Tag: ಕೆ.ಸಿ. ವೇಣುಗೋಪಾಲ್

  • ಕಾಂಗ್ರೆಸ್ ಉಸ್ತುವಾರಿ ಬದಲಿಸಿ- ಖರ್ಗೆ, ಸಿದ್ದರಾಮಯ್ಯ ನಡ್ವೆ ಜಟಾಪಟಿ!

    ಕಾಂಗ್ರೆಸ್ ಉಸ್ತುವಾರಿ ಬದಲಿಸಿ- ಖರ್ಗೆ, ಸಿದ್ದರಾಮಯ್ಯ ನಡ್ವೆ ಜಟಾಪಟಿ!

    ಬೆಂಗಳೂರು: ಲೋಕಸಮರದಲ್ಲಿ ಸೋಲಿನ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಜಟಾಪಟಿ ಆರಂಭವಾಗಿದೆ.

    ಹೌದು. ಹಾಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನ ಬದಲಿಸುವ ಬಗ್ಗೆಯೇ ಇವರಿಬ್ಬರ ವಿವಾದದ ಮೂಲವಾಗಿದೆ. ವೇಣುಗೋಪಾಲ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ನಂತರ ಕಳೆದ ವಿಧಾನಸಭೆ ಹಾಗೂ ಈ ಬಾರಿಯ ಲೋಕಸಭಾ ಚುನಾವಣೆ ಎರಡರಲ್ಲೂ ಪಕ್ಷ ಸೋತಿದೆ.

    ವೇಣುಗೋಪಾಲ್, ಸಿದ್ದರಾಮಯ್ಯ ಆ್ಯಂಡ್ ಟೀಮ್ ಜೊತೆ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ಹಿರಿಯ ನಾಯಕರ ಈ ಅಭಿಪ್ರಾಯದಂತೆ ವೇಣುಗೋಪಾಲ್ ರನ್ನ ಬದಲಿಸಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಯಾವ ಕಾರಣಕ್ಕೂ ವೇಣುಗೋಪಾಲ್ ಬದಲಾವಣೆ ಬೇಡ ಎಂದು ಕೌಂಟರ್ ಕೊಟ್ಟಿದ್ದಾರೆ. ಪಕ್ಷ ಸಂಕಷ್ಟದಲ್ಲಿದೆ. ವೇಣುಗೋಪಾಲ್ ಗೆ ರಾಜ್ಯ ರಾಜಕಾರಣದ ಸಮಗ್ರ ಮಾಹಿತಿ ಇದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಅವರ ಬದಲಾವಣೆ ಬೇಡ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ. ಆದರೆ ರಾಜ್ಯದಲ್ಲಿ ಪಕ್ಷದ ಈ ಸಂಕಷ್ಟದ ಸ್ಥಿತಿಗೆ ವೇಣುಗೋಪಾಲ್ ಹೊಂದಾಣಿಕೆ ರಾಜಕಾರಣವೇ ಕಾರಣ ಎಂಬುದು ಖರ್ಗೆಯವರ ವಾದವಾಗಿದೆ ಎನ್ನಲಾಗಿದೆ.

    ವೇಣುಗೋಪಾಲ್ ಮಾತು ನಂಬಿ ಕಳೆದ 4 ವರ್ಷದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಮಾತಿಗೆ ಮಣೆ ಹಾಕಿದೆ. ಅದರ ಪರಿಣಾಮ 128 ಸ್ಥಾನದಲ್ಲಿದ್ದ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 80 ಸ್ಥಾನಕ್ಕೆ ಕುಸಿಯಿತು. 10 ಸಂಸದರಿದ್ದ ಪಕ್ಷದಲ್ಲಿ ಈಗ ಒಬ್ಬನೇ ಸಂಸದ ಅನ್ನೋ ಸ್ಥಿತಿ ಎದುರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಒಂದು ಹಂತದಲ್ಲಿ ನಿಜ ಎನ್ನಿಸಿದೆ. ಆದರೆ ಕಳೆದ 6 ವರ್ಷದಿಂದ ಸಿದ್ದರಾಮಯ್ಯರನ್ನೇ ನಂಬಿದ್ದ ರಾಹುಲ್ ಗಾಂಧಿ ಈಗ ಗೊಂದಲಕ್ಕೀಡಾಗಿದ್ದಾರೆ.

    ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಗುಲಾಂ ನಬಿ ಆಜಾದ್ ಅಥವಾ ಚಲ್ಲಕುಮಾರ್ ಯಾರನ್ನಾದರೂ ನೇಮಿಸಿ ಎಂಬ ಸಲಹೆಯನ್ನು ಕೂಡ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ. ಈ ಕುರಿತು ಶೀಘ್ರವಾಗಿ ಸೂಕ್ತವಾದ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಹೈಕಮಾಂಡ್ ಕೂಡ ನೀಡಿದೆ ಎಂದು ಹೇಳಲಾಗುತ್ತಿದೆ.

    ಆದರೆ ಕುತೂಹಲ ಸಂಗತಿಯೆಂದರೆ ಉಸ್ತುವಾರಿ ಬದಲಾವಣೆ ಮೂಲಕ ರಾಜ್ಯ ರಾಜಕಾರಣದ ಮೇಲೆ ಹಾಗೂ ಪಕ್ಷದಲ್ಲಿ ಹಿಡಿತ ಸಾಧಿಸಲು ಮಲ್ಲಿಕಾರ್ಜುನ ಖರ್ಗೆ ಯತ್ನಿಸುತ್ತಿದ್ದಾರೆ ಅನ್ನೋದು ಸಿದ್ದರಾಮಯ್ಯನವರ ಆತಂಕವಾಗಿದೆ. ಇನ್ನೊಂದೆಡೆ ವೇಣುಗೋಪಾಲ್ ಇರಲಿ ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಅನ್ನೋ ಅನುಮಾನ ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮೂಡಿರುವುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

  • ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ!

    ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ!

    ಬೆಂಗಳೂರು: ಆಪರೇಷನ್ ಕಮಲದಿಂದ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಕಸರತ್ತು ಶುರುವಾಗಿದೆ. ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ನಾಯಕರು ಆಪರೇಷನ್ ಕಮಲಕ್ಕೆ ವಿರುದ್ಧವಾಗಿ ಹೂಡಬೇಕಾದ ತಂತ್ರಗಳ ಬಗ್ಗೆ ಚರ್ಚಿಸಿದರು.

    ಇದೇ ವೇಳೆ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸೋದು, ಯಾರನ್ನು ತೆಗೆಯೋದು ಅನ್ನೋದ್ರ ಬಗ್ಗೆ ಚರ್ಚೆ ನಡೀತು. ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಅನ್ನೋ ಬಗ್ಗೆ ಕೆಸಿ ವೇಣುಗೋಪಾಲ್ ಜೊತೆ ಚರ್ಚಿಸಿ ಇಂದು ನಿರ್ಧಾರ ತಿಳಿಸೋದಾಗಿ ಹೇಳಿದರು ಎನ್ನಲಾಗಿದೆ.

    ಈ ಮಧ್ಯೆ ಇಂದು ರಾಜ್ಯಕ್ಕೆ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಆಗಮಿಸುತ್ತಿದ್ದು, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ನಿನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾಗಿ, ಪ್ರಸ್ತುತ ರಾಜಕೀಯ ವಿದ್ಯಾಮಾನ ಹಾಗೂ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದ್ರು. ಇದೇ ವೇಳೆ ಬಿಜೆಪಿ ಆಪರೇಷನ್ ಕಮಲಕ್ಕೆ ಪ್ರತಿತಂತ್ರದ ಬಗ್ಗೆ ಸುಮಾರು 3 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

    ಇತ್ತ ಆಪರೇಷನ್ ಕಮಲದ ಭೀತಿಯಲ್ಲಿರೋ ಸರ್ಕಾರವನ್ನ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಸಂಪುಟ ವಿಸ್ತರಣೆಯೂ ಸೇರಿದಂತೆ ಸಮಾಧಾನ ತಂತ್ರಕ್ಕೆ ಮೊರೆ ಹೋಗಿದೆ. ಮೂರು ದಿನಗಳಲ್ಲಿ ಎರಡು ಬಾರಿ ಸಿದ್ದರಾಮಯ್ಯರನ್ನ ಭೇಟಿ ಆಗಿದ್ದ ಸಿಎಂ ಕುಮಾರಸ್ವಾಮಿ ಸೂತ್ರ ಸಿದ್ಧಪಡಿಸಿಕೊಂಡಿದ್ದಾರೆ. ಇಂದು ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಕರ್ನಾಟಕ್ಕೆ ಆಗಮಿಸುತ್ತಿದ್ದು ಯಾರನ್ನ ಕೈ ಬಿಡಬೇಕು, ಯಾರನ್ನ ಮಂತ್ರಿ ಮಾಡಬೇಕು ಅನ್ನೋ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

  • ಕೈ ವಿರುದ್ಧ ‘ರೋಷ ‘ನ್ ಬೇಗ್ – ಬೆಂಗ್ಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

    ಕೈ ವಿರುದ್ಧ ‘ರೋಷ ‘ನ್ ಬೇಗ್ – ಬೆಂಗ್ಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

    ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರು ಪಕ್ಷದ ನಾಯಕರ ವಿರುದ್ಧವೇ ಸಿಡಿದೆದ್ದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ದೌಡಾಯಿಸಿದ್ದಾರೆ.

    ರೋಷನ್ ಬೇಗ್ ಹೇಳಿಕೆಗೆ ಕೆಸಿ ವೇಣುಗೋಪಾಲ್ ಅವರು ತೀವ್ರ ಕೆಂಡಾಮಂಡಲವಾಗಿದ್ದಾರೆ. ಹೀಗಾಗಿ ಇಂದು ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸಕ್ಕೆ ಸಂಜೆ ಭೇಟಿ ನೀಡಿದರು. ಇತ್ತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಡಾ.ಜಿ ಪರಮೇಶ್ವರ್ ಅವರು ಕೂಡ ಆಗಮಿಸಿದರು. ಈ ಮೂಲಕ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯನವರ ನಿವಾಸದಲ್ಲಿ ಕುಳಿತು ಮುಂದಿನ ರಣ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.

    ಮಾಜಿ ಸಚಿವ ಹೇಳಿಕೆ, ಕಾಂಗ್ರೆಸ್ ನಾಯಕರ ಅಸಮಾಧಾನ, ಎಕ್ಸಿಟ್ ಪೋಲ್ ಸೇರಿದಂತೆ ವಿಚಾರ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಿದ್ದಾರೆ. ಈ ವೇಳೆ ಆಪರೇಷನ್ ಕಮಲದ ಪ್ರಯತ್ನ ಆರಂಭವಾಗಲಿದೆ ಎಂದು ಸಿದ್ದರಾಮಯ್ಯ ಅವರು ಕೆ.ಸಿ.ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರು, ನಾನೊಬ್ಬನೇ ಎಲ್ಲರನ್ನೂ ಸರಿಪಡಿಸುವುದಕ್ಕೆ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಶಾಸಕರ ಅಸಮಾಧಾನ ಸರಿಪಡಿಸುವುದು ಸಿಎಂ ಕುಮಾರಸ್ವಾಮಿ ಅವರ ಕೆಲಸ ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಜೆಡಿಎಸ್ ನಾಯಕರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಇದರಿಂದಾಗಿ ನಮ್ಮ ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಸಿಎಂ ವರ್ತನೆಯೂ ನಮ್ಮ ಶಾಸಕರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ, ಅದನ್ನು ಸರಿಪಡಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

    ಸಿದ್ದರಾಮಯ್ಯನವರ ಮಾತಿನಿಂದ ವಿಚಲಿತರಾದ ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್ ಅವರನ್ನ ಸಿಎಂ ಕುಮಾರಸ್ವಾಮಿ ಅವರ ಭೇಟಿಗೆ ಕರೆದೊಯ್ದಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಮಂಗ್ಳೂರು `ಕೈ’ ನಾಯಕರಲ್ಲಿ ವೇಣುಗೋಪಾಲ್ ಮನವಿ!

    ಮಂಗ್ಳೂರು `ಕೈ’ ನಾಯಕರಲ್ಲಿ ವೇಣುಗೋಪಾಲ್ ಮನವಿ!

    ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಟ್ಟಿ ರಿಲೀಸ್ ಮಾಡಿದ್ದು, ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಸಚಿವ ಯುಟಿ. ಖಾದರ್ ನೇತೃತ್ವದಲ್ಲಿ ಟಿಕೆಟ್ ಗಾಗಿ ಜಿಲ್ಲಾ ನಾಯಕರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಕೈ ನಾಯಕರಲ್ಲಿ ಮನವಿ ಮಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೇ ಅಭ್ಯರ್ಥಿ ಆದ್ರೂ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಭ್ಯರ್ಥಿ ಗೆಲ್ಲಿಸಬೇಕಿದೆ ಎಂದು ವೇಣುಗೋಪಾಲ್ ಕೈ ನಾಯಕರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

    ವೇಣುಗೋಪಾಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಮಂಗಳೂರು ಕಾಂಗ್ರೆಸ್ ಅಭ್ಯರ್ಥಿ ವಿಚಾರದ ಕುರಿತು ವೇಣುಗೋಪಾಲ್ ಬಳಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೇವೆ. ವರಿಷ್ಠರ ಬಳಿ ಪಕ್ಷದ ಮುಖಂಡರು ಸಭೆ ಅಗಿದೆ. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸಬೇಕಿದೆ. ಹಾಲಿ ಸಂಸದರ ವೈಫಲ್ಯದಿಂದ ಅಭಿವೃದ್ಧಿ ಕುಂಠಿತವಾಗಿದೆ. ವೇಣುಗೋಪಾಲ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಮೈತ್ರಿ ಸರಕಾರ ಅಭಿವೃದ್ಧಿ ಮಾಡಿದೆ.

    ಇದೇ ವೇಳೆ ಮಾಜಿ ಸಚಿವ ರಮಾನಾಥ್ ರೈ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸಂಸದರಿದ್ದಾಗ ಮಂಗಳೂರು ಅಭಿವೃದ್ಧಿಯಾಗಿತ್ತು. ಬಿಜೆಪಿ ಸಂಸದರಿದ್ದಾಗ ಯಾವುದೇ ಅಭಿವೃದ್ಧಿಯಾಗಿಲ್ಲ. ಸಂಪೂರ್ಣವಾಗಿ ಕೆಲಸಗಳು ತಟಸ್ಥವಾಗಿದೆ. ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದ್ರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಸೋಲಿಸುವುದೇ ನಮ್ಮ ಹೋರಾಟವಾಗಿದೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ನಾವೆಲ್ಲ ಟಿಕೆಟ್ ಆಕಾಂಕ್ಷಿಗಳು. ನಮ್ಮಲ್ಲಿ ಒಗ್ಗಟ್ಟಿದ್ರೆ ಬದಲಾವಣೆ ಸಾಧ್ಯ. ಸಂಘಪರಿವಾರವೇ ಹಾಲಿ ಸಂಸದರನ್ನು ಕಳಪೆ ಎಂದು ಹೇಳಿದೆ. ವಿಜಯಾ ಬ್ಯಾಂಕ್ ನ್ನು ಬರೋಡಾ ಬ್ಯಾಂಕ್ ಜೊತೆ ಹೊಂದಾಣಿಕೆ ಮಾಡ್ತಿದ್ದಾರೆ. ಮಂಗಳೂರು ಏರ್ ಪೋರ್ಟ್ ಖಾಸಗಿ ಕಂಪನಿಗೆ ನೀಡಿದೆ. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಮಾಡ್ತೇವೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಿದ್ದೇವೆ. ಸದ್ಯ ಮಂಗಳೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಸಂಸದ ನಳಿನ್ ಕುಮಾರ್ ಅಶಾಂತಿ ವಾತವರಣ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ರು.

    https://www.youtube.com/watch?v=srybZEOyHLQ

  • ಮೈತ್ರಿ ನಾಯಕರಲ್ಲಿ ಮುಗಿಯದ ಹಗ್ಗಜಗ್ಗಾಟ – ದೇವೇಗೌಡ್ರನ್ನು ಭೇಟಿಯಾದ್ರು ವೇಣುಗೋಪಾಲ್

    ಮೈತ್ರಿ ನಾಯಕರಲ್ಲಿ ಮುಗಿಯದ ಹಗ್ಗಜಗ್ಗಾಟ – ದೇವೇಗೌಡ್ರನ್ನು ಭೇಟಿಯಾದ್ರು ವೇಣುಗೋಪಾಲ್

    – ತುಮಕೂರಿಗಾಗಿ ಮುಂದುವರಿದ ‘ಕೈ’ ನಾಯಕರ ಚೌಕಾಶಿ
    – ಕೈ ಟೆಕೆಟ್ ಆಕಾಂಕ್ಷಿಗಳಿಗೆ ನಿರಾಸೆ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರಾತ್ರಿ ಜೆಡಿಎಸ್ ವರಿಷ್ಠ ದೇವೇಗೌಡರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್ ಸೂಚನೆ ಮೇರೆಗೆ ಪದ್ಮನಾಭ ನಗರಕ್ಕೆ ದೌಡಾಯಿಸಿದ ವೇಣುಗೋಪಾಲ್ ಕಾರ್ಯಕರ್ತರ ಅಸಮಾಧಾನ ಸೇರಿದಂತೆ ಹಲವು ವಿಚಾರಗಳ ಕುರಿತು ಗೌಡರೊಂದಿಗೆ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಸಿಎಂ ಕುಮಾರಸ್ವಾಮಿ ಸಹ ಹಾಜರಿದ್ದರು.

    ಸಭೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇಂದು ಸಮಯದ ಅಭಾವದಿಂದಾಗಿ ಎಲ್ಲಾ ವಿಷಯಗಳ ಚರ್ಚೆ ಸಾಧ್ಯವಾಗಲಿಲ್ಲ. ಹೀಗಾಗಿ ಬೆಳಗ್ಗೆ ಪುನಃ ಸಭೆ ಸೇರಲಿದ್ದೇವೆ ಎಂದು ತಿಳಿಸಿದರು. ಸಭೆಯಲ್ಲಿ ವೇಣುಗೋಪಾಲ್ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್, ಸಚಿವ ಡಿಕೆ ಶಿವಕುಮಾರ್ ಸಾಥ್ ನೀಡಿದ್ದರು.

    ಕೈ ಟೆಕೆಟ್ ಆಕಾಂಕ್ಷಿಗಳಿಗೆ ನಿರಾಸೆ:
    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಇಂದು ನಡೆಯಬೇಕಿದ್ದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಮತ್ತೆ ಮುಂದೂಡಿಕೆಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಲಭ್ಯತೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿಕೆಯಾಗಿದ್ದು ಮಾರ್ಚ್ 22 ಕ್ಕೆ ರಾಜ್ಯ ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ ನಡೆಯಲಿದೆ.

    ಈ ಹಿಂದೆ ಮಾರ್ಚ್ 16 ರಂದು ಸಭೆ ನಡೆಸಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದರೆ ರಾಹುಲ್ ಗಾಂಧಿ ಉತ್ತರಾಖಂಡ ಪ್ರವಾಸ ಹಿನ್ನೆಲೆ ಸಭೆ ರದ್ದಾಗಿತ್ತು. ಸಭೆ ರದ್ದಾದ ಬಳಿಕ ರಾಜ್ಯದಿಂದ ವರದಿ ತಂದಿದ್ದ ಕಾಂಗ್ರೆಸ್ ನಾಯಕರು ಬರಿಗೈಯಲ್ಲಿ ವಾಪಸ್ ತೆರಳಿದ್ದರು. ಇಂದು ಸಭೆ ನಡೆಸಿ ಅಂತಿಮ ಪಟ್ಟಿ ಹೊರಬರುತ್ತದೆ ಎನ್ನಲಾಗಿತ್ತು. ಆದರೆ ಇಂದೂ ರಾಹುಲ್ ಗಾಂಧಿ ಅರುಣಾಚಲ ಪ್ರದೇಶ ಪ್ರವಾಸದ ಹಿನ್ನೆಲೆಯಲ್ಲಿ ಮತ್ತೆ ಸಭೆ ರದ್ದಾಗಿದೆ. ರಾಹುಲ್ ಗಾಂಧಿ ಸಾಲು ಸಾಲು ಪ್ರವಾಸದಿಂದ ಸಭೆ ರದ್ದಾಗುತ್ತಿದ್ದು, ಟಿಕೆಟ್ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಎರಡನೇ ಬಾರಿ ನಿರಾಸೆಯಾಗಿದೆ.

  • ಎಲೆಕ್ಷನ್‍ಗೆ 2 ಕೋಟಿ ಕಲೆಕ್ಷನ್ ಪ್ರಕರಣ – ಕೃಷ್ಣ ಬೈರೇಗೌಡ ವಿರುದ್ಧ ಎಚ್‍ಡಿಕೆ ಕಂಪ್ಲೆಂಟ್ !

    ಎಲೆಕ್ಷನ್‍ಗೆ 2 ಕೋಟಿ ಕಲೆಕ್ಷನ್ ಪ್ರಕರಣ – ಕೃಷ್ಣ ಬೈರೇಗೌಡ ವಿರುದ್ಧ ಎಚ್‍ಡಿಕೆ ಕಂಪ್ಲೆಂಟ್ !

    ಬೆಂಗಳೂರು: ಎಲೆಕ್ಷನ್ ಕಲೆಕ್ಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕೆ. ಸಿ ವೇಣುಗೋಪಾಲ್ ಅವರಿಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ದೂರಿನಲ್ಲಿ ಏನ್ ಹೇಳಿದ್ದಾರೆ..?
    ಏನ್ ಬ್ರದರ್.. ನಿಮ್ಮ ಸಚಿವರು.. ಹೀಗಂತೆ.. ಈ ಸಂದರ್ಭದಲ್ಲಿ ಇದು ಬೇಕಿತ್ತಾ..? ಚುನಾವಣೆಯ ಹೊತ್ತಲ್ಲಿ ಎರಡು ಪಕ್ಷಗಳಿಗೂ ಹೊಡೆತ ಅಲ್ವೇನ್ರೀ.. ಏನಾದ್ರೂ ಮಾಡಿ..! ಎರಡು ಬಾರಿ ಸಚಿವರಾಗವ್ರೇ.. ಮನಿ ಮ್ಯಾಟರ್ ಡೀಲ್ ಮಾಡೋದು ಗೊತ್ತಿಲ್ವ..? ನೋಡಿ ನಾವೇ ಬಿಜೆಪಿಗೆ ಅಸ್ತ್ರ ಕೊಟ್ಟಂಗೆ ಆಯ್ತು.. ಸ್ವಲ್ಪ ನಿಮ್ಮವರಿಗೆ ಹೇಳಿ ಎಂದು `ಕೈ’ ಉಸ್ತುವಾರಿ ವೇಣುಗೋಪಾಲ್‍ಗೆ ಕರೆ ಮಾಡಿ ಎಚ್‍ಡಿಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

    ಸೇಡು ತೀರಿಸಿಕೊಂಡ ಸಿಎಂ:
    ಸರ್ಕಾರ ರಚನೆ ಮಾಡುವ ಆರಂಭದಲ್ಲೇ ಕೃಷ್ಣ ಬೈರೇಗೌಡರು, ಸಚಿವ ಎಚ್ ಡಿ ರೇವಣ್ಣ ಅವರು ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಆ ಸೇಡನ್ನು ಕುಮಾರಸ್ವಾಮಿ ಅವರು ಇಂದು ತೀರಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸಚಿವರು ಸ್ಪಷ್ಟನೆ:
    ಹಣ ಸೀಜ್ ಮಾಡಿರುವ ಕುರಿತು ನಿನ್ನೆಯೇ ಪ್ರತಿಕ್ರಿಯೆ ನೀಡಿರುವ ಕೃಷ್ಣ ಬೈರೇಗೌಡ, ಈ ಬಗ್ಗೆ ನಮಗೆ ಗೊತ್ತಿಲ್ಲ. ಅಲ್ಲದೇ ನಮ್ಮ ಇಲಾಖೆಯ ಯಾವ ಅಧಿಕಾರಿಯೂ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ಆಗಲಿ ಅಥವಾ ನನಗಾಗಲಿ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

    2 ಕೋಟಿ ರೂ. ಸೀಜ್:
    ಶುಕ್ರವಾರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್‍ಗೆ ಆದಾಯ ತೆರಿಗೆ ಇಲಾಖೆಯವರು ಶಾಕ್ ಕೊಟ್ಟಿದ್ದರು. ಆರ್‍ಡಿಪಿಆರ್ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ ಪಾಟೀಲ್, ಬೆಂಗಳೂರಿನ ಗಾಂಧಿನಗರದ ಹೋಟೆಲ್ ನಲ್ಲಿ ಮೂರು ರೂಮ್ ಬುಕ್ ಮಾಡಿದ್ದರು. ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಆಗ ಕೊಠಡಿ ಸಂಖ್ಯೆ 104, 105, 115ರಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಐಟಿ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ ಪಾಟೀಲ್ ಪರಾರಿಯಾಗಿದ್ದಾರೆ. 500 ಮತ್ತು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು.

    ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆಲಸ ಮಾಡುತ್ತಿದ್ದರು. ಹಾವೇರಿಯಲ್ಲೂ ಮೂರು ಮನೆಯನ್ನು ಕಟ್ಟಿಸಿದ್ದಾರೆ. ಇವರು ಬೆಂಗಳೂರಿಗೆ ಹಣ ಸಾಗಾಟ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನ ಜಾವ 3.30ಕ್ಕೆ ದಾಳಿ ಮಾಡಿದ್ದರು. ನಾರಾಯಣಗೌಡ ತನ್ನ ಕಾರಿನ ಮೂಲಕ ಹಣವನ್ನು ತಂದು ಹೋಟೆಲಿನಲ್ಲಿ ಸಂಗ್ರಹಿಸಿಟ್ಟಿದ್ದರು. ಈ ಹಣ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಅಲ್ಲದೆ ಹಣದ ಹಿಂದೆ ಸಚಿವರ ಪಾತ್ರವಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೋಸ್ತಿ ಸೀಟು ಹಂಚಿಕೆ ಇಂದು ಫೈನಲ್ – ದೇವೇಗೌಡ್ರನ್ನ ರಾಹುಲ್ ಭೇಟಿ

    ದೋಸ್ತಿ ಸೀಟು ಹಂಚಿಕೆ ಇಂದು ಫೈನಲ್ – ದೇವೇಗೌಡ್ರನ್ನ ರಾಹುಲ್ ಭೇಟಿ

    ಬೆಂಗಳೂರು: ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ದೋಸ್ತಿ ಸರ್ಕಾರದ ನಾಯಕರ ನಡುವಿನ ಗೊಂದಲಕ್ಕೆ ಇಂದು ತೆರೆ ಬೀಳಲಿದೆ.

    ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ಈಗಾಗಲೇ ರಾಜ್ಯ ನಾಯಕರು ಮೊದಲ ಹಂತದ ಮಾತುಕತೆ ನಡೆಸಿದ್ದು ಇಂದು ಉಭಯ ಪಕ್ಷದ ವರಿಷ್ಠರು ಅಂತಿಮ ಮಾತುಕತೆ ನಡೆಸಲಿದ್ದಾರೆ.

    ಈ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿ ಮಾಹಿತಿ ಪಡೆದಿದ್ದು ಅಂತಿಮವಾಗಿ ಸೀಟು ಹಂಚಿಕೆ ಒಪ್ಪಂದ ಕುರಿತು ಇಂದು ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಶೃಂಗೇರಿಯಲ್ಲಿ ಯಾಗ:
    ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ದೊಡ್ಡಗೌಡರು ಇಷ್ಟದೈವದ ಮೊರೆಹೋಗಲಿದ್ದಾರೆ ಎನ್ನಲಾಗಿದೆ. ಮಂಡ್ಯ, ಹಾಸನ ಲೋಕಸಭಾ ಕಣದಲ್ಲಿರೋ ಮೊಮ್ಮಕ್ಕಳಿಗಾಗಿ ಇಂದು ರಾತ್ರಿ ಶೃಂಗೇರಿಗೆ ಭೇಟಿ ನೀಡಿ ವಿಶೇಷ ಪೂಜೆ ನಡೆಸಲಿದ್ದಾರೆ.

    ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ, ನಿಖಿಲ್-ಪ್ರಜ್ವಲ್ ಸೇರಿ ಕುಟುಂಬದ ಸದಸ್ಯರು ಭಾಗಿಯಾಗುವ ಸಾಧ್ಯತೆಯಿದೆ. ಮಠದ ಯಾಗ ಶಾಲೆಯಲ್ಲಿ ಕಳೆದೊಂದು ವಾರದಿಂದ ಚಂಡಿಕಾಯಾಗ ನಡೆಯುತ್ತಿದ್ದು ಯಾಗದ ಪೂರ್ಣಾಹುತಿಗಾಗಿ ದೊಡ್ಡಗೌಡರ ಕುಟುಂಬ ಆಗಮಿಸಲಿದೆ. ಇಂದು ರಾತ್ರಿ ಮಠಕ್ಕೆ ಆಗಮಿಸಿ ನಾಳೆ ಹೋಮ-ಹವನದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲಕ್ಕೆ 200 ಕೋಟಿ ಹಣ ಎಲ್ಲಿಂದ ಬಂತು – ಮೋದಿ ಉತ್ತರಿಸಬೇಕು: ವೇಣುಗೋಪಾಲ್

    ಆಪರೇಷನ್ ಕಮಲಕ್ಕೆ 200 ಕೋಟಿ ಹಣ ಎಲ್ಲಿಂದ ಬಂತು – ಮೋದಿ ಉತ್ತರಿಸಬೇಕು: ವೇಣುಗೋಪಾಲ್

    ನವದೆಹಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಪರೇಷನ್ ಕಮಲದ ಆಡಿಯೋದಲ್ಲಿ ಅವರದೇ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರನ್ನು ಉಲ್ಲೇಖಿಸಿದ್ದು, ಈ ಸಂಬಂಧ ಪ್ರಧಾನಿಗಳೇ ನೇರವಾಗಿ ಉತ್ತರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.

    ಇಂದು ದೆಹಲಿಯಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ಆಡಿಯೋ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ವೇಣುಗೋಪಾಲ್, ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ನಿರಂತರವಾಗಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸುತ್ತಿದೆ, ಬಿಜೆಪಿ ಏನೇ ಪ್ರಯತ್ನ ಮಾಡಿದರೂ ಸರ್ಕಾರ ಅಸ್ಥಿರ ಮಾಡಲು ಸಾಧ್ಯವಿಲ್ಲ ಎಂದರು.

    ಆಡಿಯೋದಲ್ಲಿ ಹದಿನೆಂಟು ಶಾಸಕರು ಸಂಪರ್ಕದಲ್ಲಿ ಇದ್ದಾರೆ. ಪ್ರತಿ ಶಾಸಕರಿಗೆ ಹತ್ತು ಕೋಟಿ, ಸ್ಪೀಕರ್‍ಗೆ 50 ಕೋಟಿ ಹಾಗೂ ಸುಪ್ರೀಂಕೋರ್ಟ್ ಜಡ್ಜ್ ಗಳನ್ನು ಮ್ಯಾನೇಜ್ ಮಾಡುವುದಾಗಿ ಹೇಳಿದ್ದಾರೆ. ಶಾಸಕರಿಗೆ ಹಣ ಕೊಡಲು 200 ಕೋಟಿ ಹಣ ಬಿಜೆಪಿಗೆ ಎಲ್ಲಿಂದ ಬಂತು ಎನ್ನುವುದನ್ನು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

    ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಕರ್ನಾಟಕದಲ್ಲಿನ ಸಾಂವಿಧಾನ ಬದ್ಧ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪ ಜಂಟಿ ಕಾರ್ಯಚರಣೆ ನಡೆಸಿದ್ದಾರೆ. ಕುದುರೆ ವ್ಯಾಪಾರಕ್ಕಾಗಿ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿದ್ದು ಇದ್ದೆಲ್ಲವು ಕಪ್ಪು ಹಣವೋ ಬಿಳಿ ಹಣವೋ ಎಂದು ಪ್ರಶ್ನಿಸಿದ್ರು.

    ಪ್ರತಿ ಶಾಸಕನಿಗೆ ಹತ್ತು ಕೋಟಿ ಡಿಮ್ಯಾಂಡ್ ಮಾಡಿದ್ದ ಸ್ಪೀಕರ್‍ಗೆ ಐವತ್ತು ಕೋಟಿ ನೀಡುವ ಬಗ್ಗೆ ಆಡಿಯೋ ದಾಖಲೆ ಇದೆ. ಆಪರೇಷನ್ ಕಮಲಕ್ಕೆ ಈ ಪ್ರಮಾಣದ ಹಣ ಖರ್ಚು ಮಾಡಲು ಹೊರಟಿರುವ ಬಿಜೆಪಿಗೆ ಆ ಹಣ ಎಲ್ಲಂದ ಬಂತು? ಈ ಮೂಲಕ ಬಿಜೆಪಿ ದರ್ಟಿ ಪಾಲಿಟಿಕ್ಸ್ ಮಾಡಲು ಹೊರಟಿದೆ ಎಂದು ಕಿಡಿ ಕಾರಿದರು. ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ಕೊಲೆ ಮಾಡಲು ಹೊರಟಿರುವ ಬಿಜೆಪಿ ನಡೆ ರಾಷ್ಟ್ರೀಯ ಅವಮಾನ ಎಂದು ಸುರ್ಜೆವಾಲ್ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆ-ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾಂಗ್ರೆಸ್ ಸಂಸದರು

    ಲೋಕಸಭಾ ಚುನಾವಣೆ-ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಒಪ್ಪದ ಕಾಂಗ್ರೆಸ್ ಸಂಸದರು

    ಬೆಂಗಳೂರು: ಹಳೇ ಮೈಸೂರು ಪ್ರಾಂತ್ಯದ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಇಂದು ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಯಿತು. ಈ ವೇಳೆ ಜೆಡಿಎಸ್‍ಗೆ ನಮ್ಮ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಬೇಡ ಎಂದು ಐದೂ ಜಿಲ್ಲೆಗಳ ಮುಖಂಡರು ಒತ್ತಾಯಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ವಿಚಾರವನ್ನು ಹೈಕಮಾಂಡ್‍ಗೆ ತಿಳಿಸುವಂತೆ ಐದು ಕ್ಷೇತ್ರಗಳ ಸಂಸದರು ಕೆ.ಸಿ.ವೇಣುಗೋಪಾಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಐದೂ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ನಿಯೋಗವೊಂದನ್ನು ರಚಿಸಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಗಳಿವೆ.

    ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ಜೊತೆ ಕೆ.ಸಿ.ವೇಣುಗೋಪಾಲ್ ಅವರು ಪ್ರತ್ಯೇಕ ಕೊಠಡಿಯಲ್ಲಿ ವಿಧಾನಸಭೆ ಕ್ಷೇತ್ರಗಳ ಮುಖಂಡರನ್ನು ಕರೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಸಭೆಯಲ್ಲಿ ಖುದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರಿಗೂ ಪ್ರವೇಶ ಇರಲಿಲ್ಲದಿದ್ದುದ್ದು ಅಚ್ಚರಿಗೆ ಕಾರಣವಾಗಿತ್ತು. ಮುಖಂಡರು ಮುಕ್ತವಾಗಿ ತಮ್ಮ ಕ್ಷೇತ್ರಗಳ ಸ್ಥಿತಿ ಗತಿ, ಹಾಲಿ ಮತ್ತು ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಹೇಳಿಕೊಳ್ಳಲೆಂದು ಈ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.

    ಕೆ.ಸಿ.ವೇಣುಗೋಪಾಲ್ ಅವರು ನಾಳೆಯೂ ಸಭೆ ನಡೆಸಲಿದ್ದು ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಕ್ಷೇತ್ರದ ಮುಖಂಡರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಮುಕ್ತ ಚರ್ಚೆಯಾಗಲಿ ಎನ್ನುವ ಉದ್ದೇಶದಿಂದ ಸಭೆಯಿಂದ ಹೊರ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ಸಚಿವ ಪ್ರಿಯಾಂಕ್ ಖರ್ಗೆಗೆ ವೇಣುಗೋಪಾಲ್ ಕ್ಲಾಸ್!

    ಬೆಂಗಳೂರು: ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆಯ ಆದೇಶ ಹೊರಡಿಸಿದರೂ ಖಾಸಗಿ ಹೋಟೆಲಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪ್ರಿಯಾಂಕ್ ಖರ್ಗೆ ಕಾರ್ಯಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿ ಕೆ.ಸಿ.ವೇಣುಗೋಪಾಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರದಿಂದ ರಜೆ ಘೋಷಣೆ – ಸಮಾಜ ಕಲ್ಯಾಣ ಇಲಾಖೆಯಿಂದ ಫೈವ್‍ಸ್ಟಾರ್ ಹೋಟೆಲ್‍ನಲ್ಲಿ ಕಾರ್ಯಕ್ರಮ!

    ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನ ನಿಮಗೆ ಇಲ್ಲದೇ ಹೋಯ್ತೇ? ಸಿದ್ದಗಂಗಾ ಶ್ರೀಗಳಂತ ಸಾಧಕರು ಅಗಲಿದಾಗ ಈ ಕಾರ್ಯಕ್ರಮ ನಡೆಸಿ ವಿವಾದ ಮಾಡಿಕೊಳ್ಳಬೇಕಾದ ಅವಶ್ಯಕತೆ ಏನಿತ್ತು? ಈ ವಿಚಾರಗಳು ಭಾವನಾತ್ಮಕವಾದ ವಿಷಯಗಳು ಎನ್ನುವುದು ನಿಮಗೆ ಗೊತ್ತಾಗುದಿಲ್ಲವೇ? ಇದರಿಂದ ಆಗುವ ಪರಿಣಾಮಗಳೇನು ಅಂತ ಯೋಚಿಸುವ ಶಕ್ತಿಯು ನಿಮಗಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ಈ ವಿಚಾರವಾಗಿ ಬಹಿರಂಗವಾಗಿ ಕ್ಷಮೆ ಯಾಚಿಸುವಂತೆ ಪ್ರಿಯಾಂಕ್ ಖರ್ಗೆಗೆ ಸೂಚನೆಯನ್ನು ಕೂಡ ವೇಣುಗೋಪಾಲ್ ನೀಡಿದ್ದಾರೆ.

    ಸಮಾಜ ಕಲ್ಯಾಣ ಇಲಾಖೆ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮವನ್ನು ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಆಯೋಜಿಸಿದೆ. ಮಂಗಳವಾರ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಇಡೀ ರಾಜ್ಯವೇ ಶೋಕಾಚರಣೆ ಮಾಡುತ್ತಿರುವಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ತಪ್ಪು ಎಂದು ಬಿಜೆಪಿ ಆಕ್ಷೇಪಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಕಟು ಟೀಕೆ ವ್ಯಕ್ತವಾಗಿತ್ತು.

    https://www.youtube.com/watch?v=kX1PUyGudYg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv