Tag: ಕೇಂದ್ರ ಸಚಿವರು

  • ಕಾವೇರಿ ನದಿಯಲ್ಲಿ ಅನಂತಕುಮಾರ್ ಅಸ್ಥಿ ವಿಸರ್ಜನೆ

    ಕಾವೇರಿ ನದಿಯಲ್ಲಿ ಅನಂತಕುಮಾರ್ ಅಸ್ಥಿ ವಿಸರ್ಜನೆ

    ಮಂಡ್ಯ: ಸೋಮವಾರ ನಿಧನರಾಗಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರ ಅಸ್ಥಿಯನ್ನು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

    ದಿವಂಗತ ಅನಂತಕುಮಾರ್ ಅವರ ಸಹೋದರ ನಂದ ಕುಮಾರ್ ಅವರು ಇಂದು ಅಸ್ಥಿ ವಿಸರ್ಜನೆಯನ್ನು, ವೇದಬ್ರಹ್ಮ ಡಾಕ್ಟರ್ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬ್ರಾಹ್ಮಣ ಸಂಪ್ರದಾಯದಂತೆ ಅಸ್ಥಿಗೆ ಪಂಚಾಮೃತ, ಪಂಚಗವ್ಯ ಅಭಿಷೇಕವನ್ನು ಮಾಡಿ, ನಂತರ ದೂಪ ದೀಪ ನೈವೇದ್ಯದಿಂದ ಕಾವೇರಿ ಮಾತೆಗೆ ಫಲಗಳ ಅರ್ಪಣೆ ಮಾಡಿ ಪಶ್ಚಿಮ ವಾಹಿನಿಯಲ್ಲಿ ಅವರ ಅಸ್ಥಿಯನ್ನು ವಿಸರ್ಜನೆ ಮಾಡಲಾಯಿತು.

    ತುಲಾಮಾಸದಲ್ಲಿ ಗಂಗೆಯೇ ಕಾವೇರಿಯಲ್ಲಿ ವಾಸ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದು, ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿತ್ತು. ಅಸ್ಥಿ ವಿಸರ್ಜನೆ ವೇಳೆ ಅನಂತಕುಮಾರ್ ಕುಟುಂಬಸ್ಥರು, ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ, ರಾಮದಾಸ್, ಪ್ರತಾಪ್ ಸಿಂಹ, ಶ್ರೀರಂಗಪಟ್ಟಣದ ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀಧರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಸೋಮವಾರ ಅಂತಿಮ ದರ್ಶನ ಪಡೆದಿದ್ದರು.

    ಅದಮ್ಯ ಚೇತನ, ದೆಹಲಿಯ ಕನ್ನಡದ ಧ್ವನಿ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ಕರ್ನಾಟಕ ಬಿಜೆಪಿಯ ಆಧಾರಸ್ತಂಭ ಅನಂತಕುಮಾರ್‍ರ ಪಾರ್ಥಿವ ಶರೀರವನ್ನು ಮಂಗಳವಾರ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗಿತ್ತು. ಪುರೋಹಿತ ಶ್ರೀನಾಥ್ ಅವರ ನೇತೃತ್ವದಲ್ಲಿ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಶ ಮಾಡಿದ್ದರು. ಈ ವೇಳೆ ಅನಂತ ಕುಮಾರ್ ಅವರ ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೆಹಲಿಗೆ ಬಂದ್ರೂ ಸಿಎಂಗೆ ತಪ್ಪಲಿಲ್ಲ ‘ಸೂಪರ್ ಸಿಎಂ’ ಕಾಟ!

    ದೆಹಲಿಗೆ ಬಂದ್ರೂ ಸಿಎಂಗೆ ತಪ್ಪಲಿಲ್ಲ ‘ಸೂಪರ್ ಸಿಎಂ’ ಕಾಟ!

    ನವದೆಹಲಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರು ಸಹ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕುಮಾರಸ್ವಾಮಿಯವರು ಎಲ್ಲಿಗೆ ಹೋದರು, ಬಂದರೂ ಅಲ್ಲಿ ರೇವಣ್ಣ ಜೊತೆಯಾಗುತ್ತಿದ್ದಾರೆ.

    ಇಂದು ದೆಹಲಿ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರ ಜೊತೆಗೆ ಸೂಪರ್ ಸಿಎಂ ರೇವಣ್ಣ ಅವರದ್ದೇ ಫುಲ್ ಹವಾ. ಸಿಎಂ ಕಾರ್ಯಕ್ರಮ, ಭೇಟಿ, ಸಭೆ ಎಲ್ಲದರಲ್ಲಿಯೂ ರೇವಣ್ಣ ಭಾಗವಹಿಸಿದ್ರು. ಮಂಗಳವಾರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಇಂದು ಕೃಷಿ ಸಚಿವ ರಾಧಮೋಹನ್ ಸಿಂಗ್, ರೈಲ್ವೆ ಸಚಿವ ಪಿಯೂಷ್ ಗೊಯೇಲ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಐದು ಜನ ಸಚಿವರ ಪೈಕಿ ಮೂವರನ್ನು ಭೇಟಿ ಮಾಡುವ ವೇಳೆ ಸಿಎಂಗೆ ರೇವಣ್ಣ ಸಾಥ್ ನೀಡಿದ್ದರು.

    ಕೃಷಿ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ರಾಜ್ಯದ ಕೃಷಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಕೊಟ್ಟ ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹಲವು ಜಿಲ್ಲೆಗಳಲ್ಲಿ ಮೆಗಾ ಡೈರಿ ಆರಂಭಕ್ಕೆ 900 ಕೋಟಿ ರೂ. ನೆರವು ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ದೆಹಲಿ ಭೇಟಿ ಫಲ ಕೊಟ್ಟಿದೆ ಎಂಬ ತೃಪ್ತಿಯಿದೆ ಎಂದರು.

    ನವದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ರಕ್ಷಣಾ ಕಚೇರಿಯಲ್ಲಿ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು, ರಕ್ಷಣಾ ಇಲಾಖೆಗೆ ಸೇರಿದ ಬೆಂಗಳೂರಿನ ಭೂಮಿಯನ್ನು ಮೆಟ್ರೋ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು ಅನುಮತಿ ಕೇಳಿದ್ದಾರೆ.

    ಐಫೋನ್ ಗಿಫ್ಟ್ ನೀಡಲು ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ನನ್ನ ಗಮನಕ್ಕೆ ಬಾರದೆ ಹಣ ಬಿಡುಗಡೆ ಆಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಇದರಲ್ಲಿ ನನ್ನ ಪಾತ್ರವಿಲ್ಲ. ಐಫೋನ್ ಕೊಡುವ ಅವಶ್ಯಕತೆ ಇತ್ತೇ ಅಂತಾ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‍ಗೆ ಕೇಳಿದ್ದೆ. ಅವರು ಕಳೆದ ವರ್ಷವೂ ಕೊಟ್ಟಿದ್ದೆ, ಅದಕ್ಕೆ ಈ ಬಾರಿಯೂ ಕೊಟ್ಟಿದ್ದೇನೆ. ಆದರೆ ಕಳೆದ ಬಾರಿ ಗಿಫ್ಟ್ ನೀಡಿದಾಗ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಹೀಗಾಗಿ ಕೊಟ್ಟಿರುವುದಾಗಿ ಅವರು ಹೇಳಿರುವರು ಎಂದು ಕುಮಾರಸ್ವಾಮಿ ತಿಳಿಸಿದರು.

  • ಒಂದೇ ದಿನ ಇಬ್ಬರು ಸಚಿವರು,ಇಬ್ಬರು ಕಾರ್ಯದರ್ಶಿಗಳ ಭೇಟಿ- ದೆಹಲಿಯಲ್ಲಿ ಮಧ್ವರಾಜ್ ರೌಂಡ್ಸ್

    ಒಂದೇ ದಿನ ಇಬ್ಬರು ಸಚಿವರು,ಇಬ್ಬರು ಕಾರ್ಯದರ್ಶಿಗಳ ಭೇಟಿ- ದೆಹಲಿಯಲ್ಲಿ ಮಧ್ವರಾಜ್ ರೌಂಡ್ಸ್

    ಉಡುಪಿ: ರಾಜ್ಯ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಮಂಡಿಸುತ್ತಿದ್ದಂತೆ ಮೀನುಗಾರಿಕಾ, ಕ್ರೀಡಾ, ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ದೆಹಲಿಗೆ ಹಾರಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾಗಿ ತನ್ನ ಇಲಾಖೆಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣಕ್ಕೆ ಸೂಕ್ತ ಸಲಹೆ ಪಡೆದಿದ್ದಾರೆ.

    ಕೇಂದ್ರ ಕ್ರೀಡಾ ಸಚಿವರಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ರವರನ್ನು ದೆಹಲಿಯಲ್ಲಿರುವ ಅವರ ಕಚೇರಿಯಲ್ಲಿಂದು ಪ್ರಮೋದ್ ಮಧ್ವರಾಜ್ ಭೇಟಿ ಮಾಡಿದರು. ಕರ್ನಾಟಕದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಚರ್ಚೆ ಮಾಡಿದರು. ಕೇಂದ್ರ ಬಿಡುಗಡೆಗೊಳಿಸಬೇಕಾದ ಅನುದಾನವನ್ನು ಸ್ಥಗಿತಗೊಳಿಸಿದ್ದು ಅವುಗಳನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾ ಸವಲತ್ತುಗಳನ್ನು ಅಭಿವೃದ್ಧಿ ಮಾಡಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆಯೂ ಪ್ರಮೋದ್ ಮಧ್ವರಾಜ್ ಮನವಿ ಮಾಡಿದರು.

    ಅಲ್ಲಿಂದ ಮಧ್ವರಾಜ್ ಕೇಂದ್ರದ ಕೃಷಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಅವರನ್ನು ಭೇಟಿಯಾಗಲು ತೆರಳಿದರು. ರಾಜ್ಯ ಮತ್ತು ಕೇಂದ್ರ ಸಹಭಾಗಿತ್ವದ ಮೀನುಗಾರಿಕಾ ಇಲಾಖೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಮೀನುಗಾರರ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ. ಕೇಂದ್ರ ಸರ್ಕಾರದ 80 ಕೋಟಿ ರೂ. ಬಾಕಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡಲಾಯಿತು.

    ಕೇಂದ್ರದ ಕ್ರೀಡಾ ಕಾರ್ಯದರ್ಶಿ ಮತ್ತು ಕ್ರೀಡಾ ಪ್ರಾಧಿಕಾರದ ನಿರ್ದೇಶಕರಾಗಿರುವ ರಾಹುಲ್ ಭಟ್ನಾಗರ್ ರವರನ್ನು ಭೇಟಿ ಮಾಡಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕೇಂದ್ರ ಸರ್ಕಾರದ ಅನುದಾನವನ್ನು ಮಂಜೂರುಗೋಳಿಸುವಂತೆ ಹಾಗೂ ಇಲಾಖೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮನವಿ ನೀಡಲಾಯಿತು

    ಮೋದಿ ಸರ್ಕಾರದಲ್ಲಿ ಅಂಕಿ ಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಮೀನುಗಾರಿಕಾ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ. ಸಂಬಂಧಪಟ್ಟವರನ್ನು ಭೇಟಿ ಮಾಡಿ ಮನವಿ ಮಾಡಿರುವುದನ್ನು ಮನವರಿಕೆ ಮಾಡಿದರು. ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಲು ಸಹಕಾರ ನೀಡುವಂತೆ ಪ್ರಮೋದ್ ಮಧ್ಚರಾಜ್ ಡಿ.ವಿ ಸದಾನಂದ ಗೌಡರಲ್ಲಿ ಮನವಿ ಮಾಡಿದರು. ಈ ವೇಳೆ ರಾಜ್ಯ ಮತ್ತು ಕೇಂದ್ರ ರಾಜಕಾರಣ ಬಗ್ಗೆ ಚರ್ಚೆಗಳು ನಡೆದಿದೆ ಎನ್ನಲಾಗಿದೆ.

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಕೇಂದ್ರ ರಕ್ಷಣಾ ಖಾತೆ ಸಚಿವ ಎ.ಕೆ.ಆಂಟನಿಯವರನ್ನು ಇಂದು ಪ್ರಮೋದ್ ಮಧ್ವರಾಜ್ ಭೇಟಿ ಮಾಡಿ ಪಕ್ಷದ ಬೆಳವಣಿಗೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಸಿ ಅವರಿಂದ ಮಾರ್ಗದರ್ಶನ ಪಡೆದರು.

    ದೆಹಲಿ ಪ್ರವಾಸದಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಇಲಾಖೆಗಳಿಗೆ ಶೀಘ್ರ ಅನುದಾನ ನೀಡುವಂತೆ ಪ್ರಮೋದ್ ಮಧ್ವರಾಜ್ ಒಂದೇ ದಿನ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.