Tag: ಕೇಕ್ ಉತ್ಸವ

  • ಕೇಕ್ ಉತ್ಸವಕ್ಕೆ ಬಂದ ಜನರಿಗೆ ನಿರಾಸೆ

    ಕೇಕ್ ಉತ್ಸವಕ್ಕೆ ಬಂದ ಜನರಿಗೆ ನಿರಾಸೆ

    ಮೈಸೂರು: ಮಾಗಿ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ಕೇಕ್ ಉತ್ಸವದ ವೀಕ್ಷಣೆಗೆ ಬಂದವರಿಗೆ ಭಾರೀ ನಿರಾಸೆ ಉಂಟಾಗಿದೆ.

    ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಒಟ್ಟು ಮೂರು ದಿನಗಳ ಕಾಲ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಕೇಕ್ ಉತ್ಸವ ಜಿಲ್ಲಾಡಳಿತದಿಂದ ಆಯೋಜನೆಯಾಗಿದೆ. ಭಿನ್ನ ವಿಭಿನ್ನ ಮಾದರಿಯ ಕೇಕ್‍ನ ಆಕೃತಿಗಳು ಉತ್ಸವದಲ್ಲಿ ಇರುತ್ತವೆ ಎಂದು ಉತ್ಸವಕ್ಕೆ ಬಂದವರಿಗೆ ನಿರಾಸೆ ಉಂಟಾಗಿದೆ. ಯಾಕೆಂದರೆ ಕೇಕ್ ಉತ್ಸವದಲ್ಲಿ ಕೇವಲ ಎರಡೇ ಎರಡು ಕೇಕ್‍ನ ಆಕೃತಿ ಇವೆ. ಇನ್ನುಳಿದಂತೆ ಬಗೆ ಬಗೆಯ ಕೇಕ್ ಮತ್ತು ಚಾಟ್ಸ್ ತಿನಿಸುಗಳ ಮಾರಾಟಕ್ಕಿವೆ.

    ಕಳೆದ ವರ್ಷ ಬಹಳ ಅತ್ಯಾಕರ್ಷಕವಾಗಿ ಕೇಕ್ ಉತ್ಸವ ಮೂಡಿಬಂದಿದ್ದು, ಸಾರ್ವಜನಿಕರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಗಿತ್ತು. ಕಳೆದ ವರ್ಷ ಕೇಕ್‍ನಿಂದ ನಿರ್ಮಿಸಿದ್ದ ಹಲವು ಬಗೆಯ ಆಕೃತಿಗಳು ನೋಡುಗರ ಮನ ಸೂರೆಗೊಂಡಿದ್ದವು. ಅದೇ ಗುಂಗಿನಲ್ಲಿ ಈ ಬಾರಿಯ ಕೇಕ್ ಉತ್ಸವ ವೀಕ್ಷಣೆಗೆ ಜನರು ಆಗಮಿಸಿದ್ದಾರೆ. ಆದರೆ ಅವರಿಗೆ ಕೇವಲ ಕೇಕ್, ಬೇಕರಿ ತಿನಿಸು, ಚುರುಮುರಿ, ಪಾನಿಪುರಿ, ಬಜ್ಜಿ ಮಾರಾಟ ಮಾಡುವ ಮಳಿಗೆಗಳು ಮಾತ್ರ ಕಂಡು ಬಂದಿದೆ. ಹೀಗಾಗಿ ಜನರು ಉತ್ಸವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

  • ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ

    ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ

    ಬೆಂಗಳೂರು: ಕೇಕ್ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಲ್ಲು ಬಿದ್ದ ಮಕ್ಕಳವರೆಗೂ ಎಲ್ಲರಿಗೂ ಕೇಕ್ ಇಷ್ಟ. ಅದರಲ್ಲೂ ಕ್ರಿಸ್‍ಮಸ್ ಹಬ್ಬದಲ್ಲಂತೂ ಕೇಕ್‍ಗಳ ಸಾಮ್ರಾಜ್ಯವೇ ಧರೆಗಿಳಿಯುತ್ತೆ. ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ ಕೇಕ್‍ಗಳ ಲೋಕವೊಂದು ಧರೆಗಿಳಿದಿದೆ.

    ಇಲ್ಲಿ ಇಂದಿನಿಂದ ಜನವರಿ 15ರವರೆಗೆ ಭಾರತದ ಅತೀ ದೊಡ್ಡ ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಬೇಕಿಂಗ್ ಆ್ಯಂಡ್ ಕೇಕ್ ಆರ್ಟ್ ನ 45ನೇ ವರ್ಷದ ಈ ಕೇಕ್ ಶೋವನ್ನು ಸುಮಾರು 60ಕ್ಕೂ ಹೆಚ್ಚು ನಳಪಾಕ ಪ್ರವೀಣರು, ವಿವಿಧ ಡಿಸೈನ್‍ಗಳನ್ನು ತಯಾರಿಸಿದ್ದಾರೆ.

    ಪೇಸ್ಟ್ರಿ ಶೋದ ಈ ಬಾರಿಯ ಮೇನ್ ಅಟ್ರಾಕ್ಷನ್ ಎಂದರೆ 16ನೇ ಶತಮಾನದ ಸೈಂಟ್ ಬಾಸಿಲ್ ಕ್ಯಾಥೆಡ್ರಾಲ್ ಚರ್ಚ್. ಸುಮಾರು 20 ಅಡಿ ಅಗಲ ಹಾಗೂ 16 ಅಡಿ ಉದ್ದವಿರುವ ಈ ಕೇಕ್ ಅನ್ನು 120 ದಿನಗಳಲ್ಲಿ 5 ಜನರ ತಂಡ ವಿನ್ಯಾಸ ಮಾಡಿದೆ.

    ಚರ್ಚ್ ಜೊತೆಗೆ ನರಿಗಳ ಸಂಸಾರ, ಆನೆ ಮರಿಗಳು, ಕಥಕ್ಕಳಿ ನೃತ್ಯಗಾರ, ಉದ್ದೀಪಿಸುವ ನಾಗರಾಣಿ, ವಿವಾಹದ ಉಂಗುರ, ಹಾಲೊವೀನ್ ಪಿಲ್ಲರ್, ನಮ್ಮ ಹೆಮ್ಮೆಯ ಚಂದ್ರಯಾನ 2, ಕಥಕ್ಕಳಿ ನೃತ್ಯಗಾರ್ತಿ ಹೀಗೆ ಹಲವು ಕೇಕ್‍ಗಳು ಕಮಾಲ್ ಮಾಡತ್ತಿವೆ. ಒಟ್ಟಿನಲ್ಲಿ ಈ ಶೋ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುತ್ತಿದೆ