Tag: ಕೇಂದ್ರ ಸಚಿವೆ

  • ಮಹಾರಾಷ್ಟ್ರ ಅರಣ್ಯ ಸಚಿವರನ್ನು ಮಂತ್ರಿಗಿರಿಯಿಂದ ಕೈಬಿಡಿ – ಮನೇಕಾ ಗಾಂಧಿ ಒತ್ತಾಯ

    ಮಹಾರಾಷ್ಟ್ರ ಅರಣ್ಯ ಸಚಿವರನ್ನು ಮಂತ್ರಿಗಿರಿಯಿಂದ ಕೈಬಿಡಿ – ಮನೇಕಾ ಗಾಂಧಿ ಒತ್ತಾಯ

    ನವದೆಹಲಿ: ಅವನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಮಂತ್ರಿಗಿರಿಯಿಂದ ವಜಾ ಮಾಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.

    ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇ0ದ್ರ ಫಡ್ನವೀಸ್ ಅವರಿಗೆ ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ. ವನ್ಯ ಜೀವಿಗಳನ್ನು ರಕ್ಷಿಸುವ ಸ್ಥಾನದಲ್ಲಿದ್ದು, ಅವನಿ ಹತ್ಯೆಗೆ ಅವಕಾಶ ನೀಡಿರುವುದು ದುರಂತ. ಹೀಗಾಗಿ ಸಚಿವ ಸುಧೀರ್ ಮುಂಗತಿವಾರ್ ಅವರನ್ನು ಅರಣ್ಯ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

    ಅರಣ್ಯ ಅಧಿಕಾರಿಗಳು ಪ್ರಾಣಿಗಳನ್ನು ರಕ್ಷಿಸಲು ಇರುವುದೇ ಹೊರತು, ಹತ್ಯೆ ಮಾಡಲು ಸೂಚಿಸಲು ಅಲ್ಲ. ಮಕ್ಕಳ ಅಭಿವೃದ್ಧಿ, ಏಳಿಗೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶ್ರಮಿಸುತ್ತದೆ. ಅದರಂತೆ ಅರಣ್ಯ ಇಲಾಖೆ ವನ್ಯ ಜೀವಿಗಳ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಕಿಡಿಕಾರಿದ್ದಾರೆ.

    ಏನಿದು ಪ್ರಕರಣ?:
    ಕಳೆದ ಎರಡು ವರ್ಷಗಳಿಂದ 14 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ ಅವನಿಯನ್ನು ನವೆಂಬರ್ 2ರಂದು ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಸೆಪ್ಟಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಅವನಿ ಹೆಣ್ಣು ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸುವಂತೆ ಅನುಮತಿ ನೀಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಅವನಿ ಹತ್ಯೆ ಬಳಿಕ ಅದರ ಜೊತೆಗಿದ್ದ ಎರಡು ಹುಲಿ ಮರಿಗಳನ್ನು ರಕ್ಷಿಸಲಾಗಿದೆ.

    2012 ರಲ್ಲಿ ಯವತ್ಮಾಲ್ ಕಾಡಿನಲ್ಲಿ ಅವನಿ ಹೆಣ್ಣು ಹುಲಿ ಮೊದಲಿಗೆ ಕಾಣಿಸಿಕೊಂಡಿತ್ತು. 14 ಮಂದಿಯನ್ನು ಕೊಂದಿದ್ದ ದೇಹಗಳು ಕೂಡ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿ 5 ಮಂದಿಯ ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಸಮೀಕ್ಷೆಗಳ ಪ್ರಕಾರ ಕೆಲ ವರ್ಷಗಳಿಂದ ಆ ಅರಣ್ಯ ಪ್ರದೇಶದಲ್ಲಿ ಅವನಿ ಬಿಟ್ಟರೆ ಗಂಡು ಹುಲಿಯೊಂದು ವಾಸವಾಗಿರುವುದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಒಬ್ಬರ ದೇಹದಲ್ಲಿ ಮಾತ್ರ ಆ ಹುಲಿಯ ಡಿಎನ್‍ಎ ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಸ್ಲಿಮರಿಗೆ ಮೆಕ್ಕಾ ಹೇಗೋ, ಹಿಂದೂಗಳಿಗೂ ಅಯೋಧ್ಯೆ ಪವಿತ್ರ ಕ್ಷೇತ್ರ: ಉಮಾ ಭಾರತಿ

    ಮುಸ್ಲಿಮರಿಗೆ ಮೆಕ್ಕಾ ಹೇಗೋ, ಹಿಂದೂಗಳಿಗೂ ಅಯೋಧ್ಯೆ ಪವಿತ್ರ ಕ್ಷೇತ್ರ: ಉಮಾ ಭಾರತಿ

    ನವದೆಹಲಿ: ಮುಸ್ಲಿಂ ಬಾಂಧವರಿಗೆ ಮೆಕ್ಕಾ ಹೇಗೆ ಪವಿತ್ರ ಕ್ಷೇತ್ರವೋ, ಹಾಗೆಯೇ ಹಿಂದೂಗಳಿಗೂ ಸಹ ಅಯೋಧ್ಯೆ ಪವಿತ್ರ ಕ್ಷೇತ್ರವೆಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ, ತೀರ್ಪು ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ. ಆಯೋಧ್ಯೆಯು ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಏಕೆಂದರೆ ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದೆ. ಅದು ಮುಸ್ಲಿಮರ ಪವಿತ್ರ ಪುಣ್ಯಕ್ಷೇತ್ರವಾಗಲು ಸಾಧ್ಯವಿಲ್ಲ. ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಆಗಿದೆ ಎಂದು ಹೇಳಿದರು.

    ಕೇವಲ ಈ ಒಂದು ಸಣ್ಣ ವಿಚಾರವನ್ನು ಭೂ ವಿವಾದವನ್ನಾಗಿ ಮಾಡಿದ್ದರು. ಆದರೆ ಇಂದು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಉಂಟಾಗಿದ್ದ ಭೂ ವಿವಾದ ಸಮಸ್ಯೆ ಇತ್ಯರ್ಥವಾಗಿದೆ ಎಂದು ಉಮಾ ಭಾರತಿ ಸಂತೋಷ ವ್ಯಕ್ತಪಡಿಸಿದರು.

    ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ.

    ಸುಪ್ರೀಂ ಹೇಳಿದ್ದು ಏನು?
    ಮಸೀದಿ ಇಸ್ಲಾಮ್‍ನ ಅವಿಭಾಜ್ಯ ಅಂಗವಲ್ಲ ಅಂತ 1994 ರ ಡಾ. ಇಸ್ಮಾಯಿಲ್ ಫಾರೂಖಿ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಏಕ ತೀರ್ಪು ನೀಡಿದ್ದರೆ, ನ್ಯಾ. ನಜೀರ್ ಭಿನ್ನ ತೀರ್ಪು ನೀಡಿದ್ದಾರೆ. 1994ರ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಮಂದಿರ, ಚರ್ಚ್ ಅಥವಾ ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ.

    ತೀರ್ಪಿನಲ್ಲಿರುವ ಪ್ರಮುಖ ಅಂಶ ಏನು?
    * ಮಸೀದಿಯಲ್ಲೇ ನಮಾಜ್ ಮಾಡಬೇಕು ಅಂತ ಏನಿಲ್ಲ
    * ಮುಸ್ಲಿಮರು ಎಲ್ಲಿ ಬೇಕಾದ್ರೂ ನಮಾಜ್ ಮಾಡಬಹುದು
    * ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ
    * ಯಾವ ಸನ್ನಿವೇಶದಲ್ಲಿ ಫಾರೂಖಿ ತೀರ್ಪು ಬಂದಿದೆ ಅನ್ನೋದು ಮುಖ್ಯ
    * ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದು
    * ಫಾರೂಖಿ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮಾತ್ರ ಅಭಿಪ್ರಾಯ ಕೇಳಲಾಗಿದೆ
    * ಭೂಸ್ವಾಧೀನದಿಂದ ರಕ್ಷಣೆ ನೀಡುವ ಸನ್ನಿವೇಶದಲ್ಲಷ್ಟೇ ಫಾರೂಖಿ ತೀರ್ಪು ನೀಡಲಾಗಿದೆ
    * 7 ಸದಸ್ಯರ ಸಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವ ಅಗತ್ಯತೆ ಇಲ್ಲ

    ನ್ಯಾ. ನಜೀರ್ ನೀಡಿದ ಭಿನ್ನ ತೀರ್ಪೇನು?
    * ಇನ್ನಿತ್ತರ ಇಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳು ನೀಡಿರೋ ತೀರ್ಪಿಗೆ ಸಹಮತವಿಲ್ಲ
    * ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಅನ್ನೋದರ ಬಗ್ಗೆ ಚರ್ಚೆಯಾಗಬೇಕು
    * ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು

    ಏನಿದು ಪ್ರಕರಣ?
    ಇಸ್ಮಾಯಿಲ್ ಫರೂಕಿ ವರ್ಸಸ್ ಭಾರತ ಸರಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಕ್ಷಣಾ ಸಚಿವರ ಎದುರೇ ಕೆಜಿ ಬೋಪಯ್ಯ, ಕಾಫಿ ಪ್ಲಾಂಟರ್ ನಡುವೆ ಮಾತಿನ ಚಕಮಕಿ!

    ರಕ್ಷಣಾ ಸಚಿವರ ಎದುರೇ ಕೆಜಿ ಬೋಪಯ್ಯ, ಕಾಫಿ ಪ್ಲಾಂಟರ್ ನಡುವೆ ಮಾತಿನ ಚಕಮಕಿ!

    ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎದುರೇ ಶಾಸಕ, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಕಾಫಿ ಪ್ಲಾಂಟರ್ ಒಬ್ಬರ ಜೊತೆ ಹಟ್ಟಿಹೊಳೆಯಲ್ಲಿ ಮಾತಿನ ಚಕಮಕಿ ನಡೆಯಿತು.

    ಕೊಡಗಿನ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವೆ ಭೂಕುಸಿತವಾಗಿರುವ ಹಟ್ಟಿಹೊಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಅಲ್ಲಿನ ನೆರೆ ಸಂತ್ರಸ್ತರೊಂದಿಗೆ ಮಾತಕತೆ ನಡೆಸಿ ಮಾಹಿತಿ ಪಡೆದರು.

    ಈ ವೇಳೆ ಕಾಫಿ ಪ್ಲಾಂಟರ್ ಒಬ್ಬರು ಇಲ್ಲಿನ ಗ್ರಾಮಗಳ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ತಕ್ಷಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಜಿ ಬೋಪಯ್ಯ ಅವರು, ಯಾವುದೇ ಕಾರಣಕ್ಕೂ ಗ್ರಾಮಗಳ ಸ್ಥಳಾಂತರ ಮಾಡುವ ಮಾತುಬೇಡ ಎಂದು ಖಡಕ್ ಪ್ರತಿಕ್ರಿಯಿಸಿದರು.

    ಗುರುವಾರ ಸಂಪಾಜೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ್ದ ಬೋಪಯ್ಯ ಅವರು, ಇಲ್ಲಿನ ಎಲ್ಲಾ ಗ್ರಾಮಗಳು ಸಂಪೂರ್ಣ ನಾಶವಾಗಿದ್ದು, ನಿರಾಶ್ರಿತರಿಗೆ ಈ ಹಿಂದೆ ಇರುವ ಸ್ಥಳದಲ್ಲೇ ಮತ್ತೆ ಮನೆ ನಿರ್ಮಾಣ ಮಾಡುವ ಪರಿಶೀಲನೆ ನಡೆಸುವ ಚಿಂತನೆ ಇದೆ. ತಜ್ಞರ ವರದಿ ಅನ್ವಯ ಸದ್ಯ ಕೆಲ ಪ್ರದೇಶಗಳು ವಾಸ ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಭೂಕುಸಿತ ಸಂಭವಿಸಲು ಯಾವುದೇ ರೆಸಾರ್ಟ್ ಕಾರಣವಲ್ಲ. ರೆಸಾರ್ಟ್ ಇರುವ ಪ್ರದೇಶದಲ್ಲಿ ಮಾತ್ರ ಭೂ ಕುಸಿತ ಸಂಭವಿಸಿಲ್ಲ. ಹೆಚ್ಚು ಬಡಜನರೇ ಇರುವ ಕಡೆ ಭೂ ಕುಸಿತ ಸಂಭವಿಸಿದೆ. ಈ ಕುರಿತು ಸಂಪೂರ್ಣ ವರದಿ ಪಡೆಯಲಾಗುವುದು. ಆದರೆ ಗುಡ್ಡ ಕುಸಿತ ಬಗ್ಗೆ ಖಚಿತ ಮಾಹಿತಿ ಇಲ್ಲದೇ ಮಾತನಾಡುವುದು ಬೇಡ. ವೈಜ್ಞಾನಿಕ ವರದಿ ಬಂದ ಮೇಲೆ ಮಾತ್ರ ಈ ಕುರಿತು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಈ ಕುರಿತು ಅಪಪ್ರಚಾರ ಬೇಡ ಎಂದು ತಿಳಿಸಿದ್ದರು.

    ಇತ್ತ ಪ್ರವಾಹದಲ್ಲಿ ನಾಪತ್ತೆಯಾಗಿರುವ ಜನರ ಮೃತ ದೇಹ ಹೊರತೆಗೆಯುವ ಕಾರ್ಯಾಚರಣೆ, ತಾತ್ಕಾಲಿಕ ರಸ್ತೆ ಸಂಪರ್ಕ ಕಲ್ಪಿಸುವ ಹಾಗೂ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೂ ಕುಸಿತ ಪ್ರದೇಶ ವೀಕ್ಷಣೆಗೆ ತೆರಳಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

    ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

    ಮಡಿಕೇರಿ: ಪ್ರವಾಸಿಗರ ತಾಣವಾದ ಮಂಜಿನನಗರಿಯಲ್ಲಿ ಅವರಿಸಿದ ಜಲಪ್ರಳಯದಿಂದಾಗಿ ಅಕ್ಷರಶಃ ಬದುಕು ನರಕ ಸದೃಶ್ಯವಾಗಿದೆ. ಕೊಡಗಿನಲ್ಲಿ ಮಳೆ ಅಲ್ಪವಿರಾಮ ನೀಡಿದ್ದರೂ, ಯಾತನೆಗೆ ಮಾತ್ರ ವಿರಾಮವಿಲ್ಲದಂತಾಗಿದೆ. ಈ ಮಧ್ಯೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಆಗಮಿಸುತ್ತಿದ್ದಾರೆ.

    ಮೈಸೂರಿನಿಂದ ಕುಶಾಲನಗರಕ್ಕೆ ತೆರಳಿ ಅಲ್ಲಿ ಕುವೆಂಪು ಬಡಾವಣೆ, ಸಾಯಿ ಬಡಾವಣೆಗೆ ಭೇಟಿ ನೀಡಲಿದ್ದಾರೆ. ನಂತರ ಭೂಕುಸಿತವಾಗಿರುವ ಮಾದಾಪುರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಡಿಕೇರಿಯ ಮೈತ್ರಿ ಹಾಲ್ ನಲ್ಲಿರುವ ಸಂತ್ರಸ್ತರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

    ಇದೇ ವೇಳೆ ನಿರ್ಮಲಾ ಸೀತಾರಾಮನ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆಯಿದೆ.

    ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮಂಜಿನ ನಗರಿ ಮಡಿಕೇರಿಯಲ್ಲೀಗ ಹಸಿರು ಕಳೆಗುಂದಿದೆ. ಮಳೆ ಅಲ್ಪ ವಿರಾಮ ನೀಡಿದ್ದರಿಂದ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿಎಲ್ಲಿ ನೋಡಿದ್ರೂ ಅವಶೇಷಗಳೇ ಕಂಡುಬರುತ್ತಿವೆ. ಹಲವೆಡೆ ಊರಿಗೆ ಊರುಗಳೇ ಕೊಚ್ಚಿ ಹೋಗಿವೆ. ಅಲ್ಲೊಂದು ಊರು ಇತ್ತಾ ಅಂತ ಕೇಳೋ ಪರಿಸ್ಥಿತಿ ಬಂದಿದೆ. ಹಟ್ಟಿಹೊಳೆಯ 20ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಊರಿನಲ್ಲಿ ಪುಟ್ಟದಾದ ಹೊಳೆ ಹರಿದು ಹೋಗ್ತಿದೆ. ಮಳೆ ನಿಂತರೂ ಕೊಚ್ಚಿಹೋದ ಊರಿನೊಳಗೆ ಈಗ ತೊರೆಯದ್ದೇ ಸದ್ದಾಗಿದೆ.

    ಇತ್ತ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ ಆವರಿಸಿದೆ. ಭೂಕುಸಿತದಿಂದ ಕೊಚ್ಚಿಹೋದ ರಸ್ತೆಗಳು, ಮಣ್ಣಿನಡಿಗೆ ಬಿದ್ದ ಮನೆಗಳು ಅಲ್ಲಿನ ಕರುಣಾಜನಕ ಸ್ಥಿತಿಗೆ ಕನ್ನಡಿ ಹಿಡಿಯುತ್ತೆ. ಜೋಡುಪಾಲದಲ್ಲಿ ಸಂತ್ರಸ್ತ ಜನರ ಸ್ಥಿತಿ ಒಂದ್ಕಡೆಯಾದರೆ, ಮೂಕಪ್ರಾಣಿಗಳ ಸ್ಥಿತಿ ಶೋಚನೀಯವಾದೆ. ಇನ್ನು ಆಗಸ್ಟ್ 17ರಂದು ಕಣ್ಮರೆಯಾಗಿದ್ದ ಹೆಬ್ಬಟ್ಟಗೇರಿ ಗ್ರಾಮದ ವೃದ್ದೆ ಉಮ್ಮವ್ವರ ಮೃತದೇಹ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. ಇತ್ತ ಸಾಕುನಾಯಿ, ಬೆಕ್ಕು, ಜಾನುವಾರುಗಳಿಗೆ ಆಹಾರ ಇಲ್ಲದೆ ಸಂಕಷ್ಟ ಎದುರಾಗಿದೆ.

    ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡುವುದು ಸರ್ಕಾರದ ಕರ್ತವ್ಯ. 76 ಶಾಲೆಗಳು ರಿಪೇರಿಯಾಗಬೇಕಿದೆ. ಮಕ್ಕಳನ್ನು ಪಕ್ಕದೂರಿನ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ನಿರಾಶ್ರಿತ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಶಿಕ್ಷಣ ನೀಡಲಾಗುವುದು. ಇನ್ನೆರಡು ದಿನದಲ್ಲಿ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

    ಸುಳ್ಯಕ್ಕೆ ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು, ಆಲೆಟ್ಟಿ ಮಾರ್ಗವಾಗಿ ಏಳು ಬಸ್‍ಗಳನ್ನು ಮಡಿಕೇರಿ ಡಿಪೋದಿಂದ ಹಾಕಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

    ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

    ಬೆಳಗಾವಿ: ನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮನೇಕಾ ಗಾಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಲವಾರು ವರ್ಷಗಳಿಂದ ಅನಧಿಕೃತ ಕಸಾಯಿಖಾನೆಗಳು ನಡೆಯುತ್ತಿವೆ. ಈ ಕುರಿತು ಸ್ಥಳೀಯರು ಅಕ್ಟೋಬರ್ ನಲ್ಲಿ ದೂರು ದಾಖಲಿಸಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

    ತಮಗೆ ದೊರಕಿರುವ ಮೂಲಗಳ ಮಾಹಿತಿ ಪ್ರಕಾರ ಗೋವುಗಳ ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಆಕ್ರಮ ಬಾಂಗ್ಲಾ ವಲಸಿಗರು ಅಲ್ಲದೇ ಪರಿಸರ ನಾಶ ಮಾಡುವಂತಹ ಎಲ್ಲಾ ಆಕ್ರಮಗಳು ಇಲ್ಲಿ ನಡೆಯುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ತಡೆಯಲು ಯತ್ನಿಸದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು. ಅಲ್ಲದೇ ಸ್ಥಳದಲ್ಲೇ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು.

    ಇದೇ ವೇಳೆ ಆಕ್ರಮ ಕಸಾಯಿ ಖಾನೆ ನಡೆಯುತ್ತಿರುವುದರ ಹಿಂದೆ ಪೊಲೀಸರು ಹಾಗೂ ಸ್ಥಳೀಯ ಶಾಸಕರ ಕೈವಾಡವಿದೆ. ಅಲ್ಲದೇ ಬೆಳಗಾವಿ ಅಟೋ ನಗರದಲ್ಲಿ ಸರಿ ಸುಮಾರು 11 ಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಪೊಲೀಸರು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

    ಈ ವೇಳೆ ಕೇಂದ್ರ ಸಚಿವರಿಗೆ ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ್ ಜೋಷಿ ಸಾಥ್ ನೀಡಿದರು. ಅಲ್ಲದೇ ಅನಧಿಕೃತ ಕಸಾಯಿಖಾನೆಯ ಪ್ರವೇಶ ದ್ವಾರದ ಬಳಿ ಕೆಲ ನಿಮಿಷ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ನಂತರ ನಗರ ಪೊಲೀಸ್ ಆಯುಕ್ತ ಡಿಸಿ ರಾಜಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದರು.

    ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತ ಕಸಾಯಿ ಕಾರ್ಖಾನೆಗಳು ನಡೆಯುತ್ತಿದ್ದು, ಆಕ್ರಮವಾಗಿ ಗೋವುಗಳ ಮಾರಣ ಹೊಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆಕ್ರಮದ ಕುರಿತು ಮಾಹಿತಿ ಪಡೆದ ಪೊಲೀಸರು ಘಟಕಗಳನ್ನು ಸೀಜ್ ಮಾಡಿದ್ದರು. ಆದರೆ ಕಸಾಯಿಖಾನೆ ಮಾಲೀಕರು ಮತ್ತೊಂದು ದ್ವಾರದಿಂದ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಸ್ತುತ ಕಸಾಯಿಖಾನೆ ಮಾಲೀಕರು ತಲೆ ಮರೆಸಿಕೊಂಡಿದ್ದು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.