Tag: ಕೇಂದ್ರ ಗೃಹ ಸಚಿವ

  • ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರಾ ಅಮಿತ್ ಶಾ?

    ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರಾ ಅಮಿತ್ ಶಾ?

    ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಕಾಶ್ಮೀರದಲ್ಲಿ 15ಕ್ಕೆ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಅಮಿತ್ ಶಾ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣಾ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರಿಂದ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ. ಆದರೆ ಗೃಹ ಸಚಿವರ ಭೇಟಿಯನ್ನ ರಕ್ಷಣೆ ದೃಷ್ಟಿಯಿಂದ ಗೌಪ್ಯವಾಗಿಡಲಾಗಿದೆ ಎನ್ನಲಾಗಿದೆ.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಗೃಹ ಸಚಿವರಾದ ಅಮಿತ್ ಶಾ ಅವರು ಮೊದಲ ಬಾರಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

    ಇತ್ತ ಕಣಿವೆ ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳಲು ಸ್ವಲ್ಪ ಸಮಯವಕಾಶ ಅವಶ್ಯವಾಗುತ್ತದೆ. ಎಲ್ಲವನ್ನೂ ಒಂದು ರಾತ್ರಿಯಲ್ಲಿ ಬದಲಿಸಲು ಸಾಧ್ಯವಿಲ್ಲ. ಇದು ಅತ್ಯಂತ ಸೂಕ್ಷ್ಮವಾದ ವಿಚಾರ. ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವುದು ಪ್ರಮುಖ ವಿಚಾರವಾಗಿದ್ದು, ಇದು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ ವಿಚಾರವಾಗಿದೆ. ಹೀಗಾಗಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲ್ಲ ಸುಪ್ರೀಂ ಕೋರ್ಟ್ ಹೇಳಿದೆ.

  • ಜಮ್ಮು ಕಾಶ್ಮೀರ ಪುನರ್‌ರಚನಾ ವಿಧೇಯಕ ಪಾಸ್ – ಮೋದಿ ಮುಕಟಕ್ಕೆ ಗರಿ

    ಜಮ್ಮು ಕಾಶ್ಮೀರ ಪುನರ್‌ರಚನಾ ವಿಧೇಯಕ ಪಾಸ್ – ಮೋದಿ ಮುಕಟಕ್ಕೆ ಗರಿ

    ನವದೆಹಲಿ: ಕಾಶ್ಮೀರ ಪುನರ್ ವಿಭಜನೆಯ ಐತಿಹಾಸಿಕ ಕ್ಷಣದ ಕೀರ್ತಿ ಮೋದಿ ಸರ್ಕಾರದ ಮುಕುಟಕ್ಕೆ ಸಂದಿದೆ. ರಾಜ್ಯಸಭೆಯಲ್ಲಿ ಸೋಮವಾರ ಪಾಸ್ ಆಗಿದ್ದ ಕಾಶ್ಮೀರ ಪುನರ್ ವಿಭಜನಾ ವಿಧೇಯಕಕ್ಕೆ ಇಂದು ಲೋಕಸಭೆಯಲ್ಲೂ ಭಾರೀ ಮತಗಳ ಅಂತರದಲ್ಲಿ ಅಂಗೀಕಾರವಾಗಿದೆ.

    ಜಮ್ಮು ಮತ್ತು ಕಾಶ್ಮೀರವನ್ನು ವಿಧಾನಸಭೆ ಸಹಿತ ಹಾಗೂ ಲಡಾಖ್ ಪ್ರದೇಶವನ್ನು ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ `ಜಮ್ಮು ಕಾಶ್ಮೀರ ಪುನರ್ ರಚನಾ ವಿಧೇಯಕ’ದ ಪರವಾಗಿ 370 ಹಾಗೂ ವಿರುದ್ಧವಾಗಿ 70 ವೋಟ್‍ಗಳು ಬಿದ್ದಿವೆ.

    ಗಮನಾರ್ಹ ಸಂಗತಿ ಎಂದರೆ ಕಾಶ್ಮೀರಕ್ಕಿದ್ದ 370 ವಿಶೇಷ ವಿಧಿಯನ್ನು ಲೋಕಸಭೆಯಲ್ಲಿ ಇಂದು 370 ಮತಗಳಲ್ಲಿ ರದ್ದುಗೊಳಿಸಲಾಗಿದೆ. ಪ್ರಧಾನಿ ಮೋದಿ 2.0 ಅವಧಿಯ 17ನೇ ಲೋಕಸಭೆಯ ಆರಂಭದಲ್ಲೇ ಭರ್ತಿ 26 ಬಿಲ್‍ಗಳು ಪಾಸ್ ಆಗಿದ್ದು ಅತ್ಯಂತ ಉತ್ಪಾದಕ ಅಧಿವೇಶನ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಮಧ್ಯೆ, ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿ ರದ್ದುಪಡಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಗೌರವ ಸಲ್ಲಿಸಿದರು.

    ಇದಕ್ಕೂ ಮುನ್ನ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚಿನ್ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದರು. ಲೋಕಸಭೆಯಲ್ಲಿ 370ನೇ ವಿಧಿ ರದ್ದು ಹಾಗೂ ಕಾಶ್ಮೀರದ ಪುನಾರಚನೆ ವಿಧೇಯಕ 2019 ಅನ್ನು ಲೋಕಸಭೆಯಲ್ಲಿ ಮಂಡಿಸಿ ಮಾತನಾಡಿದ ಅವರು, ‘ಆರ್ಟಿಕಲ್ 370ಯೂ ಭಾರತ ಮತ್ತು ಕಾಶ್ಮೀರದ ಮಧ್ಯೆ ಗೋಡೆ ಸೃಷ್ಟಿಸಿತ್ತು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡುವಾಗ ಪಾಕ್ ಆಕ್ರಮಿತ ಕಾಶ್ಮೀರವನ್ನೂ ಸೇರಿಸಿಯೇ ಮಾತನಾಡುತ್ತೇನೆ. ಅದಕ್ಕಾಗಿ ನಾನು ಪ್ರಾಣತ್ಯಾಗಕ್ಕೂ ಸಿದ್ಧ’ ಅಂತ ಸ್ಪಷ್ಪಪಡಿಸಿದರು.

    ಸಂಜೆ ವಿಧೇಯಕದ ಮೇಲೆ ಉತ್ತರ ನೀಡಿದ್ದ ಅಮಿತ್ ಶಾ, ಈ ಹಿಂದೆ ಆಂಧ್ರಪ್ರದೇಶ ವಿಭಜನೆ ವೇಳೆ ಕಾಂಗ್ರೆಸ್ ಯಾರನ್ನಾದರೂ ಸಂಪರ್ಕಿಸಿತ್ತಾ? ನಮಗೆ ಅವರ ನೀತಿ ಪಾಠ ಬೇಕಿಲ್ಲ ಅಂತ ತಿರುಗೇಟು ನೀಡಿದರು. ಹುರಿಯತ್ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು. ಅಲ್ಲದೆ, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿ ಇರಿಸಿಲ್ಲ ಎಂದರು. ಆದರೆ, ಸದನದಲ್ಲೇ ಅಮಿತ್ ಶಾ ಸುಳ್ಳು ಹೇಳುತ್ತಾರೆ. ಇಂಥಾ ಹಿಂದೂ ಸ್ಥಾನವನ್ನು ನಾನೆಂದು ನೋಡಿಯೇ ಇಲ್ಲ ಅಂತ ಫಾರೂಕ್ ಅಬ್ದುಲ್ಲಾ ಆಕ್ರೋಶ ಹೊರಹಾಕಿದ್ದಾರೆ.

    ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಭಾರತದ ನಿರ್ಧಾರದಿಂದ ಪುಲ್ವಾಮಾದಂತಹ ಘಟನೆಗಳು ಮರಕಳಿಸುತ್ತವೆ ಎಂದಿದ್ದಾರೆ. ಭಾರತದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರೀಕರಂತೆ ಕಾಣುತ್ತಿದ್ದು, ಜನಾಂಗೀಯ ನಿಂದನೆ ಆಗುತ್ತಿದೆ ಅಂತ ದೂರಿದ್ದಾರೆ. ಮೋದಿ ಸರ್ಕಾರ ಆರ್ ಎಸ್‍ಎಸ್ ತತ್ವ ಸಿದ್ಧಾಂತಗಳನ್ನು ಜಾರಿಗೆ ತರಲು ಮುಂದಾಗಿದ್ದು, ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೆಜ್ಜೆ ಇಟ್ಟಂತೆ ಕಾಣುತ್ತಿದೆ ಅಂತ ಆರೋಪಿಸಿದ್ದಾರೆ. ವಿಶ್ವಸಂಸ್ಥೆಗೆ ದೂರು ಕೊಡ್ತೇವೆ. ಅವಕಾಶ ಸಿಗುವ ಎಲ್ಲಾ ವೇದಿಕೆಗಳಲ್ಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸ್ತೇವೆ ಅಂತಲೂ ಇಮ್ರಾನ್ ಖಾನ್ ಗುಡುಗಿದ್ದಾರೆ.

  • ಲೋಕಸಭಾ ಆಯ್ತು, ವಿಧಾನಸಭಾ ಚುನಾವಣೆಯತ್ತ ಅಮಿತ್ ಶಾ ಕಣ್ಣು

    ಲೋಕಸಭಾ ಆಯ್ತು, ವಿಧಾನಸಭಾ ಚುನಾವಣೆಯತ್ತ ಅಮಿತ್ ಶಾ ಕಣ್ಣು

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಈಗ ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್ ಮೇಲೆ ಗಮನ ಕೇಂದ್ರಿಕರಿಸುತ್ತಿದೆ.

    ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ದೆಹಲಿ ಬಿಜೆಪಿ ಕಚೇರಿಯಲ್ಲಿ ಮೂರೂ ರಾಜ್ಯಗಳ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಈ ಸಭೆಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‍ಲಾಲ್ ಸೇರಿದಂತೆ ಅನೇಕ ನಾಯಕರು ಹಾಜರಾಗಿದ್ದಾರೆ.

    ಹರ್ಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಅಧಿಕಾರದಲ್ಲಿದೆ. ಈ ರಾಜ್ಯಗಳ ಚುನಾವಣೆ ಇದೇ ವರ್ಷ ನಡೆಯಲಿದೆ. ಹೀಗಾಗಿ ಅಮಿತ್ ಶಾ ಅವರು ಸ್ಥಳೀಯ ನಾಯಕರ ಜೊತೆಗೆ ವಿಶೇಷ ಸಭೆ ನಡೆಸಿದ್ದಾರೆ.

    ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ 2014ರಲ್ಲಿ ನಡೆದಿತ್ತು. ಆಗ ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 125, ಶಿವಸೇನೆ 60 ಸ್ಥಾನ ಪಡೆದಿದ್ದವು. ಆದರೆ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಹಾಗೂ ಶಿವಸೇನೆ ಮತ್ತೆ ಒಂದಾಗಿ ಮೈತ್ರಿ ಸರ್ಕಾರ ರಚಿಸಿದ್ದವು. ಈ ಬಾರಿಯೂ ಮೈತ್ರಿ ಮುಂದವರಿಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

    2014ರಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 81 ಕ್ಷೇತ್ರಗಳ ಪೈಕಿ ಬಿಜೆಪಿ 47 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ವೇಳೆ ಎಜೆಎಸ್‍ಯು ಬೆಂಬಲ ಪಡೆದು ಸರ್ಕಾರ ರಚಿಸಿತ್ತು.

    ಜಾರ್ಖಂಡ್ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 48 ಸಂಖ್ಯಾಬಲ ಪಡೆದು ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಅಮಿತ್ ಶಾ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  • ಜಮ್ಮು-ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಜಮ್ಮು-ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಶ್ರೀನಗರ: ಜಮ್ಮು-ಕಾಶ್ಮೀರ್ ಪ್ರತ್ಯೇಕವಾದಿ ಸಂಘಟನೆಯ ಐವರು ಮುಖಂಡರಿಗೆ ನೀಡಲಾಗಿದ್ದ ಭದ್ರತೆಯನ್ನು ಸರ್ಕಾರವು ಭಾನುವಾರ ಹಿಂಪಡೆಯಲು ನಿರ್ಧರಿದೆ. ಈ ಮೂಲಕ ಪುಲ್ವಾಮಾ ದಾಳಿಯ ಬಿಸಿಯನ್ನು ಪ್ರತ್ಯೇಕವಾದಿಗಳಿಗೆ ಮುಟ್ಟಿಸಲಾಗಿದೆ.

    ಮಿರ್ ವಾಯಿಜ್ ಉಮರ್ ಫಾರೂಕ್ ಸೇರಿದಂತೆ ಐವರು ಮುಖಂಡರು ಹಾಗೂ ಇತರೆ ಪ್ರತ್ಯೇಕವಾದಿಗಳಿಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲವೆಂದು ಜಮ್ಮು-ಕಾಶ್ಮೀರ ಸರ್ಕಾರ ಸೂಚನೆ ಹೊರಡಿಸಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

    ಪ್ರತ್ಯೇಕವಾಗಿ ಮುಖಂಡರು ಯಾರು?:
    ಜಮ್ಮು-ಕಾಶ್ಮೀರ ಪ್ರತ್ಯೇಕವಾದಿ ಮುಖಂಡರಾದ ಮಿರ್‍ವಾಯಿಜ್ ಉಮರ್ ಫಾರೂಕ್, ಶಬೀರ್ ಷಾ, ಹಶಿಮ್ ಖುರೇಷಿ, ಬಿಲಾಲ್ ಲೋನ್ ಮತ್ತು ಅಬ್ದುಲ್ ಘನಿ ಭಟ್ ಇವರಿಗೆ ಈ ಹಿಂದೆ ಸರ್ಕಾರದಿಂದ ಭದ್ರತೆ ನೀಡಲಾಗಿತ್ತು. ಆದರೆ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಯೋಧರು ಹುತಾತ್ಮರಾಗಿದ್ದರಿಂದ ಪ್ರತ್ಯೇಕವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ.

    ಈ ಆದೇಶದ ಅನ್ವಯ, ಪ್ರತ್ಯೇಕವಾದಿಗಳಿಗೆ ನೀಡಲಾಗಿದ್ದ ಎಲ್ಲ ಭದ್ರತಾ ಸಿಬ್ಬಂದಿ ಹಾಗೂ ವಾಹನಗಳನ್ನು ಭಾನುವಾರ ಸಂಜೆ ಹಿಂಪಡೆಯಲಾಗುತ್ತದೆ. ಇನ್ನುಮುಂದೆ ಅವರಿಗೆ ಯಾವುದೇ ಭದ್ರತೆಯನ್ನು ಒದಗಿಸುವುದಿಲ್ಲ. ಅವರಿಗೆ ಸರ್ಕಾರ ಒದಗಿಸಿದ ಎಲ್ಲ ರೀತಿಯ ಸೌಲಭ್ಯಗಳನ್ನು ಹಿಂಪಡೆಯಲಾಗುತ್ತದೆ.

    ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಶನಿವಾರ ನಡೆಸಿದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಗೌಬಾ, ಇಂಟಲಿಜೆನ್ಸ್ ಬ್ಯೂರೋ ನಿರ್ದೇಶಕ ರಾಜೀವ್ ಜೈನ್ ಉಪಸ್ಥಿತರಿದ್ದರು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಜಮ್ಮು-ಕಾಶ್ಮೀರದಲ್ಲಿ ಆತಂಕ ಸೃಷ್ಟಿಸುವ ಗುಂಪುಗಳನ್ನು ಹತ್ತಿಕ್ಕಲ್ಲು ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳ ಮೂಲದಿಂದ ಕೇಳಿಬಂದಿದೆ.

    ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಗೃಹಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆಯಿಂದ ನಿಧಿ ಪಡೆಯುತ್ತಿರುವವರಿಗೆ ನೀಡಿರುವ ಭದ್ರತೆಯನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಅಲ್ಲಿನ ಕೆಲವರು ಐಎಸ್‍ಐ ಮತ್ತು ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅಂತವರಿಗೆ ಭದ್ರತೆ ನೀಡುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು.

    ಕಾಶ್ಮೀರದ ನೆಲದಲ್ಲಿ ಸಂಭವಿಸುತ್ತಿರುವ ಪ್ರತಿ ಘಟನೆಗೂ ಪ್ರತ್ಯೇಕವಾದಿಗಳು ಹಾಗೂ ಮುಖಂಡರು ವಿಷಾದ ವ್ಯಕ್ತಪಡಿಸುತ್ತಾರೆ. ಕಾಶ್ಮೀರ ವಿವಾದದಿಂದಾಗಿ ಈ ಪ್ರದೇಶ ಹಾನಿಗೆ ಒಳಗಾಗುತ್ತಿದೆ ಎಂದು ಪ್ರತ್ಯೇಕವಾದಿ ಮುಖಂಡರಾದ ಸೈಯದ್ ಅಲಿ ಷಾಹ್, ಗೀಲಾನಿ, ಮಿರ್‍ವಾಯಿಜ್ ಉಮರ್ ಫಾರೂಕ್, ಯಾಸಿನ್ ಮಲಿಕ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv