Tag: ಕೈಗಾರಿಕೆಗಳು

  • ರೋಗಗ್ರಸ್ಥ ನಿಗಮ ಪುನಶ್ಚೇತನಕ್ಕೆ ವಿನೂತನ ಯೋಜನೆ: ನಿರಾಣಿ

    ರೋಗಗ್ರಸ್ಥ ನಿಗಮ ಪುನಶ್ಚೇತನಕ್ಕೆ ವಿನೂತನ ಯೋಜನೆ: ನಿರಾಣಿ

    ಬೆಂಗಳೂರು: ರೋಗಗ್ರಸ್ಥ ನಿಗಮಗಳಲ್ಲಿ ಬಂಡವಾಳವನ್ನು ಹಿಂತೆಗೆದುಕೊಂಡು ಪುನಶ್ಚೇತನಗೊಳಿಸಿ ಲಾಭದತ್ತ ಕೊಂಡೊಯ್ಯಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದರು.

    ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಸಿಮೆಂಟ್ ಕಾರ್ಪೋರೇಷನ್, ಮೈಶುಗರ್, ಮೈಸೂರು ಪೇಪರ್ ಮಿಲ್ಸ್ ಸೇರಿದಂತೆ ಹಲವಾರು ನಿಗಮಗಳು ಮತ್ತು ಸಂಸ್ಥೆಗಳು ನಷ್ಟದ ಹಾದಿಯಲ್ಲಿವೆ. ತಾವು ಎರಡು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಿ ಇವುಗಳನ್ನು ಯಾವ ರೀತಿ ಪುನಶ್ಚೇತನ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

    ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕೈಗಾರಿಕೆಗಳನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಸಾಧ್ಯವಾದಷ್ಟು ಕೈಗಾರಿಕೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ರಾಜ್ಯದಲ್ಲಿರುವ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಕೈಗಾರಿಕಾ ಉದ್ಯೋಗ ಕ್ರಾಂತಿ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

    ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಜಮೀನನ್ನು ಉದ್ಯಮಿಗಳು ಯಾವ ಕಾರಣಕ್ಕೆ ಪಡೆದಿದ್ದಾರೋ ಅದೇ ಉದ್ದೇಶಕ್ಕೆ ಬಳಸಬೇಕು. ಒಂದು ವೇಳೆ ಇದು ಎಲ್ಲಿಯಾದರೂ ದುರುಪಯೋಗವಾಗಿದ್ದರೆ ಸಮೀಕ್ಷೆ ನಡೆಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಕೆಐಎಡಿಬಿಯಿಂದ ಪಡೆದುಕೊಂಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಅದನ್ನು ನಾವು ಸೇಲ್ ಡೀಡ್ ಮಾಡಿರುವುದಿಲ್ಲ. ಒಂದು ವೇಳೆ ಅನ್ಯ ಕಾರಣಗಳಿಗೆ ಜಮೀನನ್ನು ಬಳಸಿಕೊಂಡಿದ್ದರೆ ತನಿಖೆಗೆ ಆದೇಶಿಸುತ್ತೇನೆ ಎಂದು ನಿರಾಣಿ ಪ್ರಕಟಿಸಿದರು.

    ಕೆಜಿಎಫ್‍ನಲ್ಲಿ ಕೈಗಾರಿಕಾ ಟೌನ್‍ಶಿಪ್: ಮುಂದಿನ ದಿನಗಳಲ್ಲಿ ಉತ್ತಮವಾದ ಕೈಗಾರಿಕಾ ವಾತಾವರಣ ಮೂಡಿಸುವ ಸಂಬಂಧ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕೋಲಾರ ಜಿಲ್ಲೆ ಕೆಜಿಎಫ್ ಬಳಿ 3 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಇದೆ. ಈ ಹಿಂದೆ ಇಲ್ಲಿ ಹೆಚ್ಚಿನ ಪ್ರಮಾಣದ ಬಂಗಾರ ಚಿನ್ನ ಸಿಗುತ್ತಿತ್ತು. ಒಂದು ಟನ್ ಗಣಿಗಾರಿಕೆಗೆ 40 ಗ್ರಾಂ ಚಿನ್ನ ಸಿಗುತ್ತಿತ್ತು. ಈಗ ಅದರ ಪ್ರಮಾಣ ಕಡಿಮೆಯಾಗಿದೆ. ಸುಮಾರು 3,200 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇಲ್ಲ ಎಂದು ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಹೀಗಾಗಿ ಜಮೀನನ್ನು ನಮಗೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ಬಂದಿದೆ. ಕೈಗಾರಿಕೆ ಬಳಕೆಗೆ ನೀಡಿದರೆ ನಾವು ಕೈಗಾರಿಕಾ ಟೌನ್‍ಶಿಪ್ ಮಾಡಲಿದ್ದೇವೆ ಎಂದು ಘೋಷಿಸಿದರು.

    ಈ ಹಿಂದೆ ನಾನು ಐದು ವರ್ಷ ಕೈಗಾರಿಕಾ ಸಚಿವನಾಗಿದ್ದ ವೇಳೆ ಉತ್ತಮವಾದ ಕೆಲಸ ಮಾಡಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗಿತ್ತು. ಸುಮಾರು 11.8 ಲಕ್ಷ ಕೋಟಿ ರೂ. ಬಂಡವಾಳವನ್ನು ಹೂಡಲಾಗಿತ್ತು. ಇದರಿಂದ 15 ಲಕ್ಷ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲಾಗಿದೆ. ಮೊದಲ ಬಾರಿಗೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಿ ಕೃಷಿಗೆ ಯೋಗ್ಯವಲ್ಲದ ಜಮೀನನ್ನು ವಶಪಡಿಸಿಕೊಂಡು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಸುಮಾರು 1.25 ಲಕ್ಷ ರೂ. ಪರಿಹಾರವನ್ನು ನೀಡಲಾಗುತ್ತಿತ್ತು. ಇದರ ಪರಿಣಾಮ ಉದ್ದಿಮೆದಾರರಿಗೆ ಸುಲಭವಾಗಿ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಯಿತು ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಅದಾಲತ್ ಗಳನ್ನು ನಡೆಸಲಾಗುವುದು. ನಮ್ಮ ಸರ್ಕಾರ ಉದ್ದಿಮೆದಾರರ ಮನೆ ಬಾಗಿಲಿಗೆ ಹೋಗಲಿದೆ. ಉದ್ದಿಮೆಯಾಗಿ ಉದ್ಯೋಗ ಎಂಬ ಕೈಗನ್ನಡಿಯೊಂದಿಗೆ ಐಟಿಐ, ಬಿಎ, ಬಿಕಾಂ, ಬಿಎಸ್ಸಿ, ಎಂಸ್ಸಿ, ಎಂಕಾಮ್, ಪಿಎಚ್‍ಡಿ ವಿದ್ಯಾವಂತರಿಗೆ ಉದ್ಯೋಗ ನೀಡುವುದೇ ನನ್ನ ಮೊದಲ ಗುರಿ ಎಂದು ಹೇಳಿದರು.

    ಕೇಂದ್ರ ಸರ್ಕಾರವು ಇನ್ವೆಸ್ಟ್ ಇಂಡಿಯಾ ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ. ದೇಶ, ವಿದೇಶಗಳಿಂದ ಬಂಡವಾಳ ಹೂಡಿಕೆ ಮಾಡಲು ಬರುವವರಿಗೆ ಇಲ್ಲಿ ಸಮಗ್ರವಾದ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯದಿಂದಲೂ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು, ಇಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಒದಗಿಸಲಾಗುವುದು. ಕರ್ನಾಟಕ ಕೂಡ ಇನ್ವೆಸ್ಟ್ ಇಂಡಿಯಾದಲ್ಲಿ ಪಾಲುದಾರ ರಾಜ್ಯವಾಗಿದೆ ಎಂದು ಮಾಹಿತಿ ಒದಗಿಸಿದರು.

    ಮೈಸೂರು ಲ್ಯಾಂಪ್ಸ್ ಬಳಿ 21 ಎಕರೆ ಜಾಗವಿದ್ದು, ಅಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದ್ದು, ಇದೇ 19ರಂದು ಭೂಮಿ ಪೂಜೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಎನ್‍ಜಿಎನಲ್ಲಿ ಜಮೀನಿದ್ದು, ಅಲ್ಲಿ ಪಾರ್ಕ್ ಮಾಡುವ ಉದ್ದೇಶವಿದೆ ಎಂದು ಹೇಳಿದರು. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ಕನ್ನಡಿಗ ರಾಹುಲ್ ಅಬ್ಬರ

    ಕೈಗಾರಿಕಾ ಇಲಾಖೆಯಲ್ಲಿ ನನ್ನ ಅನುಭವದ ಜತೆಗೆ ಹಿಂದಿನ ಸಚಿವರಾದ ಜಗದೀಶ್ ಶೆಟ್ಟರ್ ಅವರ ಅನುಭವದ ಮಾರ್ಗದರ್ಶನ ಪಡೆದುಕೊಂಡು ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು. 2008 ಮತ್ತು 2013ರಲ್ಲಿ ಇಡೀ ಜಗತ್ತು ಕರ್ನಾಟಕದತ್ತ ನೋಡುವಂತೆ ಕೈಗಾರಿಕೆಯನ್ನು ನಿರ್ವಹಣೆ ಮಾಡಿದ್ದೆವು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಉಳಿದ 20 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡುತ್ತೇವೆ ಎಂದು ಹೇಳಿದ ಅವರು, ಗುಡಿ ಕೈಗಾರಿಕೆಯಿಂದ ಬೃಹತ್ ಕೈಗಾರಿಕೆವರೆಗೆ ಹೆಚ್ಚು ಆದ್ಯತೆ ಕೊಡಲಾಗುತ್ತದೆ. ಪ್ರಧಾನಿ ಮೋದಿ ಅವರು ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸ್ಟಾರ್ಟಪ್ ಗಳಿಗೆ ಉತ್ತೇಜನ ನೀಡಿದ್ದಾರೆ. ಅದೇ ನಿಟ್ಟಿನಲ್ಲಿ ನಾವು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಶಪಥ ಮಾಡಿದರು. ಇದನ್ನೂ ಓದಿ: ಸದ್ಯದಲ್ಲೇ ಕೆಜಿಎಫ್ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್‍ಶಿಪ್

    ಹೂಡಿಕೆದಾರರ ಸಮಾವೇಶ ಮುಂದೂಡಿಕೆ?: ರಾಜ್ಯದಲ್ಲಿ ಕೋವಿಡ್-19 ಇರುವ ಕಾರಣ ಬಹುನಿರೀಕ್ಷಿತ ಬಂಡವಾಳದಾರರ ಸಮಾವೇಶ ಮುಂದೂಡುವ ಮುನ್ಸೂಚನೆಯನ್ನು ಸಚಿವ ಮುರುಗೇಶ್ ನಿರಾಣಿ ನೀಡಿದ್ದಾರೆ. ಈಗಾಗಲೇ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಆರು ತಿಂಗಳ ಅವಧಿಯಲ್ಲಿ ಯಶಸ್ವಿಯಾಗಿ ಮಾಡಲು ಆಗುತ್ತದೆಯೋ ಇಲ್ಲವೋ ಎಂಬ ಅನುಮಾನುವನ್ನು ವ್ಯಕ್ತಪಡಿಸಿದರು. ಈ ಸಂಬಂಧ ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ- ಸರ್ಕಾರದಿಂದ ಘೋಷಣೆ

    ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ- ಸರ್ಕಾರದಿಂದ ಘೋಷಣೆ

    – ಮುಂಗಾರು ಚುರುಕು ಹಿನ್ನೆಲೆ ಕ್ರಮ

    ಬೆಂಗಳೂರು: ಕೇರಳಕ್ಕೆ ನಾಳೆ ಮಾನ್ಸೂನ್ ಮಾರುತಗಳು ಪ್ರವೇಶಿಸಲಿದ್ದು, ಈ ಹಿನ್ನೆಲೆ ಭಾರೀ ಮಳೆಯಾಗುತ್ತಿದೆ. ರಾಜ್ಯದಲ್ಲಿ ಸಹ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಹೀಗಾಗಿ ಮುಂಗಾರು ಹಂಗಾಮಿಗೆ ರೈತರು ಭರ್ಜರಿ ಸಿದ್ಧತೆ ನಡೆಸಿದ್ದು, ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅಂಗಡಿಗಳ ಮುಂದೆರ ಸಾಲು ಹೆಚ್ಚುತ್ತಿದೆ. ಉದನ್ನು ಮನಗಂಡ ಸರ್ಕಾರ ರಸಗೊಬ್ಬರ ಸಾಗಣೆ ಹಾಗೂ ಮಾರಾಟಕ್ಕೆ ಅನುಮತಿ ನೀಡಿದೆ.

    ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಬೆ. 6 ರಿಂದ ಸಂಜೆ 6 ಗಂಟೆಯವರೆಗೆ ರಸಗೊಬ್ಬರ ಸಾಗಾಟ, ಮಾರಾಟಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ರೈತರು ಬೆಳಗ್ಗೆ ಬೇಗ ತೆರಳಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ತಪ್ಪಿದಂತಾಗುತ್ತದೆ. ಇದನ್ನೂ ಓದಿ: ಮುಂಗಾರು ಆರಂಭ- ಬೀಜ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

    ಮತ್ತೊಂದು ಮಹತ್ವದ ಘೋಷಣೆ ಮಾಡಿರುವ ಸರ್ಕಾರ, ರಫ್ತು ವಲಯದ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್ ಗಳ ಕಾರ್ಯಾಚರಣೆಗೆ ಷರತ್ತುಬದ್ಧ ಅನುಮತಿ ನೀಡಿದೆ. ಶೇ.50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಸಮ್ಮತಿಸಿದೆ. 1,000 ಕಾರ್ಮಿಕರ ಮೇಲಿರುವ ಕೈಗಾರಿಕೆಗಳಲ್ಲಿ ಶೇ.10ರಷ್ಟು ಕಾರ್ಮಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದ್ದು, ವಾರಕ್ಕೆ ಎರಡು ಬಾರಿ ಟೆಸ್ಟ್ ಮಾಡಬೇಕು ಎಂದು ಷರತ್ತುಬದ್ಧ ಅನುಮತಿ ನೀಡಿದೆ.

  • ಕೊರೊನಾ ನಿಗ್ರಹಕ್ಕೆ ಉದ್ಯಮಿಗಳಿಂದ ಸಣ್ಣ ಕೈಗಾರಿಕೆಗಳಿಗೆ ನೆರವು

    ಕೊರೊನಾ ನಿಗ್ರಹಕ್ಕೆ ಉದ್ಯಮಿಗಳಿಂದ ಸಣ್ಣ ಕೈಗಾರಿಕೆಗಳಿಗೆ ನೆರವು

    ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದ ವಿವಿಧ ಸಣ್ಣ ಕೈಗಾರಿಕೆಗಳಿಗೆ ವಿವಿಧ ಉದ್ಯಮಿಗಳಿಂದ ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸ್ಟ್ಯಾಂಡ್ ಮುಂತಾದ ವಸ್ತುಗಳನ್ನು ಉಚಿತವಾಗಿ ನೀಡಲಾಯಿತು.

    ಈ ವೇಳೆ ಕಾಸಿಯಾ ಅಧ್ಯಕ್ಷ ಅರಸಪ್ಪ ಕೆ.ಬಿ.ಮಾತನಾಡಿ, ಈ ಕೊರೊನಾ ಸಂದರ್ಭದಲ್ಲಿ ಕೆಲವು ಸಣ್ಣ ಕೈಗಾರಿಕೆಗಳಿಗೆ ಭೇಟಿ ನೀಡಿ ಅವರಿಗೆ ತೊಂದರೆ ಆದ ಕಾರಣ ಕೆಲವು ದಾನಿಗಳಿಂದ ಸಹಾಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯ ನೀಡಲಿದ್ದೇವೆ. ನಮ್ಮ ಕೈಗಾರಿಕೆಗಳಲ್ಲಿ ಇದುವರೆಗೂ ಒಂದೂ ಪಾಸಿಟಿವ್ ಕೇಸ್ ಬಂದಿಲ್ಲ. ಈಗ ನೂರರಷ್ಟು ಕೆಲಸ ನಡೆಯುತ್ತಿಲ್ಲ ಜನರು ಊರುಗಳಿಗೆ ಹೋಗಿದ್ದಾರೆ ಮತ್ತೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರತಿ ವಾರಕ್ಕೊಮ್ಮೆ ಕಂಪನಿಗೆ ಸ್ಯಾನಿ ಟೈಸ್ ಮಾಡಲಾಗುತ್ತಿದ್ದು, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಬರದಂತೆ ತಡೆದರೆ ಮತ್ತೆ ಕಂಪನಿಗಳಿಗೆ ಕೆಲಸಕ್ಕೆ ಬರಬಹುದು ಎನ್ನುವ ಉದ್ದೇಶ ನಮ್ಮದು ಎಂದರು.

    ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಆಸ್ರಣ್ಣ ಮಾತನಾಡಿ, ಈ ಭಾಗದ ಕೆಲವು ಉದ್ಯಮಿಗಳು ಸಣ್ಣ ಕೈಗಾರಿಕೆಗಳಿಗೆ ಕೊರೊನಾ ನಿಗ್ರಹಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತಿದ್ದಾರೆ ಇದು ಒಳ್ಳೆಯ ಸಂಗತಿ ಎಂದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಮಲ್ಲೇಶ್ ಗೌಡ, ಮಂಜುನಾಥ್, ಗಿರೀಶ್ ಗೌಡ್ರು ಮುಂತಾದವರು ಇದ್ದರು.

  • ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

    ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

    ಅಮರಾವತಿ: ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೆಗಳಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯ ಯುವಜನತೆಗೆ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸ್ಥಳೀಯ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಿರಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸೋಮವಾರ ನಡೆದ ಅಧಿವೇಶನದಲ್ಲಿ ಆಂಧ್ರ ಪ್ರದೇಶದ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ-2019 ಸಂಬಂಧಿಸಿದ ಮಸೂದೆ ಪಾಸ್ ಆಗಿದೆ.

    ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಕೈಗಾರಿಕೆಗಳು, ಫ್ಯಾಕ್ಟರಿಗಳು, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಜಂಟಿ ಉದ್ಯಮಗಳು ಹಾಗೂ ಯೋಜನೆಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75 ರಷ್ಟು ಉದ್ಯೋಗ ಮೀಸಲಿಡಬೇಕು ಎನ್ನವ ಅಂಶ ಒಳಗೊಂಡಿದೆ. ಅಷ್ಟೇ ಅಲ್ಲದೇ ಖಾಸಗಿ ಸಂಸ್ಥೆಗಳು ಸ್ಥಳೀಯ ಯುವಜನತೆಯಲ್ಲಿ ಕೌಶಲ್ಯವಿಲ್ಲ ಎಂದು ದೂರುವಂತಿಲ್ಲ. ಸರ್ಕಾರದ ಸಹಭಾಗಿತ್ವದಲ್ಲಿ ಅವರಿಗೆ ತರಬೇತಿ ನೀಡಬೇಕಾಗುತ್ತದೆ.

    ಈ ಹಿಂದೆ ಜಗನ್ ಮೋಹನ್ ರೆಡ್ಡಿ ಅವರು ಪಾದಯಾತ್ರೆ ವೇಳೆ ಈ ಭರವಸೆಯನ್ನು ನೀಡಿದ್ದರು. ಚುನಾವಣೆಯ ವೇಳೆ ಜಗನ್ ಅವರ ಪ್ರಣಾಳಿಕೆಯ ಅಂಶ ಕೂಡ ಆಗಿತ್ತು.

    ಕಾಯ್ದೆ ಜಾರಿಯಾದ ಬಳಿಕ ಆಂಧ್ರ ಪ್ರದೇಶದ 1.33 ಲಕ್ಷ ಗ್ರಾಮಗಳಲ್ಲಿ ಯುವಜನತೆ ಉದ್ಯೋಗಿಗಳಾಗುತ್ತಾರೆ. ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಯುವಜನತೆಗೆ ಉದ್ಯೋಗ ನೀಡುವ ಕೋಟಾವನ್ನು ಶೀಘ್ರ ಜಾರಿಗೆ ತರಬೇಕು ಎಂದು ತಿಳಿಸಿದರು.

    ಹಲವು ರಾಜ್ಯಗಳು ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಸ್ಥಳೀಯ ಯುವಜನತೆಗೆ ಉದ್ಯೋಗ ಕಾಯ್ದಿರಿಸುವ ಕಲ್ಪನೆಯನ್ನು ಮುಂದಿಟ್ಟಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಮೀಸಲಿರಿಸುವ ಕಾನೂನು ರೂಪಿಸುವ ಭರವಸೆಯನ್ನು ನೀಡಿದ್ದಾರೆ.

  • ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

    ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

    ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲು ವಿಫಲವಾಗಿದೆ. ಅಭಿವೃದ್ಧಿ ಅಂತ ಹೇಳುತ್ತೆ ಆದ್ರೆ ಎಲ್ಲಿಯು ಅಭಿವೃದ್ಧಿ ಕಾಣುತ್ತಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಆರ್ಥಿಕ ನೀತಿಗಳು ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮಗಳನ್ನು ಬೀರುತ್ತದೆ. ಕೇಂದ್ರದ ನೋಟು ನಿಷೇಧ ಮತ್ತು ಜಿಎಸ್‍ಟಿ ಅನುಷ್ಠಾನದಲ್ಲಿ ಆಗಿರುವ ನ್ಯೂನತೆಗಳಿಂದ ಜನರು ಹೆಚ್ಚು ಸಮಸ್ಯೆಗೀಡಾಗಿದ್ದಾರೆ. ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ನಿರ್ಧಾರದಿಂದ ಮಧ್ಯಮ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳು ಅವನತಿಯತ್ತ ಹೋಗಿವೆ. ನಮ್ಮ ಸರ್ಕಾರ ಇದ್ದಾಗ ಪೆಟ್ರೋಲ್ ದರ ತುಂಬ ಕಡಿಮೆಯಿತ್ತು. ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದೆ. ಹೆಚ್ಚು ತೆರಿಗೆಯನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ದೇಶದ ಜನರಿಗೆ ಉತ್ತರಿಸಬೇಕಾಗಿದೆ ಎಂದು ಕಿಡಿಕಾರಿದರು.

    ಕಳೆದ 4 ವರ್ಷಗಳಿಂದ ಮೋದಿಯವರು ಕಾಂಗ್ರೆಸ್ ಸರ್ಕಾರವನ್ನ ತೆಗಳುವ ಕೆಲಸ ಬಿಟ್ರೆ ಬೇರೆನೂ ಮಾಡಿಲ್ಲ. ದೇಶದ ಕೃಷಿ ಬೆಳವಣಿಗೆಗೆ ಒತ್ತು ನೀಡದೇ ಇರುವುದರಿಂದ ಆ ಕ್ಷೇತ್ರದ ಬೆಳವಣಿಗೆ ಹಿನ್ನೆಡೆ ಕಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಯುವಕರ ಸಂಖ್ಯೆ ಜಾಸ್ತಿ ಇದೆ, ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್. ಟೆಂಡರ್ ಶ್ಯೂರ್ ರಸ್ತೆಗಳು ಪ್ರಪಂಚದಲ್ಲಿಯೇ ಹೆಸರು ಮಾಡಿದೆ. ಮೆಟ್ರೊಗಾಗಿ ಹೆಚ್ಚಿನ ಅನುದಾನವನ್ನ ರಾಜ್ಯ ಸರ್ಕಾರ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಕೈಗಾರಿಕೆಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಒತ್ತು ನೀಡಿದೆ. ಗುಜರಾತ್‍ಗಿಂತ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂದೆ ಇದೆ. ಉದ್ಯೋಗ ಸೃಷ್ಟಿಯಲ್ಲೂ ಸಹ ದೇಶಕ್ಕೆ ಬೆಂಗಳೂರು ಮಾದರಿಯಾಗಿದೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಬಿಜೆಪಿಯವರ ಕಣ್ಣಿಗೆ ಕಂಡಿಲ್ಲ ಎಂದು ಲೇವಡಿಮಾಡಿದರು.