Tag: ಕೇರಳ ನೆರೆ

  • ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!

    ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!

    ತಿರುವನಂತಪುರಂ: ನೆರೆಯಿಂದ ಸಂತ್ರಸ್ತಗೊಂಡಿರುವ ಕೇರಳದಲ್ಲಿ 8 ದಿನಗಳ ಕಾಲ ಐಎಎಸ್ ಅಧಿಕಾರಿಯೊಬ್ಬರು ತನ್ನ ಹೆಸರನ್ನು ಎಲ್ಲೂ ಹೇಳದೇ ಸ್ವಯಂಸೇವಕರಂತೆ ಕೆಲಸ ಮಾಡಿದ್ದಾರೆ.

    2012ರ ಬ್ಯಾಚ್ ಅಧಿಕಾರಿ ಪ್ರಸ್ತುತ ದಾದ್ರಾ ಮತ್ತು ನಗರ್ ಹವೇಲಿಯ ಜಿಲ್ಲಾಧಿಕಾರಿಯಾಗಿರುವ ಕಣ್ಣನ್ ಗೋಪಿನಾಥನ್ ಸ್ವಯಂಸೇವಕರ ಜೊತೆಯೇ ಕೆಲಸ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    8ನೇ ದಿನ ಕೇರಳ ಬುಕ್ ಮತ್ತು ಪಬ್ಲಿಕೇಶನ್ ಕೇಂದ್ರದಲ್ಲಿ ವಸ್ತುಗಳನ್ನು ಲೋಡಿಂಗ್ ಮಾಡುವ ವೇಳೆ ಎರ್ನಾಕುಲಂ ಜಿಲ್ಲಾಧಿಕಾರಿ ಮೊಹಮ್ಮದ್ ಸಫ್ರುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಫ್ರುಲ್ಲಾ ಅವರಿಗೆ ಮೊದಲೇ ಗೋಪಿನಾಥನ್ ಅವರ ಪರಿಚಯ ಇತ್ತು. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಐಎಎಸ್ ಅಧಿಕಾರಿ ಎಂದು ಪರಿಚಯಿಸಿದಾಗ ಗೋಪಿನಾಥನ್ ಅವರ ವ್ಯಕ್ತಿತ್ವ ಅಲ್ಲಿದ್ದವರಿಗೆ ಗೊತ್ತಾಗಿದೆ.

    ದಾದ್ರಾ ಮತ್ತು ನಗರ್‍ಹವೇಲಿಯ 1 ಕೋಟಿ ರೂ. ನೆರವು ನೀಡಲು ಗೋಪಿನಾಥ್ ಕೇರಳಕ್ಕೆ ಆಗಮಿಸಿದ್ದರು. ಆಗಸ್ಟ್ 26 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಚೆಕ್ ನೀಡಿದ ಬಳಿಕ ಅವರು ತಿರುವನಂತಪುರಂನಿಂದ ನೇರವಾಗಿ ಸರ್ಕಾರಿ ಬಸ್ಸು ಹತ್ತಿದ್ದು ಚೆಂಗನ್ನೂರಿಗೆ. ಕೇರಳದಲ್ಲಿ ನೆರೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ ಒಂದಾಗಿರುವ ಚೆಂಗನ್ನೂರಿನಲ್ಲಿ ಇಳಿದ ಇವರು ಸ್ವಯಂಸೇವಕರಂತೆ ಕೆಲಸ ಮಾಡತೊಡಗಿದರು.

    ಜನ ಗೋಪಿನಾಥನ್ ಅವರನ್ನು ಯಾರು ನೀವು ಪ್ರಶ್ನಿಸಿದಾಗ, ನಾನು ಸರ್ಕಾರೇತರ ಸಂಸ್ಥೆಯೊಂದರ ಸ್ವಯಂಸೇವಕ ಎಂದು ಹೇಳಿಕೊಂಡಿದ್ದರು. ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುವ ಜೊತೆ ಅವರು ಭಾಷಾಂತರ ಮಾಡುತ್ತಿದ್ದರು.  ಐಎಎಸ್ ಅಧಿಕಾರಿಗಳಿಗೆ ಗೋಪಿನಾಥ್ ಕೇರಳದಲ್ಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಿತ್ತು.  ಕೆಲ ಐಎಎಸ್ ಸಹಪಾಠಿಗಳಿಗೆ ಮಾತ್ರ ಗೋಪಿನಾಥನ್ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದಿತ್ತು.

    ತನ್ನ ಕೆಲಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಏನು ದೊಡ್ಡ ಕೆಲಸ ಮಾಡಿಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದರು.

    ಕೊನೆಗೆ ನನ್ನ ಪರಿಚಯ ತಿಳಿದಾಗ ಜನ ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು. ಇದರಿಂದ ನನಗೆ ಬಹಳ ಮುಜುಗರವಾಯಿತು. ಈ ವೇಳೆ ಅಧಿಕಾರಿಗಳಿಗೆ ನಾನು ಐಎಎಸ್ ಅಧಿಕಾರಿ ಎನ್ನುವ ವಿಚಾರ ಗೊತ್ತಾದ ಬಳಿಕ ಅವರು ಕೆಲಸದ ವೇಳೆ ನಾವು ಏನಾದರೂ ನಿಮಗೆ ಬೈದಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತೇವೆ ಎಂದಿದ್ದರು. ನೀವು ನನ್ನನ್ನು ಹೀರೋನಂತೆ ಬಿಂಬಿಸಬೇಡಿ. ತಳ ಮಟ್ಟದಲ್ಲಿ ಬಹಳಷ್ಟು ಜನ ಕಷ್ಟಪಟ್ಟು ಸಹಾಯ ಮಾಡುತ್ತಿದ್ದಾರೆ. ಅವರೇ ನಿಜವಾದ ಹೀರೋಗಳು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಕೇರಳದ ಪುದುಪ್ಪಲ್ಲಿಯವರಾದ ಗೋಪಿನಾಥನ್ ಕೇರಳದಿಂದ ತೆರಳಿದ ಬಳಿಕ ಸಾಂದರ್ಭಿಕ ರಜೆಯನ್ನು ಹಾಕಿದ್ದರೂ ದಾದ್ರಾ ಮತ್ತು ನಗರ್ ಹವೇಲಿ ಆಡಳಿತ ಸರ್ಕಾರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಂಡಿದ್ದಾರೆ ಎಂದು ದಾಖಲು ಮಾಡಿಕೊಂಡಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ತಿರುವಂತಪುರಂ/ನವದೆಹಲಿ: ಶತಮಾನದ ಮಳೆಗೆ ಕೇರಳ ತತ್ತರಿಸಿ ಹೋಗಿದ್ದು, 13 ಜಿಲ್ಲೆಗಳಲ್ಲಿ ಜನ ಮೊದಲಿನ ಸ್ಥಿತಿಗೆ ಬರಬೇಕಾದರೆ ವರ್ಷಗಳೇ ಬೇಕಾಗಲಿದೆ. ಇದರ ನಡುವೆ ಕೇರಳಕ್ಕೆ ವಿದೇಶಿ ನೆರವು ವಿಷಯವಾಗಿ ದೊಡ್ಡ ರಾಜಕೀಯ ಗುದ್ದಾಟ ನಡೆಯುತ್ತಿದೆ.

    ರಾಜ್ಯಕ್ಕೆ 19,512 ಕೋಟಿ ರೂ. ನಷ್ಟವಾಗಿದ್ದು, ಈಗ ತುರ್ತಾಗಿ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು. ಆಗಸ್ಟ್ 17ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ 500 ಕೋಟಿ ರೂ. ಪ್ರಕಟಿಸಿದ್ದರು. ಬಳಿಕ ರಾಜನಾಥ್ ಸಿಂಗ್ 100 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಕೇರಳಕ್ಕೆ ಆರ್ಥಿಕವಾಗಿ ಯುಎಇ 700 ಕೋಟಿ ನೆರವು ಘೋಷಿಸಿದೆ ಅಂತ ಸಿಎಂ ಪಿಣರಾಯಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿರುವ ನಿಯಮಾನುಸಾರ ವಿದೇಶಿ ನೆರವು ಪಡೆಯಲು ಸಾಧ್ಯವಿಲ್ಲ ಅನ್ನೋ ಚರ್ಚೆ ಆರಂಭವಾಯಿತು.

    ನಾವು ನೆರವಿಗೆ ಮುಂದಾಗಿದ್ದು ನಿಜ. ಆದರೆ, 700 ಕೋಟಿ ಅಂತ ಅಧಿಕೃತವಾಗಿ ಪ್ರಕಟಿಸಿಲ್ಲ ಅಂತ ಯುಎಇ ರಾಯಭಾರಿ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ, ನೆರವಿನ ಮೊತ್ತ 700 ಕೋಟಿ ಅಂತ ಸಿಎಂ ಹೇಳಿರೋದ್ಯಾಕೆ? ಈ ವದಂತಿಯ ಮೂಲ ಏನು ಅಂತ ಬಿಜೆಪಿ ಪ್ರಶ್ನಿಸಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ವಿದೇಶಿ ನೆರವು ಪಡೆಯುವ ಬಗ್ಗೆ ಕೇಂದ್ರ ಸರ್ಕಾರ, ಸರ್ವಪಕ್ಷ ಸಭೆ ಕರೆದು ಸ್ಪಷ್ಟ ನೀತಿ ರೂಪಿಸಲಿ ಅಂತ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

    ಈ ಮಧ್ಯೆ, ಕೇರಳದ ಪರಿಸ್ಥಿತಿಗೆ ತಮಿಳುನಾಡಿನ ಮುಲ್ಲಾಪೆರಿಯಾರ್ ಡ್ಯಾಮ್ ಕಾರಣ ಅಂತ ಸುಪ್ರೀಂನಲ್ಲಿ ಕೇರಳ ತಿಳಿಸಿದೆ. ಮುಲ್ಲಾಪೆರಿಯಾರ್ ಜಲಾಶಯದ ಗೇಟುಗಳನ್ನು ಒಮ್ಮಿದೊಮ್ಮೆಗೆ ತೆರೆದ ಕಾರಣ ದುರಂತ ನಡೆದಿದೆ ಎಂದು ಹೇಳಿದೆ. ಆದರೆ ಕೇರಳ ವಾದವನ್ನು ತಿರಸ್ಕರಿಸಿದ ತಮಿಳುನಾಡು ಸಿಎಂ ಈ ಒಂದು ಡ್ಯಾಂ ನೀರು ಕೇರಳದ ಅಷ್ಟೊಂದು ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ. ಕೇರಳ ಡ್ಯಾಂನಿಂದ ನೀರು ಬಿಟ್ಟದ್ದು ಅಲ್ಲಿಯ ದುರಂತಕ್ಕೆ ಕಾರಣ ಎಂದು ತಿರುಗೇಟು ನೀಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv