Tag: ಕೇಂದ್ರ ಸಚಿವ ಹರ್ಷವರ್ಧನ್

  • ಕೊರೊನಾ 2ನೇ ಅಲೆ ಮುಗಿದಿಲ್ಲ, ಮೈ ಮರೆಯುವಂತಿಲ್ಲ: ಹರ್ಷವರ್ಧನ್

    ಕೊರೊನಾ 2ನೇ ಅಲೆ ಮುಗಿದಿಲ್ಲ, ಮೈ ಮರೆಯುವಂತಿಲ್ಲ: ಹರ್ಷವರ್ಧನ್

    ನವದೆಹಲಿ: ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ, ನಿರಾಳರಾಗಬಾರದು. ವೈಯಕ್ತಿಕ ಸುರಕ್ಷತೆಯನ್ನು ಯಾವುದೇ ಸಂದರ್ಭದಲ್ಲೂ ಮರೆಯಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಎಚ್ಚರಿಸಿದ್ದಾರೆ.

    ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹಾಗೂ ಇತರರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯಬಾರದು ಎಂದು ತಿಳಿಸಿದರು.

    ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ. ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿರಬಹುದು. ಆದರೆ ನಮ್ಮ ಒಂದೂವರೆ ವರ್ಷದ ಅನುಭವವನ್ನು ಗಮನದಲ್ಲಿರಿಸಿಕೊಂಡು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದನ್ನು ಯಾವುದೇ ಸಂದರ್ಭದಲ್ಲಿಯೂ ಮರೆಯಬಾರದು. ಸಾರ್ವಜನಿಕರು ಹಾಗೂ ಸಮುದಾಯವನ್ನು ಸಹ ವಿಶ್ರಾಂತಿಯಿಂದ ಇರಲು ಬಿಡಬೇಡಿ, ಎಲ್ಲ ಸಂದರ್ಭಗಳಲ್ಲಿಯೂ ನಾವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.

    ಅದೃಷ್ಟವಶಾತ್ ಕಳೆದ 6 ತಿಂಗಳಿಂದ ಲಸಿಕೆ ಲಭ್ಯವಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದರಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗಲೂ ನಾವು ಮೈ ಮರೆಯಬಾರದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಕರೆ ನೀಡಿದ್ದಾರೆ.

  • ನಿನ್ನೆ 6, ಇಂದು 26ಕ್ಕೆ ಏರಿಕೆ – ವೇಗವಾಗಿ ದೇಶದಲ್ಲಿ ಹರಡುತ್ತಿದೆ ಕೊರೊನಾ

    ನಿನ್ನೆ 6, ಇಂದು 26ಕ್ಕೆ ಏರಿಕೆ – ವೇಗವಾಗಿ ದೇಶದಲ್ಲಿ ಹರಡುತ್ತಿದೆ ಕೊರೊನಾ

    – ಕೇಂದ್ರ ಸರ್ಕಾರದಿಂದಲೇ ಅಧಿಕೃತ ಮಾಹಿತಿ
    – ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಹರ್ಷವರ್ಧನ್

    ನವದೆಹಲಿ: ದೇಶದಲ್ಲಿ ಒಟ್ಟು 28 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಖಚಿತಪಡಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿರುವ ಅವರು, ಮಂಗಳವಾರ ಕೇವಲ 6 ಜನರಲ್ಲಿ ಮಾತ್ರ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಕೇರಳದಲ್ಲಿ ಡಿಸ್ಚಾರ್ಜ್ ಆದ ಮೂವರು ಸೇರಿ ಇದೀಗ 28 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

    ಕೇರಳದ ಮೂವರು ಡಿಸ್ಚಾರ್ಜ್ ಆದ ನಂತರ ದೆಹಲಿ 45 ವರ್ಷ ವ್ಯಕ್ತಿ ಹಾಗೂ ತೆಲಂಗಾಣ ಮೂಲದ 24 ವರ್ಷದ ಯುವಕನಲ್ಲಿ ಕಾಣಿಸಿಕೊಂಡಿತ್ತು. 24 ವರ್ಷದ ತೆಲಂಗಾಣದ ಟೆಕ್ಕಿ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ. ಹೀಗಾಗಿ ಆತ ಸುತ್ತಾಡಿದ ಕಡೆ ಬೆಂಗಳೂರಿನಲ್ಲಿ ಕೆಲವು ಜನರಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

    ವೈರಸ್ ಹೊಂದಿದ್ದ ದೆಹಲಿಯ ವ್ಯಕ್ತಿಯ ಸಂಪರ್ಕದಿಂದಾಗಿ ಆಗ್ರಾದ 6 ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಅಲ್ಲದೆ ಇಟಲಿಯ 16 ಜನ ಪ್ರವಾಸಿಗರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಇವರು ರಾಜಸ್ಥಾನ ನಂತರ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಚರಿಸಿದ್ದಾರೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

    ಭಾರತದಲ್ಲಿರುವ 15 ಮಂದಿ ಇಟಲಿ ಪ್ರವಾಸಿಗರಿಗೆ ಕೊರೊನಾ ಸೋಂಕು ತಗುಲಿದೆ ಎಂದು ನವದೆಹಲಿಯ ಏಮ್ಸ್ ಆಸ್ಪತ್ರೆ ಅಧಿಕೃತವಾಗಿ ತಿಳಿಸಿತ್ತು. ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 15 ಮಂದಿ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಅಂಶ ಕಂಡುಬಂದಿದೆ. ಇಟಲಿಯ ಪ್ರವಾಸಿಗರ ಗುಂಪಿನ ಸದಸ್ಯರನ್ನು ದೆಹಲಿಯ ಐಟಿಬಿಪಿ(ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್) ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.