Tag: ಕೊಕ್ಕರೆ

  • ತೀವ್ರಗೊಂಡ ಹಕ್ಕಿ ಜ್ವರ ಭೀತಿ – ಕಳೆದೊಂದು ವಾರದಲ್ಲಿ 12 ಕೊಕ್ಕರೆಗಳು ಸಾವು

    ತೀವ್ರಗೊಂಡ ಹಕ್ಕಿ ಜ್ವರ ಭೀತಿ – ಕಳೆದೊಂದು ವಾರದಲ್ಲಿ 12 ಕೊಕ್ಕರೆಗಳು ಸಾವು

    ಮೈಸೂರು: ಕೊರೊನಾ ವೈರಸ್ ಹಾವಳಿಯ ನಡುವೆಯೇ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ನಗರದಲ್ಲಿ ಕಳೆದ ಒಂದು ವಾರದಿಂದ ಹನ್ನೆರಡು ಕೊಕ್ಕರೆಗಳು ಸಾವನ್ನಪ್ಪಿವೆ.

    ನೆರೆಯ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಕೊಕ್ಕರೆಗಳ ಸಾವು ಮೈಸೂರಿನಲ್ಲಿ ತಲ್ಲಣ ಉಂಟು ಮಾಡಿದೆ. ಮೈಸೂರಿನ ವಾರ್ಡ್ ನಂಬರ್ 55ರ ವ್ಯಾಪ್ತಿಯಲ್ಲೇ 12 ಕೊಕ್ಕರೆಗಳು ಸಾವನ್ನಪ್ಪಿದ್ದು, ಸ್ಥಳೀಯ ನಗರಪಾಲಿಕೆ ಸದಸ್ಯ ರಾಮಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ರಾಮಪ್ರಸಾದ್ ಅವರು ಮಹಾನಗರ ಪಾಲಿಕೆಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಡಾ.ನಾಗರಾಜ್ ಅವರು ಮೃತ ಕೊಕ್ಕರೆಗಳ ದೇಹದ ತುಣುಕುಗಳನ್ನು ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕೊಕ್ಕರೆಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

  • ಪ್ರತಿ ವರ್ಷ ತನ್ನ ಅಂಗವಿಕಲ ಲವ್ವರ್ ಗಾಗಿ 14,000 ಕಿ.ಮೀ ಹಾರಿ ಬರುತ್ತೆ ಕೊಕ್ಕರೆ!

    ಪ್ರತಿ ವರ್ಷ ತನ್ನ ಅಂಗವಿಕಲ ಲವ್ವರ್ ಗಾಗಿ 14,000 ಕಿ.ಮೀ ಹಾರಿ ಬರುತ್ತೆ ಕೊಕ್ಕರೆ!

    ಝಾಗ್ರೆಬ್: ಪ್ರೀತಿಗಾಗಿ ಸಾಗರವನ್ನೇ ದಾಟಿ ಬರುವ ಪ್ರೇಮಿಗಳಿದ್ದಾರೆ. ಆದರೆ ಇನ್ನೊಂದು ಕೊಕ್ಕರೆ ತನ್ನ ಪ್ರೇಯಸಿಗಾಗಿ ಪ್ರತಿ ವರ್ಷ ಸಾವಿರಾರು ಮೈಲಿಗಳ ದೂರ ಹಾರಿಕೊಂಡು ಬರುತ್ತಿದೆ.

    ಇದು ಕ್ರೋಷಿಯಾ ದೇಶದಲ್ಲಿರುವ ಕ್ಲಿಪೀಟನ್ ಹಾಗೂ ಮಲೇನಾ ಎಂಬ ಎರಡು ಹಕ್ಕಿಗಳ ಲವ್ ಸ್ಟೋರಿ. ಗಂಡು ಹಕ್ಕಿ ತನ್ನ ಪ್ರೇಯಸಿಯಾದ ಹೆಣ್ಣು ಹಕ್ಕಿ ಅಂಗವಿಕಲವಾಗಿದ್ದು, ಹಾರಲು ಸಾಧ್ಯವಾಗದ ಕಾರಣ ಗಂಡು ಹಕ್ಕಿ ಪ್ರತಿ ವರ್ಷ 14 ಸಾವಿರ ಕಿ.ಮೀ ದೂರದಿಂದ ತನ್ನ ಪ್ರೀತಿಯನ್ನ ಹುಡುಕಿಕೊಂಡು ಬರುತ್ತದೆ.

    ದಕ್ಷಿಣ ಆಫ್ರಿಕಾದ ಚಳಿಗಾಲದ ಮನೆಯನ್ನು ಬಿಟ್ಟು ಕ್ಲಿಪೀಟನ್ ಇದೇ ಮಾರ್ಚ್ ನಲ್ಲಿ ಸತತ 16ನೇ ಬಾರಿಗೆ ಕ್ರೋಷಿಯಾದ ಸಣ್ಣ ಗ್ರಾಮವಾದ ಬ್ರೋಡ್ಸ್ಕಿ ವಾರೋಸ್ ಗೆ ಬಂದಿದೆ. ಇಲ್ಲಿಗೆ ಬಂದು ತನ್ನ ಪ್ರೇಯಸಿ ಮಲೇನಾಳನ್ನ ಭೇಟಿಯಾಗಿದೆ.

    ಈ ಜೋಡಿಗೆ ಈಗಾಗಲೇ 62 ಮರಿಗಳಿದ್ದು, ಈಗ ಮತ್ತಷ್ಟು ಮರಿಗಳನ್ನ ಮಾಡಲು ಸಿದ್ಧವಾಗಿವೆ. 1993ರಲ್ಲಿ ಬೇಟೆಗಾರರ ಗುಂಡೇಟಿನಿಂದ ಗಾಯಗೊಂಡಿದ್ದ ಮಲೇನಾ ಕೊಳವೊಂದರ ಬಳಿ ಬಿದ್ದಿದ್ದಾಗ ಅದನ್ನು ನೋಡಿದ ಸ್ಟೀಫನ್ ವೋಕಿಕ್ ಎಂಬವರು ಹಕ್ಕಿಯನ್ನ ತಂದು ಸಾಕಿಕೊಂಡಿದ್ದಾರೆ.

    ಗಂಡು ಹಕ್ಕಿ ಕ್ಲಿಪೀಟನ್ ಇಲ್ಲಿಗೆ ಬಂದು ಮರಿ ಮಾಡುತ್ತದೆ. ನಂತರ ಮರಿಗಳಿಗೆ ಹಾರುವುದನ್ನು ಕಲಿಸಿ ಆಗಸ್ಟ್ ತಿಂಗಳಲ್ಲಿ ಅವುಗಳ ಜೊತೆ ದಕ್ಷಿಣ ಆಫ್ರಿಕಾಗೆ ವಲಸೆ ಹೋಗುತ್ತದೆ. ಇತ್ತ ಮಲೆನಾ ತನ್ನ ಮಾಲೀಕ ವೀಕಿಕ್ ಜೊತೆ ಇರುತ್ತದೆ. ಈ ಎರಡು ಹಕ್ಕಿಗಳು ತಮ್ಮ Long Distance Relationship ನಿಂದಾಗಿ ಕ್ರೋಷಿಯಾದಲ್ಲಿ ಸೆಲೆಬ್ರಿಟಿಗಳಾಗಿವೆ.

  • ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಮೇಲಿನಿಂದ ನೆಲಕ್ಕೆ ಬೀಳುತ್ತಿವೆ ವಿದೇಶಿ ಕೊಕ್ಕರೆಗಳು

    ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಮೇಲಿನಿಂದ ನೆಲಕ್ಕೆ ಬೀಳುತ್ತಿವೆ ವಿದೇಶಿ ಕೊಕ್ಕರೆಗಳು

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಹಾರಲು ಸಾಧ್ಯವಾಗದೇ ಕೊಕ್ಕರೆಗಳು ನೆಲಕ್ಕೆ ಬೀಳುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

    ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ದೇಶ, ವಿದೇಶಗಳಿಂದ ವಿವಿಧ ಜಾತಿಗೆ ಸೇರಿದ ಕೊಕ್ಕರೆಗಳು ವಲಸೆ ಬರುತ್ತವೆ. ನಂತರ ಇಲ್ಲಿ ಬಂದು ನೆಲೆಸಿ ಸಂತಾನೋತ್ಪತ್ತಿ ಮಾಡಿ ಜೂನ್, ಜುಲೈ ತಿಂಗಳಲ್ಲಿ ವಾಪಸ್ ಹೋಗುತ್ತವೆ. ಆದರೆ ಈ ಬಾರಿ ವಲಸೆ ಬಂದಿರುವ ಕೊಕ್ಕರೆಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಂಕಟ ಪಡುತ್ತಿದ್ದು, ಹಾರಲಾರದೇ ನೆಲಕ್ಕೆ ಬೀಳುತ್ತಿವೆ.

    ಇದನ್ನು ಗಮನಿಸಿದ ಗ್ರಾಮಸ್ಥರು ಪಕ್ಷಿಗಳಿಗೆ ತಮ್ಮ ಕೈಲಾದ ಆರೈಕೆ ಮಾಡುತ್ತಿದ್ದಾರೆ. ವಿಷಯ ತಿಳಿದು ವೈದ್ಯರು ಸ್ಥಳಕ್ಕೆ ಧಾವಿಸಿ ಪಕ್ಷಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಈಗಾಗಲೇ ಸುಮಾರು ಮೂರು ಪಕ್ಷಿಗಳು ಅನಾರೋಗ್ಯಕ್ಕೀಡಾಗಿದ್ದು, ಅದರಲ್ಲಿ ಒಂದು ಪಕ್ಷಿ ಸಾವನ್ನಪ್ಪಿದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ಪಕ್ಷಿಗಳು ಅನಾರೋಗ್ಯಕ್ಕೆ ತ್ತುತ್ತಾಗಿ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೆ ಪಕ್ಷಿಗಳ ಅನಾರೋಗ್ಯ ಮರುಕಳಿಸಿದೆ. ಕಳೆದ ವರ್ಷ ಮೈಸೂರು ಸೇರಿದಂತೆ ಹಲವೆಡೆ ಪಕ್ಷಿಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈಗಾಗಲೇ ಮೃತಪಟ್ಟ ಪಕ್ಷಿಯನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಅಸ್ವಸ್ಥಕ್ಕೆ ನಿಖರ ಕಾರಣ ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

    ಕಳೆದ ವರ್ಷ ಕೂಡ ಇದೇ ರೀತಿ ಐದಕ್ಕೂ ಹೆಚ್ಚು ಕೊಕ್ಕರೆ ಸಾವನ್ನಪ್ಪಿದ್ದವು. ಈ ಬಾರಿಯೂ ಪ್ರಾರಂಭದಲ್ಲಿಯೇ ಕೊಕ್ಕರೆ ಅನಾರೋಗ್ಯಕ್ಕೆ ತುತ್ತಾಗಿರುವುರಿಂದ ನಾವು ಪಕ್ಷಿಗಳ ತಪಾಸಣೆ ನಡೆಸಿದ್ದೇವೆ. ಒಂದು ವೇಳೆ ಮತ್ತೆ ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾದ್ರೆ ಪ್ರಯೋಗಾಲಯದಲ್ಲಿ ಪರಿಶೀಲಿಸಿ, ನಂತರ ಅಲ್ಲಿಂದ ವರದಿ ತರಿಸಿಕೊಂಡು ಚಿಕಿತ್ಸೆ ಕೊಡುತ್ತೇವೆ ಎಂದು ಡಾ. ಸತೀಶ್ ತಿಳಿಸಿದ್ದಾರೆ.

    ತಕ್ಷಣ ಪಕ್ಷಿಗಳು ಅಸ್ವಸ್ಥಗೊಳ್ಳುತ್ತಿರುವುದಕ್ಕೆ ಶೀಘ್ರವೇ ಕಾರಣ ಹುಡುಕಿ ಮುಂದೆ ಯಾವುದೇ ಪಕ್ಷಿಗಳಿಗೂ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಪಕ್ಷಿ ಪ್ರಿಯರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.