Tag: ಕೇರಳ ಚುನಾವಣೆ

  • ಕೇರಳದಲ್ಲಿ ಮತ್ತೊಮ್ಮೆ ಎಲ್‍ಡಿಎಫ್ – ಶೂನ್ಯ ಸುತ್ತಿದ ಬಿಜೆಪಿ

    ಕೇರಳದಲ್ಲಿ ಮತ್ತೊಮ್ಮೆ ಎಲ್‍ಡಿಎಫ್ – ಶೂನ್ಯ ಸುತ್ತಿದ ಬಿಜೆಪಿ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪಿಣರಾಯ್ ವಿಜಯನ್ ಅಧಿಕಾರಕ್ಕೆ ಏರಿದ್ದಾರೆ. ಆರಂಭದಿಂದಲೇ ಮುನ್ನಡೆ ಸಾಧಿಸಿದ್ದ ಎಲ್‍ಡಿಎಫ್ ಮೈತ್ರಿಕೂಟ ಭಾರೀ ಮುನ್ನಡೆಯನ್ನು ಪಡೆಯುವ ಮೂಲಕ ಸತತ ಎರಡನೇ ಬಾರಿ ಗದ್ದುಗೆ ಹಿಡಿದಿದೆ.

    ಒಟ್ಟು 140 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್‍ಡಿಫ್ 93ರಲ್ಲಿ ಮುನ್ನಡೆ ಸಾಧಿಸಿದರೆ ಯುಡಿಎಫ್ 43 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇತರರು 4 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ ಬಿಜೆಪಿ ಈ ಬಾರಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

    ಆರಂಭದಲ್ಲಿ ಬಿಜೆಪಿ ಕೋಯಿಕ್ಕೋಡ್ ದಕ್ಷಿಣ, ಕಾಸರಗೋಡು, ಪಾಲಕ್ಕಾಡ್, ತ್ರಿಶ್ಯೂರ್, ನೇಮಂನಲ್ಲಿ ಮುನ್ನಡೆಯಲ್ಲಿತ್ತು. ನಂತರ ಈ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿತು.

    ಆರಂಭದಲ್ಲಿ ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‍ನಲ್ಲಿ ಮುನ್ನಡೆ ಸಾಧಿಸಿದ್ದರು. ಕೊನೆಯ ಸುತ್ತುಗಳಲ್ಲಿ ಕಾಂಗ್ರೆಸ್ ಶಫಿ ಪರಂಬಿಗೆ ಮುನ್ನಡೆ ಸಿಕ್ಕಿದ್ದರಿಂದ ಶ್ರೀಧರನ್ ಅವರಿಗೆ ಸೋಲಾಗಿದೆ.

    ಕಳೆದ ಚುನಾವಣೆ ನೇಮಂ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಮಾಜಿ ಕೇಂದ್ರ ಸಚಿವ ಒ ರಾಜಗೋಪಾಲ್ ಇಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಇಲ್ಲಿ ಗೆಲುವು ಸಾಧಿಸಲು ಮಿಜೋರಾಂ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು.

    ಈ ಬಾರಿ ಕನಿಷ್ಠ 5 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲೇಬೇಕೆಂದು ಪಣ ತೊಟ್ಟಿತ್ತು. ಈ ನಿಟ್ಟಿನಲ್ಲಿ ಕರ್ನಾಟಕದ ಡಿಸಿಎಂ ಅಶ್ವತ್ಥ ನಾರಾಯಣ, ದಕ್ಷಿಣ ಕನ್ನಡ ಶಾಸಕರು ಸಹ ಕೇರಳದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು.

  • ಕೇರಳದಲ್ಲಿ ಮತ್ತೆ ಅಧಿಕಾರದತ್ತ ಎಲ್‍ಡಿಎಫ್ – 3 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ಕೇರಳದಲ್ಲಿ ಮತ್ತೆ ಅಧಿಕಾರದತ್ತ ಎಲ್‍ಡಿಎಫ್ – 3 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪಿಣರಾಯ್ ವಿಜಯನ್ ಅಧಿಕಾರಕ್ಕೆ ಏರುವ ಸಾಧ್ಯತೆ ಹೆಚ್ಚಿದೆ.ಆರಂಭಿಕ ಎಣಿಕೆಗಳಲ್ಲಿ ಎಲ್‍ಡಿಎಫ್ ಮೈತ್ರಿಕೂಟ ಮುನ್ನಡೆಯಲ್ಲಿದೆ.

    ಎಲ್‍ಡಿಎಫ್ ಮೈತ್ರಿಕೂಟ 78 ರಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಆರಂಭದಲ್ಲಿ ಬಿಜೆಪಿ ಕೋಯಿಕ್ಕೋಡ್ ದಕ್ಷಿಣ ಮತ್ತು ಕಾಸರಗೋಡಿನಲ್ಲಿ ಮುನ್ನಡೆ ಸಾಧಿಸಿತ್ತು. ಸದ್ಯ ಬಿಜೆಪಿಯಿಂದ ಸ್ಪರ್ಧಿಸಿರುವ ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‍ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ತ್ರಿಶ್ಯೂರಿನಲ್ಲಿ ಸುರೇಶ್ ಗೋಪಿ ಮುನ್ನಡೆಯಲ್ಲಿದ್ದಾರೆ.

    ನೇಮಂನಲ್ಲಿ ಕುಮ್ಮನಂ ರಾಜಶೇಖರ್ ಮುನ್ನಡೆಯಲ್ಲಿದ್ದಾರೆ. 2016ರ ಚುನಾವಣೆಯಲ್ಲಿ ಮೊದಲ ಬಾರಿಗೆ ಇಲ್ಲಿ ಕಮಲ ಅರಳಿತ್ತು. ಮಾಜಿ ಕೇಂದ್ರ ಸಚಿವ ಒ ರಾಜಗೋಪಾಲ್ ಇಲ್ಲಿ ಗೆಲುವು ಸಾಧಿಸಿದ್ದರು.

  • ರಾಜ್ಯಕ್ಕೆ ಬರಲಿದೆ ಮಕ್ಕಳಲ್ಲಿ ಆವಿಷ್ಕಾರ ಮನೋಭಾವ ಬೆಳೆಸುವ ಬಿ-ಕ್ಯಾಂಪ್ & ಫೆಸ್ಟ್

    ರಾಜ್ಯಕ್ಕೆ ಬರಲಿದೆ ಮಕ್ಕಳಲ್ಲಿ ಆವಿಷ್ಕಾರ ಮನೋಭಾವ ಬೆಳೆಸುವ ಬಿ-ಕ್ಯಾಂಪ್ & ಫೆಸ್ಟ್

    – ಟ್ರಾವಂಕೂರು ಅರಮನೆ ಕಾರ್ಯಕ್ರಮದಲ್ಲಿ ಡಿಸಿಎಂ

    ತಿರುವನಂತಪುರ: ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಿ ಅವರಲ್ಲಿ ಆವಿಷ್ಕಾರ ಮನೋಭಾವವನ್ನು ಮೂಡಿಸುವ ಬಿ-ಕ್ಯಾಂಪ್ & ಫೆಸ್ಟ್ ಇದೀಗ ಕರ್ನಾಟಕಕ್ಕೂ ಕಾಲಿಡಲಿದ್ದು, ಅದರ ವಿವರಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರಿಗೆ ಟ್ರಾವಂಕೂರು ರಾಜಮನೆತನದ ಮಹಾರಾಣಿ ಪೋಯಂ ತಿರುನಾಳ್ ಗೌರಿಪಾರ್ವತಿ ಭಾಯಿ ಅವರು ಹಸ್ತಾಂತರ ಮಾಡಿದರು.

    ತಿರುವನಂತಪುರದಲ್ಲಿ ಭಾನುವಾರ ಕೌಡಿಯಾರ್‍ನಲ್ಲಿರುವ ಅರಮನೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈಗಾಗಲೇ ಕೇರಳದಲ್ಲಿ ಬಿ-ಕ್ಯಾಂಪ್ & ಫೆಸ್ಟ್ ಬಹಳ ಹೆಸರುವಾಸಿಯಾಗಿದ್ದು, ಇದನ್ನು ಕೇರಳದ ಬ್ಲೂಮ್‍ಬ್ಲೂಮ್ ಎಂಬ ಸ್ಟಾರ್ಟಪ್ ಅಭಿವೃದ್ಧಿಪಡಿಸಿದೆ.

    ಜಾಗತಿಕವಾಗಿ ಶೈಕ್ಷಣಿಕ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿ-ಕ್ಯಾಂಪ್ & ಫೆಸ್ಟ್ ಅನ್ನು ರೂಪಿಸಲಾಗಿದ್ದು, ಅಪರಿಮಿತವಾಗಿ ಕಲಿಯಲು ಅವಕಾಶವಿದೆ. 5 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ನಾವೀನ್ಯತೆಯನ್ನು ಬೆಳೆಸುವ ಉದ್ದೇಶ ಇದರದ್ದು. ಕೇರಳದಲ್ಲಿ 500ಕ್ಕೂ ಹೆಚ್ಚು ಶಿಕ್ಷಣತಜ್ಞರ ಮಾರ್ಗದರ್ಶನದಲ್ಲಿ 6,000ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಬ್ಲೂಮ್‍ಬ್ಲೂಮ್ ಪ್ರತಿನಿಧಿಗಳು ಡಿಸಿಎಂ ಅವರಿಗೆ ಮಾಹಿತಿ ನೀಡಿದರು.

    ಆನ್‍ಲೈನ್ ಮೂಲಕವೂ ತಮ್ಮ ಆಯ್ಕೆಯ ವಿಷಯಗಳನ್ನು ಮಕ್ಕಳು ಪರಿಣಾಮಕಾರಿಯಾಗಿ ಕಲಿಯಬಹುದಾಗಿದೆ.

  • ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    ಕಾಂಗ್ರೆಸ್-ಎಡಪಕ್ಷಗಳ ನಡ್ವೆ ಫಿಕ್ಸಿಂಗ್: ಪ್ರಧಾನಿ ಮೋದಿ

    – ಒಬ್ಬರು ಚಿನ್ನ, ಮತ್ತೊಬ್ಬರು ಬೆಳ್ಳಿ ಕದ್ರು

    ತಿರುವನಂತಪುರ: ವಿಧಾನಸಭಾ ಚುನಾವಣೆ ಹಿನ್ನೆಲೆ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಲಕ್ಕಾಡದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿವೆ. ಕೇರಳದ ಜನತೆ ಎಲ್‍ಡಿಎಫ್-ಯುಡಿಎಫ್ ರಾಜಕಾರಣಕ್ಕೆ ಬೇಸತ್ತಿದ್ದು, ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದರು.

    ಐದು ವರ್ಷ ಒಬ್ಬರು ಲೂಟಿ ಮಾಡ್ತಾರೆ, ಮತ್ತೈದು ವರ್ಷ ಮತ್ತೊಬ್ಬರು ಕನ್ನ ಹಾಕ್ತಾರೆ. ಒಬ್ಬರು ಚಿನ್ನ ಮತ್ತು ಮತ್ತೊಬ್ಬರು ಬೆಳ್ಳಿ ಕದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಂದೇ ಆಗಿವೆ. ಉತ್ತರ ಪ್ರದೇಶದಲ್ಲಿ ಜೊತೆಯಾಗಿದ್ದು, ಚುನಾವಣೆ ಹಿನ್ನೆಲೆ ಇಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೇರಳ ವಿಕಾಸದ ಕುರಿತು ಮಾತನಾಡಿ ಮತಯಾಚನೆ ಮಾಡಿದರು. ದೇಶದ ಜನತೆ ವಿಕಾಸ ಮತ್ತು ವಿಶ್ವಾಸದ ಮೇಲೆ ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು. ಈ ವೇದಿಕೆ ಮೇಲಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಹಾಡಿ ಹೊಗಳಿದರು. ಕೆಲವರು ಸ್ವಾರ್ಥ ಅಥವಾ ತಮ್ಮ ಲಾಭಕ್ಕಾಗಿ ರಾಜಕಾರಣಕ್ಕೆ ಬರುತ್ತಾರೆ. ಆದ್ರೆ ಶ್ರೀಧರನ್, ತಮ್ಮ ಜೀವನವನ್ನೇ ದೇಶಕ್ಕೆ ಅರ್ಪಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೇರಳ ಜನತೆಯ ಸೇವೆಗೆ ಮುಂದಾಗಿದ್ದಾರೆ ಎಂದು ಹೇಳಿದರು.

  • ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಶಾ

    ಕೇರಳ ಲೀಡರುಗಳಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಶಾ

    – ಅಶ್ವತ್ಥನಾರಾಯಣ ಜತೆ ಮಧ್ಯರಾತ್ರಿವರೆಗೂ ಸಮಾಲೋಚಿಸಿದ ಬಿಜೆಪಿ ಚಾಣಕ್ಯ

    ತಿರುವನಂತಪುರಂ: ಏಪ್ರಿಲ್‌ 6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯತಂತ್ರ ರೂಪಿಸಲು ಈವರೆಗೂ ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಿದ್ದ ಬಿಜೆಪಿಯ ಚಾಣಕ್ಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದೀಗ ಕೇರಳದಲ್ಲಿ ನೇರವಾಗಿ ರಂಗಪ್ರವೇಶ ಮಾಡಿದ್ದಾರೆ.

    ಕಳೆದ ಚುನಾವಣೆಯಲ್ಲಿ ಕೇವಲ ಒಂದು ಅಸೆಂಬ್ಲಿ ಸೀಟು ಗೆಲ್ಲಲು ಮಾತ್ರ ಶಕ್ತವಾಗಿದ್ದ ಬಿಜೆಪಿಯನ್ನು ಎರಡಂಕಿ ಅಥವಾ ಅದಕ್ಕೂ ಹೆಚ್ಚು ಸ್ಥಾನಗಳತ್ತ ಮುನ್ನಡೆಸಲು ಶಾ ಅವರು ಗುರಿ ಇಟ್ಟುಕೊಂಡಿದ್ದು, ಆ ನಿಟ್ಟಿನಲ್ಲಿ ತಮ್ಮ ತಂಡದ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

    ಮಂಗಳವಾರವೇ ಕೇರಳವನ್ನು ಸೇರಿಕೊಂಡ ಅಮಿತ್‌ ಶಾ ಪಕ್ಷದ ಸಹ ಪ್ರಭಾರಿಯೂ ಆಗಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕೇರಳದ ವಿವಿಧ ನಾಯಕರ ಜತೆ ಮಧ್ಯರಾತ್ರಿವರೆಗೂ ಮಹತ್ವದ ಮಾತುಕತೆ ನಡೆಸಿದರು. ಅದಕ್ಕೂ ಮೊದಲು ಡಿಸಿಎಂ ಮತ್ತಿತರರ ಜತೆ ಶಾ ಭೋಜನ ಸ್ವೀಕರಿಸಿದರು. ಬುಧವಾರ ಬೆಳಗ್ಗೆ ಮತ್ತೆ ಡಿಸಿಎಂ ಅವರನ್ನು ಕರೆಸಿಕೊಂಡ ಅಮಿತ್‌ ಶಾ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರು, ರಾಜ್ಯದಲ್ಲಿ ಪಕ್ಷಕ್ಕಿರುವ ಸಾಧ್ಯತೆಗಳು-ಅವಕಾಶಗಳ  ಬಗ್ಗೆ ಸಂಪೂರ್ಣ ವಿವರಗಳನ್ನು ಅಮಿತ್‌ ಶಾ ಅವರಿಗೆ ನೀಡಿದರು. ಕರ್ನಾಟಕದ ಗಡಿಯಲ್ಲಿರುವ  ಕಾಸರಗೋಡಿನಿಂದ ತಿರುವನಂತಪುರದವರೆಗೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತವರು ಜಿಲ್ಲೆ ಕಣ್ಣೂರಿನಿಂದ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಪಾಲಕ್ಕಾಡ್‌ವರೆಗೂ ಬಿಜೆಪಿಗಿರುವ ಅವಕಾಶಗಳ ಬಗ್ಗೆ ಅಶ್ವತ್ಥನಾರಾಯಣ ಅವರಿಂದ ಅಮಿತ್‌ ಶಾ ಮಾಹಿತಿ ಪಡೆದರು.

    ತ್ರಿಪುರದ ಉದಾಹರಣೆ ಕೊಟ್ಟ ಶಾ:
    ತ್ರಿಪುರ ರಾಜ್ಯದ ಉದಾಹರಣೆ ನೀಡಿದ ಅಮಿತ್‌ ಶಾ ಅವರು, ಎಲ್‌ಡಿಎಫ್‌ ಸರಕಾರದ ಹಗರಣಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಬೇಕು. ಪಕ್ಷ ಬಲವರ್ಧನೆಗೆ ಬೇಕಾದ ಎಲ್ಲ ಹೆಜ್ಜೆಗಳನ್ನು ಇಡಬೇಕು. ತ್ರಿಪುರದಲ್ಲಿ ಬಿಜೆಪಿಗೆ ಶೇ.0.75ರಷ್ಟು ವೋಟ್‌ ಶೇರ್‌ ಇತ್ತು. ಅಲ್ಲಿ ಪಕ್ಷ ಅಧಿಕಾರಕ್ಕೆ ಬಂತು. ಕೇರಳದಲ್ಲಿ ಶೇ.16 ವೋಟ್‌ ಶೇರ್‌ ಇದೆ. ಇಷ್ಟಿದ್ದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟವೇ? ಎಂದು ರಾಜ್ಯ ನಾಯಕರನ್ನು ಕಟುವಾಗಿ ಪ್ರಶ್ನಿಸಿರೆಂದು ಗೊತ್ತಾಗಿದೆ.

    ಪಕ್ಷ ಗೆಲ್ಲಬೇಕು. ಅದಕ್ಕೆ ಅಗತ್ಯವಾದ ಎಲ್ಲ ಕಾರ್ಯತಂತ್ರಗಳ ಬಗ್ಗೆ ನಾಯಕರಿಗೆ ಫುಲ್‌ ಕ್ಲಾಸ್‌ ಕೊಟ್ಟ ಅಮಿತ್‌ ಶಾ, ಶೇ.0.75 ಎಲ್ಲಿ? ಶೇ.16 ಎಲ್ಲಿ? ಮನಸ್ಸಿದ್ದರೆ ಮಾರ್ಗ. ಅವಿರತವಾಗಿ ಕೆಲಸ ಮಾಡಿ. ವ್ಯೂಹಾತ್ಮಕ ಹೆಜ್ಜೆಗಳಿನ್ನಿಡಿ ಎಂದು ಹೇಳಿದ್ದಾರೆ.

    ಚುನಾವಣೆ ಹೊತ್ತಿನಲ್ಲಿ ಸಮಯ ಪೋಲು ಮಾಡುವುದು ಬೇಡ. ಎಲ್ಲರೂ ಎಲ್ಲ ದಿಕ್ಕುಗಳಲ್ಲೂ ಪ್ರಚಾರ ಮಾಡಿ. ಜನರಿಗೆ ಹತ್ತಿರವಾಗಿ. ಬಿಜೆಪಿ ಆಶಯಗಳನ್ನು ಮನವರಿಕೆ ಮಾಡಿ. ಎಲ್‌ಡಿಎಫ್‌ ಸರಕಾರದ ಅನೀತಿಗಳನ್ನು ತಿಳಿಸಿ. ಅದಕ್ಕೂ ಹಿಂದೆ ಇದ್ದ ಯುಡಿಎಫ್‌ ಸರಕಾರದ ದುರಾಡಳಿತವನ್ನು ಒತ್ತಿ ಹೇಳಿ ಎಂದು ನಾಯಕರಿಗೆ ಶಾ ತಾಕೀತು ಮಾಡಿದ್ದಾರೆ.

     

    ಡಿಸಿಎಂ ಹೇಳಿದ್ದೇನು?
    ಅಮಿತ್‌ ಶಾ ಅವರು ಮಂಗಳವಾರ ತಡರಾತ್ರಿವರೆಗೂ ನಮ್ಮ ಜತೆ ಚರ್ಚೆ ನಡೆಸಿದರು. ಮಾರ್ಗದರ್ಶನ ಮಾಡಿದರು. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೇಗೆಲ್ಲ ಕೆಲಸ ಮಾಡಬೇಕು? ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ವಿವರವಾಗಿ ಸೂಚಿಸಿದ್ದಾರೆ. ಕೆಲ ವಿಚಾರಗಳನ್ನು ಬಹಿರಂಗವಾಗಿ ಹೇಳಲಾಗದು. ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತೇವೆ” ಎಂದು ಡಿಸಿಎಂ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ.

    ರಾಜ್ಯದಲ್ಲಿ ಎಲ್‌ಡಿಎಫ್‌ ಆಡಳಿತವನ್ನು ಕೊನೆಗಾಣಿಸಲೇಬೇಕು ಎಂದು ಗುರಿ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

    ಅಮಿತ್ ಶಾ ನಡೆಸಿದ‌ ಪಕ್ಷದ ಮುಖಂಡರ ಸಭೆಯಲ್ಲಿ‌ ಡಿಸಿಎಂ ಅಶ್ವತ್ಥ ನಾರಾಯಣ ಜತೆಗೆ ಕೇರಳದ ಪಕ್ಷದ ಉಸ್ತುವಾರಿ ಪಿ.ಸಿ.ರಾಧಾಕೃಷ್ಣನ್, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಣೇಶನ್ ಮತ್ತಿತರರು ಹಾಜರಿದ್ದರು.

  • ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ  ಅಸ್ತಿತ್ವದಲ್ಲಿ ಇಲ್ಲ – ಹಿರಿಯ ನಾಯಕ ಚಾಕೋ ರಾಜೀನಾಮೆ

    ಕೇರಳದಲ್ಲಿ ಕಾಂಗ್ರೆಸ್‌ ಪಕ್ಷ ಅಸ್ತಿತ್ವದಲ್ಲಿ ಇಲ್ಲ – ಹಿರಿಯ ನಾಯಕ ಚಾಕೋ ರಾಜೀನಾಮೆ

    ತಿರುವನಂತಪುರಂ: ಮಹತ್ವದ ಬೆಳವಣಿಗೆಯಲ್ಲಿ ಕೇರಳ ಕಾಂಗ್ರೆಸ್‌ ಹಿರಿಯ ನಾಯಕ ಪಿಸಿ ಚಾಕೋ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

    ಏಪ್ರಿಲ್‌ನಲ್ಲಿ ಕೇರಳ ವಿಧಾನಸಭಾ ಚುನಾವಣೆ ನಡಯಲಿದ್ದು ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 74 ವರ್ಷದ ಪಿ.ಸಿ. ಚಾಕೋ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಳುಹಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಳೆದ ಕೆಲ ದಿನಗಳಿಂದ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದೆ. ನಿಜವಾಗಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿಲ್ಲ. ಇಲ್ಲಿ ಕಾಂಗ್ರೆಸ್‌(ಐ) ಮತ್ತು ಕಾಂಗ್ರೆಸ್‌(ಎ) ಪಕ್ಷವಿದ್ದು ಎರಡು ಪಕ್ಷಗಳಿಗೆ ಕೆಪಿಸಿಸಿ ಸಮನ್ವಯ ಸಮಿತಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಎ ಗುಂಪು ಇದ್ದರೆ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಚೆನ್ನಿತ್ತಾಲಾ ನೇತೃತ್ವದಲ್ಲಿ ಕಾಂಗ್ರೆಸ್‌ ಐ ಗುಂಪು ಇದೆ. ಕಾಂಗ್ರೆಸ್‌ನಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕೇರಳದಲ್ಲಿ ಮಹತ್ವದ ಚುನಾವಣೆ ನಡೆಯುತ್ತಿದೆ. ಜನ ಕಾಂಗ್ರೆಸ್‌ ಪಕ್ಷವನ್ನು ಮರಳಿ ತರಲು ಬಯಸುತ್ತಿದ್ದಾರೆ. ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯ ಬಗ್ಗೆ ನಾನು ಹೈಕಮಾಂಡ್‌ಗೆ ದೂರು ನೀಡಿದ್ದೆ. ಆದರೆ ಹೈಕಮಾಂಡ್‌ ಎರಡು ಗುಂಪುಗಳ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುತ್ತಿದೆ ಎಂದು ದೂರಿದರು.

    ಕೇರಳದಲ್ಲಿ ನೀವು ಕಾಂಗ್ರೆಸ್‌ನ ನಿರ್ದಿಷ್ಟ ಬಣಕ್ಕೆ ಸೇರಿದ್ದರೆ ಮಾತ್ರ ಉಳಿಗಾಲವಿದೆ. ಪಕ್ಷ ನಿಷ್ಠೆ ಹೊಂದಿದವರಿಗೆ ಉಳಿಗಾಲವಿಲ್ಲ. ಕಾಂಗ್ರೆಸ್‌ ಹೈಕಮಾಂಡ್ ಮೂಕಸಾಕ್ಷಿಯಾಗಿದೆ. ಎರಡು ಬಣಗಳ ಗುಂಪುಗಾರಿಕೆಯನ್ನು ಕೊನೆ ಮಾಡಬೇಕೆಂದು ನಾನು ಹೈಕಮಾಂಡ್‌ ಜೊತೆ ಮಾದ ಮಾಡಿದ್ದೆ. ಆದರೆ ನನ್ನ ಮಾತಿಗೆ ಯಾವುದೇ ಬೆಲೆ ಸಿಗಲಿಲ್ಲ ಎಂದು ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಚರ್ಚೆ ಮಾಡದೇ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಮಾಡಲಾಗಿದೆ. ಗೆಲುವಿನ ಸಾಧ್ಯತೆಯಿರುವ ಅಭ್ಯರ್ಥಿಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ದೂರಿದರು.

    ಏಪ್ರಿಲ್ 6 ರಂದು ಒಟ್ಟು 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಚಾಕೋ ಈ ಹಿಂದೆ ದೆಹಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

  • ಎಲ್‌ಡಿಎಫ್‌, ಯುಡಿಎಫ್‌ ಬಗ್ಗೆ ಬೇಸತ್ತ ಕೇರಳದಲ್ಲಿ ಬಿಜೆಪಿಯತ್ತ ಒಲವು: ಡಿಸಿಎಂ ವಿಶ್ವಾಸ

    ಎಲ್‌ಡಿಎಫ್‌, ಯುಡಿಎಫ್‌ ಬಗ್ಗೆ ಬೇಸತ್ತ ಕೇರಳದಲ್ಲಿ ಬಿಜೆಪಿಯತ್ತ ಒಲವು: ಡಿಸಿಎಂ ವಿಶ್ವಾಸ

    ಬೆಂಗಳೂರು: ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಭಾರತೀಯ ರಾಜಕಾರಣದಲ್ಲಿ ಅಪ್ರಸ್ತುತವಾಗಿವೆ. ಆ ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆಂದು ಕೇರಳ ರಾಜ್ಯದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

    ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇರಳದಲ್ಲಿ ಇವೆರಡೂ ರಾಜಕೀಯ ಒಕ್ಕೂಟಗಳು ಸಂಪೂರ್ಣ ವಿಫಲವಾಗಿವೆ. ಕೇವಲ ವೋಟ್‌ಬ್ಯಾಂಕ್‌ ಪಾಲಿಟಿಕ್ಸ್‌ ಮಾಡಿಕೊಂಡು ಕಳೆದ ಎಪ್ಪತ್ತು ವರ್ಷಗಳಿಂದ ಆ ರಾಜ್ಯವನ್ನು ಕತ್ತಲೆಯಲ್ಲೇ ಇಟ್ಟಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗುತ್ತಿದೆ ಎಂದರು.

    ಈಗಿನ ಎಲ್‌ಡಿಎಫ್‌ ಸರಕಾರವಂತೂ ರಾಜಕೀಯ ಕಿರುಕುಳ ನೀಡುವುದು, ರಾಜಕೀಯ ಕೊಲೆಗಳು ಹಾಗೂ ಸೇಡಿನ ರಾಜಕೀಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದ ಡಿಸಿಎಂ, ಈ ಎರಡೂ ರಾಜಕೀಯ ಒಕ್ಕೂಟಗಳು ಎಲ್ಲ ಜನರಿಗೂ ಸಲ್ಲುವ ಪಕ್ಷಗಳಲ್ಲ. ಕೇವಲ ಜಾತಿ-ಜಾತಿಗಳ ನಡುವೆ ವೈಷಮ್ಯ ಭಿತ್ತಿ ಆ ಮೂಲಕ ರಾಜಕೀಯ ಲಾಭ ಪಡೆಯುತ್ತಿವೆ ಎಂದು ಟೀಕಿಸಿದರು.

    ನಮ್ಮ ಭಾರತೀಯ ಸಂಸ್ಕೃತಿ, ಆಚಾರ ವಿಚಾರಕ್ಕೆ ವಿರುದ್ಧವಾಗಿರುವ ಎಲ್‌ಡಿಎಫ್‌ನಿಂದ ಕೇರಳಕ್ಕೆ ತುಂಬಾ ಹಾನಿಯಾಗಿದೆ. ಕಮ್ಯುನಿಸ್ಟ್‌ ಪಕ್ಷಗಳು ನಮ್ಮ ದೇಶದಲ್ಲಿ ಅಪ್ರಸ್ತುತವಾಗಿವೆ. ಎಲ್ಲ ಕಡೆ ಅಧಿಕಾರ ಕಳೆದುಕೊಂಡು ಈ ಕೇರಳದಲ್ಲೂ ನಿರ್ನಾಮದ ಹಂತದಲ್ಲಿದೆ. ಅದೇ ರೀತಿ ಕಾಂಗ್ರೆಸ್‌ ಪಕ್ಷವೂ ದೇಶಾದ್ಯಂತ ಹೇಳ ಹೆಸರಿಲ್ಲದೆ ಹೋಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

    ಬಿಜೆಪಿ ಬಗ್ಗೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಪಕ್ಷಗಳಿಗೆ ಅಲ್ಲಿ ನಾಯಕತ್ವವೇ ಇಲ್ಲ. ಆ ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಇದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

  • ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಮೆಟ್ರೋ ಮ್ಯಾನ್‌ ಖ್ಯಾತಿಯ ಇ ಶ್ರೀಧರನ್‌

    ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಮೆಟ್ರೋ ಮ್ಯಾನ್‌ ಖ್ಯಾತಿಯ ಇ ಶ್ರೀಧರನ್‌

    ತಿರುವನಂತಪುರಂ: ಕೊಂಕಣ ರೈಲಿನ ಸೂತ್ರಧಾರ, ಮೆಟ್ರೋ ಮ್ಯಾನ್‌ ಎಂದೇ ಖ್ಯಾತರಾಗಿರುವ ಇ ಶ್ರೀಧರನ್‌ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಫೆ.21 ರಂದು ಕಾಸರಗೋಡಿನಲ್ಲಿ ʼವಿಜಯ ಯಾತ್ರೆʼ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

    ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ಪ್ರತಿಕ್ರಿಯಿಸಿ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ್ದ ಇ ಶ್ರೀಧರನ್‌ ಬಿಜೆಪಿಗೆ ಸೇರಿ ಕೆಲಸ ಮಾಡಲಿದ್ದಾರೆ. ಫೆ.21 ರಂದು ಅವರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು. ಕೆಲ ತಿಂಗಳಿನಲ್ಲಿ ಕೇರಳದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಶ್ರೀಧರನ್‌ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಭಾರೀ ಮಹತ್ವ ಪಡೆದಿದೆ.

    ಯಾರು ಇ ಶ್ರೀಧರನ್‌?
    ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು 1995 ರಿಂದ 2012ರ ವರೆಗೂ ದೆಹಲಿ ಮೆಟ್ರೋ ಮುಖ್ಯಸ್ಥರಾಗಿದ್ದರು. ಶ್ರೀಧರನ್‌ ದೇಶಾದ್ಯಂತ ಸ್ವದೇಶಿ ಮೆಟ್ರೋ ರೈಲು ವ್ಯವಸ್ಥೆ ಜಾರಿಗೆ ಮೋದಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.

    ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 2003 ರಲ್ಲಿ ಟೈಮ್ಸ್ ನಿಯತಕಾಲಿಕೆಯು ಏಷ್ಯಾದ ಸೆಲೆಬ್ರಿಟಿ ಹೀರೋಗಳಲ್ಲಿ ಒಬ್ಬರೆಂದು ಅವರನ್ನು ಹೆಸರಿಸಿತ್ತು. ವಿಶ್ವಸಂಸ್ಥೆಯ ಸುಸ್ಥಿರ ಸಾರಿಗೆ ಕುರಿತು ಉನ್ನತ ಮಟ್ಟದ ಸಲಹಾ ಸಮೂಹದಲ್ಲಿ ಸೇವೆ ಸಲ್ಲಿಸಲು ಶ್ರೀಧರನ್‌ ಅವರನ್ನು ನೇಮಕ ಮಾಡಲಾಗಿತ್ತು.

     

     

    ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಸಿಎಂ ಕೇಜ್ರಿವಾಲ್ ಅನುವು ಮಾಡಿಕೊಡಲು ಮುಂದಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಇದಕ್ಕೆ ಅವಕಾಶ ನೀಡಬಾರದು ಎಂದು ಶ್ರೀಧರನ್‌ ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಒಂದೊಮ್ಮೆ ಮೆಟ್ರೋ ಪ್ರಯಾಣದಲ್ಲಿ ಉಚಿತ ಸಂಚಾರ ಆರಂಭಿಸಿದರೆ ಸಂಸ್ಥೆಗಳು ದಿವಾಳಿ ಆಗಲಿದೆ. ಯಾವುದೇ ಕಾರಣಕ್ಕೂ ಇವುಗಳಿಗೆ ಪ್ರೋತ್ಸಾಹ ನೀಡಬಾರದು. ಮೆಟ್ರೋ ಸಿಬ್ಬಂದಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕೂಡ ಟಿಕೆಟ್ ಖರೀದಿಸಿ  ಪ್ರಯಾಣ ನಡೆಸಬೇಕು ಎಂದು ಹೇಳಿದ್ದರು.