Tag: ಕೇಂದ್ರ ಸರ್ಕಾರ. ಪಬ್ಲಿಕ್ ಟಿವಿ

  • ಕೊಳ್ಳಿ ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು – ಉಡುಪಿಯಲ್ಲಿ ಕೇಂದ್ರದ ವಿರುದ್ಧ ಪೌರತ್ವದ ಕಿಚ್ಚು

    ಕೊಳ್ಳಿ ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು – ಉಡುಪಿಯಲ್ಲಿ ಕೇಂದ್ರದ ವಿರುದ್ಧ ಪೌರತ್ವದ ಕಿಚ್ಚು

    ಉಡುಪಿ: ಕೇಂದ್ರ ಸರ್ಕಾರದ ಎನ್.ಆರ್.ಸಿ, ಸಿಎಎ, ಎನ್.ಪಿ.ಆರ್ ಕಾಯ್ದೆಯ ವಿರುದ್ಧ ಉಡುಪಿಯಲ್ಲಿ ಜನಾಕ್ರೋಶದ ಪ್ರತಿಭಟನೆ ನಡೆಯಿತು. ದೇಶಾದ್ಯಂತ ಪೌರತ್ವದ ಕಿಚ್ಚು ಶುರುವಾಗಿದ್ದು, ಇಲ್ಲಿ ಪಂಜು ಹಿಡಿದೇ ಜನ ಬೀದಿಗಿಳಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಕಿ ಪ್ರತಿಭಟನೆಯ ಕರೆ ನೀಡಿತ್ತು. ಉಡುಪಿಯ ಸಮಾನ ಮನಸ್ಕ ಸಂಘಟನೆಗಳು ಕೈಜೋಡಿಸಿ ಪ್ರತಿಭಟನೆ ಮಾಡಿದವು. ಕೋಮು ಸೌಹಾರ್ದ ವೇದಿಕೆ, ಮುಸಲ್ಮಾನ ಸಂಘಟನೆ, ಪ್ರಗತಿಪರ ಸಂಘದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

    ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕ ಬಳಿ ಜಮಾಯಿಸಿದ ಜನ ಕೊಳ್ಳಿ ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪಂಜಿನ ಮೆರವಣಿಗೆಗೆ ಚಾಲನೆ ನೀಡಿ, ನಗರದ ಪುರಭವನ ರಸ್ತೆಯವರೆಗೆ ಪಂಜು ಹಿಡಿದು ಮೆರವಣಿಗೆ ಮಾಡಿದರು. ರಸ್ತೆಗಿಳಿಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

    ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲೇ ಕಾಯ್ದೆ ವಿರೋಧಿ ಹೋರಾಟ ಆರಂಭವಾಗಿದ್ದು, ಪ್ರತಿಭಟನೆ ಅಲ್ಲಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದವು.

    ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುವ ಸಿದ್ಧತೆ ನಡೆದಿತ್ತು, ಪೊಲೀಸ್ ಇಲಾಖೆ ಅವಕಾಶ ಕೊಡದ ಕಾರಣ ಇಷ್ಟಕ್ಕೆ ಸೀಮಿತ ಮಾಡಬೇಕಾಯ್ತು ಅಂತ ಪ್ರತಿಭಟನಾಕಾರ ರಮೇಶ್ ಕಾಂಚನ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ವ್ಯವಸ್ಥೆ ಪ್ರತಿಭಟಿಸುವ ಹಕ್ಕನ್ನೂ ಕಿತ್ತುಕೊಂಡಿದೆ. ಜನಾಕ್ರೋಶ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತದೆ ಎಂದು ಹೇಳಿದರು.