Tag: ಕೇಂದ್ರ ಸಚಿವೆ

  • ಶೋಭಾ ಕರಂದ್ಲಾಜೆ ಸೇರಿ ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆಗಳ ಉಸ್ತುವಾರಿ

    ಶೋಭಾ ಕರಂದ್ಲಾಜೆ ಸೇರಿ ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆಗಳ ಉಸ್ತುವಾರಿ

    ನವದೆಹಲಿ: ಕೇಂದ್ರ ಸಚಿವ ಸಂಪುಟಕ್ಕೆ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸಾರುತಾ ಅವರು ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಶೋಭಾ ಕರಂದ್ಲಾಜೆ (Shobha Karandlaje) ಸೇರಿ ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆಗಳ ಉಸ್ತುವಾರಿ ನೀಡಲಾಗಿದೆ.

    ಈಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರಿಗೆ ಈಗ ಇರುವ ಖಾತೆಯ ಜೊತೆಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

    ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರ ಜವಾಬ್ದಾರಿಯನ್ನು ನೀಡಲಾಗಿದೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ಈಗಿರುವ ಖಾತೆ ಜೊತೆಗೆ ಹೆಚ್ಚುವರಿಯಾಗಿ ಜಲಶಕ್ತಿ ರಾಜ್ಯ ಸಚಿವರಾಗಿ ಕೆಲಸ ನಿರ್ವಹಿಸಲಿದ್ದಾರೆ.

    ಕೇಂದ್ರ ಸಚಿವರಾದ ಭಾರತಿ ಪ್ರವೀಣ್ ಪವಾರ್ ಅವರಿಗೆ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಇದನ್ನೂ ಓದಿ: ‘ಮೋದಿ ಜೀ’ ಕರೆದು ಸಾರ್ವಜನಿಕರಿಂದ ನನ್ನ ದೂರ ಮಾಡ್ಬೇಡಿ: ಪ್ರಧಾನಿ ಮನವಿ

    ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸರೂತಾ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಮೂವರು ಕೇಂದ್ರ ಸಚಿವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

  • ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ವಿಜಯಪುರ: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ (Sadhwi Niranjan Jyoti) ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರದ (Vijayapura) ಜುಮನಾಳ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ.

    ವಿಜಯಪುರ‌-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ ನಡೆದಿದೆ. ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರು ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

    ಗಾಯಗೊಂಡ ಕೇಂದ್ರ‌‌ ಸಚಿವೆ ಸಾಧ್ವಿ ನಿರಂಜನಾ‌ ಜ್ಯೋತಿ ಹಾಗೂ ಕಾರು ಚಾಲಕನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.

    ವಿಜಯಪುರ ನಗರದಲ್ಲಿ ಗುರುವಾರ (ಮಾ.16) ನಡೆದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಸಾಧ್ವಿ ಅವರು ಭಾಗಿಯಾಗಿದ್ದರು. ಕಾರ್ಯಕ್ರಮಗಳ ಬಳಿಕ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ‌ ಎನ್‌ಹೆಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ನೀಡಿ ಟ್ರಾಫಿಕ್‌ ಜಾಮ್‌ ಕ್ಲಿಯರ್‌ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 5, 8ನೇ ತರಗತಿ ಬೋರ್ಡ್‌ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಸ್ಕ್ಯಾನಿಂಗ್ ಮುಗಿಸಿ ಹೊರಬಂದ ಸಾಧ್ವಿ ನಿರಂಜನಾ ಜ್ಯೋತಿ ಅವರು ʼಪಬ್ಲಿಕ್‌ ಟಿವಿʼಗೆ ಸ್ಪಷ್ಟನೆ ನೀಡಿ, ದೇವರ ದಯೆಯಿಂದ ಯಾವುದೇ ಹೆಚ್ಚಿನ ಹಾನಿ ಆಗಿಲ್ಲ. ಅಪಾಘಾತದಲ್ಲಿ ತಲೆ ಮತ್ತು ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಬಲಗಾಲು ಹಾಗೂ ತಲೆಯ ಸಿಟಿ ಸ್ಕ್ಯಾನಿಂಗ್ ಮಾಡಿದ್ದಾರೆ. ಯಾವುದೇ ಗಂಭೀರ ಪೆಟ್ಟು ಆಗಿಲ್ಲ. ಡ್ರೈವರ್ ತಲೆಗೆ ಗಾಯ, ಕಾಲಿಗೆ ಏಟಾಗಿದೆ. ವಾಹನ ಚಾಲಕನ ನಿಯಂತ್ರಣದಿಂದ ಟ್ಯಾಂಕರ್ ಕೆಳಗೆ ನಾವು ಸಿಕ್ಕಿ ಹಾಕಿಕೊಳ್ಳುವುದು ತಪ್ಪಿದಂತಾಗಿದೆ. ಯಾರು ಕೂಡ ಗಾಬರಿ ಪಡುವ ಅವಶ್ಯಕತೆ ಇಲ್ಲ. ನಾನು ಚೆನ್ನಾಗಿದ್ದೇನೆ. ನಡೆಯಲು ಸಾಧ್ಯವಾಗುತ್ತಿದೆ. ಸಣ್ಣ ಪುಟ್ಟ ಪೆಟ್ಟು ಬಿದ್ದು ಗಾಯ ಅಗಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

  • ನನ್ನ ಕಚೇರಿ ಹೆಸರು ದುರ್ಬಳಕೆ ಮಾಡಿದವರ ಬಗ್ಗೆ ದೂರು ಕೊಟ್ಟಿದ್ದೇನೆ: ಶೋಭಾ ಕರಂದ್ಲಾಜೆ

    ನನ್ನ ಕಚೇರಿ ಹೆಸರು ದುರ್ಬಳಕೆ ಮಾಡಿದವರ ಬಗ್ಗೆ ದೂರು ಕೊಟ್ಟಿದ್ದೇನೆ: ಶೋಭಾ ಕರಂದ್ಲಾಜೆ

    ಧಾರವಾಡ: ನನ್ನ ಕಚೇರಿ ಹೆಸರನ್ನು ದುರ್ಬಳಕೆ ಮಾಡಿದವರ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದ್ದು, ಈ ಸಂಬಂಧ ಈಗಾಗಲೇ ನಾನು ದೂರು ನೀಡಿದ್ದೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    police (1)
    ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಕಚೇರಿ ಹಾಗೂ ನನ್ನ ಹೆಸರಿನ ಮೇಲೆ ಊಟಿ ಮತ್ತು ಚೆನ್ನೈನಲ್ಲಿ ಕೆಲವರು ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅಲ್ಲಿರುವ ಯಾರೋ ಒಬ್ಬ ವ್ಯಕ್ತಿ ಫೋನ್ ಮಾಡಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ತಕ್ಷಣ ಇದನ್ನು ಸಿಸಿಬಿಗೆ ವರ್ಗಾಯಿಸಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಬಂಧನ ಆಗಬೇಕು. ಅವರ ಫೋನ್ ನಂಬರ್ ಕೂಡ ನಾನು ಕೊಟ್ಟಿದ್ದೇನೆ. ಯಾರು, ಯಾವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಹಾಗೂ ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು. ಇದನ್ನೂ ಓದಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಆಪ್ತ ಸಹಾಯಕ ಎಂದು ಹಣ ಪಡೆದು ವಂಚನೆ – ಪ್ರಕರಣ ದಾಖಲು

    ಏನಿದು ಆರೋಪ:
    ಚೆನ್ನೈ, ಊಟಿಯ ಲ್ಯಾಂಡ್ ಲಾರ್ಡ್ಸ್, ಕೃಷಿಕರು ಹಾಗೂ ಬ್ಯುಸಿನೆಸ್‍ಮೆನ್‍ಗಳಿಗೆ ಕಳೆದ ಮೂರು ತಿಂಗಳಿಂದ ವಂಚನೆ ಮಾಡ್ತಿರೋದು ಗೊತ್ತಾಗಿದೆ. ಪ್ರಕಾಶ್ ಎಂಬಾತ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಅಂತ ಹೇಳಿಕೊಂಡು ಹಣ ಪಡೆದಿದ್ದಾನಂತೆ. ಅಲ್ಲದೇ ಕೇಂದ್ರ ಸರ್ಕಾರದ ಟೆಂಡರ್‍ಗಳನ್ನು ಕೊಡಿಸುವುದಾಗಿ ಬರವಸೆ ಕೂಡ ಕೆಲವರಿಗೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಚಿವರ ಆಪ್ತ ಸಹಾಯಕ ವರುಣ್ ಆದಿತ್ಯ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮೋದಿ ಈ ದೇಶದ ಪ್ರಧಾನಿ, ಮೈಸೂರಿಗೆ ಬರೋದ್ರಲ್ಲಿ ತಪ್ಪೇನಿಲ್ಲ: ಸಿದ್ದರಾಮಯ್ಯ

    Live Tv

  • ಪ್ರೀತಿಸಿ ಮೋಸ ಮಾಡ್ತಾರೆ, ಕೈಗೊಂದು ಮಗು ಕೊಟ್ಟು ಓಡಿ ಹೋಗ್ತಾರೆ – ಲವ್‌ಜಿಹಾದ್ ವಿರುದ್ಧ ಶೋಭಾ ಗುಡುಗು

    ಪ್ರೀತಿಸಿ ಮೋಸ ಮಾಡ್ತಾರೆ, ಕೈಗೊಂದು ಮಗು ಕೊಟ್ಟು ಓಡಿ ಹೋಗ್ತಾರೆ – ಲವ್‌ಜಿಹಾದ್ ವಿರುದ್ಧ ಶೋಭಾ ಗುಡುಗು

    ಉಡುಪಿ: ಲವ್ ಜಿಹಾದ್ ಒಂದು ಪಿಡುಗು ತಕ್ಷಣ ಕೊನೆಯಾಗಬೇಕು. ಲವ್ ಜಿಹಾದ್ ನಮ್ಮ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಿಯ ಹೆಸರಲ್ಲಿ ಮದುವೆಯಾಗ್ತಾರೆ ಅಥವಾ ಮದುವೆಯಾಗದೆ ಮೋಸ ಮಾಡ್ತಾರೆ. ಹಾಗೆಯೇ ಕೈಗೊಂದು ಮಗು ಕೊಟ್ಟು ಓಡಿ ಹೋಗ್ತಾರೆ. ತಲಾಖ್ ಎಂದು ಹೇಳಿ ಇನ್ನೊಬ್ಬರನ್ನ ಮದುವೆಯಾಗ್ತಾರೆ. ಇದರಿಂದ ನಮ್ಮ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳಿದಂತಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ..?- ಬಿ.ಸಿ.ನಾಗೇಶ್ ಗರಂ

    ದೇಶದ ಅನೇಕ ಭಾಗಗಳಲ್ಲಿ ನಮ್ಮ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಲವ್ ಜಿಹಾದ್‌ಗೆ ಹೆಣ್ಣುಮಕ್ಕಳು ಬಲಿಯಾದರೆ ತಂದೆ-ತಾಯಿಯ ದುಃಖ ಕೇಳುವವರು ಯಾರು? ಲವ್ ಜಿಹಾದ್ ತಡೆಗೆ ಬಲವಾದ ಕಾನೂನು ಜಾರಿ ಮಾಡುವ ಅಗತ್ಯವಿದೆ. ಹಿಂದಿನಿಂದಲೂ ಈ ಬಗ್ಗೆ ವಾದ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವ್ಯಕ್ತಿ ಅಥವಾ ಸಮಿತಿಯ ಬಗ್ಗೆ ನಾನು ಮಾತನಾಡಲ್ಲ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು. ನಮ್ಮ ಕನ್ನಡ ಸಾಹಿತ್ಯ ಸತ್ವಯುತವಾಗಿದೆ, ಕನ್ನಡದ ಸಾಹಿತಿ ಕವಿಗಳಲ್ಲಿ ಅಷ್ಟೊಂದು ತಾಕತ್ತು ಇದೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಜಾ? – ಸಚಿವರ ವರದಿ ಆಧರಿಸಿ ಕ್ರಮ ಕೈಗೊಳ್ತೇನೆಂದ ಸಿಎಂ

    ನಮ್ಮ ರಾಜ್ಯದ ಏಕೀಕರಣ ದಂತಹ ವಿಚಾರಗಳು ಕೂಡ ಮಕ್ಕಳಿಗೆ ತಿಳಿಯುವಂತಾಗಬೇಕು. ವಿವಾದ ಇಲ್ಲದಂತಹ ವ್ಯಕ್ತಿಗಳನ್ನು ಸಮಿತಿಯಲ್ಲಿ ಜೋಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಎಲ್ಲರಿಗೂ ಪ್ರಿಯವಾದ ವಿಚಾರಗಳನ್ನು ಹೇಳಬೇಕು. ಎಲ್ಲರನ್ನೂ ಖುಷಿಪಡಿಸುವುದು ಕಷ್ಟ, ಎಲ್ಲರೂ ಸಮಾನ ಎನ್ನುವ ರೀತಿಯಲ್ಲಿ ಪರಿಷ್ಕರಣೆಯಾಗಬೇಕು. ಮಕ್ಕಳ ಮನಸ್ಸನ್ನು ಪುಳಕಗೊಳಿಸುವ, ವಿಕಸಿತ ಗೊಳಿಸುವ ಪಠ್ಯಗಳು ಬರಬೇಕು ಎಂದು ಸಲಹೆ ನೀಡಿದ್ದಾರೆ.

  • ಆದಾಯ ತೆರಿಗೆ ಇಲಾಖೆಯ ಕಟ್ಟಡ ಕಾಮಗಾರಿಗೆ ನಿರ್ಮಲಾ ಸೀತಾರಾಮನ್ ಶಂಕು ಸ್ಥಾಪನೆ

    ಆದಾಯ ತೆರಿಗೆ ಇಲಾಖೆಯ ಕಟ್ಟಡ ಕಾಮಗಾರಿಗೆ ನಿರ್ಮಲಾ ಸೀತಾರಾಮನ್ ಶಂಕು ಸ್ಥಾಪನೆ

    ಬೆಂಗಳೂರು: ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಂಗಳೂರು ಇನ್ ಫ್ಯಾಂಟ್ರೀ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅದೇ ಸ್ಥಳದಲ್ಲಿ ಶಿಲಾನ್ಯಾಸದ ಫಲಕವನ್ನು ಸಚಿವರು ಅನಾವರಣ ಮಾಡಿದರು. ಬೆಂಗಳೂರು ಕೇಂದ್ರ ಲೋಕಸಭಾಕ್ಷೇತ್ರದ ಮಾನ್ಯ ಸಂಸತ್ ಸದಸ್ಯ ಪಿ.ಸಿ. ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇಲ್ಲಿ ನಿರ್ಮಾಣವಾಗಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿ ಕಟ್ಟಡವು ನೆಲಮಹಡಿ ಮತ್ತು 18 ಮಹಡಿಗಳನ್ನು ಮತ್ತು ನೆಲಮಾಳಿಗೆಯಲ್ಲಿ ವಾಹನ ನಿಲುಗಡೆಯ ಸೌಲಭ್ಯ ಒಳಗೊಂಡಿರುತ್ತದೆ. ಕಟ್ಟಡವು ಗರಿಷ್ಠ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳುತ್ತದೆ ಮತ್ತು ಗೃಹ ಶ್ರೇಯಾಂಕ Iಗಿ ಅನುಗುಣವಾಗಿರುತ್ತದೆ. ಈ ಕಟ್ಟಡವು ವಿದ್ಯುತ್ ಉತ್ಪಾದನೆಗೆ ಸೌರ ಫಲಕಗಳನ್ನು ಒಳಗೊಂಡಿರುತ್ತದೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆಯಿಂದ ವಿನ್ಯಾಸಿತವಾಗಿದೆ. ಇದನ್ನೂ ಓದಿ: ನಿಗದಿತ ಅವಧಿಯ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುತ್ತೆ: ಸಿ.ಸಿ.ಪಾಟೀಲ್ 

    ಎರಡು ಕೊಳಾಯಿ ವ್ಯವಸ್ಥೆಯೊಂದಿಗೆ ಮರುಬಳಕೆಯ ನೀರನ್ನು ಕೈತೋಟಕ್ಕೆ ಬಳಸಲಾಗುತ್ತದೆ. ಮ್ಯಾಗ್ನೆಟಿಕ್ ಫಿಲ್ಟರ್ ಸಹಿತವಾದ ಕೇಂದ್ರೀಕೃತ ವಾಯು ಸ್ವಚ್ಛತೆ ವ್ಯವಸ್ಥೆ, ಮತ್ತು ಯುವಿ- ಕಿರಣ ಕ್ರಿಮಿನಾಶಕವನ್ನು ಒಳಗೊಂಡಿದೆ. ಕಟ್ಟಡವನ್ನು ಸಿಪಿಡಬ್ಲ್ಯುಡಿಯ ಬೆಂಗಳೂರು ಯೋಜನಾ ವೃತ್ತ ನಿರ್ಮಿಸುತ್ತದೆ. ಈ ಸುಸಜ್ಜಿತ ಕಟ್ಟಡದಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆದ್ಯತೆಯ ಮೇಲೆ ನಿವಾರಿಸಲು ಪ್ರತ್ಯೇಕವಾದ ಸಾರ್ವಜನಿಕ ಸಂಪರ್ಕ ಕಚೇರಿ ಮತ್ತು ತೆರಿಗೆ ಪಾವತಿದಾರರಿಗೆ ಸರದಿಗಾಗಿ ಕಾದು ಕುಳಿತುಕೊಳ್ಳುವ ಆವರಣವೂ ಇರುತ್ತದೆ. ಇದನ್ನೂ ಓದಿ:ಸಮಾಜ ಸಂಘಟನೆ ಗಣೇಶ ಹಬ್ಬದ ಪ್ರತೀಕ, ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಿ: ಮಾಳವಿಕಾ ಅವಿನಾಶ್

    ಇದು ಯಾವುದೇ ತೊಡಕು ರಹಿತ ತೆರಿಗೆದಾರರ ಸೇವೆಗಳನ್ನು ಒದಗಿಸಲು ಆದಾಯಕರ ಸೇವಾ ಕೇಂದ್ರವನ್ನು ಹೊಂದಿರುತ್ತದೆ. ಕೇಂದ್ರ ಸ್ಥಾನದಲ್ಲಿರುವ ಈ ಕಚೇರಿ ಕಟ್ಟಡವು ತೆರಿಗೆದಾರ ಸ್ನೇಹಿಯಾಗಿದೆ. ಕಟ್ಟಡದ ವಿನ್ಯಾಸ ಮತ್ತು ಜಾಗದ ಹಂಚಿಕೆಯು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅನುಕೂಲಕರವಾದ ಕಾರ್ಯ ವಾತಾವರಣವನ್ನು ಒದಗಿಸುತ್ತದೆ.

  • ದಾಖಲೆ ಆಹಾರ ಉತ್ಪಾದನೆ, ರಫ್ತಿನಲ್ಲೂ ದೇಶದ ಸಾಧನೆ: ಶೋಭಾ ಕರಂದ್ಲಾಜೆ

    ದಾಖಲೆ ಆಹಾರ ಉತ್ಪಾದನೆ, ರಫ್ತಿನಲ್ಲೂ ದೇಶದ ಸಾಧನೆ: ಶೋಭಾ ಕರಂದ್ಲಾಜೆ

    ಬೆಂಗಳೂರು: ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ಅಕ್ಕಿ, ಗೋಧಿಗಾಗಿ ಬೇರೆ ದೇಶದತ್ತ ನೋಡುತ್ತಿದ್ದ ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಮತ್ತು ದೂರದೃಷ್ಟಿಯ ಯೋಜನೆಗಳ ಫಲ ಇದಾಗಿದೆ. ಈ ಬಾರಿ 305 ಮಿಲಿಯ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮತ್ತು 326 ಮಿಲಿಯ ಮೆಟ್ರಿಕ್ ಟನ್ ತೋಟಗಾರಿಕಾ ಬೆಳೆ ಉತ್ಪಾದನೆ ಆಗಿದ್ದು, ಈ ವಿಚಾರದಲ್ಲಿ ದಾಖಲೆ ಉತ್ಪಾದನೆ ಸಾಧ್ಯವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

    ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ರಫ್ತು ವಿಚಾರದಲ್ಲೂ ವಿಶೇಷ ಸಾಧನೆ ಮಾಡಲು ನಾವು ಮುಂದಾಗಿದ್ದೇವೆ. ಆಹಾರ ಪದಾರ್ಥ ರಫ್ತಿನಲ್ಲೂ ನಾವೀಗ 9ನೇ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.

    ಕಾಂಗ್ರೆಸ್ ಆಡಳಿತದಲ್ಲಿ ಕೃಷಿ ಮೂಲದಿಂದ ಜಿಡಿಪಿಗೆ ಕೇವಲ ಶೇ.13ರಿಂದ ಶೇ.14 ದಷ್ಟು ಕೊಡುಗೆ ಲಭಿಸುತ್ತಿತ್ತು. ಏಳು ವರ್ಷಗಳ ಬಿಜೆಪಿ ಆಡಳಿತದ ಬಳಿಕ ಅದು ಶೇ.20.22ಕ್ಕೆ ಏರಿದೆ. ಈ ರೀತಿ ಕೃಷಿ ಇಲಾಖೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

    ಪ್ರಧಾನಮಂತ್ರಿಯವರು ಕಿಸಾನ್ ಸಮ್ಮಾನ್ ಯೋಜನೆಯಡಿ ಇಲ್ಲಿನವರೆಗೆ 21 ಕೋಟಿ ರೈತರಿಗೆ 1,57,000 ಕೋಟಿ ರೂಪಾಯಿ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ನೀಡಿದ್ದಾರೆ. ಫಸಲ್ ಬಿಮಾ ಯೋಜನೆಯನ್ನೂ ಸರಳಗೊಳಿಸಲಾಗಿದೆ. ಯಾವುದೇ ಸಮಸ್ಯೆಗಳಿಲ್ಲದೆ ಖಾತೆಗೆ ಪರಿಹಾರಧನ ಬರುವಂತಾಗಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆ ಎಂದರು.

    ನೈಸರ್ಗಿಕ ಕೃಷಿಗೆ ಆದ್ಯತೆ ಮತ್ತು ಪ್ರೋತ್ಸಾಹ ಕೊಡಲಾಗುತ್ತಿದೆ. ಹನಿ ನೀರಾವರಿಯಲ್ಲಿ ರಾಜ್ಯವು ದೇಶದಲ್ಲಿ ನಂಬರ್ ವನ್ ಆಗಿದೆ. ತೆಂಗು ರಫ್ತಿನ ಮೇಲೆ ಇದ್ದ ನಿಷೇಧವನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ತೆಂಗಿನ ಸಂಸ್ಕರಿತ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಸಾಧ್ಯವಾಗಲಿದೆ ಎಂದು ವಿವರಿಸಿದರು.

    ಟ್ರ್ಯಾಕ್ಟರ್, ಟಿಲ್ಲರ್, ಕೃಷಿ ಪರಿಕರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ಉತ್ಪನ್ನಗಳ ಗರಿಷ್ಠ ಮಾರಾಟ ದರವನ್ನು (ಎಂಆರ್ಪಿ) ಆನ್‍ಲೈನ್‍ನಲ್ಲಿ ಪ್ರಕಟಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಡೀಲರ್ ಅಂಗಡಿಯಲ್ಲೂ ಅದನ್ನು ದೊಡ್ಡದಾಗಿ ಪ್ರಕಟಿಸಬೇಕು. ಕೃಷಿ ಇಲಾಖೆಗಳಲ್ಲೂ ಈ ಕುರಿತ ಮಾಹಿತಿ ಸಿಗುವಂತಾಗಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದರು.

    ಹೆಚ್ಚು ಸವಾಲು ಇರುವ ಜನರಿಗೆ ಅತ್ಯಂತ ಹತ್ತಿರವಾದ ಇಲಾಖೆ ಎಂದೇ ಕೃಷಿಯನ್ನು ಗುರುತಿಸಲಾಗಿದೆ. ಇಡೀ ದೇಶದಲ್ಲಿ ಕೆಲಸ ಮಾಡಲು ಅವಕಾಶ ಇದೆ. ದೇಶದ ಶೇ.70 ಜನರು ರೈತಾಪಿ ಕೆಲಸ ಮಾಡುತ್ತಾರೆ. ಕೃಷಿಕರಲ್ಲಿ ಶೇ.80 ಜನರು ಕಡಿಮೆ ಜಮೀನು ಹೊಂದಿ ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಕೃಷಿ ಲಾಭದಾಯಕವಲ್ಲ ಎಂದು ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಿಲ್ಲ. ನಗರದ ಕೆಲಸಕ್ಕಾಗಿ ವಲಸೆ ಹೆಚ್ಚುತ್ತಿದೆ. ಸಣ್ಣ ಮತ್ತು ಮಧ್ಯಮ ರೈತರನ್ನು ಒಗ್ಗೂಡಿಸಿ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಲು ನರೇಂದ್ರ ಮೋದಿ ಅವರ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ ಎಂದರು.

    2013-14ರಲ್ಲಿ ಯುಪಿಎ ಸರ್ಕಾರವು ಬಜೆಟ್‍ನಲ್ಲಿ ಸುಮಾರು 21,350 ಕೋಟಿಯನ್ನು ಕೃಷಿ ಕ್ಷೇತ್ರಕ್ಕೆ ನೀಡಿ ಆ ಕ್ಷೇತ್ರವನ್ನು ಕಡೆಗಣಿಸಿತ್ತು. ಆದರೆ ಕಳೆದ ಆರೇಳು ವರ್ಷಗಳಲ್ಲಿ ಕೃಷಿ ಬಜೆಟ್ ಶೇ 460ರಷ್ಟು ಹೆಚ್ಚಾಗಿ 2020-21ರಲ್ಲಿ 1.31 ಲಕ್ಷ ಕೋಟಿ ಆಗಿದೆ ಎಂದರು.

    ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು (ಎಫ್‍ಪಿಒ) ಆರಂಭಿಸುವ ಗುರಿಯನ್ನು ನಮ್ಮ ಜನಪರ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಪ್ರತಿ ಎಫ್‍ಪಿಒಗೆ 25 ಬೇರೆ ಬೇರೆ ಉತ್ಪನ್ನ ಉತ್ಪಾದಿಸಲು ಅನುಮತಿ ಮತ್ತು ಸಾಲ ಸೌಕರ್ಯ ಸಿಗಲಿದೆ. ಇದಲ್ಲದೆ ಕೃಷಿ ಮೂಲಸೌಕರ್ಯ ಹೆಚ್ಚಳಕ್ಕೆ 1 ಲಕ್ಷ ಕೋಟಿಯ ಹೆಚ್ಚುವರಿ ಹಣವನ್ನು ನೀಡಲಾಗಿದೆ. ಖಾದ್ಯ ತೈಲ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧನೆಗೆ ಒತ್ತು ಕೊಡಲಾಗುತ್ತಿದೆ. ಒಣ ಭೂಮಿಯಲ್ಲಿ ಸಿರಿ ಧಾನ್ಯ ಬೆಳೆಯಲು ಉತ್ತೇಜನ ನೀಡಲಾಗುವುದು. ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

    ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರು ಮತ್ತು ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷರೂ ಆದ ಭಾರತಿ ಶೆಟ್ಟಿ, ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕು. ಶೋಭಾ ಕರಂದ್ಲಾಜೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

  • ಅಫ್ಘಾನಿಸ್ತಾನ ಭಯೋತ್ಪಾದಕರ ಕೈಗೆ ಹೋಗುವುದು ಒಳ್ಳೆಯದಲ್ಲ: ಶೋಭಾ ಕರಂದ್ಲಾಜೆ

    ಅಫ್ಘಾನಿಸ್ತಾನ ಭಯೋತ್ಪಾದಕರ ಕೈಗೆ ಹೋಗುವುದು ಒಳ್ಳೆಯದಲ್ಲ: ಶೋಭಾ ಕರಂದ್ಲಾಜೆ

    ಚಾಮರಾಜನಗರ: ಅಫ್ಘಾನಿಸ್ತಾನ ಭಯೋತ್ಪಾದಕರ ಕೈಗೆ ಹೋಗುವುದು ಒಳ್ಳೆಯದಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ತಾಲಿಬಾನಿಗಳ ವಶಕ್ಕೆ ಅಫ್ಘಾನಿಸ್ತಾನ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಆತಂಕಕಾರಿ ಬೆಳವಣಿಗೆ. ನಾಗರೀಕ ಸರ್ಕಾರ ಧೂಳಿಪಟ ಮಾಡಿ ಭಯೋತ್ಪಾದಕರ ಕೈಗೆ ದೇಶ ಹೋಗುತ್ತೆ ಅಂದರೆ ವಿಶ್ವಕ್ಕೆ ಒಳ್ಳೆಯದಲ್ಲ. ಭಾರತದ ನಿಲುವೇನು ಅನ್ನೋದ್ನ ವಿದೇಶಾಂಗ ಸಚಿವರು ಸ್ಪಷ್ಟಪಡಿಸುತ್ತಾರೆ ಎಂದು ತಿಳಿಸಿದರು.

    2023 ಅನ್ನು ಸಿರಿ ಧಾನ್ಯಗಳ ವರ್ಷವೆಂದು ಆಚರಿಸಲು ನಿರ್ಧಾರ ಮಾಡಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿ ಧಾನ್ಯಗಳ ವರ್ಷಾಚರಣೆಗೆ ಸಂಯುಕ್ತ ರಾಷ್ಟ್ರಗಳು ಒಪ್ಪಿಕೊಂಡಿವೆ. ಕೃಷಿ ಮೂಲ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. 10 ಸಾವಿರ ರೈತ ಉತ್ಪಾದಕ ಘಟಕಗಳನ್ನ ತೆರೆಯಲು ಉದ್ದೇಶಿಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ. ದೇಶದಲ್ಲಿ ಶೇ 70 ರಷ್ಟು ರೈತರಿದ್ದಾರೆ. ರೈತರಿಗೆ ಧೈರ್ಯ ಮತ್ತು ಬಲ ತುಂಬಲು ರೈತರ ಮನೆಗಳಿಗೆ ತೆರಳುತ್ತಿದ್ದೇನೆ ಎಂದರು. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ನಶಿಸಿ ಹೋಗುತ್ತಿದೆ ಎಂಬ ಎಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ, ಮೊದಲು ಅವರೆಲ್ಲಿದ್ದಾರೆ ಎಂಬುದನ್ನ ನೋಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು. ಟೀಕೆಗಳಿಗೆ ನಾವು ಉತ್ತರ ಕೊಡಲ್ಲ, ಜನರು ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ

  • ಕೇಂದ್ರ ಸಚಿವೆ ಕರಂದ್ಲಾಜೆಯನ್ನು ಹಾಡಿ ಹೊಗಳಿದ ಬಿಎಸ್‍ವೈ

    ಕೇಂದ್ರ ಸಚಿವೆ ಕರಂದ್ಲಾಜೆಯನ್ನು ಹಾಡಿ ಹೊಗಳಿದ ಬಿಎಸ್‍ವೈ

    ಕಲಬುರಗಿ: ಬಿಜೆಪಿ ಸರ್ಕಾರ ಬಂದು ಎರಡು ವರ್ಷವಾದರೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ತುಟಿ ಬಿಚ್ಚದ ಸಿಎಂ ಬಿ.ಎಸ್ ಯಡಿಯೂರಪ್ಪ ಕಲಬುರಗಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಕರಂದ್ಲಾಜೆ ಅವರನ್ನು ಹಾಡಿ ಹೊಗಳಿದ್ದಾರೆ.

    ಕಲಬುರಗಿ ನಗರದಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬಿಎಸ್‍ವೈ, ರೈತರ ಬಗ್ಗೆ ಸದಾ ಕಾಳಜಿ ವಹಿಸುವ ಶೋಭಾ ಕರಂದ್ಲಾಜೆ ಅವರನ್ನು ಪ್ರಧಾನಿ ಮೋದಿ ಕೃಷಿ ಸಚಿವರನ್ನಾಗಿ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಅವರು ಈ ಮೊದಲು ಸಚಿವರಾಗಿ ರಾಜ್ಯದ ತುಂಬಾ ಸುತ್ತಾಡಿದ್ದಾರೆ. ಆಗ ಅವರನ್ನು ಕಾಣಲು, ಮಾತು ಕೇಳಲು ಕಾತುರದಿಂದ ಸೇರುತ್ತಿದ್ರಿ. ಈಗ ಅವರು ರೈತರ ಸಮಸ್ಯೆ ಪರಿಹರಿಸಲು ದೇಶ ಸುತ್ತುವರಿಯಲಿದ್ದಾರೆ. ಅದೇ ಪ್ರೀತಿ ವಿಶ್ವಾಸದಿಂದ ಅವರನ್ನು ಕಾಣಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ

    ಶೋಭಾ ಕರಂದ್ಲಾಜೆ ರೈತರ ಬಗ್ಗೆ ಸದಾ ತುಡಿತ ಹೊಂದಿದವರಾಗಿದ್ದಾರೆ. ಈ ಹಿಂದೆ ರೈತರ ಬಗ್ಗೆ ತುಂಬಾ ಕಾಳಜಿ ವಹಿಸಿದ್ದರು. ಇದೀಗ ಕೃಷಿ ಸಚಿವೆಯಾಗಿದ್ದಾರೆ ಎಂದು ಕರಂದ್ಲಾಜೆ ಅವರ ಬಗ್ಗೆ ಬಿಎಸ್‍ವೈ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಜುಲೈ 5ರ ಬಜೆಟ್‍ಗೆ ನಿರ್ಮಲಾ ಸೀತಾರಾಮನ್‍ರಿಂದ ಭಾರೀ ಸಿದ್ಧತೆ

    ಜುಲೈ 5ರ ಬಜೆಟ್‍ಗೆ ನಿರ್ಮಲಾ ಸೀತಾರಾಮನ್‍ರಿಂದ ಭಾರೀ ಸಿದ್ಧತೆ

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5ರ ಬಜೆಟ್‍ಗೆ ಭಾರೀ ಸಿದ್ಧತೆ ನಡೆಸುತ್ತಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ಮೊದಲ ಬಜೆಟ್‍ನ ಪೂರ್ವಭಾವಿ ಸಲಹಾ ಸಭೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ವಲಯಕ್ಕೆ ನಿರ್ಮಲಾ ಅವರು ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

    ಮುಂದಿನ 5 ವರ್ಷಗಳಲ್ಲಿ ರೈಲು, ರಸ್ತೆ, ಡಿಜಿಟಲ್ ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕಾಗಿ ಬರೋಬ್ಬರಿ 100 ಲಕ್ಷ ಕೋಟಿ ವೆಚ್ಚ ಮಾಡುವ ಬಜೆಟ್ ಹೊಂದಿರಲಿದೆ ಎನ್ನಲಾಗಿದೆ.

    ಈ ಮೊತ್ತದಲ್ಲಿ ಸಾರಿಗೆ ವಿಭಾಗಕ್ಕೆ ಹೆಚ್ಚು ಹಣ ಮೀಸಲು ಇರಿಸುವ ಸಾಧ್ಯತೆ ಇದ್ದು, ನಂತರ ಗೃಹ ನಿರ್ಮಾಣ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆ ಆಗಲಿದೆ. ಇದರಿಂದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ ಆಗಲಿದೆ ಎನ್ನುವುದು ನಿರ್ಮಲಾ ಮತ್ತವರ ತಂಡದ ಲೆಕ್ಕಾಚಾರವಾಗಲಿದೆ.

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ

    ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಕೇಂದ್ರದ ಬಿಜೆಪಿ ನಾಯಕಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

    ಈ ಕುರಿತು ಆಂಗ್ಲ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧನಾತ್ಮಕ ವಾತಾವರಣವನ್ನು ರೂಪಿಸುವ ಅಗತ್ಯತೆ ಇದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಅಲ್ಲದೇ ನಾನು ತಾತ್ಕಾಲಿಕವಾಗಿ ಸಕ್ರೀಯ ರಾಜಕಾರಣದಿಂದ ದೂರವಿದ್ದು, ರಾಮಮಂದಿರ ನಿರ್ಮಾಣ ಮತ್ತು ಗಂಗಾ ಶುದ್ಧೀಕರಣ ವಿಷಯದಲ್ಲಿ ತೊಡಗಿಕೊಳ್ಳುತ್ತೇನೆಂದು ಹೇಳಿದ್ದಾರೆ.

    2019ರ ಜನವರಿಯಿಂದ ಒಂದೂವರೆ ವರ್ಷಗಳ ಕಾಲ ಗಂಗಾ ಯಾತ್ರೆಯಲ್ಲಿ ತೊಡಗಿಕೊಳ್ಳುತ್ತೇನೆ. ಈ ಅವಧಿಯಲ್ಲಿ ವಿವಿಧೆಡೆ ಗಂಗಾನದಿಯ ತಟದಲ್ಲೇ ವಾಸ್ತವ್ಯ ಹೂಡಲಿದ್ದೇನೆ. ನನ್ನ ಈ ಕೋರಿಕೆಯನ್ನು ಪಕ್ಷದ ವರಿಷ್ಠರಿಗೆ ತಿಳಿಸಿ, ಅನುಮತಿಗಾಗಿ ಮನವಿ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಬಿಜೆಪಿ ಮಹಿಳಾ ನಾಯಕಿಯಾಗಿ ಹಾಗೂ ಕೇಂದ್ರ ವಿದೇಶಾಂಗ ಇಲಾಖೆ ಸಚಿವರಾಗಿರುವ ಸುಷ್ಮಾ ಸ್ವರಾಜ್ ರವರು ತಮ್ಮ ಅನಾರೋಗ್ಯದ ಕಾರಣದಿಂದ ಮುಂಬರುವ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದರು. ಈಗ ಉಮಾಭಾರತಿಯವರೂ ಸಹ ಚುನಾವಣೆಯಿಂದ ಹಿಂದೆ ಸರಿದಿರುವುದು ಬಿಜೆಪಿಯ ಮಹಿಳಾ ಘಟಕದ ಬಲ ಕುಂದುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv