Tag: ಕೇರಳ

  • ರಂಜಿತಾ ಸಾವಿಗೆ ವ್ಯಂಗ್ಯ – ಕೇರಳ ಉಪ ತಹಶೀಲ್ದಾರ್ ಅಮಾನತು

    ರಂಜಿತಾ ಸಾವಿಗೆ ವ್ಯಂಗ್ಯ – ಕೇರಳ ಉಪ ತಹಶೀಲ್ದಾರ್ ಅಮಾನತು

    ತಿರುವನಂತಪುರಂ: ನರ್ಸ್‌ ರಂಜಿತಾ (Ranjitha) ಸಾವನ್ನು ವ್ಯಂಗ್ಯಮಾಡಿದ್ದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ಡೆಪ್ಯೂಟಿ ತಹಶೀಲ್ದಾರ್ ಪವಿತ್ರನ್ (A Pavithran) ಅವರನ್ನು ಕೇರಳ ಸರ್ಕಾರ (Kerala Government) ಅಮಾನತು ಮಾಡಿದೆ.

    ಕೇರಳ ಸರ್ಕಾರಕ್ಕೆ ರಜೆ ಸಲ್ಲಿಸಿ ಹೋಗಿದ್ದಕ್ಕೆ ರಂಜಿತಾಗೆ ಸಾವು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪವಿತ್ರನ್ ವ್ಯಂಗ್ಯವಾಗಿ ಕಮೆಂಟ್ ಹಾಕಿದ್ದರು. ಇನ್ನೊಂದು ಪೋಸ್ಟ್‌ ಮಾಡಿ ಆಕೆ ಇನ್ನೂ ಎತ್ತರಕ್ಕೇರಲಿ ಎಂದು ಪವಿತ್ರನ್‌ ಕಮೆಂಟ್‌ ಮಾಡಿದ್ದರು. ಇದನ್ನೂ ಓದಿ: ಕನಸಿನ ಮನೆಗೆ ಕಾಲಿಡುವ ಮೊದಲೇ ಸಾವಿನ ಮನೆ ಸೇರಿದ ನರ್ಸ್ ರಂಜಿತಾ

     
    ಪವಿತ್ರನ್‌ ಪೋಸ್ಟ್‌ಗೆ ಕೇರಳದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಆನ್‌ಲೈನ್‌ನಲ್ಲಿ ಹಲವು ಮಂದಿ ದೂರು ಸಲ್ಲಿಸಿದ್ದರು. ಈ ದೂರಿನ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬಶೇಖರನ್ ಪವಿತ್ರನ್‌ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಇಡೀ ವಿಮಾನ ಸುಟ್ಟುದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ಯುಕೆಯಲ್ಲಿ ನರ್ಸ್‌ ಆಗಿದ್ದ ರಂಜಿತಾ ರಜೆಯ ಮೇಲೆ ಕೇರಳಕ್ಕೆ ಬಂದಿದ್ದರು. ರಂಜಿತಾ ಅವರಿಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಸಹಿ ಹಾಕಲು ಕೇರಳಕ್ಕೆ ಆಗಮಿಸಿದ್ದರು. ಆದರೆ ಯುಕೆ ಆಸ್ಪತ್ರೆಯಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಪೂರ್ಣಗೊಳಿಸಲು ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.

  • ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

    ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

    ತಿರುವನಂತಪುರಂ/ಮಂಗಳೂರು: ಕೇರಳದ (Kerala) ಕರಾವಳಿಯಲ್ಲಿ ಸಿಂಗಾಪುರದ ಹಡಗು (Cargo Ship) ಮೂಡಿಸಿದ ಆತಂಕ ಇನ್ನೂ ಕೊನೆಯಾಗಿಲ್ಲ. ಬೆಂಕಿಯುಗುಳುತ್ತಲೇ ಇರುವ ಹಡಗನ್ನು 48 ಗಂಟೆ ಕಳೆದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.

    ಕ್ಷಣಕ್ಷಣಕ್ಕೂ ಸ್ಫೋಟಗೊಳ್ಳುತ್ತಿರುವ ಸಿಂಗಾಪುರದ ಎಂ.ವಿ. ವಾನ್‌ಹೇ 503 ಕೇರಳ-ಮಂಗಳೂರು ಕಡಲತೀರವನ್ನು ಆತಂಕಕ್ಕೆ ತಳ್ಳಿದೆ. ಈ ಮಧ್ಯೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಹಡಗಿನಲ್ಲಿ ಇನ್ನಷ್ಟು ಪ್ರಖರವಾಗಿ ಬೆಂಕಿ ಪಸರಿಸಲು ಬೇಕಾದ ಸಾಮಗ್ರಿಗಳಿರೋದು ಆತಂಕಕ್ಕೆ ಕಾರಣವಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಹಡಗಿನಲ್ಲಿ ಪೆಟ್ರೋಲ್, ಡೀಸೆಲ್, ನೈಟ್ರೋ ಸೆಲ್ಯೂಲೋಸ್ ನಂತಹ ಕಂಟೇನರ್‌ಗಳು ಇರೋದೆ ಈ ಆತಂಕಕ್ಕೆ ಕಾರಣ. ಒಟ್ಟಾರೆ ಅದರಲ್ಲಿರುವ 600ಕ್ಕೂ ಅಧಿಕ ಕಂಟೇನರ್‌ಗಳಲ್ಲಿ 157 ಕಂಟೇನರ್‌ಗಳಲ್ಲಿ ಅಪಾಯಕಾರಿ ಐಟಂಗಳನ್ನು ಸಂಗ್ರಹಿಸಿಟ್ಟಿರುವುದು ದೃಢಪಟ್ಟಿದೆ. ಈಗಾಗಲೇ ಹಡಗಿನಲ್ಲಿದ್ದ 18 ಮಂದಿಯನ್ನು ಭಾರತೀಯ ನೌಕಾದಳ ರಕ್ಷಿಸಿ, ಮಂಗಳೂರಿಗೆ ಕರೆ ತಂದಿದೆ. ಉಳಿದಂತೆ ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರೆದಿದೆ. ಈ ನಡುವೆ ನೌಕಾದಳ ಬೆಂಕಿಯನ್ನು ನಿಯಂತ್ರಿಸಲು ಭಾರೀ ಸಾಹಸ ಪಡುತ್ತಿದೆ. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ 21 ಕೋಟಿ ಹಣ ಬಳಕೆ ಆರೋಪ – ಸಂಸದ ತುಕಾರಾಂ ಇಡಿ ವಶಕ್ಕೆ

    ಬೆಂಕಿ ಈ ಮಟ್ಟಿಗೆ ಹರಡೋದಕ್ಕೆ ಅದರಲ್ಲಿದ್ದ ಸಾಮಗ್ರಿಗಳೇ ಕಾರಣ ಎನ್ನಲಾಗುತ್ತಿದೆ. 240 ಟನ್ ಡೀಸೆಲ್, 2,000 ಟನ್ ಇಂಧನ ತೈಲ ಇದ್ದು, ಅದಲ್ಲದೇ ಇತರೆ ತೈಲ ಸಾಮಗ್ರಿಗಳು, ಪ್ಲಾಸ್ಟಿಕ್ ಇವೆಲ್ಲವೂ ಬೆಂಕಿ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಗಾಳಿ ಮಳೆಯೂ ಬೆಂಕಿ ಹರಡಲು ಕಾರಣವಾಗುತ್ತಿದೆ. ಅದಾಗ್ಯೂ ನೌಕಾದಳ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಬೇಕಾದ ಪ್ರಯತ್ನದಲ್ಲಿದೆ. ಹಡಗು ತುಂಡರಿದು ಸಮುದ್ರ ಸೇರುವ ಸಾಧ್ಯತೆಯೂ ಇದ್ದು, ಯಾವುದಕ್ಕೂ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದು ಕೂಡಾ ಗೊತ್ತಾಗಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 4 ದಿನಗಳವರೆಗೆ ಭಾರೀ ಮಳೆ – 30 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಹಡಗಿನಲ್ಲಿದ್ದ ತಂಡದಲ್ಲಿ ಇಂಜಿನಿಯರ್‌ಗಳಿದ್ರೂ, ಇಂಜಿನ್ ವಿಭಾಗಗಳನ್ನು ಪರಿಶೀಲಿಸುತ್ತಿದ್ದರೂ ಇಂತಹ ಅವಘಡ ಸಂಭವಿಸಿರುವುದು ಆಶ್ಚರ್ಯ ಮೂಡಿಸಿದೆ. ಯಾವೊಂದು ಸಿಗ್ನಲ್ ಅನ್ನು ಕೂಡಾ ಹಡಗು ನೀಡಿರಲಿಲ್ಲವೇ ಎಂಬ ಪ್ರಶ್ನೆಗೂ ಸದ್ಯ ಉತ್ತರವಿಲ್ಲದಾಗಿದೆ. ಅಗ್ನಿ ಅನಾಹುತದ ಬಗ್ಗೆ ಎಚ್ಚರಿಕೆ ನೀಡುವ ಹಡಗು ಇಲ್ಲಿ ಯಾಕೆ ಅನಾಹುತಕ್ಕೆ ಸಿಲುಕಿತು ಎಂಬುದಕ್ಕೂ ಸೂಕ್ತ ಉತ್ತರವಿಲ್ಲ. ಒಟ್ಟಿನಲ್ಲಿ ಕೊಲಂಬೋದಿಂದ ಹೊರಟು ಮುಂಬೈ ಸೇರಬೇಕಿದ್ದ ಸಿಂಗಾಪುರದ ಕಾರ್ಗೋ ಹಡಗು ಕೇರಳದ ಕಣ್ಣೂರು ಕರಾವಳಿ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿರುವುದು ಸದ್ಯ ಇಡೀ ಕರಾವಳಿಯನ್ನು ಆತಂಕಕ್ಕೆ ತಳ್ಳಿದೆ.  ಇದನ್ನೂ ಓದಿ: ವಾಲ್ಮೀಕಿ ಹಗರಣ; ಸಂಸದ ತುಕಾರಾಂ, ಮೂವರು ಶಾಸಕರ ಮನೆ ಮೇಲೆ ED ದಾಳಿ

  • ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    – ಕಣ್ಮರೆಯಾದ ನಾಲ್ವರು ಸಿಬ್ಬಂದಿಗಾಗಿ ಶೋಧಕಾರ್ಯ

    ತಿರುವನಂತಪುರಂ/ಮಂಗಳೂರು: ಕೇರಳದ (Kerala) ಬೇಪೂರ್ (Beypore) ಹಡಗು ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಡಗಿನಲ್ಲಿದ್ದ (Cargo Ship) 18 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಇಬ್ಬರು ಗಂಭೀರ ಗಾಯಗೊಂಡಿದ್ದು, ನಾಲ್ವರಿಗೆ ಭಾಗಶಃ ಗಾಯಗಳಾಗಿದೆ. ಸದ್ಯ ಗಾಯಗೊಂಡ 6 ಮಂದಿಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಉಳಿದ 12 ಮಂದಿಗೆ ನಗರದ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಐಎನ್‌ಎಸ್ ಸೂರತ್ (INS Surat) ಮೂಲಕ ಆಳಸಮುದ್ರದಿಂದ ಸಿಬ್ಬಂದಿಯನ್ನು ಮಂಗಳೂರಿನ ನವಬಂದರಿಗೆ ಕರೆತರಲಾಗಿದೆ. ಬಳಿಕ ಬಂದರಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ರವಾನಿಸಲಾಗಿದೆ. ಇನ್ನು ಎಜೆ ಆಸ್ಪತ್ರೆಯ ವೈದ್ಯ ದಿನೇಶ್ ಕಂದಮ್ ಗಾಯಾಳುಗಳ ಕುರಿತು ಮಾತನಾಡಿ, ಈಗಾಗಲೇ ಆರು ಜನರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಆರು ಜನರ ಪೈಕಿ ಮೂರು ಜನ ಚೀನಾ ದೇಶದವರು, ಇಬ್ಬರು ಬರ್ಮಾ ಹಾಗೂ ಒಬ್ಬರು ಇಂಡೋನೆಶೀಯದವರು. ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. 30% ರಿಂದ 40% ದೇಹದ ಭಾಗಗಳು ಸುಟ್ಟಿದೆ. ಜೊತೆಗೆ ಶ್ವಾಸಕೋಶದಲ್ಲೂ ಸುಟ್ಟಗಾಯಗಳಾಗಿದೆ. ಉಳಿದ ನಾಲ್ಕು ಜನರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಗಂಭೀರ ಗಾಯಗೊಂಡ ಇಬ್ಬರಿಗೂ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Bengaluru | ಸರಣಿ ಅಪಘಾತದಲ್ಲಿ ಮಹಿಳೆ ಸಾವು

    ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಹಡಗಿನಲ್ಲಿ ಪೈಂಟ್, ಗನ್ ಪೌಡರ್ ಸೇರಿದಂತೆ ಹಲವು ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಕೇರಳದ ಬೇಪೂರ್ ಕಡಲ ಕಿನಾರೆಯಿಂದ 78 ನಾಟಿಕಲ್ ಮೈಲ್ ದೂರದಲ್ಲಿ ಹಡಗಿಗೆ ಬೆಂಕಿ ಆವರಿಸಿದೆ. 22 ಮಂದಿ ಸಿಬ್ಬಂದಿಯಿದ್ದ ಹಡಗಿನಲ್ಲಿ 18 ಮಂದಿಯನ್ನು ರಕ್ಷಣೆ ಮಾಡಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ. ಕಣ್ಮರೆಯಾದ ಸಿಬ್ಬಂದಿಗಾಗಿ ಕೋಸ್ಟ್ ಗಾರ್ಡ್ ಶೋಧಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕೈ ನಾಯಕ ಮಂಜುನಾಥ ಗೌಡಗೆ ಇಡಿ ಶಾಕ್‌ – 13.91 ಕೋಟಿ ಆಸ್ತಿ ಮುಟ್ಟುಗೋಲು

    ತೈವಾನ್‌ನ ಸೆಕೆಂಡ್ ಎಂಜಿನಿಯರ್ ಯು ಬೊ ಫಾಂಗ್, ಮ್ಯಾನ್ಮರ್‌ನ ಕಾರ್ಪೆಂಟರ್ ಸಾನ್ ವಿನ್, ಇಂಡೋನೇಷ್ಯಾದ ಎಬಿ ಜಾನಲ್ ಅಹಿದಿನ್, ತೈವಾನ್‌ನ ಮೋಟರ್ ಮ್ಯಾನ್ ಸಿಹ್ ಚಾಯ್ ವೆನ್ ಕಣ್ಮರೆಯಾಗಿದ್ದಾರೆ. ಚೀನಾ ಮೂಲದ ನಂ 1 ಆಯ್ಲಿರ್ ಲೂಯನ್ಲಿ ಮತ್ತು ಇಂಡೋನೇಷ್ಯಾದ ಫಿಟ್ಟರ್ ಸೋನಿಟೂರ್ ಹೆನಿಗೆ ಗಂಭೀರ ಗಾಯಗಳಾಗಿದೆ. ಚೈನಾದ ಸೆಕೆಂಡ್ ಫಿಟ್ಟರ್‌ಗಳಾದ ಕ್ಸೂ ಪಬೋ, ಗೋ ಲಿನಿಂಗ್, ಮ್ಯಾನ್ಮರ್‌ನ ಎಬಿಗಳಾದ ಥೆನ್ ಥಾನ್ ತ್ವಾಯ್, ಕಿ ಜಾವ್ ತ್ವೂ ಗೆ ಗಾಯಗಳಾಗಿವೆ. ಉಳಿದ 12 ಜನ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.  ಇದನ್ನೂ ಓದಿ: ಪತ್ನಿ ಮನೆಬಿಟ್ಟು ಹೋಗಿದ್ದಕ್ಕೆ ಬೇಸತ್ತು ಪತಿ ಆತ್ಮಹತ್ಯೆ

  • ಕೇರಳ ಸೀಫುಡ್ ಆತಂಕ – ಕಾರ್ಗೋ ಶಿಪ್ ಮುಳುಗಿದ ಮೇಲೆ ಆಗಿದ್ದೇನು?

    ಕೇರಳ ಸೀಫುಡ್ ಆತಂಕ – ಕಾರ್ಗೋ ಶಿಪ್ ಮುಳುಗಿದ ಮೇಲೆ ಆಗಿದ್ದೇನು?

    ಳೆದ ಕೆಲವು ದಿನಗಳ ಹಿಂದೆ ಕಾರ್ಗೋ ಶಿಪ್‌ನ ಕೆಲವು ಕಂಟೇನರ್‌ಗಳು ಕೇರಳದ ಕೊಚ್ಚಿಯ ದಡಕ್ಕೆ ತೇಲಿ ಬಂದಿದ್ದವು. ಇದರಿಂದಾಗಿ ಕೇರಳದ ಕರಾವಳಿ ಜನರಲ್ಲಿ ಜಲಚರ ಜೀವಿಗಳನ್ನು ಆಹಾರವಾಗಿ ಸೇವಿಸುವ ಬಗ್ಗೆ ಭಯ ಹುಟ್ಟಿಕೊಂಡಿದೆ.

    ಲೈಬೀರಿಯಾದ 28 ವರ್ಷ ಹಳೆಯ MSC ELSA 3 ಕಾರ್ಗೋ ಶಿಪ್‌ 640 ಕಂಟೇನರ್‌ಗಳನ್ನು ಹೊತ್ತುಕೊಂಡು ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಈ ಕಂಟೇನರ್‌ಗಳ ಮೂಲಕ ಕೆಲವು ಅಪಾಯಕಾರಿ ಸರಕುಗಳು ಸೇರಿದಂತೆ ಇಂಧನಗಳನ್ನು ಕೊಂಡೊಯ್ಯುತ್ತಿತ್ತು. ಆದರೆ ಮೇ 24ರಂದು ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು (70.376 ಕಿ.ಮೀ) ದೂರದ ಅರಬ್ಬಿ ಸಮುದ್ರದಲ್ಲಿ ಹಡಗು ಮುಳುಗಿತ್ತು. ಮುಳುಗುವ ಮುನ್ನ ಹಡಗು ಒಂದು ಭಾಗಕ್ಕೆ ವಾಲಿದ್ದರಿಂದ ಅದರಲ್ಲಿದ್ದ ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದವು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು. ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮದಿಂದಾಗಿ ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ.

    ಮೇ 26ರಂದು ಕಾರ್ಗೋ ಶಿಪ್‌ನಲ್ಲಿದ್ದ ಕಂಟೇನರ್‌ಗಳು ಭಾರಿ ಅಲೆಗಳ ಹೊಡೆತಕ್ಕೆ ಕೇರಳದ ಕೊಚ್ಚಿ ದಡ ಸೇರಿಕೊಂಡಿತ್ತು. ದಡ ತಲುಪುವ ಮುನ್ನ ಹಡಗು ಮುಳುಗಿದ್ದಾಗ ಕಂಟೇನರ್‌ಗಳಲ್ಲಿದ್ದ ಇಂಧನ ಸೋರಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಇದರ ಪರಿಣಾಮವಾಗಿ ನೀರು ಮಲೀನಗೊಂಡಿದೆ ಎಂಬ ಭಯ ಸೃಷ್ಟಿಯಾಗಿದೆ. ಜೊತೆಗೆ ನರ್ಡಲ್ಸ್ ಎಂದು ಕರೆಯಲ್ಪಡುವ ಪ್ಲಾಸ್ಟಿಕ್ ಉಂಡೆಗಳು ಹೆಚ್ಚಿನ ಪ್ರಮಾಣದ ಮಾಲಿನ್ಯವನ್ನು ಉಂಟು ಮಾಡುತ್ತದೆ. ಹೀಗಾಗಿ ಕರಾವಳಿ ಜನರಲ್ಲಿ ಆತಂಕ ಮನೆಮಾಡಿದೆ. ಆದರೆ ತೈಲ ಸೋರಿಕೆಯ ಕುರಿತು ಈವರೆಗೂ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಕೋಸ್ಟ್ ಗಾರ್ಡ್ ಪ್ರಕಾರ, MSC ELSA 3 ಕಾರ್ಗೋ ಶಿಪ್‌ 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367 ಮೆಟ್ರಿಕ್ ಟನ್ ಫರ್ನೇಸ್ ಎಣ್ಣೆ ಸೇರಿದಂತೆ ಭಾರೀ ಪ್ರಮಾಣದ ಇಂಧನವನ್ನು ಸಾಗಿಸುತ್ತಿತ್ತು. 640 ಕಂಟೇನರ್‌ಗಳ ಪೈಕಿ 5 ಕಂಟೇನರ್‌ಗಳು ಪತ್ತೆಯಾಗಿವೆ. ಇದರಲ್ಲಿ 25 ಕಂಟೇನರ್‌ಗಳು ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್‌ಗಳನ್ನು ಹೊತ್ತೊಯ್ಯುತ್ತಿತ್ತು. ಈಗಾಗಲೇ ಕಂಟೇನರ್‌ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲಾಧಿಕಾರಿ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದರು. ಜೊತೆಗೆ ರಾಜ್ಯ ಸರ್ಕಾರ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ಮುನ್ನೆಚ್ಚರಿಕೆ ನೀಡಿತ್ತು. ಜೊತೆಗೆ ಇದರಿಂದಾಗಿ ಜಲಚರ ಜೀವಿಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯೂ ಇದೆ ಎಂದು ಕಳವಳ ಉಂಟುಮಾಡಿತ್ತು.

     

    ಈ ಕುರಿತು ಹೈದರಾಬಾದ್ ಮೂಲದ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ (INCOIS) ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಅವರು ಆಲಪ್ಪುಳ ಕರಾವಳಿಯಲ್ಲಿ ತೈಲ ಸೋರಿಕೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಕೆಲವು ಏಜೆನ್ಸಿಗಳ ಪ್ರಕಾರ, ಹಡಗಿನಲ್ಲಿದ್ದ ಎಲ್ಲಾ ಡೀಸೆಲ್ ಮತ್ತು ಫರ್ನೇಸ್ ಆಯಿಲ್ ಸಮುದ್ರಕ್ಕೆ ಸೋರಿಕೆಯಾದರೆ, ಅದು ಕೇರಳ ಕರಾವಳಿಯ ಕಡೆಗೆ, ವಿಶೇಷವಾಗಿ ಆಲಪ್ಪುಳ ಮತ್ತು ತಿರುವನಂತಪುರಂ ನಡುವಿನ ಪ್ರದೇಶದ ಕಡೆಗೆ ತೇಲಿ ಬರುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.

    ಆತಂಕ ಉಂಟಾಗಿದ್ದು ಯಾಕೆ?
    ಮುಖ್ಯವಾಗಿ ತೈಲವು ಸಮುದ್ರದಲ್ಲಿನ ಸಣ್ಣ ಪ್ರಭೇದಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಇದರಿಂದಾಗಿ ಮೀನುಗಾರಿಕೆ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವುದಲ್ಲದೇ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಸೋರಿಕೆಯಾಗಿ ಅದು ಹರಡಿಕೊಂಡರೆ ಸಮುದ್ರದ ಉತ್ಪನ್ನಗಳಿಗೆ ಹಾನಿಯುಂಟು ಮಾಡುತ್ತದೆ. ಕೆಲವು ಮೀನಿನ ಪ್ರಬೇಧವನ್ನೇ ನಾಶಪಡಿಸಬಹುದು. ಉದಾಹರಣೆಗೆ ಮಳೆಗಾಲವು ಪೆಲಾಜಿಕ್ ಮೀನುಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆಗೆ ನಿರ್ಣಾಯಕ ಅವಧಿಯಾಗಿದೆ. ಹೀಗಾಗಿ ಅವುಗಳ ಮೇಲೆ ಶಾಶ್ವತ ಪರಿಣಾಮ ಬೀರಬಹುದು.

    ಜಲಚರ ಜೀವಿಗಳನ್ನು ಆಹಾರವಾಗಿ ಸೇವಿಸುವುದು ಸುರಕ್ಷಿತನಾ?
    ಕಾರ್ಗೋ ಶಿಪ್‌ ಮುಳುಗಿದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸ್ತುತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಹೀಗಾಗಿ ಜಲಚರ ಜೀವಗಳು ಮಾರುಕಟ್ಟೆಗೆ ಬರುತ್ತಿಲ್ಲ. ಜೊತೆಗೆ ರಾಜ್ಯ ಮೀನುಗಾರಿಕೆ ಇಲಾಖೆ ಮತ್ತು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (CMFRI) ನೀರಿನ ಮಾದರಿಗಳನ್ನು ಸಂಗ್ರಹಿಸುವುದು ಹಾಗೂ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಆದರೆ ಇಲ್ಲಿಯವರೆಗೆ, ಯಾವುದೇ ಹಾನಿಕಾರಕ ವಸ್ತುಗಳು ಇರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೆ ಈಗಾಗಲೇ ಸರ್ಕಾರವು ಜನರು ಯಾವುದೇ ಭಯವಿಲ್ಲದೇ ಜಲಚರ ಜೀವಗಳನ್ನು ಆಹಾರವಾಗಿ ಸೇವಿಬಹುದು ಎಂದು ತಿಳಿಸಿದೆ. ಜೊತೆಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ನಡೆಸಿದ ತ್ವರಿತ ಕಾರ್ಯಚರಣೆಯಿಂದಾಗಿ ಕಂಟೇನರ್‌ನಿಂದ ಭಾರೀ ಪ್ರಮಾಣದ ತೈಲ ಸೋರಿಕೆ ತಪ್ಪಿಸುವಲ್ಲಿ ನೆರವಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ವಿಶ್ವದ ದೊಡ್ಡ ಕಂಟೇನರ್‌ ಹಡಗು ವಿಳಿಂಜಂ ಬಂದರಿಗೆ ಆಗಮನ

    ವಿಶ್ವದ ದೊಡ್ಡ ಕಂಟೇನರ್‌ ಹಡಗು ವಿಳಿಂಜಂ ಬಂದರಿಗೆ ಆಗಮನ

    ತಿರುವನಂತಪುರಂ: ವಿಶ್ವದ ಅತಿದೊಡ್ಡ ಕಂಟೇನರ್ ಹಡಗು ಎಂಎಸ್‌ಸಿ ಐರಿನಾ (Mediterranean Shipping Company IRINA) ಸೋಮವಾರ ಬೆಳಿಗ್ಗೆ ವಿಳಿಂಜಂ ಅಂತರರಾಷ್ಟ್ರೀಯ ಬಂದರಿಗೆ (Vizhinjam International Seaport) ಆಗಮಿಸಿದೆ.

    MSC IRINA ಸೋಮವಾರ ಬೆಳಿಗ್ಗೆ 8 ಗಂಟೆಗೆ ವಿಳಿಂಜಂ ಬಂದರಿಗೆ ಆಗಮಿಸಿದ್ದು, ಜಲ ಗೌರವ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಎಂಎಸ್‌ಸಿ ಐರಿನಾ 24,346 TEU ಸಾಮರ್ಥ್ಯವನ್ನು ಹೊಂದಿದ್ದು  ಮಂಗಳವಾರದವರೆಗೆ ಈ ಬಂದರಿನಲ್ಲಿ ತಂಗುವ ನಿರೀಕ್ಷೆಯಿದೆ.

    399.9 ಮೀಟರ್ ಉದ್ದ ಮತ್ತು 61.3 ಮೀಟರ್ ಅಗಲವಿರುವ ಈ ಹಡಗು  FIFA ನಿಗದಿ ಮಾಡಿದ  ಫುಟ್‌ಬಾಲ್ ಮೈದಾನಕ್ಕಿಂತ ಸರಿಸುಮಾರು ನಾಲ್ಕು ಪಟ್ಟು ಉದ್ದವನ್ನು ಹೊಂದಿದೆ.

    24,346 TEU ಸಾಮರ್ಥ್ಯವಿರುವ ವಿಶ್ವದ ಅತಿದೊಡ್ಡ ಕಂಟೇನರ್ ಹಡಗಾಗಿರುವ MSC ಐರಿನಾವನ್ನು ನಮ್ಮ ವಿಳಿಂಜಂ ಬಂದರಿಗೆ ಸ್ವಾಗತಿಸಲು ಹೆಮ್ಮೆಪಡುತ್ತೇವೆ. ದಕ್ಷಿಣ ಏಷ್ಯಾದ ಬಂದರಿಗೆ ಮೊದಲ ಬಾರಿ ಆಗಮಿಸಿದೆ. ಜಾಗತಿಕ ಟ್ರಾನ್ಸ್‌ಶಿಪ್‌ಮೆಂಟ್‌ನಲ್ಲಿ ಪ್ರಮುಖ ದೇಶವಾಗಿ ಭಾರತ ಹೊರಹೊಮ್ಮಲು ಇದೊಂದು ದೊಡ್ಡ ಮೈಲಿಗಲ್ಲು ಎಂದು ಅದಾನಿ ಬಂದರಿನ ವ್ಯವಸ್ಥಾಪಕ ನಿರ್ದೇಶಕ ಕರಣ್‌ ಅದಾನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

    TEU ಎಂದರೇನು?
    Twenty-Foot Equivalent Unit ಅನ್ನು TEU ಎಂದು ಕರೆಯಲಾಗುತ್ತದೆ. ಇದನ್ನು ಸುಲಭವಾಗಿ ಹೇಳುವುದಾರೆ 20 ಅಡಿ ಉದ್ದ, 8 ಅಡಿ ಅಗಲ ಮತ್ತು 9 ಅಡಿ ಎತ್ತರದ ಕಂಟೇನರ್ ಒಂದು TEU ಅಂತ ಕರೆಯಲಾಗುತ್ತದೆ. 24 ಸಾವಿರ ಟಿಇಯು ಅಂದರೆ 24 ಸಾವಿರ ಕಂಟೇನರ್‌ ಹೊಂದಿರುವ ಹಡಗನ್ನು ವಿಳಿಂಜಂ ಬಂದರಲ್ಲಿ ಡಾಕ್‌ ಮಾಡಬಹುದು. ಕಳೆದ ತಿಂಗಳು ಟರ್ಕಿಯ ಹಡಗು ಇಲ್ಲಿ ಡಾಕ್‌ ಆಗಿತ್ತು. ಈ ಹಡಗು 400 ಮೀಟರ್‌ ಉದ್ದ, 61 ಮೀಟರ್‌ ಅಗಲವನ್ನು ಹೊಂದಿತ್ತು. ಇದರಲ್ಲಿ 24 ಸಾವಿರದ 300 ಕಂಟೇನರ್‌ ಇತ್ತು.

    ವಿಳಿಂಜಂ ಬಂದರಿನ ವಿಶೇಷತೆ ಏನು?
    ಭಾರತದಲ್ಲಿ ದೊಡ್ಡ ಮತ್ತು ಸಣ್ಣ ಬಂದರುಗಳಿವೆ. ಆದರೆ ಇಲ್ಲಿಯವರೆಗೆ Transshipment Port ಇರಲಿಲ್ಲ. ವಿಳಿಂಜಂ ದೇಶದ ಮೊದಲ Transshipment ಬಂದರು ಆಗಿದ್ದು, ಇಲ್ಲಿ ಹಡಗಿನಿಂದ ಹಡಗಿಗೆ ಸರಕನ್ನು ಸಾಗಿಸಬಹುದಾಗಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಸುಮಾರು 8,800 ಕೋಟಿ ರೂ. ವೆಚ್ಚದಲ್ಲಿ ಈ ಬಂದರನ್ನು ನಿರ್ಮಾಣ ಮಾಡಲಾಗಿದ್ದು ಮೇ 2 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈ ಬಂದರನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದರು.

    ವಿಳಿಂಜಂನಲ್ಲೇ ಯಾಕೆ?
    ಪ್ರಸ್ತುತ ಭಾರತಕ್ಕೆ ಸಾಗಿಸಲಾಗುವ ಎಲ್ಲಾ ಸಮುದ್ರ ಸರಕುಗಳ ಪೈಕಿ 75% ರಷ್ಟು ಸರಕುಗಳನ್ನು ಸಿಂಗಾಪುರ, ಕೊಲಂಬೊ ಅಥವಾ ದುಬೈನಂತಹ ವಿದೇಶಿ ಬಂದರುಗಳಲ್ಲಿ ಇಳಿಸಲಾಗುತ್ತದೆ. ದೊಡ್ಡ ಹಡಗಿನಲ್ಲಿ ಇಳಿಕೆಯಾದ ಸರಕುಗಳನ್ನು ಸಣ್ಣ ಹಡಗಿನಲ್ಲಿ ತುಂಬಿಸಿ ತರಲಾಗುತ್ತದೆ. ಇನ್ನು ಮುಂದೆ ವಿಳಿಂಜಂನಲ್ಲೇ ಇಳಿಸಬಹುದು. ಇದರಿಂದಾಗಿ ಭಾರತದ ವರ್ತಕರಿಗೆ ಕೋಟ್ಯಂತರ ರೂ. ಲಾಭವಾಗುವದರ ಜೊತೆಗೆ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆಯೂ ಇಳಿಕೆಯಾಗಲಿದೆ.

  • Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

    Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

    ತಿರುವನಂತಪುರಂ: ಸರಕು ಹಡಗಿನಲ್ಲಿ (Cargo Ship) ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಕೋಝಿಕ್ಕೋಡ್‌ನ (Kozhikode) ಬೇಪೋರ್ (Beypore) ಕರಾವಳಿಯ ಬಳಿ ನಡೆದಿದೆ. ಬೆಂಕಿಯ ಪರಿಣಾಮ ಹಡಗಿನಲ್ಲಿದ್ದ ಸುಮಾರು 20 ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದೆ.

    12.5 ಮೀಟರ್ ಡ್ರಾಫ್ಟ್ ಹೊಂದಿರುವ 270 ಮೀಟರ್ ಉದ್ದದ ಎಂವಿ ವಾನ್ ಹೈ 503 ಎಂಬ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 650 ಕಂಟೇನರ್‌ಗಳಿದ್ದ ಈ ಹಡಗಿನಲ್ಲಿ ಚೈನೀಸ್‌, ಮ್ಯಾನ್ಮಾರ್, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್‌ಗೆ ಸೇರಿದ 22 ಮಂದಿ ಸಿಬ್ಬಂದಿ ಇದ್ದರು. ಬೆಂಕಿ ಕಾಣಿಸಿಕೊಂಡ ವೇಳೆ 18 ಮಂದಿ ಸಮುದ್ರಕ್ಕೆ ಹಾರಿದ್ದು, ಎಲ್ಲಾ 18 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಏರ್‌ಫೋರ್ಸ್‌ ಒನ್‌ ಮೆಟ್ಟಿಲ ಮೇಲೆ ಎಡವಿ ಬಿದ್ದ ಟ್ರಂಪ್‌ – ಎಲ್ರೂ ಕಾಲೆಳಿತದೆ ಕಾಲ ಎಂದ ನೆಟ್ಟಿಗರು!

    ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆಯ ಹಡಗುಗಳು ಘಟನಾ ಸ್ಥಳಕ್ಕೆ ತೆರಳಿದ್ದು, ಹಡಗಿನಲ್ಲಿದ್ದವರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಸೊನ್ನೆ ಅಂಕ: ಸಿದ್ದರಾಮಯ್ಯ

  • ಕೇರಳದಿಂದ ಈಶಾನ್ಯ ರಾಜ್ಯಗಳವರೆಗೂ ನಿಲ್ಲದ ವರುಣನ ಅಬ್ಬರ – ಮಳೆಯಾರ್ಭಟಕ್ಕೆ 30ಕ್ಕೂ ಹೆಚ್ಚು ಬಲಿ

    ಕೇರಳದಿಂದ ಈಶಾನ್ಯ ರಾಜ್ಯಗಳವರೆಗೂ ನಿಲ್ಲದ ವರುಣನ ಅಬ್ಬರ – ಮಳೆಯಾರ್ಭಟಕ್ಕೆ 30ಕ್ಕೂ ಹೆಚ್ಚು ಬಲಿ

    ದೇಶದ ಹಲವು ರಾಜ್ಯಗಳಲ್ಲಿ ಅವಧಿಗೂ ಮುನ್ನವೇ ಮುಂಗಾರು ಆರಂಭವಾಗಿದ್ದು, ದಕ್ಷಿಣದ ಕೇರಳದಿಂದ (Kerala) ಈಶಾನ್ಯ ರಾಜ್ಯಗಳವರೆಗೂ (Northeast States) ವರುಣ ಅಬ್ಬರಿಸುತ್ತಿದ್ದಾನೆ.

    ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲೋಲ ಕಲ್ಲೋಲವಾಗಿದ್ದು, ಅವಧಿಪೂರ್ವ ಮುಂಗಾರು ಹೊಡೆತಕ್ಕೆ ಅಸ್ಸಾಂ, ಸಿಕ್ಕಿಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ರಾಜ್ಯಗಳು ಕಂಗಾಲಾಗಿವೆ.ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಬೇಡ ಎಂದಿಲ್ಲ: ದಿನೇಶ್ ಗುಂಡೂರಾವ್

    ಕಳೆದೆರೆಡು ದಿನಗಳಲ್ಲಿ ಮಳೆಯಾರ್ಭಟಕ್ಕೆ ಭೂಕುಸಿತ, ಹಠಾತ್ ಪ್ರವಾಹ ಉಂಟಾಗಿ ಜಲಪ್ರಳಯವೇ ಸಂಭವಿಸಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಅಸ್ಸಾಂನಲ್ಲಿ 9, ಅರುಣಾಚಲ ಪ್ರದೇಶದಲ್ಲಿ 9, ಮೇಘಾಲಯದಲ್ಲಿ 7 ಮತ್ತು ಮಿಜೋರಾಂನಲ್ಲಿ 6 ಸಾವನ್ನಪ್ಪಿದ್ದು, ನಾಗಾಲ್ಯಾಂಡ್‌ನಲ್ಲಿ ಒಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ.

    ರಸ್ತೆಗಳು ಹಾಳಾಗಿ, ಮನೆಗಳು ಕುಸಿದು ಜನರಿಗೆ ದಿಕ್ಕು ತೋಚದಂತಾಗಿದೆ. ನದಿಗಳು ಅಪಾಯಮಟ್ಟ ಮೀರಿ ಭೋರ್ಗರೆಯುತ್ತಿವೆ. ಅಸ್ಸಾಂನ 12 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 78,000ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಎನ್‌ಡಿಆರ್‌ಎಫ್‌ನಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಮಳೆರಾಯ ನರಕವನ್ನೇ ಸೃಷ್ಟಿಸಿದ್ದು, ಗುಡ್ಡಕುಸಿತದಿಂದ ಕೆಸರಿನಲ್ಲಿಯೇ ಮೃತದೇಹಗಳು ಹುದುಗಿವೆ. ಸಿಕ್ಕಿಂನಲ್ಲಿ ಮಳೆ, ಪ್ರವಾಹದಿಂದ ರಸ್ತೆ ಸಂಪರ್ಕ ಬಂದ್ ಆಗಿದ್ದು, 1,500 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಈ ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದ್ದು, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಇನ್ನೂ ಕೇರಳಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕಾಸರಗೋಡಿನಲ್ಲಿ ಮಳೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಧೂರು (Madhur) ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ.ಇದನ್ನೂ ಓದಿ: ಪಂಜಾಬ್‌ vs ಮುಂಬೈ ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆ ಅಡ್ಡಿ – ಮ್ಯಾಚ್‌ ರದ್ದಾದ್ರೆ ಯಾರಿಗೆ ನಷ್ಟ?

  • ಕೇರಳದಲ್ಲಿ ಭಾರೀ ಮಳೆಗೆ 5 ಸಾವು – 8 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

    ಕೇರಳದಲ್ಲಿ ಭಾರೀ ಮಳೆಗೆ 5 ಸಾವು – 8 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

    – ಕಣ್ಣೂರು, ಎರ್ನಾಕುಳಂ, ಕಾಸರಗೋಡು ಜಿಲ್ಲೆಗಳಲ್ಲಿ ಮಳೆಗೆ ಭಾರೀ ಹಾನಿ
    – ಮಧುವಾಹಿನಿ ಅಬ್ಬರಕ್ಕೆ ಮಧೂರು ದೇಗುಲ ಮುಳುಗಡೆ

    ತಿರುವನಂತಪುರಂ: ಕೇರಳದಲ್ಲಿ ( ಶುಕ್ರವಾರ ಸುರಿದ ಭಾರಿ ಮಳೆಗೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, ರಾಜ್ಯಾದ್ಯಂತ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಗಾಳಿ ಮತ್ತು ಉಬ್ಬರವಿಳಿತದಿಂದಾಗಿ ಮನೆಗಳಿಗೆ ವ್ಯಾಪಕ ಹಾನಿಯಾಗಿದೆ.

    ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಉಳಿದ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿತ್ತು. ಶನಿವಾರ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಜೂನ್ 5 ರವರೆಗೆ ರಾಜ್ಯಾದ್ಯಂತ ಭಾರೀ ಮಳೆ ಮುಂದುವರಿಯಲಿದೆ. ಕೇರಳದಲ್ಲಿ ಮುಂದಿನ ಐದು ದಿನಗಳವರೆಗೆ ಪಶ್ಚಿಮ ದಿಕ್ಕಿನ ಗಾಳಿ ಬೀಸುವ ನಿರೀಕ್ಷೆಯಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ನದಿ ದಂಡೆಯ ಬಳಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ತಿಳಿಸಿದ್ದಾರೆ.

    ಕೊಟ್ಟಾಯಂ ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದರೆ, ತಿರುವನಂತಪುರಂ ಬಳಿಯ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮಗುಚಿ ಬಿದ್ದು ಮೀನುಗಾರನೊಬ್ಬ ಸಾವನ್ನಪ್ಪಿದ್ದಾನೆ. ಕೊಚ್ಚಿಯಲ್ಲಿ ಮರ ಬಿದ್ದು 85 ವರ್ಷದ ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಯೊಬ್ಬ ಕೊಚ್ಚಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಬಹುತೇಕ ಎಲ್ಲಾ ಜಿಲ್ಲೆಗಳ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಡಿಂಗಿ ದೋಣಿಗಳ ಮೂಲಕ ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು. ನದಿಗಳ ಬಳಿ ವಾಸಿಸುವ ಜನರನ್ನು ಸಹ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು. ರಾಜ್ಯಾದ್ಯಂತ 2,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಯಿತು.

    ರಾಜ್ಯಾದ್ಯಂತ ಭಾರೀ ಮಳೆಗೆ ಮರಗಳು ಉರುಳಿಬಿದ್ದ ಪರಿಣಾಮ ಮನೆಗಳಿಗೆ ಹಾನಿಯಾಗಿದೆ. ರಾಜ್ಯದಾದ್ಯಂತ ಕರಾವಳಿ ಪ್ರದೇಶಗಳಲ್ಲಿನ ಅನೇಕ ಮನೆಗಳು ಉಬ್ಬರವಿಳಿತದ ಪರಿಣಾಮವಾಗಿ ನಾಶವಾದವು. ಮಳೆಯಿಂದಾಗಿ ರಾಜ್ಯಾದ್ಯಂತ ವ್ಯಾಪಕ ಬೆಳೆ ನಷ್ಟವಾಗಿದೆ.

  • ದೇಶದಲ್ಲಿ ಮಾನ್ಸೂನ್ ಅಬ್ಬರ – ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    ದೇಶದಲ್ಲಿ ಮಾನ್ಸೂನ್ ಅಬ್ಬರ – ಕೇರಳದ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

    – ಮುಂಬೈನಲ್ಲಿ 24 ಗಂಟೆಗಳಲ್ಲಿ 135.4 ಮಿ.ಮೀ ಮಳೆ
    – ಹಿಮಾಚಲ ಪ್ರದೇಶದಲ್ಲಿ ಆಲಿಕಲ್ಲು ಮಳೆ

    ನವದೆಹಲಿ: ದೇಶದಲ್ಲಿ ಮಾನ್ಸೂನ್ ಅಬ್ಬರ ಜೋರಾಗಿದ್ದು, ಕೇರಳದಲ್ಲೂ ಭಾರೀ ಮಳೆಯಾಗಿದೆ. ಕಣ್ಣೂರು, ವಯನಾಡ್, ಕೋಝಿಕ್ಕೋಡ್‌ನಲ್ಲಿ ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಕೊಚ್ಚಿಯ ಕಡಲತೀರದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ವರುಣನ ಆರ್ಭಟಕ್ಕೆ ಸಮುದ್ರಗಳು ಪ್ರಕ್ಷುಬ್ದಗೊಂಡಿದೆ. ಭಾರೀ ಮಳೆಯಿಂದಾಗಿ ಜನ ತತ್ತರಿಸಿದ್ದಾರೆ. ಇದನ್ನೂ ಓದಿ: ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆ – ರಾಜ್ಯದಲ್ಲಿ ಎಲ್ಲೆಲ್ಲಿ ಏನಾಗಿದೆ?

    ಮಹಾರಾಷ್ಟ್ರದ ಪುಣೆ, ಸತಾರಾ, ಸೋಲಾಪುರ, ರಾಯಗಢ ಮತ್ತು ಮುಂಬೈನಂತಹ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ರಾಯಗಢದಲ್ಲಿ ಸಿಡಿಲು ಬಡಿದು ಒಬ್ಬರು ಸಾವನ್ನಪ್ಪಿದರೇ, ಮುಂಬೈನಲ್ಲಿ ಮರ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಮುಂಬೈ 24 ಗಂಟೆಗಳಲ್ಲಿ 135.4 ಮಿಮೀ ಮಳೆಯಾಗಿದೆ. ಹಿಮಾಚಲ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: 1200 ರೂ. ಬೆಲೆಯ ಟಿಕೆಟ್‌ 6000ಕ್ಕೆ ಸೇಲ್‌ – ಐಪಿಎಲ್‌ ಟಿಕೆಟ್‌ ಮಾರುತ್ತಿದ್ದ ಟೆಕ್ಕಿ ಬಂಧನ

  • ಕೇರಳ | ಮುಳುಗಿದ ಕಾರ್ಗೋ ಶಿಪ್‌ – ಅಲೆಯ ಅಬ್ಬರಕ್ಕೆ ತೇಲಿಬಂದ ಕಂಟೇನರ್‌; ಮುಟ್ಟದಂತೆ ಜನರಿಗೆ ಸೂಚನೆ

    ಕೇರಳ | ಮುಳುಗಿದ ಕಾರ್ಗೋ ಶಿಪ್‌ – ಅಲೆಯ ಅಬ್ಬರಕ್ಕೆ ತೇಲಿಬಂದ ಕಂಟೇನರ್‌; ಮುಟ್ಟದಂತೆ ಜನರಿಗೆ ಸೂಚನೆ

    ತಿರುನಂತಪುರಂ: ಕೇರಳದ (Kerala) ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್‌ನಲ್ಲಿದ್ದ (Liberian ship) ಕೆಲವು ಕಂಟೇನರ್‌ಗಳು ಇಂದು ( ಸೋಮವಾರ) ಬೆಳಗಿನ‌ ಜಾವ ರಕ್ಕಸ ಅಲೆಗಳ ಅಬ್ಬರಕ್ಕೆ ದಡ ಸೇರಿವೆ.

    ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಕಾರ್ಗೋಶಿಪ್‌ನಲ್ಲಿ ಒಟ್ಟು 623 ಕಂಟೇನರ್‌ಗಳು ಇದ್ದವು. ಇದರಲ್ಲಿ 73 ಖಾಲಿ ಕಂಟೇನರ್‌ಗಳಾಗಿದ್ದವು. ಒಟ್ಟು 25 ಕಂಟೇನರ್‌ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಸೇರಿ, ಹಾನಿಕಾರಕ ಕೆಮಿಕಲ್‌ಗಳು ಇದ್ದವು. ಇವು ಜಲಚರಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ. ಇನ್ನೂ ಕಂಟೇನರ್ ಕಾಣಿಸಿಕೊಂಡರೆ ಅದರ ಬಳಿ ಹೋಗಬೇಡಿ, ಮುಟ್ಟಬೇಡಿ ಎಂದು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇರಳ | ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ಕಂಟೇನರ್‌ಗಳು ಸಮುದ್ರಪಾಲು – ಹೆಚ್ಚಿದ ಆತಂಕ

    ಕಂಟೇನರ್‌ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಏನಿದು ಘಟನೆ?
    ಕಾರ್ಗೋ ಶಿಪ್ ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಶನಿವಾರ ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ (Arabian Sea) ಹಡಗು ಮುಳುಗಿತ್ತು. ಮುಳುಗುವ ಮುನ್ನ ಹಡಗು ಒಂದು ಭಾಗಕ್ಕೆ ವಾಲಿದ್ದರಿಂದ ಅದರಲ್ಲಿದ್ದ ಕಂಟೇನರ್‌ಗಳು ಸಮುದ್ರದ ಪಾಲಾಗಿದ್ದವು. ಹಡಗಿನಲ್ಲಿದ್ದ 24 ಸಿಬ್ಬಂದಿಯನ್ನು ಭಾರತದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದರು.

    ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮ ಬೀಸುತ್ತಿತ್ತು. ಹಾಗಾಗಿ, ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ – ಪುತ್ತೂರಿಗೆ NDRF ತಂಡ ಆಗಮನ