Tag: ಕೆ.ಪಿ.ಬಚ್ಚೇಗೌಡ

  • ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ, ಗೋಕಾಕ್‍ನಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ತಿರಸ್ಕೃತ

    ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ, ಗೋಕಾಕ್‍ನಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ತಿರಸ್ಕೃತ

    -ನಾಮಪತ್ರ ಹಿಂಪಡೆದ ಹೇಮಲತಾ ಗೋಪಾಲಯ್ಯ

    ಬೆಂಗಳೂರು: ಚಿಕ್ಕಬಳ್ಲಾಪುರ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಮತ್ತು ಗೋಕಾಕ್‍ನಲ್ಲಿ ಸತೀಶ್ ಜಾರಕಿಹೊಳಿ ನಾಮಪತ್ರ ತಿರಸ್ಕೃತವಾಗಿದೆ.

    ಡಿಸೆಂಬರ್ 5ರಂದು ನಡೆಯುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 15 ನಾಮಪತ್ರಗಳು ಸಲ್ಲಿಕೆ ಆಗಿದ್ದವು. ಇವುಗಳಲ್ಲಿ ಬಚ್ಚೇಗೌಡರು ಸೇರಿದಂತೆ ಐವರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ರಘುನಂದನ್ ಮಾಹಿತಿ ನೀಡಿದ್ದಾರೆ. ಜೆಡಿಎಸ್ ನಿಂದ ಅಚ್ಚರಿ ಎಂಬಂತೆ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಚ್ಚೇಗೌಡರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಣದಲ್ಲಿ ಜೆಡಿಎಸ್ ನಿಂದ ರಾಧಾಕೃಷ್ಣ ಉಳಿದುಕೊಂಡಿದ್ದಾರೆ.

    ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದರು. ನಾಮಪತ್ರದ ಜೊತೆಗೆ ಬಿ ಫಾರಂ ಸಲ್ಲಿಸದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದೆ. ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ ಗೋಕಾಕ್ ಕಣದಲ್ಲಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯರ ಪತ್ನಿ ಹೇಮಲತಾ ಪಕ್ಷೇತರರಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಹೇಮಲತಾ ಗೋಪಾಲಯ್ಯ ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.

    ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಪಕ್ಷೇತರರಾಗಿ ನಾಮಿನೇಷನ್ ಮಾಡಿದ್ದರು. ಬಿ.ಸಿ.ಪಾಟೀಲ್ ಮತ್ತು ಸೃಷ್ಟಿ ಪಾಟೀಲ್ ನಾಮಪತ್ರಗಳು ಕ್ರಮಬದ್ಧವಾಗಿವೆ. ಹೀಗಾಗಿ ಸೃಷ್ಟಿ ಪಾಟೀಲ್ ತಮ್ಮ ನಾಮಪತ್ರವನ್ನು ಹಿಂಪಡೆಯುವ ಸಾಧ್ಯತೆಗಳಿವೆ.

  • ಸಮ್ಮಿಶ್ರ ಸರ್ಕಾರ ಪತನಕ್ಕೆ ಮಾಜಿ ಸಿಎಂ ಹುನ್ನಾರವೇ ಕಾರಣ: ಕೆ.ಪಿ.ಬಚ್ಚೇಗೌಡ

    ಸಮ್ಮಿಶ್ರ ಸರ್ಕಾರ ಪತನಕ್ಕೆ ಮಾಜಿ ಸಿಎಂ ಹುನ್ನಾರವೇ ಕಾರಣ: ಕೆ.ಪಿ.ಬಚ್ಚೇಗೌಡ

    – ನಿಖಿಲ್ ಹೆಗಲಿಗೆ ಚಿಕ್ಕಬಳ್ಳಾಪುರ ಉಪಚುನಾವಣೆ ಉಸ್ತುವಾರಿ
    – ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಪಿ.ಬಚ್ಚೇಗೌಡ ಆಯ್ಕೆ

    ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಹುನ್ನಾರವೇ ಕಾರಣ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಶಾಸಕರು, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡ ನಂತರ ಒಬ್ಬೊಬ್ಬರು ಒಂದೊಂದು ರೀತಿ ಟೀಕೆ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ವಲಯದ ಶಾಸಕರಿಂದ ಕುಮಾರಸ್ವಾಮಿ ಅವರಿಗೆ ಬೆದರಿಕೆ ಹಾಕಿಸಿದ್ದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ತಾವು ಸಿಎಂ ಆಗಲು ಯತ್ನಿಸಿದ್ದರು. ಮೈತ್ರಿ ಸರ್ಕಾರದಿಂದ ಹೊರಗೆ ಬಂದ ಸಿದ್ದರಾಮಯ್ಯನವರ ಆಪ್ತ ಶಾಸಕರನ್ನು ಬಿಜೆಪಿಯವರು ಹಿಡಿದುಕೊಂಡರು. ಇದರಿಂದಾಗಿ ಕುಮಾರಸ್ವಾಮಿ ಅವರು ಸಿಎಂ ಸ್ಥಾನವನ್ನು ಕಳೆದುಕೊಂಡರು. ಅತ್ತ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುವ ಆಸೆಯೂ ಆಸೆಯಾಗಿಯೇ ಉಳಿಯಿತು ಎಂದು ಹೇಳಿದರು.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರನ್ನು ಆಯ್ಕೆ ಮಾಡಿ ಮಾಜಿ ಸಿಎಂ ಕುಮಾರಸ್ವಾಮಿ ಅಂತಿಮಗೊಳಿಸಿದ್ದಾರೆ. ಜೊತೆಗೆ ಈ ಕ್ಷೇತ್ರವನ್ನು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಸಮ್ಮಿಶ್ರ ಸರ್ಕಾರ ಕೆಡವಲು ಪಾತ್ರವಹಿಸಿದ ಸುಧಾಕರ್ ಅವರಿಗೆ ತಕ್ಕಪಾಠ ಕಲಿಸಲು ತೀರ್ಮಾನಿಸಿದ್ದಾರಂತೆ. ಈ ನಿಟ್ಟಿನಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್‍ನ ಮಾಜಿ ಶಾಸಕ ಬಚ್ಚೇಗೌಡ ಅವರು, ನಾನು ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಮುಂದೆ ಚುನಾವಣೆಗೆ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದ್ದೆ. ಆದರೆ ಅನಿವಾರ್ಯವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿದೆ. ಹೀಗಾಗಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹಾಕಿದರು. ಇದರಿಂದಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

    ಅನರ್ಹ ಶಾಸಕ ಡಾ. ಕೆ.ಸುಧಾಕರ್ ಅಧಿಕಾರದ ಲಾಲಸೆಗೆ ಅನಿವಾರ್ಯವಾಗಿ ಉಪಚುನಾವಣೆ ಎದುರಾಗಿದ್ದು, ಪಕ್ಷಾಂತರ ಮಾಡುವುದು ಅಕ್ಷಮ್ಯ ಅಪರಾಧ. 17 ಜನ ಅನರ್ಹ ಶಾಸಕರು ಸ್ವಯಂಕೃತ ಅಪರಾಧ ಎಸಗಿದ್ದಾರೆ. ಈ ಮೂಲಕ ತಮ್ಮ ತಲೆಯೇ ಮೇಲೆ ತಾವೇ ಬಂಡೆ ಎಳೆದುಕೊಂಡಿದ್ದಾರೆ ಎಂದು ಗುಡುಗಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಸೀರೆ, ಕುಕ್ಕರ್, ಮಿಕ್ಸಿ, ಹಣ ಹಂಚಿ ವಾಮಮಾರ್ಗದಿಂದ ಸುಧಾಕರ್ ಆಯ್ಕೆಯಾದರು. ಆದರೆ ಜನತೆ ಕೊಟ್ಟ ಅಧಿಕಾರವನ್ನು ಬಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈಗ ಮತ್ತೆ ಚುನಾವಣೆಗೆ ಬರುತ್ತಿದ್ದಾರೆ. ಇಂತಹ ಭ್ರಷ್ಟ ಹಾಗೂ ಪಕ್ಷಾಂತರಿಗಳು ಜನತೆಯ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡವರಿಗೆ ಮತ ಹಾಕಬೇಡಿ ಅಂತ ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಮತದಾರರಿಗೆ ಕೇಳಿಕೊಂಡರು.