Tag: ಕೊಂಕಣ ರೈಲ್ವೆ

  • ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ನವದೆಹಲಿ: ಕೊಂಕಣ ರೈಲ್ವೆ (Konkan Railways) ನಿಗಮದ ವಿಲೀನ, ಮಂಗಳೂರು ರೈಲ್ವೆ ವ್ಯಾಪ್ತಿ ಆಡಳಿತಾತ್ಮಕ ಪುನರ್ ರಚನೆ ಸೇರಿದಂತೆ ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ (Captain Brijesh Chowta) ಲೋಕಸಭೆಯಲ್ಲಿ (Lok Sabha) ಸದನದ ಗಮನ ಸೆಳೆದಿದ್ದಾರೆ.

    ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ರೈಲ್ವೆ ಇಲಾಖೆಯಲ್ಲಿ ಆಗಿರುವ ಗಮನಾರ್ಹ ಅಭಿವೃದ್ಧಿ ಕಾರ್ಯ-ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಶೇ.90ರಷ್ಟು ವಿದ್ಯುದ್ದೀಕರಣ ಕೆಲಸ ಆಗಿದ್ದು, ದೇಶವ್ಯಾಪಿ ಸುಮಾರು 1,300 ರೈಲ್ವೆ ನಿಲ್ದಾಣಗಳ ಪುನರ್ ನವೀಕರಣ ಮಾಡಲಾಗಿದೆ. ಜೊತೆಗೆ ವಂದೇ ಭಾರತ್‌ನಂಥಹ ಸುಧಾರಿತ ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಮೀನು ತೆರವು ವಿಚಾರ; ಮಿಕ್ಕಿದ್ದಕ್ಕೆಲ್ಲಾ ದಾಖಲೆ ಇರುತ್ತೆ, ಇದಕ್ಕೆ ಇರಲ್ವಾ? – ಹೆಚ್‌ಡಿಕೆ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯ

    ಇದೇ ವೇಳೆ, ಸುಮಾರು ಒಂದು ದಶಕಗಳಿಂದ ವಿಸ್ತರಣೆಗೆ ಕಾಯುತ್ತಿದ್ದ ಮಂಗಳೂರು-ಪುತ್ತೂರು-ಕಬಕ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸಿರುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದ ಅವರು, ಇದರಿಂದ ದಿನನಿತ್ಯ ಓಡಾಡುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,559 ಕೋಟಿ ರೂ. ಹಂಚಿಕೆ ಮಾಡಿದ್ದಕ್ಕಾಗಿ ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ರೈಲ್ವೆ ಮೂಲಸೌಕರ್ಯದಲ್ಲಿ ವೇಗದ ವಿಸ್ತರಣೆಯನ್ನು ಶ್ಲಾಘಿಸಿದ ಚೌಟ, 2014ರಿಂದ ಕರ್ನಾಟಕದಲ್ಲಿ ಒಟ್ಟು 1,652 ಕಿ.ಮೀ ಹೊಸ ರೈಲ್ವೆ ಹಳಿಗಳನ್ನು ಹಾಕಲಾಗಿದೆ. ಇದು ಶ್ರೀಲಂಕಾದ ಸಂಪೂರ್ಣ ರೈಲು ಜಾಲವನ್ನು ಮೀರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮನ್ನು ಭಾರತದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ: ಸುನಿತಾ ವಿಲಿಯಮ್ಸ್‌ಗೆ ಮೋದಿ ಪತ್ರ

    ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸದನದ ಗಮನಸೆಳೆದ ಸಂಸದ ಕ್ಯಾ. ಚೌಟ ಅವರು, ಆರ್ಥಿಕವಾಗಿ ಹಲವಾರು ಸವಾಲು ಎದುರಿಸುತ್ತಿರುವ ಕೊಂಕಣ ರೈಲ್ವೆ ನಿಗಮ(ಕೆಆರ್ಸಿಎಲ್)ವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ನಿಗಮದ ಸುಮಾರು 2,589 ಕೋಟಿ ರೂ. ಸಾಲದ ಹೊರೆಯನ್ನು ತಪ್ಪಿಸಿ ಆರ್ಥಿಕ ಸದೃಢತೆಯನ್ನು ಹೆಚ್ಚಿಸಬಹುದು. ಆ ಮೂಲಕ ಕೊಂಕಣ ರೈಲ್ವೆಯ ಕಾರ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸುಧಾರಣೆ ತರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ ದೇಶದ ಸಾಮೂಹಿಕ ಪ್ರಜ್ಞೆ ಬಲಗೊಂಡಿದೆ – ಲೋಕಸಭೆಯಲ್ಲಿ ಮೋದಿ ಶ್ಲಾಘನೆ

    ಇನ್ನು ಬಹಳ ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಅಡೆ-ತಡೆ ದೂರ ಮಾಡುವ ಬಗ್ಗೆ ಪ್ರಸ್ತಾಪಿಸಿ, ಮಂಗಳೂರು ರೈಲ್ವೆ ಭಾಗದ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆ ವಲಯದ ಪಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಅದನ್ನು ನೈರುತ್ಯ ರೈಲ್ವೆ ವ್ಯಾಪ್ತಿಗೆ ಬರುವ ಮೈಸೂರು ವಿಭಾಗಕ್ಕೆ ಸೇರಿಸಬೇಕು. ಇದರಿಂದ ಈ ಭಾಗದ ರೈಲ್ವೆ ವಿಚಾರಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸುಧಾರಣೆ ತರುವ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು. ಇದನ್ನೂ ಓದಿ: ಕಾರ್ಕಳದ ಎರ್ಲಪಾಡಿ ಕ್ಷೇತ್ರಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ

    ಹೆಚ್‌ಎಂಆರ್‌ಡಿಸಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳ್ಳಲಿ:
    ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕದ ಬಗ್ಗೆಯೂ ಉಲ್ಲೇಖಿಸಿದ ಸಂಸದ ಕ್ಯಾ. ಚೌಟ ಅವರು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪನಿಯನ್ನು (ಹೆಚ್‌ಎಂಆರ್‌ಡಿಸಿ) ಕೂಡ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು ಅಥವಾ ಕರ್ನಾಟಕ ಸರ್ಕಾರದ ಅದರ ಸಂಪೂರ್ಣ ಹೊಣೆಯನ್ನು ನೀಡಿ ಆ ಮೂಲಕ ಸರಕು ಸಾಗಣೆ ಹಾಗೂ ಪ್ರಯಾಣಿಕರ ದಟ್ಟಣೆ ಹೆಚ್ಚಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಡುವೆ ಮಂಗಳೂರು ನವಬಂದರು ಹಾಗೂ ಬೆಂಗಳೂರು ನಡುವೆ ಪ್ರತ್ಯೇಕ ಸರಕು ಸಾಗಾಟ ಕಾರಿಡಾರ್ ನಿರ್ಮಿಸುವುದರಿಂದ ಕರಾವಳಿಯ ವ್ಯಾಪಾರ-ವಹಿವಾಟು ಹೆಚ್ಚಿಸುವ ಜೊತೆಗೆ ಸರಕು ಸಾಗಣೆ ವೆಚ್ಚವನ್ನು ಕಡಿಮೆಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್

    ಒಟ್ಟಾರೆ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಈ ಎಲ್ಲ ರೈಲ್ವೆ ಅಭಿವೃದ್ಧಿ ಕಾರ್ಯ ಹಾಗೂ ಸುಧಾರಣಾ ಕ್ರಮಗಳನ್ನು ಆದ್ಯತೆ ಮೇಲೆ ಕಾರ್ಯರೂಪಕ್ಕೆ ತರಬೇಕೆಂದು ಸಂಸದ ಕ್ಯಾ. ಚೌಟ ಅವರು ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್ ಎಸೆದವನ ಮೇಲೆ ಕ್ರಮ: ಮುನಿಯಪ್ಪ

  • ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡಿ: ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

    ಬೆಂಗಳೂರು: ಕೊಂಕಣ ರೈಲ್ವೆಯನ್ನು (Konkan Railway) ಭಾರತೀಯ ರೈಲ್ವೆಯಲ್ಲಿ (Indian Railways) ವಿಲೀನಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ (Kota Srinivas Poojary) ನೇತೃತ್ವದ ಶಾಸಕರ ತಂಡ ಸಚಿವರಿಗೆ ಮನವಿ ಸಲ್ಲಿಸಿದೆ.

    ರಾಜ್ಯ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಈ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿತರಿಗೆ ಸೂಚಿಸಿದ್ದಾಗಿ ಪ್ರಕಟಣೆ ತಿಳಿಸಿದೆ. ಜಾರ್ಜ್ ಫರ್ನಾಂಡಿಸ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಅನುಷ್ಠಾನಕ್ಕೆ ತಂದ ಮಹತ್ವದ ಕೊಂಕಣ ರೈಲ್ವೆ ಯೋಜನೆಗೆ ಇಂದಿಗೆ ಸುಮಾರು 30 ವರ್ಷಗಳು ತುಂಬುತ್ತಿದೆ. ಏಕ ಹಳಿಯ ಪ್ರಯಾಣ ಸೌಲಭ್ಯ ಇರುವುದರಿಂದ ಹೆಚ್ಚುವರಿ ರೈಲ್ವೆ ಓಡಾಡಲು ಕಷ್ಟವಾಗುತ್ತದೆ ಮತ್ತು ಕೊಂಕಣ ರೈಲ್ವೆಯಲ್ಲಿ ಅನುದಾನದ ಕೊರತೆ ಇರುವುದರಿಂದ ನೂತನ ರೈಲ್ವೆ ನಿಲ್ದಾಣಗಳೂ ಸೇರಿದಂತೆ, ಮೂಲಭೂತ ಸೌಕರ್ಯ ವ್ಯವಸ್ಥೆಗೆ ಆರ್ಥಿಕ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನ ಮಾಡುವುದರ ಮೂಲಕ ಭಾರತ ಸರ್ಕಾರದ ಅನುದಾನದ ಪಡೆದು ಕರಾವಳಿ ಪ್ರದೇಶದಲ್ಲೂ ಕೂಡ ಮಹತ್ವದ ರೈಲ್ವೆ ಯೋಜನೆ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು ನಿಯೋಗವು ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು| ನೇಣು ಬಿಗಿದುಕೊಂಡು ಪೊಲೀಸ್ ಹೆಡ್‌ಕಾನ್ಸ್ಟೇಬಲ್ ಆತ್ಮಹತ್ಯೆ

    ಈ ಸಂಬಂಧ ಸಚಿವರ ಜೊತೆ ನಿಯೋಗವು ಸುದೀರ್ಘವಾಗಿ ಚರ್ಚಿಸಿತು. ಭಾರತೀಯ ರೈಲ್ವೆಯಲ್ಲಿ ವಿಲೀನಗೊಂಡರೆ, ಮುಂದಿನ ದಿನಗಳಲ್ಲಿ ಸಿಂಗಲ್ ಲೈನನ್ನು ಹೊರತುಪಡಿಸಿ, ಡಬ್ಲಿಂಗ್ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆ ಅನುಷ್ಠಾನನವಾಗುವ ಲಭ್ಯ ಅವಕಾಶವನ್ನು ಸಚಿವರಿಗೆ ನಿಯೋಗ ಮನವರಿಕೆ ಮಾಡಿತು. ಸುದೀರ್ಘ ಚರ್ಚೆಯ ನಂತರ ಎಂ.ಬಿ ಪಾಟೀಲ್ ಸಹಮತ ವ್ಯಕ್ತಪಡಿಸಿದರು. ಅಲ್ಲದೇ, ತಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ ರವರಿಗೆ ದೂರವಾಣಿ ಮೂಲಕ ಸೂಚನೆ ನೀಡಿ ತಕ್ಷಣ ಕಡತ ಸಿದ್ದಪಡಿಸಿ, ಮುಂದೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಭಾರತೀಯ ರೈಲ್ವೆಯಲ್ಲಿ ವಿಲೀನವಾಗುವ ಬಗ್ಗೆ ಸಂಸದರು ಮತ್ತು ಶಾಸಕರ ನಿಯೋಗಕ್ಕೆ ಭರವಸೆ ನೀಡಿದರು. ಇದನ್ನೂ ಓದಿ: CET: ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆ – ಕೆಇಎ

    ಸಂಸದ ಕೋಟರೊಂದಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಭಾಗವಹಿಸಿದ್ದರು. ಇದನ್ನೂ ಓದಿ: ಮಹದೇಶ್ವರ ಬೆಟ್ಟದ ಅಂತರಗಂಗೆಯಲ್ಲಿ ಸೋಪು, ಶಾಂಪೂ ಬಳಕೆಗೆ ನಿಷೇಧ

  • ಡೀಸೆಲ್ ಇಂಜಿನ್‍ಗೆ ಬ್ರೇಕ್- 100 ಕೋಟಿ ಉಳಿಸಲಿದೆ ಕೊಂಕಣ ರೈಲ್ವೆ ಇಲಾಖೆ

    – ಕರಾವಳಿ ಭಾಗದ ವಿದ್ಯುದೀಕರಣ ಪೂರ್ಣ

    ಕಾರವಾರ: ಕಳೆದ ಮೂರು ವರ್ಷಗಳಿಂದ 1,100 ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದ ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಭರದಿಂದ ಸಾಗಿತ್ತು. ಇದೀಗ ರಾಜ್ಯದಲ್ಲಿ ಕಾಮಗಾರಿ ಪೂರ್ಣಗೊಂದ್ದು, ತೋಕೂರಿನಿಂದ ಕಾರವಾರದವರೆಗೆ ಮೊದಲ ಬಾರಿ ನಡೆಸಿದ ವಿದ್ಯುತ್ ಚಾಲಿತ ಲೋಕೊದ (ಎಂಜಿನ್) ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

    ಈ ಹಿಂದೆ ದಕ್ಷಿಣ ಕನ್ನಡದ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗೆ ಸುಮಾರು 105 ಕಿಲೋಮೀಟರ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿತ್ತು. ಇದೀಗ ಉತ್ತರ ಕನ್ನಡದಲ್ಲೂ ವಿದ್ಯುದೀಕರಣ ಸಂಪೂರ್ಣವಾಗಿದ್ದು, ಕೊಂಕಣ ರೈಲ್ವೆಯು ಲೋಕೋದ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

    ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 110 ಕಿಲೋಮೀಟರ್ ವೇಗದಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲದೇ ಸಂಚರಿಸಿದ್ದು, ಯಾವುದೇ ಲೋಪದೋಷಗಳು ಕಂಡುಬಂದಿರದ ಕಾರಣ ಶೀಘ್ರದಲ್ಲಿ ಮಂಗಳೂರಿನಿಂದ ಕಾರವಾರದ ವರೆಗೆ ವಿದ್ಯುದೀಕರಣಗೊಂಡ ರೈಲುಗಳು ಸಂಚರಿಸುವ ಮೂಲಕ ಡೀಸೆಲ್ ಇಂಜಿನ್‍ಗೆ ಶಾಶ್ವತ ಮುಕ್ತಿ ದೊರೆಯಲಿದೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ರೋಹಾದಿಂದ ರತ್ನಗಿರಿವರೆಗಿನ ಮಾರ್ಗದಲ್ಲಿ ಮಾರ್ಚ್ 7ರಂದು ಯಶಸ್ವಿ ಪರೀಕ್ಷಾರ್ಥ ಸಂಚಾರ ಮಾಡಲಾಗಿತ್ತು. ಇತ್ತ ಗೋವಾದ ಮಡಗಾಂವ್‍ನಿಂದ ಮಹಾರಾಷ್ಟ್ರದ ಕರ್ಮಾಲಿವರೆಗಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ.

    ಇನ್ನು ಕಾರವಾರದಿಂದ ಗೋವಾ ಮಡಗಾಂವ್ ವರೆಗೆ ಜೂನ್ ತಿಂಗಳಲ್ಲಿ ವಿದ್ಯುದೀಕರಣ ಪೂರ್ಣ ಗೊಳ್ಳಲಿದೆ. ಇದರಿಂದ ಅತೀ ಹೆಚ್ಚು ಬಳಕೆಯಾಗುತಿದ್ದ ಡೀಸೆಲ್ ಇಂಧನದ ಖರ್ಚು ಉಳಿಯಲಿದ್ದು, ಇಲಾಖೆಗೆ ವರ್ಷಕ್ಕೆ 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಕ್ಷೇತ್ರಿಯ ರೈಲ್ವೆ ಪ್ರಬಂಧಕ ಬಾಳಾಸಾಹೇಬ್ ಬಿ.ನಿಕಮ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕೊಂಕಣ ರೈಲ್ವೆ ಮಾರ್ಗವು ಒಟ್ಟು 756 ಕಿಲೋಮೀಟರ್ ಉದ್ದವಿದ್ದು, ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರಿನವರೆಗೆ ಚಾಚಿಕೊಂಡಿದೆ.

    ಸಬ್ ಸ್ಟೇಷನ್‍ಗಳ ಸ್ಥಾಪನೆ ಪೂರ್ಣ
    ರೈಲ್ವೆ ಮಾರ್ಗಕ್ಕೆ ಬೇಕಾಗುವ ವಿದ್ಯುತ್ ಪೂರೈಕೆಗೆ ಸಬ್ ಸ್ಟೇಷನ್‍ಗಳ ಸ್ಥಾಪನೆ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಕಾರವಾರ, ಮುರಡೇಶ್ವರ, ಸೇನಾಪುರ, ಬಾರ್ಕೂರು, ಮೂಲ್ಕಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣವಾಗಿವೆ. ಇದೇ ರೀತಿ ಕೊಂಕಣ ರೈಲ್ವೆಯ ಮಾರ್ಗದುದ್ದಕ್ಕೂ ಸ್ಥಾಪನೆ ಮಾಡಲಾಗುತ್ತಿದೆ. ಈ ವರ್ಷ ಡಿಸೆಂಬರ್ ಒಳಗೆ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಈ ಮಾರ್ಗದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

    ಕರಾವಳಿಗರಿಗೆ ಹೆಚ್ಚಿನ ಲಾಭ
    ವಿದ್ಯುದೀಕರಣ ಗೊಂಡ ರೈಲು ಸಂಚರಿಸುವುದರಿಂದ ಇಂಧನ ವೆಚ್ಚ ಅತೀ ಕಡಿಮೆಯಾಗಲಿದೆ. ಇದರಿಂದ ಹೆಚ್ಚು ರೈಲುಗಳನ್ನು ಓಡಿಸಲು ಸಹಾಯವಾಗಲಿದೆ. ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಭಾಗವು ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ಸಂಬಂಧ ಮಹಾರಾಷ್ಟ್ರ ಹಾಗೂ ಗೋವಾ ವನ್ನು ಅವಲಂಭಿಸಿದೆ. ಉದ್ಯೋಗಕ್ಕಾಗಿ ಪ್ರತಿ ದಿನ ಸಾವಿರಾರು ಜನ ಕಾರವಾರದಿಂದ ಗೋವಾಕ್ಕೆ ಸಂಚಾರ ಮಾಡುತ್ತಾರೆ. ಹೀಗಾಗಿ ಹೆಚ್ಚು ಉಪಯೋಗವಾಗಲಿದ್ದು, ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ ಸಂಚರಿಸುವ ಹೈ ಸ್ಪೀಡ್ ರೈಲಿನಂತೆ ಈ ಭಾಗದಲ್ಲೂ ಮುಂದಿನ ದಿನದಲ್ಲಿ ಹೈ ಸ್ಪೀಡ್ ರೈಲು ಸಂಚರಿಸಲು ಸಹಾಯವಾಗಲಿದೆ.

  • 2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

    2022ರ ಆಗಸ್ಟ್ ವೇಳೆಗೆ ಜಮ್ಮುವಿನಲ್ಲಿ ಪೂರ್ಣಗೊಳ್ಳಲಿದೆ ವಿಶ್ವದ ಎತ್ತರದ ರೈಲ್ವೆ ಸೇತುವೆ

    – ಐಫೆಲ್ ಟವರ್‌ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ 2022ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಲಭಿಸಿದೆ.

    ಐಫೆಲ್ ಟವರ್ ಗಿಂತ ಎತ್ತರವಾಗಿ ನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೇ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

    ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕೌರಿ ಗ್ರಾಮದ ಕತ್ರಾ-ಬನಿಹಾಲ್ ರೈಲ್ವೆ ಮಾರ್ಗದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಈ ಸೇತುವೆ ಚೇನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದ್ದು, 1.3 ಕಿ.ಮೀ ಉದ್ದವಿದೆ. ಈ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣದ 5-6 ಗಂಟೆ ಸಮಯವನ್ನು ಕಡಿಮೆ ಮಾಡಲಿದೆ.

    ಈ ಕುರಿತು ಮಾತನಾಡಿರುವ ಡೆಪ್ಯುಟಿ ಚೀಫ್ ಮುಖ್ಯ ಎಂಜಿನಿಯರ್, 2022ರ ವೇಳೆಗೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ. ಸೇತುವೆ ನಿರ್ಮಾಣದ ಕಾರ್ಯ ಹಲವು ಸವಾಲುಗಳಿಂದ ಕೂಡಿದೆ. ಆದರೆ ಸೇತುವೆ ನಿರ್ಮಾಣ ಕಾರ್ಯ ವೈಷ್ಣೋ ದೇವಿ ಪುಣ್ಯ ಕ್ಷೇತ್ರಕ್ಕೆ ಪ್ರಸಿದ್ಧಿಯಾಗಿರುವ ಜಿಯಾಸಿ ರಿಯಾಸಿ ಜಿಲ್ಲೆಯ ಪ್ರವಾಸೋಧ್ಯಮದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ. ಸೇತುವೆ ಮೇಲೆ ಹೆಲಿಪ್ಯಾಡ್ ನಿರ್ಮಾಣವಾಗುವ ಕಾರಣ ಜನರು ತಮ್ಮ ಚಾಫರ್ ಮೂಲಕ ಇಲ್ಲಿಗೆ ಆಗಮಿಸಬಹುದು ಎಂದಿದ್ದಾರೆ.

    ಕೊಂಕಣ ರೈಲ್ವೆ ಈ ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದು, 2004ರಲ್ಲಿ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ಉಧಮಾಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಯೋಜನೆಯ ಒಂದು ಭಾಗವಾಗಿದೆ. ಈ ಮಾರ್ಗದಲ್ಲಿ ಉಧಮಾಪುರ-ಕಾತ್ರ (25 ಕಿಮೀ) ಸೆಕ್ಷನ್, ಬನಿಹಾಳ್-ಕ್ವಾಜಿಗುಂಡ್ (18 ಕಿಮೀ) ಸೆಕ್ಷನ್ ಹಾಗೂ ಕ್ವಾಜಿಗುಂಡ್-ಬಾರಾಮುಲ್ಲಾ (118 ಕಿಮೀ) ವಿಭಾಗವನ್ನು ಈಗಾಗಲೇ ನಿರ್ಮಿಸಲಾಗಿದೆ.

    ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ 266 ಕಿಮೀ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 120 ವರ್ಷಗಳ ಕಾಲಮಿತಿಯನ್ನು ಸೇತುವೆ ಹೊಂದಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಪ್ರಯಾಣಿಕರಿಗಾಗಿ ಕೊಂಕಣ ರೈಲ್ವೆ ನಿಗಮದಿಂದ ನೀರಿನ ಎಟಿಎಂ ಅಳವಡಿಕೆ

    ಪ್ರಯಾಣಿಕರಿಗಾಗಿ ಕೊಂಕಣ ರೈಲ್ವೆ ನಿಗಮದಿಂದ ನೀರಿನ ಎಟಿಎಂ ಅಳವಡಿಕೆ

    ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದರಲ್ಲಿ ಸದ್ಯ ಕೊಂಕಣ ರೈಲ್ವೆ ನಿಗಮದ(ಕೆಆರ್‌ಸಿಎಲ್‌) ಅಡಿಯಲ್ಲಿ ಬರುವ ನಿಲ್ದಾಣಗಳಲ್ಲಿ ನೀರಿನ ಎಟಿಎಂ ಅಳವಡಿಸುವ ಸೌಲಭ್ಯ ಕೂಡ ಒಂದಾಗಿದೆ.

    ಹೌದು. ಕೊಂಕಣ ರೈಲ್ವೆ ನಿಗಮದಿಂದ ರೈಲು ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳನ್ನು ಅಳವಡಿಸಲಾಗುತ್ತಿದೆ. ದೆಹಲಿ ಮೂಲದ `ಜನಜಲ್’ ಕಂಪನಿಯ ಸಹಯೋಗದೊಂದಿಗೆ ಈ ವಿನೂತನ ಪ್ರಯತ್ನಕ್ಕೆ ಕೊಂಕಣ ರೈಲ್ವೇ ನಿಗಮ ಕೈಹಾಕಿದೆ. ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ರೈಲು ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳನ್ನು ಕೆಆರ್‌ಸಿಎಲ್‌ ಅಳವಡಿಸುತ್ತಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿನ 59 ರೈಲ್ವೆ ನಿಲ್ದಾಣಗಳಲ್ಲಿ 61 `ಜನಜಲ್’ ನೀರಿನ ಎಟಿಎಂಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೀರಿನ ಎಟಿಎಂ ಅಳವಡಿಕೆ ಮಾಡುವುದರಿಂದ ಪ್ರತಿದಿನ 75 ಲಕ್ಷ ಪ್ರಯಾಣಿಕರಿಗೆ ಹಾಗೂ ನಿಲ್ದಾಣಗಳ ಸುತ್ತಮುತ್ತ ವಾಸಿಸುವ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಿಗುತ್ತದೆ ಎಂದು ಜನಜಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪರಾಗ್ ಅಗರ್ವಾಲ್ ಹೇಳಿದ್ದಾರೆ.

    5 ತಿಂಗಳಲ್ಲಿ ರೈಲು ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳು ಕಾರ್ಯರೂಪಕ್ಕೆ ಬರಲಿದೆ. ಅತ್ಯುತ್ತಮ ಆಧುನಿಕ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣ ಮಾಡುವ ವ್ಯವಸ್ಥೆಯನ್ನು ಕಂಪನಿ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ.

    ನೀರಿನ ಎಟಿಎಂನಿಂದಾಗಿ ನೀರು ಪೋಲಾಗುವುದನ್ನು ಕಡಿಮೆ ಮಾಡಬಹುದು. ಇದರಿಂದ ಸಾಮಾನ್ಯವಾಗಿ ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆಗೆ ಕಡಿವಾಣ ಹಾಕಬಹುದಾಗಿದೆ ಎಂದು ಪರಾಗ್ ಅಗರ್ವಾಲ್ ವಿವರಿಸಿದ್ದಾರೆ.

    ಈ ಹಿಂದೆಯೇ ಇದೇ ರೀತಿ ನೀರಿನ ಎಟಿಎಂ ಯೋಜನೆಯನ್ನು ಜನಜಲ ಕಂಪನಿ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ. ಮಹಾರಾಷ್ಟ್ರದಲ್ಲಿ ಕೇಂದ್ರೀಯ ರೈಲ್ವೇ, ಪಶ್ಚಿಮ ವಲಯದ ರೈಲ್ವೇ ಹಾಗೂ ಹಾರ್ಬರ್ ಲೈನ್‍ನಲ್ಲಿ ಸುಮಾರು 101 ನೀರಿನ ಎಟಿಎಂಗಳನ್ನು ಕಂಪನಿ ಅಳವಡಿಸಿದೆ. ಅಲ್ಲದೆ ಮುಂಬೈನ ಅನೇಕ ಪೊಲೀಸ್ ಠಾಣೆಗಳಲ್ಲಿ ಸುಮಾರು 100 ನೀರಿನ ಎಟಿಎಂಗಳನ್ನು ಜನಜಲ್ ಕಂಪನಿ ಸ್ಥಾಪಿಸಿದೆ.