Tag: ಕೇರಳ

  • 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

    20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

    ತಿರುವನಂತಪುರಂ: ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಫ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ. ಸದ್ಯ ಚೊಟ್ಟನಿಕ್ಕಾರ ಪೊಲೀಸರು (Chottanikkara Police) ಕೊಲೆ ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಅಸ್ತಿಯನ್ನು ಮಾನವನ ಮೂಳೆಗಳು (Human Skeleton) ಎಂದು ಗುರುತಿಸಲಾಗಿದೆ. ಫೋರೆನ್ಸಿಕ್ ವಿಶ್ಲೇಷಣೆಯ ಮೂಲಕ ನಿಖರವಾದ ವಯಸ್ಸನ್ನು ಪರಿಶೀಲಿಸಬೇಕಾಗಿದೆ ಎಂದಿರುವ ಪೊಲೀಸರು ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿಯೂ ಬಳಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    ವಿಧಿವಿಜ್ಞಾನ ತಂಡವು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳನ್ನು ಪರೀಕ್ಷಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದೆ. ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇದೆ. ಅಸ್ಥಿಪಂಜರ, ತಲೆಬುರುಡೆ ಮಹಿಳೆಯರದ್ದು, ಆದರೆ ಅವುಗಳು ಒಬ್ಬರದ್ದಲ್ಲ. ಅವುಗಳ ವಯಸ್ಸು ಮತ್ತು ಮೂಲವನ್ನು ಪತ್ತೆ ಹಚ್ಚುವುದು ಕಠಿಣವಾದರೂ ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿ ಮೂಲದ ಮಹಿಳೆ ದುರ್ಮರಣ

    ಎರುವೇಲಿ ಪೂರ್ವದ ಚೊಟ್ಟಣಿಕ್ಕರ ಅರಮನೆ ಚೌಕದಲ್ಲಿರುವ 12 ಎಕರೆ ಜಾಗದಲ್ಲಿ ಪಾಳು ಬಿದ್ದ ಮನೆಯಿದೆ. ಈ ಆಸ್ತಿ ವೈದ್ಯ ಮಂಗಳಶ್ಶೇರಿ ಫಿಲಿಪ್ ಜಾನ್ ಅವರಿಗೆ ಸೇರಿದ್ದಾಗಿದೆ. ಕಳೆದ 20 ವರ್ಷಗಳಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಆದರೂ ಮನೆಗೆ ಮೂಳೆಗಳು ಹೇಗೆ ಬಂದಿವೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮನೆಯ ಮಾಲೀಕರು, ವೈದ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 6 ತಿಂಗಳ ಬಳಿಕ ಮುಖಾಮುಖಿಯಾಗಲಿದ್ದಾರೆ ದರ್ಶನ್‌- ಪವಿತ್ರಾ ಗೌಡ

    ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಾ ಧರ್ಮರಾಜನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಮೂಳೆಗಳು ಪತ್ತೆಯಾದ ನಂತರ ಚೊಟ್ಟನಿಕ್ಕರ ಪೊಲೀಸರು ಬಿಎನ್ಎಸ್ ಕಾಯ್ದೆಯಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.

  • ಜಾತ್ರೆಯಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ – ಎದ್ನೋ, ಬಿದ್ನೋ ಅಂತ ಓಡಿದ ಜನ

    ಜಾತ್ರೆಯಲ್ಲಿ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ – ಎದ್ನೋ, ಬಿದ್ನೋ ಅಂತ ಓಡಿದ ಜನ

    – 29 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ತಿರುವನಂತಪುರಂ: ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು (Elephant) ನಿಯಂತ್ರಣ ಕಳೆದುಕೊಂಡು ಏಕಾಏಕಿ ಜನರ ಗುಂಪಿನ ಮೇಲೆ ದಾಳಿ ನಡೆಸಿದ ಪರಿಣಾಮ 29 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ (Malappuram) ಜಿಲ್ಲೆಯ ತಿರೂರಿನಲ್ಲಿ ನಡೆದಿದೆ.

    ವಾದ್ಯಗಳ ಸದ್ದು, ಜನರ ಗದ್ದಲದ ನಡುವೆ ನಿಯಂತ್ರಣ ಕಳೆದುಕೊಂಡ ಪಾಕ್ಕಾತು ಶ್ರೀಕುಟ್ಟನ್ (Paakkath Sreekuttan) ಹೆಸರಿನ ಆನೆ, ವ್ಯಕ್ತಿಯೊಬ್ಬನನ್ನ ಎತ್ತಿ ಎಸೆದಿದೆ. ಈ ವೇಳೆ ಗುಂಪಿನಲ್ಲಿದ್ದ ಜನ ಎದ್ನೋ ಬಿದ್ನೋ ಅಂತ ಓಡಿದ್ದಾರೆ. ಕೆಲವರು ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

    ನಸುಕಿನ 2:30ರ ಸುಮಾರಿಗೆ ಮಾವುತ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಘಟನೆಯಲ್ಲಿ ಸುಮಾರು 29 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

    ತಿರೂರಿನಲ್ಲಿ ನಡೆದ ಪುತಿಯಂಗಡಿ ಉತ್ಸವದಲ್ಲಿ ನೂರಾರು ಮಂದಿ ನೆರೆದಿದ್ದರು. ಉತ್ಸವದಲ್ಲಿ ಕನಿಷ್ಠ ಐದು ಆನೆಗಳು ಅಂಲಕಾರಭೂಷಿತವಾಗಿ ಪಾಲ್ಗೊಂಡಿದ್ದವು. ಈ ವೇಳೆ ಹಠಾತ್ತನೆ ಜನರ ಕಡೆಗೆ ನುಗ್ಗಿದ್ದ ಪಾಕ್ಕಾತು ಶ್ರೀಕುಟ್ಟನ್ ಹೆಸರಿನ ಆನೆ ದಾಳಿ ನಡೆಸಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಮೂಲಗಳ ಪ್ರಕಾರ, ಆನೆ ದಾಳಿಗೆ ಒಳಗಾದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

  • ಕರ್ನಾಟಕದ ಅಯ್ಯಪ್ಪ ಭಕ್ತರೇ ಗಮನಿಸಿ.. ಶಬರಿಮಲೆ ದರ್ಶನಕ್ಕೆ ಸ್ಪಾಟ್‌ ಬುಕಿಂಗ್‌ ದಿನಕ್ಕೆ 5,000 ಜನರಿಗೆ ಮಾತ್ರ

    ಕರ್ನಾಟಕದ ಅಯ್ಯಪ್ಪ ಭಕ್ತರೇ ಗಮನಿಸಿ.. ಶಬರಿಮಲೆ ದರ್ಶನಕ್ಕೆ ಸ್ಪಾಟ್‌ ಬುಕಿಂಗ್‌ ದಿನಕ್ಕೆ 5,000 ಜನರಿಗೆ ಮಾತ್ರ

    ತಿರುವನಂತಪುರಂ: ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ (Sabarimala) ಸಂಭವಿಸುವ ಮಕರ ಜ್ಯೋತಿಯನ್ನು (ಮಕರವಿಳಕ್ಕು) ಕಣ್ತುಂಬಿಕೊಳ್ಳಲು ಅಯ್ಯಪ್ಪ ಭಕ್ತರು ಕಾತರರಾಗಿದ್ದಾರೆ. ಹೀಗಾಗಿ, ಶಬರಿಮಲೆಗೆ ಭಕ್ತರ ದಂಡೇ ಆಗಮಿಸುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಶಬರಿಮಲೆ ದರ್ಶನಕ್ಕೆ ಬರುವ ಭಕ್ತರಿಗೆ ಸ್ಪಾಟ್‌ ಬುಕಿಂಗ್‌ ಅನ್ನು 5,000ಕ್ಕೆ ಮಿತಿಗೊಳಿಸಲಾಗಿದೆ.

    ಮಕರ ಜ್ಯೋತಿಯನ್ನು (Makarajyothi) ಕಣ್ತುಂಬಿಕೊಳ್ಳಲು ಶಬರಿಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆಗ, ಶಬರಿಮಲೆಯಲ್ಲಿ ಭಕ್ತಾದಿಗಳ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸನ್ನಿಧಾನಂನಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ನಾಳೆಯಿಂದ (ಜ.8) ಜನವರಿ 15ರ ವರೆಗೆ ದಿನಕ್ಕೆ 5000 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ಸನ್ ಗ್ಲಾಸ್ ಕ್ಯಾಮೆರಾ ಬಳಸಿ ರಾಮಜನ್ಮಭೂಮಿಯ ಚಿತ್ರೀಕರಣ – ಆರೋಪಿ ಅರೆಸ್ಟ್‌

    ಶಬರಿಮಲೆಯಲ್ಲಿ ಹಬ್ಬ ಹರಿದಿನಗಳಲ್ಲಿ ಜನಸಂದಣಿ ನಿರ್ವಹಣೆಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ದೇವಸ್ವಂ ಬೋರ್ಡ್ ವೆಬ್‌ಸೈಟ್‌ನಲ್ಲಿ ಜ.12 ರಂದು 60,000, ಜ.13 ರಂದು 50,000 ಮತ್ತು ಜ.14 ರಂದು 40,000 ಎಂದು ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಅನ್ನು ನಿಗದಿಪಡಿಸಲಾಗಿದೆ. ಮಕರ ಜ್ಯೋತಿ ದಿನ (ಜ.14) ಬೆಟ್ಟದ ಮೇಲೆ ಬಿಡಾರ ಹೂಡದಂತೆ ಭಕ್ತರಿಗೆ ಸಲಹೆ ನೀಡಲಾಗಿದೆ.

    ಜ.10 ರಿಂದಲೇ ಪರ್ಣಶಾಲೆಗಳಲ್ಲಿ ಭಕ್ತರು ಕಾದು ಜ್ಯೋತಿ ದರ್ಶನ ಮಾಡುವುದು ವಾಡಿಕೆ. ಈ ಕಾರಣಕ್ಕಾಗಿ ಮಕರವಿಳಕ್ಕು ದಿನದಂದು ಉಂಟಾಗಬಹುದಾದ ಜನಸಂದಣಿ ತಪ್ಪಿಸಲು ಸಿದ್ಧತೆಗಳು ನಡೆಯುತ್ತಿವೆ. ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸುವುದರ ಜೊತೆಗೆ ನಿಲಕ್ಕಲ್‌ನಲ್ಲಿ ಭಕ್ತರನ್ನು ಪಂಪಾ ನದಿಗೆ ಪ್ರವೇಶಿಸಲು ಅನುಮತಿಸುವ ಮೊದಲು ಪೊಲೀಸರು ತಪಾಸಣೆ ನಡೆಸುತ್ತಾರೆ. ಪರ್ಣಶಾಲೆಯಲ್ಲಿ ಕುಳಿತುಕೊಳ್ಳುವ ಭಕ್ತರ ಅಡುಗೆ ಮತ್ತು ಇತರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಮಾರ್ಗಸೂಚಿಗಳನ್ನು ಜಾರಿಗೆ ತರಲಿದ್ದಾರೆ. ಜ್ಯೋತಿ ದರ್ಶನಕ್ಕೆ ಸಜ್ಜಾಗಿರುವ ವಿವಿಧೆಡೆ ಭದ್ರತೆಗಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಪೆನ್ನಾರ್ ನದಿ ನೀರು ವಿವಾದ, ಭದ್ರಾ ಮೇಲ್ದಂಡೆ ಯೋಜನೆ – ಕೇಂದ್ರ ಸಚಿವ ಸೋಮಣ್ಣ ಜೊತೆ ಡಿಕೆಶಿ ಚರ್ಚೆ

    ಜ.12ರಂದು ಮಧ್ಯಾಹ್ನ 1 ಗಂಟೆಗೆ ಪಂದಳಂನ ವಲಿಯ ಕೊಯಿಕ್ಕಲ್ ದೇವಸ್ಥಾನದಿಂದ ಭಕ್ತರ ದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳ ನಂತರ ತಿರುವಾಭರಣ ಮೆರವಣಿಗೆ ಶಬರಿಮಲೆಗೆ ತೆರಳಲಿದೆ. ವಿವಿಧ ದೇವಸ್ಥಾನಗಳನ್ನು ತಲುಪಿದ ಬಳಿಕ ದರ್ಶನ ಸೌಲಭ್ಯ ಪಡೆದು ರಾತ್ರಿ 9:30ಕ್ಕೆ ಅಯೂರು ಪುತಿಯಕಾವು ದೇವಸ್ಥಾನದಲ್ಲಿ ತಂಗಲಿದೆ. ಜ.13 ರಂದು ಮುಂಜಾನೆ 3 ಗಂಟೆಗೆ ಹೊರಡುವ ಮೆರವಣಿಗೆ ರಾತ್ರಿ 9 ಗಂಟೆಗೆ ಲಾಹಾದಲ್ಲಿ ತಂಗಲಿದೆ. 14ರಂದು ಮಕರವಿಳಕ್ಕು ದಿನ ಲಾಹದಿಂದ ಹೊರಟು ಪಂಡಿತಾವಲಂ, ಚೆರಿಯಾನವಟ್ಟಂ, ನೀಲಿಮಲ, ಅಪಾಚಿಮೇಡು ಮೂಲಕ ಸಂಜೆ 4 ಗಂಟೆಗೆ ಶಬರಿಪೀಠ ತಲುಪಲಿದೆ. ನಂತರ ಸಾರಂಕುತಿ ಮೂಲಕ ಸಂಜೆ 5.30ಕ್ಕೆ ಸನ್ನಿಧಾನಕ್ಕೆ ಬರಮಾಡಿಕೊಳ್ಳಲಾಗುವುದು. ಮೆರವಣಿಗೆ ಮಾರ್ಗಗಳಲ್ಲಿ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.

    ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದು ಪೊಲೀಸರ ಸಿದ್ಧತೆಗಳ ಯಶಸ್ಸಿಗೆ ಮತ್ತು ಸುಗಮ ಮತ್ತು ಸುರಕ್ಷಿತ ದರ್ಶನಕ್ಕೆ ಸಾಕ್ಷಿಯಾಗಿದೆ. ನ.15 ರಿಂದ ಈ ವರ್ಷ ಜ.5 ರವರೆಗೆ ತೀರ್ಥಯಾತ್ರೆ ಪ್ರಾರಂಭವಾದಾಗ ದಾಖಲೆಯ 39,02,610 ಅಯ್ಯಪ್ಪ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಇದೇ ಅವಧಿಯಲ್ಲಿ 35,12,691 ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಮಕರವಿಳಕ್ಕು ಆರಂಭವಾದ ಡಿ.30 ರಿಂದ ನಿನ್ನೆಯವರೆಗೆ 6,22,849 ಜನರು ದೇಗುಲಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜ್ಯ ಪೊಲೀಸ್‌ ಮಾಧ್ಯಮ ಕೇಂದ್ರದ ಉಪ ನಿರ್ದೇಶಕ ಎಸ್‌.ಆರ್‌.ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ್‌ಪೋಲ್ ಪೋರ್ಟಲ್ ಲೋಕಾರ್ಪಣೆ ಮಾಡಿದ ಅಮಿತ್ ಶಾ

  • ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

    ಕೇರಳ | ಮಹಿಳೆ, ಅವಳಿ ಮಕ್ಕಳ ಕೊಲೆ ಕೇಸ್ – 19 ವರ್ಷಗಳ ಬಳಿಕ ಇಬ್ಬರು ಮಾಜಿ ಸೈನಿಕರು ಅರೆಸ್ಟ್!

    ತಿರುವನಂತಪುರಂ: ಮಹಿಳೆ ಹಾಗೂ ಆಕೆಯ 17 ದಿನದ ಅವಳಿ ಮಕ್ಕಳನ್ನು ಕೊಲೆಗೈದು 19 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಇಬ್ಬರು ಮಾಜಿ ಸೈನಿಕರನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ದಿಬಿಲ್ ಕುಮಾರ್ ಬಿ ಹಾಗೂ ರಾಜೇಶ್.ಪಿ ಎಂದು ಗುರುತಿಸಲಾಗಿದೆ. ಆರೋಪಿಗಳು ಫೆಬ್ರವರಿ 10, 2006 ರಂದು ಕೃತ್ಯ ಎಸಗಿದ್ದರು. ಪಿತೃತ್ವ ಪರೀಕ್ಷೆಯಲ್ಲಿ ಅವಳಿ ಹೆಣ್ಣುಮಕ್ಕಳ ತಂದೆ ಎಂದು ಸಾಬೀತಾಗುತ್ತದೆ ಎಂದು ಹೆದರಿ ಆರೋಪಿ ಕುಮಾರ್ ತನ್ನ ಸಹ ಸೈನಿಕನ ಸಹಾಯದಿಂದ ಅವಳನ್ನು ಮತ್ತು ಶಿಶುಗಳನ್ನು ಕೊಲೆಗೈದಿದ್ದ. ಬಳಿಕ ಇಬ್ಬರು ಸೈನ್ಯವನ್ನು ತೊರೆದಿದ್ದರು.

    ಕೇರಳದ ಕೊಲ್ಲಂ ಜಿಲ್ಲೆಯ ಆಂಚಲ್ ಬಳಿಯ ಯೆರಮ್‍ನಲ್ಲಿ ರಂಜಿನಿ (24) ಮತ್ತು ಅವಳ ನವಜಾತ ಹೆಣ್ಣುಮಕ್ಕಳನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಅವಳಿ ಮಕ್ಕಳ ಜನನ ಪ್ರಮಾಣ ಪತ್ರ ಪಡೆಯಲು ಹೋಗಿದ್ದ ರಂಜಿನಿ ಅವರ ತಾಯಿ ಪಂಚಾಯತ್ ಕಚೇರಿಯಿಂದ ಹಿಂತಿರುಗಿದಾಗ ಮನೆಯಲ್ಲಿ ಶವಗಳು ಪತ್ತೆಯಾಗಿದ್ದವು.

    ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಪಠಾಣ್‍ಕೋಟ್‍ನಲ್ಲಿ ಭಾರತೀಯ ಸೇನೆಯ 45 ಎಡಿ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಚಲ್‍ನ ದಿಬಿಲ್ ಕುಮಾರ್ ಬಿ (28) ರಂಜಿನಿ ಅವರೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದುಬಂದಿತ್ತು. ಜನವರಿ 24, 2006 ರಂದು ಅವಳಿ ಮಕ್ಕಳು ಜನಿಸಿದ ನಂತರ, ಅವರು ಅವಳಿಂದ ದೂರವಾಗಲು ಪ್ರಾರಂಭಿಸಿದ್ದರು.

    ನಂತರ ಮಹಿಳೆಯ ತಾಯಿ ಕೇರಳ ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದರು. ಇದು ಅವಳಿ ಮಕ್ಕಳ ಡಿಎನ್‍ಎ ಪರೀಕ್ಷೆಗೆ ಆದೇಶಿಸಿತ್ತು. ಇದರಿಂದ ಕುಮಾರ್ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಬಳಿಕ ಸೈನ್ಯದಲ್ಲಿದ್ದ ರಾಜೇಶ್.ಪಿ ಎಂಬಾತ ರಂಜಿನಿಯನ್ನು ಮದುವೆಯಾಗಲು ಕುಮಾರ್‌ಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ ಆತ ಕುಮಾರ್ ಜೊತೆ ಸೇರಿಕೊಂಡು ಹತ್ಯೆಗೆ ಕೈ ಜೋಡಿಸಿದ್ದ.

    ಸ್ಥಳೀಯ ಪೊಲೀಸರು ವ್ಯಾಪಕ ತನಿಖೆ ನಡೆಸಿದರೂ ಮತ್ತು ಅವರ ಸೆರೆಗೆ ಕಾರಣವಾಗುವ ಮಾಹಿತಿಗೆ 2 ಲಕ್ಷ ರೂಪಾಯಿ ಬಹುಮಾನ ನೀಡಿದ್ದರೂ ಸಹ ಇಬ್ಬರ ಸುಳಿವು ಸಿಕ್ಕಿರಲಿಲ್ಲ. ಕೇರಳ ಹೈಕೋರ್ಟ್‍ನ (Court) ಆದೇಶದ ಮೇರೆಗೆ 2010 ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.

    ಸಿಬಿಐ (CBI) ತನಿಖೆ ವೇಳೆ ಕುಮಾರ್ ಮತ್ತು ರಾಜೇಶ್ ಪುದುಚೇರಿಯಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಹೊಸ ದಾಖಲೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುಳಿವು ಸಿಕ್ಕಿತ್ತು. ಅಲ್ಲದೇ ಇಬ್ಬರು ಶಿಕ್ಷಕಿಯರನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿತ್ತು.

    ಸಿಬಿಐನ ಚೆನ್ನೈ ಘಟಕವು ಶುಕ್ರವಾರ ಇಬ್ಬರನ್ನು ಬಂಧಿಸಿ ಕೊಚ್ಚಿಗೆ ಕರೆತಂದಿದೆ. ಅಲ್ಲಿ ಅವರನ್ನು ಶನಿವಾರ ಎರ್ನಾಕುಲಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಜ.18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

  • ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ತಿರುವನಂತಪುರಂ: ಕೇರಳದ (Kerala) ಹಲವು ದೇವಾಲಯಗಳಲ್ಲಿ, ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಮೇಲಂಗಿ ತೆಗೆಯುವ ಸಂಪ್ರದಾಯ ನಿಲ್ಲಿಸಬೇಕು ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ.

    ಸಮಾಜ ಸುಧಾರಕ ನಾರಾಯಣ ಗುರು ಸ್ಥಾಪಿಸಿದ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.ಇದನ್ನೂ ಓದಿ: ಕೋಟಿ ಕೋಟಿ ವಂಚನೆ ಕೇಸ್ – ಐಶ್ವರ್ಯಗೌಡ ರಿಲೀಸ್

    ಬಳಿಕ ಮಾತನಾಡಿದ ಅವರು, ದೇವಾಲಯಗಳಿಗೆ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರಿಗೆ ಶರ್ಟ್ ತೆಗೆಯುವಂತೆ ಹೇಳುವುದು ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾಗಿದೆ. ಇದು ಸಾಮಾಜಿಕ ಅನಿಷ್ಟ, ಇದನ್ನು ತೆಗೆದು ಹಾಕಬೇಕಾಗಿದೆ. ದೇವಾಲಯಗಳಿಗೆ ಪ್ರವೇಶಿಸುವವರು ಪನೂಲ್ (ಜನಿವಾರ) ಧರಿಸುತ್ತಾರೆಯೇ ಎಂದು ಪರೀಕ್ಷಿಸಲು ಮೇಲಂಗಿ ತೆಗೆಯುವ ಅಭ್ಯಾಸ ರೂಢಿಯಾಯಿತು. ಆದರೆ ನಾರಾಯಣ ಗುರುಗಳಿಗೆ ಸಂಬಂಧಿಸಿದ ಸಂಸ್ಥೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ದೇಗುಲಗಳು ಇಂದಿಗೂ ಪುರುಷರಿಗೆ ಮೇಲಂಗಿ ಧರಿಸಿ ದೇಗುಲ ಪ್ರವೇಶವನ್ನು ನಿರ್ಬಂಧಿಸಿವೆ. ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

    ಇದೇ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಮಾತನಾಡಿ, ಶ್ರೀಗಳ ಮಾತಿಗೆ ಬೆಂಬಲ ಸೂಚಿಸಿದ್ದು, ಸ್ವಾಮೀಜಿ ತಮ್ಮ ಮಾತಿನ ಮೂಲಕ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ್ದಾರೆ. ಅವರ ಸಲಹೆಗಳು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಗುರುವಿನ ಸಂಪ್ರದಾಯವನ್ನು ಎತ್ತಿ ಹಿಡಿಯುವ ಸಲಹೆಯನ್ನು ಸ್ವಾಮಿಗಳು ಮುಂದಿಟ್ಟಿದ್ದಾರೆ. ಯಾರನ್ನೂ ಒತ್ತಾಯಿಸುವ ಅಗತ್ಯವಿಲ್ಲ. ಕಾಲಕ್ಕೆ ತಕ್ಕಂತೆ ಅನೇಕ ಆಚರಣೆಗಳು ಬದಲಾಗಿವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ನ್ಯೂ ಇಯರ್‌ ‘ಕಿಕ್‌’ – ಒಂದೇ ದಿನ ಕೆಎಸ್‌ಬಿಸಿಎಲ್‌ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟ

  • ವಿಷಾಹಾರ ಸೇವಿಸಿ 80ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಅಸ್ವಸ್ಥ – ಸೇನಾಧಿಕಾರಿ ಮೇಲೆ ಸ್ಥಳೀಯರಿಂದ ಹಲ್ಲೆ

    ವಿಷಾಹಾರ ಸೇವಿಸಿ 80ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಅಸ್ವಸ್ಥ – ಸೇನಾಧಿಕಾರಿ ಮೇಲೆ ಸ್ಥಳೀಯರಿಂದ ಹಲ್ಲೆ

    ತಿರುವನಂತಪುರಂ: ಎನ್‌ಸಿಸಿಯ 80 ಕ್ಕೂ ಹೆಚ್ಚು ಕೆಡೆಟ್‌ಗಳು ಕೇರಳದ ತರಬೇತಿ ಶಿಬಿರದಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಿರಿಯ ಸೇನಾಧಿಕಾರಿ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ವೈರಲ್‌ ಆಗಿದೆ.

    ಅಸ್ವಸ್ಥಗೊಂಡಿದ್ದ ಕೆಡೆಟ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವಿಚಾರವಾಗಿ ಸ್ಥಳೀಯ ಕೌನ್ಸಿಲರ್‌ ಮತ್ತು ಎಡಪಕ್ಷದ ನಾಯಕ ಸೇರಿಕೊಂಡು ಸೇನಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ವೀಡಿಯೋ ವೈರಲ್‌ ಆಗುತ್ತಿದ್ದಂತೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಕಳ್ಳರ ಗ್ಯಾಂಗ್‌ಗೆ ತಿಂಗಳ ಸಂಬಳ, ಪ್ರಯಾಣ ಭತ್ಯೆ – ಗ್ಯಾಂಗ್‌ ಬಗ್ಗೆ ತಿಳಿದು ಪೊಲೀಸರೇ ಶಾಕ್‌!

    ಎನ್‌ಸಿಸಿಯ 80 ಕ್ಕೂ ಹೆಚ್ಚು ಕೆಡೆಟ್‌ಗಳು ತೃಕ್ಕಾಕರದ ಕೆಎಂಎಂ ಕಾಲೇಜಿನಲ್ಲಿ ವಿಷಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದರು. ಘಟನೆ ಬೆನ್ನಲ್ಲೇ, ಇಬ್ಬರು ವ್ಯಕ್ತಿಗಳು ಇತರರೊಂದಿಗೆ ಆವರಣಕ್ಕೆ ನುಗ್ಗಿ ಎನ್‌ಸಿಸಿ ಬೆಟಾಲಿಯನ್‌ನ ಲೆಫ್ಟಿನೆಂಟ್ ಕರ್ನಲ್ ಕರ್ನೈಲ್ ಸಿಂಗ್ ಮೇಲೆ ಹಲ್ಲೆ ನಡೆಸಿದರು.

    ಲೆಫ್ಟಿನೆಂಟ್ ಕರ್ನಲ್ ಅವರನ್ನು ಗೋಡೆಗೆ ತಳ್ಳುತ್ತಿರುವುದು ಮತ್ತು ಕುತ್ತಿಗೆ ಹಿಡಿದು ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿದೆ. ನೀಲಿ ಟೀ-ಶರ್ಟ್‌ನ ವ್ಯಕ್ತಿಯೊಬ್ಬ ಆಯುಧವನ್ನು ಹೊರತೆಗೆದು, ಅದು ಚಾಕು ಎಂದು ಬೆದರಿಕೆ ಕೂಡ ಹಾಕಿದ್ದಾನೆ. ಇದನ್ನೂ ಓದಿ: Haveri| ನ್ಯೂ ಇಯರ್‌ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ

    ಲೆಫ್ಟಿನೆಂಟ್ ಕರ್ನಲ್ ಸಿಂಗ್ ಮೇಲೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಸ್ಥಳದಲ್ಲೇ ಇದ್ದ ಪೊಲೀಸರು ನಿಯಂತ್ರಿಸಲು ಪ್ರಯತ್ನಿಸಿದರು. ಘಟನೆಯಲ್ಲಿ ಅಧಿಕಾರಿಯ ಕುತ್ತಿಗೆ ಮತ್ತು ಬೆನ್ನಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

  • ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ನರ್ಸ್ – ಸಹಾಯ ಹಸ್ತಚಾಚಿದ ಭಾರತ

    ಯೆಮನ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳದ ನರ್ಸ್ – ಸಹಾಯ ಹಸ್ತಚಾಚಿದ ಭಾರತ

    ಸನಾ: ಯೆಮನ್ (Yemen) ಪ್ರಜೆಯನ್ನು ಹತ್ಯೆಗೈದ ಪ್ರಕರಣದಲ್ಲಿ ಕೇರಳ (Kerala) ಮೂಲದ ನರ್ಸ್‌ಗೆ ಯೆಮನ್ ಸರ್ಕಾರ ಮರಣದಂಡನೆಗೆ ಅನುಮೋದನೆ ನೀಡಿದ್ದು, ಈ ಕುರಿತು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (India’s Ministry of External Affairs) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಅಗತ್ಯ ನೆರವು ನೀಡುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

    ಡಿ.30ರಂದು ಸೋಮವಾರ ಯೆಮನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಮರಣದಂಡನೆಗೆ ಅನುಮತಿಯನ್ನು ನೀಡಿದ ಬಳಿಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.ಇದನ್ನೂ ಓದಿ: BBK 11: ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಯಾವಾಗ?- ಇಲ್ಲಿದೆ ಅಪ್‌ಡೇಟ್

    ಕೇರಳ ಮೂಲದ ನಿಮಿಶಾ ಪ್ರಿಯಾ 2017ರಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿಯನ್ನು ಕೊಂದ ಹಿನ್ನೆಲೆ 2018ರಲ್ಲಿ ಆಕೆಯನ್ನು ಅಪರಾಧಿಯೆಂದು ಸಾಬೀತು ಮಾಡಲಾಗಿತ್ತು. ಬಳಿಕ 2020ರಲ್ಲಿ ಯೆಮನ್‌ನ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿ ಆದೇಶಿಸಿತ್ತು.

    ಮರಣದಂಡನೆ ಆದೇಶಿಸಿದ ದಿನದಿಂದಲೂ ಆಕೆಯ ಕುಟುಂಬ ಬಿಡುಗಡೆಗಾಗಿ ಪರದಾಡುತ್ತಿದೆ. ನಿಮಿಷಾ ಅವರ ತಾಯಿ ಪ್ರೇಮಾ ಕುಮಾರಿ 2024ರ ಆರಂಭದಲ್ಲಿ ಯೆಮನ್‌ನ ರಾಜಧಾನಿ ಸನಾಗೆ ಭೇಟಿ ನೀಡಿ, ಮರಣದಂಡನೆಯನ್ನು ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಸಂತ್ರಸ್ತರ ಕುಟುಂಬದೊಂದಿಗೆ ಹಣಕಾಸಿನ ಮಾತುಕತೆಯನ್ನು ನಡೆಸಿದ್ದರು.

    ವರದಿಗಳ ಪ್ರಕಾರ ಒಂದು ತಿಂಗಳೊಳಗೆ ಮರಣದಂಡನೆ ಜಾರಿಯಾಗುವ ನಿರೀಕ್ಷೆಯಿದೆ. ಯೆಮನ್‌ನಲ್ಲಿ ನಿಮಿಷಾ ಪ್ರಿಯಾಗೆ ಶಿಕ್ಷೆ ನೀಡುವ ಬಗ್ಗೆ ನಮಗೆ ತಿಳಿದಿದೆ. ಉಳಿದಿರುವ ಪರ್ಯಾಯ ಆಯ್ಕೆಗಳ ಬಗ್ಗೆ ಅವರ ಕುಟುಂಬ ಯೋಚಿಸುತ್ತಿದೆ. ಸರ್ಕಾರ ಈ ವಿಷಯದಲ್ಲಿ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

    ಘಟನೆ ಏನು?
    ಕೇರಳದ (Kerala) ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ಆಗಿದ್ದ ನಿಮಿಷಾ ಪ್ರಿಯಾ 2008ರಲ್ಲಿ ಯೆಮನ್‌ಗೆ ತೆರಳಿದ್ದರು. ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ನಂತರ ತನ್ನದೇ ಆದ ಸ್ವಂತ ಕ್ಲಿನಿಕ್ ತೆಗೆಯುವ ಆಸೆಯನ್ನು ಹೊಂದಿದ್ದರು. ಬಳಿಕ 2014ರಲ್ಲಿ ನಿಮಿಷಾ ಪ್ರಿಯಾಗೆ ತಲಾಲ್ ಅಬ್ದೋ ಮಹದಿ ಪರಿಚಯವಾಯಿತು. 2015ರಲ್ಲಿ ಮಹದಿಯ ಸಹಾಯದಿಂದ ಪ್ರಿಯಾ ಕ್ಲಿನಿಕ್ ಅನ್ನು ಸ್ಥಾಪಿಸಿದಳು.

    2017ರಲ್ಲಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಯಿತು. ಈ ವೇಳೆ ಮಹದಿ ಆಕೆಗೆ ಚಿತ್ರಹಿಂಸೆ ನೀಡಿ, ಪಾಸ್‌ಪೋರ್ಟ್‌ನ್ನು ಕೂಡ ಕಿತ್ತುಕೊಂಡಿದ್ದ. ಇದರಿಂದಾಗಿ ಆಕೆಗೆ ತನ್ನ ತಾಯ್ನಾಡಿಗೆ ಮರಳಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತನ್ನ ಪಾಸ್‌ಪೋರ್ಟನ್ನು ಮರಳಿ ಪಡೆಯಲು ನಿದ್ದೆ ಭರಿಸುವ ಇಂಜೆಕ್ಷನ್ ಚುಚ್ಚಿದ್ದಳು. ಆದರೆ ಈ ಇಂಜೆಕ್ಷನ್ ಆತನ ಸಾವಿಗೆ ಕಾರಣವಾಯಿತು.ಇದನ್ನೂ ಓದಿ: ಹೊಟ್ಟೆ ನೋವು ತಾಳಲಾರದೆ ವ್ಯಕ್ತಿ ನೇಣಿಗೆ ಶರಣು

  • ನಾಪ್ತತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಶವ ಸ್ಕಾಟ್ಲೆಂಡ್‌ನ ನದಿಯಲ್ಲಿ ಪತ್ತೆ

    ನಾಪ್ತತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯ ಶವ ಸ್ಕಾಟ್ಲೆಂಡ್‌ನ ನದಿಯಲ್ಲಿ ಪತ್ತೆ

    ಕುಟುಂಬದವರಿಗೆ ಮಾಹಿತಿ ತಲುಪಿಸಿದ್ದೇವೆ ಎಂದ ಸ್ಕಾಟ್ಲೆಂಡ್ ಪೊಲೀಸರು

    ಎಡಿನ್‌ಬರ್ಗ್: ಡಿಸೆಂಬರ್ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಭಾರತೀಯ (Indian) ಮೂಲದ ವಿದ್ಯಾರ್ಥಿಯ ಮೃತದೇಹ ಸ್ಕಾಟ್ಲೆಂಡ್ ನದಿಯಲ್ಲಿ (Scotland River) ಪತ್ತೆಯಾಗಿದೆ.

    ಮೃತ ವಿದ್ಯಾರ್ಥಿಯನ್ನು 22 ವರ್ಷದ ಕೇರಳ (Kerala) ಮೂಲದ ಸಂತ್ರಾ ಸಾಜು ಎಂದು ಗುರುತಿಸಲಾಗಿದ್ದು, ಎಡಿನ್‌ಬರ್ಗ್ ಬಳಿಯ ನ್ಯೂಬ್ರಿಡ್ಜ್ ಹಳ್ಳಿಯ ನದಿಯೊಂದರದಲ್ಲಿ ಶವ ಪತ್ತೆಯಾಗಿದೆ.ಇದನ್ನೂ ಓದಿ: ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ಸಂತ್ರಾ ಸಾಜು ಸ್ಕಾಟಿಷ್ ರಾಜಧಾನಿ ಎಡಿನ್‌ಬರ್ಗ್‌ದಲ್ಲಿರುವ (Edinburgh) ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ (Heriot-Watt University) ಓದುತ್ತಿದ್ದಳು. ಡಿ.6 ರಂದು ಸಂಜೆ ಲಿವಿಂಗ್‌ಸ್ಟನ್‌ನ ಆಲ್ಮಂಡ್‌ವೇಲ್‌ನಲ್ಲಿರುವ ಅಸ್ಡಾ ಸೂಪರ್‌ಮಾರ್ಕೆಟ್‌ನಲ್ಲಿ ಸಾಜು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಳು. ಅದಾದ ಬಳಿಕ ಕಾಣೆಯಾಗಿದ್ದ ಸಾಜು ಕುರಿತು ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ದೂರು ಸ್ವೀಕರಿಸಿದ ಪೊಲೀಸರು ಆಕೆಯ ಸುಳಿವು ಸಿಕ್ಕ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದ್ದರು.

    ಆಕೆಯ ಮೈಕಟ್ಟು, ಕೊನೆಯ ಬಾರಿ ಆಕೆ ಧರಿಸಿದ ಬಟ್ಟೆ ಎಲ್ಲದರ ಮಾಹಿತಿ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಅವಳ ಫೋಟೋ ಬಿಡುಗಡೆ ಮಾಡಿ ತೀವ್ರ ಪತ್ತೆಹಚ್ಚುವ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಡಿ.27 ರಂದು ಬೆಳಿಗ್ಗೆ 11:55ರ ಸುಮಾರಿಗೆ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಕಾಟ್ಲೆಂಡ್ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮೃತದೇಹವನ್ನು ಸ್ಕಾಟ್ಲೆಂಡ್‌ನ ಪ್ರಾಸಿಕ್ಯೂಷನ್ ಸೇವೆ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

  • ಕೇರಳ ಮಿನಿ ಪಾಕಿಸ್ತಾನ – ಉಗ್ರರು ರಾಹುಲ್, ಪ್ರಿಯಾಂಕಾಗೆ ವೋಟ್ ಹಾಕ್ತಾರೆ: ʻಮಹಾʼಸಚಿವ ನಿತೇಶ್ ರಾಣೆ

    ಕೇರಳ ಮಿನಿ ಪಾಕಿಸ್ತಾನ – ಉಗ್ರರು ರಾಹುಲ್, ಪ್ರಿಯಾಂಕಾಗೆ ವೋಟ್ ಹಾಕ್ತಾರೆ: ʻಮಹಾʼಸಚಿವ ನಿತೇಶ್ ರಾಣೆ

    ಮುಂಬೈ: ಕೇರಳವು ಮಿನಿ ಪಾಕಿಸ್ತಾನವಾಗಿದೆ (Pakistan) ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಸಚಿವ ನಿತೀಶ್‌ ರಾಣೆ (Nitesh Rane) ವಿವಾದ ಸೃಷ್ಟಿಸಿದ್ದಾರೆ. ಸಚಿವರ ಹೇಳಿಕೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

    ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಚಿವ, ಕೇರಳವು (Kerala) ಮಿನಿ ಪಾಕಿಸ್ತಾನವಾಗಿದೆ. ಆದ್ದರಿಂದಲೇ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ (Rahul Gandhi And Priyanka Gandhi) ಅಲ್ಲಿಂದ ಆಯ್ಕೆಯಾಗಿದ್ದಾರೆ. ಕೇರಳ ಮಿನಿ ಪಾಕಿಸ್ತಾನವಾಗಿದ್ದರಿಂದಲೇ ಗಾಂಧಿಗಳು ಗೆಲ್ಲುತ್ತಿದ್ದಾರೆ. ಏಕೆಂದರೆ ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ಸತ್ಯ… ಸತ್ಯ… ಸತ್ಯ… ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:  ಚಿನ್ನ ವಂಚನೆ ಕೇಸ್‌ – ಐಶ್ವರ್ಯಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿ.ಕೆ ಸುರೇಶ್‌ ದೂರು

    ರಾಣೆ ವಿರುದ್ಧ ನಿಗಿನಿಗಿ ಕೆಂಡ:
    ವಿವಾದಿತ ಹೇಳಿಕೆ ಬೆನ್ನಲ್ಲೇ ಸಚಿವ ನಿತೀಶ್‌ ರಾಣೆ ವಿರುದ್ಧ ಮಹಾ ವಿಕಾಸ್‌ ಅಘಾಡಿ ಒಕ್ಕೂಟ ಕೆರಳಿ ಕೆಂಡವಾಗಿದೆ. ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ನಾಯಕ ಆನಂದ್ ದುಬೆ ಮಾತನಾಡಿ, ಪ್ರಧಾನಿ ಮೋದಿ ಕೇವಲ 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರಿಂದ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 4 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕೇರಳ ಭಾರತದ ಭಾಗ, ಅಲ್ಲಿ ವಾಸಿಸುತ್ತಿರುವ ಜನ ನಮ್ಮವರು. ಪಾಕಿಸ್ತಾನದಂತೆ ಆಗುತ್ತಿದೆ ಅನ್ನೋದಾದ್ರೆ ಅಮಿತ್‌ ಶಾ ಅವರಿಗಾಗಲಿ, ರಾಜ್ಯಪಾಲರಿಗಾಗಲಿ ಏಕೆ ದೂರು ನೀಡಿಲ್ಲ. ಇದು ನೀಚತನದ ರಾಜಕೀಯ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅರ್ಚಕರಿಗೆ ಪ್ರತಿ ತಿಂಗಳು 18 ಸಾವಿರ ಸಹಾಯಧನ: ಕೇಜ್ರಿವಾಲ್‌ ಘೋಷಣೆ

    ವಿವಾದದ ಬೆನ್ನಲ್ಲೇ ಸ್ಪಷ್ಟನೆ:
    ಇನ್ನೂ ವಿವಾದದ ಬೆನ್ನಲ್ಲೇ ನಿತೀಶ್‌‌ ರಾಣೆ ಸ್ಪಷ್ಟನೆ ನೀಡಿದ್ದು, ಕೇರಳದ ಜನರನ್ನಲ್ಲ ಪರಿಸ್ಥಿತಿಯನ್ನ ಪಾಕಿಸ್ತಾನದೊಂದಿಗೆ ಹೋಲಿಕೆ ಮಾಡಿರುವುದಾಗಿ ಉಲ್ಟಾ ಹೊಡೆದಿದ್ದಾರೆ.

    ಈ ಬೆನ್ನಲ್ಲೇ ಕೇಂದ್ರ ಸಚಿವ ನಾರಾಯಣ ರಾಣೆ ಮಾತನಾಡಿದ್ದು, ಕೇರಳ ಭಾರತದ ಭಾಗವೇ ಆದರೂ ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಎಲ್ಲರೂ ಚಿಂತಿಸಬೇಕಾದ ವಿಷಯ. ಹಿಂದೂಗಳನ್ನು ಮುಸ್ಲಿಂ ಮತ್ತು ಕ್ರೈಸ್ತರನ್ನಾಗಿ ಪರಿವರ್ತನೆ ಮಾಡುತ್ತಿರುವುದು ಅಲ್ಲಿ ದಿನನಿತ್ಯದ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡಾಕಿಂಗ್‌ ಸಾಹಸಕ್ಕೆ ಇಸ್ರೋ ರೆಡಿ – ಏನಿದು ಪ್ರಯೋಗ? ಇಷ್ಟೊಂದು ಮಹತ್ವ ಯಾಕೆ?

  • ಹಿರಿಯ ಮಲಯಾಳಂ ಸಾಹಿತಿ ವಾಸುದೇವನ್ ನಾಯರ್ ನಿಧನ

    ಹಿರಿಯ ಮಲಯಾಳಂ ಸಾಹಿತಿ ವಾಸುದೇವನ್ ನಾಯರ್ ನಿಧನ

    ತಿರುವನಂತಪುರಂ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಮಲಯಾಳಂ ಸಾಹಿತಿ, ಎಂಟಿ ವಾಸುದೇವನ್ ನಾಯರ್ (91) ಅವರು ಬುಧವಾರ ನಿಧನರಾದರು.

    ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದವಾಸುದೇವನ್ ನಾಯರ್( MT Vasudevan Nair) ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಕೋಯಿಕ್ಕೋಡ್‌ ಬೇಬಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ನಿಧನ ಹೊಂದಿದರು.

    ಮೃತರು ಪತ್ನಿ ಕಲಾಮಂಡಲಂ ಸರಸ್ವತಿ ಹಾಗೂ ಮಗಳಾದ ಅಶ್ವತಿಯನ್ನು ಅಗಲಿದ್ದಾರೆ. ಎಂಟಿ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan), ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಂಪರ್ ಆಫರ್ ಬಾಚಿಕೊಂಡ ಶ್ರೀಲೀಲಾ

    ಎಂಟಿ ವಾಸುದೇವನ್ ನಾಯರ್ ಅವರಿಗೆ ಗೌರವ ಸೂಚಕವಾಗಿ ಕೇರಳ ಸರ್ಕಾರ ಡಿ. 26 ಮತ್ತು 27 ರಂದು ಅಧಿಕೃತ ಶೋಕಾಚರಣೆ ಘೋಷಿಸಿದೆ.

    ಸಣ್ಣ ಕಥೆ, ಚಿತ್ರಕಥೆ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ, ಲೇಖನ ಹೀಗೆ ಬರವಣಿಗೆಯ ಎಲ್ಲಾ ಪ್ರಕಾರಗಳಲ್ಲೂ ವಾಸುದೇವನ್ ನಾಯರ್ ಸಾಹಿತ್ಯ ಕೃಷಿಯನ್ನು ಮಾಡಿದ್ದರು. ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದ ಇವರು ನಿರ್ಮಾಲ್ಯಂ ಸೇರಿದಂತೆ 6 ಚಲನಚಿತ್ರಗಳು ಮತ್ತು ಎರಡು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು.

    1995 ರಲ್ಲಿ ಜ್ಞಾನಪೀಠ, 2005ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಯಲಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಲ್ಲತ್ತೋಳ್ ಪ್ರಶಸ್ತಿ, ಜೆ.ಸಿ. ಅವರು ಡೇನಿಯಲ್ ಪ್ರಶಸ್ತಿ ಸೇರಿದಂತೆ ಹಲವಾರು  ಗೌರವಗಳನ್ನು ಇವರು ಪಡೆದುಕೊಂಡಿದ್ದಾರೆ. ಅವರು ನಾಲ್ಕು ಬಾರಿ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 11 ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ಮೂರು ಬಾರಿ ಅತ್ಯುತ್ತಮ ನಿರ್ದೇಶಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗಳಿಸಿದ್ದರು.