Tag: ಕೇಂದ್ರ ರಕ್ಷಣಾ ಇಲಾಖೆ

  • ಸಿಯಾಚಿನ್‍ನಲ್ಲಿ ರಾಜ್‍ನಾಥ್ ಸಿಂಗ್ – ಯೋಧರ ಕರ್ತವ್ಯಕ್ಕೆ, ಕುಟುಂಬಗಳಿಗೆ ಸೆಲ್ಯೂಟ್

    ಸಿಯಾಚಿನ್‍ನಲ್ಲಿ ರಾಜ್‍ನಾಥ್ ಸಿಂಗ್ – ಯೋಧರ ಕರ್ತವ್ಯಕ್ಕೆ, ಕುಟುಂಬಗಳಿಗೆ ಸೆಲ್ಯೂಟ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ರಾಜ್‍ನಾಥ್ ಸಿಂಗ್ ಅವರು, ಇಂದು ವಿಶ್ವದ ಅತ್ಯಂತ ಎತ್ತರದ ಸೇನಾ ಶಿಬಿರವಾದ ಸಿಯಾಚಿನ್‍ಗೆ ಇಂದು ಭೇಟಿ ನೀಡಿದ್ದಾರೆ.

    ಯೋಧರನ್ನು ಭೇಟಿ ಮಾಡಿ ಅವರೊಂದಿಗೆ ಇರುವ ಫೋಟೋಗಳನ್ನು ಟ್ವೀಟ್ ಮಾಡಿರುವ ರಾಜ್‍ನಾಥ್ ಸಿಂಗ್ ಅವರು, ಇಂದು ಸಿಯಾಚಿನ್‍ಗೆ ಭೇಟಿ ನೀಡಿದ್ದೆ. ದೇಶದ ರಕ್ಷಣೆಗಾಗಿ ಕಾರ್ಯನಿರ್ವಹಿಸುವ ಯೋಧರ ಬಗ್ಗೆ ಹೆಮ್ಮೆಯಾಗುತ್ತದೆ. ಅಲ್ಲದೇ ಯೋಧರ ಪೋಷಕರ ಬಗ್ಗೆಯೂ ನನಗೆ ಹೆಮ್ಮೆ ಇದ್ದು, ದೇಶ ಸೇವೆಗಾಗಿ ಸೇನೆಗೆ ಸೇರಿಸುವ ಅವರ ಕಾರ್ಯಕ್ಕೆ ಹೆಮ್ಮೆ ಇದೆ. ವೈಯಕ್ತಿಕವಾಗಿ ನಾನು ಅವರಿಗೆ ಧನ್ಯವಾದ ತಿಳಿಸಿಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇದೇ ವೇಳೆ ರಕ್ಷಣಾ ಸಚಿವರು ಸಿಯಾಚಿನ್ ನಲ್ಲಿ ಹುತಾತ್ಮರಾದ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಇಲ್ಲಿಯವರೆಗೂ ಸುಮಾರು 1100 ಯೋಧರು ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾಗಿದ್ದು, ದೇಶದ ಜನತೆ ಎಂದಿಗೂ ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

    ಈ ವೇಳೆ ದೇಶದ ಸೇನಾ ಮುಖ್ಯಸ್ಥರು ಕೂಡ ರಾಜ್‍ನಾಥ್ ಸಿಂಗ್ ಅವರಿಗೆ ಸಾಥ್ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ನಡೆಯುವ ಪ್ರತಿನಿತ್ಯದ ಆಪರೇಷನ್‍ಗಳ ಬಗ್ಗೆ ಮುಖ್ಯಸ್ಥರು ಸಚಿವರಿಗೆ ವಿವರಿಸಿದರು.

    ಅಂದಹಾಗೇ ಸಿಯಾಚಿನ್ ಸೇನಾ ನೆಲೆ ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದು, ವಿಶ್ವದ ಅತಿ ಹೆಚ್ಚು ಶೀತ ಸೇನಾ ವಲಯ ಎಂದೇ ಕರೆಯಲಾಗುತ್ತದೆ. 1984 ರಲ್ಲಿ ಪಾಕಿಸ್ತಾನ ಭಾರತದ ಪ್ರದೇಶವನ್ನು ಆಕ್ರಮಿಸಿಕೊಂಡ ಬಳಿಕ ಮೇಘಾದೂತ್ ಆಪರೇಷನ್ ಕೈಗೊಂಡು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಲಾಗಿತ್ತು. ಆ ಬಳಿಕ ಸಿಯಾಚಿನ್ ನಲ್ಲಿ ಸೇನಾ ನೆಲೆ ಸ್ಥಾಪಿಸಲಾಗಿತ್ತು.