Tag: ಕೊಂಡ

  • ಅರ್ಚಕರನ್ನ ರಕ್ಷಿಸಲು ಹೋದ ಇಬ್ಬರೂ ಅಗ್ನಿಕೊಂಡಕ್ಕೆ ಬಿದ್ದರು!

    ಅರ್ಚಕರನ್ನ ರಕ್ಷಿಸಲು ಹೋದ ಇಬ್ಬರೂ ಅಗ್ನಿಕೊಂಡಕ್ಕೆ ಬಿದ್ದರು!

    ರಾಮನಗರ: ಅಗ್ನಿಕೊಂಡ ಹಾಯುವ ವೇಳೆ ಅರ್ಚಕರೊಬ್ಬರು ಕೊಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಇತಿಹಾಸ ಪ್ರಸಿದ್ಧ ರೇವಣ ಸಿದ್ಧೇಶ್ವರ ಸ್ವಾಮಿಯ ಅಗ್ನಿಕೊಂಡ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ ಅಗ್ನಿಕೊಂಡ ಹಾಯುತ್ತಿದ್ದ ಅರ್ಚಕ ವಿಜಯ್ ಕುಮಾರ್ ಅವರು ಆಯತಪ್ಪಿ ಕೊಂಡದಲ್ಲಿ ಬಿದ್ದಿದ್ದಾರೆ. ಈ ವೇಳೆ ಅರ್ಚಕ ವಿಜಯ್ ನನ್ನು ರಕ್ಷಿಸಲು ಹೋದ ರುದ್ರೇಶ್ ಹಾಗೂ ಮಂಜುನಾಥ್ ಎಂಬ ಅರ್ಚಕರೂ ಕೂಡ ಕೊಂಡಕ್ಕೆ ಬಿದ್ದಿದ್ದು, ಸುಟ್ಟಗಾಯಗಳಾಗಿವೆ.

    ಘಟನೆಯಿಂದ ಗಾಯಗೊಂಡ ಮೂರು ಜನ ಅರ್ಚಕರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ತಿಂಗಳು ಕನಕಪುರ ತಾಲೂಕಿನ ಸಾತನೂರು ಹಾಗೂ ಉಯ್ಯಂಬಳ್ಳಿ ಗ್ರಾಮಗಳಲ್ಲೂ ಸಹ ಅಗ್ನಿಕೊಂಡ ದುರಂತ ನಡೆದಿದೆ. ಉಯ್ಯಂಬಳ್ಳಿಯಲ್ಲಿ ನಡೆದ ಅಗ್ನಿಕೊಂಡದಲ್ಲಿ ಬಿದ್ದ ಪೂಜಾರಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ.

  • ಹಾಸನಾಂಬೆ ದರ್ಶನಕ್ಕೆ ಇಂದು ತೆರೆ- ಕೊಂಡ ಹಾಯುವಾಗ ಎಡವಿದ ಭಕ್ತನ ರಕ್ಷಣೆ

    ಹಾಸನಾಂಬೆ ದರ್ಶನಕ್ಕೆ ಇಂದು ತೆರೆ- ಕೊಂಡ ಹಾಯುವಾಗ ಎಡವಿದ ಭಕ್ತನ ರಕ್ಷಣೆ

    ಹಾಸನ: ಜಿಲ್ಲೆಯ ಪ್ರಸಿದ್ಧ ದೇವಾಲಯ ಹಸನಾಂಬೆ ದೇವಿಯ ದರ್ಶನಕ್ಕೆ ಇಂದು ತೆರೆ ಬಿದ್ದಿದ್ದು, ಈ ಮಧ್ಯೆ ಭಾರೀ ಅನಾಹುತವೊಂದು ತಪ್ಪಿದೆ.

    ದೇವಾಲಯದ ಮುಂದೆ ಕೊಂಡ ಹಾಯುವ ವೇಳೆ ತಲೆ ಮೇಲೆ ದೇವಿ ಉತ್ಸವ ಮೂರ್ತಿ ಹೊತ್ತಿದ್ದ ಭಕ್ತ ಎಡವಿದ್ದಾರೆ. ಅದೃಷ್ಟವಶಾತ್ ಜೊತೆಗಿದ್ದ ಭಕ್ತರು ಅವರನ್ನು ಹಾಗೂ ದೇವಿ ಉತ್ಸವ ಮೂರ್ತಿಯನ್ನು ಕೆಳಗೆ ಬೀಳದಂತೆ ತಡೆದು ಅಪಾಯದಿಂದ ಪಾರು ಮಾಡಿದ್ದಾರೆ. ಈ ಮೂಲಕ ಸ್ವಲ್ಪದರಲ್ಲೀ ಭಾರೀ ಅನಾಹುತವೊಂದು ತಪ್ಪಿದೆ.

    ಇಂದು ಬೆಳಗ್ಗೆ 6 ಗಂಟೆಗೆ ಹಾಸನಾಂಬೆ ದರ್ಶನಕ್ಕೆ ತೆರೆ ಬಿದ್ದಿದೆ. ಮಧ್ಯಾಹ್ನ 1.30ಕ್ಕೆ ಹಾಸನಾಂಬೆ ಗರ್ಭಗುಡಿಯ ಬಾಗಿಲು ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆಯುತ್ತಿತ್ತು. ಈ ವೇಳೆ ಕೊಂಡ ಹಾಯುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಶುಕ್ರವಾರ ಅಂತಿಮ ದಿನವಾಗಿತ್ತು. ಹೀಗಾಗಿ ನಿನ್ನೆ ಬೆಳಗ್ಗೆ 5 ರಿಂದ ಸಂಜೆ 5 ಮತ್ತು ರಾತ್ರಿ 9 ರಿಂದ ಇಂದು ಬೆಳಗ್ಗೆ 6 ಗಂಟೆವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದಾಗಿತ್ತು. ಇಂದು ಮಧ್ಯಾಹ್ನ ವಿಶ್ವರೂಪ ದರ್ಶನದ ನಂತರ ಗರ್ಭಗುಡಿಯ ಬಾಗಿಲು ಹಾಕಲಾಗುತ್ತದೆ.

    ದೇವಿ ದರ್ಶನಕ್ಕೆ ಶನಿವಾರ ಕಡೇ ದಿನವಾಗಿರುವ ಹಿನ್ನೆಲೆಯಲ್ಲಿ ಜನಸಾಗರವೇ ದೇಗುಲಕ್ಕೆ ಹರಿದು ಬಂದಿತ್ತು. ಭಕ್ತರ ಸಾಮಾನ್ಯ ದರ್ಶನದ ಸಾಲು 2 ಕಿಲೋ ಮೀಟರ್ ಗೂ ಹೆಚ್ಚಿತ್ತು. ದೇವಿಯ ವಿಶೇಷ ದರ್ಶನದ 300 ರೂ. ಪಾಸ್ ಹಾಗೂ 1000 ರೂ. ಪಾಸ್ ಗೂ ಭಾರೀ ಬೇಡಿಕೆ ಇತ್ತು. ದೇವಿ ದರ್ಶನದ ಕೊನೆಯ ದಿನವಾದ ನಿನ್ನೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಶಾಸಕ ಶರವಣ ದೇಗುಲಕ್ಕೆ ಭೇಟಿ ನೀಡಿದ್ರು.

    https://www.youtube.com/watch?v=Xt40GinaJsM

  • ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಮಕ್ಕಳು ಸೇರಿದಂತೆ 10 ಮಂದಿಗೆ ಗಾಯ!

    ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ಮಕ್ಕಳು ಸೇರಿದಂತೆ 10 ಮಂದಿಗೆ ಗಾಯ!

    ಬೆಂಗಳೂರು: ಗ್ರಾಮದೇವತೆ ಮಾರಮ್ಮ ದೇವಿ ಜಾತ್ರೆಯಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯವಾಗಿರೋ ಘಟನೆ ನೆಲಮಂಗಲ ತಾಲೂಕಿನ ನರಸೀಪುರ ಗ್ರಾಮದಲ್ಲಿ ಸಂಭವಿಸಿದೆ.

    ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾರಮ್ಮ ದೇವಿಗೆ ಸಡಗರ ಸಂಭ್ರಮದಿಂದ ಗ್ರಾಮಸ್ಥರು ಬೆಂಕಿಯ ಕೊಂಡವನ್ನ ಏರ್ಪಡಿಸಿದ್ದು, ಈ ವೇಳೆ ಆರತಿ ದೀಪದೊಂದಿಗೆ ಸೇವೆ ಸಲ್ಲಿಸುವಾಗ ಆಯತಪ್ಪಿ ಅವಘಡ ನಡೆದಿದೆ.

    ಇದನ್ನೂ ಓದಿ: ವಿಡಿಯೋ: ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ದೇವರ ಪಲ್ಲಕ್ಕಿ ಹೊತ್ತ ಭಕ್ತ

    ಗಾಯಗೊಂಡ ಸುಜಾತ, ಕವಿತಾ, ಲಕ್ಷ್ಮೀ, ಪವಿತ್ರ, ಜನಾರ್ದನ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಆತಂಕದ ಛಾಯೆ ನಿರ್ಮಾಣವಾಗಿದ್ದು, ಡಾಬಸ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದಾರೆ.

    ಘಟನೆ ನಡೆದ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಅಡ್ಡಿ ಪಡಿಸಿದ್ದು, ಇಲ್ಲಿ ಯಾವುದೇ ಅವಘಡ ನಡೆದಿಲ್ಲ. ಎಲ್ಲ ಸೃಷ್ಟಿ ಎಂದು ಸ್ಥಳೀಯರು ಸಮಜಾಯಿಷಿ ಹೇಳಿಕೆ ನೀಡಿದ್ದಾರೆ.