Tag: ಕೈಲ್ ಮುಹೂರ್ತ ಹಬ್ಬ

  • ಕೊಡಗಿನಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ- ಕಾಫಿನಾಡಿನ ಆಯುಧ ಪೂಜೆ

    ಕೊಡಗಿನಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ- ಕಾಫಿನಾಡಿನ ಆಯುಧ ಪೂಜೆ

    ಮಡಿಕೇರಿ: ವಿಶಿಷ್ಟ ಸಂಸ್ಕೃತಿಗೆ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲೀಗ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ. ಕೊಡವರ ಪ್ರಮುಖವಾದ ಹಬ್ಬ ಕೈಲ್ ಮೂಹೂರ್ತ ಹಬ್ಬ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳಿಂದ, ಕೊಡವ ಜನಾಂಗದಿಂದ ಹಬ್ಬದ ಆಚರಣೆ ಪ್ರಾರಂಭವಾಗಿದೆ. ಹಾಗೆಯೇ ಮಡಿಕೇರಿಯಲ್ಲೂ ಕೂಡ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 27ನೇ ವರ್ಷದ ಸಾರ್ವತ್ರಿಕ ಕೈಲ್ ಮೂಹೂರ್ತ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಸೆಪ್ಟೆಂಬರ್ ತಿಂಗಳು ಬಂದರೆ ಸಾಕು ಕೈಲ್ ಮುಹೂರ್ತ ಹಬ್ಬದ ತಿಂಗಳು ಎಂದರ್ಥ. ಈ ವೇಳೆ ಕೊಡಗು ಜಿಲ್ಲೆಯ ಮನೆ ಮನೆಗಳಲ್ಲಿ ಪಂದಿಕರಿ, ಕಡುಬು ಘಮಘಮಿಸುತ್ತವೆ. ಕೊಡಗಿನ ಆಯುಧ ಪೂಜೆ ಎಂದೇ ಕರೆಯಲ್ಪಡುವ ಈ ಕೈಲ್ ಮುಹೂರ್ತ ಹಬ್ಬವನ್ನ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಕೈಲ್ ಮುಹೂರ್ತ ಹಬ್ಬವನ್ನ ಕೊಡಗಿನಲ್ಲಿ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವಾಗಿ ಆಚರಿಸುವುದು ಇಲ್ಲಿನ ವಾಡಿಕೆ. ಕೃಷಿಗೆ ಪ್ರಧಾನ ಆದ್ಯತೆ ನೀಡಿರುವ ಕೊಡಗು ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಬಳಕೆಯಾದ ಉಪಕರಣಗಳಿಗೆ ಪೂಜೆ ಸಲ್ಲಿಸಿ ಈ ಹಬ್ಬವನ್ನ ಪ್ರಾರಂಭಿಸಲಾಗುತ್ತದೆ. ಇದನ್ನೂ ಓದಿ: ಸೆ.5 ರವರೆಗೆ ರಾಜ್ಯದ ಹಲವೆಡೆ ಮಳೆ – ಯೆಲ್ಲೋ ಅಲರ್ಟ್ ಘೋಷಣೆ

    ಹಿರಿಯರು, ಮಕ್ಕಳು, ಮಹಿಳೆಯರು, ಪುರುಷರು ಎಲ್ಲರೂ ಕೈಯಲ್ಲಿ ಗನ್ ಹಿಡಿದುಕೊಂಡು ಹಬ್ಬದ ಆಚರಣೆಗೆ ಬರುತ್ತಾರೆ. ರಕ್ಷಣೆಗೆ ಬಳಸುವ ಶಸ್ತ್ರಾಸ್ತ್ರಗಳನ್ನು ಹಿಡಿದು ಆಟವಾಡುತ್ತಾರೆ. ಕೊಡಗಿನ ಪ್ರಸಿದ್ಧ ಆಚರಣೆಗಳಲ್ಲೊಂದಾದ ಕೈಲ್ ಪೋಳ್ದ್ ಅಥವಾ ಕೈಲ್ ಮುಹೂರ್ತ್ ಹಬ್ಬದ ಸ್ಪೆಷಲ್ ಇದು. ಸೆಪ್ಟೆಂಬರ್‍ನಲ್ಲಿ ಆಚರಿಸುವ ಈ ಕೈಲ್ ಮೂಹರ್ತ ಹಬ್ಬದ ಅಂಗವಾಗಿ ಕೊಡಗಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಕೊಡವ ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಖುಷಿ ಪಡುತ್ತಾರೆ. ಈ ಕೈಲ್ ಮುಹೂರ್ತವನ್ನು ಜಿಲ್ಲೆಯಲ್ಲಿ ಇನ್ನು 15 ದಿನಗಳ ಕಾಲ ವಿಶಿಷ್ಟವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸುತ್ತಾರೆ.