೀಣ ಭಾಗದ ಜನರು ಊರಿನಿಂದ ಹೋರ ಬರಲು ಸಾಧ್ಯವಾಗದೇ ತಮ್ಮ ತಮ್ಮ ಊರುಗಳಲ್ಲೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ನೀರು ಬಿಟ್ಟರೆ ಅಣೆಕಟ್ಟು ಎದುರಿನ ಸೇತುವೆ ಮುಳುಗಡೆಗೊಂಡು ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತಿತ್ತು. ಹಾರಂಗಿ- ಸೋಮವಾರಪೇಟೆ ರಸ್ತೆ ಕಡಿತವಾಗುವ ಹಿನ್ನೆಲೆ ಈ ಭಾಗದ ಜನರ ಓಡಾಡಕ್ಕೆ ಅನಾನುಕೂಲವಾಗುತ್ತಿತ್ತು. ಇದೀಗ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ.

    ಇನ್ನೂ ಹಾರಂಗಿ, ಯಡವನಾಡು, ಹುದುಗೂರು ಮತ್ತಿತರ ಗ್ರಾಮಗಳು ಹಾರಂಗಿಯಿಂದ ನೀರು ಬಿಡುಗಡೆಯಾದರೆ ಸಂಪರ್ಕ ಕಡಿತಗೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದವು. ಜಲಾಶಯದಿಂದ 14 ಸಾವಿರ ಕ್ಯುಸೆಕ್ ಪ್ರಮಾಣದ ನೀರು ಹೊರಬಿಟ್ಟರೆ ಈ ಸೇತುವೆಯ ಮೇಲೆ ಹರಿಯುತ್ತದೆ. ಅಲ್ಲದೆ, ಸೇತುವೆಯ ಎರಡೂ ಕಡೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದ ಕಾರಣ ಸಂಚಾರ ಅಪಾಯಕಾರಿ. ಇತ್ತಿಚಿನ ಕೆಲ ವರ್ಷಗಳ ಹಿಂದೆ ನೀರು ಹರಿಯುವ ಸಂದರ್ಭ ಸೇತುವೆ ದಾಟಲು ಹೋದ ಹಸುಗಳು ಕೊಚ್ಚಿ ಹೋದ ಘಟನೆ ನಡೆದಿತ್ತು. ಹೀಗಾಗಿ ನೂತನ ಸೇತುವೆ ನಿರ್ಮಿಸಲು ನೀರಾವರಿ ನಿಗಮದಿಂದ ಯೋಜನೆ ಸಿದ್ಧವಾಗಿದೆ.

    ಒಟ್ನಲ್ಲಿ ಪ್ರತಿ ಮಳೆಗಾಲ ಬಂದರೆ ಸಾಕು ಹಾರಂಗಿ ಜಲಾಶಯದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ದಿಗ್ಬಂಧನಕ್ಕೆ ಒಳಗಾಗುತ್ತಿದ್ರು. ಇದೀಗಾ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿರುವುದರಿಂದ ಗ್ರಾಮೀಣ ಭಾಗದ ಜನರು ಅದಷ್ಟು ಬೇಗಾ ಕಾಮಗಾರಿ ನಡೆಸಿ ನಿರ್ಭಯವಾಗಿ ಓಡಾಟ ನಡೆಸಲು ಅವಕಾಶ ಮಾಡಿಕೋಡಬೇಕು ಎಂದು ಮನವಿ ಮಾಡಿದ್ದಾರೆ.

  • ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಮಾತೆ ಕಾವೇರಿ ತಲಕಾವೇರಿಯಲ್ಲಿ (Talacauvery) ಹುಟ್ಟಿ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಹೇಗೆ ಹರಿದಳು ಎಂಬುದರ ಬಗ್ಗೆ ‌ಹಲವರಿಗೆ ಇಂದಿಗೂ ಕುತೂಹಲ ಇದೆ. ಕಾವೇರಿ ಜನ್ಮ ತಾಳಿದ ಹಿನ್ನೆಲೆ ನೋಡುವುದಾದ್ರೆ ಅದಕ್ಕೊಂದು ಪೌರಾಣಿಕ ಕಥೆ ಇದೆ. ಬನ್ನಿ ತಿಳಿಯೋಣ…

    ಪುರಾಣ ಹೇಳುವಂತೆ, ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ (Brahmagiri Hill) ಕವೇರನೆಂಬ ಮುನಿ ವಾಸವಾಗಿದ್ದಋಂತೆ. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆ ಉಂಟಾಗಿ ಬ್ರಹ್ಮನನ್ನ ಕುರಿತು ತಪಸ್ಸು ಮಾಡುತ್ತಿದ್ದರ ಮಾಡತೊಡಗಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನ ದತ್ತು ಮಗಳಾಗಿ ನೀಡಿದರಂತೆ. ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

    ಒಮ್ಮೆ ಕವೇರನ ಆಶ್ರಮಕ್ಕೆ ಬಂದ ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರಂತೆ. ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನ ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿದುಹೋಗುವುದಾಗಿ ಹೇಳಿದ್ದಳು. ಕಾವೇರಿಯ (Maa Cauvery) ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನ ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ದಿದ್ದರು.

    ಒಂದು ದಿನ ಬೇಗ ಎದ್ದ ಅಗಸ್ತ್ಯ ಮುನಿಗಳು ನಿದ್ದೆಯಲ್ಲಿದ್ದ ಕಾವೇರಿಯನ್ನು ಹಾಗೇ ಬಿಟ್ಟು ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದರು. ಆದರೆ, ಎಚ್ಚರವಾದಾಗ ಸನಿಹದಲ್ಲಿ ಪತಿ ಇಲ್ಲದಿರುವುದನ್ನ ಕಂಡು ಕೋಪಗೊಂಡ ಕಾವೇರಿ, ಷರತ್ತು ಮೀರಿದ ಪತಿಯಿಂದ ದೂರವಾಗಿ ಅಲ್ಲೇ ಇದ್ದ ಕೊಳಕ್ಕೆ ಧುಮುಕಿ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರಿ, ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿದಳು ಎಂಬ ಪ್ರತೀತಿ ಇದೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿವರ್ಷ ತುಲಾ ಸಂಕ್ರಮಣದಂದು ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳಂತೆ.

    ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರ ಹರಿದು ಬಳಿಕ ರಾಜ್ಯದಲ್ಲಿ ಸುಮಾರು 381 ಕಿಮೀ ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿಮೀ ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ. ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ನೂತನವಾಗಿ ವಿವಾಹವಾದವರು ಈ ಸ್ನಾನಕೊಳದಲ್ಲಿ ಕೈಕೈ ಹಿಡಿದು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲ ಹಾಕಿಸಿಕೊಂಡ್ರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಲು ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಈ ಮೆಟ್ಟಿಲೇರಿದ್ರೆ ಬ್ರಹ್ಮಗಿರಿಯ ಬೆಟ್ಟದ ಮೇಲ್ಭಾಗವನ್ನ ತಲುಪಬಹುದು. ಇಲ್ಲಿಂದ ನಿಂತು ನೋಡಿದ್ರೆ ಕಂಡುಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೇ ಎದುರಿನ ಬಾಪುರೆ ಬೆಟ್ಟದಲ್ಲಿ ಕೆಟ್ಟು ನಿಂತ ಬೃಹತ್‌ಗಾಳಿ ಯಂತ್ರಗಳು ಸೋಜಿಗವನ್ನುಂಟು ಮಾಡುತ್ತವೆ. ಇನ್ನು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಸಿಗುವ ವ್ಯೂ ಪಾಯಿಂಟ್, ಭೀಮನಕಲ್ಲು, ಸಲಾಂಕಟ್ಟೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ.

    ತೀರ್ಥೋದ್ಭವದ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ. ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ. ಕಾವೇರಿ ತೀರ್ಥೋದ್ಭವದ ತುಲಾ ಸಂಕ್ರಮಣ ಜಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿ ಸಂಭ್ರಮಿಸುತ್ತಾರೆ.

    ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವ ಇದೆ. ಇದು ಕಾವೇರಿ ತುಲಾ ಸಂಕ್ರಮಣ ಜಾತ್ರೆ ಎಂದೇ ಜನಪ್ರಿಯ. ಕೊಡಗಿನವರಷ್ಟೇ ಅಲ್ಲದೆ ನಾಡಿನ ಹಾಗೂ ದೇಶ-ವಿದೇಶಗಳ ಜನರೆಲ್ಲಾ ಇಲ್ಲಿ ಆಗಮಿಸಿ ಕಾವೇರಿ ತೀರ್ಥದಲ್ಲಿ ಮುಳುಗೆದ್ದು ಪುನೀತರಾಗುವ ತುಲಾ ಸಂಕ್ರಮಣ ಜಾತ್ರೆಯನ್ನು ನೋಡುವುದೇ ಆನಂದ.

    ಹಸಿರು ಕಾನನ, ಬೆಟ್ಟಗುಡ್ಡಗಳಿಂದ ಆವೃತಗೊಂಡು ಸದಾ ಮಂಜಿನ ಮುಸುಕಿನೊಂದಿಗೆ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುವ ತಲಕಾವೇರಿಯ ಪ್ರಕೃತಿಯ ತಾಣದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವ ಮೂಲಕ ಭಕ್ತರನ್ನ ಪುನೀತಗೊಳಿಸುತ್ತಾಳೆ. ಮಡಿಕೇರಿಯಿಂದ 42 ಕಿ.ಮೀ. ದೂರದಲ್ಲಿರುವ ತಲಕಾವೇರಿ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ.

  • ತಲಕಾವೇರಿ | ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ ಕಾವೇರಿ ಮಾತೆ!

    ತಲಕಾವೇರಿ | ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಟ್ಟ ಕಾವೇರಿ ಮಾತೆ!

    ಮಡಿಕೇರಿ: ಕೊಡಗಿನ (Kodagu) ಕುಲದೇವಿ, ನಾಡಿನ ಜೀವನದಿ ಮಾತೆ ಕಾವೇರಿ (Cauvery Theerthodbhava) ನಿಗಧಿಯಂತೆ ಮಕರ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು.

    ಬೆಳಗ್ಗೆ 11:30 ಗಂಟೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು. ಮತ್ತೊಂದೆಡೆ ಕಾವೇರಿ ತೀರ್ಥೋದ್ಭವ (Theerthodbhava) ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ 8 ಕಿಮೀ ದೂರದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು (Devotees) ಕಾವೇರಿ ಮಾತೆಯನ್ನ ನೆನೆಯುತ್ತಾ ತಲಕಾವೇರಿ ತಲುಪಿದರು. ಕೊಡಗು ಅಷ್ಟೇ ಅಲ್ಲದೇ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು.

    ತೀರ್ಥೋದ್ಭವದ ಸಮಯ ಹತ್ತಿರವಾಗಿತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಕ್ತರೆಲ್ಲರೂ ʻಉಕ್ಕಿ ಬಾ ತಾಯೆʼ ಎಂದು ಕಾವೇರಿ ಮಾತೆಯನ್ನ ಜಪಿಸುತ್ತಿದ್ದರು. ನಿಗದಿತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ಬಳಿಕ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥ ಪ್ರೋಕ್ಷಣೆ ಮಾಡಿದರು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಭಕ್ತಿಭಾವ ಮೆರೆದು ಪುನೀತರಾದರು.

    ಇದೇ ಸಂದರ್ಭದಲ್ಲಿ ಮಾತಾನಾಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಕಾವೇರಿ ಸಂಕ್ರಮಣ ಕೊಡಗಿನಲ್ಲಿ ಎಲ್ಲಕ್ಕಿಂತ ವಿಶೇಷ ಹಬ್ಬ ನಾಡಿನ‌ ಜನರಿಗೆ ಆರೋಗ್ಯ ಆಯಸು ಕರುಣಿಸಲೆಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಕಾವೇರಮ್ಮ ಆಶೀರ್ವಾದ ಪಡೆಯಲು ಇಲ್ಲಿಗೆ ಆಗಮಿಸಿದೆ. ಅರಸು ಸಮುದಾಯದಿಂದ ಸಾಂಸ್ಕೃತಿಕ ಉಡುಪು ಹಾಕಿಕೊಂಡು ತಲಕಾವೇರಿಗೆ ಅಗಮಿಸಿದೇನೆ ಎಂದರು.

    ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡು ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ನೆರವೇರಿಸಿದರು.

  • ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ

    ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ

    ಮಡಿಕೇರಿ: ರಸ್ತೆಗುಂಡಿ (Pothole) ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದಲ್ಲಿಂದು ನಡೆದಿದೆ. ಇದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ ನಿಮ್ಮ ʻಪಬ್ಲಿಕ್‌ ಟಿವಿʼ ತಂಡ (Public TV Team) ಕುಟುಂಬಸ್ಥರನ್ನ ರಕ್ಷಣೆ ಮಾಡಿದೆ.

    ಹೌದು. ಮಡಿಕೇರಿಯ (Madikeri) ತಲಕಾವೇರಿ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿರುವ ಹಿನ್ನೆಲೆ ʻಪಬ್ಲಿಕ್ ಟಿವಿʼ ತಂಡ ರಿಯಾಲಿಟಿ ಚೆಕ್ ಮಾಡಲು ತೆರಳಿತ್ತು. ಇದೇ ರಸ್ತೆ ಗುಂಡಿ ತಪ್ಪಿಸಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಈ ದೃಶ್ಯ ಕೂಡ ಪಬ್ಲಿಕ್‌ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂಡಲೇ ʻಪಬ್ಲಿಕ್‌ ಟಿವಿʼ ತಂಡ ಕಾರಿನಲ್ಲಿದ್ದ ಕುಟುಂಬಸ್ಥರ ರಕ್ಷಣೆ ಮಾಡಿದೆ. ಕಾರಿನಲ್ಲಿದ್ದ ಮಕ್ಕಳು, ಕಾರು ಚಾಲಕ ಹಾಗೂ ವೃದ್ಧೆಯೊಬ್ಬರನ್ನ ರಕ್ಷಣೆ ಮಾಡಿದೆ, ಬಳಿಕ ಅವರನ್ನ ಮಡಿಕೇರಿ ಆಸ್ಪತ್ರೆಗೆ ಸುರಕ್ಷಿತವಾಗಿ ರವಾನೆ ಮಾಡಿದೆ. ಇದನ್ನೂ ಓದಿ: ದಸರಾ ದಶಮಂಟಪಗಳ ಶೋಭಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ – 62 ಮಂದಿ ವಿರುದ್ಧ ಕೇಸ್‌

    ಉಡುಪಿಯಿಂದ ನೇರವಾಗಿ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿರುವ ದರ್ಗಾಕ್ಕೆ ತೆರಳುವ ವೇಳೆಯಲ್ಲಿ ಈ ಘಟನೆ ಸಂಭವಿಸಿರುವುದರಿಂದ ಕಾರಿನಲ್ಲಿ ಇದ್ದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಅಪಘಾತದಿಂದ ಕಾರಿನ‌ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜು ಆಗಿದೆ. ಇದನ್ನೂ ಓದಿ: ಕುಟುಂಬಸ್ಥರ ಶವಸಂಸ್ಕಾರ ಮುಗಿಸಿ ನಾಲೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲು

    ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಪಬ್ಲಿಕ್ ಟಿವಿ ತಂಡ ಕುಟುಂಬಸ್ಥರು ರಕ್ಷಣೆ ಮಾಡಿದಕ್ಕೆ ಬೆಟ್ಟಗೇರಿ ಗ್ರಾಮಸ್ಥರು ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಗಣತಿದಾರರ ಪರದಾಟ – ಮುಂದುವರಿದ ಸರ್ವರ್​ ಸಮಸ್ಯೆ, 4 ದಿನಗಳಲ್ಲಿ ಕೇವಲ 1,133 ಮಂದಿ ದತ್ತಾಂಶ ಸಂಗ್ರಹ

  • ಕುಟುಂಬಸ್ಥರ ಶವಸಂಸ್ಕಾರ ಮುಗಿಸಿ ನಾಲೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲು

    ಕುಟುಂಬಸ್ಥರ ಶವಸಂಸ್ಕಾರ ಮುಗಿಸಿ ನಾಲೆಯಲ್ಲಿ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲು

    ಮಡಿಕೇರಿ: ಕುಟುಂಬ ಸದಸ್ಯರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ನಾಲೆಯಲ್ಲಿ ಸ್ನಾನಕ್ಕೆ ತರಳಿದ್ದ ಯುವಕನೋರ್ವ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ.

    ಸಂತೋಷ (28) ಮೃತ ದುರ್ದೈವಿ. ಮೂಲತಃ ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮದ ನಿವಾಸಿ ಸ‌ಂತೋಷ್ ಕೂಡಿಗೆ ಡೈರಿಯಲ್ಲಿ ವಾಹನ ಚಾಲಕ ವೃತ್ತಿ ಮಾಡಿಕೊಂಡು ಅಂಗಡಿ ಮುಗ್ಗಟ್ಟುಗಳಿಗೆ ಹಾಲು ಮೊಸರು ಹಾಕುತ್ತಿದ್ದ. ಹುದುಗೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರು ಮೃತಪಟ್ಟ ವಿಚಾರ ತಿಳಿದು ಸಂತೋಷ್ ನೇರವಾಗಿ ಅಂತ್ಯಸಂಸ್ಕಾರಕ್ಕೆ ತೆರಳಿದ್ದ. ಅಂತ್ಯಕ್ರಿಯೆ ಮುಗಿದ ಬಳಿಕ ಸ್ನಾನಕ್ಕೆಂದು ಹಾರಂಗಿ ನಾಲೆಗೆ (Harangi Canal) ತೆರಳಿದ್ದ, ಈ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಪೊಲೀಸರಿಗೆ ಹಾಗೂ ಹಾರಂಗಿ ಇಲಾಖೆಯ ಆದಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾರಂಗಿಯ ಮುಖ್ಯ ನಾಲೆ ಬಳಿ ತೆರಳಿ ಸಂತೋಷ್ ಮೃತದೇಹವನ್ನ ಶೋಧ ಕಾರ್ಯಚರಣೆ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಹಾರಂಗಿಯ ಇಂಜಿನಿಯರ್ ಗಳೊಂದಿಗೆ ಮಾತಾನಾಡಿ ನಾಲೆಯಲ್ಲಿ ನೀರಿನ ಸರಬರಾಜು ಮಾಡುವುದನ್ನು ತಕ್ಷಣವೇ ನಿಲ್ಲಿಸಿ ಮೃತದೇಹದ ಶೋಧಕಾರ್ಯಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಹಾರಂಗಿ ಜಲಾಶಯದ ಅಧಿಕಾರಿಗಳು ನೀರು ಸರಬರಾಜನ್ನ ನಿಲ್ಲಿಸಿದ್ದರು. ಸ್ವಲ್ಪ ಹೊತ್ತು ಕಳೆದ ಬಳಿಕ ಒಂದು ಕಿಲೋಮೀಟರ್ ಅಂತರದಲ್ಲಿ ಮೃತದೇಹ ಪತ್ತೆಯಾಗಿದೆ.

    ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಮಡಿಕೇರಿ: ಅದು ಪ್ರಕೃತಿಯ ತವರು ಕೊಡಗು (Kodagu), ದೇಶ ವಿದೇಶಗಳ ಜನರು ನಿತ್ಯ ಈ ಊರಿಗೆ ಭೇಟಿ ನೀಡಿ ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುತ್ತಾರೆ. ಬೆಟ್ಟಗುಡ್ಡಗಳ ಹಸಿರಿನ ವಾತಾವರಣ ಕಂಡು ಖುಷಿಯಿಂದ ತೆರಳುತ್ತಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ (Tourism) ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇಂತಹ ಕೊಡಗಿನಲ್ಲಿ ಕೆಲ ದುರುಳರು ಹಣದ ಆಸೆಗೆ ಬೃಹತ್ ಬೆಟ್ಟಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಇಡೀ ಬೆಟ್ಟ ಪ್ರದೇಶವನ್ನೇ ರಕ್ಕಸನ ಬಾಯಿಯಂತೆ ನುಂಗುತ್ತಿದ್ದಾರೆ. ಹೀಗಾಗಿ ಆ ಊರ ಸುತ್ತಮುತ್ತ ಪ್ರದೇಶಗಳಲ್ಲಿ ವಾಸ ಮಾಡುವ ಜನರು ದಿನ ಕಳೆದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಪಂಚಾಯತಿ ವ್ಯಾಪ್ತಿಯ ಯಲಕನೂರು ಹಾಗೂ ಹೊಸಳ್ಳಿ ಗ್ರಾಮದಲ್ಲಿ ಕೆಲ ದುರುಳರು ಪ್ರಕೃತಿಯ ಒಡಲಿಗೆ ಕೈಹಾಕಿದ್ದಾರೆ. ಲಾರಿ, ಇಟಾಚಿಗಳನ್ನ ಬಳಸಿಕೊಂಡು ಹಗಲು ರಾತ್ರಿ ಎನ್ನದೇ ಬಾರಿ ಸ್ಫೋಟಕಗಳನ್ನು ಸಿಡಿಸಿ ಅಕ್ರಮವಾಗಿ ಗಣಿಗಾರಿಕೆ (Illegal Mining) ನಡೆಸುತ್ತಿದ್ದಾರೆ. ಇದರಿಂದ ಹಲವಾರು ಜನರು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ.

    ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 17ಕ್ಕೂ ಹೆಚ್ಚು ಕಲ್ಲು ಕೊರೆಗಳು ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಇತ್ತಿಷ್ಟು ಜಾಗದಲ್ಲಿ ಗಣಿಗಾರಿಕೆ ನಡೆಸುತ್ತೇವೆ ಅಂತ ಅನುಮತಿ ಪಡೆದಿದ್ದಾರೆ. ಆದ್ರೆ ಕಲ್ಲುಗಣಿಗಾರಿಕೆ ನಡೆಸುತ್ತಿರುವರು ಇಲಾಖೆಯ ಕೆಲ ಮಾನದಂಡಗಳನ್ನ ಗಾಳಿಗೆ ತೂರಿ ಪ್ರಕೃತಿ ಮಾತೆಯ ಭೂಗರ್ಭವನ್ನೇ ಸೀಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಭಾರೀ ಸ್ಫೋಟಕಗಳನ್ನ ಸಿಡಿಸಿ ಗಣಿ ಕೆಲಸ ನಡೆಸುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶವನ್ನ ಬೀಡದೇ ಮನಸ್ಸೋ ಇಚ್ಚೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದು ಸುತ್ತಮುತ್ತ ನೆಲೆಸಿರುವ ಪ್ರದೇಶದ ಜನರನ್ನೂ ಆತಂಕ್ಕೆ ದೂಡಿದೆ.

    ಇನ್ನೂ ಈ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಕಲ್ಲುಗಣಿಗಾರಿಕೆ ಅಕ್ರಮವಾಗಿದೆ. ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಊರಿನ ವಾತಾವರಣ ಕಲುಷಿತಗೊಂಡು ಗ್ರಾಮದ ಶೇ.90ರಷ್ಟು ಮಂದಿಗೆ ಶ್ವಾಸಕೋಶದ ತೊಂದರೆ ಎದುರಾಗಿದೆ. ಹೀಗಾಗಿ ಕಲ್ಲುಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ದಯಾಮರಣ ನೀಡಿ ಎಂದು ಗ್ರಾಮಸ್ಥರು ವಿವಿಧ ಇಲಾಖಾ ಅಧಿಕಾರಿಗಳ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಕಲ್ಲುಗಣಿಗಾರಿಕೆಯಿಂದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿದೆ. ಅತೀ ಹೆಚ್ಚು ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು, ಜನರ ಬದುಕು ದುಸ್ತರವಾಗಿದೆ. ಸಂಜೆ ವೇಳೆ ಕೋರೆಗಳಲ್ಲಿ ಭಾರೀ ಸ್ಫೋಟಗಳನ್ನು ಬಳಸಲಾಗುತ್ತಿದೆ. ಇಲ್ಲಿನ ಮನೆಗಳೂ ಸಾಕಷ್ಟು ಬಿರುಕುಬಿಟ್ಟಿವೆ. ಜೀವನವೇ ನರಕವಾಗಿದೆ ಗ್ರಾಮಸ್ಥರು ಅಧಿಕಾರಿಗಳೆದುರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದೆ ಅಧಿಕಾರಿಗಳು ತಮ್ಮ ಪಾಡಿಗೆ ಇದ್ದಾರೆ. ಇನ್ನೂ ಕೆಲವರು ಗ್ರಾಮಸ್ಥರಿಗೆ ಹಣ ನೀಡಿ ಇಲ್ಲಿ ಯಾವ್ದೇ ಸಮಸ್ಯೆ ಇಲ್ಲವೆಂದು ಹೇಳುವಂತೆ ಹೇಳಿಕೊಟ್ಟಿದ್ದಾರೆ ಅಂತ ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌ ವೇಳೆ ಯುವಕನೊಬ್ಬ ಹೇಳಿಕೊಂಡಿದ್ದಾನೆ.

  • ಭಕ್ತಿ-ಸಂಪ್ರದಾಯಗಳ ಸಂಗಮ ಮಡಿಕೇರಿ ದಸರಾ ರೂಢಿಗೆ ಬಂದಿದ್ದು ಹೇಗೆ?

    ಭಕ್ತಿ-ಸಂಪ್ರದಾಯಗಳ ಸಂಗಮ ಮಡಿಕೇರಿ ದಸರಾ ರೂಢಿಗೆ ಬಂದಿದ್ದು ಹೇಗೆ?

    ಮೈಸೂರಿನಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುವಂತೆ ಕೊಡಗಿನ ಮಡಿಕೇರಿ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿ. ಮೈಸೂರು ದಸರಾ ಬೆಳಗ್ಗೆ ಆರಂಭವಾಗಿ ಸಂಜೆ ಸೂರ್ಯಾಸ್ತದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇತರ ಹಿನ್ನೆಲೆ ಕೂಡ ಅಷ್ಟೇ ವಿಸ್ಮಯ ಮತ್ತು ಕೌತುಕವಾಗಿದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ರೂಢಿಗೆ ಬಂದಿದ್ದು ಹೇಗೆ?
    ನೂರಾರು ವರ್ಷಗಳ ಹಿಂದೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಸಹಾ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬುದಕ್ಕೆ ಅನೇಕ ಉಲ್ಲೇಖಗಳಿವೆ.

    Madikeri 2 1

    ಇನ್ನು ಜನಪದ ಉಲ್ಲೇಖದ ಪ್ರಕಾರ, ಸುಮಾರು‌ 300 ವರ್ಷಗಳ ಹಿಂದೆ ಮಡಿಕೇರಿಯ ಸುತ್ತಮುತ್ತ ಭಾರೀ ಸಾಂಕ್ರಾಮಿಕ ರೋಗ ತಲೆದೋರಿ ನೂರಾರು ಮಂದಿ ಸಾವನ್ನಪ್ಪಿದ್ದರಂತೆ, ಆಗ ಊರಿನ ಜನರೆಲ್ಲಾ ಸೇರಿ ತಮ್ಮ ಊರಿನ ಶಕ್ತಿದೇವತೆಗಳ ಮೊರೆ ಹೋದರಂತೆ. ಊರ ಜನರ ಮೊರೆ ಆಲಿಸಿದ ಶಕ್ತಿದೇವತೆಗಳು ರೋಗ ದೂರ ಮಾಡಿದವಂತೆ. ಅಂದಿನಿಂದ ಪ್ರತಿವರ್ಷವೂ ನವರಾತ್ರಿಯ 9 ದಿನಗಳ ಕಾಲ ಈ ಶಕ್ತಿದೇವತೆಗಳ ಕರಗ ಉತ್ಸವ ಆಚರಿಸಲಾಗುತ್ತದೆ. ಆ 9 ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಭಕ್ತರಿಗೆ ದೇವತೆಗಳು ಆಶೀರ್ವಾದ ಮಾಡುತ್ತವೆ ಅನ್ನೋದು ನಂಬಿಕೆ. ಅದಕ್ಕಾಗಿ ಇಲ್ಲಿ ಪ್ರತಿವರ್ಷವೂ ವಿಜಯದಶಮಿಯ ಮುನ್ನಾ ದಿನ ಶಕ್ತಿದೇವತೆಗಳ ಆರಾಧನೆ ಮಾಡಲಾಗುತ್ತದೆ.

    Madikeri 1

    ಪೌರಾಣಿಕ ಹಿನ್ನೆಲೆಯೂ ಉಂಟು
    ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಹಿಂದೆ ಪಾರ್ವತೀ ದೇವಿ ದುಷ್ಟ ಸಂಹಾರ ಮಾಡಲು ಹೊರಡುವ ಮುನ್ನ ಮಹಾವಿಷ್ಣುವನ್ನ ಭೇಟಿ ಮಾಡಿದಳಂತೆ. ಆಗ ಮಹಾವಿಷ್ಣು ತನ್ನ ಆಯುಧಗಳಾದ ಶಂಖ, ಚಕ್ರ, ಗಧೆ ಮತ್ತು ಪದ್ಮಗಳನ್ನು ಪಾರ್ವತಿದೇವಿಗೆ ಕೊಟ್ಟು ಕಳುಹಿಸಿದನಂತೆ. ಆಗ ಪಾರ್ವತೀ ದೇವಿ ವಿವಿಧ ದೇವತೆಗಳ ರೂಪ ತಾಳಿ, ಅದೇ ಆಯುಧಗಳಿಂದ ಆ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿ ಅಂದಿನಿಂದ ಪ್ರತೀವರ್ಷವೂ ಆ ಊರಿನ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮನ ಕರಗದ ಉತ್ಸವಗಳನ್ನು ಅಚರಿಸುವ ಪದ್ದತಿ ಆರಂಭವಾಯಿತು ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ.

  • ಮಡಿಕೇರಿ | ನೇಣು ಬಿಗಿದು 20ರ ಯುವತಿ ಆತ್ಮಹತ್ಯೆ

    ಮಡಿಕೇರಿ | ನೇಣು ಬಿಗಿದು 20ರ ಯುವತಿ ಆತ್ಮಹತ್ಯೆ

    ಮಡಿಕೇರಿ: ನೇಣು ಬಿಗಿದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar)  ತಾಲೂಕಿನ ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ನಡೆದಿದೆ.

    ಸಂಜನಾ(20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಸೋಮವಾರ (ಸೆ.22) ಮನೆಯ ಎರಡನೇ ಮಹಡಿಯಲ್ಲಿರುವ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾಳೆ.ಇದನ್ನೂ ಓದಿ: ದಾವಣಗೆರೆ | ಪತ್ನಿಯ ಅಕ್ರಮ ಸಂಬಂಧಕ್ಕೆ ರೋಸಿ 20 ಬಾರಿ ಇರಿದು ಕೊಂದ ಪತಿ

    ಚೆಟ್ಟಳ್ಳಿ ಪೊಲೀಸ್ ಠಾಣಾಧಿಕಾರಿ ದಿನೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವತಿಯ ತಂದೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಸದ್ಯ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಪೋಷಕರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.ಇದನ್ನೂ ಓದಿ ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡಲು ಜಾತಿಗಣತಿ: ಎ.ನಾರಾಯಣಸ್ವಾಮಿ ಆಕ್ಷೇಪ

     

  • ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

    ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

    ಕೊಡಗು: ಇಲ್ಲಿನ ವಿರಾಜಪೇಟೆಯಲ್ಲಿ ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

    ಕೇರಳ ಮೂಲದ ಶಿಜು ಮತ್ತು ಪ್ರದೀಪ್ ಬಂಧಿತರು. ವಿರಾಜಪೇಟೆಯಲ್ಲಿ ಬ್ಯೂಟಿಪಾರ್ಲರ್‌ (Beauty Parlour) ನಡೆಸುತ್ತಿದ್ದ ಆರೋಪಿಗಳು ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರನ್ನ ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದನ್ನೂ ಓದಿ: ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್‌

    ಈ ಕುರಿತು ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಮಣಿಪುರ | ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಇಬ್ಬರು ಯೋಧರು ಹುತಾತ್ಮ, ಐವರಿಗೆ ಗಾಯ