Tag: ಕೇಂದ್ರ ಬಜೆಟ್ 2021

  • ಬಜೆಟ್ 2021 – ಯಾವುದರ ಬೆಲೆ ಏರಿಕೆ? ಇಳಿಕೆ?

    ಬಜೆಟ್ 2021 – ಯಾವುದರ ಬೆಲೆ ಏರಿಕೆ? ಇಳಿಕೆ?

    ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದು, ಆಮದು ಸುಂಕವನ್ನ ಏರಿಕೆ ಮಾಡಿದ್ದಾರೆ. ಆಮದು ಸುಂಕ ಏರಿಕೆ ಹಿನ್ನೆಲೆ ರೆಫ್ರಿಜಿರೇಟರ್, ಏರ್ ಕಂಡೀಷನರ್, ಮದ್ಯ, ಕಚ್ಚಾ ರೇಷ್ಮೆ, ಸ್ಪಾಂಡೆಕ್ಸ್ ಫೈಬರ್, ಸೋಲಾರ್ ಲ್ಯಾಂಟೆನ್ರ್ಸ್, ಮೊಬೈಲ್ ಫೋನ್, ಪವರ್ ಬ್ಯಾಂಕ್ ಬೆಲೆ ಏರಿಕೆಯಾಗಲಿದೆ.

    ಮೊಬೈಲ್ ಫೋನ್ ಬಿಡಿಭಾಗಳು ಮತ್ತು ಪವರ್ ಬ್ಯಾಂಕ್ ಮೇಲೆ ಅಬಕಾರಿ ಸುಂಕ ಏರಿಕೆ ಮಾಡಲಾಗಿದ್ದು, ಆದ್ರೆ ಚಿನ್ನ ಮತ್ತು ಬೆಳ್ಳಿ ಮೇಲಿನ ತೆರಿಗೆಯನ್ನ ಇಳಿಕೆ ಮಾಡಲಾಗಿದೆ. ರೆಫ್ರಿಜಿರೇಟರ್, ಏರ್ ಕಂಡೀಷನರ್ ಬಿಡಿ ಭಾಗಗಳ ಮೇಲಿನ ಆಮದು ತೆರಿಗೆ ಶೇ.12.5 ರಿಂದ ಶೇ.15ಕ್ಕೆ ಏರಿಕೆ ಮಾಡಲಾಗಿದೆ. ಏಪ್ರಿಲ್ ಒಂದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ.

    ವಿತ್ತ ಸಚಿವರು ಭಾರತದಲ್ಲಿ ಸಿದ್ಧವಾಗುವ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡಿದ್ದಾರೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಬೆಳವಣಿಗೆಗೆ ಸಹಕಾರಿಯಾಗುವ ಕೆಲ ಘೋಷಣೆಗಳನ್ನ ಘೋಷಿಸಿದ್ದಾರೆ. ಎಂಎಸ್‍ಎಂಇ ಗಳು ಉತ್ತಮ ಗುಣಮಟ್ಟ ಮತ್ತು ಬಾಳಿಕೆ ಹೊಂದಿರುತ್ತವೆ. ಹಾಗಾಗಿ ಫಿನಿಶಡ್ ಸಿಂಥೆಟಿಕ್ ಜೆಮ್ ಸ್ಟೋನ್ ಮೇಲೆ ತೆರಿಗೆ ಏರಿಕೆ ಮಾಡಲಾಗಿದೆ. ಇದರಿಂದ ದೇಶಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಆಗಲಿದೆ.

    ಆಟೋಮೊಬೈಲ್ ವಲಯದ ಉತ್ಪನ್ನಗಳಾದ ವೈರಿಂಗ್ ಸೆಟ್, ಸೇಫ್ಟಿ ಗ್ಲಾಸ್ ಮತ್ತು ಸಿಗ್ನಲ್ ಉಪಕರಣಗಳ ಮೇಲಿನ ತೆರಿಗೆ ಶೇ.7.5/10ರಿಂದ ಶೇ.15ಕ್ಕೆ ಏರಿಕೆ ಕಾಣಲಿದೆ. ಪೆಟ್ರೋಲಿಯಂ ಮತ್ತು ರಬ್ಬರ್ ಉತ್ಪನ್ನಗಳ ಮೇಲಿನ ಸೆಸ್ ಶೇ.2.5 ಇಳಿಕೆಯಾಗಲಿದೆ. ಚಿನ್ನ ಮತ್ತು ಬೆಳ್ಳಿ ಆಮದು ಸುಂಕ ಶೇ. 7.5ರಷ್ಟು ಇಳಿಕೆಯಾಗಿದ್ದು, ಪ್ಲಾಟಿನಂ, ಹವಳ ಮೇಲೆ ತೆರಿಗೆ ಶೇ.12.5ರಿಂದ ಶೇ.10ಕ್ಕೆ ಇಳಿಕೆಯಾಗಿದೆ.

    ಯಾವುದರ ಬೆಲೆ ಹೆಚ್ಚಳ?:
    * ಮೊಬೈಲ್ ಫೋನ್, ಪವರ್ ಬ್ಯಾಂಕ್, ಚಾರ್ಜರ್
    * ಕಾಟನ್ ಬಟ್ಟೆ
    * ವಿದೇಶಿ ಮದ್ಯ, ವಿದೇಶಿ ಬಟ್ಟೆ
    * ರೆಫ್ರಿಜಿಟರೇಟರ್
    * ಏರ್ ಕಂಡೀಷನರ್
    * ವಿದೇಶಿ ಆಟಿಕೆ ವಸ್ತುಗಳು
    * ಪೆಟ್ರೋಲ್ ಮತ್ತು ಡೀಸೆಲ್

    ಯಾವುದರ ಬೆಲೆ ಕಡಿಮೆ?
    * ಚಿನ್ನ ಮತ್ತು ಬೆಳ್ಳಿ
    * ಪೆಟ್ರೋಲಿಯಂ ಮತ್ತು ರಬ್ಬರ ಉತ್ಪನ್ನಗಳು
    * ಪೇಂಟ್
    * ಕಾಪರ್ ಸ್ಕ್ರಾಪ್, ಮೆಟಲ್ ಕಾಯಿನ್
    * ನೈಲಾನ್ ಫೈಬರ್
    * ಪ್ಲಾಟಿನಂ
    * ಚರ್ಮದ ವಸ್ತುಗಳು

  • ಪಶ್ಚಿಮ ಬಂಗಾಳದಲ್ಲಿ 6,500 ಕಿ.ಮೀ ಹೆದ್ದಾರಿ ನಿರ್ಮಾಣ

    ಪಶ್ಚಿಮ ಬಂಗಾಳದಲ್ಲಿ 6,500 ಕಿ.ಮೀ ಹೆದ್ದಾರಿ ನಿರ್ಮಾಣ

    ನವದೆಹಲಿ: 2021ರ ಕೇಂದ್ರ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಶ್ಚಿಮ ಬಂಗಾಳದಲ್ಲಿ 6,500 ಕಿಲೋ ಮೀಟರ್ ಉದ್ದದ ಹೆದ್ದಾರಿ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ ಎಂದು ತಿಳಿಸಿದರು.

    ಭಾರತಮಾಲಾ ಯೋಜನೆ ಅಡಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಕಿಲೋ ಮೀಟರ್ ರಸ್ತೆ ನಿರ್ಮಾಣವಾಗಿದೆ. ಮಾರ್ಚ್ ನೊಳಗೆ 8 ಸಾವಿರ ಕಿಲೋ ಮೀಟರ್ ಗುರಿ ತಲುಪಲಾಗುವುದು. ಹೆದ್ದಾರಿಗಳಲ್ಲಿ ಮೂಲ ಸೌಕರ್ಯ ಮತ್ತು ಇಕಾನಾಮಿಕ್ ಕಾರಿಡರ್ ಮೇಲೆ ಸರ್ಕಾರ ಕೆಲಸ ಮಾಡುತ್ತಿದೆ. ತಮಿಳುನಾಡಿನಲ್ಲಿ 3,500 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಮಧುರೈ-ಕೊಲ್ಲಂ ಕಾರಿಡರ್ ಒಳಗೊಂಡಿದೆ ಎಂದು ಸೀತಾರಾಮನ್ ಮಾಹಿತಿ ನೀಡಿದರು.

    ಕೇರಳದಲ್ಲಿ 1,100 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ 65 ಸಾವಿರ ಕೋಟಿ ಖರ್ಚು ಆಗಲಿದೆ. ಮುಂಬೈ-ಕನ್ಯಾಕುಮಾರಿ ಕಾರಿಡರ್ ಇದರ ಭಾಗವಾಗಲಿದೆ. ಪಶ್ಚಿಮ ಬಂಗಾಳದಲ್ಲಿ 6,500 ಕಿಲೋ ಮೀಟರ್ ಹೆದ್ದಾರಿ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದ್ದು, ಇದಕ್ಕಾಗಿ 25 ಸಾವಿರ ಕೋಟಿ ಅನುದಾನ ಮೀಸಲು ಇರಿಸಲಾಗುವುದು. ಇದೇ ಅನುದಾನದಲ್ಲಿ ಕೋಲ್ಕತ್ತಾ-ಸಿಲ್ಲಿಗುಡಿ ರಸ್ತೆಯ ರಿಪೇರಿ ಆಗಲಿದೆ ಎಂದರು.

    ರೈಲ್ವೆ ಡೆಡಿಕೇಟೆಡ್ ಫ್ರಂಟ್ ಕಾರಿಡಾರ್, ಎನ್‍ಎಚ್‍ಎಐನ ಟೋಲ್ ರಸ್ತೆ, ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ ಇತರ ಆದಾಯವನ್ನು ಅಸೆಟ್ ಮ್ಯಾನೇಜ್‍ಮೆಂಟ್ ಅಡಿಯಲ್ಲಿ ತರಲಾಗುವುದು ಎಂದು ಸೀತಾರಾಮನ್ ಹೇಳಿದರು.

    ರಾಷ್ಟ್ರೀಯ ರೈಲ್ವೇ ಪ್ಲಾನ್-2030 ಸಿದ್ಧಪಡಿಸಲಾಗಿದ್ದು, ಭವಿಷ್ಯದ ರೈಲ್ವೇ ಸಿಸ್ಟಂ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಈ ಗುರಿಯಲ್ಲಿ ಮೇಕ್ ಇನ್ ಇಂಡಿಯಾಗೆ ಪ್ರಾಮುಖ್ಯತೆ ನೀಡಲಾಗುವುದು. ವೆಸ್ಟರ್ನ್ ಮತ್ತು ಈಸ್ಟರ್ನ್ ಫ್ರೆಟ್ ಕಾರಿಡರ್ ಜೂನ್, 2022ರೊಳಗೆ ಪೂರ್ಣಗೊಳಿಸೋದಾಗಿ ತಿಳಿಸಿದರು, ಸೋನ ನಗರ-ಗೋಮೋ ಸೆಕ್ಷನ್ ಪಿಪಿಪಿ (ಸರ್ಕಾರ-ಖಾಸಗಿ ಸಹಭಾಗಿತ್ವ) ಮೋಡ್ ನಲ್ಲಿ ಮಾಡಲಾಗುವುದು.