Tag: ಕೇಂದ್ರ ಬಜೆಟ್ 2019

  • ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ಒಂದು ದೇಶ, ಒಂದು ಕಾರ್ಡ್ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪ

    ನವದೆಹಲಿ: ಇಂದು ಕೇಂದ್ರ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ತಮ್ಮ ಬಜೆಟ್‍ನಲ್ಲಿ ಒಂದು ದೇಶ, ಒಂದು ಕಾರ್ಡ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

    ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್‍ಸಿಎಂಸಿ) ಮಾನದಂಡಗಳ ಆಧಾರದ ಮೇಲೆ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಾವತಿ ವ್ಯವಸ್ಥೆಯನ್ನು ಮಾರ್ಚ್, 2019ರಲ್ಲಿ ಪ್ರಧಾನ ಮಂತ್ರಿ ಉದ್ಘಾಟಿಸಿದ್ದರು. ಎನ್‍ಸಿಎಂಸಿ ದೇಶೀಯವಾಗಿ ಅಭಿವೃದ್ಧಿಗೊಂಡಿದ್ದು, ಹಲವು ಸೇವೆಗಳನ್ನು ಗ್ರಾಹಕರು ಈ ಒಂದೇ ಕಾರ್ಡ್‍ನಿಂದ ಪಡೆಯಬಹುದಾಗಿದೆ.

    ಕಾರ್ಡ್ ಒಂದು ಉಪಯೋಗ ಹಲವು ಎನ್ನುವುದೇ ಈ ಕಾರ್ಡ್‍ನ ವಿಶೇಷತೆಯಾಗಿದ್ದು, ಸಾರಿಗೆ, ಮೆಟ್ರೊ ಸೇವೆ, ಟೋಲ್ ಸುಂಕ, ಪಾರ್ಕಿಂಗ್ ಶುಲ್ಕ ಪಾವತಿ, ರೀಟೇಲ್ ಶಾಪಿಂಗ್, ದೇಶದ ಎಲ್ಲಾ ಕಡೆಯೂ ಹಣ ಪಡೆಯುವ ಅವಕಾಶ ಸೇರಿದಂತೆ ಬಹುತೇಕ ಎಲ್ಲಾ ಸೇವೆಗಳಿಗೆ ಈ ಕಾರ್ಡ್ ಉಪಯೋಗಿಸಬಹುದು. ಅಲ್ಲದೆ ಈ ಎನ್‍ಸಿಎಂಸಿ ರುಪೇ ಕಾರ್ಡ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಇದನ್ನು ಬಳಕೆದಾರರು ಮೆಟ್ರೋ, ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್, ಎಟಿಎಂನಿಂದ ಹಣ ತೆಗೆಯಲು ಸಹ ಉಪಯೋಗಿಸಬಹುದಾಗಿದೆ.

    ಈ ಎನ್‍ಸಿಎಂಸಿ ಕಾರ್ಡ್ ರುಪೇ ಕಾರ್ಡ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರಯಾಣ ಸಂಬಂಧಿ ಸಮಸ್ಯೆಗಳನ್ನು ಈ ಕಾರ್ಡ್‍ನಿಂದ ದೂರವಾಗುತ್ತದೆ. ಮೆಟ್ರೊ, ಬಸ್, ರೈಲಿನಲ್ಲಿ ಪ್ರಯಾಣ ಮಾಡುವಾಗ ಅಥವಾ ಟೋಲ್‍ಗಳಲ್ಲಿ ಸುಂಕ ಕಟ್ಟುವಾಗ, ವಾಹನ ಪಾರ್ಕಿಂಗ್ ಮಾಡುವಾಗ ಚಿಲ್ಲರೆಯ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎನ್ನುವಂತೆ ಆಟೋಮ್ಯಾಟಿಕ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಎನ್‍ಸಿಎಂಸಿ ಕಾರ್ಡ್‍ನಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದರು.

    ನಾನಾ ಸಂಸ್ಥೆಗಳು ಕಾರ್ಡ್ ವಿತರಿಸುತ್ತಿದ್ದ ಕಾರಣಕ್ಕೆ ಅವುಗಳು ಸೇವೆ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಪಡೆಯಲು ಅವಕಾಶ ಇತ್ತು. ಇದು ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ, ಈ ಬಂದಿರುವ ಎನ್‍ಸಿಎಂಸಿ ಬಳಸಿ ದೇಶದ ಎಲ್ಲೆಡೆ ಸೇವೆಯನ್ನು ಪಡೆಯಬಹುದಾಗಿದೆ ಎಂದು ಮೋದಿ ಹೇಳಿದ್ದರು.

    ಈ ಒಂದು ದೇಶ ಒಂದು ಕಾರ್ಡ್ ತಂತ್ರಜ್ಞಾನವು ಕೇವಲ ಆಯ್ದ ದೇಶಗಳಲ್ಲಿ ಮಾತ್ರ ಇದೆ. ಈಗ ಭಾರತವು ಈಗ ಕೂಡ ಈ ಪಟ್ಟಿಗೆ ಸೇರಿದೆ. ವಿದೇಶ ತಂತ್ರಜ್ಞಾನವನ್ನು ಹೆಚ್ಚಿನ ಕಾಲದವರೆಗೆ ಉಪಯೋಗಿಸದೆ ಮೇಕ್ ಇನ್ ಇಂಡಿಯಾ ಮೂಲಕ ಈ ಕಾರ್ಡ್ ರೂಪುಗೊಂಡಿದೆ. ಬ್ಯಾಂಕ್‍ಗಳು, ವಿವಿಧ ಸಚಿವಾಲಯಗಳು ಹಾಗೂ ಸಕಾರಿ ಇಲಾಖೆಗಳ ಜೊತೆ ಚರ್ಚೆ ನಡೆಸಿ ಹಾಗೂ ಹಲವು ಪ್ರಕ್ರಿಯೆಗಳು ಮುಗಿದ ಬಳಿಕ ಈ ನೂತನ ಕಾರ್ಡ್ ಕಾರ್ಯರೂಪಕ್ಕೆ ಬಂದಿದೆ. ಅಂದರೆ ರುಪೇ ಕಾರ್ಡ್ ಅನ್ನು ಮೊಬಿಲಿಟಿ ಕಾರ್ಡ್ ಜೊತೆ ವಿಲೀನ ಮಾಡಲಾಗಿದೆ.

    ಎನ್‍ಸಿಎಂಸಿಯಲ್ಲಿ ಯಾವೆಲ್ಲ ಸೇವೆ ಲಭ್ಯ?
    1. ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್ ರೀತಿಯೇ ಈ ಎನ್‍ಸಿಎಂಸಿ ಇರುತ್ತದೆ. ಎಸ್‍ಬಿಐ, ಪಿಎನ್‍ಬಿ ಸೇರಿದಂತೆ 25 ಬ್ಯಾಂಕ್‍ಗಳಲ್ಲಿ ಈ ಕಾರ್ಡ್ ಲಭ್ಯವಿದೆ.
    2. ಇದರಿಂದ ಮೆಟ್ರೊ, ಬಸ್, ಸಬರ್ಬನ್ ರೈಲ್ವೆ, ಸ್ಮಾರ್ಟ್ ಸಿಟಿ ಮತ್ತು ರೀಟೇಲ್ ಶಾಪಿಂಗ್ ಮತ್ತಿತರ ಸೇವೆಗಳನ್ನು ಪಡೆಯಬಹುದಾಗಿದೆ.

    3. ಟೇಲ್ ಗೇಟ್‍ಗಳಲ್ಲಿ ಮತ್ತು ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಕಟ್ಟಲು ಈ ಕಾರ್ಡ್ ಉಪಯುಕ್ತ.
    4. ಇದರಿಂದ ಬಿಲ್ ಪೇಮೆಂಟ್ ಕೂಡ ಮಾಡಬಹುದು. ಅಲ್ಲದೆ ಇದರಲ್ಲಿ ಕ್ಯಾಶ್‍ಬ್ಯಾಕ್ ಆಫರ್ ಗಳೂ ಲಭ್ಯವಿದ್ದು, ಸಾವಿರಕ್ಕೂ ಅಧಿಕ ಸೇವೆಗಳ ಆನಂದಿಸಬಹುದು.
    5. ಅಷ್ಟೇ ಅಲ್ಲದೆ ಈ ಕಾರ್ಡ್ ಬಳಕೆದಾರರು ಎಟಿಎಂಗಳಲ್ಲಿ ಶೇ.5ರಷ್ಟು ಕ್ಯಾಶ್‍ಬ್ಯಾಕ್ ಪಡೆಯಬಹುದು. ವಿದೇಶಕ್ಕೆ ತೆರಳಿದಾಗ ಮರ್ಚೆಂಟ್‍ಗಳ ಔಟ್‍ಲೆಟ್‍ಗಳಲ್ಲಿ ಶೇ.10ರಷ್ಟು ಕ್ಯಾಶ್‍ಬ್ಯಾಕ್ ಈ ಕಾರ್ಡ್ ಹಿಂದಿದವರಿಗೆ ಸಿಗುತ್ತದೆ.

  • ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ಎಫ್‍ಡಿಐಗೆ ಪ್ರೋತ್ಸಾಹ

    ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ಎಫ್‍ಡಿಐಗೆ ಪ್ರೋತ್ಸಾಹ

    ನವದೆಹಲಿ: ವಿಮಾನಯಾನ, ಮಾಧ್ಯಮ, ಎನಿಮೇಷನ್, ವಿಮಾ ಕ್ಷೇತ್ರಗಳಲ್ಲಿ ವಿದೇಶಿ ಬಂಡಾವಣ ಹೂಡಿಕೆಗೆ ಪ್ರೋತ್ಸಾಹ ನೀಡಲಾಗುವುದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    * ಪ್ರಧಾನಮಂತ್ರಿ ಕರ್ಮಯೋಗಿ ಮಾನ್‍ಧನ್ ಯೋಜನೆ ಅಡಿಯಲ್ಲಿ 1.5 ಕೋಟಿ ರೂ.ಗಿಂತ ಕಡಿಮೆ ವ್ಯವಹಾರ ಹೊಂದಿರುವ ಸಣ್ಣ ವ್ಯಾಪಾರಸ್ಥರಿಗೆ ಪೆನ್ಷನ್ (ಪಿಂಚಣಿ) ಲಾಭ ಸಿಗಲಿದೆ.
    * ಸಣ್ಣ ಮಳಿಗೆದಾರರಿಗೆ ಕೇವಲ 59 ನಿಮಿಷದಲ್ಲಿ ಸಾಲ ಸಿಗಲಿದೆ. 3 ಕೋಟಿಗೂ ಅಧಿಕ ಸಣ್ಣಮಳಿಗೆದಾರರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

    * ಮಧ್ಯವರ್ತಿ ವಿಮಾ ಸಂಸ್ಥೆಗಳಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ(ಎಫ್‍ಡಿಐ)ಗೆ ಅವಕಾಶ
    * ಚಿಲ್ಲರೆ ವ್ಯಾಪಾರಕ್ಕೆ ಪ್ರೋತ್ಸಾಹ ಮತ್ತು ಸಿಂಗಲ್ ಬ್ರ್ಯಾಂಡ್ ರಿಟೇಲ್ ವ್ಯವಹಾರದಲ್ಲಿ ಸುಲಭ ಹೊಡಿಕೆಗೆ ಅವಕಾಶ
    * ಸ್ಟ್ಯಾಂಡ್ ಆಪ್ ಇಂಡಿಯಾ ಯೋಜನೆಯಡಿ ಮಹಿಳೆಯರು ಮತ್ತು ಎಸ್‍ಸಿ, ಎಸ್‍ಟಿ ಉದ್ಯಮಿಗಳಿಗೆ ಸಹಾಯ

    * ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮದಾರರ ಸಾಲದ ಮೇಲೆ ಶೇ.2 ರಷ್ಟು ವಿನಾಯ್ತಿ. ಇದಕ್ಕಾಗಿ 350 ಕೋಟಿ ರೂಪಾಯಿ ಮೀಸಲು

    * ಶೇರು ಮಾರುಕಟ್ಟೆಯ ಲಿಸ್ಟೆಡ್ ಕಂಪನಿಗಳ ಸರ್ಕಾರಿ ಶೇರುದಾರರ ಸಂಖ್ಯೆ ಶೇ.25 ರಿಂದ ಶೇ.35ಕ್ಕೆ ಹೆಚ್ಚಿಸುವ ಪ್ರಸ್ತಾವ
    * ಸರ್ಕಾರಿ-ಖಾಸಗಿ ಸಹಭಾಗಿತ್ವದ ಪಿಪಿಪಿ (Public-Private Partnership) ಮೂಲಕ ರೈಲ್ವೇ ಇಲಾಖೆಯಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಳ ಮಾಡುವುದು. ಬಂಡವಾಳ ಹೂಡಿಕೆ ಬಳಿಕ ರೈಲ್ವೇ ಟ್ರ್ಯಾಕ್, ಮೂಲಭೂತ ಸೌಲಭ್ಯ ನೀಡುವುದು. ಇವುಗಳ ಜೊತೆಯಲ್ಲಿ ಪ್ರಯಾಣಿಕರ ಸರಕು ಸಾಗಣೆ (Passenger Freight Service) ಸೇವೆ ಆರಂಭಿಸುವುದು.

    * ಸ್ಟಾರ್ಟ್ ಅಪ್ ಯೋಜನೆಯ ಮಾಹಿತಿ ನೀಡಲು ವಿಶೇಷವಾಗಿ ಟಿವಿ ಚಾನೆಲ್ ಆರಂಭಿಸಲಾಗುವುದು. ಯುವ ಸಮುದಾಯ ಮತ್ತು ಉದ್ದಿಮೆದಾರರ ಸ್ಫೂರ್ತಿದಾಯಕ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಆರಂಭಿಸುವುದು.
    * ಭಾರತದಲ್ಲಿರುವ ಸೃಜನಶೀಲತೆ ಕೈಗಾರಿಕೆ ಮತ್ತು ಉದ್ಯಮದಾರರನ್ನು ಕೆಲಸವನ್ನು ಪ್ರೋತ್ಸಾಹಿಸಿ ಅವರನ್ನು ಅರ್ಥವ್ಯವಸ್ಥೆ ವ್ಯಾಪ್ತಿಗೆ ತರುವುದು. ನಮ್ಮ ಸೃಜನಶೀಲ ಕಲೆಯ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ಕಲ್ಪಿಸುವುದು.
    * ಸ್ಟಾರ್ಟ್‍ಅಪ್ ಯೋಜನೆಯಡಿಯಲ್ಲಿ ಹೂಡಿಕೆ ಮೊತ್ತದ ಮೇಲೆ ತೆರಿಗೆ ವಿನಾಯ್ತಿ ನೀಡುವುದು.

    * 250 ಕೋಟಿ ರೂ. ವ್ಯವಹಾರ(turn over)ವನ್ನು ಹೊಂದಿರುವ ಕಾರ್ಪೋರೇಟ್ ಕಂಪನಿಗಳ ಮೇಲಿನ ಶೇ.25ರಷ್ಟಿದ್ದು, ಯಾವುದೇ ಬದಲಾವಣೆಗಳಿಲ್ಲ. 400 ಕೋಟಿ ರೂ. ವ್ಯವಹಾರವನ್ನು ಹೊಂದಿರುವ ಕಂಪನಿಗಳು ಸಹ ಶೇ.25 ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಅಂದ್ರೆ ಶೇ.99.3ರಷ್ಟು ಕಂಪನಿಗಳು ಶೇ.25 ಕಾರ್ಪೋರೇಟ್ ಟ್ಯಾಕ್ಸ್ ವ್ಯಾಪ್ತಿಯಲ್ಲಿ ಒಳಪಡಲಿವೆ. ಕೇವಲ ಶೇ.0.7 ಕಂಪನಿಗಳು ಮಾತ್ರ ಶೇ.25ರ ಟ್ಯಾಕ್ಸ್ ವ್ಯಾಪ್ತಿಯಿಂದ ಹೊರ ಇರಲಿವೆ.

  • ದಿನಕ್ಕೆ 17 ರೂ. ನೀಡಿ ರೈತರಿಗೆ ಅವಮಾನ: ರಾಹುಲ್ ಗಾಂಧಿ ಕಿಡಿ

    ದಿನಕ್ಕೆ 17 ರೂ. ನೀಡಿ ರೈತರಿಗೆ ಅವಮಾನ: ರಾಹುಲ್ ಗಾಂಧಿ ಕಿಡಿ

    ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ರೈತರಿಗೆ ದಿನಕ್ಕೆ 17 ರೂ. ನೀಡಿ ಅವಮಾನ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

    ಬಜೆಟ್ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು, ಡಿಯರ್ ನಮೋ(ಓoಒo), ಐದು ವರ್ಷಗಳಿಂದ ನೀಡುತ್ತಿರುವ ನಿಮ್ಮ ಅಸಮರ್ಥತೆ ಹಾಗೂ ಅಹಂಕಾರ ರೈತರ ಜೀವನವನ್ನು ನಾಶಗೊಳಿಸುತ್ತಿದೆ. ಒಂದು ದಿನಕ್ಕೆ ರೈತರಿಗೆ 17 ರೂ. ನೀಡುತ್ತಿರುವುದು ಅವರಿಗೆ ಹಾಗೂ ಅವರ ಕೆಲಸಕ್ಕೆ ಮಾಡುವ ಅವಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕಿದ್ದಾರೆ.

    ಕೇಂದ್ರ ಬಜೆಟ್‍ನಲ್ಲಿರುವ “ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ” ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ರಾಹುಲ್ ಗಾಂಧಿ, ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ನಾಯಕರು ಕೇಂದ್ರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಯೋಜನೆಯಲ್ಲಿ ಏನಿದೆ?:
    5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಪ್ರತಿ ವರ್ಷಕ್ಕೆ 6,000 ರೂ. ಬೆಂಬಲ ನೀಡುವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ಈ ಹಣವನ್ನು ಒಂದು ದಿನಕ್ಕೆ ಲೆಕ್ಕ ಹಾಕಿರುವ ಕಾಂಗ್ರೆಸ್, ರೈತರಿಗೆ ಕೇವಲ 17 ರೂ. ಸಿಗುತ್ತದೆ. ಇದು ರೈತರಿಗೆ ಹಾಗೂ ಅವರ ಶ್ರಮಕ್ಕೆ ಮಾಡುವ ಅವಮಾನ ಎಂದು ಕಿಡಿಕಾರಿದೆ.

    ಕೇಂದ್ರ ಸರ್ಕಾರದ ಬಜೆಟ್ ಘೋಷಣೆ ಹಾಗೂ ರಾಹುಲ್ ಗಾಂಧಿ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರೈತ, ಯುವಜನ ವಿರೋಧಿ ಬಜೆಟ್ – ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

    ರೈತ, ಯುವಜನ ವಿರೋಧಿ ಬಜೆಟ್ – ಕೇಂದ್ರ ಬಜೆಟ್ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ

    ಬೆಂಗಳೂರು: ಇಂದು ಮೋದಿ ಸರ್ಕಾರದ ಕೊನೆಯ ಬಜೆಟ್ ಇಂದು ಮಂಡನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಕೇಂದ್ರ ಸರ್ಕಾರದ ಬಜೆಟ್ ರೈತ ಹಾಗೂ ಯುವಜನ ವಿರೋಧಿ ಬಜೆಟಾಗಿದೆ. ಈ ಎರಡೂ ವರ್ಗಕ್ಕೂ ಮೋದಿ ದ್ರೋಹ ಎಸಗಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ‘ರೈತ ವಿರೋಧಿ’ ಮತ್ತು ‘ಯುವಜನ ವಿರೋಧಿ’ ಆಗಿದೆ. ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ ಎಂದು ಬರೆದಿದ್ದಾರೆ. ಅಲ್ಲದೇ ಇದನ್ನು ಈಎನ್‍ಸಿ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ.

    ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಪಿಯೂಶ್ ಗೋಯಲ್ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv