Tag: ಕೈಗಾರಿಕೆ

  • ತಿಳಿದು ತಿಳಿದು ನಾಟಕ ಮಾಡೋದನ್ನು ಬಿಡಿ –  ಶೆಟ್ಟರ್‌ಗೆ  ಎಂಬಿಪಿ ಟಾಂಗ್

    ತಿಳಿದು ತಿಳಿದು ನಾಟಕ ಮಾಡೋದನ್ನು ಬಿಡಿ – ಶೆಟ್ಟರ್‌ಗೆ ಎಂಬಿಪಿ ಟಾಂಗ್

    ವಿಜಯಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಾಟಕ ಮಾಡುವುದನ್ನು ಬಿಡಬೇಕು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಟಾಂಗ್ ನೀಡಿದ್ದಾರೆ.

    ಜಿಂದಾಲ್ ಜಮೀನು ಮಾರಾಟ ಪ್ರಕರಣದಲ್ಲಿ ಮೈತ್ರಿ ಸರ್ಕಾರವನ್ನು ಜಗದೀಶ್ ಶೆಟ್ಟರ್ ಡೀಲ್ ಸರ್ಕಾರ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್ ಅವರು ತಿಳಿದು ತಿಳಿದು ನಾಟಕ ಮಾಡುವುದನ್ನು ಶೆಟ್ಟರ್ ಬಿಡಬೇಕು ಎಂದು ಹೇಳಿದ್ದಾರೆ.

    ಒಂದು ಎಕರೆಗೆ 1.20 ಲಕ್ಷ ಕಡಿಮೆ ನೀಡುವ ಪ್ರಶ್ನೆ ಬರುವುದಿಲ್ಲ. ಹಿಂದಿನ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಜಿಂದಾಲ್ ಅವರು ಕಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ತಿಳಿದು ತಿಳಿದು ನಾಟಕ ಮಾಡಬಾರದು. ನಮ್ಮ ರಾಜ್ಯದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ನಾವು ಈ ನಿರ್ಧಾರ ಮಾಡಿದ್ದೇವೆ. ಈ ವಿಚಾರದಲ್ಲಿ ಬೇಜವಾಬ್ದಾರಿಯುತವಾಗಿ ಮಾತನಾಡಬಾರದು ಎಂದು ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿ ಜಾರಿ ವಿಚಾರದ ಬಗ್ಗೆ ಕೇಳಿದಾಗ, ಜೂನ್ 10 ಸಂಜೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆಯನ್ನು ನಿಗದಿ ಮಾಡಲಾಗಿದೆ. ಔರಾದ್ಕರ್ ವರದಿ ಬಗ್ಗೆ ಸಮಗ್ರ ಚರ್ಚೆ ಮಾಡಲಾಗುವುದು.

    ಇದೇ ಸಭೆಯಲ್ಲಿ ಪೊಲೀಸ್ ಇಲಾಖೆಯ ರಜೆ ಕಡಿತ ಆಗಿರುವ ಬಗ್ಗೆ ಚರ್ಚೆ ಮಾಡಲಾಗುವುದು ಯಾವ ಪೊಲೀಸರು ಆತಂಕ ಪಡಬಾರದು. ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆ ಪಡುವ ಗೃಹ ಸಚಿವ ನಾನು. ಪೊಲೀಸರು ಬಹಳ ಕಷ್ಟದಿಂದ ದುಡಿಯುತ್ತಾರೆ. ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

  • ಡಿಕೆಶಿ ಮನೇಲಿ ತಿಂಡಿ ತಿಂದ್ದಿದ್ದು ಬೆಳ್ಳಿ ತಟ್ಟೆನೋ, ಯಾವ ತಟ್ಟೆನೋ ಅಂತ ಗೊತ್ತಿಲ್ಲ: ಕೆ.ಜೆ.ಜಾರ್ಜ್

    ಡಿಕೆಶಿ ಮನೇಲಿ ತಿಂಡಿ ತಿಂದ್ದಿದ್ದು ಬೆಳ್ಳಿ ತಟ್ಟೆನೋ, ಯಾವ ತಟ್ಟೆನೋ ಅಂತ ಗೊತ್ತಿಲ್ಲ: ಕೆ.ಜೆ.ಜಾರ್ಜ್

    ಕೋಲಾರ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ತಿಂಡಿ ಮಾಡಿದ್ದು ಬೆಳ್ಳಿ ತಟ್ಟೆಯೋ, ಯಾವ ತಟ್ಟೆಯೋ ಅಂತಾ ಗೊತ್ತಿಲ್ಲ ಎಂದು ಭಾರೀ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

    ವೇಮಗಲ್ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶಗಳಲ್ಲಿ ವಿವಿಧ ಕೈಗಾರಿಕೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ತಿಂಡಿ ಮಾಡಿದ್ದು ಬೆಳ್ಳಿ ತಟ್ಟೆನೋ, ಯಾವ ತಟ್ಟೆ ಅಂತಾ ಗೊತ್ತಿಲ್ಲ. ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರು. ಅವರಿಗೆ ಒಂದು ಸ್ಥಾನ ಇದೆ. ಹೀಗಾಗಿ ಬ್ರೇಕ್ ಫಾಸ್ಟ್‍ಗೆ ಹೋದ ಕಡೆಯೆಲ್ಲೆಲ್ಲಾ ಅವರನ್ನ ಕರೆಯಲು ಸಾಧ್ಯವಿಲ್ಲ. ನಿನ್ನೆ ಸಭೆ ನಡೆದಿಲ್ಲ. ಸಚಿವರುಗಳ ಮುಖಾಮುಖಿ ಚರ್ಚೆ ಅಷ್ಟೇ ಎನ್ನುವ ಮೂಲಕ ಸಿದ್ದರಾಮಯ್ಯನವರ ಗೈರಿಗೆ ಸಮಾಜಾಯಿಸಿ ನೀಡಿದರು.

    ಪಿ.ಆರ್.ಸ್ವಾಮಿ ಮನೆ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅದು ಎಸಿಬಿ ಕೆಲಸ ಯಾರು ತಪ್ಪು ಮಾಡುತ್ತಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಎಸಿಬಿ ಅಧಿಕಾರಿಗಳು ಸ್ವತಂತ್ರವಾಗಿ ಕ್ರಮ ಕೈಗೊಳ್ಳಲಿ ಎಂದರು.  ಇದನ್ನೂ ಓದಿ: ಡಿಕೆಶಿ ನಿವಾಸದಲ್ಲಿ ಬೆಳ್ಳಿ ತಟ್ಟೆ, ಕಪ್ ಗಳಲ್ಲಿ ಉಪಹಾರ ಸೇವಿಸಿದ ಕೈ ನಾಯಕರು

    ಸಿಎಂ ಕುಮಾರಸ್ವಾಮಿ ದೆಹಲಿ ಭೇಟಿಯಲ್ಲಿ ವಿಶೇಷ ಏನು ಇಲ್ಲ. ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಎಚ್‍ಡಿಕೆ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ನಾನು ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಲ್ಲ ಎಂದು ತಿಳಿಸಿದರು.

    ಇದೇ ವೇಳೆ ಬಿಬಿಎಂಪಿ ಉಪಮೇಯರ್ ರಮೀಳಾ ನಿಧನಕ್ಕೆ ಸಂತಾಪ ಸೂಚಿಸಿದ ಜಾರ್ಜ್, ರಮೀಳಾ ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ, ಅವರು ಒಳ್ಳೆಯ ಲೀಡರ್ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಶಾಲೆ ನಿರ್ಮಾಣ- ಸಚಿವ ಎಚ್‍ಡಿ ರೇವಣ್ಣ ಆಪ್ತನಿಂದ ದೋಖಾ

    ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಶಾಲೆ ನಿರ್ಮಾಣ- ಸಚಿವ ಎಚ್‍ಡಿ ರೇವಣ್ಣ ಆಪ್ತನಿಂದ ದೋಖಾ

    ಬೆಂಗಳೂರು: ಸಚಿವ ಎಚ್ ಡಿ ರೇವಣ್ಣ ಆಪ್ತರೊಬ್ಬರು ಕೆಐಎಡಿಬಿ ಮೂಲಕ ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಕಟ್ಟಡವನ್ನು ಕಟ್ಟಿರೋ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

    ಹೌದು. ಸಚಿವರ ಆಪ್ತ ಮಂಜೇ ಗೌಡ ಎಂಬವರು ಸುಮಾರು ಎರಡು ಎಕರೆಯಷ್ಟು ಜಮೀನನ್ನ ಕೈಗಾರಿಕೆಗೆ ಅಂತ ಪಡೆದು ಬೃಹತ್ ಸ್ಕೂಲ್ ಕಟ್ಟಿ ಇದೀಗ ಪೇಚಿಗೆ ಸಿಲುಕಿದ್ದಾರೆ.

    ಏನಿದು ಪ್ರಕರಣ?:
    ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಜಾಗದಲ್ಲಿ ಕಾಂಕ್ರೀಕ್ ಪ್ರಾಡಕ್ಟ್‍ನ ಕೈಗಾರಿಕೆ ನಿರ್ಮಾಣವಾಗ ಬೇಕಿತ್ತು. ಯಾಕಂದ್ರೆ 1992 ರಲ್ಲಿ ಕೆಐಎಡಿಬಿ ಕೈಗಾರಿಕೆ ನಿರ್ಮಾಣಕ್ಕೆ ಅಂತ ರವಿಶಂಕರ್ ಗೌಡ ಅವರಿಗೆ ಜಮೀನು ಮಂಜೂರು ಮಾಡಿತ್ತು. ಆದ್ರೆ ರವಿಶಂಕರ್ ಗೌಡ ಯಾವುದೇ ಕೈಗಾರಿಕೆ ನಿರ್ಮಿಸದೇ 2004 ರಲ್ಲಿ ಇದೇ ಜಮೀನನ್ನ ರೇವಣ್ಣ ಆಪ್ತ ಮಂಜೇಗೌಡರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.

    ಮಂಜೇಗೌಡ ಕೂಡ ಕೈಗಾರಿಗೆ ನಡೆಸುವ ಬದಲು ಸ್ಕೂಲ್ ಕಟ್ಟಿದ್ರು. ಸುತ್ತಮುತ್ತ ಕೈಗಾರಿಕೆ ಪ್ರದೇಶವಾಗಿರೋದ್ರಿಂದ ಮಕ್ಕಳ ಜೀವಕ್ಕೆ ಅಪಾಯವಿದೆ. ಮಕ್ಕಳ ಹಕ್ಕನ್ನ ರಕ್ಷಿಸಿ ಎಂದು ಮಕ್ಕಳ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ದೂರು ನೀಡಿದ್ರು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಸ್ಥಳ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ. ಕೈಗಾರಿಕೆ ಮಾಡಬೇಕಾದ ಜಾಗದಲ್ಲಿ ಶಾಲೆ ಹೇಗೆ ಕಟ್ಟಿದ್ದೀರಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.

    1,300 ಮಕ್ಕಳ ಜೀವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಕ್ಕಳ ಹಕ್ಕು ಆಯೋಗ, ಇತ್ತ ಬಿಬಿಎಂಪಿ, ಬಿಡಿಎ, ಶಿಕ್ಷಣ ಇಲಾಖೆಗೆ ನೊಟೀಸ್ ನೀಡಿದೆ. ಈ ಶಾಲೆಯ ಮಾಲೀಕ ಡಾ. ಮಂಜೇಗೌಡ ಮೂಲತಃ ಹಾಸನದವರಾಗಿದ್ದಾರೆ. ಪಿಡಬ್ಲುಡಿ ಎಂಜಿನಿಯರ್ ಆಗಿರುವ ಇವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲಮಂಡಳಿ ಬೋರ್ಡ್ ಮೆಂಬರ್ ಕೂಡ ಆಗಿದ್ರು. ಇದೆಲ್ಲಾ ಪ್ರಭಾವ ಬಳಸಿಯೇ ಇಷ್ಟೆಲ್ಲಾ ಅಕ್ರಮ ನಡೆಸಿದ್ದಾರೆಂದು ಆರ್‍ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ.