Tag: ಕೇಂದ್ರ ಮಾಜಿ ಸಚಿವ

  • ಮೈತ್ರಿ ಸರ್ಕಾರದ ತಾಳಿ ಹರಿದು ಕರೆದುಕೊಂಡು ಬರೋದು ಸರಿಯಲ್ಲ: ಸಿಎಂ ಇಬ್ರಾಹಿಂ

    ಮೈತ್ರಿ ಸರ್ಕಾರದ ತಾಳಿ ಹರಿದು ಕರೆದುಕೊಂಡು ಬರೋದು ಸರಿಯಲ್ಲ: ಸಿಎಂ ಇಬ್ರಾಹಿಂ

    – ಮೋದಿ ಬಿಟ್ರೆ ಬಿಜೆಪಿ ಖಲಾಸ್, ನಮ್ಮಲ್ಲಿ ಪ್ರಧಾನಿಯಾಗೋಕೆ ಸರದಿಯಿದೆ
    – ಭಾರತ ಮಾತೆ ಬಂಜೆಯಲ್ಲ ನಾಯಕರನ್ನು ಭೂಮಿಗೆ ನೀಡ್ತಾಳೆ

    ರಾಯಚೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆಯಾಗಿದೆ. ಆದರೆ ಮದುವೆಯಾದವರ ತಾಳಿ ಹರಿದು ಕರೆದುಕೊಂಡು ಬರುವುದು ಸರಿಯಲ್ಲ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ದೇಶದ ಪರಿಸ್ಥಿತಿ ಸವಾಲಾಗಿ ನಿಂತಿದೆ. ಇದನ್ನು ಎದುರಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ (ಚೌಕಿದಾರ್) ವಿಫಲರಾಗಿದ್ದಾರೆ. ದೇಶದ ಏಕತೆಗಾಗಿ ನಾವು ಕಂಕಣಬದ್ಧರಾಗಿದ್ದೇವೆ ಎಂದು ಹೇಳಿದರು.

    ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ವಾಹನದ ಮೇಲೆ ದಾಳಿ ಮಾಡಲು ಉಗ್ರರು ಹೇಗೆ ನುಸುಳಿದರು? ಅವರ ಕೈಯಲ್ಲಿ ಆರ್ ಡಿಎಕ್ಸ್ ಹೇಗೆ ಬಂತು? ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದ ಅವರು, ಕೆಲ ಸರ್ವೇಗಳ ಪ್ರಕಾರ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎನ್ನಲಾಗುತ್ತದೆ. ಆದರೆ ಅದು ಸತ್ಯವಾಗುವುದಿಲ್ಲ. ಸರ್ವೇಗಳಿಗೆ ನಾವು ವಿಚಲಿತರಾಗುವುದಿಲ್ಲ ಎಂದು ತಿಳಿಸಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅಯ್ಯೋ ಅನಿಸುತ್ತದೆ. ಆಪರೇಷನ್ ಕಮಲದಲ್ಲಿ ವಿಫಲವಾಗಿದ್ದಾರೆ. ಆಸೆ ಇರಬೇಕು, ದುರಾಸೆ ಸರಿಯಲ್ಲ. ಆಪರೇಷನ್ ಕಮಲಕ್ಕೆ ಹಣ ಯಾಕೆ ಖರ್ಚು ಮಾಡುತ್ತೀರಿ. ಆ ಹಣವನ್ನು ಬರಗಾಲ ಪರಿಹಾರಕ್ಕೆ ಉಪಯೋಗಿಸಿ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರಕ್ಕಿಂತ ಜನರ ಸೇವೆ ಮುಖ್ಯ ಎನ್ನುವ ಭಾವನೆ ಇರಬೇಕು. ದಿನಕ್ಕೆ ಒಬ್ಬ ಪ್ರಧಾನಿಯಾಗಲು ಮಹಾಘಟಬಂಧನ್‍ನಲ್ಲಿ 10 ಜನರಿದ್ದಾರೆ. ಆದರೆ ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರು ಮಾತ್ರ ಪ್ರಧಾನಿ ಅಭ್ಯರ್ಥಿ. ಅವರಿಲ್ಲ ಅಂದ್ರೆ ಬಿಜೆಪಿ ಖಲಾಸ್. ನಮ್ಮಲ್ಲಿ ಒಬ್ಬರ ಹಿಂದೆ ಒಬ್ಬರು ಪ್ರಧಾನಿಯಾಗಲು ಸಿದ್ಧರಾಗಿರುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

    ಬಿಜೆಪಿ ನಿರ್ಧಿಷ್ಟವಾಗಿ ತತ್ವ, ಸಿದ್ಧಾಂತವಿಲ್ಲ. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಯಶವಂತ್ ಸಿನ್ಹಾ ಎಲ್ಲಿ ಹೋದರು. ಅವರನ್ನು ನೀವೇ ಹುಡುಕಬೇಕಿದೆ. ಭಾರತ ಮಾತೆ ಬಂಜೆಯಲ್ಲ. ಆಕೆ ಅನೇಕ ನಾಯಕರನ್ನು ಕೊಡುತ್ತಾಳೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಮಹಾಮೈತ್ರಿಯಲ್ಲಿ ಯಾರು ಪ್ರಧಾನಿಯಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಬಿಜೆಪಿಯಿಂದ ಅಧಿಕಾರ ತಪ್ಪಿಸುವುದೇ ನಮ್ಮ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ಕತೆ ಹೇಳಿದ ಸಿದ್ದರಾಮಯ್ಯ

    ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ಕತೆ ಹೇಳಿದ ಸಿದ್ದರಾಮಯ್ಯ

    ಬೆಂಗಳೂರು: ಕೇಂದ್ರ ಮಾಜಿ ಸಚಿವ ದಿವಂಗತ ಜಾರ್ಜ್ ಫರ್ನಾಂಡಿಸ್ ಗೌರವಾರ್ಥ ಶಾಸಕರ ಭವನದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಾವು ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ಕತೆ ಹೇಳಿದರು.

    ನಾನು ಮೈಸೂರಿನಲ್ಲಿ ಕಾನೂನು ಓದುತ್ತಿದ್ದಾಗ ಜಾರ್ಜ್ ಫರ್ನಾಂಡಿಸ್ ಅವರ ಪರಿಚಯವಾಯಿತು. ಜಾರ್ಜ್ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದ ಅನೇಕ ಹೋರಾಟಗಳಲ್ಲಿ ನಾನು ಕೂಡ ಪಾಲ್ಗೊಂಡಿದ್ದೇನೆ. ಹೋರಾಟಗಳ ಮೂಲಕವೇ ಜಾರ್ಜ್ ರಾಷ್ಟ್ರೀಯ ನಾಯಕರಾಗಿ ಬೆಳೆದರು ಎಂದು ಸಿದ್ದರಾಮಯ್ಯ ಹೇಳಿದರು.

    ಕೋಕಾ ಕೋಲಾ ವಿರುದ್ಧ ಜಾರ್ಜ್ ಫರ್ನಾಂಡಿಸ್ ಬೃಹತ್ ಹೋರಾಟ ನಡೆಸಿದರು. ಅವರ ಹೋರಾಟದಿಂದ ನಾನು ಸ್ಫೂರ್ತಿಗೊಂಡೆ. ಅಂದಿನಿಂದ ನಾನು ಕೋಕಾ ಕೋಲಾ ಕುಡಿಯದೇ ಇರಲು ನಿರ್ಧರಿಸಿದೆ. ನನ್ನ ಈ ನಿರ್ಧಾರಕ್ಕೆ ಕಾರಣವೇ ಜಾರ್ಜ್ ಫರ್ನಾಂಡಿಸ್ ಎಂದು ತಿಳಿಸಿದರು.

    ಈ ವೇಳೆ ಜಾನ್ಸನ್ ಮಾರ್ಕೆಟ್ ಬಳಿ ಇರುವ ಫರ್ನಾಂಡಿಸ್ ನಿವಾಸದ ಸಮೀಪದ ರಸ್ತೆಯೊಂದಕ್ಕೆ ಜಾರ್ಜ್ ಫರ್ನಾಂಡಿಸ್ ಎಂದು ಹೆಸರಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಸ್ಪೀಕರ್ ರಮೇಶದ ಕುಮಾರ್, ಶಾಸಕರಾದ ಕುಮಾರ್ ಬಂಗಾರಪ್ಪ, ಮಾಧುಸ್ವಾಮಿ ಅವರು ಜಾರ್ಜ್ ಫರ್ನಾಂಡಿಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಜಾರ್ಜ್ ಫರ್ನಾಂಡಿಸ್ ಸಹೋದರ ಮೈಕೆಲ್ ಫರ್ನಾಂಡಿಸ್ ಹಾಗೂ ಆಪ್ತರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv