ಮೈಸೂರು: ಕರ್ತವ್ಯ ನಿಯೋಜನೆ ವಿಚಾರದಲ್ಲಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಮತ್ತು ಚಾಲಕನ ನಡುವೆ ವಾಗ್ವಾದ ನಡೆದ ವೀಡಿಯೋ ವೈರಲ್ ಆಗಿದೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರದ ಕೆಎಸ್‍ಆರ್ ಟಿಸಿ ಡಿಪೋ ಮ್ಯಾನೇಜರ್ ಪಾಪನಾಯಕ್ ಮತ್ತು ಚಾಲಕ ಶರಣಬಸಯ್ಯ ಎಂಬವವರಿಗೆ ಕರ್ತವ್ಯ ನಿಯೋಜನೆ ವಿಚಾರದಲ್ಲಿ ಧಮ್ಕಿ ಹಾಕಿದ್ದಾರೆ. ಕರ್ತವ್ಯ ನಿಯೋಜನೆ ವಿಚಾರದಲ್ಲಿ ಡಿಪೋ ವ್ಯವಸ್ಥಾಪಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ವೈರಲ್ ಆಗಿರೋ ವೀಡಿಯೋದಲ್ಲಿ ವ್ಯವಸ್ಥಾಪಕರು, ಚಾಲಕನಿಗೆ ನಿನಗೆ ನಾನು ಹೊಡೆಯಲ್ಲಾ ಬೇರೆಯವರು ಹೊಡೆಯುತ್ತಾರೆ ಎಂದು ಧಮ್ಕಿ ಹಾಕಿ ಡೀಪೋ ದಿಂದ ಹೊರಗೆ ದಬ್ಬುತ್ತಿರುವುದು ದೃಶ್ಯಗಳಿವೆ.
ನನಗೆ ಏನಾದ್ರೂ ಆದರೆ ಪಾಪನಾಯಕ್ ಹೊಣೆಗಾರರು ಎಂದು ಶರಣಬಸಯ್ಯ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಬೇರೆಯವರ ಜೊತೆ ಮಾತನಾಡಿದಂತೆ ನನ್ನೊಂದಿಗೆ ವರ್ತಿಸಿದ್ರೆ ಒದೆ ತಿನ್ನುತ್ತಿಯಾ? ಆತನನ್ನು ಕರ್ತವ್ಯಕ್ಕೆ ನಿಯೋಜಿಸಬೇಡಿ. ಸುಮ್ಮನೆ (..) ಮುಚ್ಚಕೊಂಡು ಹೋಗಬೇಕು. ಸಸ್ಪೆಂಡ್ ಆಗಬೇಕಾ ಎಂದು ಅವಾಜ್ ಹಾಕಲಾಗಿದೆ.
ಬೇರೆ ಡೀಪೋದಿಂದ ವರ್ಗವಾಗಿ ಇಲ್ಲಿಗೆ ಬಂದಿರೋ ಶರಣಬಸವಯ್ಯ ತಮ್ಮ ಮಾವನ ಸಾವಿನ ಕಾರಣ ಎರಡು ದಿನ ಅನಧಿಕೃತವಾಗಿ ರಜೆ ತೆಗೆದುಕೊಂಡ ಕಾರಣ ವ್ಯವಸ್ಥಾಪಕ ಹೀಗೆ ಕಿರುಕುಳ ಕೊಡ್ತಿದ್ದಾರೆ. ಅಲ್ಲದೆ ಹಣಕ್ಕಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಚಾಲಕ ಆರೋಪಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷ್ ಮಾಡಿ ಮರುಬಳಕೆ ಮಾಡುವ ಯಂತ್ರವನ್ನು ಇದೇ ಮೊದಲ ಬಾರಿಗೆ ಇಡಲಾಗಿದೆ.
ಈ ಮೆಷಿನ್ ಅನ್ನು ಕೆ.ಎಸ್.ಆರ್.ಟಿ.ಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಇತ್ತೀಚಿಗೆ ಉದ್ಘಾಟಿಸಿದ್ದಾರೆ. ಈ ಯಂತ್ರವು ಪ್ರತಿ ದಿನ ಕನಿಷ್ಠ 4500 ಪ್ಲಾಸ್ಟಿಕ್ ಬಾಟಲಿಗಳನ್ನು ಕ್ರಷ್ ಮಾಡಲಿದೆ. ಅಂದರೆ ಒಂದು ವರ್ಷಕ್ಕೆ 17.2 ಟನ್ ಪ್ಲಾಸ್ಟಿಕ್ ತ್ಯಾಜ್ಯ ಈ ಯಂತ್ರದಿಂದ ಮರುಬಳಕೆ ಆಗಲಿದೆ.
ಈ ಯಂತ್ರವು 4.3 ಲಕ್ಷ ಬೆಲೆಯದ್ದಾಗಿದೆ. ಗ್ರೀನ್ ಸೈಕ್ಲೋ ಪಾಸ್ಟ್ ಮತ್ತು ಸ್ಪರ್ಶ ಮಸಾಲಾ ರವರ ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ)ಯಡಿ ಕಾರ್ಯಗತಗೊಳಿಸಲಾಗಿದೆ. ನಿಗಮವು ಇದಕ್ಕಾಗಿ ಉಚಿತ ಸ್ಥಳಾವಕಾಶ ಮತ್ತು ವಿದ್ಯುತ್ ವೆಚ್ಚವನ್ನು ಭರಿಸಲಿದೆ. ಕೆ.ಎಸ್.ಆರ್.ಟಿ.ಸಿ ಪರಿಸರ ಸ್ನೇಹಿ ಕಾರ್ಯಕ್ರಮಗಳ ಅಡಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.
ಇದರಿಂದ ಬಸ್ ನಿಲ್ದಾಣ, ರಸ್ತೆ, ಶೌಚಾಲಯದ ಕ್ಯಾಬಿನ್, ಕಸದ ಬುಟ್ಟಿಗಳು, ದಿನಚರಿ ಪುಸ್ತಕ, ಟಿ ಶರ್ಟ್ ಗಳನ್ನು ತಯಾರಿಸಲಾಗುತ್ತದೆಯೆಂದು ಹೇಳಲಾಗುತ್ತಿದೆ.
ಗದಗ: ಬಸ್ ಸೌಲಭ್ಯ ಇಲ್ಲದ್ದರಿಂದ ಸಿವಿಲ್ ಪೊಲೀಸ್ ಪರೀಕ್ಷೆ ಬರೆಯಲು ಕಲಬುರಗಿಗೆ ಹೊರಟಿದ್ದ 40 ಅಭ್ಯರ್ಥಿಗಳ ಕನಸಿಗೆ ತಣ್ಣೀರೆರಚಿದಂತಿದೆ.
ಅಭ್ಯರ್ಥಿಗಳು ಸಿವಿಲ್ ಪೊಲೀಸ್ ಪರೀಕ್ಷೆ ಬರೆಯಲು ಗದಗದಿಂದ ಕಲಬುರಗಿಗೆ ಹೊರಟ್ಟಿದ್ದರು. ಈ ವೇಳೆ ಪರೀಕ್ಷಾರ್ಥಿಗಳು ಹೆಚ್ಚುವರಿ ಬಸ್ ಒದಗಿಸುವಂತೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಭ್ಯರ್ಥಿಗಳ ಮನವಿಗೆ ಸ್ಪಂದಿಸಲಿಲ್ಲ.
ಕೆ.ಎಸ್.ಆರ್.ಟಿ.ಸಿ ಅವರು ಮಾಡಿದ ಎಡವಟ್ಟಿನಿಂದ ಪೊಲೀಸ್ ಆಗುವ ಕನಸು ಕಂಡ 40 ಪರೀಕ್ಷಾರ್ಥಿಗಳ ಕನಸು ಕನಸಾಗಿಯೇ ಉಳಿದಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಗದಗದಿಂದ ಯಾದಗಿರಿಗೆ ಹೊರಟಿದ್ದ ರಾಜಹಂಸ ಬಸ್ಸನ್ನು ತಡೆದು ಗದಗ ಹೊಸ ಬಸ್ ನಿಲ್ದಾಣದ ಮ್ಯಾನೇಜರ್ ಅನ್ನು ತರಾಟೆ ತೆಗೆದುಕೊಂಡಿದ್ದಾರೆ. ಅದರೂ ಬಸ್ ಬಿಡದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಡೋಂಟ್ ಕೇರ್ ಎಂದಿದ್ದಾರೆ.
ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಬೆಟಗೇರಿ ಬಡಾವಣೆ ಪೊಲೀಸರು ವಿದ್ಯಾರ್ಥಿಗಳ ಮನವೊಲಿಕೆ ಮಾಡಿ ಅಲ್ಲಿಂದ ಕಳುಹಿಸಿ ಕೊಟ್ಟಿದ್ದಾರೆ.
ಬೆಂಗಳೂರು: ಚಾಲಕ ಮತ್ತು ನಿರ್ವಾಹಕರಿಗೆ ಡ್ಯೂಟಿ ಸಮಯದಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ ಕೊನೆಯ ಬಾರಿ ತನ್ನ ಮಾವನ ಮುಖ ನೋಡಲು ಆಗಲಿಲ್ಲ ಎಂದು ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪರುಶುರಾಮ್ ಯಾದಗಿರಿಯ ಗುರುಮಿಠಕಲ್ ಡಿಪೋದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ಅವರು ಡ್ಯೂಟಿ ಮಾಡುತ್ತಿದ್ದಾಗ ಅವರ ಮಾನ ಊರಿನಲ್ಲಿ ತೀರಿಕೊಂಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ಅವರಿಗೆ ಈ ವಿಷಯ ತಿಳಿದಿರಲಿಲ್ಲ.
ಪರುಶುರಾಮ್ ಮಾವ ಸೆ.16ರಂದು ಮೃತಪಟ್ಟಿದ್ದರು. ಆದರೆ ಆ ದಿನ ಅವರು ಗುರುಮಿಠಕಲ್ – ಕಲಬುರಗಿ ಕಡೆ ಹೋಗುವ ಬಸ್ಸಿನಲ್ಲಿ ಕರ್ತವ್ಯ ಮಾಡುತ್ತಿದ್ದರು. ಮೃತಪಟ್ಟ ವಿಚಾರವನ್ನು ತಿಳಿಸಲು ಪರಶುರಾಮ್ ಮನೆಯವರು ಅವರ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಡ್ಯೂಟಿಯ ಸಮಯದಲ್ಲಿ ಮೊಬೈಲ್ ನಿಷೇಧವಿದ್ದ ಕಾರಣ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಕಾರಣದಿಂದ ಅವರನ್ನು ಸಂಪರ್ಕಿಸಲಾಗಿಲ್ಲ.
ಈ ವೇಳೆ ಪರುಶರಾಮ್ 17ನೇ ತಾರೀಖು ಡ್ಯೂಟಿ ಮೇಲೆಯೇ ಕಲಬುರಗಿದಿಂದ ಗುರುಮಿಠಕಲ್‍ಗೆ ವಾಪಸ್ ಬಂದಿದ್ದಾರೆ. ಅದೇ ರಸ್ತೆಯಲ್ಲಿ ಬರುವಾಗ ಹಳ್ಳಿಯೊಂದರಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಇದನ್ನು ನೋಡಿದ ಪರುಶರಾಮ್ ಬಸ್ ನಿಲ್ಲಿಸಿ, ಯಾರು, ಏನಾಗಿತ್ತು ಎಂದು ವಿಚಾರಿಸಿದಾಗ ತನ್ನ ಮಾವನೇ ತೀರಿಕೊಂಡಿದ್ದು ಎಂಬ ವಿಷ್ಯ ಗೊತ್ತಾಗಿದೆ. ಇದನ್ನು ಓದಿ: ಕಂಡಕ್ಟರ್‌ನಿಂದ ಬಸ್ಸಲ್ಲೇ ಗಾನಾ ಬಜಾನ – ಯಾದಗಿರಿಯ ಪರಶುರಾಮ್ ಪಬ್ಲಿಕ್ ಹೀರೋ
ಈ ವಿಚಾರದಿಂದ ಬೇಸರಗೊಂಡ ಪರಶುರಾಮ್ ಮೊಬೈಲ್ ನಿಷೇಧ ಮಾಡಿರೋ ಹಿನ್ನೆಲೆ, ಡ್ರೈವರ್ ಮತ್ತು ಕಂಡಕ್ಟರ್‍ಗಳ ಸಂಕಟವನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತನ್ನ ನೋವನ್ನು ಹಂಚಿಕೊಂಡಿದ್ದಾರೆ. ಚಾಲಕ ಮತ್ತು ನಿರ್ವಾಹಕಗೆ ಮೊಬೈಲ್ ನಿಷೇಧ ಮಾಡಿರುವುದರಿಂದ ತುಂಬಾ ತೊಂದರೆಯಾಗಿದೆ. ಸೋಮವಾರದಿಂದ ನಾನು ಡ್ಯೂಟಿ ಮಾಡುತ್ತಿದ್ದೆ ಈ ವೇಳೆ ನಮ್ಮ ಮಾವ ತೀರಿಕೊಂಡಿದ್ದಾರೆ. ನಾನು ನನ್ನ ಮೊಬೈಲ್‍ನನ್ನು ಸ್ವಿಚ್ ಆಫ್ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಿದ್ದೆ ನನಗೆ ವಿಷಯವೇ ತಿಳಿದಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ನಮ್ಮ ಮನೆಯವರು ವಿಷಯ ತಿಳಿಸಲು ನನಗೆ ಕರೆ ಮಾಡಿದ್ದಾರೆ. ಆದರೆ ನನ್ನ ಮೊಬೈಲ್ ಸ್ವಿಚ್ ಆಫ್ ಆದ ಕಾರಣ ನನಗೆ ಈ ವಿಚಾರವೇ ಗೊತ್ತಾಗಿಲ್ಲ. ಮೊಬೈಲ್ ನಿಷೇಧ ಮಾಡಿದ ಕಾರಣ ನಾನು ಕೊನೆಯದಾಗಿ ನಮ್ಮ ಮಾವನವರ ಮುಖ ನೋಡದ ಹಾಗೇ ಆಯಿತು ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಇದನ್ನು ಓದಿ: ಮಗಳು ಮೃತಪಟ್ಟರೂ ಕಂಡಕ್ಟರ್ ಕೆಲಸಕ್ಕೆ ಹಾಜರಾಗಲು ಸೂಚಿಸಿದ ಅಧಿಕಾರಿ
ಪರಶುರಾಮ್ ಈ ಹಿಂದೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿದ್ದರು. ಎಂಟು ವರ್ಷದಿಂದ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಪರಶುರಾಮ್‍ಗೆ ಶಾಲಾ ದಿನಗಳಿಂದಲೂ ಹಾಡು ಹೇಳೋ ಹುಚ್ಚು ಬೆಳೆಸಿಕೊಂಡಿದ್ದರು. ಹೀಗಾಗಿ ಇದೀಗ ಇಲಾಖೆಯ ಅನುಮತಿ ಪಡೆದು ಬಸ್ಸಿನಲ್ಲಿ ಹಾಡುವ ಮೂಲಕ ಪ್ರಯಾಣಿಕರನ್ನು ರಂಜಿಸುತ್ತಿದ್ದಾರೆ.
ಬೆಂಗಳೂರು: ಪ್ರತಿಭಟನೆಯಲ್ಲಿ ಸುಟ್ಟ ಬಸ್ ನಿಂದಲೇ ಜನರಿಗೆ ಜಾಗೃತಿ ಮೂಡಿಸಲು ಕೆ.ಎಸ್.ಆರ್.ಟಿ.ಸಿ ಮುಂದಾಗಿದೆ.
ಇತ್ತೀಚಿಗೆ ನಡೆದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪರವಾದ ಪ್ರತಿಭಟನೆಯಲ್ಲಿ ಡಿಕೆಶಿ ಬೆಂಬಲಿಗರು ಕನಕಪುರದಲ್ಲಿ ಸಾರಿಗೆ ಬಸ್‍ಗಳಿಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಹಾಕಿದ್ದರು. ಈಗ ಈ ಸುಟ್ಟ ಬಸ್‍ನ್ನು ಇಟ್ಟುಕೊಂಡು ಜನರಿಗೆ ಸರ್ಕಾರಿ ಆಸ್ತಿಯ ಮೇಲೆ ಜಾಗೃತಿ ಮೂಡಿಸುವ ಕೆಲಸ ಕೆ.ಎಸ್.ಆರ್.ಟಿ.ಸಿ ಮಾಡುತ್ತಿದೆ.
ಈ ನಿಟ್ಟಿನಲ್ಲಿ ಕನಕಪುರದಲ್ಲಿ ಪ್ರತಿಭಟನಕಾರರು ಬೆಂಕಿ ಹಚ್ಚಿದ ಪರಿಣಾಮ ಸುಟ್ಟು ಕರಕಲಾಗಿದ್ದ ಬಸ್‍ನನ್ನು ತಂದು ಮೆಜೆಸ್ಟಿಕ್‍ನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಈ ಬಸ್ ಮೇಲೆ “ಬೇಡ ಬೇಡ ಬೆಂಕಿ ಬೇಡ” “ಆವೇಶಕ್ಕೆ ನನ್ನ ಬಲಿ ಕೊಡಬೇಡಿ”. “ಸಾರ್ವಜನಿಕರ ಆಸ್ತಿ, ಇದು ನಮ್ಮ ಆಸ್ತಿ” ಮೊದಲಾದ ಬರಹಗಳನ್ನು ಬರೆಯಲಾಗಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಬಾಗಲಕೋಟೆ: ಎದುರಿಗೆ ಬರುತ್ತಿದ್ದ ಲಾರಿ ತಪ್ಪಿಸಲು ಹೋಗಿ ಸಾರಿಗೆ ಬಸ್ಸೊಂದು ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿಯ ಹುಬ್ಬಳ್ಳಿ-ವಿಜಯಪುರ ರಸ್ತೆಯಲ್ಲಿ ನಡೆದಿದೆ.
ಬಸ್ ಹುಬ್ಬಳ್ಳಿಯಿಂದ ವಿಜಯಪುರದ ಕಡೆಗೆ ಹೊರಟಿತ್ತು. ಈ ವೇಳೆ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಚಾಲಕ ಪಕ್ಕದ ಹೊಲಕ್ಕೆ ನುಗ್ಗಿಸಿದ ಪರಿಣಾಮ ಬಾರಿ ಅನಾಹುತ ತಪ್ಪಿದಂತಾಗಿದೆ.
ಇನ್ನು ಹೊಲಕ್ಕೆ ನುಗ್ಗುವ ಮುಂಚೆ ಬೈಕ್ ವೊಂದಕ್ಕೆ ಬಸ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಬೀಳಗಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಾಮರಾಜನಗರ:ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗಿದೆ.
ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟ- ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಟೇರಿಂಗ್ ಕಟ್ ಆಗಿದೆ. ಇದನ್ನು ಅರಿತ ಬಸ್ ಚಾಲಕ ಪ್ರಪಾತಕ್ಕೆ ಬೀಳಬೇಕಿದ್ದ ಬಸ್‍ನ್ನು ಮರಕ್ಕೆ ಡಿಕ್ಕಿ ಹೊಡಿಸಿದ್ದಾನೆ.
ಇದ್ದರಿಂದ ಬಾರಿ ಅನಾಹುತ ತಪ್ಪಿ 50 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಡ್ರೈವರ್ ಸೇರಿದಂತೆ 6 ಮಂದಿಗೆ ಗಾಯಗಳಾಗಿವೆ. ಗಾಯಗೊಂಡಿರುವ ಗಂಗಾಧರ್, ಇಂದ್ರಮ್ಮ, ಸಿದ್ದಯ್ಯ, ಮಹೇಶ್ ಯೋಗಿಣಿ, ಬೆನಕಗೌಡ ಎಂಬವರನ್ನು ಕೊಳ್ಳೆಗಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಅವಘಡಕ್ಕೆ ಬಸ್ ಹದಗೆಟ್ಟಿರುವುದೇ ಮೂಲ ಕಾರಣ ಎಂದು ಹೇಳಲಾಗುತ್ತಿದೆ.
ಮಂಡ್ಯ:ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ತಂದೆ ಸಾವನ್ನಪ್ಪಿ ಮಗ ಗಾಯಗೊಂಡ ಘಟನೆ ಕದಬಹಳ್ಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.
ನಾಗಮಂಗಲ ತಾಲ್ಲೂಕಿನ ಹಡೇನಹಳ್ಳಿ ಗ್ರಾಮದ ಲಕ್ಷ್ಮಣ (40) ಸಾವಿಗೀಡಾದ ಬೈಕ್ ಸವಾರ. ಹಿಂಬದಿಯಲ್ಲಿ ಕುಳಿತ್ತಿದ್ದ ಮೃತ ಲಕ್ಷ್ಮಣ ಮಗ ಶರತ್‍ಗೆ ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚನ್ನರಾಯಪಟ್ಟಣದ ಕಡೆಯಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಕದಬಹಳ್ಳಿಯಿಂದ ಸ್ವಗ್ರಾಮದ ಹಡೇನಹಳ್ಳಿ ಕಡೆಗೆ ಮಗನೊಂದಿಗೆ ಹೊರಟಿದ್ದ ಲಕ್ಷ್ಮಣ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಕ್ಷ್ಮಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಿಂಬದಿಯಲ್ಲಿ ಕುಳಿತ್ತಿದ್ದ ಮಗನಿಗೆ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ಎಡವಟ್ಟೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಆಸ್ತಿ ತೆರಿಗೆ ಪಾವತಿಸುವಂತೆ ಕೆ.ಎಸ್.ಆರ್.ಟಿ.ಸಿ ಡಿಸಿ ಆಂಥೋನಿ ಜಾರ್ಜ್‍ಗೆ ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತೆರಿಗೆ ಪಾವತಿಸಿ ಇಲ್ಲದಿದರೆ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸೇವೆ, ವಹಿವಾಟಿಗೆ ಬ್ರೇಕ್ ಹಾಕುತ್ತೀವಿ ಎಂದು ಎಚ್ಚರಿಕೆ ನೀಡಿ ನಗರಸಭೆ ಕಮಿಷನರ್ ಕೋರ್ಟ್ ಮೆಟ್ಟಿಲೇರಿದ್ದಾರೆ. 1984ರಿಂದ ಇಲ್ಲಿಯವರೆಗೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಆಸ್ತಿ ತೆರಿಗೆ ಪಾವತಿ ಮಾಡದೇ 95 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದೆ.
ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇರಲಿಲ್ಲವಾದ ಕಾರಣ ನಗರಸಭೆ ಖಾಸಗಿ ಬಸ್ ನಿಲ್ದಾಣ ಬಳಸಿಕೊಳ್ಳುತಿತ್ತು. ಪ್ರತಿ ಟ್ರಿಪ್ ಗೂ ಇಂತಿಷ್ಟು ಎಂದು ಶುಲ್ಕ ಕಟ್ಟಬೇಕಿತ್ತು. ಅದನ್ನೂ ಕೂಡ ಕಟ್ಟಿಲ್ಲ. ಹಾಗಾಗಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆ ಒಟ್ಟಾರೆ ಆಸ್ತಿ ಮೇಲೆ ಬಡ್ಡಿ ಸಮೇತ ವಸೂಲಿ ಮಾಡಲು ನಗರಸಭೆ ಮುಂದಾಗಿದೆ.
ಆದರೆ ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಡಿಸಿ ಆಂಥೋನಿ ಹೇಳೋದೇ ಬೇರೆ. ನಿಗದಿತ ಕಾಲಕ್ಕೆ 5 ಲಕ್ಷ ರೂ. ಟ್ಯಾಕ್ಸ್ ಪಾವತಿಸಿದ್ದೇವೆ. ಬಸ್ ಗಳ ಟ್ರಿಪ್ ಬಗ್ಗೆಯಾಗಲಿ ಅಥವಾ ನಗರಸಭೆ ಬಸ್ ನಿಲ್ದಾಣ ಪ್ರವೇಶ ಮಾಡಿದ್ದರ ಬಗ್ಗೆಯಾಗಲಿ ನಗರಸಭೆ ಯಾವುದೇ ದಾಖಲೆ ನೀಡದೇ ಮನಸ್ಸೋ ಇಚ್ಛೆ 80 ಲಕ್ಷ, 90 ಲಕ್ಷ ರೂ. ಟ್ಯಾಕ್ಸ್ ಕಟ್ಟಿ ಎಂದರೆ ಹೇಗೆ ಕಟ್ಟೋಕಾಗುತ್ತೆ ಸ್ವಾಮಿ? ಎಂದು ಆಂಥೋನಿ ಹೇಳಿದ್ದಾರೆ.
ಬೆಂಗಳೂರು: ಈ ಬಾರಿ ದಸರಾ ಹಬ್ಬಕ್ಕೆ ನೀವು ಊರಿಗೆ ಹೋಗಿದ್ರಾ..? ಹಬ್ಬ ಎಲ್ಲಾ ಮುಗಿಸಿ ನಿನ್ನೆ (ಅಕ್ಟೋಬರ್ 3) ರಂದು ವಾಪಸ್ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ವಾಪಸ್ ಬಂದ್ರಾ..?
ಹೌದು ಎಂದಾದರೆ ಕೆ.ಎಸ್.ಆರ್.ಟಿ.ಸಿ ಈ ಬಾರಿ ಮಾಡಿದ ದಾಖಲೆ ಆದಾಯದಲ್ಲಿ ನಿಮ್ಮ ಪಾಲೂ ಸೇರಲಿದೆ. ಅಕ್ಟೋಬರ್ 3ರ ಒಂದೇ ದಿನ ಕೆ.ಎಸ್.ಆರ್.ಟಿ.ಸಿ ಭರ್ಜರಿ 13.46 ಕೋಟಿ ಆದಾಯ ಗಳಿಸಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಬಿಟ್ಟಿತ್ತು.
ಈ ಹಿಂದೆ 2015ರ ದಸರಾ ಸಂದರ್ಭದಲ್ಲಿ ಒಂದೇ ದಿನ 12.75 ಕೋಟಿ ರೂ. ಆದಾಯ ಬಂದಿದ್ದು ಇದುವರೆಗಿನ ದಿನದ ಅತ್ಯಧಿಕ ಆದಾಯವಾಗಿತ್ತು. ಕಳೆದ ವರ್ಷ ಏಪ್ರಿಲ್- ಅಕ್ಟೋಬರ್ 3ರವರೆಗಿನ ಅವಧಿಯನ್ನು ಈ ವರ್ಷಕ್ಕೆ ಹೋಲಿಸಿದರೆ ಒಟ್ಟು ಆದಾಯದಲ್ಲಿ 132.16 ಕೋಟಿ ಹೆಚ್ಚುವರಿ ಆದಾಯವನ್ನು ದಾಖಲಿಸಿದೆ.