Tag: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

  • ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

    ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮ ದಿನಾಚರಣೆ ಹಿನ್ನೆಲೆ ಹಳೇ ಹುಬ್ಬಳ್ಳಿಯ ಹೆಗ್ಗೇರಿಯ ರುದ್ರಭೂಮಿಯಲ್ಲಿ ಪ್ರಹ್ಲಾದ್ ಜೋಶಿ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ವಚ್ಛತಾ ಅಭಿಯಾನ ನಡೆಸಿದರು. ಇದನ್ನೂ ಓದಿ: ಯೇಸು ಕ್ರಿಸ್ತರ ಉದಾತ್ತ ಸಂದೇಶಗಳನ್ನು ಸ್ಮರಿಸೋಣ: ಮೋದಿ ಕ್ರಿಸ್‌ಮಸ್‌ ಶುಭಾಶಯ

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರುದ್ರಭೂಮಿ ಸ್ವಚ್ಚತೆ ಕೈಗೆತ್ತಿಕೊಳ್ಳಲಾಗಿದೆ. ಶಾಶ್ವತವಾಗಿ ಸ್ವಚ್ಚಗೊಳಿಸಿ, ಸುಣ್ಣ-ಬಣ್ಣ ಬಳಿದು ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಪ್ರಧಾನಿಗಳ ಆಶಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಸೆಯಂತೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದರು.

    ಸಂಸತ್ ಸದನದಲ್ಲಿ ಪ್ರತಿಪಕ್ಷಗಳ ವರ್ತನೆಗೆ ವಿಷಾದ ವ್ಯಕ್ತಪಡಿಸಿ ಅಂದರೂ ಕೇಳಲಿಲ್ಲ. ಮೋದಿ ಏನೇ ಮಾಡಿದರೂ ಕಾಂಗ್ರೆಸ್‍ನವರು ವಿರೋಧ ಮಾಡುತ್ತಿದ್ದಾರೆ. ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ. ಅಂಬೇಡ್ಕರ್‌ ಅವರ ಸಂವಿಧಾನವನ್ನು ಸಹ ಬಹಿಷ್ಕಾರ ಮಾಡಿದರು. ಕಾಂಗ್ರೆಸ್ ಪಕ್ಷ ಬಹಿಷ್ಕಾರ ಮಾಡಿ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್

    ಸಿಎಂ ಬದಲಾವಣೆ ಕುರಿತು ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಇಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು. ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳನ್ನು ಹರಡುವುದು ತಪ್ಪು. ಅವರು ಅಮೆರಿಕಾಗೆ ಹೋಗುತ್ತಾರೆ, ಅವರನ್ನು ತೆಗೆಯುತ್ತಾರೆ ಎಂಬುದೆಲ್ಲ ಸುಳ್ಳು. ಸಿಎಂ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ಆ ರೀತಿಯ ಬೆಳವಣಿಗೆ ಇದಿದ್ದರೆ ನನಗೆ ತಿಳಿಯುತ್ತಿತ್ತು. ಸುಮ್ಮನೆ ಊಹಾಪೋಹಗಳನ್ನು ಹರಡಬಾರದು. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

  • ಕೊರೊನಾ ನಿಯಂತ್ರಣದಲಿಲ್ಲ ಎಂದ ಸಚಿವ ಮಾಧುಸ್ವಾಮಿ ಹೇಳಿಕೆ ಸರಿಯಲ್ಲ: ಸಚಿವ ಜೋಶಿ

    ಕೊರೊನಾ ನಿಯಂತ್ರಣದಲಿಲ್ಲ ಎಂದ ಸಚಿವ ಮಾಧುಸ್ವಾಮಿ ಹೇಳಿಕೆ ಸರಿಯಲ್ಲ: ಸಚಿವ ಜೋಶಿ

    – ಸಂಖ್ಯೆ ಹೆಚ್ಚಳವಾಗಿದೆ, ಆತಂಕ ಬೇಡ

    ಧಾರವಾಡ: ನಮ್ಮ ವ್ಯವಸ್ಥೆಯಲ್ಲಿ ಹಾಗೂ ಜನ ಸಂದಣಿಯನ್ನು ಹೋಲಿಸಿದರೆ ಇಲ್ಲಿವರೆಗೆ ಕೊರೊನಾ ನಿಯಂತ್ರಣದಲ್ಲಿದೆ, ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಾರಿಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜನರು ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಣ ಮಾಡಬೇಕು ಹಾಗೂ ಜಾಗೃತಿಯನ್ನು ಮೂಡಿಸಬೇಕು. ಮಾಸ್ಕ್ ಹಾಕಿಕೊಳ್ಳುವುದರಿಂದ ಇದನ್ನ ದೊಡ್ಡ ಪ್ರಮಾಣದಲ್ಲಿ ತಡೆಗಟ್ಟಬಹುದು. ಸೋಂಕಿತರ ಸಂಖ್ಯೆ ಜಾಸ್ತಿಯಾದರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸರ್ಕಾರಗಳು ತಮ್ಮ ಕೆಲಸ ಮಾಡುತ್ತಿವೆ ಎಂದರು.

    ಸಚಿವ ಮಾಧುಸ್ವಾಮಿ ಕೊರೊನಾ ನಿಯಂತ್ರಣ ತಪ್ಪಿದೆ ಎಂದು ವಿಚಾರವಾಗಿ ಮಾತನಾಡಿ ಅವರ ಹೇಳಿಕೆ ಮಾಧ್ಯಮದಲ್ಲಿ ನೋಡಿದ್ದೇನೆ. ಆದರೆ ಅದು ಸರಿಯಲ್ಲ. ಅವರು ಯಾವ ಅರ್ಥ, ಹಿನ್ನೆಲೆಯಲ್ಲಿ ಹೇಳಿದ್ದಾರೆ ಎಂಬುವುದು ನನಗೆ ತಿಳಿದಿಲ್ಲ ಎಂದರು. ಅಲ್ಲದೇ ಸಚಿವ ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಕಳೆದ ಚುನಾವಣೆ ಸಂದರ್ಭದಲ್ಲಿ ಕುಕ್ಕರ್ ಕೊಡಿಸಿದ್ದಾಗಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ, ಆ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು.

  • ಕೇಂದ್ರ ಸಚಿವ ಜೋಷಿಯಿಂದಲೂ ಸಂಚಾರಿ ನಿಯಮ ಉಲ್ಲಂಘನೆ

    ಕೇಂದ್ರ ಸಚಿವ ಜೋಷಿಯಿಂದಲೂ ಸಂಚಾರಿ ನಿಯಮ ಉಲ್ಲಂಘನೆ

    ಧಾರವಾಡ: ಹೊಸ ಸಂಚಾರಿ ನಿಯಮ ಜಾರಿಯಾಗಿದ್ದರೂ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಮಾತ್ರ ಯಾವುದಕ್ಕೂ ಡೋಂಟ್ ಕೇರ್ ಎಂದು ತಾವಿರಲಿ, ತಮ್ಮ ಚಾಲಕನಿಗೂ ಸಹ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸುವುದಿಲ್ಲ.

    ಇಂದು ಧಾರವಾಡದ ಹೊಸ ಬಸ್ ನಿಲ್ದಾದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ಮಾಡಲು ಕಾರಿನಲ್ಲಿ ಬಂದಿದ್ದ ಸಚಿವರು ಬೆಲ್ಟ್ ಹಾಕಿರಲಿಲ್ಲ. ಸಚಿವರಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಹಾಕಿರಲಿಲ್ಲ.

    ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಕೂಡಲೇ ದಂಡವನ್ನು ಕಡಿಮೆ ಮಾಡಿ ಇಲ್ಲವೇ ರಸ್ತೆಗಳನ್ನು ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಕೇಂದ್ರ ಸಚಿವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಕಾರಿನಲ್ಲಿ ರಾಜಾರೋಷವಾಗಿ ಪ್ರಯಾಣ ಮಾಡುತ್ತಿದ್ದಾರೆ.

    ನಿಯಮವನ್ನು ಜಾರಿಗೆ ತಂದ ಕೇಂದ್ರ ಸಚಿವ ಸಂಪುಟದ ಸಚಿವರೇ ನಿಯಮವನ್ನು ಪಾಲಿಸುತ್ತಿಲ್ಲ ಇವರಿಗೆ ದಂಡ ಹಾಕುವವರು ಯಾರು? ನಿಯಮ ಅಂದಮೇಲೆ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ, ಸಾರ್ವಜನಿಕರಿಗೆ ವಿನಾಕಾರಣ ಕ್ಯಾತೆ ತೆಗೆಯೋ ಪೊಲೀಸರು ಸಚಿವರ ವರಸೆ ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಅವರದ್ದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರಿ ನಿಯಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ರಾಜಕಾರಣಿಗಳು ಸೀಟ್ ಬೆಲ್ಟ್ ಧರಿಸದೆ, ಕಾರಿನಲ್ಲಿ ಪ್ರಯಾಣಿಸುತ್ತಾರೆ ಎಂಬುದರ ಕುರಿತು ಬೆಳಕು ಚೆಲ್ಲಲಾಗಿತ್ತು.