Tag: ಕೆ.ಬಿ ಶ್ರೀನಿವಾಸ್

  • ಕೊರೊನಾ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧ: ಶಿವಮೊಗ್ಗ ಡಿಸಿ

    ಕೊರೊನಾ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧ: ಶಿವಮೊಗ್ಗ ಡಿಸಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಬೆಡ್‍ಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದೂವರೆಗೆ 27,029 ಜನರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. 24,899 ನೆಗೆಟಿವ್ ವರದಿ ಬಂದಿದ್ದು, 1727 ಪಾಸಿಟಿವ್ ಕಂಡು ಬಂದಿದೆ. ಇವರ ಪೈಕಿ 925 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 771 ಮಂದಿ ಮಾತ್ರ ವಿವಿಧ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದ್ದು, ಪ್ರತಿ ದಿನ 950 ಜನರ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗಿದೆ ಎಂದು ಹೇಳಿದರು.

    ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗ ಲಕ್ಷಣವಿರುವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಸ್ತುತ 233 ಮಂದಿ ಇದ್ದಾರೆ. ವಿವಿಧ ಕಡೆಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 436 ಮಂದಿ ಇದ್ದಾರೆ. 550 ಬೆಡ್ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೂ 400 ಬೆಡ್‍ಗಳು ಸಜ್ಜುಗೊಳಿಸಲಾಗುತ್ತಿದೆ. ಪ್ರಸ್ತುತ 37 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300 ಬೆಡ್‍ಗಳ ಸೌಲಭ್ಯ ಸಿದ್ಧವಿದೆ ಎಂದರು.

    ಸಾಂದರ್ಭಿಕ ಚಿತ್ರ

    ಪ್ರಸ್ತುತ 28 ವೆಂಟಿಲೇಟರ್‍ಗಳು ಮೆಗ್ಗಾನ್‍ನಲ್ಲಿ ಲಭ್ಯವಿದ್ದು, ಇನ್ನೂ 37 ವೆಂಟಿಲೇಟರ್‍ಗಳು ಒಂದು ವಾರದ ಒಳಗಾಗಿ ಲಭ್ಯವಾಗಲಿವೆ. ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ತಕ್ಕಂತೆ ಮೂಲ ಸೌಲಭ್ಯಗಳನ್ನು ಕೂಡ ಹೆಚ್ಚಿಸಲಾಗುತ್ತಿದೆ. ರೋಗ ಲಕ್ಷಣವಿಲ್ಲದ ಪಾಸಿಟಿವ್ ವ್ಯಕ್ತಿಗಳಿಗೆ ಮನೆಯಲ್ಲಿ ಐಸೋಲೇಷ್‍ಗೆ ವ್ಯವಸ್ಥೆ ಇದ್ದರೆ ಅನುಮತಿ ನೀಡಲಾಗುತ್ತಿದೆ. ಅಂತಹ ವ್ಯಕ್ತಿಗಳನ್ನು ಆರಂಭದಲ್ಲಿ ಮೆಗ್ಗಾನ್‍ಗೆ ಕರೆ ತಂದು ಎದೆ ಎಕ್ಸ್ ರೇ, ರಕ್ತ ಪರೀಕ್ಷೆ ಇತ್ಯಾದಿ ಕಡ್ಡಾಯ ತಪಾಸಣೆಗಳನ್ನು ಮಾಡಲಾಗುವುದು. ಆ ಬಳಿಕ ವೈದ್ಯರ ತಂಡ ಮನೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಬಳಿಕ ಅಂಬುಲೆನ್ಸ್ ಮೂಲಕ ಮನೆಗೆ 24 ಗಂಟೆಯೊಳಗಾಗಿ ಕರೆ ತರಲಾಗುವುದು. ಹೋಂ ಕ್ವಾರೆಂಟೈನ್‍ನಲ್ಲಿ ಇರುವವರನ್ನು ತಪಾಸಣೆ ನಡೆಸಲು ಪ್ರಸ್ತುತ ಶಿವಮೊಗ್ಗ ನಗರದಲ್ಲಿ 5 ತಂಡಗಳನ್ನು ರಚಿಸಲಾಗಿದೆ ಎಂದರು.

    ಜನರು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜನರ ಸಹಕಾರದಿಂದ ಮಾತ್ರ ಕೊರೊನಾ ಹರಡುವುದನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.