Tag: ಕೇರಳ ಸರ್ಕಾರ

  • N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    – ಕೇರಳ ಸರ್ಕಾರದಿಂದ ದರ ನಿಗದಿಗೊಳಿಸಿ ಆದೇಶ

    ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

    ಯಾವುದಕ್ಕೆ ಎಷ್ಟು?: ಪಿಪಿಇ ಕಿಟ್‍ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ.

    ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್‍ಗೆ ಗರಿಷ್ಠ 192 ರೂ. ಮಾತ್ರ ಪಡೆಯಬಹುದು. ಕೋವಿಡ್ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ದೊರಕಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ನಿರ್ದೇಶನದನ್ವಯ ಕೇರಳ ಸರ್ಕಾರ ಈ ದರ ನಿಗದಿಗೊಳಿಸಿದೆ.

    ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್‌ಆರ್‌ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ.

  • ‘ಬಿಎಸ್‍ವೈಗೆ ಅವಮಾನ, ಕೇರಳ ಸಿಎಂ ಕನ್ನಡಿಗರ ಕ್ಷಮೆಯಾಚಿಸಬೇಕು’

    ‘ಬಿಎಸ್‍ವೈಗೆ ಅವಮಾನ, ಕೇರಳ ಸಿಎಂ ಕನ್ನಡಿಗರ ಕ್ಷಮೆಯಾಚಿಸಬೇಕು’

    – ಹಾವೇರಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

    ಹಾವೇರಿ: ಕೇರಳ ಸರ್ಕಾರ ಉದ್ದೇಶಪೂರ್ವಕವಾಗಿ ಅಲ್ಲಿನ ಪಟ್ಟಭದ್ರ ನಾಡದ್ರೋಹಿ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಯಡಿಯೂರಪ್ಪನವರ ವಿರುದ್ಧ ಹೋರಾಟ ಮಾಡಿಸಿ ರಾಜ್ಯಕ್ಕೆ ಅವಮಾನ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಆಕ್ರೋಶ ವ್ಯಕ್ತಪಡಿಸಿದರು.

    ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರು ತಡೆದು ಪ್ರತಿಭಟನೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಯಡಿಯೂರಪ್ಪನವರ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ 6 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇದನ್ನು ಕನ್ನಡಿಗರು ಯಾವತ್ತೂ ಸಹಿಸುವುದಿಲ್ಲ. ಕೂಡಲೇ ಕೇರಳ ಸರ್ಕಾರ ಕರ್ನಾಟಕದ ಮುಖ್ಯಮಂತ್ರಿಗಳ ಹಾಗೂ ಕನ್ನಡಿಗರಿಗೆ ಕ್ಷಮೆಯಾಚಿಸಬೇಕು. ಅಲ್ಲದೆ ಇತ್ತೀಚೆಗೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಭಕ್ತರ ಮೇಲೆ ಪೊಲೀಸರ ಕಣ್ಣೆದುರಿನಲ್ಲಿಯೇ ಹಲ್ಲೆ ಮಾಡಲಾಗಿದೆ. ಇದು ಕೇರಳ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಕೂಡಲೇ ಕೇರಳ ಸರ್ಕಾರ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಂಡು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಮಂಜುನಾಥ ಓಲೇಕಾರ ಒತ್ತಾಯಿಸಿದರು.

    ಸಿಎಂ ಯಡಿಯೂರಪ್ಪನವರು ಕೇರಳ ಪ್ರವಾಸ ಕೈಗೊಂಡಾಗ ಅಲ್ಲಿನ ಸರ್ಕಾರ ಸೂಕ್ತ ಭದ್ರತೆ ಒದಗಿಸದೇ ವ್ಯವಸ್ಥಿತವಾಗಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದೆ ಎಂದು ಮಂಜುನಾಥ್ ಕಿಡಿಕಾರಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ನೂರಅಹ್ಮದ್ ಲಕ್ಷ್ಮೇಶ್ವರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲ್ತಾಫ ನದಾಫ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಸಿ.ಬಿ. ದೊಡ್ಡಗೌಡರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾದೇವಪ್ಪ ಹೆಡಿಗ್ಗೊಂಡ, ಜಿಲ್ಲಾ ಕರವೇ ಮುಖಂಡ ಈರಣ್ಣ ಪಟ್ಟಣಶೆಟ್ಟಿ, ಹಾವೇರಿ ತಾಲೂಕು ಅಧ್ಯಕ್ಷ ಫಕ್ಕೀರೇಶ ಕಟ್ಟಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.

  • ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತೃತೀಯ ಲಿಂಗಿಯೆಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಪೈಲಟ್ ಮಾಡಲಿದೆ ಕೇರಳ ಸರ್ಕಾರ

    ತಿರುವನಂತಪುರಂ: ತೃತೀಯ ಲಿಂಗಿ ಎಂದು ಮನೆಯಿಂದ ಹೊರಹಾಕಲ್ಪಟ್ಟ ಮಗನನ್ನು ಕೇರಳ ಸರ್ಕಾರ ಕಮರ್ಷಿಯಲ್ ಪೈಲಟ್ ಮಾಡಲು ಮುಂದಾಗಿದೆ.

    ಕೇರಳದ 20 ವರ್ಷದ ತೃತೀಯ ಲಿಂಗಿ ಆಡಂ ಹ್ಯಾರಿಯನ್ನು ಆತನ ಪೋಷಕರು ಮನೆಯಿಂದ ಹೊರ ಹಾಕಿದ್ದಾರೆ. ಆಡಂ ಈಗ ದೇಶದ ಮೊದಲ ತೃತೀಯ ಲಿಂಗಿ ಕಮರ್ಷಿಯಲ್ ಪೈಲಟ್ ಆಗಲಿದ್ದಾರೆ. ಅಲ್ಲದೆ ಕೇರಳ ಸರ್ಕಾರ ಆಡಂ ಟ್ರೈನಿಂಗ್ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದೆ.

    ಆಡಂ ಬಳಿ ಈಗಾಗಲೇ ಪ್ರೈವೆಟ್ ಪೈಲಟ್ ಲೈಸೆನ್ಸ್ ಇದೆ. ಆದರೆ ಪ್ರಯಾಣಿಕರ ವಿಮಾನವನ್ನು ಚಲಾಯಿಸಲು ಕಮರ್ಷಿಯಲ್ ಲೈಸೆನ್ಸ್ ಬೇಕಾಗಿದೆ. ಕುಟುಂಬಸ್ಥರು ಮನೆಯಿಂದ ಹೊರಹಾಕಿದ ಕಾರಣ ಆಡಂ ಬಳಿ ತರಬೇತಿಯ ಶುಲ್ಕ ಪಾವತಿಸಲು ಹಣವಿರಲಿಲ್ಲ. ಆಡಂನ 3 ವರ್ಷಗಳ ತರಬೇತಿಗಾಗಿ ಕೇರಳ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ 23.34 ಲಕ್ಷ ರೂ. ಬಿಡುಗಡೆ ಮಾಡಿದೆ.

    ಆಡಂ ಈಗ ತಿರುವನಂತಪುರಂನ ರಾಜೀವ್ ಗಾಂಧಿ ಏವಿಯೇಷನ್ ಟೆಕ್ನಾಲಜಿ ಅಕಾಡೆಮಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಅಧ್ಯಯನ ಮಾಡಲಿದ್ದಾರೆ. ಇದನ್ನೂ ಓದಿ:  ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಆಡಂ ಹ್ಯಾರಿ, ಈ ಸಹಾಯಕ್ಕಾಗಿ ಕೇರಳ ಸರ್ಕಾರಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬಾಲ್ಯದ ಕನಸು ನನಸಾಗುತ್ತಿರುವುದ್ದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

    ಕಮರ್ಷಿಯಲ್ ಲೈಸೆನ್ಸ್ ಬೇಕೆಂದರೆ ಪೈಲಟ್‍ಗೆ 200 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿರುವ ಅನುಭವ ಬೇಕಾಗುತ್ತದೆ. ಆಡಂ ಕೇರಳದ ತ್ರಿಶೂರ್ ಜಿಲ್ಲೆಯವರಾಗಿದ್ದು, ಪ್ರೈವೇಟ್ ಪೈಲಟ್ ಲೈಸೆನ್ಸ್ ಪಡೆದ ದೇಶದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಂ 2017ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ತರಬೇತಿ ಪಡೆದ ನಂತರ ಅವರಿಗೆ ಲೈಸೆನ್ಸ್ ನೀಡಲಾಗಿತ್ತು.

  • 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ

    50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ

    ತಿರುವನಂತಪುರ: 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

    ಶಬರಿಮಲೆಯ ದೇವಾಲಯಕ್ಕೆ ಎಲ್ಲ ವಯೋಮಾನದವರಿಗೂ ಪ್ರವೇಶ ಕಲ್ಪಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಇದುವರೆಗೂ 51 ಮಹಿಳೆಯರು ದೇವಾಲಯ ಪ್ರವೇಶ ಮಾಡಿದ್ದಾರೆ ಎಂದು ಸರ್ಕಾರ ನೀಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ. ಪ್ರಮುಖವಾಗಿ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಲ್ಲಿ ದೇಗುಲ ಪ್ರವೇಶ ಮಾಡಿದ ಎಲ್ಲಾ ಮಹಿಳೆಯರ ಹೆಸರುಗಳನ್ನು ಡಿಜಿಪಿ ನಮೂದಿಸಿದ್ದಾರೆ. ಇದರಲ್ಲಿ ಕೆಲ ಮಹಿಳೆಯರು 18 ಮೆಟ್ಟಿಲು ಹತ್ತಿ ದೇಗುಲ ಪ್ರವೇಶ ಮಾಡಿದರೆ, ಉಳಿದವರು ವಿಶೇಷ ದರ್ಶನ ಮಾಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

    ಕೇರಳ ಸರ್ಕಾರ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿದ್ದಾರೆ. ಪ್ರಮುಖವಾಗಿ ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರಲ್ಲಿ ಕೇರಳದವರು ಕಡಿಮೆ ಸಂಖ್ಯೆಯಲ್ಲಿದ್ದು, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೇ ದೇಗುಲ ಪ್ರವೇಶ ಮಾಡಲು ಇದುವರೆಗೂ ಸುಮಾರು 7,500 ಸಾವಿರ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದು, 50 ಮಹಿಳೆಯರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿಯಲ್ಲಿ ನೀಡಲಾಗಿದೆ.

    ಜ. 2ರಂದು ದೇವಾಲಯ ಪ್ರವೇಶ ಮಾಡಿದ್ದ ಕನಕದುರ್ಗ ಎಂಬ ಮಹಿಳೆ ವಿರುದ್ಧ ಕುಟುಂಬಸ್ಥರೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಕನಕದುರ್ಗ ಅವರ ಮೇಲೆ ಹಲ್ಲೆ ಕೂಡ ನಡೆಸಲಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ರಕ್ಷಣೆಗಾಗಿ ನ್ಯಾಯಾಲಯದ ಮೆಟ್ಟಲು ಹತ್ತಿದ್ದ ಕನಕದುರ್ಗ ಹಾಗೂ ಬಿಂದು ಅವರಿಗೆ ರಕ್ಷಣೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv