Tag: ಕೇಂದ್ರ ಬಜೆಟ್‌ 2025

  • ಏ.1ರಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ಏ.1ರಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್

    ನವದೆಹಲಿ: ಏ.1ರಿಂದ ಆದಾಯ ತೆರಿಗೆ ಸೇರಿದಂತೆ ಯುಪಿಐ (UPI) ಮತ್ತು ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ (Minimum Bank Balance) ನಿಯಮಗಳಲ್ಲಿ ಬದಲಾವಣೆಯಾಗಲಿದೆ.

    ಇದೇ ಏ.1 ರಿಂದ ಹಣಕಾಸು ನಿಯಮಗಳಲ್ಲಿ ಹಲವಾರು ಬದಲಾವಣೆಗಳು ಜಾರಿಗೆ ಬರಲಿದ್ದು, ತೆರಿಗೆದಾರರು, ಯುಪಿಐ ಬಳಕೆದಾರರು, ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಪಿಂಚಣಿದಾರರ ಮೇಲೆ ಇದು ಪರಿಣಾಮ ಬೀರಲಿದೆ. 2025-26ರ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್ಗಳು, ಯುಪಿಐ ಭದ್ರತೆ, ಜಿಎಸ್‌ಟಿ ಹಾಗೂ ಬ್ಯಾಂಕಿಂಗ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಿದೆ.ಇದನ್ನೂ ಓದಿ:ಕೇಂದ್ರ ನೌಕರರಿಗೆ ಯುಗಾದಿ ಗಿಫ್ಟ್ – ಶೇ.2 ರಷ್ಟು ಡಿಎ ಏರಿಕೆ

    2025ರ ಕೇಂದ್ರ ಬಜೆಟ್‌ನಲ್ಲಿ ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ಕಡಿತಗಳನ್ನು ಪರಿಚಯಿಸಿದೆ. ಅವುಗಳನ್ನು ಈದೀಗ ಜಾರಿಗೆ ತರಲಾಗುತ್ತಿದ್ದು, ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವರ್ಷಕ್ಕೆ 12 ಲಕ್ಷ ರೂ.ವರೆಗೆ ಗಳಿಸುವವರು ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯುತ್ತಾರೆ. ಅದಕ್ಕೂ ಹೆಚ್ಚು ಸಂಬಳ ಪಡೆಯುವವರು 75,000 ರೂ.ಗಳ ಪ್ರಯೋಜನ ಪಡೆಯುತ್ತಾರೆ, ಇದರಿಂದಾಗಿ 12.75 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿರುತ್ತದೆ.

    ಯುಪಿಐ ನಿಯಮಗಳು:
    ಏ.1 ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಂದ ಯುಪಿಐ ವಹಿವಾಟು ನಡೆಸಲಾಗುವುದಿಲ್ಲ. ಭದ್ರತೆಯನ್ನು ಹೆಚ್ಚಿಸಲು, ಬ್ಯಾಂಕ್‌ಗಳು ಮತ್ತು ಫೋನ್ ಪೇ ಮತ್ತು ಗೂಗಲ್ ಪೇನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ ದೀರ್ಘಕಾಲದವರೆಗೆ ಬಳಕೆಯಾಗದೆ ಉಳಿದಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಖಾತೆಗಳನ್ನು ಹಂತಹಂತವಾಗಿ ರದ್ದುಗೊಳಿಸಲು ಸೂಚಿಸಲಾಗಿದೆ. ಹೀಗಾಗಿ ಏ.1ರ ಮೊದಲು ಮೊಬೈಲ್ ಸಂಖ್ಯೆಗಳನ್ನು ನವೀಕರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಆದೇಶಿಸಿದೆ.

    ಪಿಂಚಣಿ ಯೋಜನೆ:
    ಮತ್ತೊಂದು ಮಹತ್ವದ ಆರ್ಥಿಕ ಬದಲಾವಣೆಯೆಂದರೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸುವ ಏಕೀಕೃತ ಪಿಂಚಣಿ ಯೋಜನೆ. 2024ರ ಆಗಸ್ಟ್ನಲ್ಲಿ ಪರಿಚಯಿಸಲಾದ ಯುಪಿಎಸ್, ಏ.1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಈ ಬದಲಾವಣೆಯಿಂದ ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರ ಮೇಲೆ ಪರಿಣಾಮ ಬೀರಲಿದೆ. ಕನಿಷ್ಠ 25 ವರ್ಷಗಳ ಸೇವೆಯನ್ನು ಹೊಂದಿರುವವರು ತಮ್ಮ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದ ಶೇ.50 ರಷ್ಟಕ್ಕೆ ಸಮಾನವಾದ ಪಿಂಚಣಿಯನ್ನು ಪಡೆಯಲಿದ್ದಾರೆ.

    ಕನಿಷ್ಠ ಬ್ಯಾಲೆನ್ಸ್:
    ಬ್ಯಾಂಕಿಂಗ್ ವಲಯದಲ್ಲಿ, ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾದಂತಹ ಪ್ರಮುಖ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ನವೀಕರಿಸುತ್ತಿದ್ದು, ಪರಿಷ್ಕೃತ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ಗ್ರಾಹಕರು ಹೊಸ ಬ್ಯಾಂಕಿಂಗ್ ಮಾರ್ಗಸೂಚಿಗಳ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.ಇದನ್ನೂ ಓದಿ:ಮೇ.1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ 2 ರೂ. ಹೆಚ್ಚಳ

  • ಫೆ.15ರಂದು ಅಶ್ವಿನಿ ವೈಷ್ಣವ್ ರಾಜ್ಯ ಭೇಟಿ – ಕೇಂದ್ರ ಬಜೆಟ್ ಕುರಿತು ಸಂವಾದ

    ಫೆ.15ರಂದು ಅಶ್ವಿನಿ ವೈಷ್ಣವ್ ರಾಜ್ಯ ಭೇಟಿ – ಕೇಂದ್ರ ಬಜೆಟ್ ಕುರಿತು ಸಂವಾದ

    ಬೆಂಗಳೂರು: ಕೇಂದ್ರದ ನೂತನ ಬಜೆಟ್ (Union Budget 2025) ಕುರಿತ ವಿಶ್ಲೇಷಣೆ ಮತ್ತು ಚರ್ಚೆಗಳು ದೇಶಾದ್ಯಂತ ಎಲ್ಲ ಕಡೆ ನಡೆಯುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಎಲ್ಲ ಜಿಲ್ಲೆಗಳಲ್ಲಿ, ವಿಭಾಗ ಕೇಂದ್ರಗಳಲ್ಲಿ ಚರ್ಚೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ (Budget) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 8ನೇ ಬಜೆಟ್ ಮಂಡಿಸಿದ್ದು, ಮಧ್ಯಮ ವರ್ಗದವರಿಗೆ ಬಂಪರ್‌ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು: ಗೂಗಲ್‌ ಎಕ್ಸ್‌ನ ಸೆಬಾಸ್ಟಿಯನ್ ಭವಿಷ್ಯ

    ಈ ಬೆನ್ನಲ್ಲೇ ಇದೇ ಫೆ.15ರಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಬೆಂಗಳೂರಿಗೆ ಬರಲಿದ್ದಾರೆ. ಅಂದು ರಾಜ್ಯದ ಪಕ್ಷದ ಕಚೇರಿಯಲ್ಲಿ ಬಜೆಟ್ ಕುರಿತು ಒಂದು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ನಂತರ ಶಾಂಘ್ರಿಲಾ ಹೋಟೆಲ್‍ನಲ್ಲಿ ಸಮಾಜದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ಸ್, ವೈದ್ಯರು, ಉದ್ಯಮಿಗಳು ಸೇರಿ ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: Fashion | ನೈಲ್‌ ಆರ್ಟ್‌ ಮಾಡಿಸಿ – ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಇನ್ನಷ್ಟು ಹತ್ತಿರವಾಗಿ!

    ಕೇಂದ್ರ ಬಜೆಟ್‍ನಲ್ಲಿ ಎಲ್ಲರಿಗೂ ಆದ ಉಪಯೋಗಗಳು, ಸಮಾಜದ ಎಲ್ಲ ವರ್ಗದವರಿಗೆ ತಿಳಿಯಬೇಕೆಂಬ ಉದ್ದೇಶ ಇದರದ್ದು. ನಂತರ ಪಕ್ಷದ ಮುಖಂಡರು, ಸಂಸದರು, ಶಾಸಕರು ಜಿಲ್ಲೆಗಳಲ್ಲಿ ಸಂವಾದ ನಡೆಸಿ ಬಜೆಟ್ ಸದುಪಯೋಗದ ವಿವರ ನೀಡುತ್ತಾರೆ. ನಿಯುಕ್ತರಾದ ಕೇಂದ್ರದ ಸಚಿವರು ವಿವಿಧ ಕಡೆ ಕೇಂದ್ರ ಬಜೆಟ್ ಕುರಿತ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ರಮೇಶ್ ಜಾರಕಿಹೊಳಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

  • ʻಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಚೊಂಬು, ಚಿಪ್ಪು.. ಗೋವಿಂದ ಗೋವಿಂದ..ʼ – ಎಂ. ಲಕ್ಷ್ಮಣ್‌ ಲೇವಡಿ

    ʻಕೇಂದ್ರದಿಂದ ರಾಜ್ಯಕ್ಕೆ ಮತ್ತೆ ಚೊಂಬು, ಚಿಪ್ಪು.. ಗೋವಿಂದ ಗೋವಿಂದ..ʼ – ಎಂ. ಲಕ್ಷ್ಮಣ್‌ ಲೇವಡಿ

    ಮಡಿಕೇರಿ: ಕೇಂದ್ರ ಬಿಜೆಪಿ ಸರ್ಕಾರವು (BJP Union Government) ಈ ಸಾಲಿನ ಬಜೆಟ್‌ನಲ್ಲೂ (Budget 2025) ಕರ್ನಾಟಕಕ್ಕೆ ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪು ಕೊಟ್ಟಿದೆ. ಈ ಮೂಲಕ ಯಾವುದೇ ಹೊಸ ಯೋಜನೆ ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡುವುದನ್ನು ಮುಂದುವರಿಸಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ (M Laxman) ಲೇವಡಿ ಮಾಡಿದ್ದಾರೆ.

    ಖಾಲಿ ಚೊಂಬು ಹಾಗೂ ಮೂರುನಾಮ ಬಳಿದ ತೆಂಗಿನಕಾಯಿ ಚಿಪ್ಪುಗಳನ್ನು ಮುಂದಿಟ್ಟುಕೊಂಡು ಮಡಿಕೇರಿಯಲ್ಲಿ ‌ಪತ್ರಿಕಾಗೋಷ್ಠಿ ನಡೆಸಿದ ಅವರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು. ಗೋವಿಂದ.. ಗೋವಿಂದ.. ಎಂದು ಕೂಗುತ್ತಲೇ ಖಾಲಿ ಚೊಂಬು, ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿದರು.

    ಅಲ್ಲದೇ ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಹೆಚ್‌.ಡಿ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಒಂದೇ ಒಂದು ಯೋಜನೆಯನ್ನೂ ತರಲು ಸಾಧ್ಯವಾಗಿಲ್ಲ. ಇವರು ದಿನ ಬೆಳಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ ಎಂದು ಟೀಕಿಸಿದರು.

    ಕೇಂದ್ರ ಸರ್ಕಾರವು ರೈತರು, ಯುವಕರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬೇಡಿಕೆಗಳನ್ನು ಮಂಡಿಸಿದ್ದರು. ಆದರೆ, ಅದಕ್ಕೆ ಸ್ಪಂದನೆ ದೊರೆತಿಲ್ಲ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇದ್ದಾಗ ಬಜೆಟ್ ಗಾತ್ರ 14 ಲಕ್ಷ ಕೋಟಿ ಇತ್ತು. ಈ ಬಾರಿಯ ಬಜೆಟ್ ಗಾತ್ರ 50 ಲಕ್ಷ ಕೋಟಿ ದಾಟಿದೆ. 16 ಲಕ್ಷ ಕೋಟಿ ಸಾಲ ತೆಗೆದುಕೊಂಡಿದ್ದಾರೆ. 1947 ರಿಂದ 2014ರ ವರೆಗೆ ನಮ್ಮ ದೇಶ ಮಾಡಿದ್ದ ಸಾಲ 53 ಲಕ್ಷ ಕೋಟಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 10 ವರ್ಷಗಳಲ್ಲಿ ಸಾಲದ ಪ್ರಮಾಣ 205 ಲಕ್ಷ ಕೋಟಿಯಾಗಿದೆ ಎಂದು ದೂರಿದರು.

    ದೇಶವನ್ನು ಅಭಿವೃದ್ಧಿ ಪಥದತ್ತ ನಡೆಸುವ ಬದಲಿಗೆ ಸಾಲದ ಕೂಪಕ್ಕೆ ತಳ್ಳಿರುವಂತಹ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನರೇಗಾ ಅನುದಾನವನ್ನೂ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಡೀ ದೇಶದಲ್ಲಿ ಟ್ಯಾಕ್ಸ್ ಕಟ್ಟುವುದಲ್ಲಿ ಕರ್ನಾಟಕದ 2ನೇ ಸ್ಥಾನದಲ್ಲಿ ಇದೆ. ಆದರೆ ನಮ್ಮ ಹಣವನ್ನು ನಮಗೆ ಕೊಡದೇ ನಮ್ಮಿಂದ ಸಂಗ್ರಹ ಮಾಡಿರುವ ಹಣವನ್ನು ಬೇರೆ ಬೇರೆ ರಾಜ್ಯಗಳಿಗೆ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

    ಇದೇ ವೇಳೆ ಕರ್ನಾಟಕದಲ್ಲಿ ಜಾತಿ ಜನಗಣತಿಯ ವರದಿ ಸದ್ಯದಲ್ಲೇ ಬಿಡುಗಡೆಯಾಗಲ್ಲಿದೆ ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ರೀತಿಯಲ್ಲಿ ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿಲ್ಲ ಎಂದು ತಿಳಿಸಿದ್ರು.

  • Budget 2025: ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್‌ ಕ್ಯಾನ್ಸರ್‌ ಕೇಂದ್ರ ಸ್ಥಾಪನೆ

    Budget 2025: ದೇಶದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್‌ ಕ್ಯಾನ್ಸರ್‌ ಕೇಂದ್ರ ಸ್ಥಾಪನೆ

    ನವದೆಹಲಿ: ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಡೇಕೇರ್‌ ಕ್ಯಾನ್ಸರ್‌ ಕೇಂದ್ರಗಳನ್ನು (Daycare Cancer Centres) ಸ್ಥಾಪಿಸಲಾಗುವುದು ಎಂದು ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

    ಈ ಪೈಕಿ 200 ಕೇಂದ್ರಗಳನ್ನು 2025-26ರಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಮುಂದಿನ ವರ್ಷ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ 10,000 ಸೀಟುಗಳನ್ನು ಸೇರಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಈ ಕಾಲೇಜುಗಳಲ್ಲಿ 75,000 ಸೀಟುಗಳನ್ನು ಸೇರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: Budget 2025: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    ಬಜೆಟ್‌ನಲ್ಲಿ, ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಮತ್ತು ಇತರ ತೀವ್ರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗಲು 36 ಜೀವರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.

    ಔಷಧ ಕಂಪನಿಗಳು ನಡೆಸುವ ರೋಗಿಯ ಸಹಾಯ ಕಾರ್ಯಕ್ರಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ಪೂರೈಸಿದರೆ, ಅವು ಬಿಸಿಡಿಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: Budget 2025: ಒಂದು ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ?

    ಖಾಸಗಿ ವಲಯದ ಸಹಭಾಗಿತ್ವದಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಮತ್ತು ‘ಹೀಲ್ ಇನ್ ಇಂಡಿಯಾ’ಗೆ ಉತ್ತೇಜನ ನೀಡಲಾಗುವುದು. ಜೊತೆಗೆ ಸಾಮರ್ಥ್ಯ ವೃದ್ಧಿ ಮತ್ತು ಸುಲಭ ವೀಸಾ ಮಾನದಂಡಗಳನ್ನು ಅಳವಡಿಸಲಾಗುವುದು ಎಂದು ಹೇಳಿದ್ದಾರೆ.

    ಗಿಗ್ ಕೆಲಸಗಾರರಿಗೆ (ಗುತ್ತಿಗೆ ಸಂಸ್ಥೆ ಕೆಲಸಗಾರರು) ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಆಯವ್ಯಯದಲ್ಲಿ ಸೀತಾರಾಮನ್‌ ತಿಳಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

  • ಸಚಿವರ ವೇತನಕ್ಕೆ ಬಜೆಟ್‌ನಲ್ಲಿ 1,024 ಕೋಟಿ ರೂ. ಹಂಚಿಕೆ

    ಸಚಿವರ ವೇತನಕ್ಕೆ ಬಜೆಟ್‌ನಲ್ಲಿ 1,024 ಕೋಟಿ ರೂ. ಹಂಚಿಕೆ

    ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ (Union Budget 2025) ಸಚಿವರ ವೇತನಕ್ಕಾಗಿ 1,024 ಕೋಟಿ ಹಣವನ್ನು ಹಂಚಿಕೆ ಮಾಡಲಾಗಿದೆ.

    ಶನಿವಾರ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ, ಸಚಿವ ಸಂಪುಟ, ಸಂಪುಟ ಸಚಿವಾಲಯ, ಪ್ರಧಾನ ಮಂತ್ರಿ ಕಚೇರಿಯ ವೆಚ್ಚಗಳು, ರಾಜ್ಯದ ಅತಿಥಿಗಳ ಆತಿಥ್ಯ ಮತ್ತು ಮನರಂಜನೆಗಾಗಿ 1,024.30 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

    2024-25 ರಲ್ಲಿ 1,021.83 ಕೋಟಿ ರೂ. ಮೀಸಲಿಡಲಾಗಿತ್ತು. ಆ ಮೊತ್ತದಲ್ಲಿ ಈ ಬಾರಿ ಹೆಚ್ಚಳ ಆಗಿದೆ. ಮುಂಬರುವ ಹಣಕಾಸು ವರ್ಷದಲ್ಲಿ ಸಚಿವ ಸಂಪುಟದ ವೆಚ್ಚಗಳಿಗಾಗಿ ಒಟ್ಟು 619.04 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. 2024-25ರಲ್ಲಿ ಇದು 540.95 ಕೋಟಿ ರೂ.ಗಳಷ್ಟಿತ್ತು ಎಂದು ಹೇಳಿದ್ದಾರೆ.

    ಸಂಪುಟ ಸಚಿವರು, ರಾಜ್ಯ ಸಚಿವರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ಸಂಬಳ, ಇತರ ಭತ್ಯೆಗಳು ಮತ್ತು ಪ್ರಯಾಣದ ವೆಚ್ಚಕ್ಕಾಗಿ ಹಣ ಮೀಸಲಿಡಲಾಗಿದೆ. ಇದು ವಿವಿಐಪಿಗಳಿಗಾಗಿ ವಿಶೇಷ ಹೆಚ್ಚುವರಿ ಅವಧಿ ವಿಮಾನ ಕಾರ್ಯಾಚರಣೆಗಳ ನಿಬಂಧನೆಯನ್ನು ಸಹ ಒಳಗೊಂಡಿದೆ. ಇದನ್ನೂ ಓದಿ: Union Budget 2025| ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಏನು?

    ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ 2024-25ರಲ್ಲಿ 270.08 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಬಾರಿ 182.75 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ

  • ಇದು ಜನಸಾಮಾನ್ಯರ ಬಜೆಟ್‌.. ಉಳಿತಾಯ, ಹೂಡಿಕೆಗೆ ಉತ್ತೇಜನ: ಮೋದಿ ಬಣ್ಣನೆ

    ಇದು ಜನಸಾಮಾನ್ಯರ ಬಜೆಟ್‌.. ಉಳಿತಾಯ, ಹೂಡಿಕೆಗೆ ಉತ್ತೇಜನ: ಮೋದಿ ಬಣ್ಣನೆ

    ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಶನಿವಾರ ಮಂಡಿಸಿದ ಬಜೆಟ್‌ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದ್ದಾರೆ. ಇದು ಜನಸಾಮಾನ್ಯರ ಬಜೆಟ್‌ ಎಂದು ಬಣ್ಣಿಸಿದ್ದಾರೆ.

    ಬಜೆಟ್‌ ಮಂಡನೆ (Union Budget 2025) ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, 2025ರ ಕೇಂದ್ರ ಬಜೆಟ್ 2025 ಜನಸಾಮಾನ್ಯರ ಬಜೆಟ್. ಹಣ ಉಳಿತಾಯ ಮತ್ತು ಹೂಡಿಕೆಗೆ ಬಜೆಟ್‌ ಉತ್ತೇಜನ ನೀಡುತ್ತದೆ. ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತ ಗುರಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Union Budget 2025: 77 ನಿಮಿಷಗಳ ಕಾಲ 8ನೇ ಬಜೆಟ್ ಮಂಡಿಸಿದ ಸೀತಾರಾಮನ್

    ಈ ಬಜೆಟ್‌ನಲ್ಲಿ, ವಾರ್ಷಿಕ 12 ಲಕ್ಷ ರೂ. ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಎಲ್ಲಾ ಆದಾಯ ಗುಂಪುಗಳಿಗೆ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ಇದು ನಮ್ಮ ಮಧ್ಯಮ ವರ್ಗಕ್ಕೆ ಭಾರಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

    ಮೋದಿ ಅವರು 2025 ರ ಜನೋಪಯೋಗಿ ಬಜೆಟ್‌ಗಾಗಿ ಹಣಕಾಸು ಸಚಿವರು ಮತ್ತು ಅವರ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಇದು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಗೆ, ಹಡಗು ನಿರ್ಮಾಣ ಮತ್ತು ಸಮುದ್ರ ಕೈಗಾರಿಕೆಗಳಿಗೆ ಹಾಗೂ ದೇಶಾದ್ಯಂತ ರೈತರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: Union Budget 2025: ಯಾವುದು ಅಗ್ಗ, ಯಾವುದು ದುಬಾರಿ?

    ಎಲ್ಲಾ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ದೊಡ್ಡ ಬದಲಾವಣೆಯನ್ನು ತರಲಿರುವ ಸುಧಾರಣೆಗಳ ಬಗ್ಗೆ ನಾನು ಚರ್ಚಿಸಲು ಬಯಸುತ್ತೇನೆ ಎಂದು ಮೋದಿ ಭರವಸೆ ಮಾತುಗಳನ್ನಾಡಿದ್ದಾರೆ.

    ನಮಗೆಲ್ಲರಿಗೂ ತಿಳಿದಿರುವಂತೆ ಹಡಗು ನಿರ್ಮಾಣವು ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಅದೇ ರೀತಿ, ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. 50 ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಹೋಟೆಲ್‌ಗಳನ್ನು ನಿರ್ಮಿಸಲಾಗುವುದು. ಮೊದಲ ಬಾರಿಗೆ ಹೋಟೆಲ್‌ಗಳನ್ನು ಮೂಲಸೌಕರ್ಯ ವ್ಯಾಪ್ತಿಗೆ ತರುವ ಮೂಲಕ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ಸಿಗುತ್ತದೆ ಎಂದು ತಿಳಿಸಿದ್ದಾರೆ.

  • Union Budget 2025 | 120 ನಗರಗಳಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ

    Union Budget 2025 | 120 ನಗರಗಳಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ

    ನವದೆಹಲಿ: ಉಡಾನ್‌ ಯೋಜನೆ (UDAN Scheme) ಅಡಿಯಲ್ಲಿ 120 ನಗರಗಳಲ್ಲಿ ನೂತನ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಣೆ ಮಾಡಿದ್ದಾರೆ.

    ಸಾಮಾನ್ಯ ಜನರ ಕೂಡ ವಿಮಾನದಲ್ಲಿ ಪ್ರಯಾಣ ಮಾಡಲು ನೆರವಾಗಲೆಂದು, ಕೇಂದ್ರ ಸರ್ಕಾರ 2017 ರಲ್ಲಿ ಉಡಾನ್‌ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆ ಅಡಿಯಲ್ಲಿ 120 ನಗರಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ. ಇದು ಮುಂದಿನ 10 ವರ್ಷಗಳಲ್ಲಿ 4 ಕೋಟಿ ಜನರಿಗೆ ಅನುಕೂಲ ಕಲ್ಪಿಸಲಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಬಿಹಾರದಲ್ಲಿ ಗ್ರೀನ್ ಫಿಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಜೊತೆಗೆ ಪಾಟ್ನಾ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಡೆಲಿವರಿ ಬಾಯ್ಸ್‌ಗಳಿಗೆ ಪೋರ್ಟಲ್‌
    ಇನ್ನೂ ಆನ್ಲೈನ್ ಪ್ಲಾಟ್ ಫಾರಂ ಕಾರ್ಮಿಕರಿಗೆ ಪ್ರತ್ಯೇಕವಾಗಿ ʻಶ್ರಮ್ ಪೋರ್ಟ್‌ಲ್‌ʼ ಆರಂಭಿಸಲಾಗುವುದು. ಇದರಿಂದ ಇದರಿಂದ 1 ಕೋಟಿ ಗಿಗ್ ವರ್ಕರ್‌ಗಳಿಗೆ ಅನುಕೂಲವಾಗಲಿದೆ. ಜೊತೆಗೆ ಪಿಎಂ ಸ್ವಾನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 30,000 ಮೌಲ್ಯದ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಹೋಂ ಸ್ಟೇಗಳಿಗೆ ಮುದ್ರಾ ಲೋನ್:
    ಅಲ್ಲದೇ ಪ್ರವಾಸೋದ್ಯಮ ಅಭಿವೃಡಿಸುವ ಉದ್ದೇಶದಿಂದ ಹೋಮ್‌ ಸ್ಟೇಗಳಿಗೆ ಮುದ್ರಾ ಲೋನ್‌ ನೀಡುವ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತದೆ. ಜೊತೆಗೆ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಟೂರಿಸಂ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವರು ಘೋಷಿಸಿದ್ದಾರೆ.

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 8ನೇ ಬಾರಿಗೆ ಬಜೆಟ್‌ ಮಂಡನೆ ಮಾಡಿದ್ದಾರೆ. ಇಂದು 2025-26ನೇ ಸಾಲಿನ ಪೂರ್ಣಾವಧಿ ಬಜೆಟ್‌ ಮಂಡನೆ ಮಾಡಿದ್ದು, ವಿವಿಧ ವಲಯಗಳಿಗೆ ಆದ್ಯತೆ ನೀಡಿದ್ದಾರೆ.

  • Budget 2025: ಎನ್‌ಡಿಎ ದೋಸ್ತಿ ಬಿಹಾರ್‌ಗೆ ಬಂಪರ್ – ಬಜೆಟ್‌ನಲ್ಲಿ ಭರಪೂರ ಕೊಡುಗೆ

    Budget 2025: ಎನ್‌ಡಿಎ ದೋಸ್ತಿ ಬಿಹಾರ್‌ಗೆ ಬಂಪರ್ – ಬಜೆಟ್‌ನಲ್ಲಿ ಭರಪೂರ ಕೊಡುಗೆ

    ನವದೆಹಲಿ: 2025ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಈ ಬಾರಿಯ ಬಜೆಟ್‌ನಲ್ಲಿ (Union Budget 2025) ಬಿಹಾರಕ್ಕೆ (Bihar) ಹೆಚ್ಚಿನ ಮಹತ್ವ ನೀಡಲಾಗಿದೆ. ಐಐಟಿ ಕಾಲೇಜು, ಮೆಡಿಕಲ್ ಕಾಲೇಜು ಹಾಗೂ ಆಹಾರ ಸಂಸ್ಕರಣೆಗೆ ಹೆಚ್ಚಿನ ಒತ್ತನ್ನು ಬಜೆಟ್‌ನಲ್ಲಿ ಕೊಡಲಾಗಿದೆ.

    ಕಳೆದ ಬಾರಿ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಬಾರಿ ಮೈತ್ರಿ ಪಕ್ಷಗಳಿರುವ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಿಹಾರದಲ್ಲಿ ಆಹಾರ ಸಂಸ್ಕರಣೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿಯನ್ನು ನಿರ್ಮಾಣ ಮಾಡಲಾಗುವುದು. ಆಹಾರವಾಗಿ ಬಳಸುವ ಮಖನಾ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ಬಿಹಾರದಲ್ಲಿ ಮಖನಾ ಮಂಡಳಿಯನ್ನು ಸ್ಥಾಪಿಸಲಾಗುವುದು. ಈ ಮಂಡಳಿಯು ಮಖನಾ ರೈತರಿಗೆ ತರಬೇತಿ ಬೆಂಬಲವನ್ನು ಒದಗಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೂ ಓದಿ: Budget 2025: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    ಬಿಹಾರದಲ್ಲಿ ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ನಿರ್ಮಾಣ ಮಾಡಲಾಗುವುದು. ಪಾಟ್ನಾ ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲಾಗುವುದು. ಐಐಟಿ ಪಾಟ್ನಾ ಸೇರಿದಂತೆ ಒಟ್ಟು ಐದು ಐಐಟಿ ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಷ್ಟೇ ಅಲ್ಲದೇ 75,000 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್‌ಗಳನ್ನು ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು. 2025-26ರ ವೇಳೆಗೆ 200 ಸೆಂಟರ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದನ್ನೂ ಓದಿ: Budget 2025: 12 ಲಕ್ಷದವರೆಗೆ ತೆರಿಗೆ ವಿನಾಯಿತಿ – ಒಟ್ಟು ಎಷ್ಟು ಲಾಭ ಸಿಗುತ್ತೆ?

    ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಎನ್‌ಡಿಎಯಲ್ಲಿ ನಿತೀಶ್ ನೇತೃತ್ವದ ಜೆಡಿಯು ಪಾತ್ರ ದೊಡ್ಡದಿರುವುದರಿಂದ ಬಿಹಾರಕ್ಕೆ ಈ ಬಜೆಟ್‌ನಲ್ಲಿ ಬಂಪರ್ ಘೋಷಣೆ ಮಾಡಲಾಗಿದೆ. ಬಜೆಟ್ ಭಾಷಣದಲ್ಲಿ ಬಿಹಾರದ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ವಿಪಕ್ಷಗಳು, ಇದು ಬಿಹಾರ ಬಜೆಟ್ ನಮಗೆ ಏನು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿ ಗದ್ದಲ ಉಂಟುಮಾಡಿದ ಪ್ರಸಂಗವೂ ನಡೆಯಿತು.  ಇದನ್ನೂ ಓದಿ: Budget 2025: ರೈತರಿಗಾಗಿ ‘ಧನ್‌ ಧಾನ್ಯ ಕೃಷಿ’ ಯೋಜನೆ ಘೋಷಿಸಿದ ಸೀತಾರಾಮನ್‌

  • Union Budget 2025: ಬಡವರು, ಯುವಜನತೆ, ರೈತರು, ಮಹಿಳೆಯರ ಕೇಂದ್ರೀಕರಿಸಿದ ಬಜೆಟ್‌: ಸೀತಾರಾಮನ್‌

    Union Budget 2025: ಬಡವರು, ಯುವಜನತೆ, ರೈತರು, ಮಹಿಳೆಯರ ಕೇಂದ್ರೀಕರಿಸಿದ ಬಜೆಟ್‌: ಸೀತಾರಾಮನ್‌

    ನವದೆಹಲಿ: ಈ ಬಜೆಟ್‌ನಲ್ಲಿ ಪ್ರಸ್ತಾವಿತ ಅಭಿವೃದ್ಧಿ ಕ್ರಮಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರ ಮೇಲೆ ಕೇಂದ್ರೀಕರಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

    ಸತತ 8ನೇ ಬಜೆಟ್‌ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರು, ನಮ್ಮ ಆರ್ಥಿಕತೆಯು ಎಲ್ಲಾ ಪ್ರಮುಖ ಆರ್ಥಿಕತೆಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಅಭಿವೃದ್ಧಿ ದಾಖಲೆ ಮತ್ತು ರಚನಾತ್ಮಕ ಸುಧಾರಣೆಗಳು ಜಾಗತಿಕ ಗಮನ ಸೆಳೆದಿವೆ. ಈ ಅವಧಿಯಲ್ಲಿ ಭಾರತದ ಸಾಮರ್ಥ್ಯದ ಮೇಲಿನ ವಿಶ್ವಾಸ ಹೆಚ್ಚಾಗಿದೆ. ಮುಂದಿನ 5 ವರ್ಷಗಳನ್ನು ಎಲ್ಲಾ ಪ್ರದೇಶಗಳ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸುವ, ಸಬ್ ಕಾ ವಿಕಾಸ್ ಅನ್ನು ಸಾಕಾರಗೊಳಿಸುವ ಒಂದು ಅನನ್ಯ ಅವಕಾಶವೆಂದು ನಾವು ನೋಡುತ್ತೇವೆ ಎಂದು ಹೇಳಿದ್ದಾರೆ.

    ಪಿಎಂ ಧನ್ ಧಾನ್ಯ ಕೃಷಿ ಯೋಜನೆ: ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮ. ನಮ್ಮ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಒಮ್ಮುಖದ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ಸಾಂಸ್ಕೃತಿಕ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.

    ಸಣ್ಣ ಮತ್ತು ಅತಿ ಸಣ್ಣ ಉದ್ಯಮ ವಲಯವು 7.5 ಕೋಟಿ ಉದ್ಯೋಗ ನೀಡುತ್ತದೆ. 36% ಉತ್ಪಾದನೆ ಮಾಡುತ್ತಿದೆ. ಕ್ರೆಡಿಟ್ ಗ್ಯಾರಂಟಿ ಐದು ಕೋಟಿಯಿಂದ ಹತ್ತು ಕೋಟಿಗೆ ಏರಿಕೆಯಾಗಲಿದೆ. ಸ್ಟಾರ್ಟ್ ಅಪ್‌ಗಳಿಗೆ 10 ಕೋಟಿಯಿಂದ 20 ಕೋಟಿ ಹೂಡಿಕೆ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

    SC-ST ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ನೆರವು ನೀಡಲಾಗುವುದು. ಐದು ಲಕ್ಷ ಮಹಿಳೆಯರಿಗೆ ಸರ್ಕಾರದ ನೆರವು ಸಿಗಲಿದೆ. ಮೊದಲ ಬಾರಿಗೆ ಉದ್ಯಮ ಶುರು ಮಾಡುವವರಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

  • ಬಜೆಟ್‌ 8, ಸೀರೆ ಎಂಟು – ವಿಶೇಷ ಸೀರೆಗಳನ್ನುಟ್ಟು ಮಿಂಚಿದ ನಿರ್ಮಲಾ ಸೀತಾರಾಮನ್‌ – ಏನಿದರ ಗುಟ್ಟು?

    ಬಜೆಟ್‌ 8, ಸೀರೆ ಎಂಟು – ವಿಶೇಷ ಸೀರೆಗಳನ್ನುಟ್ಟು ಮಿಂಚಿದ ನಿರ್ಮಲಾ ಸೀತಾರಾಮನ್‌ – ಏನಿದರ ಗುಟ್ಟು?

    – ಪದ್ಮ ಪ್ರಶಸ್ತಿ ಪುರಸ್ಕೃತೆ ತಯಾರಿಸಿದ ಸೀರೆಯನ್ನುಟ್ಟ ಕೇಂದ್ರ ವಿತ್ತ ಸಚಿವೆ

    ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತಿ ವರ್ಷ ಬಜೆಟ್‌ ಜೊತೆಗೆ ಸೀರೆ ವಿಚಾರಕ್ಕೂ ಹೆಚ್ಚು ಗಮನ ಸೆಳೆದಿದ್ದಾರೆ. ಪ್ರತಿ ಬಾರಿ ಬಜೆಟ್‌ ಮಂಡಿಸುವಾಗ ಭಾರತದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಸೀರೆಯನ್ನುಟ್ಟು ಮಿಂಚಿದ್ದಾರೆ.

    ಸೀತಾರಾಮನ್‌ ಅವರಿಗೆ ಸೀರೆಗಳೆಂದರೆ ಅಚ್ಚುಮೆಚ್ಚು. ಇದುವರೆಗೂ ತಾವು ಮಂಡಿಸಿದ ಬಜೆಟ್‌ಗಳಲ್ಲಿ ಒಂದೊಂದು ಬಗೆಯ, ಕಲಾ ಕುಸುರಿಯ ವಿಶೇಷತೆ ಇರುವ ಸೀರೆಗಳನ್ನುಟ್ಟು ಗಮನ ಸೆಳೆದಿದ್ದಾರೆ. ಅವರು ಧರಿಸುವ ಸೀರೆಗಳು ಕೈಮಗ್ಗ (ಕೈಯಿಂದ ನೇಯ್ದ) ಭಾರತೀಯ ಜವಳಿ ಮತ್ತು ಕರಕುಶಲ ವಸ್ತುಗಳ ಮೇಲಿನ ಅವರ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ಸೀರೆಗಳು ಭಾರತೀಯ ಸಂಸ್ಕೃತಿ, ಪರಂಪರೆ ಮೇಲೆ ಬೆಳಕು ಚೆಲ್ಲಿವೆ.

    ಮದುಬನಿ ಕಲಾ ಸೀರೆ
    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿಯ ಕೌಶಲ್ಯಕ್ಕೆ ಗೌರವಾರ್ಥವಾಗಿ ಸೀರೆ ಉಟ್ಟಿದ್ದಾರೆ. ಈ ಸೀರೆಯನ್ನು ದುಲಾರಿ ದೇವಿ ಅವರೇ ತಯಾರಿಸಿದ್ದಾರೆ. ಗೋಲ್ಡ್‌ ಕಲರ್‌ ಬಾರ್ಡರ್‌ ಹೊಂದಿರುವ ಸುಂದರವಾದ ಕ್ರೀಮ್ ಸೀರೆಯನ್ನು ಸಚಿವರು ಈ ಬಾರಿ ಬಜೆಟ್‌ ಮಂಡನೆಗೆ ಧರಿಸಿದ್ದಾರೆ. ಇದಕ್ಕೆ ಮ್ಯಾಚಿಂಗ್‌ ಎಂಬಂತೆ ಕೆಂಪು ಬಣ್ಣದ ಕುಪ್ಪಸವನ್ನು ಧರಿಸಿದ್ದಾರೆ.

    ದುಲಾರಿ ದೇವಿ 2021 ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮಿಥಿಲಾ ಕಲಾ ಸಂಸ್ಥೆಯಲ್ಲಿ ಕ್ರೆಡಿಟ್ ಔಟ್ರೀಚ್ ಚಟುವಟಿಕೆಗಾಗಿ ಹಣಕಾಸು ಸಚಿವರು ಮಧುಬನಿಗೆ ಹೋಗಿದ್ದರು. ಆಗ ದುಲಾರಿ ದೇವಿ ಅವರನ್ನು ಭೇಟಿಯಾದರು. ಬಿಹಾರದ ಮಧುಬನಿ ಕಲೆಯ ಬಗ್ಗೆ ಸಚಿವರಿಗೆ ತಿಳಿಸಿದ್ದಲ್ಲದೇ, ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಬಜೆಟ್ ಮಂಡನೆ ದಿನಕ್ಕೆ ಅದನ್ನು ಧರಿಸಲು ಸಚಿವರಿಗೆ ದೇವಿ ಅವರು ಕೋರಿದ್ದರು.

    ಮಂಗಳಗಿರಿ ಸೀರೆ
    2024ರಲ್ಲಿ ತಮ್ಮ ಏಳನೇ ಬಜೆಟ್‌ ಮಂಡಿಸಿದ್ದ ನಿರ್ಮಲಾ ಸೀತಾರಾಮನ್‌ ಅವರು ಮಜೆಂಟಾ (ಕೆನ್ನೇರಳೆ) ಬಾರ್ಡರ್‌ ಹೊಂದಿದ್ದ ಆಫ್‌ ವೈಟ್‌ ಬಣ್ಣ ಮಂಗಳಗಿರಿ ಸೀರೆ ಧರಿಸಿದ್ದರು. ಗುಂಟೂರು ಜಿಲ್ಲೆಯಲ್ಲಿ ತಯಾರಾದ ಸೀರೆ ಆಂಧ್ರಪ್ರದೇಶದ ಸಂಸ್ಕೃತಿಯನ್ನು ಬಿಂಬಿಸಿದೆ. ಇದೇ ಸಂದರ್ಭದಲ್ಲಿ ಆಂಧ್ರಕ್ಕೆ ವಿಶೇಷ ಆರ್ಥಿಕ ನೆರವು ಘೋಷಿಸಿದ್ದು ವಿಶೇಷವಾಗಿತ್ತು.

    ಟಸ್ಸರ್‌ ರೇಷ್ಮೆ ಸೀರೆ
    2024ರಲ್ಲೇ ಮಧ್ಯಂತರ ಬಜೆಟ್‌ಗಾಗಿ ಸೀತಾರಾಮನ್ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆ ಉಟ್ಟಿದ್ದರು. ಅದರಲ್ಲಿ ಕಾಂತ ಕೈಯಿಂದ ಮಾಡಲಾಗಿತ್ತು. ಸೀರೆ ಜೊತೆಗೆ ಚಿನ್ನದ ಬಣ್ಣದ ಬ್ಲೌಸ್ ಧರಿಸಿದ್ದರು. ಪಶ್ಚಿಮ ಬಂಗಾಳವು ಕಾಂತ ಹೊಲಿಗೆಗೆ ಹೆಸರುವಾಸಿಯಾಗಿದೆ. ನೀಲಿ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ, ಮೀನುಗಾರಿಕೆ ಅಭಿವೃದ್ಧಿ ಮೂಲಕ ಮತ್ಸ್ಯ ಕ್ರಾಂತಿಯ ಸಂದೇಶ ನೀಡಿದ್ದರು.

    ಕರ್ನಾಟಕದ ಇಳಕಲ್‌ ಸೀರೆ
    2023ರಲ್ಲಿ ಬಜೆಟ್‌ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು, ದೇವಾಲಯ ಬಾರ್ಡರ್‌ ಸೀರೆ ಆರಿಸಿಕೊಂಡಿದ್ದರು. ಕೆಂಪು ಬಣ್ಣದ ಟೆಂಪಲ್‌ ಬಾರ್ಡರ್‌ ಸೀರೆ ವಿಶೇಷವಾಗಿತ್ತು. ಕರ್ನಾಟಕ ಧಾರವಾಡದ ಇಳಕಲ್‌ ರೇಷ್ಮೆ ಸೀರೆ ಇದಾಗಿತ್ತು. ಕೈಯಿಂದ ನೇಯ್ದ ಕಸೂತಿ ಸೀರೆಯಿದು. ಸೀರೆಯಲ್ಲಿ ರಥ, ನವಿಲು, ಕಮಲಗಳ ಚಿತ್ರಗಳಿದ್ದವು. ಬಜೆಟ್‌ನಲ್ಲಿ ಕಸೂತಿ ಕಲೆಗೆ ಪ್ರೋತ್ಸಾಹ ನೀಡುವ ಸುಳಿವು ಕೊಟ್ಟಿದ್ದರು.

    ಬೊಮ್ಕೈ ಸೀರೆ
    2022ರಲ್ಲಿ ಬಜೆಟ್‌ ಮಂಡಿಸುವಾಗ ಸೀತಾರಾಮನ್‌ ಅವರು, ಬೊಮ್ಕೈ ಸೀರೆಯನ್ನು ಧರಿಸಿದ್ದರು. ಸೀರೆ ಕಂದು ಬಣ್ಣದ್ದಾಗಿತ್ತು. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ವಿಶೇಷ ಸೀರೆಯಿದು.

    ಪೋಂಚಪಲ್ಲಿ ಸೀರೆ
    2021 ರಲ್ಲಿ ತಮ್ಮ ಮೂರನೇ ಬಜೆಟ್ ಮಂಡನೆಗಾಗಿ ನಿರ್ಮಲಾ ಸೀತಾರಾಮನ್ ಅವರು ಹೈದರಾಬಾದ್‌ನ ಪೋಚಂಪಲ್ಲಿ ಗ್ರಾಮದ ಕೆಂಪು ಮತ್ತು ಮಾಸಲು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು.

    ರೇಷ್ಮೆ ಸೀರೆ
    2020ರಲ್ಲಿ ಸೀತಾರಾಮನ್‌ ಅವರು ಬಜೆಟ್‌ ಮಂಡನೆಗೆ ಹಳದಿ ರೇಷ್ಮೆ ಸೀರೆ ಉಟ್ಟು ಬಂದಿದ್ದರು. ಸೀರೆಗೆ ಮ್ಯಾಚ್‌ ಆಗುವ ಅದೇ ಬಣ್ಣದ ಕುಪ್ಪಸ ಧರಿಸಿದ್ದರು. ಸೀರೆಯ ಬಾರ್ಡರ್‌ ನೀಲಿ ಬಣ್ಣದ್ದಾಗಿತ್ತು. ಹಳದಿ ಸಮೃದ್ಧಿಯ ಸಂಕೇತವಾಗಿದೆ.

    ಮಂಗಳಗಿರಿ ಸೀರೆ
    2019 ರಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರ ಮೊದಲ ಬಜೆಟ್ ಮಂಡಿಸಿದ್ದರು. ಆಗ ಅವರು ಗೋಲ್ಡ್‌ ಕಲರ್‌ ಬಾರ್ಡರ್‌ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು.ಸಾಂಪ್ರದಾಯಿಕ ‘ಬಹಿ ಖಾತಾ’ ದೊಂದಿಗೆ ಬಜೆಟ್ ಬ್ರೀಫ್‌ಕೇಸ್ ಅನ್ನು ತೆಗೆದುಕೊಂಡು ಬಂದಿದ್ದರು. ಅದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನದೊಂದಿಗೆ ಚಿನ್ನದ ಎಳೆಗಳು ಇದ್ದವು.